Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೊವಾನ್ನ


1 : ಯೇಸುಸ್ವಾಮಿ ಗಲಿಲೇಯ ಸರೋವರವನ್ನು ದಾಟಿ, ಆಚೆಯ ದಡಕ್ಕೆ ಹೋದರು. ಅದಕ್ಕೆ ತಿಬೇರಿಯ ಸರೋವರವೆಂದು ಹೆಸರು.
2 : ಜರೋನರು ದೊಡ್ಡ ಗುಂಪೊಂದು ಅವರ ಹಿಂದೆ ಹೋಯಿತು. ಏಕೆಂದರೆ, ಯೇಸು ಸೂಚಕಕಾರ್ಯಗಳನ್ನು ಮಾಡುತ್ತಾ ಗಪೀಡಿತರನ್ನು ಗುಣಪಡಿಸುತ್ತಾ ಇದ್ದುದ್ದನ್ನು ಆ ಜನರು ನೋಡಿದ್ದರು.
3 : ಯೇಸು ಬೆಟ್ಟವನ್ನು ಹತ್ತಿ ತಮ್ಮ ಶಿಷ್ಯರ ಸಂಗಡ ಕುಳಿತುಕೊಂಡರು.
4 : ಯೆಹೂದ್ಯರ ಪಾಸ್ಕ ಹಬ್ಬವು ಹತ್ತಿರವಾಗಿತ್ತು.
5 : ಯೇಸು ಕಣ್ಣು ಹಾಯಿಸಿ ನೋಡಿದಾಗ ಆ ದೊಡ್ಡ ಗುಂಪು ತಮ್ಮ ಕಡೆಗೆ ಬರುವುದನ್ನು ಕಂಡರು. “ಈ ಜನರ ಊಟಕ್ಕೆ ರೊಟ್ಟಿಯನ್ನು ನಾವು ಎಲ್ಲಿಂದ ಕೊಂಡುಕೊಳ್ಳುವುದು?” ಎಂದು ಯೇಸು ಫಿಲಿಪ್ಪನನ್ನು ಕೇಳಿದರು.
6 : ಫಿಲಿಪ್ಪನನ್ನು ಪರೀಕ್ಷಿಸುವ ಸಲುವಾಗಿ ಅವರು ಹಾಗೆ ಹೇಳಿದರು. ಏಕೆಂದರೆ, ತಾವು ಮಾಡಲಿರುವುದು ಅವರಿಗೆ ತಿಳಿದಿತ್ತು.
7 : ಅದಕ್ಕೆ ಫಿಲಿಪ್ಪನು, “ಇನ್ನೂರು ದಿನಾರಿ ನಾಣ್ಯಗಳನ್ನು ಕೊಟ್ಟು ರೊಟ್ಟಿಯನ್ನು ತಂದರೂ ಆಳಿಗೊಂದು ತುಂಡೂ ಬಾರದು,” ಎಂದನು.
8 : ಆಗ ಶಿಷ್ಯರಲ್ಲಿ ಒಬ್ಬನು, ಅಂದರೆ ಸಿಮೋನ್ ಪೇತ್ರನ ಸಹೋದರನಾದ ಅಂದ್ರೆಯನು,
9 : “ಇಲ್ಲಿ ಒಬ್ಬ ಹುಡುಗನ ಬಳಿ ಜವೆಗೋದಿಯ ಐದು ರೊಟ್ಟಿಗಳೂ ಎರಡು ವಿೂನುಗಳೂ ಇವೆ. ಆದರೆ ಈ ಜನಸಮೂಹಕ್ಕೆ ಇವೆಲ್ಲಿ ಸಾಕಾಗುತ್ತವೆ?” ಎಂದನು.
10 : ಯೇಸು, “ಜನರನ್ನು ಊಟಕ್ಕೆ ಕೂರಿಸಿರಿ,” ಎಂದರು. ಅಲ್ಲಿ ಹುಲುಸಾಗಿದ್ದ ಹುಲ್ಲಿನ ಮೇಲೆ ಜನರು ಕುಳಿತುಕೊಂಡರು. ಗಂಡಸರ ಸಂಖ್ಯೆಯೇ ಐದುಸಾವಿರದಷ್ಟಿತ್ತು.
