Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಪ್ರೇ.ಕಾ


1 : ಇದಾದಮೇಲೆ ಪೌಲನು ಅಥೆನ್ಸ್ ಅನ್ನು ಬಿಟ್ಟು ಕೊರಿಂಥಕ್ಕೆ ಹೋದನು.
2 : ಪೊಂತ ಎಂಬ ಊರಿನ ಅಕ್ವಿಲ ಎಂಬ ಯೆಹೂದ್ಯನನ್ನು ಅಲ್ಲಿ ಕಂಡನು. ಚಕ್ರವರ್ತಿ ಕ್ಲಾಡಿಯಸನು ಯೆಹೂದ್ಯರೆಲ್ಲರೂ ರೋಮ್‍ನಗರವನ್ನು ಬಿಟ್ಟುಹೋಗಬೇಕೆಂದು ಆಜಾÐಪಿಸಿದ್ದರಿಂದ, ಈ ಅಕ್ವಿಲನು ತನ್ನ ಪತ್ನಿ ಪ್ರಿಸ್ಸಿಲಳೊಂದಿಗೆ ಇಟಲಿಯಿಂದ ಇತ್ತೀಚೆಗೆ ಬಂದಿದ್ದನು. ಪೌಲನು ಅವರನ್ನು ನೋಡಲು ಹೋದನು.
3 : ಅವರು ತನ್ನಂತೆಯೇ ಗುಡಾರಮಾಡುವ ಕಸುಬಿನವರಾಗಿದ್ದರಿಂದ ಅವರಲ್ಲೇ ತಂಗಿದ್ದು ಅವರೊಡನೆ ಕೆಲಸ ಮಾಡುತ್ತಾ ಬಂದನು.
4 : ಪ್ರತಿ ಸಬ್ಬತ್‍ದಿನ ಅವನು ಪ್ರಾರ್ಥನಾಮಂದಿರದಲ್ಲಿ ಚರ್ಚಿಸುತ್ತಾ ಯೆಹೂದ್ಯರನ್ನು ಮತ್ತು ಗ್ರೀಕರನ್ನು ವಿಶ್ವಾಸಿಗಳನ್ನಾಗಿಸಲು ಪ್ರಯತ್ನಿಸುತ್ತಿದ್ದನು.
5 : ಸೀಲ ಮತ್ತು ತಿಮೊಥೇಯ ಮಕೆದೋನಿಯದಿಂದ ಬಂದ ಮೇಲೆ ಪೌಲನು ಶುಭಸಂದೇಶವನ್ನು ಸಾರುವುದರಲ್ಲೂ ಯೇಸುವೇ ಬರಬೇಕಾದ ಲೋಕೋದ್ಧಾರಕ ಎಂದು ಯೆಹೂದ್ಯರಿಗೆ ರುಜುವಾತುಪಡಿಸುವುದರಲ್ಲೂ ತನ್ನ ಸಮಯವನ್ನು ಕಳೆದನು.
6 : ಆದರೆ ಆ ಯೆಹೂದ್ಯರು ಅವನನ್ನು ಪ್ರತಿಭಟಿಸಿ ದೂಷಿಸಿದರು. ಆಗ ಪೌಲನು ತನ್ನ ಹೊದಿಕೆಯನ್ನು ಒದರಿ, “ನಿಮ್ಮ ವಿನಾಶಕ್ಕೆ ನೀವೇ ಹೊಣೆ; ಅದಕ್ಕೆ ನಾನು ಬಾಧ್ಯನಲ್ಲ. ಇಂದಿನಿಂದ ನಾನು ಅನ್ಯಧರ್ಮೀಯರ ಕಡೆಗೆ ಹೋಗುತ್ತೇನೆ,” ಎಂದನು.
7 : ಅಂತೆಯೇ ಅವರನ್ನು ಬಿಟ್ಟು ದೇವರಲ್ಲಿ ಭಯಭಕ್ತಿಯುಳ್ಳವನಾಗಿದ್ದ ತೀತಯುಸ್ತ ಎಂಬವನ ಮನೆಗೆ ಹೋದನು. ಅವನ ಮನೆ ಪ್ರಾರ್ಥನಾ ಮಂದಿರದ ಪಕ್ಕದಲ್ಲೇ ಇತ್ತು.
