1 : ಯೊವಾನ್ನನಿಗಿಂತಲೂ ಯೇಸುಸ್ವಾಮಿಯೇ ಹೆಚ್ಚುಮಂದಿ ಜನರನ್ನು ಶಿಷ್ಯರನ್ನಾಗಿಸಿಕೊಳ್ಳುತ್ತಾ, ಅವರಿಗೆ ದೀಕ್ಷಾಸ್ನಾನವನ್ನು ಮಾಡಿಸುತ್ತಾ ಇದ್ದಾರೆಂಬ ವಾರ್ತೆ ಫರಿಸಾಯರ ಕಿವಿಗೆ ಬಿದ್ದಿತು.
2 : (ವಾಸ್ತವವಾಗಿ ದೀಕ್ಷಾಸ್ನಾನವನ್ನು ಮಾಡಿಸುತ್ತಿದ್ದವರು ಯೇಸುವಿನ ಶಿಷ್ಯರೇ ಹೊರತು ಯೇಸುವಲ್ಲ).
3 : ಯೇಸು ಇದನ್ನು ತಿಳಿದು ಜುದೇಯವನ್ನು ಬಿಟ್ಟು ಮತ್ತೆ ಗಲಿಲೇಯಕ್ಕೆ ಹೊರಟರು.
4 : ದಾರಿಯಲ್ಲಿ ಸಮಾರಿಯ ಪ್ರಾಂತ್ಯವನ್ನು ಹಾದುಹೋಗಬೇಕಾಗಿತ್ತು.
5 : ಯೇಸು ಹೋಗುತ್ತಿರುವಾಗ ಸಮಾರಿಯದ ಸಿಖಾರೆಂಬ ಊರನ್ನು ತಲುಪಿದರು. ಈ ಊರಿನ ಪಕ್ಕದಲ್ಲೇ ಯಕೋಬನು ತನ್ನ ಮಗನಾದ ಜೋಸೆಫನಿಗೆ ಕೊಟ್ಟ ಭೂಮಿ ಇದೆ.
6 : ಅಲ್ಲೇ ಯಕೋಬನ ಬಾವಿಯೂ ಇದೆ. ಪಯಣದಿಂದ ಬಳಲಿದ್ದ ಯೇಸು ಬಾವಿಯ ಬಳಿ ಕುಳಿತುಕೊಂಡರು. ಆಗ ಸುಮಾರು ಮಧ್ಯಾಹ್ನದ ಹೊತ್ತು.
7 : ಒಬ್ಬ ಸಮಾರಿಯದ ಮಹಿಳೆ ನೀರು ಸೇದಲು ಅಲ್ಲಿಗೆ ಬಂದಳು. ಆಗ ಯೇಸು, “ಕುಡಿಯಲು ಕೊಂಚ ನೀರು ಕೊಡು,” ಎಂದು ಕೇಳಿದರು.
8 : ಶಿಷ್ಯರು ಊಟಕ್ಕೆ ಏನಾದರೂ ಕೊಂಡು ತರುವುದಕ್ಕೆ ಊರಿನೊಳಗೆ ಹೋಗಿದ್ದರು.
9 : ಅದಕ್ಕೆ ಆಕೆ, “ನೀವು ಯೆಹೂದ್ಯರು, ನಾನು ಸಮಾರಿಯದವಳು. ಹೀಗಿರುವಲ್ಲಿ ನೀವು ನನ್ನಿಂದ ನೀರು ಕೇಳಬಹುದೇ?” ಎಂದಳು. (ಯೆಹೂದ್ಯರಿಗೂ ಸಮಾರಿಯದವರಿಗೂ ಹೊಕ್ಕುಬಳಕೆ ಇರಲಿಲ್ಲ).
