Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಪ್ರೇ.ಕಾ


1 : ಅಪೊಲ್ಲೋಸನು ಕೊರಿಂಥದಲ್ಲಿ ಇದ್ದಾಗ, ಪೌಲನು ಮೇಲ್ನಾಡಿನ ಪ್ರಾಂತ್ಯದ ಮಾರ್ಗವಾಗಿ ಎಫೆಸಕ್ಕೆ ಬಂದನು. ಅಲ್ಲಿ ಕೆಲವು ಮಂದಿ ಶಿಷ್ಯರನ್ನು ಕಂಡು,
2 : “ನೀವು ವಿಶ್ವಾಸಿಸಿದಾಗ ಪವಿತ್ರಾತ್ಮ ಅವರನ್ನು ಪಡೆದಿರೋ?” ಎಂದು ಕೇಳಿದನು. ಅದಕ್ಕೆ ಅವರು, “ಪವಿತ್ರಾತ್ಮ ಎಂಬವರು ಇದ್ದಾರೆಂದು ನಾವು ಕೇಳಿಯೇ ಇಲ್ಲ,” ಎಂದು ಉತ್ತರಿಸಿದರು.
3 : “ಹಾಗಾದರೆ ನೀವು ಯಾವ ಸ್ನಾನದೀಕ್ಷೆಯನ್ನು ಪಡೆದಿರಿ?” ಎಂದು ಪೌಲನು ಕೇಳಲು, “ನಾವು ಯೊವಾನ್ನನ ಸ್ನಾನದೀಕ್ಷೆ ಪಡೆದೆವು,” ಎಂದರು.
4 : ಆಗ ಪೌಲನು, “ಯಾರು ತಮ್ಮ ಪಾಪದಿಂದ ವಿಮುಖರಾಗಿ ದೇವರಿಗೆ ಅಭಿಮುಖರಾಗುತ್ತಿದ್ದರೋ, ಅಂಥವರಿಗೆ ಯೊವಾನ್ನನು ಸ್ನಾನದೀಕ್ಷೆ ಕೊಡುತ್ತಿದ್ದನು. ಆದರೆ ಆ ಯೊವಾನ್ನನೇ ‘ತನ್ನ ಬಳಿಕ ಬರುವಾತನಲ್ಲಿ ವಿಶ್ವಾಸವಿಡಿ; ಅವರೇ ಯೇಸು’ ಎಂದು ಇಸ್ರಯೇಲರಿಗೆ ಬೋಧಿಸಿದ್ದನು,” ಎಂದನು.
5 : ಇದನ್ನು ಕೇಳಿದಾಗ ಅವರು ಪ್ರಭು ಯೇಸುವಿನ ನಾಮದಲ್ಲಿ ದೀಕ್ಷಾಸ್ನಾನವನ್ನು ಪಡೆದರು.
6 : ಪೌಲನು ಅವರ ಮೇಲೆ ಹಸ್ತನಿಕ್ಷೇಪ ಮಾಡಲು, ಪವಿತ್ರಾತ್ಮ ಅವರ ಮೇಲೆ ಬಂದರು. ಆಗ ಅವರೆಲ್ಲರೂ ನಾನಾ ಭಾಷೆಗಳನ್ನು ಮಾತನಾಡುತ್ತಾ ಪ್ರವಾದಿಸಿದರು.
7 : ಇವರು ಸುಮಾರು ಹನ್ನೆರಡು ಮಂದಿ ಇದ್ದಿರಬಹುದು.
8 : ಅನಂತರ ಮೂರು ತಿಂಗಳ ಕಾಲ ಪೌಲನು ಪ್ರಾರ್ಥನಾಮಂದಿರಕ್ಕೆ ಹೋಗಿ ಧೈರ್ಯದಿಂದ ಮಾತನಾಡಿದನು. ದೇವರ ಸಾಮ್ರಾಜ್ಯದ ಬಗ್ಗೆ ಅಲ್ಲಿದ್ದವರೊಡನೆ ಚರ್ಚಿಸುತ್ತಾ, ಅವರನ್ನು ವಿಶ್ವಾಸಿಗಳನ್ನಾಗಿಸಲು ಪ್ರಯತ್ನಿಸಿದನು.
