1 : ಕೋಲಾಹಲವು ಅಡಗಿದ ಮೇಲೆ ಪೌಲನು ಭಕ್ತವಿಶ್ವಾಸಿಗಳನ್ನು ಬರಮಾಡಿಕೊಂಡು ಪ್ರೋತ್ಸಾಹದ ಮಾತುಗಳನ್ನಾಡಿ ಅವರನ್ನು ಬೀಳ್ಕೊಟ್ಟು ಮಕೆದೋನಿಯಕ್ಕೆ ಹೋದನು.
2 : ಆ ಪ್ರದೇಶದಲ್ಲಿ ಸಂಚಾರಮಾಡಿ ಭಕ್ತಾದಿಗಳನ್ನು ಹಲವಾರು ವಿಧದಲ್ಲಿ ಪ್ರೋತ್ಸಾಹಿಸಿದನು. ಅನಂತರ ಅಲ್ಲಿಂದ ಅಖಾಯಕ್ಕೆ ಬಂದನು.
3 : ಇಲ್ಲಿ ಅವನು ಮೂರು ತಿಂಗಳು ಕಳೆದನು. ಬಳಿಕ ಸಿರಿಯಕ್ಕೆ ನೌಕಾಯಾನ ಮಾಡಲು ಸಿದ್ದನಾಗುತ್ತಿದ್ದಾಗ, ಯೆಹೂದ್ಯರು ಅವನ ವಿರುದ್ಧ ಒಳಸಂಚು ಮಾಡುತ್ತಿರುವುದಾಗಿ ತಿಳಿದುಬಂದಿತು. ಆದುದರಿಂದ ಅವನು ಮಕೆದೋನಿಯದ ಮಾರ್ಗವಾಗಿ ಹಿಂದಿರುಗಲು ನಿರ್ಧರಿಸಿದನು.
4 : ಬೆರೋಯ ಪಟ್ಟಣದ ಪುರನ ಮಗ ಸೋಪತ್ರನು ಅವನೊಡನೆ ಹೋದನು. ಅಂತೆಯೇ ಥೆಸಲೋನಿಕದ ಅರಿಸ್ತಾರ್ಕ ಹಾಗು ಸೆಕುಂದ, ದೆರ್ಬೆ ಪಟ್ಟಣದ ಗಾಯ, ಏಷ್ಯಾದ ತುಖಿಕ ಹಾಗು ತಿಮೊಥೇಯ ಅವನೊಡನೆ ಹೊರಟರು.
5 : ಇವರು ಮುಂಚಿತವಾಗಿ ಹೋಗಿ ತ್ರೋವದಲ್ಲಿ ನಮಗಾಗಿ ಕಾದಿದ್ದರು.
6 : ನಾವು ಹುಳಿರಹಿತ ರೊಟ್ಟಿಯ ಹಬ್ಬದ ನಂತರ ಫಿಲಿಪ್ಪಿಯಿಂದ ನೌಕಾಯಾನ ಹೊರಟೆವು. ಐದು ದಿನಗಳ ನಂತರ ತ್ರೋವದಲ್ಲಿ ಅವರನ್ನು ಸೇರಿ, ಅಲ್ಲಿ ಏಳುದಿನ ತಂಗಿದೆವು.
7 : ವಾರದ ಮೊದಲನೆಯ ದಿನ ‘ರೊಟ್ಟಿ ಮುರಿಯುವ’ ಸಹಭೋಜನಕ್ಕೆ ನಾವು ಜೊತೆ ಕೂಡಿದ್ದೆವು. ಪೌಲನು ಮಾರನೆಯ ದಿನ ಅವರನ್ನು ಬಿಟ್ಟು ಹೊರಡಬೇಕಾದ್ದರಿಂದ ಉಪನ್ಯಾಸ ಮಾಡಲಾರಂಭಿಸಿ ಮಧ್ಯರಾತ್ರಿಯವರೆಗೂ ಮುಂದುವರೆಸಿದನು.
