1 : ಮಾರನೆಯ ದಿನ ಗಲಿಲೇಯದ ಕಾನಾ ಎಂಬ ಊರಿನಲ್ಲಿ ಒಂದು ಮದುವೆ ನಡೆಯಿತು.
2 : ಯೇಸುಸ್ವಾಮಿಯ ತಾಯಿ ಅಲ್ಲಿಗೆ ಬಂದಿದ್ದರು. ಯೇಸುವಿಗೂ ಅವರ ಶಿಷ್ಯರಿಗೂ ಆ ಮದುವೆಗೆ ಆಮಂತ್ರಣವಿತ್ತು.
3 : ಆ ಸಂದರ್ಭದಲ್ಲಿ ದ್ರಾಕ್ಷಾರಸ ಸಾಲದೆ ಹೋಯಿತು. ಆಗ ಯೇಸುವಿನ ತಾಯಿ, “ಅವರಲ್ಲಿ ದ್ರಾಕ್ಷಾರಸ ಮುಗಿದು ಹೋಗಿದೆ,” ಎಂದು ಯೇಸುವಿಗೆ ಹೇಳಿದರು.
4 : ಅದಕ್ಕೆ ಯೇಸು, “ಅಮ್ಮಾ, ಇದನ್ನು ನನಗೇಕೆ ಹೇಳುತ್ತೀ? ನನ್ನ ಗಳಿಗೆ ಇನ್ನೂ ಬಂದಿಲ್ಲ,” ಎಂದು ಉತ್ತರಕೊಟ್ಟರು.
5 : ತಾಯಿ ಸೇವಕರಿಗೆ, “ಆತ ಹೇಳಿದಂತೆ ಮಾಡಿ,” ಎಂದು ತಿಳಿಸಿದರು.
6 : ಯೆಹೂದ್ಯರ ಶುದ್ಧಾಚಾರ ಪದ್ಧತಿಯಂತೆ ಆರು ಕಲ್ಲುಬಾನೆಗಳನ್ನು ಅಲ್ಲಿ ಇಟ್ಟಿದ್ದರು. ಅವು ಒಂದೊಂದೂ ಎರಡು ಮೂರು ಕೊಡ ನೀರು ಹಿಡಿಯುವಷ್ಟು ದೊಡ್ಡದಾಗಿದ್ದವು.
7 : ಯೇಸುಸ್ವಾಮಿ ಸೇವಕರಿಗೆ, “ಆ ಬಾನೆಗಳಲ್ಲಿ ನೀರು ತುಂಬಿರಿ,” ಎಂದು ಹೇಳಿದರು. ಅವರು ಕಂಠದವರೆಗೆ ತುಂಬಿದರು.
8 : ಯೇಸು, “ಈಗ ತೋಡಿಕೊಂಡು ಹೋಗಿ ಔತಣದ ಮೇಲ್ವಿಚಾರಕನಿಗೆ ಕೊಡಿ,” ಎಂದು ಹೇಳಲು ಅವರು ಹಾಗೆಯೇ ಮಾಡಿದರು.
9 : ಮೇಲ್ವಿಚಾರಕನು ದ್ರಾಕ್ಷಾರಸವಾಗಿ ಮಾರ್ಪಟ್ಟಿದ್ದ ನೀರಿನ ರುಚಿ ನೋಡಿದನು. ಅದು ಎಲ್ಲಿಂದ ಬಂದಿತೆಂಬುದು ಅವನಿಗೆ ತಿಳಿದಿರಲಿಲ್ಲ. ನೀರನ್ನು ತೋಡಿಕೊಂಡು ಬಂದ ಸೇವಕರಿಗೆ ಮಾತ್ರ ತಿಳಿದಿತ್ತು.