11 : ಯೇಸು, ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರವನ್ನು ಸಲ್ಲಿಸಿ, ಕುಳಿತಿದ್ದ ಜನರಿಗೆ ಅವುಗಳನ್ನು ಹಂಚಿದರು. ಹಾಗೆಯೇ ವಿೂನುಗಳನ್ನೂ ಹಂಚಿಕೊಟ್ಟರು. ಎಲ್ಲರೂ ತಮಗೆ ಬೇಕಾದಷ್ಟು ತಿಂದರು.
12 : ಅವರೆಲ್ಲರೂ ತಿಂದು ತೃಪ್ತರಾದ ಮೇಲೆ ಯೇಸು, “ತಿಂದುಳಿದ ತುಂಡುಗಳನ್ನೆಲ್ಲಾ ಒಟ್ಟುಗೂಡಿಸಿರಿ; ಒಂದು ತುಂಡೂ ಹಾಳಾಗಬಾರದು,” ಎಂದು ತಮ್ಮ ಶಿಷ್ಯರಿಗೆ ಹೇಳಿದರು.
13 : ತಿಂದುಳಿದ ಆ ಐದು ರೊಟ್ಟಿಗಳ ತುಂಡುಗಳನ್ನು ಒಟ್ಟುಗೂಡಿಸಲು ಅವು ಹನ್ನೆರಡು ಬುಟ್ಟಿಗಳ ತುಂಬಾ ಆದವು.
14 : ಯೇಸು ಮಾಡಿದ ಈ ಸೂಚಕಕಾರ್ಯಗಳನ್ನು ಕಂಡ ಜನರು, “ಲೋಕಕ್ಕೆ ಬರಬೇಕಾಗಿದ್ದ ಪ್ರವಾದಿ ನಿಜವಾಗಿಯೂ ಇವರೇ,” ಎಂದು ಹೇಳತೊಡಗಿದ್ದರು.
15 : ಅವರೆಲ್ಲರೂ ಬಂದು ತಮ್ಮನ್ನು ಹಿಡಿದು ಅರಸನನ್ನಾಗಿ ಮಾಡುವ ಯೋಚನೆಯಲ್ಲಿದ್ದಾರೆ ಎಂಬುದನ್ನು ಅರಿತ ಯೇಸು ತಾವೊಬ್ಬರೇ ಬೆಟ್ಟದ ಕಡೆಗೆ ಹೊರಟುಬಿಟ್ಟರು.
16 : ಸಾಯಂಕಾಲವಾದ ಮೇಲೆ ಯೇಸುಸ್ವಾಮಿಯ ಶಿಷ್ಯರು ಸರೋವರಕ್ಕೆ ಹೋಗಿ
17 : ದೋಣಿಯನ್ನು ಹತ್ತಿ ಕಫೆರ್ನವುಮಿನ ಕಡೆ ಸಾಗಿದರು. ಆಗಲೇ ಕತ್ತಲು ಕವಿದಿತ್ತು. ಯೇಸು ಅವರ ಬಳಿಗೆ ಇನ್ನೂ ಬಂದಿರಲಿಲ್ಲ.
18 : ಅಷ್ಟರಲ್ಲಿ ರಭಸವಾದ ಗಾಳಿ ಬೀಸತೊಡಗಿತು. ಸರೋವರವು ಅಲ್ಲೋಲಕಲ್ಲೋಲವಾಯಿತು.
19 : ಐದು ಆರು ಕಿಲೋಮೀಟರಿನಷ್ಟು ಹುಟ್ಟು ಹಾಕಿರಬೇಕು. ಆಗ ಯೇಸು ನೀರಿನ ಮೇಲೆ ನಡೆಯುತ್ತಾ ದೋಣಿಯನ್ನು ಸಮೀಪಿಸುತ್ತಿರುವುದು ಶಿಷ್ಯರಿಗೆ ಕಾಣಿಸಿತು. ಅದನ್ನು ನೋಡಿ ಅವರು ಹೆದರಿದರು.
