1 : ಯೇಸುಸ್ವಾಮಿ ಅವರೊಡನೆ ಹೀಗೆ ಮಾತನಾಡಿದ ಮೇಲೆ ಆಕಾಶದತ್ತ ಕಣ್ಣೆತ್ತಿ ನೋಡಿ, “ಪಿತನೇ, ನಿರೀಕ್ಷಿಸಿದ ಗಳಿಗೆ ಬಂದಿದೆ. ನಿಮ್ಮ ಪುತ್ರನು ನಿಮ್ಮ ಮಹಿಮೆಯನ್ನು ಬೆಳಗಿಸುವಂತೆ ನೀವು ಆತನ ಮಹಿಮೆಯನ್ನು ಬೆಳಗಿಸಿರಿ.
2 : ನರಮಾನವರೆಲ್ಲರ ಮೇಲೆ ನೀವು ಆತನಿಗೆ ಅಧಿಕಾರವನ್ನು ಕೊಟ್ಟಿರುವಿರಿ. ಇದರಿಂದಾಗಿ ನೀವು ಆತನಿಗೆ ಒಪ್ಪಿಸಿರುವ ಎಲ್ಲರಿಗೆ ನಿತ್ಯಜೀವವನ್ನು ಆತನು ನೀಡುವನು.
3 : ಏಕೈಕ ನಿಜ ದೇವರಾದ ನಿಮ್ಮನ್ನೂ ನೀವು ಕಳುಹಿಸಿಕೊಟ್ಟ ಯೇಸುಕ್ರಿಸ್ತನನ್ನೂ ಅರಿತುಕೊಳ್ಳುವುದೇ ನಿತ್ಯಜೀವ.
4 : ನೀವು ನನಗೆ ಕೊಟ್ಟ ಕಾರ್ಯವನ್ನು ನಾನು ಮಾಡಿ ಮುಗಿಸಿ ನಿಮ್ಮ ಮಹಿಮೆಯನ್ನು ಜಗತ್ತಿಗೆಲ್ಲ ತೋರ್ಪಡಿಸಿದೆನು.
5 : ಪಿತನೇ, ಈ ಜಗತ್ತು ಉಂಟಾಗುವ ಮೊದಲೇ ನಿಮ್ಮೊಡನೆ ನನಗಿದ್ದ ಅದೇ ಮಹಿಮೆಯನ್ನು ಕೊಟ್ಟು ನನ್ನನ್ನು ಈಗ ನಿಮ್ಮ ಸನ್ನಿಧಿಯಲ್ಲಿ ಮಹಿಮೆಪಡಿಸಿರಿ.
6 : “ನೀವು ಲೋಕದಿಂದ ಆರಿಸಿ ನನಗೆ ಕೊಟ್ಟ ಜನರಿಗೆ ನಿಮ್ಮ ನಾಮವನ್ನು ತಿಳಿಯಪಡಿಸಿದ್ದೇನೆ. ಇವರು ನಿಮ್ಮವರಾಗಿದ್ದರು. ಆದರೂ ಇವರನ್ನು ನನಗೆ ಕೊಟ್ಟಿರಿ. ನಿಮ್ಮ ಮಾತಿಗೆ ವಿಧೇಯರಾಗಿ ಇವರು ನುಡಿದಿದ್ದಾರೆ.
7 : ನೀವು ನನಗೆ ಕೊಟ್ಟಿದೆಲ್ಲವೂ ನಿಜವಾಗಿ ನಿಮ್ಮಿಂದಲೇ ಬಂದಿರುವುದೆಂದು ಈಗ ಇವರಿಗೆ ತಿಳಿದಿದೆ.
8 : ನಿಮ್ಮಿಂದ ನಾನು ಕಲಿತುದೆಲ್ಲವನ್ನೂ ಇವರಿಗೆ ತಿಳಿಯಪಡಿಸಿದ್ದೇನೆ. ಅವುಗಳನ್ನು ಅವರು ಅಂಗೀಕರಿಸಿ ನಿಮ್ಮಿಂದಲೇ ನಾನು ಬಂದುದು ನಿಜವೆಂದು ಅರಿತುಕೊಂಡಿದ್ದಾರೆ. ನನ್ನನ್ನು ಕಳುಹಿಸಿದ್ದು ನೀವೇ ಎಂದು ವಿಶ್ವಾಸಿಸಿದ್ದಾರೆ.
9 : “ನಾನು ಪ್ರಾರ್ಥಿಸುವುದು ಇವರಿಗಾಗಿ, ಲೋಕಕ್ಕಾಗಿ ಅಲ್ಲ. ನೀವೇ ನನಗೆ ಕೊಟ್ಟವರಿಗಾಗಿ ಪ್ರಾರ್ಥಿಸುತ್ತೇನೆ.
