Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಪ್ರೇ.ಕಾ


1 : ಐದು ದಿನಗಳ ನಂತರ ಪ್ರಧಾನ ಯಾಜಕ ಅನನೀಯನು, ಕೆಲವು ಪ್ರಮುಖರನ್ನೂ ತೆರ್ತುಲ್ಲ ಎಂಬ ವಕೀಲನನ್ನೂ ಕರೆದುಕೊಂಡು ಬಂದನು. ಅವರು ರಾಜ್ಯಪಾಲ ಫೆಲಿಕ್ಸನ ಸನ್ನಿಧಾನದಲ್ಲಿ ಪೌಲನ ವಿರುದ್ಧ ದೂರಿತ್ತರು.
2 : ಪೌಲನನ್ನು ಕರೆದುತಂದು ನಿಲ್ಲಿಸಿದಾಗ ತೆರ್ತುಲ್ಲನು ಅವನ ವಿರುದ್ಧ ಹೀಗೆಂದು ವಾದಿಸಲಾರಂಭಿಸಿದನು: “ಮಹಾ ಪ್ರಭುವೇ, ನಿಮ್ಮ ಮುಖಂಡತ್ವದಲ್ಲಿ ನಾವು ಶಾಂತಿ ಸೌಭಾಗ್ಯವನ್ನು ಸವಿಯುತ್ತಿದ್ದೇವೆ. ದೇಶ ಪ್ರಗತಿಗಾಗಿ ಆಗುತ್ತಿರುವ ಸುಧಾರಣೆಗಳಿಗೆ ತಮ್ಮ ಪರಾಮರಿಕೆಯೇ ಕಾರಣ.
3 : ಇದನ್ನು ನಾವು ಎಲ್ಲೆಲ್ಲೂ ಯಾವಾಗಲೂ ಪೂರ್ಣ ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತೇವೆ.
4 : ನಾನು ತಮ್ಮ ಸಮಯವನ್ನು ವ್ಯರ್ಥಮಾಡಲು ಇಚ್ಛಿಸುವುದಿಲ್ಲ. ಸಂಕ್ಷಿಪ್ತವಾಗಿ ನಾನು ತಮ್ಮ ಮುಂದಿಡುವ ಈ ವಾದವನ್ನು ದಯೆಯಿಂದ ಆಲಿಸಬೇಕೆಂದು ವಿಜ್ಞಾಪಿಸುತ್ತೇನೆ.
5 : ಈ ವ್ಯಕ್ತಿ ಒಂದು ದೊಡ್ಡ ಪೀಡೆ. ಯೆಹೂದ್ಯರು ಜಗತ್ತಿನಲ್ಲಿ ಎಲ್ಲೇ ಇರಲಿ, ಅಲ್ಲೆಲ್ಲಾ ಕಲಹವೆಬ್ಬಿಸುತ್ತಾನೆ. ಅಲ್ಲದೆ, ‘ನಜರೇನ’ ಎಂಬ ಕುಪ್ರಸಿದ್ಧ ಪಂಥದ ಒಬ್ಬ ಮುಖಂಡನೂ ಆಗಿದ್ದಾನೆ.
6 : ಇವನು ಮಹಾದೇವಾಲಯವನ್ನು ಭ್ರಷ್ಟಗೊಳಿಸಲು ಪ್ರಯತ್ನಿಸಿದ. ಅಷ್ಟರಲ್ಲಿ ನಾವು ಇವನನ್ನು ಬಂಧಿಸಿದೆವು. ನಮ್ಮ ಧರ್ಮಶಾಸ್ತ್ರಕ್ಕೆ ಅನುಸಾರವಾಗಿ ಇವನನ್ನು ವಿಚಾರಣೆಗೆ ಒಳಪಡಿಸಬೇಕೆಂದಿದ್ದೆವು.
7 : ಆದರೆ, ಸಹಸ್ರಾಧಿಪತಿ ಲೂಸಿಯನು ಮಧ್ಯೆ ಬಂದು ಬಲಾತ್ಕಾರದಿಂದ ಇವನನ್ನು ನಮ್ಮಿಂದ ಬಿಡಿಸಿಕೊಂಡನು.
