1 : ಪೌಲ ಮತ್ತು ಸೀಲ ಆಂಫಿಪೊಲಿ ಹಾಗೂ ಅಪೊಲೋನಿಯ ಮಾರ್ಗವಾಗಿ ಪ್ರಯಾಣಮಾಡಿ ಥೆಸಲೋನಿಕಕ್ಕೆ ಬಂದರು. ಅಲ್ಲಿ ಯೆಹೂದ್ಯರ ಪ್ರಾರ್ಥನಾಮಂದಿರ ಒಂದಿತ್ತು.
2 : ಪೌಲನು ವಾಡಿಕೆಯ ಪ್ರಕಾರ ಪ್ರಾರ್ಥನಾ ಮಂದಿರಕ್ಕೆ ಹೋದನು. ಮೂರು ಸಬ್ಬತ್‍ದಿನ ಪವಿತ್ರಗ್ರಂಥವನ್ನು ಉಲ್ಲೇಖಿಸಿ, ಅಲ್ಲಿದ್ದವರೊಡನೆ ಚರ್ಚೆಮಾಡಿದನು.
3 : ಪವಿತ್ರಗ್ರಂಥದ ಪ್ರಕಾರ ಲೋಕೋದ್ಧಾರಕನು ಯಾತನೆಯನ್ನು ಅನುಭವಿಸಬೇಕಾಗಿತ್ತೆಂದೂ ಮರಣಹೊಂದಿ ಪುನರುತ್ಥಾನ ಹೊಂದಬೇಕಾಗಿತ್ತೆಂದೂ ಪ್ರತಿಪಾದಿಸಿದನು. ‘ನಾನು ನಿಮಗೆ ಸಾರುತ್ತಿರುವ ಯೇಸುಸ್ವಾಮಿಯೇ ಆ ಉದ್ದಾರಕ’ ಎಂದು ಸ್ಪಷ್ಟಪಡಿಸಿದನು.
4 : ಇದು ಸತ್ಯವೆಂದು ಮನವರಿಕೆ ಆದ ಕೆಲವರು ಪೌಲ ಮತ್ತು ಸೀಲರನ್ನು ಸೇರಿಕೊಂಡರು. ಅಂತೆಯೇ ದೈವಭಕ್ತರಾಗಿದ್ದ ಗ್ರೀಕರ ದೊಡ್ಡ ಗುಂಪೂ ಅನೇಕ ಕುಲೀನ ಸ್ತ್ರೀಯರೂ ಅವರನ್ನು ಸೇರಿಕೊಂಡರು.
5 : ಆದರೆ ಯೆಹೂದ್ಯರು ಮತ್ಸರದಿಂದ ಕೂಡಿ, ಪುಂಡಪೋಕರಿಗಳನ್ನು ಎತ್ತಿಕಟ್ಟಿ, ಒಂದು ಗುಂಪನ್ನು ಕೂಡಿಸಿದರು. ಪಟ್ಟಣದಲ್ಲೆಲ್ಲಾ ದೊಂಬಿ ಎಬ್ಬಿಸಿದರು. ಪೌಲ ಮತ್ತು ಸೀಲರನ್ನು ಜನರ ಮುಂದೆ ಎಳೆದುತರುವ ಉದ್ದೇಶದಿಂದ ಅವರನ್ನು ಹುಡುಕುತ್ತಾ ಯಾಸೋನ ಎಂಬವನ ಮನೆಯನ್ನು ಮುತ್ತಿದರು.
6 : ಅವರನ್ನು ಅಲ್ಲಿ ಕಾಣದಿರಲು ಯಾಸೋನನನ್ನೂ ಕೆಲವು ಭಕ್ತವಿಶ್ವಾಸಿಗಳನ್ನೂ ನಗರಾಧಿಕಾರಿಗಳ ಮುಂದೆ ಎಳೆದು ತಂದು, “ಎಲ್ಲೆಲ್ಲೂ ಅಲ್ಲೋಲ ಕಲ್ಲೋಲ ಎಬ್ಬಿಸಿದ ಆ ವ್ಯಕ್ತಿಗಳು ಈಗ ನಮ್ಮ ನಗರಕ್ಕೂ ಬಂದಿದ್ದಾರೆ.
