Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಪ್ರೇ.ಕಾ


1 : ಪೌಲನು ಆ ನ್ಯಾಯಸಭೆಯ ಸದಸ್ಯರನ್ನು ದಿಟ್ಟಿಸಿನೋಡಿ, “ಬಂಧು ಭಾಂದವರೇ, ಈ ದಿನದವರೆಗೂ ನಾನು ದೇವರ ಸಮ್ಮುಖದಲ್ಲಿ ನನ್ನ ಮನಸ್ಸಾಕ್ಷಿಯ ಪ್ರಕಾರ ಬಾಳಿದ್ದೇನೆ,” ಎಂದನು.
2 : ಇದನ್ನು ಕೇಳಿದ್ದೇ, ಪ್ರಧಾನ ಯಾಜಕ ಅನನೀಯನು ಪೌಲನ ಬಾಯಮೇಲೆ ಹೊಡೆಯುವಂತೆ ಹತ್ತಿರದಲ್ಲೇ ನಿಂತಿದ್ದವರಿಗೆ ಆಜ್ಞಾಪಿಸಿದನು.
3 : ಪೌಲನು ಅವನಿಗೆ, “ಸುಣ್ಣಬಳಿದ ಗೋಡೆ ನೀನು; ದೇವರು ನಿನ್ನನ್ನು ಹೊಡೆಯದೆ ಬಿಡರು; ಧರ್ಮಶಾಸ್ತ್ರದ ಪ್ರಕಾರ ನ್ಯಾಯವಿಚಾರಣೆ ಮಾಡಲು ಕುಳಿತಿರುವ ನೀನು ಅದೇ ಧರ್ಮಶಾಸ್ತ್ರವನ್ನು ಉಲ್ಲಂಘಿಸಿ ನನ್ನನ್ನು ಹೊಡೆಯುವಂತೆ ಆಜ್ಞಾಪಿಸುತ್ತಿರುವೆಯಾ?” ಎಂದನು.
4 : ಪಕ್ಕದಲ್ಲಿದ್ದವರು, “ದೇವರೇ ನೇಮಿಸಿದ ಪ್ರಧಾನ ಯಾಜಕರನ್ನು ನಿಂದಿಸುತ್ತಿಯೋ?” ಎಂದರು.
5 : ಪ್ರತ್ಯುತ್ತರವಾಗಿ ಪೌಲನು, “ಸಹೋದರರೇ, ಇವರು ಪ್ರಧಾನ ಯಾಜಕರೆಂದು ನನಗೆ ತಿಳಿಯದೆ ಹೋಯಿತು. ‘ನಿಮ್ಮ ಪ್ರಜಾಪಾಲನನ್ನು ದೂಷಿಸಬೇಡ’ ಎಂದು ಪವಿತ್ರಗ್ರಂಥದಲ್ಲೇ ಬರೆದಿದೆ ಅಲ್ಲವೆ?” ಎಂದನು.
6 : ಸಭೆ ಸೇರಿದ್ದವರಲ್ಲಿ ಕೆಲವರು ಸದ್ದುಕಾಯ ಪಂಥದವರು ಮತ್ತೆ ಕೆಲವರು ಫರಿಸಾಯ ಪಂಥದವರು. ಇದನ್ನು ಗಮನಿಸಿದ ಪೌಲನು, “ಸಹೋದರರೇ, ನಾನೊಬ್ಬ ಫರಿಸಾಯ, ಫರಿಸಾಯರ ವಂಶಜ. ಸತ್ತವರು ಪುನರುತ್ಥಾನ ಹೊಂದುತ್ತಾರೆ ಎಂಬ ನಮ್ಮ ನಿರೀಕ್ಷೆಯ ನಿಮಿತ್ತ ನಾನು ಇಲ್ಲಿ ವಿಚಾರಣೆಗೆ ಗುರಿಯಾಗಿದ್ದೇನೆ,” ಎಂದು ಧ್ವನಿಯೆತ್ತಿ ಸಭೆಯಲ್ಲಿ ಹೇಳಿದನು.