8 : ಹಾಗೂ ಇವನ ಮೇಲೆ ತಪ್ಪು ಹೊರಿಸುವವರು ತಮ್ಮ ಮುಂದೆ ಬರಬೇಕೆಂದು ಆಜ್ಞೆಯಿತ್ತನು; ತಾವೇ ಕೇಳಿನೋಡಿ; ನಾವು ಇವನ ವಿರುದ್ಧ ತಂದಿರುವ ದೂರುಗಳೆಲ್ಲಾ ಸತ್ಯವಾದುವು ಎಂದು ಇವನಿಂದಲೇ ತಮಗೆ ವ್ಯಕ್ತ ಆಗುವುದು,” ಎಂದನು.
9 : ಯೆಹೂದ್ಯರೂ ವಕೀಲನಿಗೆ ಬೆಂಬಲವಾಗಿ ಅವನು ಹೇಳಿದ್ದೆಲ್ಲಾ ಸತ್ಯವೆಂದು ಸಾಧಿಸಿದರು.
10 : ರಾಜ್ಯಪಾಲನು ಪೌಲನಿಗೆ ಸನ್ನೆಮಾಡಿ ಮಾತನಾಡುವಂತೆ ಅಪ್ಪಣೆ ಮಾಡಿದನು. ಆಗ ಪೌಲನು ಹೀಗೆಂದನು: “ತಾವು ಅನೇಕ ವರ್ಷಗಳಿಂದ ಈ ನಾಡಿನ ನ್ಯಾಯಾಧೀಶರಾಗಿದ್ದೀರಿ. ಅದನ್ನು ಅರಿತು ನಿರ್ಭಯನಾಗಿ ಪ್ರತಿವಾದವನ್ನು ತಮ್ಮ ಮುಂದಿಡುತ್ತೇನೆ.
11 : ನಾನು ಜೆರುಸಲೇಮಿಗೆ ದೈವಾರಾಧನೆಗೆಂದು ಹೋಗಿ ಇಲ್ಲಿಗೆ ಹನ್ನೆರಡು ದಿನಗಳಿಗಿಂತ ಹೆಚ್ಚಾಗಿಲ್ಲ. ಇದನ್ನು ತಾವೇ ವಿಚಾರಿಸಿ ತಿಳಿದುಕೊಳ್ಳಬಹುದು.
12 : ನಾನು ದೇವಾಲಯದಲ್ಲಾಗಲಿ, ಪ್ರಾರ್ಥನಾಮಂದಿರದಲ್ಲಾಗಲಿ, ಪಟ್ಟಣದಲ್ಲಾಗಲಿ, ಯಾವ ವಾದವಿವಾದ ನಡೆಸಿದ್ದನ್ನು ಅಥವಾ ಜನರನ್ನು ಪ್ರಚೋದಿಸಿದ್ದನ್ನು ಇವರಾರೂ ಕಂಡಿಲ್ಲ.
13 : ಇವರು ಈಗ ನನ್ನ ಮೇಲೆ ಹೊರಿಸುವ ಆಪಾದನೆಗಳನ್ನು ತಮ್ಮ ಮುಂದೆ ಸಮರ್ಥಿಸಲು ಇವರಿಂದಾಗದು.
14 : ಇಷ್ಟನ್ನು ಮಾತ್ರ ನಾನು ಒಪ್ಪಿಕೊಳ್ಳುತ್ತೇನೆ: ಇವರು ಕುಪ್ರಸಿದ್ಧವೆಂದು ನಿಂದಿಸುವ ಮಾರ್ಗವನ್ನು ಅನುಸರಿಸುವವನು ನಾನು. ಆ ಮಾರ್ಗದ ಪ್ರಕಾರ ನಮ್ಮ ಪೂರ್ವಜರ ದೇವರನ್ನು ಆರಾಧಿಸುತ್ತೇನೆ. ಧರ್ಮಶಾಸ್ತ್ರದಲ್ಲೂ ಪ್ರವಾದಿಗಳ ಗ್ರಂಥದಲ್ಲೂ ಬರೆದಿರುವುದನ್ನೆಲ್ಲ ನಂಬುತ್ತೇನೆ.
