1 : “ಭ್ರಾತೃಗಳೇ, ಪಿತೃಗಳೇ, ಈಗ ನಾನು ಮಾಡಹೋಗುವ ನನ್ನ ಸಮರ್ಥನೆಗೆ ಕಿವಿಗೊಡಿ.”
2 : ಪೌಲನು ಹೀಗೆ ತಮ್ಮನ್ನು ಸಂಬೋಧಿಸಿ ಹಿಬ್ರು ಭಾಷೆಯಲ್ಲಿ ಮಾತನಾಡುವುದನ್ನು ಕೇಳಿದ್ದೇ ಅಲ್ಲಿದ್ದ ಜನರು ಇನ್ನೂ ನಿಶ್ಯಬ್ದರಾದರು. ಅವನು ಮುಂದುವರಿಸುತ್ತಾ ಇಂತೆಂದನು:
3 : “ನಾನೊಬ್ಬ ಯೆಹೂದ್ಯನು, ಸಿಲಿಸಿಯದ ತಾರ್ಸ ಎಂಬಲ್ಲಿ ಹುಟ್ಟಿದವನು. ಆದರೆ, ಇದೇ ಜೆರುಸಲೇಮಿನಲ್ಲಿ ಬೆಳೆದವನು. ಗಮಲಿಯೇಲನ ಪಾದಸನ್ನಿಧಿಯಲ್ಲಿ ನಮ್ಮ ಪೂರ್ವಜರ ಧರ್ಮಶಾಸ್ತ್ರವನ್ನು ಕಟ್ಟುನಿಟ್ಟಾಗಿ ಕಲಿತವನು. ಇಲ್ಲಿ ಇಂದು ನೆರೆದಿರುವ ನೀವೆಲ್ಲರೂ ದೈವಾಭಿಮಾನಿಗಳಾಗಿರುವಂತೆಯೇ ನಾನು ದೈವಾಭಿಮಾನಿಯಾಗಿದ್ದೆ.
4 : ಕ್ರಿಸ್ತಮಾರ್ಗವನ್ನು ಅನುಸರಿಸುವವರನ್ನು, ಸ್ತ್ರೀ ಪುರುಷರೆನ್ನದೆ ಬಂಧಿಸಿ, ಅವರನ್ನು ಸೆರೆಮನೆಗೆ ತಳ್ಳಿದೆ. ಅವರನ್ನು ಮರಣ ಪರಿಯಂತರ ಪೀಡಿಸಿ ಹಿಂಸಿಸಿದೆ.
5 : ಇದಕ್ಕೆ ಪ್ರಧಾನ ಯಾಜಕರು ಮತ್ತು ಪ್ರಮುಖರ ಇಡೀ ಸಭೆಯೇ ಸಾಕ್ಷಿ. ನಾನು ಅವರಿಂದಲೇ ದಮಸ್ಕಸಿನಲ್ಲಿರುವ ಯೆಹೂದ್ಯ ಬಾಂಧವರಿಗೆ ಪತ್ರಗಳನ್ನು ಪಡೆದು, ಆ ಪಟ್ಟಣಕ್ಕೆ ಹೊರಟೆ. ಅಲ್ಲಿಂದ ಕ್ರೈಸ್ತರನ್ನು ಬಂಧಿಸಿ, ಜೆರುಸಲೇಮಿಗೆ ತಂದು ಶಿಕ್ಷಿಸಬೇಕೆಂಬುದೇ ನನ್ನ ಉದ್ದೇಶವಾಗಿತ್ತು.
6 : “ಹೀಗೆ ಪ್ರಯಾಣ ಮಾಡುತ್ತಾ ದಮಸ್ಕಸನ್ನು ಸವಿೂಪಿಸಿದೆ. ಆಗ ಸುಮಾರು ನಡು ಮಧ್ಯಾಹ್ನ. ಇದ್ದಕ್ಕಿದ್ದಂತೆ ಆಕಾಶದಿಂದ ಮಹಾ ಬೆಳಕೊಂದು ನನ್ನ ಸುತ್ತಲೂ ಮಿಂಚಿತು.