8 : ನಾವು ಸಭೆಸೇರಿದ್ದ ಮೇಲಂತಸ್ತಿನ ಕೊಠಡಿಯಲ್ಲಿ ಅನೇಕ ದೀಪಗಳು ಉರಿಯುತ್ತಿದ್ದವು.
9 : ಯುತಿಕ ಎಂಬ ಯುವಕನು ಕಿಟಕಿಯಲ್ಲಿ ಕುಳಿತುಕೊಂಡಿದ್ದನು. ಪೌಲನು ದೀರ್ಘಕಾಲ ಮಾತನಾಡುತ್ತಲೇ ಇದ್ದುದರಿಂದ ಯುತಿಕನಿಗೆ ಗಾಢನಿದ್ರೆ ಹತ್ತಿತು; ತೂಕಡಿಕೆ ಹೆಚ್ಚಾಗಿ ಅವನು ಮೂರನೆಯ ಅಂತಸ್ತಿನಿಂದ ನೆಲಕ್ಕೆ ಬಿದ್ದುಬಿಟ್ಟನು. ಅವನನ್ನು ಎತ್ತಿ ನೋಡುವಾಗ ಅವನು ಸತ್ತಿದ್ದನು.
10 : ಆದರೆ ಪೌಲನು ಕೆಳಗೆ ಇಳಿದು ಹೋಗಿ ಅವನ ಮೇಲೆ ಬಾಗಿ, ಅವನನ್ನು ತಬ್ಬಿಕೊಂಡು, “ಚಿಂತಿಸಬೇಡಿ, ಇವನಲ್ಲಿ ಇನ್ನೂ ಜೀವವಿದೆ,” ಎಂದನು.
11 : ಅನಂತರ ಪೌಲನು ಮೇಲಂತಸ್ತಿಗೆ ಹಿಂದಿರುಗಿ, ರೊಟ್ಟಿಯನ್ನು ಮುರಿದು ಸಹಭೋಜನ ಮಾಡಿದನು. ಮುಂಜಾವದವರೆಗೂ ಅವರೊಡನೆ ಮಾತನಾಡಿ ಅಲ್ಲಿಂದ ಹೊರಟು ಹೋದನು.
12 : ಜೀವಂತನಾಗಿದ್ದ ಆ ಯುವಕನನ್ನು ಮನೆಗೆ ಕರೆದುಕೊಂಡು ಹೋದರು. ಅವರಿಗಾದ ಸಾಂತ್ವನ ಅಷ್ಟಿಷ್ಟಲ್ಲ!
13 : ಪೌಲನು ನಮಗಿತ್ತ ಸೂಚನೆಯ ಪ್ರಕಾರ ನಾವು ಹಡಗುಹತ್ತಿ ಅಸ್ಸೊಸಿ ಎಂಬ ಊರಿಗೆ ಮುಂಚಿತವಾಗಿ ಪ್ರಯಾಣಮಾಡಿದೆವು. ತಾನು ಅಲ್ಲಿಗೆ ಭೂಮಾರ್ಗವಾಗಿ ಬರುವುದಾಗಿಯೂ ಅಲ್ಲಿ ತನ್ನನ್ನು ಹಡಗಿಗೆ ಏರಿಸಿಕೊಳ್ಳಬೇಕೆಂದೂ ಪೌಲನು ತಿಳಿಸಿದ್ದನು.
14 : ಅಂತೆಯೇ ಅಸ್ಸೊಸಿಯಲ್ಲಿ ಅವನನ್ನು ಭೇಟಿಯಾಗಿ ಹಡಗಿಗೆ ಏರಿಸಿಕೊಂಡು ಮಿತಿಲೇನಿಗೆ ಬಂದೆವು.