10 : ಆಗ ಯೇಸು, “ದೇವರು ಕೊಡುವ ವರದಾನವನ್ನು ಮತ್ತು ಕುಡಿಯಲು ನಿನ್ನಿಂದ ನೀರು ಕೇಳುತ್ತಿರುವ ವ್ಯಕ್ತಿಯನ್ನು ನೀನು ಅರಿತಿದ್ದರೆ ಆಗ ನೀನೇ ಆತನಲ್ಲಿ ಬೇಡುತ್ತಿದ್ದೆ. ಆತನು ನಿನಗೆ ಜೀವಜಲವನ್ನು ಕೊಡುತ್ತಿದ್ದನು,” ಎಂದು ಉತ್ತರಕೊಟ್ಟರು.
11 : ಅದಕ್ಕೆ ಆಕೆ, “ನೀರು ಸೇದುವುದಕ್ಕೆ ನಿಮ್ಮಲ್ಲಿ ಏನೂ ಇಲ್ಲ, ಬಾವಿಯೂ ಆಳವಾಗಿದೆ; ಹೀಗಿರುವಲ್ಲಿ ನಿಮಗೆ ಜೀವಜಲ ಎಲ್ಲಿಂದ ಬಂದೀತು?
12 : ನಮಗೆ ಈ ಬಾವಿಯನ್ನು ಕೊಟ್ಟವನು ನಮ್ಮ ಪಿತಾಮಹ ಯಕೋಬನು. ಆತನು, ಆತನ ಮಕ್ಕಳು ಮತ್ತು ದನಕರುಗಳು ಇದೇ ಬಾವಿಯ ನೀರನ್ನು ಕುಡಿದರು. ಅಂಥ ಪಿತಾಮಹನಿಗಿಂತ ತಾವು ದೊಡ್ಡವರೋ?” ಎಂದಳು.
13 : ಆಗ ಯೇಸು, “ಈ ನೀರನ್ನು ಕುಡಿಯುವ ಎಲ್ಲರಿಗೂ ಮತ್ತೆ ದಾಹವಾಗುತ್ತದೆ.
14 : ಆದರೆ ನಾನು ಕೊಡುವ ನೀರನ್ನು ಕುಡಿದವನಿಗೆ ಎಂದಿಗೂ ದಾಹವಾಗದು; ಆ ನೀರು ಅವನಲ್ಲಿ ಉಕ್ಕಿ ಹರಿಯುವ ಬುಗ್ಗೆಯಾಗಿ, ನಿತ್ಯಜೀವವನ್ನು ತರುತ್ತದೆ,” ಎಂದು ಉತ್ತರಕೊಟ್ಟರು.
15 : ಅದಕ್ಕೆ ಆಕೆ, “ಸ್ವಾವಿೂ, ಅಂಥ ನೀರನ್ನು ಕೊಡಿ; ಇನ್ನು ಮುಂದೆ ನನಗೆ ದಾಹವಾಗದಿರಲಿ. ನೀರು ಸೇದಲು ಇಷ್ಟು ದೂರ ಬರುವುದು ತಪ್ಪಲಿ,” ಎಂದಳು.
16 : ಅದಕ್ಕೆ ಯೇಸು, “ಹೋಗಿ ನಿನ್ನ ಗಂಡನನ್ನು ಕರೆದುಕೊಂಡು ಬಾ,” ಎಂದು ಹೇಳಿದರು.
17 : ಆಕೆ, “ನನಗೆ ಗಂಡನಿಲ್ಲ,” ಎಂದಳು.
18 : ಗಂಡನಿಲ್ಲವೆಂದು ಸರಿಯಾಗಿ ಹೇಳಿದೆ. ನಿನಗೆ ಐದು ಜನ ಗಂಡಂದಿರು ಇದ್ದರು. ಈಗ ನಿನ್ನೊಡನೆ ಇರುವವನು ನಿನ್ನ ಗಂಡನಲ್ಲ, ನೀನು ಹೇಳಿದ್ದು ಸರಿಯೇ,” ಎಂದರು ಯೇಸುಸ್ವಾಮಿ.