7 : ಅವನು ಹೀಗೆ ಹೇಳಿದಾಕ್ಷಣವೇ, ಫರಿಸಾಯರ ಮತ್ತು ಸದ್ದುಕಾಯರ ನಡುವೆ ವಾಗ್ವಾದ ಉಂಟಾಯಿತು. ಸಭೆಯಲ್ಲಿ ಭಿನ್ನಭೇದವುಂಟಾಯಿತು.
8 : ಏಕೆಂದರೆ, ಸದ್ದುಕಾಯರು ಪುನರುತ್ಥಾನವಾಗಲಿ, ದೇವದೂತರಾಗಲಿ, ದೇಹರಹಿತ ಆತ್ಮವಾಗಲಿ ಇದೆಯೆಂದು ಒಪ್ಪುವುದಿಲ್ಲ. ಆದರೆ ಫರಿಸಾಯರು ಇವೆಲ್ಲಾ ಇವೆಯೆಂದು ನಂಬುತ್ತಾರೆ.
9 : ಆಗ ಅಲ್ಲಿ ದೊಡ್ಡ ಕೂಗಾಟವೆದ್ದಿತು. ಫರಿಸಾಯ ಪಂಥಕ್ಕೆ ಸೇರಿದ ಕೆಲವು ಧರ್ಮಶಾಸ್ತ್ರಿಗಳು ಎದ್ದು ನಿಂತು, “ಈ ಮನುಷ್ಯನಲ್ಲಿ ನಮಗೆ ಯಾವ ದೋಷವೂ ಕಾಣುವುದಿಲ್ಲ. ಒಂದು ಆತ್ಮವೋ ಅಥವಾ ಒಬ್ಬ ದೂತನೋ ಇವನೊಡನೆ ಮಾತನಾಡಿದ್ದರೂ ಮಾತನಾಡಿರಬಹುದು,” ಎಂದು ವಾದಿಸಿದರು.
10 : ಈ ವಾಗ್ವಾದ ವಿಕೋಪಕ್ಕೆ ಹೋದುದರಿಂದ ಪೌಲನನ್ನು ಅವರು ಖಂಡತುಂಡಾಗಿಸಬಹುದೆಂದು ಸಹಸ್ರಾಧಿಪತಿ ಹೆದರಿದನು. ಅವನು ಸೈನಿಕರನ್ನು ಕಳುಹಿಸಿ ಪೌಲನನ್ನು ಸಭೆಯ ಮಧ್ಯದಿಂದ ಎತ್ತಿಕೊಂಡು ಕೋಟೆಗೆ ತರುವಂತೆ ಆಜ್ಞಾಪಿಸಿದನು.
11 : ಪ್ರಭು ಅದೇ ರಾತ್ರಿ ಪೌಲನಿಗೆ ಹತ್ತಿರದಲ್ಲೇ ಕಾಣಿಸಿಕೊಂಡು, “ಧೈರ್ಯದಿಂದಿರು, ನೀನು ಜೆರುಸಲೇಮಿನಲ್ಲಿ ನನಗೆ ಸಾಕ್ಷಿಕೊಟ್ಟಂತೆ ರೋಮಿನಲ್ಲೂ ನನಗೆ ಸಾಕ್ಷಿಕೊಡಬೇಕಾಗಿದೆ,” ಎಂದರು.
12 : ಮಾರನೆಯ ದಿನ ಬೆಳಿಗ್ಗೆ ಕೆಲವು ಯೆಹೂದ್ಯರು ಒಟ್ಟುಗೂಡಿ ಒಳಸಂಚು ಹೂಡಿದರು. ಪೌಲನನ್ನು ಕೊಲ್ಲುವ ತನಕ ತಾವು ಅನ್ನಪಾನವೇನೂ ಮುಟ್ಟುವುದಿಲ್ಲವೆಂದು ಶಪಥ ಮಾಡಿದರು.
13 : ಈ ಒಳಸಂಚು ಮಾಡಿದವರು ನಾಲ್ವತ್ತಕ್ಕೂ ಹೆಚ್ಚು ಮಂದಿ.