10 : ಏಕೆಂದರೆ, ಇವರು ನಿಮ್ಮವರು; ಇವರಿಂದ ನನಗೆ ಮಹಿಮೆ ಉಂಟಾಗಿದೆ. ನನ್ನದೆಲ್ಲವೂ ನಿಮ್ಮದೇ; ನಿಮ್ಮದು ಎಲ್ಲವೂ ನನ್ನದೇ.
11 : ನಾನಿನ್ನು ಲೋಕದಲ್ಲಿ ಇರುವುದಿಲ್ಲ. ಇವರಾದರೋ ಲೋಕದಲ್ಲಿ ಇರುತ್ತಾರೆ. ನಾನು ನಿಮ್ಮ ಬಳಿಗೆ ಬರುತ್ತಿದ್ದೇನೆ. ಪವಿತ್ರ ಪಿತನೇ, ನಾವು ಒಂದಾಗಿರುವಂತೆ ನೀವು ನನಗೆ ಕೊಟ್ಟಿರುವ ಇವರೂ ಒಂದಾಗಿರುವ ಹಾಗೆ ನಿಮ್ಮ ನಾಮದ ಶಕ್ತಿಯಿಂದ ಇವರನ್ನು ಸುರಕ್ಷಿತವಾಗಿರಿಸಿರಿ.
12 : ನಾನು ಇವರೊಡನೆ ಇದ್ದಾಗ ಇವರನ್ನು ಕಾಪಾಡಿದೆನು. ನೀವಿತ್ತ ಇವರನ್ನು ನಿಮ್ಮ ನಾಮದ ಶಕ್ತಿಯಿಂದ ಸುರಕ್ಷಿತವಾಗಿ ನೋಡಿಕೊಂಡು ಬಂದೆನು. ಪವಿತ್ರಗ್ರಂಥದ ಮಾತು ನೆರವೇರುವಂತೆ ವಿನಾಶಕ್ಕೆ ಗುರಿಯಾಗಬೇಕಿದ್ದ ಒಬ್ಬನನ್ನು ಬಿಟ್ಟರೆ, ಇವರಲ್ಲಿ ಬೇರೆ ಯಾರೂ ನಾಶವಾಗಲಿಲ್ಲ.
13 : ಈಗ ನಾನು ನಿಮ್ಮ ಬಳಿಗೆ ಬರುತ್ತಿದ್ದೇನೆ. ನನ್ನ ಆನಂದವು ಅವರ ಹೃದಯದಲ್ಲಿ ತುಂಬಿತುಳುಕುವಂತೆ ಈ ಲೋಕದಲ್ಲಿರುವಾಗಲೇ ಇವುಗಳನ್ನು ಹೇಳುತ್ತಿದ್ದೇನೆ.
14 : ನಿಮ್ಮ ಸಂದೇಶವನ್ನು ಇವರಿಗೆ ತಿಳಿಸಿದ್ದೇನೆ. ನಾನು ಲೋಕಕ್ಕೆ ಸೇರಿದವನಲ್ಲ. ಅಂತೆಯೇ, ಇವರೂ ಲೋಕಕ್ಕೆ ಸೇರಿದವರಲ್ಲ. ಈ ಕಾರಣ, ಲೋಕಕ್ಕೆ ಇವರ ಮೇಲೆ ದ್ವೇಷವಿದೆ.
15 : ಇವರನ್ನು ಲೋಕದಿಂದ ತೆಗೆದುಬಿಡಬೇಕೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತಿಲ್ಲ. ಆದರೆ ಕೇಡಿಗನಿಂದ ಇವರನ್ನು ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ.
16 : ನಾನು ಲೋಕಕ್ಕೆ ಹೇಗೆ ಸೇರಿದವನಲ್ಲವೋ ಹಾಗೆಯೇ ಇವರೂ ಲೋಕಕ್ಕೆ ಸೇರಿದವರಲ್ಲ.
17 : ಇವರನ್ನು ಸತ್ಯಸಂಧರನ್ನಾಗಿಸಿ ನಿಮ್ಮ ಸೇವೆಗೆ ಮೀಸಲಾಗಿಡಿ. ನಿಮ್ಮ ಮಾತೇ ಸತ್ಯ.
18 : ನೀವು ನನ್ನನ್ನು ಲೋಕಕ್ಕೆ ಕಳಿಸಿದಂತೆ ನಾನು ಇವರನ್ನು ಲೋಕಕ್ಕೆ ಕಳಿಸಿದ್ದೇನೆ.