19 : ಅದಕ್ಕೆ ಆ ಮಹಿಳೆ, “ಸ್ವಾವಿೂ, ತಾವು ಪ್ರವಾದಿ ಎಂದು ನನಗೀಗ ತಿಳಿಯಿತು.
20 : ನಮ್ಮ ಪೂರ್ವಜರು ಈ ಬೆಟ್ಟದ ಮೇಲೆ ದೇವರನ್ನು ಆರಾಧಿಸುತ್ತಿದ್ದರು. ಆದರೆ ಆರಾಧಿಸತಕ್ಕ ಕ್ಷೇತ್ರ ಇರುವುದು ಜೆರುಸಲೇಮಿನಲ್ಲೇ ಎಂದು ಯೆಹೂದ್ಯರಾದ ನೀವು ಹೇಳುತ್ತೀರಲ್ಲ” ಎಂದಳು.
21 : ಆಗ ಯೇಸು, “ತಾಯಿ, ನಾನು ಹೇಳುವುದನ್ನು ಕೇಳು. ಪಿತನ ಆರಾಧನೆಗೆ ಈ ಬೆಟ್ಟಕ್ಕೂ ಬರಬೇಕಾಗಿಲ್ಲ; ಜೆರುಸಲೇಮಿಗೂ ಹೋಗಬೇಕಾಗಿಲ್ಲ. ಅಂಥ ಕಾಲವೂ ಬರುವುದು.
22 : ನೀವು ಆರಾಧಿಸುವುದು ಯಾರೆಂದು ನಿಮಗೇ ತಿಳಿಯದು. ನಾವು ಆರಾಧಿಸುವುದು ಯಾರೆಂದು ನಮಗೆ ತಿಳಿದಿದೆ. ಏಕೆಂದರೆ ಲೋಕೋದ್ಧಾರಕ ಬರುವುದು ಯೆಹೂದ್ಯರಿಂದಲೇ.
23 : ಕಾಲ ಬರುವುದು; ಅದು ಈಗಲೇ ಬಂದಿದೆ. ಇನ್ನು ಮೇಲೆ ನಿಜವಾದ ಆರಾಧಕರು ಪಿತನನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವರು. ಅಂಥವರೇ ತಮ್ಮನ್ನು ಆರಾಧಿಸಬೇಕೆಂದು ಪಿತ ಆಶಿಸುತ್ತಾರೆ.
24 : ದೇವರು ಆತ್ಮಸ್ವರೂಪಿ. ಅವರನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸತಕ್ಕದ್ದು,” ಎಂದು ಹೇಳಿದರು.
25 : ಆಕೆ “ಅಭಿಷಿಕ್ತನಾದ ಲೋಕೋದ್ಧಾರಕ ಬರುವನೆಂದು ನಾನು ಬಲ್ಲೆ. ಆತನು ಬಂದಾಗ ಎಲ್ಲವನ್ನೂ ತಿಳಿಸುವನು,” ಎಂದು ಹೇಳಿದಳು.
26 : ಆಗ ಯೇಸು, “ನಿನ್ನೊಡನೆ ಮಾತನಾಡುತ್ತಿರುವ ನಾನೇ ಆತನು,” ಎಂದು ನುಡಿದರು.
27 : ಅಷ್ಟರಲ್ಲಿ ಹಿಂದಿರುಗಿ ಬಂದ ಶಿಷ್ಯರು ಯೇಸು ಆ ಮಹಿಳೆಯೊಡನೆ ಮಾತನಾಡುತ್ತಿರುವುದನ್ನು ಕಂಡು ಆಶ್ಚರ್ಯಪಟ್ಟರು. ಆದರೆ, “ಏನು ಬೇಕು?” ಎಂದು ಆಕೆಯನ್ನಾಗಲಿ, “ಆಕೆಯೊಡನೆ ಏಕೆ ಮಾತನಾಡುತ್ತಿದ್ದೀರಿ?” ಎಂದು ಯೇಸುವನ್ನಾಗಲಿ ಅವರು ಕೇಳಲಿಲ್ಲ.