20 : ಆಗ ಯೇಸು, “ನಾನೇ, ಇನ್ಯಾರೂ ಅಲ್ಲ; ಅಂಜಬೇಡಿ,” ಎಂದು ಹೇಳಿದರು.
21 : ಶಿಷ್ಯರು ಅವರನ್ನು ದೋಣಿಯೊಳಕ್ಕೆ ಬರಮಾಡಿಕೊಳ್ಳುವುದರಲ್ಲಿದ್ದರು. ಅಷ್ಟರಲ್ಲಿ, ದೋಣಿಯು ಸೇರಬೇಕಾಗಿದ್ದ ದಡವನ್ನು ತಲುಪಿತು. ಜನಪ್ರಿಯ ಯೇಸು
22 : ನೆರೆದಿದ್ದ ಜನರು ಮಾರನೆಯ ದಿನವೂ ಸರೋವರದ ಆಚೆಕಡೆಯೇ ಉಳಿದಿದ್ದರು. ಹಿಂದಿನ ದಿನ ಅಲ್ಲಿ ಒಂದೇ ಒಂದು ದೋಣಿ ಇದ್ದುದನ್ನು ಅವರು ನೋಡಿದ್ದರು. ಯೇಸುಸ್ವಾಮಿ ಶಿಷ್ಯರೊಡನೆ ದೋಣಿಯನ್ನು ಹತ್ತಲಿಲ್ಲವಾದ್ದರಿಂದ ಶಿಷ್ಯರು ಮಾತ್ರ ಹೊರಟು ಹೋಗಿದ್ದಾರೆಂದು ಅವರಿಗೆ ತಿಳಿದಿತ್ತು.
23 : ತಿಬೇರಿಯದಿಂದ ಹೊರಟಿದ್ದ ದೋಣಿಗಳು ಅಷ್ಟು ಹೊತ್ತಿಗೆ ಅಲ್ಲಿಗೆ ಬಂದು ಸೇರಿದವು. ಪ್ರಭುವು ದೇವರಿಗೆ ಸ್ತೋತ್ರವನ್ನು ಸಲ್ಲಿಸಿ, ಜನರಿಗೆ ರೊಟ್ಟಿ ಬಡಿಸಿದ್ದ ಸ್ಥಳ ಅಲ್ಲೇ ಪಕ್ಕದಲ್ಲಿತ್ತು.
24 : ಯೇಸು ಆಗಲಿ, ಅವರ ಶಿಷ್ಯರಾಗಲಿ ಇಲ್ಲದ್ದನ್ನು ನೋಡಿ ಜನರು ಆ ದೋಣಿಗಳನ್ನು ಹತ್ತಿ ಯೇಸುವನ್ನು ಹುಡುಕುತ್ತಾ ಕಫೆರ್ನವುಮಿಗೆ ಬಂದರು.
25 : ಜನರು ಯೇಸುಸ್ವಾಮಿಯನ್ನು ಸರೋವರದ ಆಚೆದಡದಲ್ಲಿ ಕಂಡೊಡನೆ, “ಗುರುದೇವಾ, ತಾವಿಲ್ಲಿಗೆ ಬಂದುದು ಯಾವಾಗ?” ಎಂದು ಕೇಳಿದರು.
26 : ಯೇಸು ಅವರಿಗೆ, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ನನ್ನನ್ನು ಹುಡುಕಿಕೊಂಡು ಬಂದದ್ದು ಸೂಚಕಕಾರ್ಯಗಳನ್ನು ನೋಡಿ ಗ್ರಹಿಸಿಕೊಂಡಿದ್ದರಿಂದ ಅಲ್ಲ, ಹೊಟ್ಟೆತುಂಬುವಷ್ಟು ರೊಟ್ಟಿ ಸಿಕ್ಕಿದ್ದರಿಂದ.
