Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಪ್ರೇ.ಕಾ


1 : ಪೌಲನು ದೆರ್ಬೆಗೂ ಅಲ್ಲಿಂದ ಲುಸ್ತ್ರಕ್ಕೂ ಪ್ರಯಾಣಮಾಡಿದನು. ತಿಮೊಥೇಯ ಎಂಬ ಕ್ರೈಸ್ತಭಕ್ತನು ಅಲ್ಲಿ ವಾಸಿಸುತ್ತಿದ್ದನು. ಇವನ ತಾಯಿ ಯೆಹೂದ್ಯಳು ಹಾಗೂ ಕ್ರೈಸ್ತಭಕ್ತಳು. ತಂದೆಯಾದರೋ ಗ್ರೀಕನು.
2 : ಲುಸ್ತ್ರ ಮತ್ತು ಇಕೋನಿಯದ ಸಹೋದರರೆಲ್ಲರಿಗೆ ತಿಮೊಥೇಯನ ಬಗ್ಗೆ ಸದಭಿಪ್ರಾಯವಿತ್ತು.
3 : ಪೌಲನು ತಿಮೊಥೇಯನನ್ನು ತನ್ನೊಡನೆ ಕರೆದುಕೊಂಡು ಹೋಗಲು ಅಪೇಕ್ಷಿಸಿದನು. ಆ ಪ್ರದೇಶಗಳಲ್ಲಿದ್ದ ಯೆಹೂದ್ಯರಿಗೆ ತಿಮೊಥೇಯನ ತಂದೆ ಗ್ರೀಕನೆಂದು ತಿಳಿದಿದ್ದುದರಿಂದ ಅವನಿಗೆ ಸುನ್ನತಿ ಮಾಡಿಸಿದನು.
4 : ಊರಿಂದ ಊರಿಗೆ ಪ್ರಯಾಣ ಮಾಡುತ್ತಾ, ಜೆರುಸಲೇಮಿನಲ್ಲಿದ್ದ ಪ್ರೇಷಿತರೂ ಸಭಾಪ್ರಮುಖರೂ ನಿರ್ಧರಿಸಿದ ನಿಯಮಗಳನ್ನು ಭಕ್ತರಿಗೆ ಬೋದಿಸುತ್ತಾ, ಅವುಗಳನ್ನು ಪಾಲಿಸುವಂತೆ ಹೇಳಿದರು.
5 : ಹೀಗೆ ಕ್ರೈಸ್ತ ಸಭೆಗಳು ವಿಶ್ವಾಸದಲ್ಲಿ ದೃಢಗೊಂಡು ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯತೊಡಗಿತು.
6 : ಏಷ್ಯದಲ್ಲಿ ಅವರು ಶುಭಸಂದೇಶವನ್ನು ಸಾರಕೂಡದೆಂದು ಪವಿತ್ರಾತ್ಮ ನಿಷೇಧಿಸಿದ್ದರಿಂದ ಅವರು ಫ್ರಿಜಿಯ ಮತ್ತು ಗಲಾತ್ಯ ಪ್ರದೇಶಗಳ ಮಾರ್ಗವಾಗಿ ಪ್ರಯಾಣಮಾಡಿದರು.
7 : ಮೂಸಿಯದ ಗಡಿಯನ್ನು ತಲುಪಿದಾಗ ಅವರು ಬಿಥೂನಿಯ ಪ್ರಾಂತ್ಯಕ್ಕೆ ಹೋಗಲು ಯತ್ನಿಸಿದರು. ಯೇಸುವಿನ ಆತ್ಮ ಅಲ್ಲಿಗೆ ಹೋಗಲು ಸಹ ಅವರನ್ನು ಬಿಡಲಿಲ್ಲ. 8ಆದುದರಿಂದ ಅವರು ಮೂಸಿಯವನ್ನು ಹಾದು ನೇರವಾಗಿ ತ್ರೋವಕ್ಕೆ ಹೋದರು.
9 : ಆ ರಾತ್ರಿ ಪೌಲನಿಗೆ ಒಂದು ದರ್ಶನವಾಯಿತು; ಮಕೆದೋನಿಯದ ಒಬ್ಬ ವ್ಯಕ್ತಿ ಅಲ್ಲಿ ನಿಂತು, “ಮಕೆದೋನಿಯಕ್ಕೆ ಬಂದು ನಮಗೆ ಸಹಾಯಮಾಡಿ,” ಎಂದು ಅಂಗಲಾಚಿದನು.