7 : ಈ ಯಾಸೋನನು ಅವರಿಗೆ ಆಶ್ರಯ ಕೊಟ್ಟಿದ್ದಾನೆ. ಅವರು ‘ಯೇಸು’ ಎಂಬ ಇನ್ನೊಬ್ಬ ಅರಸನಿದ್ದಾನೆಂದು ಹೇಳುತ್ತಾ ಚಕ್ರವರ್ತಿಯ ಆಜ್ಞೆಗಳನ್ನು ಉಲ್ಲಂಘಿಸುತ್ತಿದ್ದಾರೆ,” ಎಂದು ಗುಲ್ಲೆಬ್ಬಿಸಿದರು.
8 : ನಗರದ ನಿವಾಸಿಗಳೂ ಅಧಿಕಾರಿಗಳೂ ಇದನ್ನು ಕೇಳಿ ಉದ್ರಿಕ್ತರಾದರು;
9 : ಯಾಸೋನ ಮತ್ತಿತರ ಸಂಗಡಿಗರಿಂದ ಜಾವಿೂನು ಪಡೆದು ಅವರನ್ನು ಬಿಡುಗಡೆಮಾಡಿದರು.
10 : ಬೆರೋಯದಲ್ಲೂ ಗಲಭೆ
ಭಕ್ತವಿಶ್ವಾಸಿಗಳು ಪೌಲ ಮತ್ತು ಸೀಲರನ್ನು ರಾತ್ರೋರಾತ್ರಿಯಲ್ಲೇ ಬೆರೋಯ ಎಂಬ ಊರಿಗೆ ಕಳುಹಿಸಿಬಿಟ್ಟರು. ಇವರು ಆ ಊರನ್ನು ತಲುಪಿದ್ದೇ, ಯೆಹೂದ್ಯರ ಪ್ರಾರ್ಥನಾಮಂದಿರಕ್ಕೆ ಹೋದರು.
11 : ಅಲ್ಲಿನ ಯೆಹೂದ್ಯರು ಥೆಸಲೋನಿಕದ ಜನರಿಗಿಂತ ವಿಶಾಲ ಮನೋಭಾವವುಳ್ಳವರು; ಶುಭಸಂದೇಶವನ್ನು ಅತ್ಯಾಸಕ್ತಿಯಿಂದ ಸ್ವಾಗತಿಸಿದರು. ಅದು ಪವಿತ್ರಗ್ರಂಥಕ್ಕೆ ಅನುಗುಣವಾಗಿದೆಯೇ ಎಂದು ತಿಳಿದುಕೊಳ್ಳಲು ಪ್ರತಿದಿನವೂ ಅಧ್ಯಯನ ಮಾಡತೊಡಗಿದರು.
12 : ಅವರಲ್ಲಿ ಅನೇಕರು ವಿಶ್ವಾಸಿಗಳಾದರು. ಅನೇಕ ಗ್ರೀಕ್ ಕುಲೀನ ಸ್ತ್ರೀಯರೂ ಪುರುಷರೂ ವಿಶ್ವಾಸಿಗಳಾದರು.
13 : ಪೌಲನು ಬೆರೋಯದಲ್ಲೂ ದೇವರ ವಾಕ್ಯವನ್ನು ಸಾರುತ್ತಿದ್ದಾನೆಂಬ ವರ್ತಮಾನವು ಥೆಸಲೋನಿಕದ ಯೆಹೂದ್ಯರಿಗೆ ತಿಳಿದುಬಂತು. ಅವರು ಅಲ್ಲಿಗೂ ಬಂದು ಜನಸಮೂಹವನ್ನು ಪ್ರಚೋದಿಸಿ ಗಲಭೆಯೆಬ್ಬಿಸಿದರು.
14 : ಕೂಡಲೇ ಭಕ್ತವಿಶ್ವಾಸಿಗಳು ಪೌಲನನ್ನು ಸಮುದ್ರ ತೀರಕ್ಕೆ ಕಳುಹಿಸಿಬಿಟ್ಟರು. ಆದರೆ ಸೀಲ ಮತ್ತು ತಿಮೊಥೇಯ ಬೆರೋಯದಲ್ಲೇ ಉಳಿದುಕೊಂಡರು.