27 : ಅಳಿದುಹೋಗುವ ಆಹಾರಕ್ಕಾಗಿ ದುಡಿಯಬೇಡಿ; ಉಳಿಯುವ ಮತ್ತು ನಿತ್ಯಜೀವವನ್ನು ಈಯುವ ಆಹಾರಕ್ಕಾಗಿ ದುಡಿಯಿರಿ. ಇಂಥ ಆಹಾರವನ್ನು ನಿಮಗೆ ನೀಡುವವನು ನರಪುತ್ರನೇ. ಏಕೆಂದರೆ, ಪಿತನಾದ ದೇವರು ತಮ್ಮ ಅಧಿಕಾರ ಮುದ್ರೆಯನ್ನು ಆತನ ಮೇಲೆ ಒತ್ತಿದ್ದಾರೆ,” ಎಂದು ಉತ್ತರಕೊಟ್ಟರು.
28 : ಆಗ ಆ ಜನರು, “ದೇವರು ಮೆಚ್ಚುವ ಕಾರ್ಯಗಳನ್ನು ನಾವು ಮಾಡಬೇಕಾದರೆ, ಏನು ಮಾಡಬೇಕು?” ಎಂದು ಕೇಳಿದರು.
29 : ಅದಕ್ಕೆ ಯೇಸು, “ದೇವರು ಕಳುಹಿಸಿದಾತನನ್ನು ನೀವು ವಿಶ್ವಾಸಿಸಬೇಕು. ಇದೇ ಅವರು ಮೆಚ್ಚುವ ಕಾರ್ಯ,” ಎಂದರು.
30 : ಅದಕ್ಕೆ ಆ ಜನರು, “ನಾವು ನೋಡಿ ನಿಮ್ಮಲ್ಲಿ ವಿಶ್ವಾಸ ಇಡುವಂತೆ ನೀವು ಏನು ಮಾಡುವಿರಿ? ಯಾವ ಸೂಚಕಕಾರ್ಯವನ್ನು ತೋರಿಸುವಿರಿ?
31 : ನಮ್ಮ ಪೂರ್ವಜರಿಗೆ ಮರುಭೂಮಿಯಲ್ಲಿ ತಿನ್ನಲು ‘ಮನ್ನಾ’ ಸಿಕ್ಕಿತು, ತಿನ್ನಲು ಅವರಿಗೆ ಸ್ವರ್ಗದಿಂದ ರೊಟ್ಟಿ ದೊರಕಿತು, ಎಂದು ಪವಿತ್ರಗ್ರಂಥವೇ ಹೇಳುತ್ತದೆಯಲ್ಲವೇ?” ಎಂದರು.
32 : ಯೇಸು ಅವರಿಗೆ, “ನಿಮಗೆ ಸತ್ಯವಾಗಿ ಹೇಳುತ್ತೇನೆ; ಸ್ವರ್ಗದಿಂದ ನಿಮಗೆ ರೊಟ್ಟಿಯನ್ನು ಕೊಟ್ಟವನು ಮೋಶೆಯಲ್ಲ; ನಿಮಗೆ ಸ್ವರ್ಗದಿಂದ ನಿಜವಾದ ರೊಟ್ಟಿಯನ್ನು ಕೊಡುವವರು ನನ್ನ ಪಿತನೇ.
33 : ಏಕೆಂದರೆ, ಸ್ವರ್ಗದಿಂದ ಇಳಿದು ಬಂದು ಲೋಕಕ್ಕೆ ಸಜ್ಜೀವವನ್ನೀಯುವಾತನೇ ದೇವರು ಕೊಡುವ ರೊಟ್ಟಿ,” ಎಂದು ಹೇಳಿದರು.
34 : ಅದಕ್ಕೆ ಆ ಜನರು, “ಅಂಥಾ ರೊಟ್ಟಿಯನ್ನೇ ನಮಗೆ ಯಾವಾಗಲೂ ಕೊಡಿ,” ಎಂದು ಕೇಳಿದರು.