8 : ಪ್ರಾರ್ಥನಾಮಂದಿರದ ಅಧ್ಯಕ್ಷ ಕ್ರಿಸ್ಪ ಎಂಬವನೂ ಅವನ ಮನೆಯವರೆಲ್ಲರೂ ಪ್ರಭುವಿನಲ್ಲಿ ವಿಶ್ವಾಸವಿಟ್ಟರು. ಕೊರಿಂಥದ ಇನ್ನೂ ಅನೇಕ ಜನರು ಪೌಲನ ಬೋಧನೆಯನ್ನು ಕೇಳಿ ವಿಶ್ವಾಸವಿಟ್ಟರು ಮತ್ತು ದೀಕ್ಷಾಸ್ನಾನ ಪಡೆದರು.
9 : ಒಂದು ರಾತ್ರಿ ಪೌಲನಿಗೆ ಪ್ರಭು ದರ್ಶನ ಇತ್ತು, “ಭಯಪಡಬೇಡ, ಬೋಧನೆ ಮಾಡುವುದನ್ನು ಮುಂದುವರಿಸು,
10 : ನಾನು ನಿನ್ನೊಡನೆ ಇದ್ದೇನೆ. ಯಾರೂ ನಿನ್ನ ಮೇಲೆ ಬಿದ್ದು ಹಾನಿ ಮಾಡುವುದಿಲ್ಲ. ಪಟ್ಟಣದ ಅನೇಕ ಜನರು ನನ್ನ ಪರವಾಗಿದ್ದಾರೆ,” ಎಂದರು.
11 : ಅಂತೆಯೇ ಪೌಲನು ಒಂದೂವರೆ ವರ್ಷಕಾಲ ಅಲ್ಲಿದ್ದು ದೇವರ ವಾಕ್ಯವನ್ನು ಜನರಿಗೆ ಬೋಧಿಸಿದನು.
12 : ಗಲ್ಲಿಯೋ ಎಂಬವನು ಅಖಾಯದಲ್ಲಿ ರಾಜ್ಯಪಾಲನಾಗಿದ್ದಾಗ, ಯೆಹೂದ್ಯರು ಪೌಲನ ವಿರುದ್ಧ ಒಟ್ಟುಗೂಡಿ ಅವನನ್ನು ಬಂಧಿಸಿ ನ್ಯಾಯಸ್ಥಾನಕ್ಕೆ ಕೊಂಡೊಯ್ದರು.
13 : “ಧರ್ಮಶಾಸ್ತ್ರಕ್ಕೆ ವ್ಯತಿರಿಕ್ತವಾದ ರೀತಿಯಲ್ಲಿ ದೇವರನ್ನು ಆರಾಧಿಸುವಂತೆ ಈ ಮನುಷ್ಯ ಜನರನ್ನು ಪ್ರೇರೇಪಿಸುತ್ತಾ ಇದ್ದಾನೆ,” ಎಂದು ಅಲ್ಲಿ ದೂರಿತ್ತರು.
14 : ಪೌಲನು ಮಾತನಾಡಬೇಕೆಂದಿರುವಾಗ, ಗಲ್ಲಿಯೋ ಯೆಹೂದ್ಯರನ್ನು ಸಂಬೋಧಿಸಿ, “ಯೆಹೂದ್ಯರೇ, ಅನ್ಯಾಯವಾಗಲಿ, ಅಕ್ರಮವಾಗಲಿ ನಡೆದಿದ್ದ ಪಕ್ಷದಲ್ಲಿ, ನಿಮ್ಮ ಅಪಾದನೆಗಳನ್ನು ತಾಳ್ಮೆಯಿಂದ ಕೇಳಬೇಕಾದುದು ಸರಿಯಷ್ಟೆ.
