Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಪ್ರೇ.ಕಾ


1 : ಸೆಜರೇಯ ಪಟ್ಟಣದಲ್ಲಿ ಕೊರ್ನೇಲಿಯ ಎಂಬವನಿದ್ದನು. ಅವನು ‘ಇಟಲಿಯ ದಳ’ದಲ್ಲಿ ಒಬ್ಬ ಶತಾಧಿಪತಿ.
2 : ಅವನೂ ಅವನ ಕುಟುಂಬವೂ ದೇವರಲ್ಲಿ ಭಯಭಕ್ತಿಯಿಂದ ಜೀವಿಸುತ್ತಿದ್ದರು. ಯೆಹೂದ್ಯರಿಗೆ ಅವನು ಧಾರಾಳವಾಗಿ ದಾನಧರ್ಮ ಮಾಡುತ್ತಿದ್ದನು. ದೇವರಿಗೆ ತಪ್ಪದೆ ಪ್ರಾರ್ಥನೆ ಸಲ್ಲಿಸುತ್ತಿದ್ದನು.
3 : ಅದೊಂದು ಮಧ್ಯಾಹ್ನ, ಸುಮಾರು ಮೂರು ಗಂಟೆಯ ಸಮಯ. ಅವನಿಗೊಂದು ದಿವ್ಯದರ್ಶನವಾಯಿತು: ದೇವದೂತನೊಬ್ಬನು ತನ್ನ ಮನೆಯೊಳಗೆ ಬಂದು, “ಕೊರ್ನೇಲಿಯಾ,” ಎಂದು ಕರೆಯುವುದನ್ನು ಸ್ಪಷ್ಟವಾಗಿ ಕಂಡನು.
4 : ಕೊರ್ನೇಲಿಯನು ಭಯದಿಂದ ದೇವದೂತನನ್ನು ದಿಟ್ಟಿಸಿ ನೋಡುತ್ತಾ, “ಏನು ಸ್ವಾಮಿ?” ಎಂದನು. ಅದಕ್ಕೆ ದೇವದೂತನು, “ನಿನ್ನ ಪ್ರಾರ್ಥನೆ ಮತ್ತು ದಾನಧರ್ಮ ದೇವರನ್ನು ಮುಟ್ಟಿವೆ. ಅವರು ನಿನ್ನನ್ನು ಮೆಚ್ಚಿದ್ದಾರೆ; ನಿನ್ನ ಕೋರಿಕೆಗಳನ್ನು ಈಡೇರಿಸಲಿದ್ದಾರೆ.
5 : ನೀನು ಈಗಲೇ ಜೊಪ್ಪಕ್ಕೆ ಆಳುಗಳನ್ನು ಕಳುಹಿಸಿ, ಪೇತ್ರ ಎಂದು ಕರೆಯಲಾಗುವ ಸಿಮೋನನನ್ನು ಬರಹೇಳು.
6 : ಅವನು, ಸಮುದ್ರತೀರದಲ್ಲಿ ವಾಸಿಸುತ್ತಿರುವ, ಚರ್ಮ ಹದಮಾಡುವ ಸಿಮೋನನ ಮನೆಯಲ್ಲಿ ತಂಗಿದ್ದಾನೆ,” ಎಂದು ಹೇಳಿ ದೂತನು ಅದೃಶ್ಯನಾದನು.
7 : ಕೂಡಲೇ ಕೊರ್ನೇಲಿಯನು ತನ್ನ ಇಬ್ಬರು ಪರಿಚಾರಕರನ್ನೂ ತನ್ನ ಪಹರೆಯವರಲ್ಲಿ ಧರ್ಮನಿಷ್ಠನಾಗಿದ್ದ ಒಬ್ಬ ಸೈನಿಕನನ್ನೂ ಕರೆದು,
8 : ನಡೆದುದೆಲ್ಲವನ್ನೂ ತಿಳಿಸಿ ಅವರನ್ನು ಜೊಪ್ಪಕ್ಕೆ ಕಳುಹಿಸಿದನು.