35 : ಆಗ ಯೇಸು, “ನಾನೇ ಜೀವದಾಯಕ ರೊಟ್ಟಿ, ನನ್ನ ಬಳಿ ಬರುವವನಿಗೆ ಹಸಿವೇ ಇರದು; ನನ್ನಲ್ಲಿ ವಿಶ್ವಾಸವಿಡುವವನಿಗೆ ಎಂದಿಗೂ ದಾಹವಾಗದು.
36 : ಆದರೆ, ನಾನು ನಿಮಗೆ ಹೇಳಿದಂತೆ, ನೀವು ನನ್ನನ್ನು ನೋಡಿಯೂ ವಿಶ್ವಾಸಿಸದೆ ಇದ್ದೀರಿ.
37 : ಪಿತನು ನನಗೆಂದು ಕೊಟ್ಟಿರುವ ಪ್ರತಿಯೊಬ್ಬನೂ ನನ್ನಲ್ಲಿಗೆ ಬರುತ್ತಾನೆ. ನನ್ನಲ್ಲಿಗೆ ಬರುವವನನ್ನು ನಾನೆಂದಿಗೂ ತಳ್ಳಿಬಿಡುವುದಿಲ್ಲ.
38 : ನಾನು ಸ್ವರ್ಗದಿಂದ ಇಳಿದು ಬಂದುದು ನನ್ನ ಇಚ್ಛೆಯಂತೆ ನಡೆಯುವುದಕ್ಕಲ್ಲ, ನನ್ನನ್ನು ಕಳುಹಿಸಿದಾತನ ಚಿತ್ತದಂತೆ ನಡೆಯುವುದಕ್ಕೆ.
39 : ಅವರ ಚಿತ್ತವೇನೆಂದರೆ: ಅವರು ನನಗೆ ಕೊಟ್ಟವರಲ್ಲಿ ಒಬ್ಬನನ್ನೂ ಕಳೆದುಕೊಳ್ಳದೆ ಅಂತಿಮ ದಿನದಂದು ಅವರೆಲ್ಲರನ್ನೂ ನಾನು ಜೀವಕ್ಕೆ ಎಬ್ಬಿಸಬೇಕು.
40 : ಪುತ್ರನನ್ನು ಕಂಡು ಆತನಲ್ಲಿ ವಿಶ್ವಾಸ ಇಡುವ ಪ್ರತಿಯೊಬ್ಬನೂ ನಿತ್ಯಜೀವವನ್ನು ಪಡೆಯಬೇಕೆಂಬುದೇ ನನ್ನ ಪಿತನ ಸಂಕಲ್ಪ. ಅಂಥವನನ್ನು ಅಂತಿಮ ದಿನದಂದು ನಾನು ಜೀವಕ್ಕೆ ಎಬ್ಬಿಸುತ್ತೇನೆ,” ಎಂದು ನುಡಿದರು.
41 : “ಸ್ವರ್ಗದಿಂದ ಇಳಿದು ಬಂದ ರೊಟ್ಟಿ ನಾನೇ” ಎಂದು ಯೇಸು ಹೇಳಿದ್ದಕ್ಕೆ ಯೆಹೂದ್ಯರು ಗೊಣಗತೊಡಗಿದರು.
42 : ಅವರು, “ಈತನು ಜೋಸೆಫನ ಮಗನಾದ ಯೇಸು ಅಲ್ಲವೆ? ಈತನ ತಂದೆ ತಾಯಿ ನಮಗೆ ಗೊತ್ತಿಲ್ಲವೆ? ಅಂದಮೇಲೆ, ‘ನಾನು ಸ್ವರ್ಗದಿಂದ ಬಂದಿದ್ದೇನೆ,’ ಎಂದು ಈತನು ಹೇಳುವುದಾದರೂ ಹೇಗೆ?” ಎಂದರು.