7 : ನಾನು ನೆಲಕ್ಕುರುಳಿದೆ. ಆಗ ‘ಸೌಲನೇ, ಸೌಲನೇ, ನನ್ನನ್ನೇಕೆ ಹಿಂಸಿಸುತ್ತಿರುವೆ?’ ಎಂಬ ವಾಣಿ ಕೇಳಿಸಿತು.
8 : ನಾನು ‘ಪ್ರಭೂ, ನೀವಾರು?’ ಎಂದು ಕೇಳಿದೆ. ‘ನೀನು ಹಿಂಸೆಪಡಿಸುತ್ತಿರುವ ನಜರೇತಿನ ಯೇಸುವೇ ನಾನು,’ ಎಂದರು ಅವರು.
9 : ನನ್ನೊಡನೆ ಇದ್ದವರಿಗೆ ಬೆಳಕೇನೋ ಕಾಣಿಸಿತು, ಆದರೆ ನನ್ನೊಡನೆ ಮಾತಾಡುತ್ತಿದ್ದ ವಾಣಿ ಅವರಿಗೆ ಕೇಳಿಸಲಿಲ್ಲ.
10 : ‘ನಾನೇನು ಮಾಡಬೇಕು ಪ್ರಭೂ?’ ಎಂದು ಕೇಳಿದೆ. ಅದಕ್ಕೆ ಪ್ರಭು, ‘ಏಳು, ದಮಸ್ಕಸಿಗೆ ಹೋಗು, ನೀನು ಏನು ಮಾಡಬೇಕೆಂದು ನಿಶ್ಚಯಿಸಲಾಗಿದೆಯೋ ಅದೆಲ್ಲವನ್ನೂ ನಿನಗೆ ತಿಳಿಸಲಾಗುವುದು,’ ಎಂದು ಹೇಳಿದರು.
11 : ಬೆಳಕಿನ ಪ್ರಕಾಶದ ನಿಮಿತ್ತ ನಾನು ದೃಷ್ಟಿಹೀನನಾದೆ. ಜೊತೆಯಲ್ಲಿದ್ದವರು ನನ್ನನ್ನು ದಮಸ್ಕಸಿಗೆ ಕೈ ಹಿಡಿದು ನಡೆಸಿಕೊಂಡು ಹೋದರು.
12 : “ದಮಸ್ಕಸಿನಲ್ಲಿ ಅನನೀಯ ಎಂಬ ಒಬ್ಬ ವ್ಯಕ್ತಿ ಇದ್ದನು. ಅವನು ಧರ್ಮಶಾಸ್ತ್ರಕ್ಕೆ ಪ್ರಾಮಾಣಿಕನಾಗಿ ಬಾಳಿದವನು. ಆ ಊರಿನ ಸಮಸ್ತ ಯೆಹೂದ್ಯರಿಂದ ಸನ್ಮಾನಿತನು.
13 : ಅವನು ಬಂದು ನನ್ನ ಬಳಿ ನಿಂತು, ‘ಸಹೋದರ ಸೌಲನೇ, ದೃಷ್ಟಿಯನ್ನು ಪಡೆ,’ ಎಂದನು. ಆ ಕ್ಷಣವೇ ನಾನು ದೃಷ್ಟಿಪಡೆದು ಅವನನ್ನು ನೋಡಿದೆ.
14 : ಆಗ ಅವನು, ‘ನಮ್ಮ ಪೂರ್ವಜರ ದೇವರು ತಮ್ಮ ಚಿತ್ತವನ್ನು ನೀನು ಅರಿಯಬೇಕೆಂದು, ತಮ್ಮ ಸತ್ಯ ಸ್ವರೂಪಿಯನ್ನು ನೀನು ನೋಡಬೇಕೆಂದು, ತಮ್ಮ ಕಂಠಸ್ವರವನ್ನು ನೀನು ಕೇಳಬೇಕೆಂದು ನಿನ್ನನ್ನು ಆರಿಸಿಕೊಂಡಿದ್ದಾರೆ.
15 : ನೀನು ಕಂಡು ಕೇಳಿದ ವಿಷಯಗಳಿಗೆ ನೀನೇ ಎಲ್ಲ ಜನರಿಗೆ ಅವರ ಪರವಾಗಿ ಸಾಕ್ಷಿಯಾಗಬೇಕು.