15 : ಮಾನವರು ಸಜ್ಜನರಾಗಿರಲಿ, ದುರ್ಜನರಾಗಿರಲಿ, ಪುನರುತ್ಥಾನ ಹೊಂದುವರೆಂದು ಇವರಂತೆಯೇ ನಾನು ದೇವರಲ್ಲಿ ನಂಬಿಕೆಯುಳ್ಳವನಾಗಿದ್ದೇನೆ.
16 : ಅಂತೆಯೇ, ದೇವರ ಹಾಗೂ ಮಾನವರ ಮುಂದೆ ಶುದ್ಧ ಮನಸ್ಸಾಕ್ಷಿಯುಳ್ಳವನಾಗಿ ಬಾಳಲು ಪ್ರಯತ್ನಿಸುತ್ತಿದ್ದೇನೆ.
17 : ಹಲವಾರು ವರ್ಷಗಳಿಂದ ದೂರವಿದ್ದ ನಾನು, ಈಗ ನನ್ನ ಸ್ವದೇಶಿಯರಿಗೆ ದಾನಧರ್ಮ ತರಲೂ ಕಾಣಿಕೆಯನ್ನು ಅರ್ಪಿಸಲೂ ಜೆರುಸಲೇಮಿಗೆ ಬಂದೆ.
18 : ಶುದ್ಧಾಚಾರದ ವಿಧಿಯನ್ನು ಮುಗಿಸಿಕೊಂಡು, ನನ್ನೀ ಕಾರ್ಯದಲ್ಲಿ ನಿರತನಾಗಿದ್ದಾಗ ಇವರು ನನ್ನನ್ನು ಮಹಾದೇವಾಲಯದಲ್ಲಿ ಕಂಡರು. ಆಗ ನನ್ನೊಂದಿಗೆ ಜನರ ಗುಂಪೇನೂ ಇರಲಿಲ್ಲ; ಯಾವ ಗಲಭೆಗೂ ಅವಕಾಶವಿರಲಿಲ್ಲ.
19 : ಆದರೆ, ಏಷ್ಯಾದಿಂದ ಬಂದಿದ್ದ ಯೆಹೂದ್ಯರು ಕೆಲವರು ಅಲ್ಲಿದ್ದರು. ನನ್ನ ಮೇಲೆ ಯಾವುದಾದರೂ ಆಪಾದನೆಯನ್ನೂ ಹೊರಿಸಬೇಕೆಂದಿದ್ದರೆ, ಅವರೇ ಇಲ್ಲಿ ತಮ್ಮ ಮುಂದೆ ಹಾಜರಿರಬೇಕಾಗಿತ್ತು.
20 : ಅಥವಾ, ನಾನು ನ್ಯಾಯಸಭೆಯ ಮುಂದೆ ನಿಂತಿದ್ದಾಗ ನನ್ನಲ್ಲಿ ಯಾವ ಅಪರಾಧಗಳು ಕಂಡು ಬಂದವೆಂದು, ಈ ಜನರೇ ಹೇಳಲಿ.
21 : ಸತ್ತವರು ಪುನರುತ್ಥಾನ ಹೊಂದುತ್ತಾರೆ, ಎಂಬ ವಿಷಯಕ್ಕಾಗಿ ನಾನು ಇಂದು ನಿಮ್ಮ ಮುಂದೆ ವಿಚಾರಣೆಗೆ ಗುರಿಯಾಗಿದ್ದೇನೆ’ ಎಂದು ನಾನು ಆ ಸಭೆಯ ಮುಂದೆ ಕೂಗಿ ಹೇಳಿದ್ದನ್ನು ಬಿಟ್ಟರೆ, ಬೇರೆ ಏನನ್ನು ನನ್ನಲ್ಲಿ ಕಂಡರೆಂದು ಇವರೇ ಹೇಳಲಿ,” ಎಂದನು.