43 : ಅದಕ್ಕೆ ಯೇಸು, “ನಿಮ್ಮನಿಮ್ಮೊಳಗೆ ಗೊಣಗುಟ್ಟದಿರಿ.
44 : ನನ್ನನ್ನು ಕಳುಹಿಸಿಕೊಟ್ಟ ಪಿತನು, ನನ್ನತ್ತ ಸೆಳೆಯದ ಹೊರತು, ಯಾರೂ ನನ್ನ ಬಳಿಗೆ ಬಾರರು. ಬಂದವರನ್ನು ನಾನು ಅಂತಿಮ ದಿನದಂದು ಜೀವಕ್ಕೆ ಎಬ್ಬಿಸುತ್ತೇನೆ.
45 : ‘ದೇವರಿಂದಲೇ ಅವರೆಲ್ಲರೂ ಬೋಧನೆ ಪಡೆಯುವರು,’ ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದಿದೆ. ಪಿತನಿಗೆ ಕಿವಿಗೊಟ್ಟು ಅವರಿಂದಲೇ ಕಲಿತುಕೊಂಡ ಪ್ರತಿ ಒಬ್ಬನೂ ನನ್ನ ಬಳಿಗೆ ಬರುತ್ತಾನೆ.
46 : ಹಾಗೆಂದ ಮಾತ್ರಕ್ಕೆ ಪಿತನನ್ನು ಯಾರಾದರೂ ಕಣ್ಣಾರೆ ಕಂಡಿದ್ದಾರೆ ಎಂದಲ್ಲ, ದೇವರಿಂದ ಬಂದಿರುವ ಒಬ್ಬನು ಮಾತ್ರ ಪಿತನನ್ನು ಕಂಡಿದ್ದಾನೆ.
47 : ವಿಶ್ವಾಸವುಳ್ಳವನಲ್ಲಿ ನಿತ್ಯಜೀವ ಇದೆಯೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.
48 : ಜೀವದಾಯಕ ರೊಟ್ಟಿ ನಾನೇ.
49 : ನಿಮ್ಮ ಪೂರ್ವಜರು ಮರಳುಗಾಡಿನಲ್ಲಿ ‘ಮನ್ನಾ’ವನ್ನು ತಿಂದರು; ಆದರೂ ಸಾವಿಗೆ ತುತ್ತಾದರು.
50 : ಸ್ವರ್ಗದಿಂದ ಇಳಿದು ಬಂದ ರೊಟ್ಟಿಯಾದರೋ ಹಾಗಲ್ಲ. ಇದನ್ನು ತಿನ್ನುವ ಯಾರಿಗೂ ಸಾವೆಂಬುದು ಇಲ್ಲ.
51 : ನಾನೇ ಸ್ವರ್ಗದಿಂದ ಇಳಿದು ಬಂದ ಜೀವಂತ ರೊಟ್ಟಿ. ಈ ರೋಟ್ಟಿಯನ್ನು ತಿಂದವನು ಚಿರಕಾಲ ಬಾಳುತ್ತಾನೆ. ಲೋಕೋದ್ಧಾರಕ್ಕಾಗಿ ನಾನು ಅರ್ಪಿಸುವ ನನ್ನ ಮಾಂಸವೇ ನಾನು ಕೊಡುವ ರೊಟ್ಟಿ,” ಎಂದು ಹೇಳಿದರು.
52 : ಅಷ್ಟಕ್ಕೆ ಆ ಯೆಹೂದ್ಯರಲ್ಲಿ ತೀವ್ರ ವಾಗ್ವಾದ ಉಂಟಾಯಿತು. “ಈತನು ತನ್ನ ಮಾಂಸವನ್ನು ತಿನ್ನಲು ಹೇಗೆ ಕೊಟ್ಟಾನು?” ಎಂದು ಕೇಳತೊಡಗಿದರು.