10 : ಆದುದರಿಂದ ಅವನು ಮದುಮಗನನ್ನು ಕರೆದು, “ಜನರೆಲ್ಲರೂ ಉತ್ತಮವಾದ ದ್ರಾಕ್ಷಾರಸವನ್ನು ಮೊದಲು ಹಂಚುತ್ತಾರೆ; ಅತಿಥಿಗಳು ಯಥೇಚ್ಛವಾಗಿ ಕುಡಿದಾದ ಮೇಲೆ ಸಾಧಾರಣ ದ್ರಾಕ್ಷಾರಸವನ್ನು ಕೊಡುತ್ತಾರೆ. ನೀನಾದರೋ ಉತ್ತಮವಾದುದನ್ನು ಈವರೆಗೂ ಇಟ್ಟಿದ್ದೀಯಲ್ಲಾ!” ಎಂದು ಹೇಳಿದನು.
11 : ಯೇಸು ಮಾಡಿದ ಮೊದಲನೆಯ ಸೂಚಕಕಾರ್ಯ ಇದು. ಇದನ್ನು ಗಲಿಲೇಯ ನಾಡಿನ ಕಾನಾ ಊರಿನಲ್ಲಿ ಮಾಡಿ ತಮ್ಮ ಮಹಿಮೆಯನ್ನು ತೋರ್ಪಡಿಸಿದರು. ಅವರ ಶಿಷ್ಯರಿಗೂ ಅವರಲ್ಲಿ ವಿಶ್ವಾಸ ಮೂಡಿತು.
12 : ಇದಾದ ಮೇಲೆ ಯೇಸು, ಅವರ ತಾಯಿ, ಸಹೋದರರು ಮತ್ತು ಶಿಷ್ಯರು ಕಫೆರ್ನವುಮಿಗೆ ಹೋಗಿ ಅಲ್ಲಿ ಕೆಲವು ದಿನ ತಂಗಿದ್ದರು.
13 : ಯೆಹೂದ್ಯರ ಪಾಸ್ಕ ಹಬ್ಬವು ಹತ್ತಿರವಾಗಿದ್ದುದರಿಂದ ಯೇಸುಸ್ವಾಮಿ ಜೆರುಸಲೇಮಿಗೆ ತೆರಳಿದರು.
14 : ಅಲ್ಲಿಯ ಮಹಾದೇವಾಲಯದಲ್ಲಿ ದನ, ಕುರಿ ಮತ್ತು ಪಾರಿವಾಳಗಳನ್ನು ಮಾರುವವರು ಮತ್ತು ನಾಣ್ಯವಿನಿಮಯ ಮಾಡುವವರು ವ್ಯಾಪಾರಕ್ಕೆ ಕುಳಿತಿದ್ದರು.
15 : ಅದನ್ನು ಕಂಡ ಯೇಸು, ಹಗ್ಗವನ್ನು ಚಾವಟಿಯಂತೆ ಹೆಣೆದು ಅದರಿಂದ ಅವರನ್ನೆಲ್ಲಾ ದೇವಾಲಯದಿಂದ ಹೊರಗಟ್ಟಿದರು. ದನಕುರಿಗಳನ್ನು ಓಡಿಸಿದರು. ನಾಣ್ಯವಿನಿಮಯ ಮಾಡುವವರ ಮೇಜುಗಳನ್ನು ಕೆಡವಿ, ಚಿಲ್ಲರೆ ಹಣವನ್ನು ಚೆಲ್ಲಿದರು.
16 : ಪಾರಿವಾಳಗಳನ್ನು ಮಾರುತ್ತಿದ್ದವರಿಗೆ, “ಇವನ್ನು ಇಲ್ಲಿಂದ ತೆಗೆದುಕೊಂಡು ಹೊರಡಿ. ನನ್ನ ಪಿತನ ಆಲಯವನ್ನು ಸಂತೆಯನ್ನಾಗಿ ಮಾಡಬೇಡಿ,” ಎಂದು ಹೇಳಿದರು.