15 : ಆದರೆ ಇದು ನಾಮನೇಮಗಳಿಗೆ ಹಾಗು ನಿಮ್ಮ ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟ ಪ್ರಶ್ನೆ. ಅದನ್ನು ನಿಮ್ಮನಿಮ್ಮಲ್ಲೇ ಇತ್ಯರ್ಥಮಾಡಿಕೊಳ್ಳಿ. ಇಂಥ ವಿಷಯಗಳನ್ನು ವಿಚಾರಣೆ ಮಾಡಲು ನನಗೆ ಮನಸ್ಸಿಲ್ಲ,” ಎಂದು ಹೇಳಿ
16 : ಅವರನ್ನು ನ್ಯಾಯಸ್ಥಾನದಿಂದ ಹೊರಗಟ್ಟಿದನು.
17 : ಆಗ ಅವರೆಲ್ಲರೂ ಪ್ರಾರ್ಥನಾಮಂದಿರದ ಅಧ್ಯಕ್ಷ ಸೋಸ್ಥೆನನನ್ನು ಬಂಧಿಸಿ, ನ್ಯಾಯಸ್ಥಾನದ ಮುಂದೆಯೇ ಹೊಡೆದರು. ಗಲ್ಲಿಯೋ ಇದೊಂದನ್ನೂ ಲಕ್ಷಿಸಲಿಲ್ಲ.
18 : ಇದಾದ ಮೇಲೆ ಪೌಲನು ಕೊರಿಂಥದಲ್ಲಿ ಅನೇಕ ದಿನ ಇದ್ದನು. ಅನಂತರ ಭಕ್ತವಿಶ್ವಾಸಿಗಳನ್ನು ಬೀಳ್ಕೊಟ್ಟು ಅಕ್ವಿಲ ಮತ್ತು ಪ್ರಿಸ್ಸಿಲರೊಡನೆ ಸಿರಿಯಕ್ಕೆ ನೌಕಾಯಾನ ಹೊರಟನು. ತಾನು ಮಾಡಿದ್ದ ಹರಕೆಯ ಪ್ರಕಾರ ಕೆಂಖ್ರೆಯೆಂಬ ಸ್ಥಳದಲ್ಲಿ ಮುಂಡನಮಾಡಿಸಿಕೊಂಡನು
19 : ಎಫೆಸ ನಗರಕ್ಕೆ ಬಂದು ಸೇರಿದಾಗ ಪೌಲನು ತನ್ನ ಸಂಗಡಿಗರನ್ನು ಅಲ್ಲೇ ಬಿಟ್ಟು ಪ್ರಾರ್ಥನಾ ಮಂದಿರಕ್ಕೆ ಹೋಗಿ ಅಲ್ಲಿ ಯೆಹೂದ್ಯರೊಡನೆ ತರ್ಕಮಾಡತೊಡಗಿದನು.
20 : ಆ ಯೆಹೂದ್ಯರು ತಮ್ಮೊಡನೆ ಇನ್ನೂ ಸ್ವಲ್ಪ ಕಾಲವಿರಬೇಕೆಂದು ಅವನನ್ನು ವಿನಂತಿಸಿದರು. ಆದರೆ ಪೌಲನು ಒಪ್ಪಿಕೊಳ್ಳಲಿಲ್ಲ.
21 : ಅವರನ್ನು ಬೀಳ್ಕೊಡುತ್ತಾ, “ದೇವರ ಚಿತ್ತವಾದರೆ ನಾನು ನಿಮ್ಮಲ್ಲಿಗೆ ಮರಳಿಬರುತ್ತೇನೆ,” ಎಂದು ಹೇಳಿ ಎಫೆಸದಿಂದ ಸಮುದ್ರ ಪ್ರಯಾಣಮಾಡಿದನು.
22 : ಅವನು ಸೆಜರೇಯವನ್ನು ಸೇರಿದನು. ಅಲ್ಲಿಂದ ಜೆರುಸಲೇಮಿಗೆ ಹೋಗಿ ಧರ್ಮಸಭೆಯನ್ನು ಸಂಧಿಸಿ ಅಂತಿಯೋಕ್ಯಕ್ಕೆ ಬಂದನು.
