1 : ನಾವು ಅವರನ್ನು ಬಿಟ್ಟು ಅಗಲಿದ ಮೇಲೆ ನೇರವಾಗಿ ನೌಕಾಯಾನ ಮಾಡಿ ಕೋಸ್‍ದ್ವೀಪಕ್ಕೆ ಬಂದೆವು. ಮರುದಿನ ನಾವು ರೋದ ಎಂಬ ಸ್ಥಳವನ್ನು ತಲುಪಿ ಅಲ್ಲಿಂದ ಪತಾರಕ್ಕೆ ಹೋದೆವು.
2 : ಅಲ್ಲಿ ಫೆನಿಷ್ಯಕ್ಕೆ ಹೋಗುವ ಹಡಗನ್ನು ಕಂಡು ಅದನ್ನೇರಿ ಪ್ರಯಾಣ ಮಾಡಿದೆವು.
3 : ಸೈಪ್ರಸನ್ನು ಸವಿೂಪಿಸಿದಾಗ ಅದನ್ನು ಎಡಕ್ಕೆ ಬಿಟ್ಟು ಸಿರಿಯ ದೇಶದ ಕಡೆಗೆ ಸಾಗಿ, ಟೈರ್ ಎಂಬಲ್ಲಿ ಬಂದು ಇಳಿದೆವು. ಇಲ್ಲಿ ಹಡಗಿನ ಸರಕನ್ನು ಇಳಿಸಬೇಕಾಗಿತ್ತು.
4 : ಅಲ್ಲಿಯ ಭಕ್ತಾದಿಗಳನ್ನು ಗುರುತುಹಚ್ಚಿ ಒಂದು ವಾರ ಅವರೊಂದಿಗೆ ಇದ್ದೆವು. ಇವರು ಪವಿತ್ರಾತ್ಮ ಪ್ರೇರಣೆಯಿಂದ ಜೆರುಸಲೇಮಿಗೆ ಹೋಗಬಾರದೆಂದು ಪೌಲನಿಗೆ ತಿಳಿಸಿದರು.
5 : ಆದರೂ, ಆ ದಿನಗಳು ಕಳೆದ ಮೇಲೆ, ಅವರನ್ನು ಬಿಟ್ಟು ನಮ್ಮ ಪ್ರಯಾಣವನ್ನು ಮುಂದುವರಿಸಲು ಅನುವಾದೆವು. ಅವರಾದರೋ, ಮಡದಿ ಮಕ್ಕಳೊಡನೆ ಪಟ್ಟಣ ಬಿಟ್ಟು ಸಮುದ್ರ ತೀರದವರೆಗೂ ನಮ್ಮೊಡನೆ ಬಂದರು. ಅಲ್ಲಿ ನಾವೆಲ್ಲರೂ ಮೊಣಕಾಲೂರಿ ಪ್ರಾರ್ಥನೆ ಮಾಡಿದೆವು.
6 : ಪರಸ್ಪರ ಬೀಳ್ಕೊಡುಗೆಯಾದ ಬಳಿಕ ಹಡಗನ್ನು ಹತ್ತಿದೆವು. ಅವರು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿದರು.
7 : ಟೈರ್‍ನಿಂದ ಹೊರಟು ಪ್ತೊಲೊಮಾಯಾ ಎಂಬಲ್ಲಿಗೆ ಬಂದಿಳಿದೆವು. ಅಲ್ಲಿ ಭಕ್ತಾದಿಗಳನ್ನು ವಂದಿಸಿ ಅವರೊಡನೆ ಒಂದು ದಿನ ಇದ್ದೆವು.
