1 : ಜುದೇಯದಿಂದ ಕೆಲವು ಜನರು ಅಂತಿಯೋಕ್ಯಕ್ಕೆ ಬಂದು ಅಲ್ಲಿನ ಭಕ್ತವಿಶ್ವಾಸಿಗಳಿಗೆ, “ಮೋಶೆಯ ನಿಯಮದಂತೆ ನೀವು ಸುನ್ನತಿ ಮಾಡಿಸಿಕೊಂಡ ಹೊರತು ಜೀವೋದ್ಧಾರ ಪಡೆಯಲಾರಿರಿ,” ಎಂದು ಬೋಧಿಸತೊಡಗಿದರು.
2 : ಈ ವಿಷಯವಾಗಿ ಅವರಿಗೂ ಪೌಲ ಮತ್ತು ಬಾರ್ನಬರಿಗೂ ಭಿನ್ನಾಭಿಪ್ರಾಯ ಉಂಟಾಗಿ ತೀವ್ರ ವಿವಾದವೆದ್ದಿತು. ಆದುದರಿಂದ ಈ ಸಮಸ್ಯೆಯ ಬಗ್ಗೆ ಪೌಲ ಮತ್ತು ಬಾರ್ನಬರು ಅಂತಿಯೋಕ್ಯದ ಇನ್ನೂ ಕೆಲವರ ಸಮೇತ ಜೆರುಸಲೇಮಿಗೆ ಹೋಗಿ ಪ್ರೇಷಿತರನ್ನೂ ಪ್ರಮುಖರನ್ನೂ ಕಾಣಬೇಕೆಂದು ತೀರ್ಮಾನಿಸಲಾಯಿತು.
3 : ಅಂತೆಯೇ ಕ್ರೈಸ್ತಸಭೆ ಅವರನ್ನು ಬೀಳ್ಕೊಟ್ಟಿತು. ಅವರು ಫೆನಿಷ್ಯ ಹಾಗೂ ಸಮಾರಿಯದ ಮಾರ್ಗವಾಗಿ ಪ್ರಯಾಣಮಾಡುತ್ತಾ ಅಲ್ಲಿಯ ಭಕ್ತವಿಶ್ವಾಗಳಿಗೆ ಅನ್ಯಧರ್ಮೀಯರು ಹೇಗೆ ಕ್ರೈಸ್ತರಾದರೆಂಬುದನ್ನು ವಿವರಿಸಿದರು. ಇದನ್ನು ಕೇಳಿದ ಭಕ್ತಾದಿಗಳು ಸಂತೋಷಭರಿತರಾದರು.
4 : ಪೌಲ, ಬಾರ್ನಬ ಮತ್ತು ಸಂಗಡಿಗರು ಜೆರುಸಲೇಮಿಗೆ ಆಗಮಿಸಿದಾಗ, ಅಲ್ಲಿಯ ಕ್ರೈಸ್ತಸಭೆ ಪ್ರೇಷಿತರ ಹಾಗೂ ಪ್ರಮುಖರ ಸಮೇತ ಅವರನ್ನು ಸ್ವಾಗತಿಸಿತು. ಆಗ ಅವರು, ದೇವರು ತಮ್ಮೊಡನೆ ಇದ್ದು, ಸಾಧಿಸಿದ ಎಲ್ಲಾ ಕಾರ್ಯಗಳನ್ನು ವರದಿ ಮಾಡಿದರು.
6 : ಈ ಸಮಸ್ಯೆಯನ್ನು ಪರಿಶೀಲಿಸಲು ಪ್ರೇಷಿತರು ಮತ್ತು ಸಭಾಪ್ರಮುಖರು ಸಭೆ ಸೇರಿದರು.
7 : ಸುದೀರ್ಘ ಚರ್ಚೆಯಾದ ನಂತರ ಪೇತ್ರನು ಎದ್ದು ನಿಂತು ಹೀಗೆಂದನು: “ಸಹೋದರರೇ, ಅನ್ಯಧರ್ಮೀಯರು ಶುಭಸಂದೇಶವನ್ನು ನನ್ನ ಬಾಯಿಯಿಂದ ಕೇಳಿ ವಿಶ್ವಾಸಿಸಲೆಂದು ದೇವರು ನಿಮ್ಮ ಮಧ್ಯೆಯಿಂದ ನನ್ನನ್ನು ಬಹುದಿನಗಳ ಹಿಂದೆಯೇ ಆರಿಸಿಕೊಂಡರು. ಇದು ನಿಮಗೆ ತಿಳಿದ ವಿಷಯ.
8 : ಮಾನವನ ಅಂತರಂಗವನ್ನು ಅರಿತ ದೇವರು ನಿಮಗೆ ಕೊಟ್ಟಂತೆಯೇ ಅವರಿಗೂ ಪವಿತ್ರಾತ್ಮ ಅವರನ್ನು ಕೊಟ್ಟರು. ಅವರೂ ತಮ್ಮವರೇ ಎಂದು ವ್ಯಕ್ತಪಡಿಸಿದರು.
9 : ಅವರಿಗೂ ನಮಗೂ ಯಾವ ಭೇದಭಾವವನ್ನು ತೋರಿಸದೆ ವಿಶ್ವಾಸದ ನಿಮಿತ್ತ ದೇವರು ಅವರ ಪಾಪಗಳನ್ನು ಕ್ಷಮಿಸಿದರು.
10 : ಆದುದರಿಂದ ನಮ್ಮ ಪೂರ್ವಜರಿಂದಾಗಲೀ ನಮ್ಮಿಂದಾಗಲೀ ಹೊರಲಾಗದಂಥ ಹೊರೆಯನ್ನು ಈ ಅನುಯಾಯಿಗಳ ಮೇಲೆ ಏಕೆ ಹೊರಿಸುತ್ತೀರಿ? ಹೀಗೆ ದೇವರನ್ನೇಕೆ ಕೆಣಕುತ್ತೀರಿ?
11 : ಇಲ್ಲ, ಇದು ಸರಿಯಲ್ಲ. ನಮಗೇ ಆಗಲಿ, ಅವರಿಗೇ ಆಗಲಿ, ಜೀವೋದ್ಧಾರ ದೊರಕುವುದು ಪ್ರಭು ಯೇಸುವಿನ ಅನುಗ್ರಹದಿಂದಲೇ. ಇದೇ ನಮ್ಮ ವಿಶ್ವಾಸ.”
12 : ಇದನ್ನು ಕೇಳಿದ್ದೇ, ಸಭೆ ಸೇರಿದ್ದವರೆಲ್ಲರೂ ಮೌನರಾದರು. ಪೌಲ ಮತ್ತು ಬಾರ್ನಬರಿಗೆ ಕಿವಿಗೊಟ್ಟರು. ದೇವರು ಅವರ ಮುಖಾಂತರ ಅನ್ಯಧರ್ಮೀಯರ ಮಧ್ಯೆ ಎಸಗಿದ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಕುರಿತು ಕೇಳಿದರು.
13 : ಇದಾದ ಮೇಲೆ ಯಕೋಬನು ಎದ್ದು ಹೀಗೆಂದನು: “ಸಹೋದರರೇ ಕೇಳಿ,
14 : ದೇವರು ಈ ಮೊದಲೇ ಅನ್ಯಧರ್ಮೀಯರಲ್ಲಿ ಆಸಕ್ತಿಗೊಂಡು ಅವರಿಂದಲೂ ಸ್ವಂತ ಪ್ರಜೆಯನ್ನು ಆರಿಸಿಕೊಂಡಿದ್ದಾರೆ, ಎಂಬ ವಿಷಯವನ್ನು ಸಿಮೋನನು ಈಗ ತಾನೇ ವಿವರಿಸಿದ್ದಾನೆ.
15 : ಇದಕ್ಕೂ ಪ್ರವಾದಿಗಳ ಪ್ರವಚನಗಳಿಗೂ ಪೂರ್ಣಸಾಮರಸ್ಯವಿದೆ.
16 : ‘ಅಳಿದುಹೋದ ದಾವೀದನ ಮನೆತನವನು
ಪುನರ್‍ಸ್ಥಾಪಿಸಲು ಮರಳಿ ಬರುವೆನು
ಪಾಳುಬಿದ್ದುದನು ಜೀರ್ಣೋದ್ಧಾರ
ಗೊಳಿಸುವೆನು
ಸುಭದ್ರವಾಗಿ ನಿಲ್ಲಿಸುವೆನು ಅದನ್ನು
17 : ನನ್ನವರೆಂದು ನಾನು ಕರೆದ ಎಲ್ಲ
ಅನ್ಯಧರ್ಮೀಯರು
ಉಳಿದೆಲ್ಲ ಮಾನವರು ನನ್ನತ್ತ ಬರಲಿಹರು
18 : ಎಂಬೀ ಸರ್ವೇಶ್ವರನ ನುಡಿ
ಎಂದಿನಿಂದಲೋ ತಿಳಿದಿಹುದು.’
19 : “ಆದುದರಿಂದ ನನ್ನ ತೀರ್ಮಾನವೇನೆಂದರೆ: ದೇವರ ಕಡೆಗೆ ತಿರುಗುತ್ತಿರುವ ಅನ್ಯಧರ್ಮೀಯರನ್ನು ತೊಂದರೆಗೆ ಈಡುಮಾಡಬಾರದು.
20 : ಅದಕ್ಕೆ ಬದಲಾಗಿ ನಾವು ಅವರಿಗೆ ಪತ್ರ ಬರೆದು, ‘ವಿಗ್ರಹಗಳಿಗೆ ನೈವೇದ್ಯವಾದುದು ಅಪವಿತ್ರವಾದುದು; ಅದನ್ನು ಸೇವಿಸಬಾರದು; ಅನೈತಿಕತೆಯಿಂದ ದೂರವಿರಬೇಕು; ರಕ್ತವನ್ನಾಗಲಿ, ಕುತ್ತಿಗೆ ಹಿಸುಕಿದ ಪ್ರಾಣಿಗಳನ್ನಾಗಲಿ ತಿನ್ನಬಾರದು,’ ಎಂದು ತಿಳುವಳಿಕೆ ಕೊಡಬೇಕು.
21 : ಏಕೆಂದರೆ ಪುರಾತನ ಕಾಲಂದಿದಲೂ ಪ್ರತಿಯೊಂದು ಸಬ್ಬತ್‍ದಿನ ಮೋಶೆಯ ಧರ್ಮಶಾಸ್ತ್ರವನ್ನು ಪ್ರಾರ್ಥನಾ ಮಂದಿರಗಳಲ್ಲಿ ಓದಲಾಗುತ್ತಿದೆ ಮತ್ತು ಆತನ ಬೋಧನೆಯನ್ನು ಪ್ರತಿ ನಗರದಲ್ಲೂ ಸಾರಲಾಗುತ್ತಿದೆ,” ಎಂದನು.
22 : ಅನಂತರ ಪ್ರೇಷಿತರೂ ಸಭಾಪ್ರಮುಖರೂ ಇಡೀ ಧರ್ಮಸಭೆಯ ಸಮ್ಮತಿ ಪಡೆದು, ತಮ್ಮಲ್ಲಿ ಕೆಲವರನ್ನು ಆರಿಸಿ, ಪೌಲ ಮತ್ತು ಬಾರ್ನಬರೊಂದಿಗೆ ಅಂತಿಯೋಕ್ಯಕ್ಕೆ ಕಳುಹಿಸಬೇಕೆಂದು ನಿರ್ಧರಿಸಿದರು. ಅಂತೆಯೇ, ಸಹೋದರರಲ್ಲಿ ಬಹು ಗೌರವಾನ್ವಿತರಾದ ಬಾರ್ಸಬ ಎಂದು ಕರೆಯಲಾದ ಯೂದ ಮತ್ತು ಸೀಲ ಎಂಬ ಇಬ್ಬರನ್ನು ಆರಿಸಿದರು. ಈ ಕೆಳಗಿನ ಪತ್ರವನ್ನು ಬರೆದು ಅವರ ಕೈಯಲ್ಲಿ ಕಳುಹಿಸಿದರು.
23 : “ಅಂತಿಯೋಕ್ಯ, ಸಿರಿಯ ಮತ್ತು ಸಿಲಿಸಿಯಗಳಲ್ಲಿ ವಾಸಿಸುವ ಯೆಹೂದ್ಯೇತರ ಸಹೋದರರಿಗೆ -
ಪ್ರೇಷಿತರೂ ಸಭಾಪ್ರಮುಖರೂ ನಿಮ್ಮ ಸಹೋದರರೂ ಆದ ನಮ್ಮ ಶುಭಾಶಯಗಳು!
24 : ನಮ್ಮ ಕಡೆಯ ಕೆಲವು ಜನರು ನಮ್ಮಿಂದ ಯಾವ ಆದೇಶವನ್ನೂ ಪಡೆಯದೆ ನಿಮ್ಮನ್ನು ತೊಂದರೆಗೆ ಈಡುಮಾಡಿ ನಿಮ್ಮ ಮನಸ್ಸನ್ನು ಕಲಕಿದರೆಂಬ ಸಮಾಚಾರ ನಮ್ಮ ಗಮನಕ್ಕೆ ಬಂದಿದೆ.
25 : ಆದುದರಿಂದ ನಾವೆಲ್ಲರೂ ಸಭೆಸೇರಿ ಪ್ರತಿನಿಧಿಗಳನ್ನು ಆರಿಸಿ ನಿಮ್ಮಲ್ಲಿಗೆ ಕಳುಹಿಸಲು ನಿರ್ಧರಿಸಿದೆವು.
26 : ನಮ್ಮ ಪ್ರಭುವಾದ ಯೇಸುಕ್ರಿಸ್ತರಿಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿರುವ ನಮ್ಮೊಲವಿನ ಬಾರ್ನಬ ಮತ್ತು ಪೌಲರೊಡನೆ ಈ ಪ್ರತಿನಿಧಿಗಳು ಬರುತ್ತಿದ್ದಾರೆ.
27 : ಇವರೇ ನಾವು ಕಳುಹಿಸುತ್ತಿರುವ ಯೂದ ಮತ್ತು ಸೀಲ. ಇವರು ನಾವು ಬರೆದಿರುವುದನ್ನು ನಿಮಗೆ ಖುದ್ದಾಗಿ ತಿಳಿಸುವರು.
28 : ವಿಗ್ರಹಗಳಿಗೆ ನೈವೇದ್ಯವಾದುದು ಅಪವಿತ್ರವಾದುದು. ಅದನ್ನು ಸೇವಿಸಬಾರದು; ರಕ್ತವನ್ನಾಗಲಿ, ಕುತ್ತಿಗೆ ಹಿಸುಕಿಕೊಂದ ಪ್ರಾಣಿಗಳನ್ನಾಗಲಿ ತಿನ್ನಬಾರದು; ಅನೈತಿಕತೆಯಿಂದ ದೂರವಿರಬೇಕು.
29 : ಈ ಅಗತ್ಯ ನಿಯಮಗಳ ಹೊರತು ಬೇರೆ ಯಾವ ಹೊರೆಯನ್ನೂ ನಿಮ್ಮ ಮೇಲೆ ಹೇರುವುದು ವಿಹಿತವಲ್ಲವೆಂಬುದು ಪವಿತ್ರಾತ್ಮ ಅವರ ಹಾಗೂ ನಮ್ಮ ತೀರ್ಮಾನ. ಈ ನಿಯಮಗಳನ್ನು ಅನುಸರಿಸಿದರೆ, ನಿಮಗೆ ಒಳಿತಾಗುವುದು, ನಿಮಗೆ ಶುಭವಾಗಲಿ!”
30 : ಅಂತೆಯೇ ಪ್ರತಿನಿಧಿಗಳು ಅಲ್ಲಿಂದ ಅಪ್ಪಣೆ ಪಡೆದು ಅಂತಿಯೋಕ್ಯಕ್ಕೆ ಹೋದರು. ಅಲ್ಲಿ ಭಕ್ತ ಸಭೆಯನ್ನು ಒಟ್ಟುಗೂಡಿಸಿ ಅವರಿಗೆ ಆ ಪತ್ರವನ್ನು ಕೊಟ್ಟರು.
31 : ಪತ್ರದಲ್ಲಿದ್ದ ಪ್ರೋತ್ಸಾಹದಾಯಕ ಸಂದೇಶವನ್ನು ಓದಿದ್ದೇ ಭಕ್ತಾದಿಗಳು ಆನಂದಭರಿತರಾದರು.
32 : ಸೀಲ ಮತ್ತು ಯೂದ ಸ್ವತಃ ಪ್ರವಾದಿಗಳಾದುದರಿಂದ ಸುದೀರ್ಘ ಮಾತುಕತೆಗಳಿಂದ ಭಕ್ತರಲ್ಲಿ ಧೈರ್ಯಸ್ಥೈರ್ಯವನ್ನು ಉಂಟುಮಾಡಿದರು.
33 : ಕೆಲವು ದಿನಗಳಾದ ಮೇಲೆ ಅಲ್ಲಿಯ ಭಕ್ತರನ್ನು ಬೀಳ್ಕೊಟ್ಟು ತಮ್ಮನ್ನು ಕಳುಹಿಸಿದವರ ಬಳಿಗೆ ಹಿಂದಿರುಗಲು ಸಿದ್ಧರಾದರು.
34 : ಸೀಲನಾದರೋ ಅಲ್ಲೇ ಉಳಿದುಕೊಳ್ಳಲು ನಿರ್ಧರಿಸಿದನು.
35 : ಇತ್ತ ಪೌಲ ಮತ್ತು ಬಾರ್ನಬ ಅಂತಿಯೋಕ್ಯದಲ್ಲೇ ತಂಗಿದ್ದು ಅನೇಕರೊಡಗೂಡಿ ಪ್ರಭುವಿನ ವಾಕ್ಯವನ್ನು ಬೋಧಿಸುತ್ತಾ ಶುಭಸಂದೇಶವನ್ನು ಸಾರುತ್ತಾ ಇದ್ದರು.
36 : ಕೆಲವು ಕಾಲದ ನಂತರ ಪೌಲನು, “ನಾವು ಪ್ರಭುವಿನ ವಾಕ್ಯವನ್ನು ಈಗಾಗಲೇ ಬೋಧಿಸಿದ ಪ್ರತಿಯೊಂದು ಪಟ್ಟಣಗಳಿಗೆ ಪುನಃ ಹೋಗೋಣ. ಅಲ್ಲಿ ನಮ್ಮ ಸಹೋದರರನ್ನು ಸಂದರ್ಶಿಸಿ ಅವರು ಹೇಗಿದ್ದಾರೆಂದು ನೋಡಿ ಬರೋಣ ಬಾ,” ಎಂದು ಬಾರ್ನಬನನ್ನು ಕರೆದನು.
37 : ಮಾರ್ಕನೆಂದು ಹೆಸರುಗೊಂಡ ಯೊವಾನ್ನನನ್ನು ತಮ್ಮ ಸಂಗಡ ಕರೆದುಕೊಂಡು ಹೋಗಬೇಕೆಂಬುದು ಬಾರ್ನಬನ ಇಷ್ಟವಾಗಿತ್ತು.
38 : ಆದರೆ ಪಾಂಫೀಲಿಯದಲ್ಲಿ ಇದ್ದಾಗ ಧರ್ಮಪ್ರಚಾರ ಕಾರ್ಯದಲ್ಲಿ ಸಹಕರಿಸದೆ ತಮ್ಮನ್ನು ಬಿಟ್ಟಗಲಿದ ಅವನನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದು ಉಚಿತವಲ್ಲವೆಂಬುದು ಪೌಲನ ಅಭಿಪ್ರಾಯ.
39 : ಹೀಗೆ ಇವರಿಬ್ಬರಲ್ಲಿ ತೀವ್ರ ವಾಗ್ವಾದ ಉಂಟಾಯಿತು. ಒಬ್ಬರನ್ನೊಬ್ಬರು ಬಿಟ್ಟು ಅಗಲಬೇಕಾಯಿತು. ಬಾರ್ನಬನು ಮಾರ್ಕನನ್ನು ಕರೆದುಕೊಂಡು ಸೈಪ್ರಸ್ ದ್ವೀಪಕ್ಕೆ ನೌಕಾಯಾನ ಮಾಡಿದನು.
40 : ಪೌಲನು ಸೀಲನನ್ನು ಆರಿಸಿಕೊಂಡು ಅವನೊಡನೆ ತೆರಳಿದನು. ಸಹೋದರರು ಅವನನ್ನು ಪ್ರಭುವಿನ ಕೃಪಾಶ್ರಯಕ್ಕೆ ಒಪ್ಪಿಸಿ ಕಳುಹಿಸಿಕೊಟ್ಟರು.
41 : ಅವನು ಸಿರಿಯ ಮತ್ತು ಸಿಲಿಸಿಯಗಳನ್ನು ಹಾದು ಹೋಗುತ್ತಾ, ಅಲ್ಲಿದ್ದ ಕ್ರೈಸ್ತಸಭೆಗಳನ್ನು ದೃಢಪಡಿಸುತ್ತಾ ಪ್ರಯಾಣಬೆಳೆಸಿದನು.