23 : ಅಲ್ಲಿ ಕೆಲಕಾಲವಿದ್ದು ಪುನಃ ಹೊರಟು ಗಲಾತ್ಯ ಮತ್ತು ಫ್ರಿಜಿಯ ಪ್ರದೇಶಗಳಲ್ಲಿ ಸಂಚರಿಸುತ್ತಾ ಭಕ್ತರೆಲ್ಲರನ್ನು ದೃಢಪಡಿಸಿದನು.
24 : ಅಲೆಕ್ಸಾಂಡ್ರಿಯದ ಅಪೊಲ್ಲೋಸ್ ಎಂಬ ಯೆಹೂದ್ಯನು ಎಫೆಸಕ್ಕೆ ಬಂದಿದ್ದನು. ಅವನೊಬ್ಬ ಉತ್ತಮ ಭಾಷಣಕಾರ ಹಾಗೂ ಪವಿತ್ರಗ್ರಂಥದಲ್ಲಿ ಪಾಂಡಿತ್ಯಪಡೆದವನು.
25 : ಪ್ರಭುವಿನ ಮಾರ್ಗದ ಬಗ್ಗೆ ಅವನಿಗೆ ಉಪದೇಶಮಾಡಲಾಗಿತ್ತು. ಸ್ನಾನಿಕ ಯೊವಾನ್ನನ ಸ್ನಾನದೀಕ್ಷೆ ಒಂದನ್ನೇ ಅವನು ಬಲ್ಲವನಾಗಿದ್ದನು. ಆದರೂ ಯೇಸುಸ್ವಾಮಿಯ ಬಗ್ಗೆ ಉತ್ಸಾಹಭರಿತನಾಗಿ ಉಪದೇಶಮಾಡಿ ಚ್ಯುತಿಯಿಲ್ಲದೆ ಬೋಧಿಸುತ್ತಾ ಬಂದನು.
26 : ಇವನು ಪ್ರಾರ್ಥನಾಮಂದಿರದಲ್ಲಿ ಧೈರ್ಯದಿಂದ ಮಾತನಾಡುತ್ತಿದ್ದಾಗ, ಪ್ರಿಸ್ಸಿಲ ಮತ್ತು ಅಕ್ವಿಲರು ಅವನ ಬೋಧನೆಯನ್ನು ಕೇಳಿದರು. ಅವನನ್ನು ಮನೆಗೆ ಕರೆದುಕೊಂಡು ಹೋಗಿ ಪ್ರಭುವಿನ ಮಾರ್ಗವನ್ನು ಇನ್ನೂ ಸೂಕ್ಷ್ಮವಾಗಿ ವಿವರಿಸಿದರು.
27 : ಇವನು ಅಖಾಯಕ್ಕೆ ಹೋಗಲು ಇಷ್ಟಪಟ್ಟಾಗ ಭಕ್ತಾದಿಗಳು ಅವನನ್ನು ಪ್ರೋತ್ಸಾಹಿಸಿ, ಅಖಾಯದ ಭಕ್ತಾದಿಗಳಿಗೆ ಪತ್ರ ಬರೆದು, ಇವನನ್ನು ಸ್ವಾಗತಿಸುವಂತೆ ಬಿನ್ನವಿಸಿದರು. ಇವನು ಅಲ್ಲಿಗೆ ಹೋಗಿ ದೇವರ ಕೃಪೆಯಿಂದ ವಿಶ್ವಾಸಿಗಳಾಗಿದ್ದವರಿಗೆ ಬಹುವಾಗಿ ನೆರವಾದನು.
28 : ಹೇಗೆಂದರೆ, ಪವಿತ್ರ ಗ್ರಂಥಾನುಸಾರ ಯೇಸುವೇ ಲೋಕೋದ್ಧಾರಕನೆಂದು ಖಚಿತಪಡಿಸಿ ಯೆಹೂದ್ಯರನ್ನು ಎಲ್ಲರ ಮುಂದೆ ಬಹಿರಂಗವಾಗಿ ಪ್ರತಿಭಟಿಸಿದನು.

· © 2017 kannadacatholicbible.org Privacy Policy