8 : ಮಾರನೆಯ ದಿನ ಅಲ್ಲಿಂದ ಹೊರಟು ಸೆಜರೇಯಕ್ಕೆ ಬಂದೆವು. ಅಲ್ಲಿ ಶುಭಸಂದೇಶ ಪ್ರಚಾರಕ ಫಿಲಿಪ್ಪನ ಮನೆಗೆ ಹೋಗಿ ಅವನೊಡನೆ ತಂಗಿದೆವು. ಜೆರುಸಲೇಮಿನಲ್ಲಿ ಆಯ್ಕೆಯಾದ ಏಳು ಮಂದಿಯಲ್ಲಿ ಇವನೂ ಒಬ್ಬನು. 9ಅವನಿಗೆ ನಾಲ್ಕುಮಂದಿ ಅವಿವಾಹಿತ ಹೆಣ್ಣುಮಕ್ಕಳಿದ್ದರು. ಇವರೂ ದೇವರ ವಾಕ್ಯವನ್ನು ಪ್ರಚಾರಮಾಡುತ್ತಿದ್ದರು.
10 : ಅಲ್ಲಿ ನಾವು ಕೆಲವು ದಿನ ಇದ್ದೆವು. ಆಗ ಅಗಬ ಎಂಬ ಪ್ರವಾದಿ ನಮ್ಮನ್ನು ನೋಡಲು ಜುದೇಯದಿಂದ ಬಂದನು.
11 : ಅವನು ಪೌಲನ ಸೊಂಟಪಟ್ಟಿಯನ್ನು ತೆಗೆದುಕೊಂಡು ತನ್ನ ಕೈಕಾಲುಗಳನ್ನು ಬಿಗಿದುಕೊಂಡು, “ಪವಿತ್ರಾತ್ಮ ಹೀಗೆನ್ನುತ್ತಾರೆ:
‘ಈ ಸೊಂಟಪಟ್ಟಿಯು ಯಾರದೋ ಅವನನ್ನು ಜೆರುಸಲೇಮಿನಲ್ಲಿ ಯೆಹೂದ್ಯರು ಹೀಗೆಯೇ ಕಟ್ಟಿ, ಅನ್ಯಧವರ್ಿೂಯರ ವಶಕ್ಕೆ ಒಪ್ಪಿಸುವರು’,” ಎಂದನು.
12 : ಈ ಮಾತುಗಳನ್ನು ಕೇಳಿದ ನಾವೂ ಅಲ್ಲಿದ್ದವರೂ ಪೌಲನನ್ನು ಜೆರುಸಲೇಮಿಗೆ ಹೋಗಬಾರದೆಂದು ಕಳಕಳಿಯಿಂದ ಕೇಳಿಕೊಂಡೆವು.
13 : ಅದಕ್ಕೆ ಅವನು ಪ್ರತ್ಯುತ್ತರವಾಗಿ, “ನೀವು ಮಾಡುತ್ತಿರುವುದಾದರೂ ಏನು? ನಿಮ್ಮ ಅಳುವಿನಿಂದ ನನ್ನ ಹೃದಯವನ್ನು ಸೀಳುತ್ತಿರುವಿರಾ? ನಾನು ಜೆರುಸಲೇಮಿನಲ್ಲಿ ಬಂಧಿತನಾಗುವುದಕ್ಕೆ ಮಾತ್ರವಲ್ಲ, ಪ್ರಭು ಯೇಸುವಿಗಾಗಿ ಸಾಯುವುದಕ್ಕೂ ಸಿದ್ಧನಾಗಿದ್ದೇನೆ,” ಎಂದನು.
14 : ಪೌಲನು ಸಮ್ಮತಿಸುವುದಿಲ್ಲವೆಂದು ನಮಗೆ ಸ್ಪಷ್ಟವಾದಾಗ “ಪ್ರಭುವಿನ ಚಿತ್ತದಂತೆ ಆಗಲಿ,” ಎಂದು ಸುಮ್ಮನಾದೆವು.
15 : ಕೆಲವು ದಿನಗಳಾದ ಮೇಲೆ ನಾವು ಪ್ರಯಾಣ ಸಿದ್ಧತೆಗಳನ್ನು ಮಾಡಿಕೊಂಡು ಹೊರಟೆವು.
16 : ಸೆಜರೇಯ ಪಟ್ಟಣದಿಂದ ಕೆಲವು ಶಿಷ್ಯರು ನಮ್ಮೊಡನೆ ಬಂದರು. ನಾವು ತಂಗಲಿದ್ದ ಸೈಪ್ರಸಿನ ಮ್ನಾಸೋನ ಎಂಬವನ ಮನೆಗೆ ಅವರು ನಮ್ಮನ್ನು ಕರೆದುಕೊಂಡು ಹೋದರು. ಈ ಮ್ನಾಸೋನನು ಆದಿಶಿಷ್ಯರಲ್ಲಿ ಒಬ್ಬನಾಗಿದ್ದನು.