9 : ಆದರೆ ಅವರಲ್ಲಿ ಕೆಲವರು ಹಠಮಾರಿಗಳು; ಅವರು ವಿಶ್ವಾಸವನ್ನು ನಿರಾಕರಿಸಿದ್ದೂ ಅಲ್ಲದೆ ಈ ಹೊಸ ಮಾರ್ಗವನ್ನು ಸಭೆಯ ಮುಂದೆ ದೂಷಿಸತೊಡಗಿದರು. ಈ ಕಾರಣ ಪೌಲನು ಅವರನ್ನು ಬಿಟ್ಟು ಶಿಷ್ಯರನ್ನು ಕರೆದುಕೊಂಡು ತುರಾನ್ನ ಎಂಬವನ ತರ್ಕಶಾಲೆಯಲ್ಲಿ ಪ್ರತಿದಿನವೂ ಚರ್ಚೆ ನಡೆಸುತ್ತಾ ಬಂದನು.
10 : ಹೀಗೆ ಎರಡು ವರ್ಷಗಳು ಕಳೆದವು. ಇದರ ಪರಿಣಾಮವಾಗಿ ಏಷ್ಯಾದಲ್ಲಿ ವಾಸವಾಗಿದ್ದ ಯೆಹೂದ್ಯರೂ ಗ್ರೀಕರೂ ಪ್ರಭುವಿನ ವಾಕ್ಯವನ್ನು ಕೇಳಲು ಅನುಕೂಲವಾಯಿತು.
11 : ದೇವರು ಪೌಲನ ಕೈಯಿಂದ ಅಸಾಧಾರಣ ಅದ್ಭುತಗಳನ್ನು ಮಾಡಿಸುತ್ತಿದ್ದರು.
12 : ಅವನು ಬಳಸಿದ ಕರವಸ್ತ್ರಗಳನ್ನೂ ಉಡುವಸ್ತ್ರಗಳನ್ನೂ ಜನರು ತೆಗೆದುಕೊಂಡು ಹೋಗಿ ವ್ಯಾಧಿಸ್ಥರಿಗೆ ಮುಟ್ಟಿಸಿದ್ದೇ, ಅವರ ವ್ಯಾಧಿಗಳು ಗುಣವಾಗುತ್ತಿದ್ದವು; ದೆವ್ವಗಳು ಬಿಟ್ಟು ಹೋಗುತ್ತಿದ್ದವು.
13 : “ದೆವ್ವ ಬಿಡಿಸುವವರು” ಎನಿಸಿಕೊಂಡು ಊರೂರು ಸುತ್ತುತ್ತಿದ್ದ ಕೆಲವು ಯೆಹೂದ್ಯರು ಸಹ ಪ್ರಭು ಯೇಸುವಿನ ನಾಮವನ್ನು ಬಳಸಿ ದೆವ್ವಬಿಡಿಸಲು ಯತ್ನಿಸಿದರು. ಇವರು ದೆವ್ವಗಳಿಗೆ, “ಪೌಲನು ಸಾರುತ್ತಿರುವ ಯೇಸುವಿನ ನಾಮದಲ್ಲಿ ನಿಮಗೆ ಆಣೆಯಿಟ್ಟು ಆಜಾÐಪಿಸುತ್ತೇವೆ,” ಎಂದು ಹೇಳುತ್ತಿದ್ದರು.
14 : ಮುಖ್ಯ ಯಾಜಕನಾಗಿದ್ದ ಸ್ಕೇವ ಎಂಬವನ ಏಳು ಮಕ್ಕಳು ಹೀಗೆಯೇ ಮಾಡುತ್ತಿದ್ದರು.