15 : ಪೌಲನನ್ನು ಬಿಟ್ಟುಬರಲು ಹೋದವರು ಅವನ ಜೊತೆ ಅಥೆನ್ಸಿನವರೆಗೆ ಹೋದರು; ಅನಂತರ ಸೀಲ ಮತ್ತು ತಿಮೊಥೇಯರಿಬ್ಬರೂ ಸಾಧ್ಯವಾದಷ್ಟು ಬೇಗ ತನ್ನ ಬಳಿಗೆ ಬಂದು ಸೇರಬೇಕೆಂಬ ಆಜ್ಞೆಯನ್ನು ಪೌಲನಿಂದ ಪಡೆದು, ಅವರು ಬೆರೋಯಕ್ಕೆ ಹಿಂದಿರುಗಿದರು.
16 : ಅಥೆನ್ಸಿನಲ್ಲಿ ಪೌಲನು, ಸೀಲ ಮತ್ತು ತಿಮೊಥೇಯರನ್ನು ಎದುರುನೋಡುತ್ತಿದ್ದನು. ಆ ಪಟ್ಟಣದಲ್ಲಿ ಎಲ್ಲಿ ನೋಡಿದರಲ್ಲಿ ವಿಗ್ರಹಗಳಿರುವುದನ್ನು ಕಂಡು, ಅವನ ಮನಸ್ಸು ಕುದಿಯಿತು.
17 : ಅದುದರಿಂದ ಅವನು ಪ್ರಾರ್ಥನಾಮಂದಿರಕ್ಕೆ ಹೋಗಿ ಯೆಹೂದ್ಯರೊಡನೆ ಮತ್ತು ಯೆಹೂದ್ಯ ಮತಾವಲಂಬಿಗಳೊಡನೆ ಚರ್ಚಿಸತೊಡಗಿದನು. ಸಾರ್ವಜನಿಕ ಚೌಕದ ಬಳಿ, ಕಂಡ ಕಂಡವರೊಡನೆ ಪ್ರತಿದಿನವೂ ತರ್ಕಮಾಡಿದನು.
18 : ಕೆಲವು ಎಪಿಕೂರಿಯ ಮತ್ತು ಸ್ತೋಯಿಕ ತತ್ವಶಾಸ್ತ್ರಜ್ಞರೂ ಕೂಡ ಅವನೊಡನೆ ವಾದಿಸಿದರು. ಕೆಲವರು “ಈ ಬಾಯಿಬಡುಕ ಹೇಳುವುದಾದರೂ ಏನು?” ಎಂದರು. ಪೌಲನು ಯೇಸುಸ್ವಾಮಿಯ ವಿಷಯವಾಗಿಯೂ ಪುನರುತ್ಥಾನದ ವಿಷಯವಾಗಿಯೂ ಬೋಧಿಸುತ್ತಿದ್ದುದರಿಂದ ಮತ್ತೆ ಕೆಲವರು ‘ಇವನು ವಿದೇಶೀಯ ದೇವರುಗಳ ಬಗ್ಗೆ ಮಾತನಾಡುವಂತೆ ಕಾಣುತ್ತದೆ,’ ಎಂದರು.
19 : ಅವರು ಪೌಲನನ್ನು ಅರಿಯೊಪಾಗ ಎಂಬ ಸ್ಥಳಕ್ಕೆ ಕರೆತಂದು, “ನೀನು ಸಾರುತ್ತಿರುವ ನೂತನ ತತ್ವವನ್ನು ನಾವು ತಿಳಿದುಕೊಳ್ಳಬಹುದೇ?
20 : ನೀನು ಹೇಳುತ್ತಿರುವ ಕೆಲವು ಸಂಗತಿಗಳು ನಮಗೆ ವಿಚಿತ್ರವಾಗಿ ತೋರುತ್ತವೆ. ಆದ್ದರಿಂದ ಅವುಗಳ ಅರ್ಥವೇನೆಂದು ತಿಳಿಯ ಬಯಸುತ್ತೇವೆ,” ಎಂದರು.
