Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೊವಾನ್ನ


1 : ಇದಾದ ಬಳಿಕ ಯೇಸುಸ್ವಾಮಿ ಗಲಿಲೇಯದಲ್ಲಿ ಸಂಚರಿಸತೊಡಗಿದರು. ಯೆಹೂದ್ಯರು ತಮ್ಮನ್ನು ಕೊಲ್ಲಲು ಹವಣಿಸುತ್ತಿದ್ದುದರಿಂದ ಜುದೇಯದಲ್ಲಿ ಸಂಚರಿಸಲು ಅವರು ಇಷ್ಟಪಡಲಿಲ್ಲ.
2 : ಯೆಹೂದ್ಯರ ಪರ್ಣಕುಟೀರಗಳ ಹಬ್ಬವು ಹತ್ತಿರವಾಗುತ್ತಿತ್ತು. ಯೇಸುವಿನ ಸೋದರರು,
3 : “ನೀನು ಇಲ್ಲಿಂದ ಜುದೇಯಕ್ಕೆ ಹೋಗು. ಅಲ್ಲಿ ನೀನು ಮಾಡುವುದನ್ನೆಲ್ಲಾ ನಿನ್ನ ಅನುಯಾಯಿಗಳು ನೋಡಲಿ.
4 : ಪ್ರಖ್ಯಾತನಾಗಬೇಕೆಂದಿರುವ ಯಾರೂ ತನ್ನ ಕಾರ್ಯಗಳನ್ನು ಮರೆಯಲ್ಲಿ ಮಾಡುವುದಿಲ್ಲ, ಇವನ್ನೆಲ್ಲಾ ನೀನು ಮಾಡುವುದಾದರೆ ಲೋಕಕ್ಕೆ ಪ್ರಕಟವಾಗುವಂತೆ ಮಾಡಬೇಕು,” ಎಂದು ಯೇಸುವಿಗೆ ಹೇಳಿದರು.
5 : ಅವರ ಸೋದರರಿಗೆ ಕೂಡ ಅವರಲ್ಲಿ ವಿಶ್ವಾಸ ಇರಲಿಲ್ಲ.
6 : ಅದಕ್ಕೆ ಯೇಸು, “ನನಗೆ ಸೂಕ್ತ ಸಮಯ ಇನ್ನೂ ಬಂದಿಲ್ಲ, ನಿಮಗಾದರೋ ಎಲ್ಲಾ ಸಮಯವೂ ಒಂದೇ.
7 : ಲೋಕಕ್ಕೆ ನಿಮ್ಮ ಮೇಲೆ ಹಗೆಯಿಲ್ಲ. ಅದಕ್ಕೆ ಹಗೆಯಿರುವುದು ನನ್ನ ಮೇಲೆ. ಏಕೆಂದರೆ, ಅದರ ವರ್ತನೆ ಕೆಟ್ಟದೆಂದು ನಾನು ಯಥಾರ್ಥವಾಗಿ ಹೇಳುತ್ತಾ ಇದ್ದೇನೆ.
8 : ಹಬ್ಬಕ್ಕೆ ನೀವೇ ಹೋಗಿರಿ, ನನಗೆ ಸಮಯವು ಇನ್ನೂ ಬಂದಿಲ್ಲವಾದ ಕಾರಣ ನಾನು ಹಬ್ಬಕ್ಕೆ ಈಗ ಹೋಗುವುದಿಲ್ಲ,” ಎಂದು ಹೇಳಿ ಯೇಸು
9 : ಯೇಸು ಗಲಿಲೇಯದಲ್ಲೇ ಉಳಿದುಕೊಂಡರು.
10 : ಯೇಸುಸ್ವಾಮಿಯ ಸೋದರರು ಹಬ್ಬಕ್ಕೆ ಹೋದರು. ಯೇಸುವೂ ಅಲ್ಲಿಗೆ ಹೋದರು. ಬಹಿರಂಗವಾಗಿ ಅಲ್ಲ, ಗುಟ್ಟಾಗಿ.