15 : ಆದರೆ ಆ ದೆವ್ವ ಅವರಿಗೆ, “ಯೇಸು ನನಗೆ ಗೊತ್ತು, ಪೌಲನನ್ನು ನಾನು ಬಲ್ಲೆ; ಆದರೆ ನೀವು ಯಾರು?” ಎಂದು ಪ್ರಶ್ನಿಸಿತು.
16 : ಅಲ್ಲದೆ ದೆವ್ವ ಹಿಡಿದಿದ್ದ ಮನುಷ್ಯನು ಅವರ ಮೇಲೆ ಹಾರಿ ಬಿದ್ದು, ಅಪ್ಪಳಿಸಿ, ಅವರೆಲ್ಲರನ್ನೂ ಅಧೀನಪಡಿಸಿದನು. ಅವರು ಗಾಯಗೊಂಡು, ನಗ್ನರಾಗಿ, ಆ ಮನೆಯಿಂದ ಓಡಿಹೋದರು.
17 : ಎಫೆಸದಲ್ಲಿ ವಾಸಿಸುತ್ತಿದ್ದ ಯೆಹೂದ್ಯರೂ ಅನ್ಯಧರ್ಮೀಯರೂ ಈ ವಿಷಯವನ್ನು ಕೇಳಿ ಭಯಭೀತರಾದರು. ಪ್ರಭು ಯೇಸುವಿನ ನಾಮವನ್ನು ಸಂಕೀರ್ತಿಸಿದರು.
18 : ಭಕ್ತವಿಶ್ವಾಸಿಗಳಾದ ಅನೇಕರು ಮುಂದೆ ಬಂದು ತಮ್ಮ ದುಷ್ಕøತ್ಯಗಳನ್ನು ಬಹಿರಂಗವಾಗಿ ಒಪ್ಪಿಕೊಂಡು ನಿವೇದಿಸಿದರು.
19 : ಮಾಯಮಂತ್ರ ಮಾಡುತ್ತಿದ್ದ ಅನೇಕರು ತಮ್ಮ ಪುಸ್ತಕಗಳನ್ನು ತೆಗೆದುಕೊಂಡು ಬಂದು ಅವುಗಳನ್ನು ಎಲ್ಲರ ಮುಂದೆ ಸುಟ್ಟುಹಾಕಿದರು. ಆ ಪುಸ್ತಕಗಳ ಬೆಲೆಯನ್ನು ಎಣಿಕೆಮಾಡಿದಾಗ ಅದರ ಮೊತ್ತ ಐವತ್ತು ಸಾವಿರ ಬೆಳ್ಳಿನಾಣ್ಯಗಳಷ್ಟಾಯಿತು.
20 : ಪ್ರಭುವಿನ ವಾಕ್ಯ ಹೀಗೆ ಹಬ್ಬಿ ಹರಡಿ ಪ್ರಬಲವಾಯಿತು.
21 : ಈ ಘಟನೆಗಳ ನಂತರ ಪೌಲನು ಮಕೆದೋನಿಯ ಮತ್ತು ಅಖಾಯದ ಮೂಲಕ ಜೆರುಸಲೇಮಿಗೆ ಹೋಗಲು ನಿರ್ಧರಿಸಿಕೊಂಡನು. ಅಲ್ಲಿಗೆ ಹೋದ ಮೇಲೆ ರೋಮ್ ನಗರವನ್ನು ಕೂಡ ನೋಡಬೇಕು ಎಂಬುದು ಅವನ ಉದ್ದೇಶ ಆಗಿತ್ತು.