16 : ಇನ್ನು ತಡಮಾಡುವುದೇಕೆ? ಏಳು, ಅವರ ನಾಮವನ್ನು ಜಪಿಸಿ, ದೀಕ್ಷಾಸ್ನಾನವನ್ನು ಪಡೆದು ನಿನ್ನ ಪಾಪಗಳನ್ನು ತೊಳೆದುಕೊ,’ ಎಂದನು.
17 : “ನಾನು ಜೆರುಸಲೇಮಿಗೆ ಹಿಂದಿರುಗಿ ಒಂದು ದಿನ ಮಹಾದೇವಾಲಯದಲ್ಲಿ ಪ್ರಾರ್ಥನೆ ಮಾಡುತ್ತಾ ಧ್ಯಾನಪರವಶನಾದೆ.
18 : ಆಗ ಪ್ರಭುವೇ ನನಗೆ ದರ್ಶನವಿತ್ತು, ‘ತಡಮಾಡದೆ ನೀನು ಜೆರುಸಲೇಮಿನಿಂದ ಹೊರಟುಹೋಗು. ನನ್ನ ಬಗ್ಗೆ ನೀನು ಕೊಡುವ ಸಾಕ್ಷಿಯನ್ನು ಇಲ್ಲಿಯ ಜನರು ಸ್ವೀಕರಿಸುವುದಿಲ್ಲ,’ ಎಂದರು.
19 : ಅದಕ್ಕೆ ಪ್ರತ್ಯುತ್ತರವಾಗಿ ನಾನು, ‘ಪ್ರಭೂ, ನಿಮ್ಮಲ್ಲಿ ವಿಶ್ವಾಸವಿಟ್ಟವರನ್ನು ನಾನು ಸೆರೆಹಿಡಿದೆ; ಪ್ರಾರ್ಥನಾಮಂದಿರಗಳಿಗೆ ಹೋಗಿ ಅವರನ್ನು ಚಾವಟಿಯಿಂದ ಹೊಡೆದೆ.
20 : ನಿಮ್ಮ ಸಾಕ್ಷಿಯಾದ ಸ್ತೇಫನನ ಹತ್ಯೆ ನಡೆದಾಗ ನಾನೂ ಸಮ್ಮತಿಸಿ ಅಲ್ಲೇ ಇದ್ದೆ. ಅವನನ್ನು ಕೊಲೆಮಾಡುತ್ತಿದ್ದವರ ಬಟ್ಟೆಬರೆಗಳಿಗೆ ನಾನೇ ಕಾವಲು ನಿಂತೆ. ಇದೆಲ್ಲ ಅವರಿಗೆ ಚೆನ್ನಾಗಿ ಗೊತ್ತಿದೆ,’ ಎಂದೆ. ಅದಕ್ಕೆ ಪ್ರಭು,
21 : ‘ಹೋಗು, ನಾನು ನಿನ್ನನ್ನು ದೂರದಲ್ಲಿರುವ ಅನ್ಯಧರ್ಮಿಯರ ಬಳಿಗೆ ಕಳುಹಿಸುತ್ತೇನೆ,’ ಎಂದರು.
22 : ಇಲ್ಲಿಯವರೆಗೆ ಪೌಲನು ಹೇಳುತ್ತಿದ್ದನ್ನು ಜನರು ಕಿವಿಗೊಟ್ಟು ಕೇಳುತ್ತಿದ್ದರು. ಆಮೇಲೆ ಅವರು, “ಇವನು ಈ ಲೋಕದಿಂದಲೇ ತೊಲಗಬೇಕು; ಇಂಥವನು ಜೀವದಿಂದ ಇರಬಾರದು,” ಎಂದು ಗಟ್ಟಿಯಾಗಿ ಕೂಗಾಡಲಾರಂಭಿಸಿದರು.
23 : ಹೀಗೆ ಚೀರುತ್ತಾ, ತಮ್ಮ ವಸ್ತ್ರಗಳನ್ನು ಬೀಸುತ್ತಾ, ಮಣ್ಣನ್ನು ಬಾಚಿ ತೂರಲಾರಂಭಿಸಿದರು.