9 : ಮಾರನೆಯ ದಿನ ಅವರು ಪ್ರಯಾಣಮಾಡಿ ಜೊಪ್ಪವನ್ನು ಸವಿೂಪಿಸಿದಾಗ ಮಧ್ಯಾಹ್ನ ಸಮಯ. ಆಗತಾನೇ ಪೇತ್ರನು ಪ್ರಾರ್ಥನೆ ಮಾಡಲು ಮಾಳಿಗೆಯ ಮೇಲಕ್ಕೆ ಹೋದನು.
10 : ಅವನಿಗೆ ಹಸಿವಾಗಿ ಏನನ್ನಾದರೂ ತಿನ್ನಬೇಕು ಎನಿಸಿತು. ಊಟ ಸಿದ್ಧವಾಗುತ್ತಿದ್ದಂತೆ, ಪೇತ್ರನು ಧ್ಯಾನಪರವಶನಾಗಿ ಒಂದು ದರ್ಶನವನ್ನು ಕಂಡನು.
11 : ಸ್ವರ್ಗದ ಬಾಗಿಲು ತೆರೆಯಿತು. ದೊಡ್ಡ ದುಪ್ಪಟಿಯಂತಹ ವಸ್ತುವೊಂದು ಇಳಿದು ಬರುತ್ತಿತ್ತು. ಅದರ ನಾಲ್ಕು ಮೂಲೆಗಳನ್ನು ಹಿಡಿದು ಭೂಮಿಯ ಮೇಲೆ ಅದನ್ನು ಇಳಿಯಬಿಡಲಾಗಿತ್ತು.
12 : ಅದರಲ್ಲಿ, ಹರಿದಾಡುವ ಕ್ರಿಮಿಕೀಟಗಳು, ಹಾರಾಡುವ ಪಕ್ಷಿಗಳು ಮತ್ತು ಎಲ್ಲಾ ತರಹದ ಪ್ರಾಣಿಗಳು ಇದ್ದವು.
13 : ಅಲ್ಲದೆ, “ಪೇತ್ರಾ, ಏಳು, ಕೊಯ್ದು ತಿನ್ನು,” ಎಂಬ ವಾಣಿ ಅವನಿಗೆ ಕೇಳಿಸಿತು.
14 : ಪೇತ್ರನು, “ಇದು ಬೇಡವೆ ಬೇಡ ಸ್ವಾಮಿ, ಅಶುದ್ಧ ಹಾಗೂ ನಿಷಿದ್ಧ ಆದುದನ್ನು ನಾನೆಂದೂ ತಿಂದವನಲ್ಲ,” ಎಂದನು.
15 : ಅದಕ್ಕೆ ಮತ್ತೊಮ್ಮೆ ಆ ವಾಣಿ ಅವನಿಗೆ, “ದೇವರೇ ಶುದ್ಧೀಕರಿಸಿರುವ ಯಾವುದನ್ನೂ ಅಶುದ್ಧವೆನ್ನಬೇಡ,” ಎಂದಿತು.
16 : ಹೀಗೆ ಮೂರು ಸಾರಿ ನಡೆದಮೇಲೆ ಆ ವಸ್ತುವನ್ನು ಸ್ವರ್ಗಕ್ಕೆ ಎತ್ತಿಕೊಳ್ಳಲಾಯಿತು.
17 : ಇತ್ತ ಪೇತ್ರನು ತಾನು ಕಂಡ ದರ್ಶನದ ಅರ್ಥವೇನಿರಬಹುದೆಂದು ತಬ್ಬಿಬ್ಬಾದನು. ಅಷ್ಟರಲ್ಲಿ ಕೊರ್ನೇಲಿಯನು ಕಳುಹಿಸಿದ್ದ ಆಳುಗಳು ಸಿಮೋನನ ಮನೆಯನ್ನು ವಿಚಾರಿಸಿ ಕಂಡುಹಿಡಿದರು. ಹೊರ ಬಾಗಿಲ ಬಳಿ ನಿಂತುಕೊಂಡು,
18 : “ಪೇತ್ರನೆಂದು ಕರೆಯಲಾಗುವ ಸಿಮೋನ ಎಂಬವರು ಇಲ್ಲಿ ತಂಗಿರುವರೇ?” ಎಂದು ಕೂಗಿ ಕೇಳಿದರು.
