Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಪ್ರೇ.ಕಾ


1 : ಅಂತಿಯೋಕ್ಯದ ಧರ್ಮಸಭೆಯಲ್ಲಿ ಕೆಲವು ಪ್ರವಾದಿಗಳೂ ಬೋಧಕರೂ ಇದ್ದರು. ಅವರಾರೆಂದರೆ: ಬಾರ್ನಬ, ಕಾಳನೆಂದು ಕರೆಯಲಾದ ಸಿಮೆಯೋನ್, ಸಿರೇನಿನ ಲೂಸಿಯಸ್, ಸಾಮಂತ ಹೆರೋದನ ಬಾಲ್ಯಸ್ನೇಹಿತ ಮೆನಹೇನ ಮತ್ತು ಸೌಲ
2 : ಒಂದು ದಿನ ಅವರು ದೇವಾರಾಧನೆಯಲ್ಲೂ ಉಪವಾಸ ವ್ರತದಲ್ಲೂ ನಿರತರಾಗಿದ್ದಾಗ ಪವಿತ್ರಾತ್ಮ, “ಬಾರ್ನಬ ಮತ್ತು ಸೌಲರನ್ನು ನಾನು ಯಾವ ಕಾರ್ಯಕ್ಕಾಗಿ ಕರೆದಿದ್ದೇನೋ ಆ ಕಾರ್ಯಕ್ಕಾಗಿ ವಿೂಸಲಾಗಿಡಿ,” ಎಂದರು.
3 : ಅಂತೆಯೇ ಅವರು ಉಪವಾಸವಿದ್ದು, ಪ್ರಾರ್ಥನೆ ಮಾಡಿ, ಇವರಿಬ್ಬರ ಮೇಲೆ ಹಸ್ತನಿಕ್ಷೇಪಮಾಡಿ ಕಳುಹಿಸಿಕೊಟ್ಟರು.
4 : ಸೈಪ್ರಸ್ ದ್ವೀಪದಲ್ಲಿ ಧರ್ಮಪ್ರಚಾರ ಹೀಗೆ ಪವಿತ್ರಾತ್ಮ ಅವರೇ ಕಳುಹಿಸಿದ ಬಾರ್ನಬ ಮತ್ತು ಸೌಲ ಸೆಲೂಸಿಯಾಕ್ಕೆ ಹೋದರು. ಅಲ್ಲಿಂದ ಸೈಪ್ರಸ್ ದ್ವೀಪಕ್ಕೆ ನೌಕಾಯಾನ ಮಾಡಿದರು.
5 : ಅವರು ಸಲವಿೂಸ್ ಎಂಬ ಸ್ಥಳಕ್ಕೆ ಬಂದಾಗ ಯೆಹೂದ್ಯರ ಪ್ರಾರ್ಥನಾ ಮಂದಿರಗಳಿಗೆ ಹೋಗಿ ಶುಭಸಂದೇಶವನ್ನು ಸಾರಿದರು. ಮಾರ್ಕನೆನಿಸಿಕೊಂಡ ಯೊವಾನ್ನ ಅವರ ಸಂಗಡವಿದ್ದು ಅವರಿಗೆ ನೆರವಾಗುತ್ತಿದ್ದನು.
6 : ಅವರು ಆ ದ್ವೀಪದಲ್ಲೆಲ್ಲಾ ಪ್ರಯಾಣ ಮಾಡುತ್ತಾ ಪಾಫೊಸ್ ಎಂಬ ಊರಿಗೆ ಹೋದರು. ಅಲ್ಲಿ ‘ಬಾರ್ ಯೇಸು’ ಎಂಬ ಮಂತ್ರವಾದಿಯನ್ನು ಕಂಡರು.