24 : ಜನರು ಯಾವ ಕಾರಣದಿಂದ ಅವನ ವಿರುದ್ಧ ಹೀಗೆ ಮಾಡುತ್ತಿದ್ದಾರೆಂದು ಅರಿತುಕೊಳ್ಳಲು ಸಹಸ್ರಾಧಿಪತಿ ಪೌಲನನ್ನು ಕೋಟೆ ಒಳಕ್ಕೆ ಕೊಂಡೊಯ್ದು, ಚಾವಟಿಯಿಂದ ಹೊಡೆದು ವಿಚಾರಿಸುವಂತೆ ಆಜ್ಞಾಪಿಸಿದನು.
25 : ಹೊಡೆಯುವುದಕ್ಕಾಗಿ ಅವನನ್ನು ಬಾರುಗಳಿಂದ ಕಟ್ಟುತ್ತಿದ್ದಾಗ ಪೌಲನು, ಹತ್ತಿರವೇ ನಿಂತಿದ್ದ ಶತಾಧಿಪತಿಯನ್ನು ನೋಡಿ, “ರೋಮಿನ ಪೌರನನ್ನು ಚಾವಟಿಯಿಂದ ಹೊಡೆಯುವುದು, ಅದೂ ವಿಚಾರಣೆಮಾಡದೆ ಹೊಡೆಯಿಸುವುದು, ನ್ಯಾಯಸಮ್ಮತವೋ?” ಎಂದು ಕೇಳಿದನು.
26 : ಇದನ್ನು ಕೇಳಿದ್ದೇ, ಶತಾಧಿಪತಿಯು ಸೈನ್ಯಾಧಿಪತಿಯ ಬಳಿಗೆ ಬಂದು, “ನೀವು ಮಾಡಿಸುತ್ತಿರುವುದಾದರೂ ಏನು? ಆ ಮನುಷ್ಯ ರೋಮಿನ ಪೌರನು,” ಎಂದು ತಿಳಿಸಿದನು.
27 : ಆಗ ಸಹಸ್ರಾಧಿಪತಿ ಪೌಲನ ಬಳಿಗೆ ಬಂದು, “ನೀನು ರೋಮಿನ ಪೌರನೋ?” ಎಂದು ಕೇಳಿದನು.
28 : ಅದಕ್ಕೆ ಪೌಲನು, “ಹೌದು,” ಎಂದನು. “ನಾನು ರೋಮಿನ ಪೌರನಾಗುವ ಹಕ್ಕನ್ನು ಬಹಳ ಹಣತೆತ್ತು ಪಡೆಯಬೇಕಾಯಿತು,” ಎಂದು ಸಹಸ್ರಾಧಿಪತಿ ಹೇಳಿದಾಗ, ಪೌಲನು, “ನಾನು ಹುಟ್ಟಿದಂದಿನಿಂದಲೇ ರೋಮಿನ ಪೌರನು,” ಎಂದು ಉತ್ತರಿಸಿದನು.
29 : ಪೌಲನನ್ನು ಪ್ರಶ್ನಿಸಲು ಬಂದಿದ್ದವರು ಆ ಕ್ಷಣವೇ ಅವನನ್ನು ಬಿಟ್ಟು ಅಗಲಿದರು. ರೋಮಿನ ಪೌರನೊಬ್ಬನನ್ನು ಬಂಧಿಸಿದುದು ಮನವರಿಕೆಯಾದಾಗ ಸಹಸ್ರಾಧಿಪತಿಗೂ ಭಯವಾಯಿತು.
30 : ಯೆಹೂದ್ಯರು ಪೌಲನ ವಿರುದ್ಧ ತಂದ ಆಪಾದನೆ ಏನೆಂದು ಖಚಿತವಾಗಿ ತಿಳಿದುಕೊಳ್ಳಲು ಸಹಸ್ರಾಧಿಪತಿ ಅಪೇಕ್ಷಿಸಿದನು. ಮಾರನೆಯ ದಿನ ಪೌಲನನ್ನು ಬಿಡುಗಡೆ ಮಾಡಿದನು. ಮುಖ್ಯಯಾಜಕರು ಮತ್ತು ನ್ಯಾಯಸಭೆಯ ಪ್ರಮುಖರು ಕೂಡುವಂತೆ ಆಜ್ಞಾಪಿಸಿದನು. ಪೌಲನನ್ನು ಕರೆದುಕೊಂಡು ಹೋಗಿ ಆ ಸಭೆಯ ಮುಂದೆ ನಿಲ್ಲಿಸಿದನು.