11 : ಹಬ್ಬದ ಸಮಯದಲ್ಲಿ ಯೆಹೂದ್ಯರು ಯೇಸು ಎಲ್ಲಿದ್ದಾನೆಂದು ಹುಡುಕುತ್ತಿದ್ದರು. ಯೇಸುವನ್ನು ಕುರಿತು ಜನರಗುಂಪು ಗುಜುಗುಜು ಮಾತನಾಡುತ್ತಿತ್ತು.
12 : ‘ಆತ ಒಳ್ಳೆಯ ವ್ಯಕ್ತಿ’ ಎಂದು ಕೆಲವರು ಹೇಳಿದರೆ, ‘ಇಲ್ಲ, ಆತನು ಜನರನ್ನು ಅಡ್ಡದಾರಿಗೆ ಎಳೆಯುತ್ತಿದ್ದಾನೆ,’ ಎನ್ನುತ್ತಿದ್ದರು ಇತರರು.
13 : ಯೆಹೂದ್ಯರಿಗೆ ಅಂಜಿ ಅವರಾರೂ ಬಹಿರಂಗವಾಗಿ ಮಾತನಾಡುತ್ತಿರಲಿಲ್ಲ.
14 : ಹಬ್ಬವು ಅರ್ಧಕ್ಕೆ ಅರ್ಧ ಮುಗಿಯಿತು. ಆಗ ಯೇಸು ಮಹಾದೇವಾಲಯಕ್ಕೆ ಹೋಗಿ ಬೋಧನೆ ಮಾಡತೊಡಗಿದರು.
15 : ಅದನ್ನು ಕೇಳಿ ಯೆಹೂದ್ಯ ಅಧಿಕಾರಿಗಳು ಬೆರಗಾದರು. “ಕಲಿಯದಿದ್ದರೂ ಈ ಮನುಷ್ಯನಿಗೆ ಇಷ್ಟೆಲ್ಲಾ ಪಾಂಡಿತ್ಯ ಎಲ್ಲಿಂದ ಬಂದಿತು?” ಎಂದು ವಿಚಾರಿಸತೊಡಗಿದರು.
16 : ಆಗ ಯೇಸುಸ್ವಾಮಿ, “ನಾನು ಮಾಡುವ ಬೋಧನೆ ನನ್ನದಲ್ಲ; ನನ್ನನ್ನು ಕಳುಹಿಸಿದಾತನದು.
17 : ದೇವರ ಚಿತ್ತದಂತೆ ನಡೆಯಲು ಮನಸ್ಸು ಉಳ್ಳವನಿಗೆ, ನಾನು ಬೋಧಿಸುವುದು ದೇವರಿಂದ ಬಂದುದೋ ಅಥವಾ ನನ್ನ ಸ್ವಂತ ಕಲ್ಪನೆಯೋ ಎಂಬುದು ತಿಳಿಯುತ್ತದೆ.
18 : ಸ್ವಂತ ಕಲ್ಪನೆಯಿಂದ ಮಾತನಾಡುವವನು ತನ್ನ ಸ್ವಪ್ರತಿಷ್ಠೆಯನ್ನು ಬಯಸುತ್ತಾನೆ. ತನ್ನನ್ನು ಕಳುಹಿಸಿದಾತನ ಪ್ರತಿಷ್ಠೆಯನ್ನು ಬಯಸುವವನು ಪ್ರಾಮಾಣಿಕನು. ಕಪಟವೆಂಬುದು ಅವನಲ್ಲಿ ಇರದು.
19 : ಮೋಶೆ ಕೊಟ್ಟ ಧರ್ಮಶಾಸ್ತ್ರ ನಿಮಗಿದೆಯಲ್ಲವೇ, ಆದರೂ ಅದಕ್ಕೆ ಸರಿಯಾಗಿ ನಡೆಯುವವರಾರೂ ನಿಮ್ಮಲ್ಲಿ ಇಲ್ಲ. ನನ್ನನ್ನು ಕೊಲ್ಲಬೇಕೆಂದು ನೀವು ಹವಣಿಸುವುದೇಕೆ?” ಎಂದರು.