19 : ಪೇತ್ರನು ತನ್ನ ದರ್ಶನವನ್ನು ಕುರಿತು ಇನ್ನೂ ಆಲೋಚಿಸುತ್ತಿರುವಾಗ ಪವಿತ್ರಾತ್ಮ ಅವರು, “ಇಗೋ, ಮೂರು ಜನರು ನಿನ್ನನ್ನು ಹುಡುಕುತ್ತಾ ಬಂದಿದ್ದಾರೆ.
20 : ಸಿದ್ಧವಾಗಿ ಕೆಳಕ್ಕೆ ಹೋಗು. ನಾನೇ ಅವರನ್ನು ಕಳುಹಿಸಿರುವುದರಿಂದ ಸಂಕೋಚಪಡದೆ ಅವರೊಡನೆ ಹೋಗು,” ಎಂದರು.
21 : ಪೇತ್ರನು ಕೆಳಕ್ಕೆ ಹೋಗಿ ಆ ಜನರನ್ನು ನೋಡಿ, “ನೀವು ಹುಡುಕುತ್ತಿರುವ ವ್ಯಕ್ತಿ ನಾನೇ. ನೀವು ಬಂದ ಕಾರಣವೇನು?” ಎಂದು ವಿಚಾರಿಸಿದನು.
22 : “ಶತಾಧಿಪತಿ ಕೊರ್ನೇಲಿಯ ನಮ್ಮನ್ನು ಕಳುಹಿಸಿದರು. ಅವರೊಬ್ಬ ಸತ್ಪುರುಷರು, ದೈವಭಕ್ತರು, ಯೆಹೂದ್ಯ ಜನತೆಯಿಂದ ಗೌರವಾನ್ವಿತರು. ನಿಮ್ಮನ್ನು ತಮ್ಮ ಮನೆಗೆ ಆಹ್ವಾನಿಸಿ, ನೀವು ಹೇಳುವುದನ್ನು ಕೇಳಬೇಕೆಂದು ದೇವದೂತನಿಂದ ಆದೇಶಪಡೆದಿದ್ದಾರೆ,” ಎಂದರು.
23 : ಪೇತ್ರನು ಅವರನ್ನು ಒಳಕ್ಕೆ ಬರಮಾಡಿಕೊಂಡು ಉಪಚರಿಸಿ, ರಾತ್ರಿ ಅಲ್ಲೇ ತಂಗುವಂತೆ ಮಾಡಿದನು. ಮಾರನೆಯ ದಿನ ಪೇತ್ರನು ಅವರೊಡನೆ ಹೋದನು. ಜೊತೆಯಲ್ಲಿ ಜೊಪ್ಪದ ಕೆಲವು ಸಹೋದರರೂ ಹೋದರು.
24 : ಮರುದಿವಸ ಅವನು ಸೆಜರೇಯವನ್ನು ತಲುಪಿದನು. ಇತ್ತ ಕೊರ್ನೇಲಿಯನು ತಾನು ಆಹ್ವಾನಿಸಿದ ನೆಂಟರಿಷ್ಟರೊಡನೆ ಮತ್ತು ಆಪ್ತಮಿತ್ರರೊಡನೆ ಪೇತ್ರನಿಗಾಗಿ ಕಾಯುತ್ತಿದ್ದನು.
25 : ಪೇತ್ರನು ಮನೆಯನ್ನು ಪ್ರವೇಶಿಸುತ್ತಿದ್ದಂತೆ ಕೊರ್ನೇಲಿಯನು ಅವನನ್ನು ಎದುರುಗೊಂಡು, ಪಾದಕ್ಕೆರಗಿ, ಸಾಷ್ಟಾಂಗ ನಮಸ್ಕಾರ ಮಾಡಿದನು.