10 : ಪೌಲನಿಗೆ ಈ ದರ್ಶನವಾದ ತಕ್ಷಣ ಆ ಜನರಿಗೆ ಶುಭಸಂದೇಶವನ್ನು ಸಾರಲು ದೇವರು ನಮ್ಮನ್ನು ಕರೆದಿದ್ದಾರೆಂದು ನಾವು ಅರಿತುಕೊಂಡು ಮಕೆದೋನಿಯಕ್ಕೆ ಹೋಗಲು ಸಿದ್ಧರಾದೆವು.
11 : ನಾವು ತ್ರೋವದಲ್ಲಿ ಹಡಗುಹತ್ತಿ ಸಮೋಥ್ರಕ್ಕೆ ನೇರವಾಗಿ ಪ್ರಯಾಣಮಾಡಿದೆವು. ಮಾರನೆಯ ದಿನ ನೆಯಫೋಲನ್ನು ತಲುಪಿ,
12 : ಅಲ್ಲಿಂದ ಮಕೆದೋನಿಯದ ಪ್ರಮುಖ ಪಟ್ಟಣವಾದ ಫಿಲಿಪ್ಪಿಗೆ ಬಂದೆವು. ಇದು ರೋಮಿನ ವಸಾಹತು; ಇಲ್ಲಿ ಕೆಲವು ದಿನಗಳನ್ನು ಕಳೆದೆವು.
13 : ಪಟ್ಟಣದ ಹೊರಗಿರುವ ನದಿತೀರದ ಬಳಿ ಯೆಹೂದ್ಯರ ಪ್ರಾರ್ಥನಾ ಸ್ಥಳವಿರಬಹುದೆಂದು ಭಾವಿಸಿ ಸಬ್ಬತ್‍ದಿನ ಅಲ್ಲಿಗೆ ಹೋದೆವು. ನಾವು ಕುಳಿತುಕೊಂಡು ಅಲ್ಲಿ ಸೇರಿದ್ದ ಮಹಿಳೆಯರೊಡನೆ ಸಂಭಾಷಿಸಿದೆವು.
14 : ನಮ್ಮ ಬೋಧನೆಯನ್ನು ಕೇಳಿದ ಆ ಮಹಿಳೆಯರಲ್ಲಿ ಲಿಡಿಯ ಎಂಬವಳು ಒಬ್ಬಳು. ಈಕೆ ಥುವತ್ಯೆರ ಎಂಬ ಊರಿನವಳು; ಪಟ್ಟೆ ಪೀತಾಂಬರಗಳ ವ್ಯಾಪಾರಿ ಹಾಗೂ ದೇವಭಕ್ತೆ. ಪೌಲನ ಬೋಧನೆಗೆ ಕಿವಿಗೊಟ್ಟು ಗ್ರಹಿಸುವಂತೆ ಪ್ರಭು ಆಕೆಯ ಹೃದಯವನ್ನು ತೆರೆದರು.
15 : ಅಂತೆಯೇ ತನ್ನ ಮನೆಯವರ ಸಮೇತ ದೀಕ್ಷಾಸ್ನಾನವನ್ನು ಪಡೆದಳು. ಅನಂತರ, “ನಾನು ಪ್ರಭುವಿನ ನಿಜವಾದ ವಿಶ್ವಾಸಿಯೆಂದು ನೀವು ಒಪ್ಪಿಕೊಳ್ಳುವುದಾದರೆ ನನ್ನ ಮನೆಗೆ ಬಂದು ತಂಗಿರಿ,” ಎಂದು ನಮ್ಮನ್ನು ಒತ್ತಾಯ ಪೂರ್ವಕವಾಗಿ ಆಹ್ವಾನಿಸಿದಳು.
16 : ಒಂದು ದಿನ ನಾವು ಪ್ರಾರ್ಥನಾ ಸ್ಥಳಕ್ಕೆ ಹೋಗುತ್ತಿದ್ದೆವು. ಗಾರುಡಗಾತಿಯಾದ ಒಬ್ಬ ದಾಸಿ ನಮ್ಮನ್ನು ಎದುರುಗೊಂಡಳು. ಆ ಹುಡುಗಿ ಕಣಿಶಕುನ ಹೇಳಿ ತನ್ನ ಯಜಮಾನನಿಗೆ ತುಂಬಾ ಹಣ ಸಂಪಾದಿಸುತ್ತಿದ್ದಳು.