53 : ಅದಕ್ಕೆ ಯೇಸು, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ನರಪುತ್ರನ ಮಾಂಸವನ್ನು ತಿನ್ನದೆ, ಆತನ ರಕ್ತವನ್ನು ಕುಡಿಯದೆ ಹೋದರೆ ನಿಮ್ಮಲ್ಲಿ ಜೀವ ಇರುವುದಿಲ್ಲ.
54 : ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನಲ್ಲಿ ನಿತ್ಯಜೀವ ಇರುತ್ತದೆ. ಅಲ್ಲದೆ ಅಂತಿಮ ದಿನದಂದು ನಾನು ಅವನನ್ನು ಜೀವಕ್ಕೆ ಎಬ್ಬಿಸುತ್ತೇನೆ.
55 : ನನ್ನ ಮಾಂಸವೇ ನಿಜವಾದ ಆಹಾರ; ನನ್ನ ರಕ್ತವೇ ನಿಜವಾದ ಪಾನ.
56 : ನನ್ನ ಮಾಂಸವನ್ನು ತಿಂದು, ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ನೆಲೆಸಿರುತ್ತಾನೆ. ನಾನು ಅವನಲ್ಲಿ ನೆಲೆಸಿರುತ್ತೇನೆ.
57 : ಜೀವಸ್ವರೂಪಿ ಆದ ಪಿತನು ನನ್ನನ್ನು ಕಳುಹಿಸಿಕೊಟ್ಟಿರುವರು. ನಾನು ಅವರಿಂದಲೇ ಜೀವಿಸುತ್ತೇನೆ. ಅಂತೆಯೇ ನನ್ನನ್ನು ಭುಜಿಸುವವನು ನನ್ನಿಂದಲೇ ಜೀವಿಸುತ್ತಾನೆ.
58 : ಸ್ವರ್ಗದಿಂದ ಇಳಿದು ಬಂದ ರೊಟ್ಟಿ ಇದೇ. ನಿಮ್ಮ ಪೂರ್ವಜರು ‘ಮನ್ನಾ’ವನ್ನು ತಿಂದರೂ ಸಾವಿಗೆ ತುತ್ತಾದರು. ಇದು ಹಾಗಲ್ಲ, ಈ ರೊಟ್ಟಿಯನ್ನು ತಿನ್ನುವವನು ಚಿರಕಾಲ ಬಾಳುವನು,” ಎಂದು ಹೇಳಿದರು.
59 : ಕಫೆರ್ನವುಮಿನ ಪ್ರಾರ್ಥನಾಮಂದಿರದಲ್ಲಿ ಯೇಸು ಬೋಧನೆ ಮಾಡುತ್ತಿದ್ದಾಗ ಆಡಿದ ಮಾತುಗಳಿವು.
60 : ಯೇಸುಸ್ವಾಮಿಯ ಶಿಷ್ಯರಲ್ಲಿ ಹಲವರು, “ಇವು ಕಟುವಾದ ಮಾತುಗಳು, ಇವನ್ನು ಯಾರುತಾನೆ ಕೇಳಿಯಾರು?” ಎಂದು ಮಾತನಾಡಿಕೊಂಡರು.
61 : ಈ ವಿಷಯವಾಗಿ ತಮ್ಮ ಶಿಷ್ಯರು ಗೊಣಗುಟ್ಟುತ್ತಿರುವುದನ್ನು ಯೇಸು ತಾವಾಗಿಯೇ ಅರಿತು, “ಇಷ್ಟು ಮಾತ್ರಕ್ಕೆ ನೀವು ಕಂಗೆಡಬೇಕೆ?
62 : ಹಾಗಾದರೆ ನರಪುತ್ರನು ತಾನು ಮೊದಲಿದ್ದ ಸ್ಥಳಕ್ಕೆ ಮರಳಿ ಏರುವುದನ್ನು ನೀವು ಕಂಡಾಗ ಏನನ್ನುವಿರಿ?