15 : ಅಲ್ಲಿಂದ ನೌಕಾಯಾನ ಮಾಡಿ ಮರುದಿನ ಖಿಯೋಸ ದ್ವೀಪವನ್ನು ಸವಿೂಪಿಸಿ ಮಾರನೆಯ ದಿನ ಸಾಮೋಸನ್ನು ತಲುಪಿದೆವು. ಅದರ ಮಾರನೆಯ ದಿನ ಮಿಲೇತನ್ನು ಸೇರಿದೆವು
16 : ಸಾಧ್ಯವಾದರೆ ಪಂಚಾಶತ್ತಮ ಹಬ್ಬಕ್ಕೆ ಜೆರುಸಲೇಮಿನಲ್ಲಿರಬೇಕೆಂಬ ಆತುರ ಪೌಲನಿಗೆ ಇದ್ದುದರಿಂದ, ಏಷ್ಯದಲ್ಲಿ ಕಾಲ ವಿಳಂಬಮಾಡಲು ಮನಸ್ಸಿಲ್ಲದೆ, ಎಫೆಸವನ್ನು ದಾಟಿ ಹೋಗಬೇಕೆಂದು ಅವನು ತೀರ್ಮಾನಿಸಿದನು.
17 : ಪೌಲನು ಮಿಲೇತದಿಂದ ಎಫೆಸಕ್ಕೆ ಸಮಾಚಾರ ಕಳುಹಿಸಿ, ಅಲ್ಲಿನ ಧರ್ಮಸಭೆಯ ಪ್ರಮುಖರನ್ನು ಬರಮಾಡಿಕೊಂಡನು.
18 : ಬಂದಮೇಲೆ ಅವರಿಗೆ ಹೀಗೆಂದನು: “ನಾನು ಏಷ್ಯ ಪ್ರಾಂತ್ಯದಲ್ಲಿ ಕಾಲಿಟ್ಟ ದಿನ ಮೊದಲ್ಗೊಂಡು ಇಂದಿನವರೆಗೆ ನಿಮ್ಮ ಮಧ್ಯೆ ಹೇಗೆ ಬಾಳಿದೆನೆಂದು ನಿಮಗೆ ತಿಳಿದಿದೆ.
19 : ಯೆಹೂದ್ಯರ ಕುತಂತ್ರಗಳಿಂದ ನನಗೆ ಬಂದೊದಗಿದ ಸಂಕಷ್ಟಗಳಲ್ಲಿ, ನಾನು ಅತಿ ನಮ್ರತೆಯಿಂದಲೂ ಕಣ್ಣೀರಿಡುತ್ತಲೂ ಪ್ರಭುವಿನ ಸೇವೆಮಾಡಿಕೊಂಡು ಬಂದೆನು.
20 : ನಿಮಗೆ ಹಿತಕರವಾದುದೆಲ್ಲವನ್ನು ಬಹಿರಂಗದಲ್ಲೂ ಮನೆಗಳಲ್ಲೂ ಹಿಂಜರಿಯದೆ ಬೋಧಿಸಿದ್ದೇನೆ ಹಾಗೂ ಕಲಿಸಿದ್ದೇನೆ.
21 : ಪಾಪಕ್ಕೆ ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖರಾಗಬೇಕು, ನಮ್ಮ ಪ್ರಭು ಯೇಸುವಿನಲ್ಲಿ ವಿಶ್ವಾಸವಿಡಬೇಕು, ಎಂದು ಯೆಹೂದ್ಯರಿಗೂ ಗ್ರೀಕರಿಗೂ ಸ್ಪಷ್ಟವಾದ ಎಚ್ಚರಿಕೆಯನ್ನು ಕೊಟ್ಟಿದ್ದೇನೆ.
22 : ಈಗಲಾದರೋ, ಪವಿತ್ರಾತ್ಮ ಪರವಶನಾಗಿ ನಾನು ಜೆರುಸಲೇಮಿಗೆ ಹೋಗುತ್ತಿದ್ದೇನೆ. ಅಲ್ಲಿ ನನಗೇನು ಸಂಭವಿಸುವುದೋ ತಿಳಿಯದು.