17 : ನಾವು ಜೆರುಸಲೇಮಿಗೆ ಬಂದಾಗ ಅಲ್ಲಿನ ಸಹೋದರರು ನಮ್ಮನ್ನು ಸಂತೋಷದಿಂದ ಸ್ವಾಗತಿಸಿದರು.
18 : ಮಾರನೆಯ ದಿನ ಪೌಲನು ನಮ್ಮನ್ನು ಕರೆದುಕೊಂಡು ಯಕೋಬನನ್ನು ನೋಡಲು ಹೋದನು. ಧರ್ಮಸಭೆಯ ಹಿರಿಯರೆಲ್ಲರೂ ಅಲ್ಲಿ ಹಾಜರಿದ್ದರು.
19 : ಪೌಲನು ಅವರಿಗೆ ನಮಸ್ಕರಿಸಿ ತನ್ನ ಸೇವೆಯ ಮೂಲಕ ದೇವರು ಯೆಹೂದ್ಯೇತರರ ಮಧ್ಯೆ ಮಾಡಿದ ಮಹತ್ಕಾರ್ಯಗಳನ್ನು ಒಂದೊಂದಾಗಿ ವರದಿ ಮಾಡಿದನು.
20 : ಇದನ್ನು ಕೇಳಿದ ಅವರು ದೇವರನ್ನು ಕೊಂಡಾಡಿದರು. ಅನಂತರ ಅವರು ಪೌಲನಿಗೆ ಹೀಗೆಂದರು: “ಸಹೋದರಾ, ನಿನಗೆ ತಿಳಿದಿರುವಂತೆ ಯೆಹೂದ್ಯರಲ್ಲಿ ಭಕ್ತವಿಶ್ವಾಸಿಗಳಾಗಿರುವವರು ಸಾವಿರಾರು ಮಂದಿ ಇದ್ದಾರೆ; ಅವರೆಲ್ಲರೂ ಯೆಹೂದ್ಯ ಧರ್ಮಶಾಸ್ತ್ರದಲ್ಲಿ ಬಹಳ ಶ್ರದ್ಧೆ ಉಳ್ಳವರು.
21 : ನಿನ್ನ ವಿಷಯ ಅವರಿಗೆ ತಿಳಿದುಬಂದಿದೆ. ಅದೇನೆಂದರೆ ನೀನು ಅನ್ಯಧವರ್ಿೂಯರ ನಡುವೆ ವಾಸಿಸುತ್ತಿರುವ ಯೆಹೂದ್ಯರೆಲ್ಲರಿಗೆ, ‘ನೀವು ಮೋಶೆಯ ನೇಮನಿಯಮಗಳನ್ನು ಅನುಸರಿಸಬಾರದು, ನಿಮ್ಮ ಮಕ್ಕಳಿಗೆ ಸುನ್ನತಿಯನ್ನು ಮಾಡಿಸಬಾರದು, ಯೆಹೂದ್ಯ ಸಂಪ್ರದಾಯಗಳನ್ನು ಆಚರಿಸಬಾರದು,’ ಎಂದು ಬೋಧಿಸುತ್ತಿರುವಿಯಂತೆ.
22 : ನೀನು ಇಲ್ಲಿಗೆ ಬಂದಿರುವುದು ಅವರಿಗೆ ಖಂಡಿತವಾಗಿ ತಿಳಿದೇ ತಿಳಿಯುತ್ತದೆ. ಈಗ ಏನು ಮಾಡೋಣ?
23 : ಆದುದರಿಂದ ನಾವು ಹೇಳಿದಂತೆ ಮಾಡು; ನಮ್ಮಲ್ಲಿ ಹರಕೆಹೊತ್ತಿರುವವರು ನಾಲ್ಕು ಮಂದಿ ಇದ್ದಾರೆ.