19 : ಸತ್ಯಸಂಧರಾಗಿ ಇವರು ನಿಮ್ಮ ಸೇವೆಗೆ ಮೀಸಲಾಗಬೇಕೆಂದು ನನ್ನನ್ನು ನಾನೇ ಮೀಸಲಾಗಿಸಿಕೊಂಡಿದ್ದೇನೆ.
20 : “ಇವರಿಗಾಗಿ ಮಾತ್ರವಲ್ಲ, ಇವರ ಮಾತನ್ನು ಕೇಳಿ ನನ್ನಲ್ಲಿ ವಿಶ್ವಾಸವಿಡುವವರಿಗಾಗಿಯೂ ಪ್ರಾರ್ಥಿಸುತ್ತೇನೆ.
21 : ಪಿತನೇ, ಇವರೆಲ್ಲಾ ಒಂದಾಗಿರಲಿ. ನೀವು ನನ್ನಲ್ಲಿ, ನಾನು ನಿಮ್ಮಲ್ಲಿ ಇರುವಂತೆಯೇ ಇವರೂ ನಮ್ಮಲ್ಲಿ ಒಂದಾಗಿರಲಿ. ಹೀಗೆ, ನನ್ನನ್ನು ಕಳುಹಿಸಿದವರು ನೀವೇ ಎಂದು ಲೋಕವು ವಿಶ್ವಾಸಿಸುವಂತಾಗಲಿ.
22 : ನಾವು ಒಂದಾಗಿರುವಂತೆ ಇವರೂ ಒಂದಾಗಿರಲೆಂದು ನೀವು ನನಗಿತ್ತ ಮಹಿಮೆಯನ್ನು ನಾನು ಇವರಿಗೆ ಕೊಟ್ಟಿದ್ದೇನೆ.
23 : ನಾನು ಇವರಲ್ಲಿಯೂ ನೀವು ನನ್ನಲ್ಲಿಯೂ ಇದ್ದು, ಇವರ ಐಕ್ಯಮತ್ಯವು ಪೂರ್ಣಸಿದ್ಧಿಗೆ ಬರಲಿ. ಆಗ ನೀವೇ ನನ್ನನ್ನು ಕಳುಹಿಸಿರುವಿರಿ ಎಂದೂ ನನ್ನನ್ನು ಪ್ರೀತಿಸಿದಂತೆಯೇ ಇವರನ್ನು ನೀವು ಪ್ರೀತಿಸಿರುವಿರಿ ಎಂದೂ ಲೋಕಕ್ಕೆ ಮನವರಿಕೆ ಆಗುವುದು.
24 : ಪಿತನೇ, ಇವರನ್ನು ನೀವು ನನಗೆ ಕೊಟ್ಟಿರುವಿರಿ. ಜಗತ್ತು ಉಂಟಾಗುವ ಮೊದಲೇ ನೀವು ನನ್ನನ್ನು ಪ್ರೀತಿಸಿ ನನಗಿತ್ತ ಮಹಿಮೆಯನ್ನು ಇವರೂ ಕಾಣುವಂತೆ ನಾನಿದ್ದಲ್ಲಿ ಇವರೂ ಇರಬೇಕೆಂದು ಆಶಿಸುತ್ತೇನೆ.
25 : ನೀತಿಸ್ವರೂಪಿಯಾದ ಪಿತನೇ, ಲೋಕವು ನಿಮ್ಮನ್ನು ಅರಿತುಕೊಳ್ಳಲಿಲ್ಲ. ಆದರೆ ನಾನು ಅರಿತಿದ್ದೇನೆ. ನನ್ನನ್ನು ಕಳುಹಿಸಿದವರು ನೀವೆಂದು ಇವರು ತಿಳಿದುಕೊಂಡಿದ್ದಾರೆ.
26 : ನಿಮ್ಮ ನಾಮವನ್ನು ನಾನು ಇವರಿಗೆ ತಿಳಿಯಪಡಿಸಿದ್ದೇನೆ; ಇನ್ನೂ ತಿಳಿಯಪಡಿಸುತ್ತೇನೆ. ಹೀಗೆ ನೀವು ನನ್ನಲ್ಲಿಟ್ಟ ಪ್ರೀತಿಯು ಇವರಲ್ಲಿಯೂ ಇರುವಂತಾಗುವುದು; ನಾನೂ ಅವರಲ್ಲಿ ಇರುವಂತಾಗುವುದು,” ಎಂದು ಹೇಳಿದರು.