23 : ಸೆರೆಮನೆ ಹಾಗೂ ಸಂಕಷ್ಟಗಳು ನನಗಾಗಿ ಕಾದಿವೆಯೆಂದು ಪವಿತ್ರಾತ್ಮ ಪ್ರತಿಯೊಂದು ಪಟ್ಟಣದಲ್ಲೂ ಕೊಟ್ಟ ಎಚ್ಚರಿಕೆ ಮಾತ್ರ ಸ್ಪಷ್ಟವಾಗಿದೆ. ನನಗಾದರೋ, ನನ್ನ ಪ್ರಾಣವು ತೃಣಕ್ಕೆ ಸಮಾನ.
24 : ಪ್ರಭು ಯೇಸು ನನಗೆ ವಿಧಿಸಿದ ಆಯೋಗವನ್ನು, ಅಂದರೆ ದೈವಾನುಗ್ರಹ ಕುರಿತಾದ ಶುಭಸಂದೇಶವನ್ನು ಸಾಕ್ಷ್ಯಪೂರ್ವಕವಾಗಿ ಸಾರುವ ಆಯೋಗವನ್ನು, ಪೂರೈಸುತ್ತಾ ನನ್ನ ಬಾಳಿನ ಗುರಿಯನ್ನು ಮುಟ್ಟುವೆನಾದರೆ, ನನಗೆ ಅಷ್ಟೇ ಸಾಕಾಗಿದೆ.
25 : ಇಗೋ, ಇಷ್ಟು ದಿನ ದೇವರ ಸಾಮ್ರಾಜ್ಯವನ್ನು ಪ್ರಕಟಿಸುತ್ತಾ ನಿಮ್ಮ ಮಧ್ಯೆ ಸಂಚರಿಸಿದ ನನ್ನ ಮುಖವನ್ನು ಇನ್ನು ಮುಂದೆ ನೀವು ಯಾರೂ ಕಾಣಲಾರಿರಿ ಎಂದು ನಾನು ಬಲ್ಲೆ.
26 : ಇಂತಿರಲು ನಾನು ನಿಮಗೆ ಸಾರಿ ಹೇಳುವುದೇನೆಂದರೆ - “ನಿಮ್ಮಲ್ಲಿ ಯಾರಾದರು ನಾಶವಾದರೆ, ಅದಕ್ಕೆ ನಾನು ಹೊಣೆಯಲ್ಲ.
27 : ಏಕೆಂದರೆ, ದೈವ ಯೋಜನೆಯನ್ನು ಕಿಂಚಿತ್ತೂ ಮರೆಮಾಚದೆ ತಿಳಿಯಪಡಿಸಿದ್ದೇನೆ.
28 : ನೀವು ನಿಮ್ಮ ವಿಷಯದಲ್ಲಿ ಹಾಗೂ ಪವಿತ್ರಾತ್ಮ ನಿಮ್ಮ ಪಾಲನೆಗೆ ವಹಿಸಿರುವ ಮಂದೆಯ ವಿಷಯದಲ್ಲಿ ಜಾಗರೂಕರಾಗಿರಿ. ಪ್ರಭು ತಮ್ಮ ಸ್ವಂತ ರಕ್ತಸುರಿಸಿ ಸಂಪಾದಿಸಿದ ಧರ್ಮಸಭೆಗೆ ಉತ್ತಮ ಕುರಿಗಾಹಿಗಳಾಗಿರಿ.
29 : ನಾನು ಹೋದ ಬಳಿಕ ಕ್ರೂರವಾದ ತೋಳಗಳು ನಿಮ್ಮ ಮಧ್ಯೆ ನುಗ್ಗುವುವು ಎಂದು ನಾನು ಬಲ್ಲೆ. ಅವು ಮಂದೆಗೆ ಹಾನಿ ಮಾಡದೆ ಬಿಡವು.
30 : ಇದಲ್ಲದೆ ನಿಮ್ಮಲ್ಲೇ ಕೆಲವರು ಎದ್ದು ಭಕ್ತವಿಶ್ವಾಸಿಗಳನ್ನು ತಮ್ಮ ಕಡೆ ಸೆಳೆದುಕೊಳ್ಳಲು ಅಸತ್ಯವಾದವುಗಳನ್ನು ಹೇಳುವರು.