24 : ನೀನು ಅವರನ್ನು ಕರೆದುಕೊಂಡು ಹೋಗಿ ಅವರ ಜೊತೆಯಲ್ಲಿ ನೀನೂ ಶುದ್ಧಾಚಾರ ವಿಧಿಯನ್ನು ಮಾಡಿಸಿಕೊ. ಅವರ ಖರ್ಚು ವೆಚ್ಚವನ್ನೆಲ್ಲಾ ನೀನೇ ವಹಿಸಿಕೋ; ಅವರು ಮುಂಡನ ಮಾಡಿಸಿಕೊಳ್ಳಲಿ. ಹೀಗೆ ಮಾಡಿದರೆ, ನಿನ್ನ ಬಗ್ಗೆ ಅವರು ಕೇಳಿಸಿಕೊಂಡಿರುವ ವಿಷಯ ನಿಜವಲ್ಲವೆಂದೂ ನೀನು ಕೂಡ ಮೋಶೆಯ ಧರ್ಮಶಾಸ್ತ್ರಕ್ಕೆ ಅನುಸಾರವಾಗಿ ನಡೆಯುತ್ತಿರುವೆ ಎಂದೂ ಅವರೆಲ್ಲರಿಗೂ ಮನವರಿಕೆಯಾಗಿರುವುದು.
25 : ವಿಶ್ವಾಸಿಗಳಾಗಿರುವ ಯೆಹೂದ್ಯೇತರಿಗಾದರೋ ನಾವೀಗಲೇ ಪತ್ರವನ್ನು ಕಳುಹಿಸಿದ್ದೇವೆ. ಅದರಲ್ಲಿ ಅವರು ವಿಗ್ರಹಗಳಿಗೆ ಅರ್ಪಿಸಿದ ನೈವೇದ್ಯವನ್ನು ಸೇವಿಸಬಾರದು, ಅನೈತಿಕತೆಯಿಂದ ದೂರವಿರಬೇಕು, ರಕ್ತವನ್ನಾಗಲೀ ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಗಳನ್ನಾಗಲೀ ತಿನ್ನಬಾರದು, ಎಂದು ತೀರ್ಮಾನ ಕೊಟ್ಟಿದ್ದೇವೆ,” ಎಂದರು.
26 : ಅಂತೆಯೇ ಪೌಲನು ಮಾರನೆಯ ದಿನ ಆ ನಾಲ್ವರೊಡನೆ ಹೋಗಿ ಶುದ್ಧಾಚಾರದ ವಿಧಿಯನ್ನು ನೆರವೇರಿಸಿದನು. ಅನಂತರ ಶುದ್ಧಾಚಾರ ಮುಗಿಯುವ ದಿನವನ್ನು ತಿಳಿಸುವುದಕ್ಕಾಗಿ ಮಹಾದೇವಾಲಯಕ್ಕೆ ಹೋದನು. ಅವರಲ್ಲಿ ಪ್ರತಿಯೊಬ್ಬನಿಗಾಗಿ ಯಾವಾಗ ಬಲಿಯರ್ಪಣೆಯಾಗುವುದೆಂದು ಅಲ್ಲಿ ಸೂಚಿಸಿದನು.
27 : ಶುದ್ಧಾಚಾರದ ಏಳು ದಿನಗಳ ಅವಧಿ ಮುಗಿಯುತ್ತಿದ್ದಂತೆ ಏಷ್ಯದ ಕೆಲವು ಯೆಹೂದ್ಯರು ಪೌಲನನ್ನು ದೇವಾಲಯದಲ್ಲಿ ಕಂಡರು. ಕೂಡಲೇ ಅವರು ಜನಸಮೂಹವನ್ನು ಉದ್ರೇಕಿಸಿ ಪೌಲನನ್ನು ಹಿಡಿದರು.