22 : ತನ್ನ ಇಬ್ಬರು ಸಹಾಯಕರಾದ ತಿಮೊಥೇಯ ಮತ್ತು ಎರಾಸ್ತನನ್ನು ಮಕೆದೋನಿಯಕ್ಕೆ ಕಳುಹಿಸಿಬಿಟ್ಟು, ತಾನು ಇನ್ನೂ ಸ್ವಲ್ಪ ಕಾಲ ಏಷ್ಯದಲ್ಲೇ ಉಳಿದುಕೊಂಡನು.
23 : ಅದೇ ಸಮಯಕ್ಕೆ ಎಫೆಸದಲ್ಲಿ ಕ್ರಿಸ್ತ ಮಾರ್ಗ ಅನ್ವೇಷಣೆಯ ನಿಮಿತ್ತ ತೀವ್ರ ಗಲಭೆ ಉಂಟಾಯಿತು.
24 : ಅಲ್ಲಿ ದೆಮೆತ್ರಿಯ ಎಂಬ ಅಕ್ಕಸಾಲಿಗನಿದ್ದನು. ಇವನು ಅರ್ತೆವಿೂ ದೇವತೆಯ ಗುಡಿಗೆ ಬೆಳ್ಳಿಯ ಆಕೃತಿಯನ್ನು ಮಾಡುತ್ತಿದ್ದನು. ಈ ಕಸಬುದಾರರಿಗೆ ಇದು ತುಂಬ ಲಾಭದಾಯಕವಾಗಿತ್ತು.
25 : ದೆಮೆತ್ರಿಯನು ಅವರೆಲ್ಲರನ್ನು ಹಾಗೂ ಸಂಬಂಧಪಟ್ಟ ಕಸಬಿನ ಇತರರನ್ನು ಒಟ್ಟುಗೂಡಿಸಿ, “ಮಿತ್ರರೇ, ನಿಮ್ಮ ಸಿರಿಸಂಪತ್ತಿಗೆಲ್ಲಾ ಈ ಕಸಬೇ ಮೂಲಕಾರಣ, ಇದು ನಿಮಗೆ ತಿಳಿದ ವಿಷಯ.
26 : ಪೌಲ ಎಂಬವನು ಏನು ಮಾಡುತ್ತಿರುವನೆಂದು ನೀವು ನೋಡಿದ್ದೀರಿ ಹಾಗೂ ಕೇಳಿದ್ದೀರಿ; ಕೈಯಿಂದ ಮಾಡಿದ ಆಕೃತಿಗಳು ದೇವರೇ ಅಲ್ಲವೆಂದು ಇಲ್ಲಿ ಎಫೆಸದಲ್ಲೂ ಹೆಚ್ಚು ಕಡಿಮೆ ಇಡೀ ಏಷ್ಯದಲ್ಲೂ ಪ್ರಚಾರ ಮಾಡುತ್ತಿದ್ದಾನೆ; ಮಾತ್ರವಲ್ಲ, ಅನೇಕ ಜನರನ್ನು ಮನವೊಲಿಸಿ ಮಾರ್ಪಡಿಸಿಬಿಟ್ಟಿದ್ದಾನೆ.
27 : ಇದರಿಂದಾಗಿ ನಮ್ಮ ಕಸಬಿಗೇ ಕೆಟ್ಟ ಹೆಸರು ಬರುವ ಅಪಾಯವಿದೆ. ಅಷ್ಟೇ ಏಕೆ, ಅರ್ತೆವಿೂ ಮಹಾದೇವಿಯ ಗುಡಿ ಹೇಳಹೆಸರಿಲ್ಲದಂತಾಗುವ ಸಂಭವವಿದೆ. ಇಡೀ ಏಷ್ಯದಲ್ಲೂ ಜಗತ್ತಿನ ಎಲ್ಲೆಲ್ಲೂ ಪೂಜಿಸಲಾಗುವ ಆ ದೇವತೆಯ ವೈಭವ ಅಳಿದುಹೋಗುವ ಅಪಾಯವಿದೆ,” ಎಂದನು.