17 : ಅವಳು ಪೌಲನನ್ನು ಮತ್ತು ನಮ್ಮನ್ನು ಹಿಂಬಾಲಿಸುತ್ತಾ, “ಇವರು ಮಹೋನ್ನತ ದೇವರ ಕಿಂಕರರು; ಜೀವೋದ್ಧಾರದ ಮಾರ್ಗವನ್ನು ಇವರು ನಿಮಗೆ ಸಾರುತ್ತಾರೆ,” ಎಂದು ಚೀರುತ್ತಿದ್ದಳು.
18 : ಹೀಗೆ ದಿನೇದಿನೇ ಮಾಡುತ್ತಿದ್ದಳು. ಇದರಿಂದ ಪೌಲನಿಗೆ ಬಹಳ ಬೇಸರವಾಯಿತು. ಅವಳ ಕಡೆಗೆ ತಿರುಗಿ, ಅವಳನ್ನು ಹಿಡಿದಿದ್ದ ದೆವ್ವಕ್ಕೆ “ಇವಳನ್ನು ಬಿಟ್ಟುತೊಲಗು ಎಂದು ಯೇಸುಕ್ರಿಸ್ತರ ನಾಮದಲ್ಲಿ ನಿನಗೆ ಆಜ್ಞಾಪಿಸುತ್ತೇನೆ,” ಎಂದನು. ಆ ಕ್ಷಣವೇ ಅದು ಅವಳನ್ನು ಬಿಟ್ಟು ಹೋಯಿತು.
19 : ಹಣ ಗಳಿಸುತ್ತಿದ್ದ ಅವಳ ಯಜಮಾನನಿಗೆ ನಿರಾಶೆಯಾಯಿತು. ಅವರು ಪೌಲ ಮತ್ತು ಸೀಲರನ್ನು ಬಂಧಿಸಿ ಸಾರ್ವಜನಿಕ ನ್ಯಾಯಸ್ಥಾನದಲ್ಲಿದ್ದ ಅಧಿಕಾರಿಗಳ ಬಳಿಗೆ ಎಳೆದುಕೊಂಡು ಹೋದರು.
20 : ಅಲ್ಲಿದ್ದ ರೋಮಿನ ನ್ಯಾಯಾಧಿಪತಿಗಳ ಮುಂದೆ ನಿಲ್ಲಿಸಿ, “ಇವರು ನಮ್ಮ ಪಟ್ಟಣದಲ್ಲಿ ಗಲಭೆ ಎಬ್ಬಿಸುತ್ತಿದ್ದಾರೆ.
21 : ಇವರು ಯೆಹೂದ್ಯರು. ರೋಮನರಾದ ನಾವು ಅಂಗೀಕರಿಸಲು ಅಥವಾ ಅನುಸರಿಸಲು ಆಗದಂತಹ ಆಚಾರ ವಿಚಾರಗಳನ್ನು ಪ್ರಚಾರ ಮಾಡುತ್ತಿದ್ದಾರೆ,” ಎಂದರು.
22 : ಜನರ ಗುಂಪು ಅವರೊಡನೆ ಸೇರಿ ದೊಂಬಿಮಾಡಿತು. ನ್ಯಾಯಾಧಿಪತಿಗಳು ಪೌಲ ಮತ್ತು ಸೀಲರ ವಸ್ತ್ರಗಳನ್ನು ಕಿತ್ತುಹಾಕಿಸಿ ಛಡಿ ಏಟುಗಳನ್ನು ಕೊಡುವಂತೆ ಆಜ್ಞೆ ಮಾಡಿದರು.
23 : ಅವರನ್ನು ಚೆನ್ನಾಗಿ ಥಳಿಸಿದ ಮೇಲೆ ಸೆರೆಮನೆಯಲ್ಲಿ ಹಾಕಿ ಎಚ್ಚರಿಕೆಯಿಂದ ನೋಡಿಕೊಳ್ಳಬೇಕೆಂದು ಸೆರೆಮನೆಯ ಅಧಿಕಾರಿಗೆ ಅಪ್ಪಣೆ ವಿಧಿಸಲಾಯಿತು.