26 : ಪೇತ್ರನು ಅವನನ್ನು ಮೇಲಕ್ಕೆಬ್ಬಿಸಿ, “ಎದ್ದು ನಿಲ್ಲು, ನಾನೂ ಒಬ್ಬ ಸಾಮಾನ್ಯ ಮನುಷ್ಯನೇ,” ಎಂದನು.
27 : ಕೊರ್ನೇಲಿಯನೊಡನೆ ಮಾತನಾಡುತ್ತಾ ಪೇತ್ರನು ಮನೆಯೊಳಕ್ಕೆ ಬಂದಾಗ ಅಲ್ಲಿ ಅನೇಕ ಜನರು ಸಭೆ ಸೇರಿರುವುದನ್ನು ಕಂಡನು.
28 : ಪೇತ್ರನು ಅವರಿಗೆ, “ಯೆಹೂದ್ಯನೊಬ್ಬನು ಅನ್ಯಧರ್ಮದವರೊಡನೆ ಸಂಪರ್ಕ ಇಟ್ಟುಕೊಳ್ಳುವುದು ಅಥವಾ ಅವರಿಗೆ ಭೇಟಿಕೊಡುವುದು ಧರ್ಮನಿಷಿದ್ಧ ಎಂಬುದು ನಿಮಗೆ ತಿಳಿದೇ ಇದೆ. ಆದರೆ, ನಾನು ಯಾರನ್ನೂ ಅಶುದ್ಧ ಅಥವಾ ಅಸ್ಪøಶ್ಯ ಎನ್ನಬಾರದೆಂದು ದೇವರು ನನಗೆ ತೋರಿಸಿಕೊಟ್ಟಿದ್ದಾರೆ.
29 : ಆದುದರಿಂದಲೇ ನೀವು ಹೇಳಿ ಕಳುಹಿಸಿದಾಗ ನಾನು ಯಾವ ಆಕ್ಷೇಪಣೆ ಮಾಡದೆ ಬಂದಿದ್ದೇನೆ. ಈಗ ನನ್ನನ್ನು ಕರೆದ ಕಾರಣವೇನೆಂದು ತಿಳಿಯ ಬಯಸುತ್ತೇನೆ,” ಎಂದನು.
30 : ಆಗ ಕೊರ್ನೇಲಿಯನು, “ನಾನು ಮೂರು ದಿನಗಳ ಹಿಂದೆ ಮಧ್ಯಾಹ್ನ ಮೂರು ಗಂಟೆಯ ಇದೇ ಸಮಯದಲ್ಲಿ ಪ್ರಾರ್ಥನೆ ಮಾಡುತ್ತಾ ಇದ್ದೆ. ಹಠಾತ್ತನೆ ಶೋಭಾಯಮಾನ ವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬನು ನನ್ನೆದುರಿಗೆ ನಿಂತನು.
31 : ಅವನು, “ಕೊರ್ನೇಲಿಯಾ, ದೇವರು ನಿನ್ನ ಪ್ರಾರ್ಥನೆಯನ್ನು ಆಲಿಸಿದ್ದಾರೆ; ನಿನ್ನ ದಾನಧರ್ಮಗಳನ್ನು ಮೆಚ್ಚಿದ್ದಾರೆ.
32 : ಯಾರನ್ನಾದರೂ ಜೊಪ್ಪಕ್ಕೆ ಕಳುಹಿಸಿ ಪೇತ್ರ ಎಂದು ಕರೆಯಲಾದ ಸಿಮೋನನನ್ನು ಬರಮಾಡಿಕೊ; ಅವನು ಸಮುದ್ರ ತೀರದಲ್ಲಿ ವಾಸಿಸುತ್ತಿರುವ, ಚರ್ಮ ಹದಮಾಡುವ ಸಿಮೋನನ ಮನೆಯಲ್ಲಿ ತಂಗಿದ್ದಾನೆ,” ಎಂದನು.