28 : ಈ ಮಾತುಗಳನ್ನು ಕೇಳಿದ ಆ ಜನರು ಕೋಪಾವೇಶದಿಂದ, “ಎಫೆಸದ ಅರ್ತೆವಿೂ ದೇವಿಯೇ ಮಹಾದೇವಿ!” ಎಂದು ಆರ್ಭಟಿಸಿದರು.
29 : ಪಟ್ಟಣದಲ್ಲೆಲ್ಲಾ ಕೋಲಾಹಲವೆದ್ದಿತು. ಜನರು ಗುಂಪಾಗಿ ಬಂದು ಪೌಲನ ಸಹಪ್ರಯಾಣಿಕರು ಹಾಗೂ ಮಕೆದೋನಿಯದವರು ಆದ ಗಾಯ ಮತ್ತು ಅರಿಸ್ತಾರ್ಕ ಎಂಬವರನ್ನು ಹಿಡಿದರು. ಅವರನ್ನು ಎಳೆದುಕೊಂಡು ಹೋಗಿ ಕ್ರೀಡಾಂಗಣಕ್ಕೆ ಒಟ್ಟಾಗಿ ನುಗ್ಗಿದರು.
30 : ಇದನ್ನು ತಿಳಿದ ಪೌಲನು ಜನಸಮೂಹದ ಮುಂದೆಹೋಗಿ ನಿಲ್ಲಬೇಕೆಂದು ಇದ್ದನು. ಆದರೆ ಭಕ್ತಾದಿಗಳು ಅವನನ್ನು ಹೋಗಬಿಡಲಿಲ್ಲ.
31 : ಇದೂ ಅಲ್ಲದೆ, ಪೌಲನ ಸ್ನೇಹಿತರಾದ ಕೆಲವು ಸ್ಥಳೀಯ ಅಧಿಕಾರಿಗಳು, ಕ್ರೀಡಾಂಗಣಕ್ಕೆ ಹೋಗುವ ಸಾಹಸವನ್ನು ಮಾಡಕೂಡದೆಂದು ವಿನಂತಿಸಿ, ಪೌಲನಿಗೆ ಹೇಳಿ ಕಳುಹಿಸಿದರು.
32 : ಸಭೆಯಲ್ಲಿ ಗೊಂದಲವೆದ್ದಿತು. ಕೆಲವರು ಒಂದು ವಿಧದಲ್ಲಿ ಬೊಬ್ಬೆ ಹಾಕಿದರೆ, ಮತ್ತೆ ಕೆಲವರು ಇನ್ನೊಂದು ವಿಧದಲ್ಲಿ ಕೂಗಾಡಲಾರಂಭಿಸಿದರು. ಬಹುಜನರಿಗೆ ತಾವು ಅಲ್ಲಿಗೆ ಬಂದುದರ ಕಾರಣವೇ ತಿಳಿದಿರಲಿಲ್ಲ.
33 : ಯೆಹೂದ್ಯರು ಅಲೆಕ್ಸಾಂಡರ್ ಎಂಬವನನ್ನು ಸಭೆಯ ಮುಂದಕ್ಕೆ ನೂಕಿದರು. ನೆರೆದಿದ್ದ ಕೆಲವರು ಅವನನ್ನು ಪುಸಲಾಯಿಸಿದರು. ಆಗ ಅಲೆಕ್ಸಾಂಡರನು ಮೌನವಾಗಿರುವಂತೆ ಕೈಸನ್ನೆಮಾಡಿ ಜನರಿಗೆ ಸಮಾಧಾನ ಹೇಳಲು ಪ್ರಯತ್ನಿಸಿದನು.
34 : ಆದರೆ ಅವನು ಯೆಹೂದ್ಯನೆಂದು ಗುರುತಿಸಿದ ಕೂಡಲೇ ಅವರೆಲ್ಲರೂ ಎರಡು ಗಂಟೆಗಳ ಕಾಲ, “ಎಫೆಸದ ಅರ್ತೆವಿೂ ದೇವಿಯೇ ಮಹಾದೇವಿ,” ಎಂದು ಒಂದೇಸಮನೆ ಬೊಬ್ಬೆ ಹಾಕಿದರು.