20 : ಅದಕ್ಕೆ ಆ ಜನರು, “ನಿನಗೆ ದೆವ್ವ ಹಿಡಿದಿರಬೇಕು; ನಿನ್ನನ್ನು ಕೊಲ್ಲಲು ಹವಣಿಸುತ್ತಿರುವವರಾದರು ಯಾರು?” ಎಂದರು
21 : ಯೇಸು ಅವರಿಗೆ, “ಸಬ್ಬತ್ ದಿನ ನಾನು ಮಾಡಿದ್ದು ಒಂದು ಸೂಚಕಕಾರ್ಯ ಮಾತ್ರ. ಅಷ್ಟಕ್ಕೇ ನೀವೆಲ್ಲರೂ ಕಂಗಾಲಾಗಿದ್ದೀರಿ.
22 : ಸುನ್ನತಿಯನ್ನು ಆಚರಿಸಬೇಕೆಂದು ನಿಯಮಿಸಿದವನು ಮೋಶೆ. (ವಾಸ್ತವವಾಗಿ ಅದು ಮೋಶೆಯ ಕಾಲದಿಂದಲ್ಲ, ಪೂರ್ವಜರ ಕಾಲದಿಂದಲೂ ರೂಢಿಯಲ್ಲಿತ್ತು). ಸಬ್ಬತ್ ದಿನದಲ್ಲಿಯೂ ನೀವು ಸುನ್ನತಿಯನ್ನು ಮಾಡುವುದುಂಟು.
23 : ಮೋಶೆಯ ನಿಯಮವನ್ನು ಉಲ್ಲಂಘಿಸದೆ ನೀವು ಸಬ್ಬತ್‍ದಿನದಲ್ಲಿ ಒಬ್ಬನಿಗೆ ಸುನ್ನತಿ ಮಾಡಬಹುದಾದರೆ ಅದೇ ಸಬ್ಬತ್‍ದಿನದಲ್ಲಿ ನಾನು ಒಬ್ಬ ಮನುಷ್ಯನನ್ನು ಸಂಪೂರ್ಣ ಸ್ವಸ್ಥಪಡಿಸಿದ್ದಕ್ಕೆ ನೀವು ಸಿಟ್ಟಾಗಬೇಕೆ?
24 : ಬರೀ ತೋರಿಕೆಯಿಂದ ತೀರ್ಪು ಕೊಡುವುದು ಸಲ್ಲದು; ನಿಮ್ಮ ತೀರ್ಪು ನ್ಯಾಯಬದ್ಧವಾಗಿರಬೇಕು,” ಎಂದು ಹೇಳಿದರು.
25 : ಜೆರುಸಲೇಮಿನ ಕೆಲವು ಮಂದಿ ಇದನ್ನು ಕೇಳಿ, “ಅವರು ಕೊಲ್ಲಬೇಕೆಂದು ಹವಣಿಸುತ್ತಾ ಇರುವುದು ಈತನನ್ನೇ ಅಲ್ಲವೆ?
26 : ಇಗೋ, ಈತ ಬಹಿರಂಗವಾಗಿ ಮಾತನಾಡುತ್ತಿದ್ದಾನೆ. ಆದರೂ ಈತನಿಗೆ ವಿರುದ್ಧವಾಗಿ ಅವರಾರೂ ಮಾತೆತ್ತುತ್ತಿಲ್ಲ! ಈತನೇ ಲೋಕೋದ್ಧಾರಕನೆಂದು ಆ ಮುಖಂಡರಿಗೆ ಹೊಳೆದಿರಬಹುದೆ?