33 : ಅಂತೆಯೇ ನಾನು ತಕ್ಷಣ ತಮ್ಮನ್ನು ಕರೆತರಲು ಕಳುಹಿಸಿದೆ. ತಾವು ಇಲ್ಲಿಗೆ ದಯಮಾಡಿಸಿದಿರಿ. ಪ್ರಭು ತಮಗೆ ಆಜ್ಞಾಪಿಸಿರುವುದನ್ನೆಲ್ಲಾ ಕೇಳಲು ನಾವೆಲ್ಲರೂ ಇಲ್ಲಿ ದೇವರ ಸನ್ನಿಧಿಯಲ್ಲಿ ಸೇರಿದ್ದೇವೆ,” ಎಂದನು.
34 : ಆಗ ಪೇತ್ರನು ಹೀಗೆಂದು ಉಪದೇಶ ಮಾಡಿದನು: “ದೇವರು ಪಕ್ಷಪಾತಿಯಲ್ಲ. ಈ ವಿಷಯ ನನಗೆ ಈಗ ಮನದಟ್ಟಾಗಿದೆ.
35 : ದೇವರಿಗೆ ಭಯಪಟ್ಟು ಸತ್ಪುರುಷನಾಗಿ ಬಾಳುವವನು ಯಾವ ಜನಾಂಗದವನೇ ಆಗಿರಲಿ, ಅವನು ಅವರ ಮೆಚ್ಚುಗೆಗೆ ಪಾತ್ರನಾಗುತ್ತಾನೆ.
36 : ಸಮಸ್ತ ಮಾನವ ಕೋಟಿಯ ಪ್ರಭುವಾದ ಯೇಸುಕ್ರಿಸ್ತರ ಮುಖಾಂತರ ಶಾಂತಿ ಲಭಿಸುತ್ತದೆ ಎಂಬ ಶುಭಸಂದೇಶವನ್ನು ದೇವರು ಇಸ್ರಯೇಲ್ ಜನಾಂಗಕ್ಕೆ ಸಾರಿದರು. ಈ ವಿಷಯ ನಿಮಗೆ ತಿಳಿದಿದೆ.
37 : ಇತ್ತೀಚೆಗೆ ಜುದೇಯ ನಾಡಿನಾದ್ಯಂತ ನಡೆದ ಘಟನೆಗಳು ನಿಮಗೆ ತಿಳಿದೇ ಇರಬೇಕು.
38 : ಇವು ನಜರೇತಿನ ಯೇಸುವಿಗೆ ಸಂಬಂಧಪಟ್ಟ ವಿಷಯಗಳು. ಸ್ನಾನದೀಕ್ಷೆಯನ್ನು ಮಾಡಿಸಿಕೊಳ್ಳಬೇಕೆಂದು ಯೊವಾನ್ನನು ಬೋಧಿಸಿದ ನಂತರ, ಯೇಸು ತಮ್ಮ ಸೇವಾವೃತ್ತಿಯನ್ನು ಗಲಿಲೇಯದಲ್ಲಿ ಪ್ರಾರಂಭಿಸಿದರು. ಅವರು ಪವಿತ್ರಾತ್ಮರಿಂದಲೂ ದೈವಶಕ್ತಿಯಿಂದಲೂ ಅಭಿಷಿಕ್ತರಾಗಿದ್ದರು. ದೇವರು ತಮ್ಮೊಡನೆ ಇದ್ದುದರಿಂದ ಅವರು ಎಲ್ಲೆಡೆಯಲ್ಲೂ ಒಳಿತನ್ನು ಮಾಡುತ್ತಾ, ಪಿಶಾಚಿಪೀಡಿತರಾದವರನ್ನು ಸ್ವಸ್ಥಪಡಿಸುತ್ತಾ ಸಂಚರಿಸಿದರು.
39 : ಅವರು ಯೆಹೂದ್ಯರ ಹಳ್ಳಿ ಪಳ್ಳಿಗಳಲ್ಲೂ ಜೆರುಸಲೇಮಿನಲ್ಲೂ ಎಸಗಿದ ಸಕಲ ಕಾರ್ಯಗಳಿಗೆ ನಾವು ಸಾಕ್ಷಿಗಳು. ಯೆಹೂದ್ಯರು ಆ ಯೇಸುವನ್ನು ಶಿಲುಬೆ ಮರಕ್ಕೆ ನೇತುಹಾಕಿ ಕೊಂದರು.