28 : ಆ ಮಹಿಳೆ ತನ್ನ ಕೊಡವನ್ನು ಅಲ್ಲಿಯೇ ಬಿಟ್ಟು ಊರಿಗೆ ನಡೆದಳು.
29 : “ನಾನು ಮಾಡಿದ್ದ ಕೃತ್ಯಗಳನ್ನೆಲ್ಲಾ ಕಂಡಂತೆ ತಿಳಿಸಿದ ಒಬ್ಬ ವ್ಯಕ್ತಿ ಅಲ್ಲಿ ಇದ್ದಾರೆ. ಬಂದು ನೋಡಿ. ಅವರೇ ಅಭಿಷಿಕ್ತನಾದ ಲೋಕೋದ್ಧಾರಕ ಏಕಾಗಿರಬಾರದು?” ಎಂದು ಊರಿನ ಜನರನ್ನು ಕರೆದಳು.
30 : ಅವರು ಯೇಸುವಿನ ಬಳಿಗೆ ಬಂದರು.
31 : ಈ ಮಧ್ಯೆ ಶಿಷ್ಯರು, “ಗುರುದೇವಾ, ಊಟಮಾಡಿ,” ಎಂದು ಯೇಸುವನ್ನು ಒತ್ತಾಯ ಮಾಡಿದರು.
32 : ಆಗ ಯೇಸು, “ನಿಮಗೆ ತಿಳಿಯದಂಥ ಆಹಾರ ನನ್ನಲ್ಲಿದೆ,” ಎಂದರು.
33 : ಶಿಷ್ಯರು, “ಯಾರಾದರೂ ಅವರಿಗೆ ತಿನ್ನಲು ತಂದು ಕೊಟ್ಟಿರಬಹುದೇ?” ಎಂದು ಮಾತನಾಡಿಕೊಂಡರು.
34 : ಯೇಸು ಅವರಿಗೆ, “ನನ್ನನ್ನು ಕಳುಹಿಸಿದಾತನ ಚಿತ್ತವನ್ನು ನೆರವೇರಿಸುವುದೇ ನನಗೆ ಆಹಾರ. ಆತನು ಕೊಟ್ಟ ಕಾರ್ಯಗಳನ್ನು ಪೂರೈಸುವುದೇ ನನಗೆ ತಿಂಡಿತೀರ್ಥ.
35 : ಇನ್ನು ನಾಲ್ಕು ತಿಂಗಳು ಆದ ಮೇಲೆ ಸುಗ್ಗಿ ಬರುತ್ತದೆ ಎಂದು ನೀವು ಹೇಳುವುದಿಲ್ಲವೆ? ಇಗೋ, ಕಣ್ಣುಹಾಯಿಸಿ ನೋಡಿ; ಬಲಿತು ಕೊಯ್ಲಿಗೆ ಬಂದಿರುವ ಹೊಲಗಳನ್ನು ನೋಡಿ.
36 : ಕೊಯ್ದವನು ಈಗಾಗಲೇ ಕೂಲಿಯನ್ನು ಪಡೆಯುತ್ತಾನೆ. ಅವನು ನಿತ್ಯಜೀವಕ್ಕೆ ಫಲವನ್ನು ಕೂಡಿಸಿಡುತ್ತಾನೆ. ಹೀಗೆ ಬಿತ್ತುವವನೂ ಕೊಯ್ಯುವವನೂ ಒಟ್ಟಿಗೆ ಸಂತೋಷಪಡುತ್ತಾರೆ.
37 : ‘ಬಿತ್ತುವವನೊಬ್ಬ, ಕೊಯ್ಯುವವನಿನ್ನೊಬ್ಬ,’ ಎಂಬ ನಾಣ್ನುಡಿ ನಿಜವಾದುದು.