21 : (ಅಥೆನ್ಸಿನ ನಿವಾಸಿಗಳು ಮತ್ತು ಅಲ್ಲಿ ವಾಸಿಸುತ್ತಿದ್ದ ವಿದೇಶಿಯರು ಅತ್ಯಾಧುನಿಕ ವಿದ್ಯಮಾನಗಳನ್ನು ಕುರಿತು ಮಾತನಾಡುವುದರಲ್ಲೂ ಕೇಳಿತಿಳಿಯುವುದರಲ್ಲೂ ಸಮಯ ಕಳೆಯುತ್ತಿದ್ದರು).
22 : ಪೌಲನು ಅರಿಯೊಪಾಗಿನ ಸಭೆಯ ಮುಂದೆ ನಿಂತು ಹೀಗೆಂದನು: “ಅಥೆನ್ಸಿನ ಮಹಾಜನರೇ, ನೀವು ಎಲ್ಲಾ ವಿಧದಲ್ಲೂ ಬಹು ಧರ್ಮನಿಷ್ಠರೆಂದು ನನಗೆ ತೋರುತ್ತದೆ.
23 : ನಿಮ್ಮ ಪಟ್ಟಣದಲ್ಲಿ ನಾನು ತಿರುಗಾಡುತ್ತಾ, ನೀವು ಪೂಜಿಸುವ ವಿಗ್ರಹಗಳನ್ನು ಗಮನಿಸುತ್ತಾ ಇದ್ದಾಗ ಒಂದು ಬಲಿಪೀಠವು ಕಣ್ಣಿಗೆ ಬಿದ್ದಿತು. ಅದರ ಮೇಲೆ ‘ಅಜ್ಞಾತ ದೇವರಿಗೆ’ ಎಂಬ ಲಿಖಿತವಿತ್ತು. ನೀವು ಅರಿಯದೆ ಆರಾಧಿಸುವ ಆ ದೇವರನ್ನೇ ಅರುಹಿಸಲು ನಾನು ಬಂದಿರುತ್ತೇನೆ.
24 : ಜಗತ್ತನ್ನು ಹಾಗೂ ಅದರಲ್ಲಿರುವ ಸಮಸ್ತವನ್ನೂ ಸೃಷ್ಟಿಸಿದ ದೇವರು ಇಹಪರಗಳಿಗೆ ಒಡೆಯರು; ಮಾನವನು ನಿರ್ಮಿಸಿದ ಗುಡಿಗಳಲ್ಲಿ ಅವರು ಮನೆಮಾಡುವಂಥವರಲ್ಲ.
25 : ಎಲ್ಲಾ ಜೀವಿಗಳಿಗೆ ಪ್ರಾಣವನ್ನೂ ಶ್ವಾಸವನ್ನೂ ಸಮಸ್ತವನ್ನೂ ಕೊಡುವವರು ಅವರೇ; ಎಂದೇ ಅವರಿಗಾಗಿ ಮಾನವನು ದುಡಿಯಬೇಕಾದ ಅವಶ್ಯಕತೆ ಇಲ್ಲ. ಅಂಥ ಕೊರತೆ ಅವರಿಗೇನೂ ಇಲ್ಲ.
26 : ಒಂದೇ ಮೂಲದಿಂದ ಅವರು ಎಲ್ಲಾ ಜನಾಂಗಗಳನ್ನು ಸೃಷ್ಟಿಸಿ ಭೂಮಂಡಲದಲ್ಲೆಲ್ಲಾ ಜೀವಿಸುವಂತೆ ಮಾಡಿದ್ದಾರೆ. ಆಯಾ ಜನಾಂಗದ ಕಾಲಾವಧಿಯನ್ನೂ ಅವರವರ ನೆಲೆಯ ಎಲ್ಲೆಮೇರೆಗಳನ್ನೂ ಮುಂಚಿತವಾಗಿ ಅವರೇ ನಿರ್ಧರಿಸಿದ್ದಾರೆ.
27 : ಜನರು ತಮ್ಮನ್ನು ಅರಸಬೇಕೆಂಬುದೇ ಅವರ ಉದ್ದೇಶ; ಹೀಗಾದರೂ ತಮ್ಮನ್ನು ಅರಸಿ ಸಾಕ್ಷಾತ್ಕರಿಸಿಕೊಂಡಾರು ಎಂದು ದೇವರು ಹೀಗೆ ಮಾಡಿದರು. ಆದರೂ, ನಮ್ಮಲ್ಲಿ ಯಾರೊಬ್ಬರಿಂದಲೂ ದೇವರು ದೂರವಿಲ್ಲ.