27 : ಲೋಕೋದ್ಧಾರಕನು ಕಾಣಿಸಿಕೊಳ್ಳುವಾಗ ಆತನು ಎಲ್ಲಿಂದ ಬಂದನೆಂದು ಯಾರಿಗೂ ತಿಳಿದಿರುವುದಿಲ್ಲ. ಆದರೆ ಈತನು ಎಲ್ಲಿಂದ ಬಂದವನೆಂದು ನಮ್ಮೆಲ್ಲರಿಗೂ ತಿಳಿದಿದೆಯಲ್ಲಾ!” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
28 : ಆದುದರಿಂದ ದೇವಾಲಯದಲ್ಲಿ ಬೋಧಿಸುತ್ತಿದ್ದ ಯೇಸುಸ್ವಾಮಿ ಆಗ ಗಟ್ಟಿಯಾಗಿ ಇಂತೆಂದರು: “ನಾನು ಯಾರೆಂದು, ಎಲ್ಲಿಂದ ಬಂದವನೆಂದು ನೀವು ಬಲ್ಲಿರೋ? ನಾನು ನನ್ನಷ್ಟಕ್ಕೇ ಬಂದವನಲ್ಲ; ನನ್ನನ್ನು ಕಳುಹಿಸಿದಾತನು ಸತ್ಯಸ್ವರೂಪಿ. ಆತನನ್ನು ನೀವು ಅರಿತಿಲ್ಲ.
29 : ನಾನಾದರೋ ಆತನನ್ನು ಅರಿತಿದ್ದೇನೆ. ಏಕೆಂದರೆ, ನಾನು ಬಂದುದು ಆತನಿಂದಲೇ. ಆತನೇ ನನ್ನನ್ನು ಕಳುಹಿಸಿದ್ದು,”
30 : ಇದನ್ನು ಕೇಳಿದ ಯೆಹೂದ್ಯರು ಯೇಸುವನ್ನು ಹಿಡಿದು ಬಂಧಿಸಲು ಪ್ರಯತ್ನಿಸಿದರು. ಆದರೆ ಅವರ ಗಳಿಗೆ ಇನ್ನೂ ಬಾರದೆ ಇದ್ದ ಕಾರಣ ಯಾರೂ ಅವರ ಮೇಲೆ ಕೈಹಾಕಲಿಲ್ಲ.
31 : ಅಲ್ಲಿ ನೆರೆದಿದ್ದ ಹಲವರಿಗೆ ಯೇಸುವಿನಲ್ಲಿ ನಂಬಿಕೆ ಹುಟ್ಟಿತು. “ಲೋಕೋದ್ಧಾರಕ ಬಂದಾಗ ಈತನು ಮಾಡಿದ್ದಕ್ಕೂ ಮಿಗಿಲಾದ ಸೂಚಕಕಾರ್ಯಗಳನ್ನು ಮಾಡಿಯಾನೆ?” ಎಂದುಕೊಂಡರು.
32 : ಯೇಸುಸ್ವಾಮಿಯನ್ನು ಕುರಿತು ಜನರು ಹೀಗೆ ಆಡುತ್ತಿದ್ದ ಗುಸುಗುಸು ಮಾತು ಫರಿಸಾಯರ ಕಿವಿಗೆ ಮುಟ್ಟಿತು. ಅವರೂ ಮುಖ್ಯಯಾಜಕರೂ ಯೇಸುವನ್ನು ಬಂಧಿಸಲು ಕಾವಲಾಳುಗಳನ್ನು ಕಳುಹಿಸಿದರು.
33 : ಆಗ ಯೇಸು, “ಇನ್ನು ತುಸುಕಾಲ ಮಾತ್ರ ನಾನು ನಿಮ್ಮೊಡನೆ ಇರುತ್ತೇನೆ. ಅನಂತರ ನನ್ನನ್ನು ಕಳುಹಿಸಿದಾತನ ಬಳಿಗೆ ಹೊರಟು ಹೋಗುತ್ತೇನೆ.
34 : ಆಗ ನೀವು ನನ್ನನ್ನು ಹುಡುಕುವಿರಿ. ಆದರೆ ನಾನು ನಿಮಗೆ ಕಾಣಸಿಗುವುದಿಲ್ಲ. ನಾನು ಇರುವಲ್ಲಿಗೆ ನೀವು ಬರುವಂತೆಯೂ ಇಲ್ಲ,” ಎಂದು ಹೇಳಿದರು.