38 : ನೀವು ದುಡಿಯದ ಎಡೆಯಲ್ಲಿ ಕೊಯ್ಲುಮಾಡಲು ನಾನು ನಿಮ್ಮನ್ನು ಕಳುಹಿಸಿದ್ದೇನೆ. ದುಡಿದವರು ಬೇರೆ. ಅವರ ದುಡಿಮೆಯ ಫಲ ಬರುವುದು ನಿಮ್ಮ ಪಾಲಿಗೆ,” ಎಂದು ಹೇಳಿದರು.
39 : ‘ನಾನು ಮಾಡಿದ ಕೃತ್ಯಗಳನ್ನೆಲ್ಲಾ ಕಂಡಂತೆ ಹೇಳಿದ ವ್ಯಕ್ತಿ’ ಎಂದು ಸಾರಿದ ಮಹಿಳೆಯ ಮಾತಿನಿಂದ ಸಮಾರಿಯ ಊರಿನ ಹಲವು ಮಂದಿಗೆ ಯೇಸುವಿನಲ್ಲಿ ನಂಬಿಕೆ ಹುಟ್ಟಿತು.
40 : ಎಂದೇ ಆ ಊರಿನ ಜನರು ಯೇಸುವಿನ ಬಳಿಗೆ ಬಂದು ತಮ್ಮಲ್ಲಿಯೇ ತಂಗಬೇಕೆಂದು ಬೇಡಿಕೊಂಡರು. ಅಂತೆಯೇ ಯೇಸು, ಅಲ್ಲಿ ಎರಡು ದಿನ ಉಳಿದರು.
41 : ಇನ್ನೂ ಅನೇಕರಿಗೆ ಯೇಸುವಿನ ಬೋಧನೆಯನ್ನು ಅವರ ಬಾಯಿಂದಲೇ ಕೇಳಿ ಅವರಲ್ಲಿ ನಂಬಿಕೆ ಮೂಡಿತು.
42 : ಆಗ ಅವರು, ಆ ಮಹಿಳೆಗೆ, “ನೀನು ಹೇಳಿದುದರಿಂದ ಮಾತ್ರವೇ ಈಗ ನಾವು ನಂಬುತ್ತಿಲ್ಲ, ನಾವೇ ಕಿವಿಯಾರೆ ಕೇಳಿ ನಂಬಿದ್ದೇವೆ; ಲೋಕೋದ್ಧಾರಕ ಇವರೇ ಎಂದು ನಮಗೀಗ ತಿಳಿಯಿತು,” ಎಂದರು.
ಅಧಿಕಾರಿಯ ಮಗನಿಗೆ ಆರೋಗ್ಯದಾನ
43 : ಎರಡು ದಿನಗಳಾದ ಬಳಿಕ ಯೇಸುಸ್ವಾಮಿ ಅಲ್ಲಿಂದ ಗಲಿಲೇಯಕ್ಕೆ ಹೊರಟರು.
44 : ಪ್ರವಾದಿಗೆ ಸ್ವಗ್ರಾಮದಲ್ಲಿ ಮರ್ಯಾದೆ ಇಲ್ಲ ಎಂದು ಅವರೇ ಸಾರಿದ್ದರು.
45 : ಗಲಿಲೇಯವನ್ನು ತಲುಪಿದೊಡನೆ ಜನರು ಅವರನ್ನು ಆದರದಿಂದ ಬರಮಾಡಿಕೊಂಡರು. ಏಕೆಂದರೆ, ಹಬ್ಬಕ್ಕಾಗಿ ಆ ಜನರು ಜೆರುಸಲೇಮಿಗೆ ಹೋಗಿದ್ದಾಗ ಹಬ್ಬದ ಸಮಯದಲ್ಲಿ ಯೇಸು ಮಾಡಿದ್ದನ್ನೆಲ್ಲಾ ನೋಡಿದ್ದರು.