31 : ಆದುದರಿಂದ ಎಚ್ಚರಿಕೆ! ನಾನು ಮೂರು ವರ್ಷಗಳ ಕಾಲ ಹಗಲಿರುಳು ಕಣ್ಣೀರಿಡುತ್ತಾ ಪ್ರತಿಯೊಬ್ಬನಿಗೂ ಬುದ್ಧಿ ಹೇಳಿದ್ದೇನೆಂಬುದನ್ನು ಮರೆಯಬೇಡಿ.
32 : “ಈಗ ನಿಮ್ಮನ್ನು ದೇವರ ಕೈಗೂ, ಅವರ ಅನುಗ್ರಹ ಸಂದೇಶಕ್ಕೂ ಒಪ್ಪಿಸಿಕೊಡುತ್ತೇನೆ. ಅದು ನಿಮ್ಮನ್ನು ಅಭಿವೃದ್ಧಿಗೊಳಿಸಬಲ್ಲದು. ಮಾತ್ರವಲ್ಲ, ಪಾವನಪುರುಷರ ಬಾಧ್ಯತೆಯಲ್ಲಿ ಭಾಗಿಗಳಾಗುವಂತೆ ಮಾಡಬಲ್ಲದು.
33 : ನಾನು ಯಾರ ಬೆಳ್ಳಿ ಬಂಗಾರಕ್ಕೂ ಬಟ್ಟೆಬರೆಗೂ ಆಶೆಪಟ್ಟವನಲ್ಲ.
34 : ನನ್ನ ಹಾಗೂ ನನ್ನ ಸಂಗಡಿಗರ ಅವಶ್ಯಕತೆಗಳನ್ನು ನೀಗಿಸಲು ಈ ಕೈಗಳೇ ದುಡಿದಿವೆಯೆಂಬುದು ನಿಮ್ಮೆಲ್ಲರಿಗೂ ತಿಳಿದಿದೆ.
35 : ಹೀಗೆ ಕಷ್ಟಪಟ್ಟು ದುಡಿದು, ದುರ್ಬಲರಿಗೆ ನೆರವಾಗಬೇಕೆಂದು ನಾನು ನಿಮಗೆ ಹಲವಾರು ವಿಧದಲ್ಲಿ ತೋರಿಸಿಕೊಟ್ಟಿದ್ದೇನೆ. ‘ಕೊಳ್ಳುವ ಕೈಗಿಂತ ಕೊಡುವ ಕೈ ಧನ್ಯವಾದುದು’ ಎಂಬ ಯೇಸುಸ್ವಾಮಿಯ ಮಾತುಗಳನ್ನು ನೆನಪಿನಲ್ಲಿಡಿ.”
36 : ಇಷ್ಟು ಹೇಳಿದ ಮೇಲೆ ಪೌಲನು ಅವರೆಲ್ಲರ ಸಂಗಡ ಮೊಣಕಾಲೂರಿ ಪ್ರಾರ್ಥನೆ ಮಾಡಿದನು.
37 : ಅನಂತರ ಅವರು ಅವನನ್ನು ತಬ್ಬಿಕೊಂಡು ಮುದ್ದಿಟ್ಟು ಬೀಳ್ಕೊಟ್ಟರು. ಅವರ ಕಣ್ಣಲ್ಲಾದರೋ ನೀರು ಧಾರಾಕಾರವಾಗಿ ಹರಿಯುತ್ತಿತ್ತು.
38 : ಇನ್ನೆಂದೂ ನೀವು ನನ್ನ ಮುಖವನ್ನು ಕಾಣಲಾರಿರಿ,’ ಎಂಬ ಅವನ ಮಾತು ಅವರನ್ನು ಅತೀವ ದುಃಖಕ್ಕೆ ಈಡು ಮಾಡಿತ್ತು. ಅವರು ಹಡಗಿನವರೆಗೂ ಹೋಗಿ ಅವನನ್ನು ಬೀಳ್ಕೊಟ್ಟರು.