35 : ಯೆಹೂದ್ಯ ಅಧಿಕಾರಿಗಳು, “ನಮಗೆ ಕಾಣಸಿಗದ ಹಾಗೆ ಇವನು ಎಲ್ಲಿ ಹೋಗಲಿದ್ದಾನೆ? ಗ್ರೀಕರ ನಡುವೆ ಚದರಿ ಹೋಗಿರುವ ಯೆಹೂದ್ಯರಲ್ಲಿಗೆ ಹೋಗಿ ಅವರಿಗೆ ಬೋಧಿಸುವನೋ?
36 : “ನನ್ನನ್ನು ಅರಸುವಿರಿ, ಆದರೆ ನಾನು ನಿಮಗೆ ಕಾಣಸಿಗುವುದಿಲ್ಲ. ನಾನಿರುವಲ್ಲಿಗೆ ನೀವು ಬರುವಂತಿಲ್ಲ’ ಎಂದು ಇವನು ಹೇಳುವುದರ ಅರ್ಥ ಏನಿರಬಹುದು?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. ಜೀವದಾಯಕ ಹೊನಲು
37 : ಹಬ್ಬದ ಕೊನೆಯ ದಿನ ಮಹಾದಿನ ಆಗಿತ್ತು. ಅಂದು ಯೇಸುಸ್ವಾಮಿ ಅಲ್ಲಿ ನಿಂತುಕೊಂಡು, “ಬಾಯಾರಿದವನು ನನ್ನ ಬಳಿಗೆ ಬಂದು ಕುಡಿಯಲಿ.
38 : ಪವಿತ್ರಗ್ರಂಥದಲ್ಲಿ ಹೇಳಿರುವಂತೆ, ‘ನನ್ನಲ್ಲಿ ವಿಶ್ವಾಸವಿಡುವವನ ಹೃದಯದಿಂದ ಜೀವಜಲ ಹೊನಲುಹೊನಲಾಗಿ ಹರಿಯುವುದು’,” ಎಂದು ಕೂಗಿ ಹೇಳಿದರು.
39 : ತಮ್ಮಲ್ಲಿ ವಿಶ್ವಾಸವಿಡುವವರು ಪಡೆಯಲಿದ್ದ ಪವಿತ್ರಾತ್ಮರನ್ನು ಕುರಿತೇ ಯೇಸು ಹೀಗೆ ಹೇಳಿದ್ದು. ಪವಿತ್ತ ಆತ್ಮ ಇನ್ನೂ ಬಂದಿರಲಿಲ್ಲ. ಏಕೆಂದರೆ, ಯೇಸು ಇನ್ನೂ ಮೇಲೇರಿ ಮಹಿಮೆಯನ್ನು ಪಡೆದಿರಲಿಲ್ಲ. ಜನರಲ್ಲಿ ಭಿನ್ನಭಾವನೆ
40 : ಇದನ್ನು ಕೇಳಿ ನೆರೆದಿದ್ದವರಲ್ಲಿ ಕೆಲವರು, “ಬರಬೇಕಾಗಿದ್ದ ಪ್ರವಾದಿ ಈತನೇ ಸರಿ,” ಎಂದರು.
41 : ಇನ್ನೂ ಕೆಲವರು, “ಈತನೇ ಲೋಕೋದ್ದಾರಕ,” ಎಂದರು. ಮತ್ತೆ ಕೆಲವರು, “ಲೋಕೋದ್ಧಾರಕ ಗಲಿಲೇಯದಿಂದ ಬರುವುದುಂಟೇ?
42 : ‘ಆತ ದಾವೀದ ವಂಶಜನು; ಆತನು ಹುಟ್ಟುವುದು ದಾವೀದನ ಊರಾದ ಬೆತ್ಲೆಹೇಮಿನಲ್ಲಿ’ ಎಂದು ಪವಿತ್ರ ಗ್ರಂಥವೇ ಹೇಳಿದೆಯಲ್ಲವೆ?” ಎಂದು ವಾದಿಸಿದರು.