28 : “ಇಸ್ರಯೇಲಿನ ಮಹಾಜನರೇ, ಬೇಗ ಬನ್ನಿ; ನಮ್ಮ ಜನಾಂಗಕ್ಕೂ ನಮ್ಮ ಧರ್ಮಶಾಸ್ತ್ರಕ್ಕೂ ಈ ಮಹಾದೇವಾಲಯಕ್ಕೂ ವಿರುದ್ಧವಾಗಿ ಬೋಧಿಸುವ ವ್ಯಕ್ತಿ ಇವನೇ; ಎಲ್ಲೆಡೆಯಲ್ಲೂ ಎಲ್ಲರಿಗೂ ಇವನು ನಮಗೆ ವಿರುದ್ದವಾಗಿ ಬೋಧಿಸುತ್ತಾನೆ. ಅಷ್ಟು ಮಾತ್ರವಲ್ಲ, ಈ ಪವಿತ್ರಾಲಯದೊಳಕ್ಕೆ ಅನ್ಯಧವರ್ಿೂಯರನ್ನು ಕರೆತಂದು ಇದನ್ನು ಭ್ರಷ್ಟಗೊಳಿಸಿದ್ದಾನೆ,” ಎಂದು ಕೂಗಿಕೊಂಡರು.
29 : ಎಫೆಸದ ತ್ರೊಫಿಮ ಎಂಬವನು ಪೌಲನ ಸಂಗಡ ಪಟ್ಟಣದಲ್ಲಿ ಇದ್ದುದನ್ನು ಅವರು ನೋಡಿದ್ದರು. ಈಗ ಅವನನ್ನೂ ದೇವಾಲಯದೊಳಕ್ಕೆ ಪೌಲನು ಕರೆದುಕೊಂಡು ಬಂದಿರಬಹುದೆಂದು ಅವರು ಭಾವಿಸಿದರು.
30 : ಪಟ್ಟಣದಲ್ಲೆಲ್ಲಾ ಕೋಲಾಹಲವೆದ್ದಿತು. ಜನರು ನಾಲ್ಕು ದಿಕ್ಕುಗಳಿಂದಲೂ ಓಡಿ ಬಂದರು. ಪೌಲನನ್ನು ದೇವಾಲಯದಿಂದ ಹೊರಗೆ ಎಳೆದುಹಾಕಿ ಮಹಾದೇವಾಲಯದ ದ್ವಾರಗಳನ್ನು ಮುಚ್ಚಿದರು.
31 : ಜನರ ಗುಂಪು ಪೌಲನನ್ನು ಕೊಲ್ಲಲು ಯತ್ನಿಸುತ್ತಿದ್ದಾಗ ಜೆರುಸಲೇಮಿನಾದ್ಯಂತ ಗಲಭೆಯುಂಟಾಗಿದೆ ಎಂದು ಅಲ್ಲಿನ ರೋಮ್ ಸೈನ್ಯಾಧಿಪತಿಗೆ ವರದಿ ಬಂದಿತು.
32 : ಆ ಕ್ಷಣವೇ, ಅವನು ಕೆಲವು ಶತಾಧಿಪತಿಗಳನ್ನೂ ಸೈನಿಕರನ್ನೂ ಕರೆದುಕೊಂಡು ಜನಸಮೂಹವಿದ್ದ ಕಡೆ ಧಾವಿಸಿದನು. ಸೈನಿಕರೊಡನೆ ಬರುತ್ತಿರುವ ಸೈನ್ಯಾಧಿಪತಿಯನ್ನು ಕಂಡು ಜನರು ಪೌಲನನ್ನು ಹೊಡೆಯುವುದನ್ನು ನಿಲ್ಲಿಸಿದರು.
33 : ಸೈನ್ಯಾಧಿಪತಿ ಹತ್ತಿರಕ್ಕೆ ಬಂದು, ಪೌಲನನ್ನು ಬಂಧಿಸಿ ಎರಡು ಸರಪಣಿಗಳಿಂದ ಅವನನ್ನು ಕಟ್ಟುವಂತೆ ಆಜ್ಞಾಪಿಸಿದನು. “ಇವನು ಯಾರು? ಇವನು ಮಾಡಿದ್ದೇನು?” ಎಂದು ವಿಚಾರಿಸಿದನು.