28 : ಏಕೆಂದರೆ, ‘ನಾವು ಜೀವಿಸುವುದೂ ಚಲಿಸುವುದೂ ಇರುವುದೂ ಅವರಲ್ಲೇ’; ನಿಮ್ಮ ಕವಿಗಳಲ್ಲೇ ಕೆಲವರು ಹೇಳಿರುವಂತೆ, ‘ನಾವು ನಿಜವಾಗಿ ದೇವರ ಮಕ್ಕಳು.’
29 : “ನಾವು ದೇವರ ಮಕ್ಕಳಾಗಿರುವುದರಿಂದ ಜನರು ಕಲಾಕುಶಲತೆಯಿಂದಲೂ ಕಲ್ಪನೆಯಿಂದಲೂ ರೂಪಿಸಿದ ಚಿನ್ನ, ಬೆಳ್ಳಿ, ಶಿಲೆಗಳ ಪ್ರತಿಮೆಗೆ ದೇವರು ಸಮಾನರೆಂದು ಭಾವಿಸಲಾಗದು.
30 : ಮಾನವರು ತಮ್ಮನ್ನು ಅರಿಯದೆ ಬಾಳಿದ ಕಾಲವನ್ನು ದೇವರು ಗಮನಕ್ಕೆ ತಂದುಕೊಳ್ಳಲಿಲ್ಲ. ಆದರೆ ಈಗ ಎಲ್ಲೆಡೆಯಲ್ಲಿರುವ ಸರ್ವಮಾನವರು ದುರ್ಮಾರ್ಗಗಳನ್ನು ಬಿಟ್ಟು ತಮಗೆ ಅಭಿಮುಖರಾಗಬೇಕೆಂದು ಆಜ್ಞಾಪಿಸುತ್ತಾರೆ.
31 : ಏಕೆಂದರೆ, ಅವರು ಒಂದು ದಿನವನ್ನು ಗೊತ್ತುಮಾಡಿದ್ದಾರೆ; ಆ ದಿನದಂದು ತಾವು ನೇಮಿಸಿದ ಒಬ್ಬ ವ್ಯಕ್ತಿಯ ಮುಖಾಂತರ ಇಡೀ ಜಗತ್ತಿಗೆ ನ್ಯಾಯನಿರ್ಣಯ ಮಾಡುವರು. ಇದನ್ನು ಎಲ್ಲರಿಗೂ ಖಚಿತಪಡಿಸಲೆಂದೇ ಆ ವ್ಯಕ್ತಿಯನ್ನು ಮರಣದಿಂದ ಪುನರುತ್ಥಾನಗೊಳಿಸಿದ್ದಾರೆ.”
32 : ಸತ್ತವರ ಪುನರುತ್ಥಾನದ ಬಗ್ಗೆ ಪೌಲನು ಮಾತಾಡಿದಾಗ ಕೆಲವರು ಪರಿಹಾಸ್ಯಮಾಡಿದರು. ಉಳಿದವರು, “ಈ ವಿಷಯದ ಬಗ್ಗೆ ನೀನು ಇನ್ನೊಮ್ಮೆ ಹೇಳಬಹುದು, ಆಗ ಕೇಳುತ್ತೇವೆ,” ಎಂದರು.
33 : ಹೀಗೆ ಪೌಲನು ಆ ಸಭೆಯಿಂದ ನಿರ್ಗಮಿಸಿದನು.
34 : ಕೆಲವರು ಅವನನ್ನು ಸೇರಿಕೊಂಡು ಭಕ್ತವಿಶ್ವಾಸಿಗಳಾದರು. ಇವರಲ್ಲಿ ಅರಿಯೊಪಾಗದ ದಿಯೊನಿಸಿಯನೂ ದಮಾರಿ ಎಂಬ ಸ್ತ್ರೀಯೂ ಮತ್ತಿತರರೂ ಇದ್ದರು.