43 : ಹೀಗೆ ಯೇಸುವನ್ನು ಕುರಿತು ಜನರಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು.
44 : ಕೆಲವರಿಗಂತೂ ಯೇಸುವನ್ನು ಹಿಡಿದು ಬಂಧಿಸಬೇಕೆನಿಸಿತು. ಆದರೆ ಯಾರೂ ಅವರ ಮೇಲೆ ಕೈಹಾಕಲಿಲ್ಲ. ವಿಶ್ವಾಸವಿಹೀನ ಮುಖಂಡರು
45 : ಕಾವಲಾಳುಗಳು ಹಿಂದಿರುಗಿದಾಗ, ಮುಖ್ಯಯಾಜಕರು ಮತ್ತು ಫರಿಸಾಯರು, “ಅವನನ್ನೇಕೆ ನೀವು ಹಿಡಿದು ತರಲಿಲ್ಲ?” ಎಂದು ಕೇಳಿದರು.
46 : ಅವರು, “ಆತನು ಮಾತನಾಡುವಂತೆ ಯಾರೂ ಎಂದೂ ಮಾತನಾಡಿದ್ದಿಲ್ಲ,” ಎಂದು ಉತ್ತರಿಸಿದರು.
47 : ಅದಕ್ಕೆ ಫರಿಸಾಯರು, “ಏನು, ನೀವು ಕೂಡ ಅವನಿಗೆ ಮರುಳಾಗಿಬಿಟ್ಟಿರೋ?
48 : ನಮ್ಮ ಮುಖಂಡರಲ್ಲಾಗಲಿ, ಫರಿಸಾಯರಲ್ಲಾಗಲಿ, ಯಾರಾದರೂ ಅವನನ್ನು ನಂಬಿದ್ದುಂಟೆ?
49 : ಧರ್ಮಶಾಸ್ತ್ರದ ಗಂಧವೂ ಇಲ್ಲದ ಜನಜಂಗುಳಿ ಶಾಪಗ್ರಸ್ತವಾಗಿದೆ,” ಎಂದರು.
50 : ಅಲ್ಲಿದ್ದ ಫರಿಸಾಯರಲ್ಲಿ ನಿಕೊದೇಮನು ಒಬ್ಬನು. ಹಿಂದೆ ಯೇಸುವನ್ನು ಕಾಣಲು ಬಂದಿದ್ದವನು ಈತನೇ.
51 : ಈತನು ಅವರಿಗೆ, “ಒಬ್ಬ ವ್ಯಕ್ತಿಯ ಹೇಳಿಕೆಯನ್ನು ಕೇಳದೆ, ಆತನು ಮಾಡಿರುವುದನ್ನು ಕಂಡುಕೊಳ್ಳದೆ, ಆತನನ್ನು ದೋಷಿಯೆಂದು ನಿರ್ಧರಿಸುವುದು ಶಾಸ್ತ್ರಸಮ್ಮತವೇ?” ಎಂದು ಕೇಳಿದನು.
52 : ಅದಕ್ಕೆ ಅವರು, “ನೀನೂ ಗಲಿಲೇಯದವನೋ? ಪವಿತ್ರಗ್ರಂಥವನ್ನು ಓದಿ ನೋಡು; ಗಲಿಲೇಯದಿಂದ ಯಾವ ಪ್ರವಾದಿಯೂ ತಲೆಯೆತ್ತುವುದಿಲ್ಲ, ಎಂಬುದು ನಿನಗೇ ಗೊತ್ತಾಗುತ್ತದೆ,” ಎಂದು ಮರುತ್ತರ ಕೊಟ್ಟರು.
53 : ಬಳಿಕ ಎಲ್ಲರೂ ತಮ್ಮತಮ್ಮ ಮನೆಗಳಿಗೆ ತೆರಳಿದರು.

· © 2017 kannadacatholicbible.org Privacy Policy