34 : ಜನಜಂಗುಳಿಯಲ್ಲಿ ಹಲವರು ಹಲವಿಧವಾಗಿ ಕೂಗಾಡತೊಡಗಿದರು. ಗದ್ದಲ ಹೆಚ್ಚಾಗಿದ್ದುದರಿಂದ ಸೈನ್ಯಾಧಿಪತಿಗೆ ನಿಜಸ್ಥಿತಿಯನ್ನು ತಿಳಿಯಲಾಗಲಿಲ್ಲ. ಆದುದರಿಂದ ಪೌಲನನ್ನು ಕೋಟೆಯೊಳಕ್ಕೆ ಕೊಂಡೊಯ್ಯುವಂತೆ ಆಜ್ಞಾಪಿಸಿದನು
35 : ಪೌಲನನ್ನು ಮೆಟ್ಟಲುಗಳವರೆಗೆ ಕರೆದುಕೊಂಡು ಬರಲಾಯಿತು. ಅನಂತರ ಜನರ ನೂಕುನುಗ್ಗಲಿನ ನಿಮಿತ್ತ ಅವನನ್ನು ಸೈನಿಕರು ಹೊತ್ತುಕೊಂಡು ಹೋಗಬೇಕಾಯಿತು.
36 : ಜನರು, “ಅವನನ್ನು ಕೊಲ್ಲಿ, ಕೊಲ್ಲಿ,” ಎಂದು ಆರ್ಭಟಿಸುತ್ತಾ ಬೆನ್ನಟ್ಟಿ ಬರುತ್ತಿದ್ದರು.
37 : ಪೌಲನ ಸಮರ್ಥನೆ
ಪೌಲನನ್ನು ಕೋಟೆಯೊಳಕ್ಕೆ ಕೊಂಡು ಒಯ್ಯುತ್ತಿದ್ದಾಗ, ಅವನು ಸೈನ್ಯಾಧಿಪತಿಗೆ, “ನಾನು ನಿಮ್ಮೊಡನೆ ಸ್ವಲ್ಪ ಮಾತಾಡಬಹುದೇ?” ಎಂದನು. ಅದಕ್ಕೆ ಅವನು, “ನಿನಗೆ ಗ್ರೀಕ್ ಭಾಷೆಯೂ ಗೊತ್ತಿದೆಯಾ?
38 : ಹಾಗಾದರೆ ಕೆಲವು ಕಾಲದ ಹಿಂದೆ ಕ್ರಾಂತಿಯೆಬ್ಬಿಸಿ ನಾಲ್ಕು ಸಾವಿರ ಡಕಾಯಿತರನ್ನು ಅಡವಿಗೆ ಕರೆದುಕೊಂಡು ಹೋದ ಈಜಿಪ್ಟಿನವನು ನೀನೇ ಅಲ್ಲವೇ?” ಎಂದು ಪ್ರಶ್ನಿಸಿದನು.
39 : ಪೌಲನು ಪ್ರತ್ಯುತ್ತರವಾಗಿ, “ನಾನು ಯೆಹೂದ್ಯನು, ತಾರ್ಸದವನು. ಸಿಲಿಸಿಯ ಪ್ರಾಂತ್ಯದ ಪ್ರಖ್ಯಾತ ಪಟ್ಟಣದವನು. ಈ ಜನರೊಡನೆ ಮಾತನಾಡಲು ದಯವಿಟ್ಟು ಅವಕಾಶಕೊಡಿ,” ಎಂದು ಭಿನ್ನವಿಸಿದನು.
40 : ಸೈನ್ಯಾಧಿಪತಿ ಅಪ್ಪಣೆ ಕೊಡಲು, ಪೌಲನು ಮೆಟ್ಟಲಿನ ಮೇಲೆ ನಿಂತು ಜನರನ್ನು ನೋಡಿ ಮೌನವಾಗಿರುವಂತೆ ಕೈಸನ್ನೆ ಮಾಡಿದನು. ಆಗ ನಿಶ್ಯಬ್ದ ಉಂಟಾಯಿತು. ಅನಂತರ ಅವರನ್ನು ಸಂಬೋಧಿಸಿ ಹಿಬ್ರು ಭಾಷೆಯಲ್ಲಿ ಮಾತಾಡುತ್ತಾ ಹೀಗೆಂದನು: