1 : ಪಂಚಾಶತ್ತಮ ಹಬ್ಬದ ದಿನ ಭಕ್ತವಿಶ್ವಾಸಿಗಳೆಲ್ಲರೂ ಒಂದು ಸ್ಥಳದಲ್ಲಿ ಸಭೆಸೇರಿದ್ದರು.
2 : ಫಕ್ಕನೆ ಬಲವಾದ ಬಿರುಗಾಳಿ ಬೀಸುತ್ತಿದೆಯೋ ಎಂಬಂತೆ ಶಬ್ದವೊಂದು ಆಕಾಶದಿಂದ ಕೇಳಿ ಬಂತು. ಅದು ಅವರು ಕುಳಿತಿದ್ದ ಮನೆಯಲ್ಲೆಲ್ಲಾ ಮಾರ್ದನಿಸಿತು.
3 : ಅಲ್ಲದೆ ಅಗ್ನಿಜ್ವಾಲೆಗಳು ಕೆನ್ನಾಲಿಗೆಯಂತೆ ಕಾಣಿಸಿಕೊಂಡವು. ಅವು ವಿಂಗಡ ವಿಂಗಡವಾಗಿ ಪ್ರತಿಯೊಬ್ಬರ ಮೇಲೂ ನೆಲೆಸಿದವು.
4 : ಅವರೆಲ್ಲರೂ ಪವಿತ್ರಾತ್ಮಭರಿತರಾದರು. ಆ ಆತ್ಮ ಪ್ರೇರಣೆಯಿಂದ ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡತೊಡಗಿದರು.
5 : ಅದೇ ಸಮಯದಲ್ಲಿ ವಿಶ್ವದ ಎಲ್ಲಾ ದೇಶಗಳಿಂದ ಧರ್ಮನಿಷ್ಠ ಯೆಹೂದ್ಯರು ಜೆರುಸಲೇಮಿಗೆ ಬಂದು ತಂಗಿದರು.
6 : ಆ ಶಬ್ದವನ್ನು ಕೇಳಿದ್ದೇ, ಜನರ ದೊಡ್ಡ ಗುಂಪು ಸೇರಿತು. ಭಕ್ತಾದಿಗಳು ಮಾತನಾಡುತ್ತಿದ್ದುದನ್ನು ತಮ್ಮ ತಮ್ಮ ಭಾಷೆಗಳಲ್ಲೇ ಕೇಳಿದ ಜನರು ದಿಗ್ಭ್ರಮೆಗೊಂಡರು.
7 : ಅವರೆಲ್ಲರೂ ವಿಸ್ಮಿತರಾಗಿ, “ಹೀಗೆ ಮಾತನಾಡುವ ಇವರೆಲ್ಲಾ ಗಲಿಲೇಯದವರಲ್ಲವೇ?
8 : ನಮ್ಮಲ್ಲಿ ಪ್ರತಿಯೊಬ್ಬನೂ ಇವರು ಮಾತನಾಡುತ್ತಿರುವುದನ್ನು ತನ್ನ ತನ್ನ ಮಾತೃಭಾಷೆಯಲ್ಲೇ ಕೇಳುತ್ತಿರುವುದು ಹೇಗೆ?
9 : ನಮ್ಮಲ್ಲಿ ಪಾರ್ಥಿಯರು, ವಿೂಡಿಯರು ಮತ್ತು ಎಲಾಮಿನವರೂ, ಮೆಸಪೊಟೇಮಿಯ, ಜುದೇಯ ಮತ್ತು ಕಪ್ಪದೋಸಿಯದವರೂ ಇದ್ದಾರೆ. ಪೊಂತ ಮತ್ತು ಏಷ್ಯದವರೂ,
10 : ಫ್ರಿಜಿಯ ಮತ್ತು ಪಾಂಫಿಲಿಯದವರೂ ಇದ್ದಾರೆ. ಈಜಿಪ್ಟ್ ಮತ್ತು ಸಿರೇನಿನ ಬಳಿಯಲ್ಲಿರುವ ಲಿಬಿಯ ಪ್ರಾಂತ್ಯದವರೂ ಸೇರಿದ್ದಾರೆ. ಅದಲ್ಲದೆ ನಮ್ಮಲ್ಲಿ ಕೆಲವರು ರೋಮ್‍ನಿಂದ ಬಂದಿದ್ದಾರೆ.
11 : ಯೆಹೂದ್ಯರೂ ಯೆಹೂದ್ಯ ಧರ್ಮಾವಲಂಬಿಗಳೂ ಆದ ಅನ್ಯರೂ, ಕ್ರೇಟ ಮತ್ತು ಅರೇಬಿಯದವರೂ ಇಲ್ಲಿದ್ದಾರೆ. ದೇವರ ಮಹತ್ಕಾರ್ಯಗಳನ್ನು ಕುರಿತು ಇವರು ಮಾತನಾಡುತ್ತಿರುವುದನ್ನು ನಾವೆಲ್ಲರೂ ನಮ್ಮ ನಮ್ಮ ಭಾಷೆಗಳಲ್ಲೇ ಕೇಳುತ್ತಿದ್ದೇವಲ್ಲಾ!” ಎಂದು ಅಚ್ಚರಿಯನ್ನು ವ್ಯಕ್ತಪಡಿಸಿದರು.
12 : ಸರ್ವರೂ ಭ್ರಮೆಗೊಂಡು, ಇದರ ಅರ್ಥವಾದರೂ ಏನೆಂದು ಒಬ್ಬರನ್ನು ಒಬ್ಬರು ವಿಸ್ಮಯದಿಂದ ವಿಚಾರಿಸತೊಡಗಿದರು.
13 : ಕೆಲವರಾದರೋ, “ಇವರು ಕುಡಿದು ಮತ್ತರಾಗಿದ್ದಾರೆ,” ಎಂದು ಪರಿಹಾಸ್ಯ ಮಾಡಿದರು.
14 : ಪೇತ್ರನ ಪ್ರಬೋಧನೆ
ಆಗ ಪೇತ್ರನು ಇತರ ಹನ್ನೊಂದು ಮಂದಿ ಪ್ರೇಷಿತರೊಡನೆ ಎದ್ದುನಿಂತು, ಜನ ಸಮೂಹವನ್ನು ಉದ್ದೇಶಿಸಿ, ಗಟ್ಟಿಯಾದ ಧ್ವನಿಯಿಂದ ಹೀಗೆಂದು ಪ್ರಬೋಧಿಸಿದನು: “ಯೆಹೂದ್ಯ ಸ್ವಜನರೇ, ಜೆರುಸಲೇಮಿನ ಸಕಲ ನಿವಾಸಿಗಳೇ, ನನಗೆ ಕಿವಿಗೊಡಿ. ಈ ಘಟನೆಯ ಅರ್ಥ ನಿಮಗೆ ಮನದಟ್ಟಾಗಲಿ.
15 : ನೀವು ಭಾವಿಸಿದಂತೆ ಈ ಜನರು ಕುಡಿದು ಮತ್ತರಾಗಿಲ್ಲ; ಈಗ ಇನ್ನೂ ಬೆಳಿಗ್ಗೆ ಒಂಭತ್ತುಗಂಟೆ.
16 : ಈ ಘಟನೆಯನ್ನು ಕುರಿತು ಪ್ರವಾದಿ ಯೋವೇಲ ಹೇಳಿರುವುದನ್ನು ಕೇಳಿ: ದೇವರು ಹೀಗೆನ್ನುತ್ತಾರೆ:
17 : ಸುರಿಸುವೆನು ಸರ್ವರ ಮೇಲೂ
ಎನ್ನಾತ್ಮವನು ಅಂತಿಮ ದಿನಗಳಲಿ;
ಪ್ರವಾದಿಸುವರಾಗ ನಿಮ್ಮ ಕುವರ ಕುವರಿಯರು;
ದಿವ್ಯದರ್ಶನ ಪಡೆವರು ನಿಮ್ಮ ಯುವಜನರು
ಕನಸು ಕಾಣುವರು ನಿಮ್ಮ ವಯೋವೃದ್ಧರು.
18 : ಸುರಿಸುವೆನು ಎನ್ನ ದಾಸದಾಸಿಯರ ಮೇಲೂ
ಎನ್ನಾತ್ಮವನು ಆ ದಿನಗಳಲಿ,
ಪ್ರವಾದಿಸುವರಾಗ, ಅವರು;
19 : ಎಸಗುವೆನು ಆಗಸದಲಿ ಅದ್ಭುತಗಳನು,
ಮಾಡುವೆನು ಭುವಿಯಲಿ
ಮಹತ್ಕಾರ್ಯಗಳನು;
ಕಾಣುವುದಾಗ ಕಿಚ್ಚು, ಕಪ್ಪೊಗೆ, ನೆತ್ತರು.
20 : ರವಿ ಕಪ್ಪಾಗುವನು, ಶಶಿ ಕಡುಗೆಂಪಾಗುವನು.
ಪ್ರಭುವಿನ ಮಹಿಮಾದಿನಕ್ಕೆ ಮುನ್ನ
ಸಂಭವಿಸುವುವು ಇವೆಲ್ಲಾ.
21 : ಪ್ರಭುವಿನ ನಾಮಸ್ಮರಣೆ ಮಾಡುವವರೆಲ್ಲ
ಪಡೆಯುವರಾಗ ಜೀವೋದ್ಧಾರ
22 : “ಇಸ್ರಯೇಲ್ ಬಾಂಧವರೇ, ನನ್ನ ಮಾತುಗಳನ್ನು ಆಲಿಸಿರಿ. ನಜರೇತಿನ ಯೇಸುಸ್ವಾಮಿ ದೈವನಿಯಮಿತ ವ್ಯಕ್ತಿ ಎಂಬುದನ್ನು ದೇವರೇ ಅವರ ಮುಖಾಂತರ ನಡೆಸಿದ ಅದ್ಭುತ ಕಾರ್ಯಗಳಿಂದ, ಮಹತ್ಕಾರ್ಯಗಳಿಂದ ಹಾಗೂ ಸೂಚಕಕಾರ್ಯಗಳಿಂದ ನಿಮಗೆ ಸ್ಪಷ್ಟಪಡಿಸಲಾಗಿದೆ. ಇದು ನಿಮಗೆ ತಿಳಿದಿರುವ ವಿಷಯ.
23 : ದೇವರು ತಮ್ಮ ಸ್ಥಿರಸಂಕಲ್ಪದಲ್ಲಿ ಹಾಗೂ ಭವಿಷ್ಯತ್ ಜ್ಞಾನದಲ್ಲಿ ಯೇಸು ನಿಮ್ಮ ವಶವಾಗಬೇಕೆಂದು ಈ ಮೊದಲೇ ನಿರ್ಧರಿಸಿದ್ದರು. ನೀವು ಅವರನ್ನು ಪರಕೀಯರ ಕೈಗೊಪ್ಪಿಸಿ, ಶಿಲುಬೆಗೆ ಹಾಕಿಸಿ, ಕೊಲ್ಲಿಸಿದಿರಿ.
24 : ಆದರೆ ದೇವರು ಅವರನ್ನು ಮೃತ್ಯುಶೂಲೆಯಿಂದ ಬಿಡಿಸಿ ಎಬ್ಬಿಸಿದರು. ಕಾರಣ - ಅವರನ್ನು ಬಂಧಿಸಿಡುವುದು ಮೃತ್ಯುವಿಗೆ ಅಸಾಧ್ಯವಾಗಿತ್ತು.
25 : ಅವರನ್ನು ಕುರಿತು ದಾವೀದನು ಹೀಗೆಂದಿದ್ದಾನೆ:
‘ಪ್ರಭು ಇಹನು ಎನ್ನ ಕಣ್ಮುಂದೆ ಸತತ
ನಾ ಹೆದರದಂತೆ ಆತನಿಹನು ಎನ್ನ ಹತ್ತಿರ.
26 : ಇದಕಾರಣ ಹರ್ಷಿಸಿತು ಎನ್ನ ಹೃದಯ
ತುಳುಕಿತು ಸಂತಸ ಎನ್ನ ನಾಲಗೆಯಿಂದ.
ನಂಬಿ ನಿರೀಕ್ಷೆಯಿಂದಿರುವುದು ಎನ್ನ
ಮತ್ರ್ಯದೇಹ.
27 : ಏಕೆನೆ, ದೂಡಲಾರೆ ಪಾತಾಳಕ್ಕೆ ನೀನೆನ್ನ
ಜೀವಾತ್ಮವನು,
ಕೊಳೆಯಬಿಡಲಾರೆ ನೀನೊಲಿದಾತನನು.
28 : ಅಮರ ಜೀವಮಾರ್ಗವನೆನಗೆ
ತೋರ್ಪಡಿಸಿದೆ
ನಿನ್ನ ಶ್ರೀ ಸಾನ್ನಿಧ್ಯ ಸಂತಸದಿಂದೆನ್ನ
ಭರಿತನಾಗಿಸುವೆ.’
29 : “ಪ್ರಿಯ ಸಹೋದರರೇ, ಪಿತಾಮಹ ದಾವೀದರಸನ ವಿಷಯದಲ್ಲಿ ನಾನು ನಿಮಗೆ ಸ್ಪಷ್ಟವಾಗಿ ಮಾತನಾಡಬೇಕಾಗಿದೆ. ಆತನು ಮೃತನಾದನು; ಆತನನ್ನು ಸಮಾಧಿಮಾಡಲಾಯಿತು. ನಿಮಗೆಲ್ಲರಿಗೆ ತಿಳಿದಿರುವಂತೆ ಆತನ ಸಮಾಧಿ ನಮ್ಮ ಮಧ್ಯೆ ಇಂದಿನವರೆಗೂ ಇದೆ.
30 : ಆತನೊಬ್ಬ ಪ್ರವಾದಿಯೂ ಆಗಿದ್ದ. ತನ್ನ ಸಂತತಿಯಲ್ಲೇ ಒಬ್ಬನನ್ನು ಅರಸನನ್ನಾಗಿ ಮಾಡುವುದಾಗಿ ದೇವರು ಮಾಡಿದ್ದ ವಾಗ್ದಾನವನ್ನು ಆತನು ಮರೆತಿರಲಿಲ್ಲ.
31 : ಹೀಗಿರುವಲ್ಲಿ ಕ್ರಿಸ್ತಯೇಸುವಿನ ಪುನರುತ್ಥಾನವನ್ನು ಮುಂಚಿತವಾಗಿ ಅರಿತು ಅದರ ವಿಷಯವಾಗಿ ಹೀಗೆಂದು ಪ್ರವಾದನೆ ಮಾಡಿದ:
‘ಆತನನನ್ನು ಪಾತಾಳಕ್ಕೆ ದೂಡಲಿಲ್ಲ;
ದೇಹ ಕೊಳೆತುಹೋಗಲು ಬಿಡಲಿಲ್ಲ.’
31 : ಹೀಗಿರುವಲ್ಲಿ ಕ್ರಿಸ್ತಯೇಸುವಿನ ಪುನರುತ್ಥಾನವನ್ನು ಮುಂಚಿತವಾಗಿ ಅರಿತು ಅದರ ವಿಷಯವಾಗಿ ಹೀಗೆಂದು ಪ್ರವಾದನೆ ಮಾಡಿದ:
‘ಆತನನನ್ನು ಪಾತಾಳಕ್ಕೆ ದೂಡಲಿಲ್ಲ;
ದೇಹ ಕೊಳೆತುಹೋಗಲು ಬಿಡಲಿಲ್ಲ.’
32 : ಈ ಯೇಸುವನ್ನೇ ದೇವರು ಪುನರುತ್ಥಾನಗೊಳಿಸಿದ್ದಾರೆ; ಈ ಘಟನೆಗೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ.
33 : ಯೇಸು, ದೇವರ ಬಲಪಾಶ್ರ್ವಕ್ಕೆ ಆರೋಹಿತರಾದರು. ಅವರು ತಮ್ಮ ಪಿತ ವಾಗ್ದಾನ ಮಾಡಿದ ಪವಿತ್ರಾತ್ಮ ಅವರನ್ನು ಪಡೆದು, ನಮ್ಮ ಮೇಲೆ ಸುರಿಸಿದ ಆ ವರವನ್ನೇ ನೀವು ಈಗ ನೋಡುತ್ತಿರುವುದು ಹಾಗೂ ಕೇಳುತ್ತಿರುವುದು.
34 : ಸ್ವರ್ಗಾರೋಹಣ ಆದವನು ದಾವೀದನಲ್ಲ; ಆದರೂ ಆತನು ಹೀಗೆಂದಿದ್ದಾನೆ:
35 : ‘ನಿನ್ನ ಶತ್ರುಗಳನ್ನು ನಾನು
ನಿನ್ನ ಪಾದಪೀಠವಾಗಿ ಮಾಡುವತನಕ
ನನ್ನ ಬಲಗಡೆಯಲ್ಲಿ ಆಸೀನನಾಗಿರು
ಎಂದು ನನ್ನ ‘ಪ್ರಭು’ವಿಗೆ ಸರ್ವೇಶ್ವರ
ಹೇಳಿದ್ದಾರೆ.’
36 : “ಇಸ್ರಯೇಲಿನ ಜನರೆಲ್ಲರಿಗೆ ಇದು ನಿಸ್ಸಂದೇಹವಾಗಿ ತಿಳಿದಿರಲಿ: ನೀವು ಶಿಲುಬೆಗೇರಿಸಿದ ಈ ಯೇಸುಸ್ವಾಮಿಯನ್ನೇ ದೇವರು ಪ್ರಭುವನ್ನಾಗಿಯೂ ಅಭಿಷಿಕ್ತ ಲೋಕೋದ್ಧಾರಕನನ್ನಾಗಿಯೂ ನೇಮಿಸಿದ್ದಾರೆ.”
37 : ಇದನ್ನು ಕೇಳಿದ ಆ ಜನರ ಹೃದಯದಲ್ಲಿ ಅಲಗು ನೆಟ್ಟಂತಾಯಿತು. ಅವರು ಪ್ರೇಷಿತರನ್ನು ಉದ್ದೇಶಿಸಿ, “ಸಹೋದರರೇ, ಈಗ ನಾವು ಮಾಡಬೇಕಾದುದು ಏನು?” ಎಂದು ಕೇಳಿದರು.
38 : ಅದಕ್ಕೆ ಪೇತ್ರನು, “ನಿಮ್ಮಲ್ಲಿ ಪ್ರತಿ ಒಬ್ಬನೂ ಪಶ್ಚಾತ್ತಾಪಪಟ್ಟು, ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗಲಿ; ಯೇಸುಕ್ರಿಸ್ತರ ನಾಮದಲ್ಲಿ ದೀಕ್ಷಾಸ್ನಾನವನ್ನು ಪಡೆಯಲಿ. ಇದರಿಂದ ನೀವು ಪಾಪಕ್ಷಮೆಯನ್ನು ಪಡೆಯುವಿರಿ; ದೇವರ ವರವಾದ ಪವಿತ್ರಾತ್ಮರನ್ನು ಹೊಂದುವಿರಿ.
39 : ಈ ವಾಗ್ದಾನವನ್ನು ನಿಮಗೆ ಮಾತ್ರವಲ್ಲ, ನಿಮ್ಮ ಸಂತತಿಗೂ ದೂರ ಇರುವ ಎಲ್ಲರಿಗೂ ಮತ್ತು ಸರ್ವೇಶ್ವರನಾದ ದೇವರು ತಮ್ಮತ್ತ ಆಹ್ವಾನಿಸುವ ಪ್ರತಿಯೊಬ್ಬನಿಗೂ ಮಾಡಲಾಗಿದೆ,” ಎಂದನು.
40 : ಪೇತ್ರನು ಅವರಿಗೆ ಹಲವಾರು ವಿಧದಲ್ಲಿ ಮನವಿಮಾಡಿದನು. ‘ಈ ದುಷ್ಟ ಪೀಳಿಗೆಯಿಂದ ನಿಮ್ಮನ್ನು ಸಂರಕ್ಷಿಸಿಕೊಳ್ಳಿ,’ ಎಂದು ಎಚ್ಚರಿಸಿದನು.
41 : ಅವನ ಬೋಧನೆಯನ್ನು ಅಂಗೀಕರಿಸಿದ ಅನೇಕರು ದೀಕ್ಷಾಸ್ನಾನ ಪಡೆದರು. ಅಂದೇ ಸುಮಾರು ಮೂರು ಸಾವಿರ ಜನರು ಸಭೆಯನ್ನು ಸೇರಿಕೊಂಡರು.
42 : ಅಂದಿನಿಂದ ಅವರು ಪ್ರೇಷಿತರ ಬೋಧನೆಯನ್ನು ಕೇಳುವುದರಲ್ಲಿ ನಿರತರಾಗಿದ್ದರು; ಅನ್ಯೋನ್ಯವಾಗಿ ಬಾಳುತ್ತಿದ್ದರು; ರೊಟ್ಟಿ ಮುರಿಯುವ ಸಹಭೋಜನದಲ್ಲಿ ಪಾಲ್ಗೊಳ್ಳುತ್ತಿದ್ದರು ಹಾಗೂ ಪ್ರಾರ್ಥನಾಕೂಟಗಳಲ್ಲಿ ಭಾಗವಹಿಸುತ್ತಿದ್ದರು.
43 : ಭಕ್ತರ ಸಭಾಜೀವನ
ಪ್ರೇಷಿತರ ಮುಖಾಂತರ ಅನೇಕ ಅದ್ಭುತ ಕಾರ್ಯಗಳೂ ಸೂಚಕಕಾರ್ಯಗಳೂ ನಡೆಯುತ್ತಿದ್ದವು. ಇವನ್ನು ಕಂಡು ಜನರು ಭಯಭ್ರಾಂತರಾಗುತ್ತಿದ್ದರು.
44 : ಭಕ್ತವಿಶ್ವಾಸಿಗಳೆಲ್ಲರೂ ಅನ್ಯೋನ್ಯವಾಗಿ ಬಾಳುತ್ತಿದ್ದರು. ತಮ್ಮಲ್ಲಿದ್ದುದನ್ನು ಹುದುವಾಗಿ ಹಂಚಿಕೊಳ್ಳುತ್ತಿದ್ದರು.
45 : ತಮ್ಮ ತಮ್ಮ ಆಸ್ತಿಪಾಸ್ತಿಯನ್ನು ಮಾರಿ ಬಂದ ಹಣವನ್ನು ಅವರವರ ಅವಶ್ಯಕತೆಗೆ ತಕ್ಕಂತೆ ಎಲ್ಲರಿಗೂ ಹಂಚುತ್ತಿದ್ದರು.
46 : ದಿನಂಪ್ರತಿ ಅವರು ಒಮ್ಮನಸ್ಸಿನಿಂದ ದೇವಾಲಯದಲ್ಲಿ ಸಭೆ ಸೇರುತ್ತಿದ್ದರು. ತಮ್ಮ ಮನೆಗಳಲ್ಲಿ ರೊಟ್ಟಿಮುರಿಯುವ ಸಹಭೋಜನವನ್ನು ಏರ್ಪಡಿಸಿ ಸಂತೋಷದಿಂದಲೂ ಸಹೃದಯದಿಂದಲೂ ಭಾಗವಹಿಸುತ್ತಿದ್ದರು.
47 : ದೇವರನ್ನು ಸ್ತುತಿಸುತ್ತಾ ಸಕಲರಿಗೆ ಅಚ್ಚುಮೆಚ್ಚಾಗಿ ಬಾಳುತ್ತಿದ್ದರು. ಜೀವೋದ್ಧಾರವನ್ನು ಹೊಂದುತ್ತಿದ್ದವರನ್ನೆಲ್ಲಾ ಪ್ರಭು ಈ ಸಭೆಗೆ ದಿನೇದಿನೇ ಸೇರಿಸಿಕೊಳ್ಳುತ್ತಿದ್ದರು.