7 : ತಾನೊಬ್ಬ ಪ್ರವಾದಿಯೆಂದು ನಟಿಸುತ್ತಿದ್ದ ಯೆಹೂದ್ಯ ಅವನು; ಮಾತ್ರವಲ್ಲ, ಅಲ್ಲಿಯ ರಾಜ್ಯಪಾಲನಾಗಿದ್ದ ಸೆಗ್ರ್ಯಪೌಲನ ಪರಿವಾರಕ್ಕೆ ಸೇರಿದ್ದನು. ಈ ರಾಜ್ಯಪಾಲನೊಬ್ಬ ಜ್ಞಾನಿ. ಇವನು ದೇವರ ವಾಕ್ಯವನ್ನು ಕೇಳಲಪೇಕ್ಷಿಸಿ ಬಾರ್ನಬ ಮತ್ತು ಸೌಲರನ್ನು ಆಹ್ವಾನಿಸಿದನು.
8 : ಆದರೆ ಆ ಮಂತ್ರವಾದಿ (ಗ್ರೀಕ್ ಭಾಷೆಯಲ್ಲಿ ಅವನನ್ನು ‘ಎಲಿಮ’ ಎಂದು ಕರೆಯುತ್ತಿದ್ದರು.) ಅವರನ್ನು ವಿರೋಧಿಸಿದನು. ರಾಜ್ಯಪಾಲನು ವಿಶ್ವಾಸಿಯಾಗದಂತೆ ತಡೆಯಲು ಯತ್ನಿಸಿದನು.
9 : ಆಗ, ಪೌಲ ಎಂದು ಹೆಸರುಗೊಂಡಿದ್ದ ಸೌಲನು ಪವಿತ್ರಾತ್ಮಭರಿತನಾಗಿ ಆ ಮಂತ್ರವಾದಿಯನ್ನು ದಿಟ್ಟಿಸಿ ನೋಡಿದನು.
10 : “ಎಲವೋ ಪಿಶಾಚಿಕೋರನೇ, ಸರ್ವಸನ್ಮಾರ್ಗಕ್ಕೆ ಶತ್ರು ನೀನು; ಎಲ್ಲಾ ತಂತ್ರ ಕುತಂತ್ರಗಳು ನಿನ್ನಲ್ಲಿ ತುಂಬಿವೆ. ಪ್ರಭುವಿನ ಸನ್ಮಾರ್ಗಕ್ಕೆ ಅಡ್ಡಿ ಆತಂಕಗಳನ್ನು ಒಡ್ಡುತ್ತಿರುವೆಯಾ? ಇಗೋ, ಈಗ ಪ್ರಭುವಿನ ಶಾಪ ನಿನ್ನ ಮೇಲಿದೆ!
11 : ನೀನು ಬೆಳಕನ್ನು ಕಾಣದೆ ಕೆಲವು ಕಾಲ ಕುರುಡನಾಗಿರುವೆ,” ಎಂದನು. ಆ ಕ್ಷಣವೇ ಎಲಿಮನ ಕಣ್ಣು ಮಬ್ಬಾಯಿತು; ಕತ್ತಲೆ ಕವಿದಂತಾಯಿತು; ಯಾರಾದರೂ ಕೈಹಿಡಿದು ನಡೆಸಲೆಂದು ಅವನು ತಡವರಿಸಲಾರಂಭಿಸಿದನು.
12 : ನಡೆದುದನ್ನು ಕಂಡ ರಾಜ್ಯಪಾಲನು ಪ್ರಭುವನ್ನು ವಿಶ್ವಾಸಿಸಿದನು; ಅವರನ್ನು ಕುರಿತ ಬೋಧನೆಯನ್ನು ಕೇಳಿ ವಿಸ್ಮಿತನಾದನು.
13 : ಪಿಸಿದಿಯದ ಅಂತಿಯೋಕ್ಯದಲ್ಲಿ ಪೌಲನ ಪ್ರಬೋಧನೆ ಪೌಲ ಮತ್ತು ಸಂಗಡಿಗರು ಪಾಫೊಸಿನಿಂದ ನೌಕಾಯಾನ ಮಾಡಿ ಪಾಂಫೀಲಿಯದ ಪೆರ್ಗ ಎಂಬಲ್ಲಿಗೆ ಬಂದರು. ಮಾರ್ಕನೆನಿಸಿಕೊಂಡ ಯೊವಾನ್ನನು ಅವರನ್ನು ಅಲ್ಲೇ ಬಿಟ್ಟು ಜೆರುಸಲೇಮಿಗೆ ಹಿಂದಿರುಗಿದನು.
14 : ಉಳಿದವರು ಪೆರ್ಗದಿಂದ ಹೊರಟು ಪಿಸಿದಿಯ ಸೀಮೆಗೆ ಸೇರಿದ ಅಂತಿಯೋಕ್ಯಕ್ಕೆ ಬಂದರು. ಸಬ್ಬತ್‍ದಿನದಲ್ಲಿ ಪ್ರಾರ್ಥನಾಮಂದಿರಕ್ಕೆ ಹೋಗಿ ಕುಳಿತುಕೊಂಡರು.
15 : ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಗ್ರಂಥಗಳಿಂದ ವಾಚನವಾದ ನಂತರ ಪ್ರಾರ್ಥನಾ ಮಂದಿರದ ಅಧಿಕಾರಿಗಳು ಅವರಿಗೆ, “ಸಹೋದರರೇ, ಜನರಿಗೆ ಉಪಯುಕ್ತವಾದ ಹಿತೋಕ್ತಿ ಏನಾದರೂ ಇದ್ದರೆ ಉಪದೇಶಮಾಡಿ,” ಎಂದು ಕೇಳಿಕೊಂಡರು.
16 : ಆಗ ಪೌಲನು ಎದ್ದುನಿಂತು ಜನರಿಗೆ ನಿಶ್ಯಬ್ದವಾಗಿರುವಂತೆ ಕೈಸನ್ನೆ ಮಾಡಿ, ಹೀಗೆಂದು ಉಪದೇಶ ಮಾಡಲಾರಂಭಿಸಿದನು:
17 : “ಇಸ್ರಯೇಲ್ ಬಾಂಧವರೇ, ಹಾಗು ನಿಜ ದೇವರಲ್ಲಿ ಭಯಭಕ್ತಿಯುಳ್ಳ ಇನ್ನಿತರರೇ, ಕೇಳಿ:ಇಸ್ರಯೇಲ್ ಜನರ ದೇವರು ನಮ್ಮ ಪೂರ್ವಜರನ್ನು ಆರಿಸಿಕೊಂಡರು. ಈಜಿಪ್ಟಿನಲ್ಲಿ ಪರಕೀಯರಾಗಿ ವಾಸಿಸುತ್ತಿದ್ದ ನಮ್ಮ ಜನರನ್ನು ಪ್ರಬಲ ಜನಾಂಗವನ್ನಾಗಿ ಮಾಡಿದರು. ತಮ್ಮ ಮಹಾಶಕ್ತಿಯನ್ನು ಪ್ರಯೋಗಿಸಿ ಅವರನ್ನು ಈಜಿಪ್ಟಿನಿಂದ ಹೊರಗೆ ತಂದರು.
18 : ಬೆಂಗಾಡಿನಲ್ಲಿ ಸುಮಾರು ನಾಲ್ವತ್ತು ವರ್ಷಗಳ ಕಾಲ ಅವರನ್ನು ಕಾಪಾಡಿದರು.
19 : ಕಾನಾನ್ ನಾಡಿನ ಏಳು ಜನಾಂಗಗಳನ್ನು ನಾಶಮಾಡಿ ನಮ್ಮ ಜನರಿಗೆ ಆ ನಾಡನ್ನು ಸ್ವಾಸ್ತ್ಯವಾಗಿ ಕೊಟ್ಟರು.
20 : ಹೀಗೆ ಸುಮಾರು ನಾನೂರ ಐವತ್ತು ವರ್ಷಗಳು ಕಳೆದವು. ಅನಂತರ ಪ್ರವಾದಿ ಸಮುವೇಲನ ಕಾಲದವರೆಗೆ ದೇವರು ಅವರಿಗೆ ನ್ಯಾಯಾಧಿಪತಿಗಳನ್ನು ಕಳುಹಿಸಿದರು.
21 : ತಮಗೆ ಅರಸನು ಬೇಕೆಂದು ಕೇಳಿಕೊಂಡಾಗ ದೇವರು ಬೆನ್ಯವಿೂನ ಗೋತ್ರದ ಕೀಷನ ಮಗ ಸೌಲನನ್ನು ನೇಮಿಸಿದರು. ಇವನು ನಾಲ್ವತ್ತು ವರ್ಷ ಆಳಿದನು.
22 : ಅನಂತರ ದೇವರು ಸೌಲನನ್ನು ತ್ಯಜಿಸಿ ದಾವೀದನನ್ನು ಅರಸನನ್ನಾಗಿ ನೇಮಿಸಿದರು. ಇವನ ಬಗ್ಗೆ ದೇವರು, “ಜೆಸ್ಸೆಯನ ಮಗ ದಾವೀದನು ನನಗೆ ಮೆಚ್ಚುಗೆಯಾದ ವ್ಯಕ್ತಿ; ಇವನು ನನ್ನ ಆಶೆ ಆಕಾಂಕ್ಷೆಗಳನ್ನೆಲ್ಲಾ ಪೂರೈಸುವನು,” ಎಂದು ತಮ್ಮ ಒಪ್ಪಿಗೆಯನ್ನು ಸೂಚಿಸಿದರು.
23 : ಈ ದಾವೀದನ ಸಂತತಿಯಿಂದಲೇ ದೇವರು ತಮ್ಮ ವಾಗ್ದಾನದ ಪ್ರಕಾರ ಇಸ್ರಯೇಲ್ ಜನರಿಗೆ ಒಬ್ಬ ಉದ್ಧಾರಕನನ್ನು ಕಳುಹಿಸಿದರು. ಇವರೇ ಯೇಸುಸ್ವಾಮಿ.
24 : ಇವರ ಆಗಮನಕ್ಕೆ ಸಿದ್ಧತೆಯಾಗಿ, ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿ ಸ್ನಾನದೀಕ್ಷೆಯನ್ನು ಪಡೆಯಬೇಕೆಂದು ಯೊವಾನ್ನನು ಇಸ್ರಯೇಲಿನ ಎಲ್ಲ ಜನರಿಗೆ ಸಾರಿದನು.
25 : ಯೊವಾನ್ನನು ತನ್ನ ನಿಯೋಗವನ್ನು ಪೂರೈಸುತ್ತಿದ್ದಂತೆ ಜನರಿಗೆ, ‘ನಾನು ಯಾರೆಂದು ನೀವು ನೆನೆಸುತ್ತೀರಿ? ನೀವು ಎದುರು ನೋಡುತ್ತಿರುವ ವ್ಯಕ್ತಿ ನಾನಲ್ಲ. ನನ್ನ ಅನಂತರ ಒಬ್ಬರು ಬರುವರು; ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,’ ಎಂದನು.
26 : “ನನ್ನ ಸಹೋದರರೇ, ಅಬ್ರಹಾಮನ ಸಂತತಿಯವರೇ ಮತ್ತು ದೇವರಲ್ಲಿ ಭಯಭಕ್ತಿಯುಳ್ಳ ಇನ್ನಿತರರೇ, ಈ ಜೀವೋದ್ಧಾರದ ಸಂದೇಶವನ್ನು ಕಳುಹಿಸಿರುವುದು ನಮಗಾಗಿಯೇ.
27 : ಜೆರುಸಲೇಮಿನ ನಿವಾಸಿಗಳು ಮತ್ತು ಅವರ ಅಧಿಕಾರಿಗಳು ಯೇಸು ಲೋಕೋದ್ಧಾರಕನೆಂದು ಅರಿತುಕೊಳ್ಳಲಿಲ್ಲ. ಪ್ರತಿ ಸಬ್ಬತ್‍ದಿನ ಓದಲಾದ ಪ್ರವಾದಿಗಳ ವಾಕ್ಯಗಳನ್ನು ಅವರು ಗ್ರಹಿಸಿಕೊಳ್ಳಲಿಲ್ಲ. ಯೇಸುವಿಗೆ ಮರಣದಂಡನೆಯನ್ನು ವಿಧಿಸಿ ಆ ಪ್ರವಾದನೆಗಳು ನಿಜವಾಗಲು ಕಾರಣರಾದರು.
28 : ಮರಣದಂಡನೆ ವಿಧಿಸಲು ಯಾವ ಕಾರಣವಿಲ್ಲದಿದ್ದರೂ ಅವರನ್ನು ಕೊಲ್ಲಿಸುವಂತೆ ಪಿಲಾತನನ್ನು ಕೇಳಿಕೊಂಡರು.
29 : ಯೇಸುವನ್ನು ಕುರಿತು ಪವಿತ್ರಗ್ರಂಥ ಹೇಳುವುದೆಲ್ಲವೂ ನೆರವೇರಿದ ಮೇಲೆ ಅವರನ್ನು ಶಿಲುಬೆಯಿಂದ ಕೆಳಗಿಳಿಸಿ ಸಮಾಧಿಮಾಡಿದರು.
30 : ಆದರೆ ದೇವರು ಅವರನ್ನು ಮರಣದಿಂದ ಪುನರುತ್ಥಾನಗೊಳಿಸಿದರು.
31 : ಹೀಗೆ ಪುನರುತ್ಥಾನ ಹೊಂದಿದ ಯೇಸು, ಗಲಿಲೇಯದಿಂದ ತಮ್ಮೊಡನೆ ಜೆರುಸಲೇಮಿಗೆ ಬಂದಿದ್ದವರಿಗೆ ಕಾಣಿಸಿಕೊಂಡರು. ಆ ವ್ಯಕ್ತಿಗಳೇ ಈಗ ನಮ್ಮ ಜನರ ಮಧ್ಯೆ ಇರುವ ಯೇಸುವಿನ ಪರವಾದ ಸಾಕ್ಷಿಗಳು.
32 : ನಾವೀಗ ನಿಮಗೆ ಸಾರುವ ಶುಭಸಂದೇಶ ಇದು: ದೇವರು ಯೇಸುಸ್ವಾಮಿಯನ್ನು ಪುನರುತ್ಥಾನಗೊಳಿಸಿದ್ದಾರೆ. ಈ ಮೂಲಕ ನಮ್ಮ ಪೂರ್ವಜರಿಗೆ ಮಾಡಿದ ವಾಗ್ದಾನವನ್ನು ಅವರ ಸಂತತಿಯಾದ ನಮಗಿಂದು ಈಡೇರಿಸಿದ್ದಾರೆ.
33 : ಎರಡನೆಯ ಕೀರ್ತನೆಯಲ್ಲಿ ಹೀಗೆಂದು ಬರೆದಿದೆ: ‘ನೀನೇ ನನ್ನ ಪುತ್ರ, ನಾನಿಂದು ನಿನ್ನ ಜನಕ.’
34 : “ಯೇಸುವನ್ನು ಸಮಾಧಿಯಲ್ಲೇ ಕೊಳೆತು ಹೋಗಲು ಬಿಡದೆ ಮರಣದಿಂದ ಪುನರುತ್ಥಾನಗೊಳಿಸಿದ ದೇವರು ಹೀಗೆಂದಿದ್ದಾರೆ: ‘ನಾನು ದಾವೀದನಿಗೆ ವಾಗ್ದಾನಮಾಡಿದ ಪವಿತ್ರ ಹಾಗೂ ನಿಶ್ಚಿತ ವರಗಳನ್ನು ನಿಮಗೆ ಕೊಡುತ್ತೇನೆ.’
35 : ಇನ್ನೊಂದು ಕೀರ್ತನೆಯಲ್ಲಿ ಹೀಗೆಂದಿದ್ದಾರೆ: ‘ನಿಮ್ಮ ಪರಮ ಪೂಜ್ಯನು ಸಮಾಧಿಯಲ್ಲಿ ಕೊಳೆತುಹೋಗಲು ನೀವು ಬಿಡುವುದಿಲ್ಲ.’
36 : “ದಾವೀದನು ತನ್ನ ಜೀವಮಾನ ಕಾಲದಲ್ಲಿ ದೇವರ ಸಂಕಲ್ಪಕ್ಕೆ ತಲೆಬಾಗಿ ಬಾಳಿದನು; ಸತ್ತಾಗ ಅವನ ಪೂರ್ವಜರ ಬಳಿ ಅವನನ್ನು ಸಮಾಧಿ ಮಾಡಲಾಯಿತು.
37 : ಆದರೆ ದೇವರು ಮರಣದಿಂದ ಎಬ್ಬಿಸಿದ ಯೇಸುಸ್ವಾಮಿ ಕೊಳೆಯುವ ಅವಸ್ಥೆಯನ್ನು ಅನುಭವಿಸಲಿಲ್ಲ.
38 : “ನನ್ನ ಸಹೋದರರೇ, ನಿಮಗಿದು ತಿಳಿದಿರಲಿ: ಪಾಪಕ್ಷಮೆ ಯೇಸುವಿನ ಮುಖಾಂತರವೇ ಸಾಧ್ಯ ಎಂದು ಸಾರಲಾಗುತ್ತಿದೆ.
39 : ಮೋಶೆಯ ನಿಯಮಗಳ ಪಾಲನೆಯ ಮೂಲಕ ಪಾಪಗಳಿಂದ ವಿಮೋಚನೆ ಹೊಂದಲು ನಿಮ್ಮಿಂದಾಗಲಿಲ್ಲ; ಆದರೆ ಯೇಸುವನ್ನು ವಿಶ್ವಾಸಿಸುವ ಪ್ರತಿ ಒಬ್ಬನೂ ಅವೆಲ್ಲವುಗಳಿಂದ ವಿಮೋಚನೆ ಪಡೆಯುತ್ತಾನೆ.
40 : ಆದುದರಿಂದ ಪ್ರವಾದಿಗಳ ಈ ಮಾತುಗಳು ನಿಮ್ಮಲ್ಲಿ ನಿಜವಾಗದಂತೆ ಎಚ್ಚರಿಕೆಯಾಗಿರಿ:
41 : ‘ಅವಹೇಳನ ಮಾಡುವವರೇ, ಗಮನಿಸಿರಿ; ದಿಗ್ಭ್ರಮೆಗೊಂಡು ದಿಕ್ಕುಪಾಲಾಗಿರಿ; ನಿಮ್ಮ ಕಾಲದಲ್ಲೇ ನಾನೊಂದು ಮಹತ್ಕಾರ್ಯವನ್ನು ಮಾಡುತ್ತೇನೆ; ಅದನ್ನು ನೀವು ನಂಬಲಾರಿರಿ, ಇನ್ನೊಬ್ಬರು ವಿವರಿಸಿ ಹೇಳಿದರೂ ನಂಬಲಾರಿರಿ’,” ಎಂದು ಹೇಳಿದನು.
42 : ಪೌಲ ಮತ್ತು ಬಾರ್ನಬ ಪ್ರಾರ್ಥನಾ ಮಂದಿರವನ್ನು ಬಿಟ್ಟು ಹೊರಟರು. “ಮುಂದಿನ ಸಬ್ಬತ್‍ದಿನ ಪುನಃ ಬಂದು ಈ ವಿಷಯಗಳ ಬಗ್ಗೆ ಹೆಚ್ಚು ತಿಳಿಸಿರಿ,” ಎಂದು ಜನರು ಕೇಳಿಕೊಂಡರು.
43 : ಪ್ರಾರ್ಥನಾಕೂಟ ಮುಗಿದಮೇಲೆ ಅನೇಕ ಯೆಹೂದ್ಯರೂ ಯೆಹೂದ್ಯ ಮತಾವಲಂಬಿಗಳಾದ ಅನ್ಯರೂ ಪೌಲ ಮತ್ತು ಬಾರ್ನಬರನ್ನು ಹಿಂಬಾಲಿಸಿದರು. ಈ ಪ್ರೇಷಿತರು ಅವರೊಡನೆ ಮಾತನಾಡಿ ದೈವಾನುಗ್ರಹದಲ್ಲಿ ದೃಢವಾಗಿ ಬಾಳುವಂತೆ ಪ್ರೋತ್ಸಾಹಿಸಿದರು.
44 : ಮುಂದಿನ ಸಬ್ಬತ್‍ದಿನ ದೇವರ ವಾಕ್ಯವನ್ನು ಕೇಳಲು ನಗರಕ್ಕೆ ನಗರವೇ ಆಗಮಿಸಿತು.