14 : ಇವರು ಮುಖ್ಯ ಯಾಜಕರ ಮತ್ತು ಪ್ರಮುಖರ ಬಳಿಗೆ ಹೋಗಿ ಇಂತೆಂದರು: “ನಾವು ಪೌಲನನ್ನು ಕೊಲ್ಲುವ ತನಕ ಏನನ್ನೂ ತಿನ್ನುವುದಿಲ್ಲವೆಂದು ಕಠಿಣ ಶಪಥಮಾಡಿಕೊಂಡಿದ್ದೇವೆ.
15 : ಆದುದರಿಂದ ನೀವು ನ್ಯಾಯಸಭೆಯವರೊಂದಿಗೆ ಸೇರಿ ಪೌಲನನ್ನು ನಿಮ್ಮ ಬಳಿಗೆ ಕರೆದು ತರಬೇಕೆಂದು ಸಹಸ್ರಾಧಿಪತಿಗೆ ಹೇಳಿಕಳುಹಿಸಿರಿ. ಅವನ ಬಗ್ಗೆ ಇನ್ನೂ ಸೂಕ್ಷ್ಮವಾಗಿ ಪರಿಶೀಲಿಸಬೇಕಾಗಿದೆಯೆಂದು ನಟಿಸಿರಿ. ನಾವು ಹೊಂಚುಹಾಕಿಕೊಂಡಿದ್ದು ಅವನು ಇಲ್ಲಿಗೆ ಬರುವ ಮೊದಲೇ ಅವನನ್ನು ಸಂಹರಿಸಿ ಬಿಡುತ್ತೇವೆ,” ಎಂದರು.
16 : ಈ ಒಳಸಂಚು ಪೌಲನ ಸೋದರಿಯ ಮಗನ ಕಿವಿಗೆ ಬಿದ್ದಿತು. ಅವನು ಕೋಟೆಯೊಳಗೆ ಹೋಗಿ ಅದನ್ನು ಪೌಲನಿಗೆ ತಿಳಿಸಿದನು.
17 : ಪೌಲನು ಶತಾಧಿಪತಿಗಳಲ್ಲಿ ಒಬ್ಬನನ್ನು ಕರೆದು, ‘ಈ ಯುವಕನನ್ನು ಸಹಸ್ರಾಧಿಪತಿಯ ಬಳಿಗೆ ಕರೆದುಕೊಂಡು ಹೋಗಿ; ಇವನು ಅವರಿಗೆ ತಿಳಿಸಬೇಕಾದ ವಿಷಯ ಒಂದಿದೆ,” ಎಂದನು.
18 : ಅಂತೆಯೇ, ಶತಾಧಿಪತಿ ಅವನನ್ನು ಸಹಸ್ರಾಧಿಪತಿಯ ಬಳಿಗೆ ಕರೆದುಕೊಂಡು ಹೋಗಿ, “ಕೈದಿ ಪೌಲನು, ನನ್ನನ್ನು ಕರೆದು, ಈ ಯುವಕನನ್ನು ನಿಮ್ಮಲ್ಲಿಗೆ ಕರೆದುಕೊಂಡು ಬರಲು ತಿಳಿಸಿದನು. ನಿಮಗೆ ಹೇಳಬೇಕಾದ ವಿಷಯವೇನೋ ಇದೆಯಂತೆ,” ಎಂದನು.
19 : ಆಗ ಸಹಸ್ರಾಧಿಪತಿ ಆ ಯುವಕನ ಕೈಹಿಡಿದು, ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ, “ನೀನು ನನಗೆ ಹೇಳಬೇಕೆಂದು ಇರುವ ವಿಷಯವೇನು?” ಎಂದು ವಿಚಾರಿಸಿದನು. 20ಅದಕ್ಕೆ ಆ ಯುವಕನು, “ಯೆಹೂದ್ಯರು ಒಂದುಗೂಡಿ ಒಂದು ತೀರ್ಮಾನ ಕೈಗೊಂಡಿದ್ದಾರೆ. ಅದರ ಪ್ರಕಾರ ಪೌಲನ ಬಗ್ಗೆ ಇನ್ನೂ ಸೂಕ್ಷ್ಮವಾಗಿ ಪರಿಶೀಲಿಸಬೇಕಾಗಿದೆಯೆಂದು ನಟಿಸಿ, ಅವನನ್ನು ನಾಳೆ ನ್ಯಾಯಸಭೆಯ ಮುಂದೆ ಹಾಜರುಪಡಿಸುವಂತೆ ಕೇಳಿಕೊಳ್ಳಲಿದ್ದಾರೆ.