63 : ಸಜೀವವನ್ನು ಕೊಡುವಂಥಾದ್ದು ದೇವರ ಆತ್ಮವೇ. ನರಮಾಂಸದಿಂದ ಏನೂ ಆಗದು. ನಾನು ನಿಮ್ಮೊಡನೆ ಆಡಿದ ಮಾತುಗಳು ಜೀವದಾಯಕ ದೇವರಾತ್ಮವನ್ನು ತರುತ್ತವೆ.
64 : ಆದರೂ ನಿಮ್ಮಲ್ಲಿ ಕೆಲವರಿಗೆ ವಿಶ್ವಾಸವಿಲ್ಲ,” ಎಂದು ಹೇಳಿದರು. (ವಿಶ್ವಾಸವಿಲ್ಲದವರು ಯಾರು, ತಮ್ಮನ್ನು ಹಿಡಿದುಕೊಡುವ ಗುರುದ್ರೋಹಿ ಯಾರು, ಎಂದು ಯೇಸುವಿಗೆ ಮೊದಲಿನಿಂದಲೂ ತಿಳಿದಿತ್ತು.)
65 : ‘ಪಿತನು ಅನುಗ್ರಹಿಸಿದ ಹೊರತು ಯಾರೂ ನನ್ನ ಬಳಿಗೆ ಬರಲಾರರು,’ ಎಂದು ನಾನು ಹೇಳಿದುದು ಇದಕ್ಕಾಗಿಯೇ,” ಎಂದು ಯೇಸು ಮತ್ತೆ ನುಡಿದರು.
66 : ಅಂದಿನಿಂದ ಯೇಸುಸ್ವಾಮಿಯ ಹಿಂಬಾಲಕರಲ್ಲಿ ಹಲವರು ಅವರ ಸಹವಾಸವನ್ನು ಬಿಟ್ಟುಬಿಟ್ಟರು. ಹೋದವರು ಹಿಂದಿರುಗಿ ಬರಲಿಲ್ಲ.
67 : ಆಗ ಯೇಸು ಹನ್ನೆರಡು ಮಂದಿ ಶಿಷ್ಯರಿಗೆ, “ನೀವು ಕೂಡ ಹೋಗಬೇಕೆಂದು ಇದ್ದೀರಾ?” ಎಂದು ಕೇಳಿದರು.
68 : ಅದಕ್ಕೆ ಸಿಮೋನ ಪೇತ್ರನು, “ಪ್ರಭುವೇ, ನಾವು ಹೋಗುವುದಾದರೂ ಯಾರ ಬಳಿಗೆ? ನಿತ್ಯಜೀವವನ್ನು ಈಯುವ ನುಡಿ ಇರುವುದು ತಮ್ಮಲ್ಲೇ.
69 : ತಾವೇ ದೇವರಿಂದ ಬಂದ ಪರಮಪೂಜ್ಯರು. ಹೌದು, ಇದೇ ನಮ್ಮ ವಿಶ್ವಾಸ ಮತ್ತು ಗ್ರಹಿಕೆ,” ಎಂದು ಹೇಳಿದನು.
70 : ಆಗ ಯೇಸು, “ನಿಮ್ಮಲ್ಲಿ ಹನ್ನೆರಡು ಮಂದಿಯನ್ನು ನಾನು ಆಯ್ದುಕೊಂಡೆನಲ್ಲವೆ? ಆದರೂ ನಿಮ್ಮಲ್ಲಿ ಒಬ್ಬನು ಪಿಶಾಚಿಯಾಗಿ ಇದ್ದಾನೆ,” ಎಂದರು.
71 : ಅವರು ಹೀಗೆ ಹೇಳಿದ್ದು ಸಿಮೋನನ ಮಗ ಇಸ್ಕರಿಯೋತಿನ ಯೂದನನ್ನು ಕುರಿತು. ಹನ್ನೆರಡು ಮಂದಿಯಲ್ಲಿ ಒಬ್ಬನಾಗಿದ್ದ ಇವನೇ ಯೇಸುವನ್ನು ಹಿಡಿದುಕೊಡಲಿದ್ದ ಗುರುದ್ರೋಹಿ.

· © 2017 kannadacatholicbible.org Privacy Policy