45 : ಜನರು ತಂಡೋಪತಂಡವಾಗಿ ಬರುತ್ತಿರುವುದನ್ನು ಕಂಡು ಯೆಹೂದ್ಯರು ಮತ್ಸರಭರಿತರಾದರು. ಅವರು ಪೌಲನ ಮಾತುಮಾತಿಗೂ ವಿರೋಧವಾಗಿ ವಾದಿಸಿ ದೂಷಣೆಮಾಡತೊಡಗಿದರು.
46 : ಪೌಲ ಮತ್ತು ಬಾರ್ನಬ ಮತ್ತಷ್ಟು ಧೈರ್ಯದಿಂದ ಮಾತನಾಡಿದರು: “ದೇವರ ವಾಕ್ಯವನ್ನು ಮೊಟ್ಟಮೊದಲು ನಿಮಗೆ ಬೋಧಿಸುವುದು ಅಗತ್ಯವಾಗಿತ್ತು. ಆದರೆ ನೀವು ಅದನ್ನು ನಿರಾಕರಿಸಿ ಅಮರಜೀವಕ್ಕೆ ಅಪಾತ್ರರೆಂದು ನಿಮ್ಮನ್ನು ನೀವೇ ತೀರ್ಮಾನಿಸಿಕೊಂಡಿರಿ. ಆದುದರಿಂದ ನಾವು ನಿಮ್ಮನ್ನು ಬಿಟ್ಟು ಅನ್ಯಧರ್ಮದವರ ಕಡೆ ಹೋಗುತ್ತೇವೆ.
47 : ಏಕೆಂದರೆ ಪ್ರಭು ನಮಗಿತ್ತ ಆಜ್ಞೆ ಹೀಗಿದೆ: ‘ಅನ್ಯಧರ್ಮೀಯರಿಗೆ ಜ್ಯೋತಿಯನ್ನಾಗಿಯೂ ವಿಶ್ವಪೂರ್ತಿಗೆ ಜೀವೋದ್ಧಾರದ ಸಾಧನವಾಗಿಯೂ ನಾನು ನಿನ್ನನ್ನು ನೇಮಿಸಿದ್ದೇನೆ’.
48 : ಇದನ್ನು ಕೇಳಿದ ಅನ್ಯಧರ್ಮೀಯರು ಸಂತೋಷಪಟ್ಟು ದೇವರ ಸಂದೇಶಕ್ಕಾಗಿ ಸ್ತುತಿಸಿದರು. ಅಮರಜೀವಕ್ಕೆ ಆಯ್ಕೆಯಾದವರೆಲ್ಲರೂ ವಿಶ್ವಾಸಿಗಳಾದರು.
49 : ಪ್ರಭುವಿನ ವಾಕ್ಯ ಆ ಪ್ರದೇಶದಲ್ಲೆಲ್ಲಾ ಹಬ್ಬಿ ಹರಡಿತು.
50 : ಯೆಹೂದ್ಯರಾದರೋ ದೇವಭಕ್ತೆಯರಾದ ಕುಲೀನ ಸ್ತ್ರೀಯರನ್ನೂ ಪಟ್ಟಣದ ಪ್ರಮುಖ ಜನರನ್ನೂ ಪ್ರಚೋದಿಸಿದರು: ಪೌಲ ಮತ್ತು ಬಾರ್ನಬರನ್ನು ಹಿಂಸಿಸುವಂತೆ ಹುರಿದುಂಬಿಸಿ, ಅವರನ್ನು ಆ ಪ್ರದೇಶದಿಂದ ಹೊರಗಟ್ಟಿಸಿದರು.
51 : ಇದಕ್ಕೆ ಪ್ರತಿಯಾಗಿ ಪ್ರೇಷಿತರು ತಮ್ಮ ಪಾದ ಧೂಳನ್ನು ಝಾಡಿಸಿ ಇಕೋನಿಯಕ್ಕೆ ಹೊರಟು ಹೋದರು.
52 : ಭಕ್ತ ವಿಶ್ವಾಸಿಗಳಾದರೋ ಪರಮಾನಂದಪಟ್ಟರು, ಪವಿತ್ರಾತ್ಮಭರಿತರಾದರು.

· © 2017 kannadacatholicbible.org Privacy Policy