40 : ಆದರೆ ದೇವರು ಅವರನ್ನು ಮೂರನೆಯ ದಿನ ಪುನರುತ್ಥಾನಗೊಳಿಸಿ ಪ್ರತ್ಯಕ್ಷರಾಗುವಂತೆ ಮಾಡಿದರು.
41 : ಅವರು ಕಾಣಿಸಿಕೊಂಡದ್ದು ಎಲ್ಲಾ ಜನರಿಗೆ ಅಲ್ಲ; ದೇವರಿಂದ ಸಾಕ್ಷಿಗಳಾಗಿ ಆಯ್ಕೆಯಾಗಿದ್ದ ನಮಗೆ. ಅವರು ಪುನರುತ್ಥಾನ ಹೊಂದಿದ ನಂತರ ಅವರೊಡನೆಯೇ ಊಟ ಮಾಡಿದವರು ನಾವು.
42 : ಮಾನವರಿಗೆ ಶುಭಸಂದೇಶವನ್ನು ಬೋಧಿಸುವಂತೆಯೂ ಜೀವಂತರಿಗೂ ಹಾಗೂ ಮೃತರಿಗೂ ದೇವರೇ ಅವರನ್ನು ನ್ಯಾಯಾಧಿಪತಿಯನ್ನಾಗಿ ನೇಮಿಸಿದ್ದಾರೆಂದು ರುಜುವಾತುಪಡಿಸುವಂತೆಯೂ ನಮಗೆ ಆಜ್ಞಾಪಿಸಿದ್ದಾರೆ.
43 : ಎಲ್ಲಾ ಪ್ರವಾದಿಗಳು ಅವರನ್ನು ಕುರಿತೇ ಸಾಕ್ಷಿ ನೀಡಿದ್ದಾರೆ; ಅವರಲ್ಲಿ ವಿಶ್ವಾಸವಿಡುವ ಪ್ರತಿಯೊಬ್ಬನೂ ಅವರ ನಾಮದ ಶಕ್ತಿಯಿಂದ ಪಾಪಕ್ಷಮೆಯನ್ನು ಪಡೆಯುವನೆಂದು ಪ್ರವಾದನೆಮಾಡಿದ್ದಾರೆ.”
44 : ಪೇತ್ರನು ಮಾತನಾಡುತ್ತಿದ್ದಂತೆ ಅವನ ಉಪದೇಶವನ್ನು ಕೇಳುತ್ತಿದ್ದ ಎಲ್ಲರ ಮೇಲೆ ಪವಿತ್ರಾತ್ಮ ಇಳಿದು ಬಂದರು.
45 : ಎಲ್ಲರು ವಿವಿಧ ಭಾಷೆಗಳನ್ನು ಮಾತನಾಡುತ್ತಾ ದೇವರ ಮಹತ್ವವನ್ನು ಸ್ತುತಿಸತೊಡಗಿದರು.
47 : “ನಮ್ಮಂತೆಯೇ ಪವಿತ್ರಾತ್ಮ ಅವರನ್ನು ಪಡೆದಿರುವ ಈ ಜನರಿಗೆ ದೀಕ್ಷಾಸ್ನಾನ ಕೊಡಲು ಅಭ್ಯಂತರವಿದೆಯೇ?” ಎಂದನು. 48ಅನಂತರ ಅವರಿಗೆ ಯೇಸುಕ್ರಿಸ್ತರ ನಾಮದಲ್ಲಿ ದೀಕ್ಷಾಸ್ನಾನ ಪಡೆಯುವಂತೆ ಆಜ್ಞಾಪಿಸಿದನು. ಅದಾದ ಬಳಿಕ ತಮ್ಮೊಡನೆ ಕೆಲವು ದಿನ ಇರಬೇಕೆಂದು ಪೇತ್ರನನ್ನು ಆ ಜನರು ಕೇಳಿಕೊಂಡರು.

· © 2017 kannadacatholicbible.org Privacy Policy