21 : ಆದರೆ ನೀವು ಅವರ ಮಾತನ್ನು ನಂಬಬೇಡಿ. ಏಕೆಂದರೆ, ನಾಲ್ವತ್ತಕ್ಕೂ ಹೆಚ್ಚು ಮಂದಿ ಅವನಿಗಾಗಿ ಹೊಂಚುಹಾಕಿ ಕಾದುಕೊಂಡಿರುತ್ತಾರೆ. ತಾವು ಅವನನ್ನು ಕೊಲ್ಲುವ ತನಕ ಅನ್ನಪಾನವೇನೂ ಮುಟ್ಟುವುದಿಲ್ಲವೆಂದು ಶಪಥ ಮಾಡಿದ್ದಾರೆ. ಈಗ ಅವರು ನಿಮ್ಮ ಅನುಮತಿಯನ್ನು ಎದುರುನೋಡುತ್ತಾ ಕಾಯುತ್ತಿದ್ದಾರೆ,” ಎಂದನು.
22 : “ಈ ವಿಷಯವನ್ನು ನೀನು ನನಗೆ ವರದಿ ಮಾಡಿರುವುದಾಗಿ ತಿಳಿಸಬೇಡ,” ಎಂದು ಸಹಸ್ರಾಧಿಪತಿ ಆ ಯುವಕನಿಗೆ ಆಜ್ಞೆಮಾಡಿ ಅವನನ್ನು ಕಳುಹಿಸಿಬಿಟ್ಟನು.
23 : ಅನಂತರ ಸಹಸ್ರಾಧಿಪತಿ ಇಬ್ಬರು ಶತಾಧಿಪತಿಗಳನ್ನು ಕರೆದು ಹೀಗೆಂದನು: “ಈ ರಾತ್ರಿ ಒಂಭತ್ತು ಗಂಟೆಗೆ ಸೆಜರೇಯ ಪಟ್ಟಣಕ್ಕೆ ಹೊರಡಲು ಇನ್ನೂರು ಮಂದಿ ಸೈನಿಕರನ್ನೂ ಎಪ್ಪತ್ತು ಮಂದಿ ಕುದುರೆ ಸವಾರರನ್ನೂ ಇನ್ನೂರು ಮಂದಿ ಭರ್ಜಿ ಆಳುಗಳನ್ನೂ ಸಿದ್ಧಗೊಳಿಸಿರಿ.
24 : ಕುದುರೆಗಳನ್ನು ಸಜ್ಜುಗೊಳಿಸಿ ಪೌಲನನ್ನು ಏರಿಸಿ, ರಾಜ್ಯಪಾಲ ಫೆಲಿಕ್ಸರ ಬಳಿಗೆ ಭದ್ರವಾಗಿ ಕರೆದುಕೊಂಡು ಹೋಗಿರಿ,”
25 : ಇದೂ ಅಲ್ಲದೆ ಸಹಸ್ರಾಧಿಪತಿ ಬರೆದುಕೊಟ್ಟ ಪತ್ರ ಹೀಗಿತ್ತು:
26 : “ಮಹಾಪ್ರಭುಗಳಾದ ರಾಜ್ಯಪಾಲ ಫೆಲಿಕ್ಸ್ ಅವರ ಸನ್ನಿಧಾನಕ್ಕೆ - ಕ್ಲಾಡಿಯ ಲೂಸಿಯನು ಮಾಡುವ ಪ್ರಣಾಮಗಳು.
27 : ಈ ವ್ಯಕ್ತಿಯನ್ನು ಯೆಹೂದ್ಯರು ಹಿಡಿದು ಕೊಲ್ಲುವುದರಲ್ಲಿದ್ದರು. ಇವನು ರೋಮಿನ ಪೌರನೆಂದು ತಿಳಿದು, ನಾನು ಸೈನಿಕರೊಡನೆ ಹೋಗಿ ಇವನನ್ನು ಬಿಡಿಸಿದೆ.