35 : ಕಟ್ಟಕಡೆಗೆ ಪಟ್ಟಣದ ಅಧಿಕಾರಿ ಒಬ್ಬನು ಜನಸಮೂಹವನ್ನು ಶಾಂತಗೊಳಿಸುತ್ತಾ ಹೀಗೆಂದನು: “ಎಫೆಸದ ಮಹಾಜನರೇ, ಅರ್ತೆವಿೂ ಮಹಾದೇವಿಯ ಗುಡಿಯನ್ನು ಹಾಗೂ ಆಕಾಶದಿಂದ ಬಿದ್ದ ಶಿಲೆಯನ್ನು ಎಫೆಸ ಪಟ್ಟಣವು ಎಚ್ಚರಿಕೆಯಿಂದ ಸಂರಕ್ಷಿಸುತ್ತಾ ಬಂದಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ.
36 : ಇದನ್ನು ಯಾರೂ ಅಲ್ಲಗಳೆಯುವಂತಿಲ್ಲ; ಆದುದರಿಂದ ನೀವು ಶಾಂತರಾಗಬೇಕು, ದುಡುಕಿ ಏನನ್ನೂ ಮಾಡಬಾರದು.
37 : ನೀವು ಎಳೆದು ತಂದಿರುವ ಈ ವ್ಯಕ್ತಿಗಳು ಗುಡಿಕಳ್ಳರೂ ಅಲ್ಲ, ನಮ್ಮ ದೇವತೆಯ ದೂಷಕರೂ ಅಲ್ಲ.
38 : ದೆಮೆತ್ರಿಯನಿಗೇ ಆಗಲಿ, ಅವನ ಜೊತೆ ಕೆಲಸಗಾರರಿಗೇ ಆಗಲಿ, ಯಾರ ಮೇಲಾದರೂ ಏನಾದರೂ ಆಪಾದನೆ ಇದ್ದರೆ, ಅದಕ್ಕೆ ನ್ಯಾಯಾಲಯಗಳು ತೆರೆದಿವೆ; ರಾಜ್ಯಪಾಲರಿದ್ದಾರೆ; ಅವರು ಅಲ್ಲಿಗೆ ಹೋಗಿ ದೂರುಕೊಡಲಿ.
39 : ಇದಕ್ಕಿಂತಲೂ ಮಿಗಿಲಾಗಿ ನೀವು ಏನನ್ನಾದರೂ ಅಪೇಕ್ಷಿಸುವುದಾದರೆ, ಅದನ್ನು ಕಾನೂನುಬದ್ಧವಾಗಿ ಸೇರುವ ಸಭೆಯಲ್ಲಿ ತೀರ್ಮಾನಮಾಡಬಹುದು.
40 : ಈ ದಿನ ನಡೆದ ಘಟನೆಯನ್ನು ದಂಗೆಯೆಂದು ನಮ್ಮ ಮೇಲೆ ಆಪಾದನೆ ಹೊರಿಸುವ ಆಸ್ಪದವಿದೆ. ಏಕೆಂದರೆ, ಈ ಗಲಭೆಗೆ ಸರಿಯಾದ ಕಾರಣವನ್ನು ಕೊಟ್ಟು ಸಮರ್ಥಿಸಿಕೊಳ್ಳಲು ನಮ್ಮಿಂದಾಗದು,” ಎಂದನು.
41 : ಈ ಮಾತುಗಳನ್ನು ಹೇಳಿದ ಮೇಲೆ ಅವನು ಕೂಟವನ್ನು ಚದರಿಸಿದನು.

· © 2017 kannadacatholicbible.org Privacy Policy