17 : ‘ನಿನ್ನ ಆಲಯದ ಮೇಲಿನ ಅಭಿಮಾನವು ನನ್ನನ್ನು ಬೆಂಕಿಯಂತೆ ದಹಿಸುತ್ತದೆ,’ ಎಂದು ಪವಿತ್ರಗ್ರಂಥದಲ್ಲೇ ಬರೆದಿರುವ ವಾಕ್ಯವು ಶಿಷ್ಯರಿಗೆ ಆಗ ನೆನಪಾಯಿತು.
18 : ಯೆಹೂದ್ಯರು, “ಇಷ್ಟೆಲ್ಲಾ ಮಾಡಲು ನಿನಗೆ ಅಧಿಕಾರವಿದೆ ಎಂದು ರುಜುವಾತು ಪಡಿಸುವುದಕ್ಕೆ ಯಾವ ಪವಾಡವನ್ನು ಮಾಡಿ ತೋರಿಸಬಲ್ಲೆ?” ಎಂದು ಯೇಸುವನ್ನು ಪ್ರಶ್ನಿಸಿದರು.
19 : ಅದಕ್ಕೆ ಯೇಸು, “ಈ ದೇವಾಲಯವನ್ನು ಕೆಡವಿಬಿಡಿ, ಮೂರು ದಿನದಲ್ಲಿ ಅದನ್ನು ಪುನಃ ಎಬ್ಬಿಸುವೆನು,” ಎಂದು ಉತ್ತರಕೊಟ್ಟರು.
20 : ಚಕಿತರಾದ ಯೆಹೂದ್ಯರು, “ಈ ದೇವಾಲಯವನ್ನು ಕಟ್ಟಲು ನಲವತ್ತಾರು ವರ್ಷಗಳು ಹಿಡಿದಿವೆ. ನೀನು ಮೂರು ದಿನಗಳಲ್ಲೇ ಅದನ್ನು ಎಬ್ಬಿಸಬಲ್ಲೆಯಾ?” ಎಂದು ಕೇಳಿದರು.
21 : ಯೇಸು ಹೇಳಿದ್ದು ತಮ್ಮ ದೇಹವೆಂಬ ದೇಗುಲವನ್ನು ಕುರಿತು.
22 : ಅವರು ಸತ್ತು ಪುನರುತ್ಥಾನ ಹೊಂದಿದ ಬಳಿಕ ಶಿಷ್ಯರು ಅವರ ಈ ಮಾತುಗಳನ್ನು ಸ್ಮರಿಸಿಕೊಂಡರು. ಪವಿತ್ರಗ್ರಂಥದಲ್ಲೂ ಯೇಸುವಿನ ಮಾತಿನಲ್ಲೂ ಅವರಿಗೆ ಆಗ ವಿಶ್ವಾಸ ಹುಟ್ಟಿತು.
23 : ಯೇಸುಸ್ವಾಮಿ ಪಾಸ್ಕಹಬ್ಬಕ್ಕಾಗಿ ಜೆರುಸಲೇಮಿನಲ್ಲಿದ್ದಾಗ ಮಾಡಿದ ಸೂಚಕ ಕಾರ್ಯಗಳನ್ನು ನೋಡಿ ಅನೇಕರು ಅವರನ್ನು ನಂಬಿದರು.
24 : ಆದರೆ ಯೇಸು ಎಲ್ಲರನ್ನು ಚೆನ್ನಾಗಿ ಬಲ್ಲವರಾದ್ದರಿಂದ ಅವರ ಈ ನಂಬಿಕೆಗೆ ಮಾರುಹೋಗಲಿಲ್ಲ.
25 : ಜನರನ್ನು ಕುರಿತು ಯಾರೂ ಅವರಿಗೆ ತಿಳಿಸಬೇಕಾದ ಪ್ರಮೇಯವಿರಲಿಲ್ಲ. ಮಾನವನ ಅಂತರಂಗ ಅವರಿಗೆ ಬಹಿರಂಗವಾಗಿತ್ತು.