24 : ಅಂತೆಯೇ, ಆ ಅಧಿಕಾರಿ ಅವರನ್ನು ಸೆರೆಮನೆಯ ಒಳಕೋಣೆಗೆ ತಳ್ಳಿ ಅವರ ಕಾಲುಗಳನ್ನು ಮರದ ದಿಮ್ಮಿಗಳಿಗೆ ಬಿಗಿಸಿದನು.
25 : ಸುಮಾರು ನಡುರಾತ್ರಿಯ ಸಮಯ. ಪೌಲ ಮತ್ತು ಸೀಲ ಪ್ರಾರ್ಥನೆಮಾಡುತ್ತಾ ದೇವರಿಗೆ ಸ್ತುತಿಗೀತೆಗಳನ್ನು ಹಾಡುತ್ತಾ ಇದ್ದರು. ಇತರ ಕೈದಿಗಳೆಲ್ಲರೂ ಆಲಿಸುತ್ತಿದ್ದರು.
26 : ಇದ್ದಕ್ಕಿದ್ದಂತೆ ಭೀಕರ ಭೂಕಂಪ ಉಂಟಾಯಿತು. ಸೆರೆಮನೆಯ ಅಸ್ತಿವಾರವೇ ಕದಲಿತು. ಆ ಕ್ಷಣವೇ ಕದಗಳೆಲ್ಲಾ ತೆರೆದುವು. ಕೈದಿಗಳೆಲ್ಲರ ಬಂಧನಗಳು ಕಳಚಿಬಿದ್ದುವು.
28 : ಆಗ ಪೌಲನು ಗಟ್ಟಿಯಾಗಿ ಕೂಗುತ್ತಾ, “ನೀನೇನೂ ಹಾನಿಮಾಡಿಕೊಳ್ಳಬೇಡ, ನಾವೆಲ್ಲರೂ ಇಲ್ಲೇ ಇದ್ದೇವೆ,” ಎಂದನು.
29 : ಸೆರೆಮನೆಯ ಅಧಿಕಾರಿ ದೀಪವನ್ನು ತರಿಸಿ, ಒಳಗೆ ಧಾವಿಸಿ ಬಂದು, ಭಯದಿಂದ ನಡುಗುತ್ತಾ ಪೌಲ ಮತ್ತು ಸೀಲರ ಪಾದಕ್ಕೆ ಬಿದ್ದನು.
30 : ಅನಂತರ ಅವರನ್ನು ಹೊರಗೆ ಕರೆತಂದು, “ಸ್ವಾಮಿಗಳೇ, ಜೀವೋದ್ದಾರ ಪಡೆಯಲು ನಾನು ಮಾಡಬೇಕಾದುದು ಏನು?” ಎಂದು ವಿಚಾರಿಸಿದನು.
31 : “ಪ್ರಭು ಯೇಸುವಿನಲ್ಲಿ ವಿಶ್ವಾಸವಿಡು, ನೀನೂ ನಿನ್ನ ಮನೆಯವರೆಲ್ಲರೂ ಜೀವೋದ್ದಾರವನ್ನು ಹೊಂದುವಿರಿ,” ಎಂದು ಅವರು ಉತ್ತರಕೊಟ್ಟರು.
32 : ಅನಂತರ ಪ್ರಭವಿನ ಸಂದೇಶವನ್ನು ಅವನಿಗೂ ಅವನ ಮನೆಯಲ್ಲಿದ್ದ ಎಲ್ಲರಿಗೂ ಬೋಧಿಸಿದರು.
33 : ರಾತ್ರಿಯ ವೇಳೆಯಲ್ಲೇ ಸೆರೆಮನೆಯ ಅಧಿಕಾರಿ ಅವರನ್ನು ಕರೆದುಕೊಂಡು ಹೋಗಿ ಅವರ ಗಾಯಗಳನ್ನು ತೊಳೆದನು. ಅನಂತರ ಅವನೂ ಅವನ ಕುಟುಂಬದವರೂ ದೀಕ್ಷಾಸ್ನಾನವನ್ನು ಪಡೆದರು.
34 : ಬಳಿಕ ಪೌಲ ಮತ್ತು ಸೀಲರನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಊಟಬಡಿಸಿದನು. ದೇವರಲ್ಲಿ ವಿಶ್ವಾಸವಿಡುವ ಸದವಕಾಶ ದೊರಕಿದ್ದಕ್ಕಾಗಿ ಅವನೂ ಅವನ ಮನೆಯವರೆಲ್ಲರೂ ಉಲ್ಲಾಸಗೊಂಡರು.
35 : ಮಾರನೆಯ ಬೆಳಿಗ್ಗೆ ನ್ಯಾಯಾಧಿಪತಿಗಳು ಜವಾನರ ಮುಖಾಂತರ, “ಈ ವ್ಯಕ್ತಿಗಳನ್ನು ಬಿಟ್ಟುಬಿಡು,” ಎಂದು ಹೇಳಿಕಳುಹಿಸಿದರು.
36 : ಸೆರೆಮನೆಯ ಅಧಿಕಾರಿ ಪೌಲನ ಬಳಿಗೆ ಬಂದು, “ನ್ಯಾಯಾಧಿಪತಿಗಳು ನಿಮ್ಮನ್ನು ಬಿಡುಗಡೆ ಮಾಡುವಂತೆ ಹೇಳಿಕಳುಹಿಸಿದ್ದಾರೆ; ನೀವು ನೆಮ್ಮದಿಯಿಂದ ಹೊರಟು ಹೋಗಬಹುದು,” ಎಂದು ವರದಿ ಮಾಡಿದನು.
37 : ಆದರೆ ಪೌಲನು ಅವರಿಗೆ, “ನಮ್ಮನ್ನು ಶಿಕ್ಷೆಗೊಳಪಡಿಸುವಂಥ ಅಪರಾಧವನ್ನೇನೂ ನಾವು ಮಾಡಿಲ್ಲ. ಅಲ್ಲದೆ ನಾವು ರೋಮಿನ ಪೌರರು, ಆದರೂ ನಮ್ಮನ್ನು ಬಹಿರಂಗವಾಗಿ ಛಡಿಗಳಿಂದ ಹೊಡಿಸಿದ್ದಾರೆ. ಸೆರೆಮನೆಗೆ ತಳ್ಳಿದ್ದಾರೆ; ಈಗ ಗೋಪ್ಯವಾಗಿ ನಮ್ಮನ್ನು ಕಳುಹಿಸಿಬಿಡಬೇಕೆಂದಿದ್ದಾರೆಯೆ? ಇಲ್ಲ, ಇದು ಸಾಧ್ಯವಿಲ್ಲ. ನ್ಯಾಯಾಧಿಪತಿಗಳೇ ಖುದ್ದಾಗಿ ಇಲ್ಲಿಗೆ ಬಂದು ನಮ್ಮನ್ನು ಬಿಡುಗಡೆ ಮಾಡಲಿ,” ಎಂದನು.
38 : ಜವಾನರು ಈ ಮಾತುಗಳನ್ನು ನ್ಯಾಯಾಧಿಪತಿಗಳಿಗೆ ವರದಿ ಮಾಡಿದರು. ಅವರು ಪೌಲ ಮತ್ತು ಸೀಲ ರೋಮಿನ ಪೌರರೆಂದು ಕೇಳಿ ಭಯಪಟ್ಟರು.
39 : ಆದುದರಿಂದ ಅವರೇ ಬಂದು ಕ್ಷಮೆಕೋರಿ, ಸೆರೆಮನೆಯಿಂದ ಬಿಡುಗಡೆಮಾಡಿ, ನಗರವನ್ನು ಬಿಟ್ಟು ಹೋಗಬೇಕೆಂದು ವಿನಂತಿಸಿದರು.
40 : ಪೌಲ ಮತ್ತು ಸೀಲ ಸೆರೆಮನೆಯಿಂದ ಹೊರಟು ಲಿಡಿಯಳ ಮನೆಗೆ ಹೋದರು. ಭಕ್ತವಿಶ್ವಾಸಿಗಳನ್ನು ಸಂಧಿಸಿ ಅವರಿಗೆ ಪ್ರೋತ್ಸಾಹದ ಮಾತುಗಳನ್ನಾಡಿ ಅಲ್ಲಿಂದ ನಿರ್ಗಮಿಸಿದರು.

· © 2017 kannadacatholicbible.org Privacy Policy