46 : ಯೇಸು ಗಲಿಲೇಯದ ಕಾನಾ ಊರಿಗೆ ಮರಳಿ ಬಂದರು. ಅವರು ಹಿಂದೆ ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ್ದು ಅಲ್ಲಿಯೇ. ಕಫೆರ್ನವುಮಿನಲ್ಲಿ ರಾಜಸೇವೆಯಲ್ಲಿದ್ದ ಒಬ್ಬ ಅಧಿಕಾರಿಯ ಮಗನಿಗೆ ಕಾಯಿಲೆಯಾಗಿತ್ತು.
47 : ಯೇಸು ಜುದೇಯದಿಂದ ಗಲಿಲೇಯಕ್ಕೆ ಬಂದಿರುವುದನ್ನು ಕೇಳಿದ ಆ ಅಧಿಕಾರಿ, ಅವರ ಬಳಿಗೆ ಬಂದು, ಸಾವಿನ ದವಡೆಯಲ್ಲಿರುವ ತನ್ನ ಮಗನನ್ನು ಬಂದು ಬದುಕಿಸಬೇಕೆಂದು ಬೇಡಿಕೊಂಡನು.
48 : ಯೇಸು ಅವನಿಗೆ “ಸೂಚಕಕಾರ್ಯಗಳನ್ನೂ ಅದ್ಭುತಗಳನ್ನೂ ಕಂಡ ಹೊರತು ನೀವು ನಂಬುವುದಿಲ್ಲವಲ್ಲಾ,” ಎಂದರು.
49 : ಆದರೂ ಆ ಅಧಿಕಾರಿ, “ನನ್ನ ಮಗನು ಪ್ರಾಣಬಿಡುವ ಮೊದಲೇ ಬನ್ನಿ ಸ್ವಾವಿೂ,” ಎಂದು ಅಂಗಲಾಚಿದನು.
50 : ಆಗ ಯೇಸು, “ಹೋಗು, ನಿನ್ನ ಮಗನು ಬದುಕುತ್ತಾನೆ,” ಎಂದು ಹೇಳಿದರು. ಆ ಅಧಿಕಾರಿ ಯೇಸುವಿನ ಮಾತನ್ನು ನಂಬಿ ಹೊರಟನು.
51 : ಅವನು ಅರ್ಧದಾರಿಯಲ್ಲಿ ಇದ್ದಾಗಲೇ ಆಳುಗಳು ಅವನಿಗೆ ಎದುರಾಗಿ ಬಂದು, “ನಿಮ್ಮ ಮಗ ಬದುಕಿಕೊಂಡ,” ಎಂದು ತಿಳಿಸಿದರು.
52 : ಎಷ್ಟು ಹೊತ್ತಿಗೆ ತನ್ನ ಮಗ ಚೇತರಿಸಿಕೊಂಡನೆಂದು ಆ ಅಧಿಕಾರಿ ವಿಚಾರಿಸಿದಾಗ, “ನಿನ್ನೆ ಮಧ್ಯಾಹ್ನ: ಒಂದು ಗಂಟೆಗೆ ಅವನ ಜ್ವರ ಬಿಟ್ಟಿತು,” ಎಂದು ಆಳುಗಳು ಉತ್ತರಕೊಟ್ಟರು.
53 : ನಿನ್ನ ಮಗ ಬದುಕುತ್ತಾನೆ’ ಎಂದು ಯೇಸು ಹೇಳಿದ್ದ ಗಳಿಗೆಯಲ್ಲಿಯೇ ತನ್ನ ಮಗ ಬದುಕಿಕೊಂಡನೆಂದು ತಂದೆಗೆ ತಿಳಿಯಿತು. ಅವನೂ ಅವನ ಮನೆಯವರೆಲ್ಲರೂ ಯೇಸುವನ್ನು ವಿಶ್ವಾಸಿಸಿದರು.
54 : ಯೇಸು ಜುದೇಯದಿಂದ ಗಲಿಲೇಯಕ್ಕೆ ಬಂದು, ಮಾಡಿದ ಎರಡನೆಯ ಸೂಚಕಕಾರ್ಯ ಇದು.