28 : ಇವನ ಮೇಲೆ ಅವರು ಹೊರಿಸಿರುವ ಆಪಾದನೆಗಳು ಏನೆಂದು ತಿಳಿದುಕೊಳ್ಳುವ ಉದ್ದೇಶದಿಂದ ನಾನು ಇವನನ್ನು ಅವರ ನ್ಯಾಯಸಭೆಯಲ್ಲಿ ಹಾಜರುಪಡಿಸಿದೆ.
29 : ಅಲ್ಲಿ ನನಗೆ ಕಂಡುಬಂದ ಪ್ರಕಾರ ಅವರ ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಇವನ ಮೇಲೆ ಆಪಾದನೆ ಹೊರಸಲಾಯಿತೇ ಹೊರತು ಮರಣದಂಡನೆಗಾಗಲಿ, ಸೆರೆಮನೆಗಾಗಲಿ, ಇವನನ್ನು ಗುರಿಪಡಿಸಬಹುದಾದ ಅಪರಾಧವೇನೂ ಇರಲಿಲ್ಲ.
30 : ಆದರೂ ಇವನ ವಿರುದ್ಧ ಒಳಸಂಚು ನಡೆಯುತ್ತಲೇ ಇದೆಯೆಂದು ನನಗೆ ತಿಳಿದುಬಂದಿತು. ಕೂಡಲೇ ನಾನು ಇವನನ್ನು ತಮ್ಮ ಬಳಿಗೆ ಕಳುಹಿಸಿದ್ದೇನೆ. ಇವನ ಮೇಲೆ ತಪ್ಪು ಹೊರಿಸುವವರು ತಮ್ಮ ಸನ್ನಿಧಾನದಲ್ಲೇ ಬಂದು ಆ ಆಪಾದನೆಗಳನ್ನು ನಿವೇದಿಸಬಹುದೆಂದು ಅಪ್ಪಣೆಮಾಡಿದ್ದೇನೆ.”
31 : ಸೈನಿಕರು ಈ ಆಜ್ಞೆಯನ್ನು ಶಿರಸಾವಹಿಸಿ ಪೌಲನನ್ನು ಆ ರಾತ್ರಿ ಅಂತಿಪತ್ರಿಯ ಎಂಬ ಊರಿನವರೆಗೆ ಕರೆದುಕೊಂಡು ಹೋದರು.
32 : ಮರುದಿನ ಪೌಲನೊಂದಿಗೆ ಮುಂದೆಹೋಗಲು ಕುದುರೆ ಸವಾರರನ್ನು ಬಿಟ್ಟು, ಸೈನಿಕರು ಕೋಟೆಗೆ ಹಿಂದಿರುಗಿದರು.
33 : ಸವಾರರು ಸೆಜರೇಯವನ್ನು ತಲುಪಿ ರಾಜ್ಯಪಾಲನಿಗೆ ಪತ್ರವನ್ನು ಕೊಟ್ಟು ಪೌಲನನ್ನು ಅವನ ವಶಕ್ಕೊಪ್ಪಿಸಿದರು.
34 : ರಾಜ್ಯಪಾಲನು ಪತ್ರವನ್ನು ಓದಿ ಪೌಲನು ಯಾವ ಪ್ರಾಂತ್ಯದ ನಿವಾಸಿ ಎಂದು ವಿಚಾರಿಸಿ ಅವನು ಸಿಲಿಸಿಯದಿಂದ ಬಂದವನೆಂದು ತಿಳಿದುಕೊಂಡನು.
35 : “ನಿನ್ನ ಮೇಲೆ ತಪ್ಪು ಹೊರಿಸಿದವರು ಬಂದ ಮೇಲೆ ನಿನ್ನ ವಿಚಾರಣೆ ಮಾಡುತ್ತೇನೆ,” ಎಂದು ಹೇಳಿ ಪೌಲನನ್ನು ಹೆರೋದನ ಅರಮನೆಯಲ್ಲಿ ಕಾವಲಿನಲ್ಲಿ ಇಡಬೇಕೆಂದು ಆಜ್ಞಾಪಿಸಿದನು.

· © 2017 kannadacatholicbible.org Privacy Policy