22 : ಕ್ರಿಸ್ತಮಾರ್ಗದ ಬಗ್ಗೆ ಚೆನ್ನಾಗಿ ಅರಿತುಕೊಂಡಿದ್ದ ಫೆಲಿಕ್ಸನು, “ಸಹಸ್ರಾಧಿಪತಿ ಲೂಸಿಯನು ಬಂದ ಮೇಲೆ ನಾನು ಈ ವ್ಯಾಜ್ಯವನ್ನು ತೀರ್ಮಾನಿಸುತ್ತೇನೆ,” ಎಂದು ಹೇಳಿ ವಿಚಾರಣೆಯನ್ನು ಮುಂದೂಡಿದನು.
23 : ಅನಂತರ ಪೌಲನನ್ನು ಕಾವಲಿನಲ್ಲಿ ಇಡಬೇಕೆಂದೂ ಆದರೆ ಕಟ್ಟುನಿಟ್ಟು ಬೇಕಿಲ್ಲವೆಂದೂ ಅವನಿಗೆ ಸಂಬಂಧಪಟ್ಟವರು ಅವನಿಗೆ ಉಪಚಾರ ಮಾಡುವುದನ್ನು ತಡೆಯಬಾರದೆಂದೂ ಶತಾಧಿಪತಿಗೆ ಆಜ್ಞೆಮಾಡಿದನು.
24 : ಕೆಲವು ದಿನಗಳ ನಂತರ ಫೆಲಿಕ್ಸನು ಯೆಹೂದ್ಯಳಾದ ತನ್ನ ಪತ್ನಿ ದ್ರುಸಿಲ್ಲಳೊಂದಿಗೆ ಬಂದು ಪೌಲನನ್ನು ತನ್ನ ಬಳಿಗೆ ಕರೆಯಿಸಿದನು. ಕ್ರಿಸ್ತ ಯೇಸುವನ್ನು ವಿಶ್ವಾಸಿಸುವ ಬಗ್ಗೆ ಪೌಲನಾಡಿದ ಮಾತುಗಳನ್ನು ಆಲೈಸಿದನು.
25 : ಆದರೆ ನೀತಿ ನಿಯಮ, ಇಂದ್ರಿಯನಿಗ್ರಹ, ಬರಲಿರುವ ದೈವತೀರ್ಪಿನ ದಿನ ಇವುಗಳನ್ನು ಪ್ರಸ್ತಾಪಿಸಿದಾಗ ಫೆಲಿಕ್ಸನು ದಿಗಿಲುಗೊಂಡನು. “ಸದ್ಯಕ್ಕೆ, ನೀನು ಹೋಗಬಹುದು; ಸಮಯ ಒದಗಿದಾಗ ನಿನ್ನನ್ನು ಕರೆಯಿಸುತ್ತೇನೆ,” ಎಂದನು.
26 : ಇದಲ್ಲದೆ, ಪೌಲನು ತನಗೆ ಹಣವನ್ನು ಕೊಡಬಹುದೆಂಬ ನಿರೀಕ್ಷೆ ಅವನದಾಗಿತ್ತು. ಈ ಕಾರಣದಿಂದಲೇ ಅವನನ್ನು ಪದೇ ಪದೇ ಕರೆಯಿಸಿ, ಅವನೊಡನೆ ಮಾತುಕತೆ ನಡೆಸುತ್ತಿದ್ದನು.
27 : ಹೀಗೆ ಎರಡು ವರ್ಷಗಳು ಕಳೆದವು. ಪೊರ್ಸಿಯ ಫೆಸ್ತ ಎಂಬವನು ಫೆಲಿಕ್ಸನ ಸ್ಥಾನದಲ್ಲಿ ರಾಜ್ಯಪಾಲನಾಗಿ ಬಂದನು. ಫೆಲಿಕ್ಸನು ಯೆಹೂದ್ಯರ ಮೆಚ್ಚುಗೆಯನ್ನು ಗಳಿಸಿಕೊಳ್ಳುವ ಸಲುವಾಗಿ ಪೌಲನನ್ನು ಸೆರೆಮನೆಯಲ್ಲೇ ಬಿಟ್ಟು ಹೋದನು.

· © 2017 kannadacatholicbible.org Privacy Policy