Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೊವಾನ್ನ


1 : “ನಿಮ್ಮ ವಿಸ್ವಾಸ ಕುಸಿಯದಂತೆ ನೀವು ಎಚ್ಚರಿಕೆ ವಹಿಸಬೇಕೆಂದು ನಾನು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ.
2 : ಜನರು, ನಿಮ್ಮನ್ನು ಪ್ರಾರ್ಥನಾಮಂದಿರದಿಂದ ಬಹಿಷ್ಕರಿಸುವರು, ಅಷ್ಟೇ ಅಲ್ಲ, ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ ಬಲಿಕೊಟ್ಟೆನೆಂದು ಭಾವಿಸುವ ಕಾಲವೂ ಬರಲಿದೆ.
3 : ನನ್ನನ್ನಾಗಲಿ, ಪಿತನನ್ನಾಗಲಿ ಅವರು ಅರಿತಿಲ್ಲದ ಕಾರಣ ನಿಮಗೆ ಹೀಗೆ ಮಾಡುವರು.
4 : ಅಂಥ ಕಾಲ ಬಂದಾಗ ಇದನ್ನೆಲ್ಲಾ ಕುರಿತು ನಾನು ನಿಮ್ಮನ್ನು ಮೊದಲೇ ಎಚ್ಚರಿಸಿದ್ದೇನೆಂದು ನೀವು ನೆನಸಿಕೊಳ್ಳುವಂತೆ ಇದನ್ನು ಹೇಳುತ್ತಿದ್ದೇನೆ.
5 : “ನಾನು ನಿಮ್ಮ ಸಂಗಡ ಇದ್ದುದರಿಂದ ಇದನ್ನೆಲ್ಲಾ ಮೊದಲೇ ನಿಮಗೆ ತಿಳಿಸಲಿಲ್ಲ. ಈಗಲಾದರೋ ನನ್ನನ್ನು ಕಳುಹಿಸಿದಾತನಲ್ಲಿಗೆ ನಾನು ತೆರಳುತ್ತೇನೆ. ನಾನು ಹೋಗುವುದು ಎಲ್ಲಿಗೆ ಎಂದು ನೀವು ಯಾರೂ ಕೇಳುತ್ತಿಲ್ಲವಾದರೂ
6 : ಇದನ್ನೆಲ್ಲಾ ನಾನು ನಿಮಗೆ ಹೇಳಿದ್ದರಿಂದ ನಿಮ್ಮ ಹೃದಯವು ದುಃಖಭರಿತವಾಗಿದೆ.
7 : ವಾಸ್ತವವಾಗಿ ಹೇಳುವುದಾದರೆ, ನಾನು ಹೋಗುವುದು ನಿಮ್ಮ ಹಿತಕ್ಕಾಗಿಯೇ. ನಾನು ಹೋಗದಿದ್ದರೆ, ಪೋಷಕ ನಿಮ್ಮಲ್ಲಿಗೆ ಬರುವುದಿಲ್ಲ. ನಾನು ಹೋದರೆ ಮಾತ್ರ ಅವರನ್ನು ನಿಮ್ಮಲ್ಲಿಗೆ ಕಳುಹಿಸಿಕೊಡಬಲ್ಲೆ.
8 : ಆ ಪೋಷಕ ಬಂದು ಪಾಪ, ನ್ಯಾಯನೀತಿ, ಮತ್ತು ಅಂತಿಮ ತೀರ್ಪು ಇವುಗಳನ್ನು ಕುರಿತು ಲೋಕದ ಜನತೆ ತಾಳಿದ್ದ ತಪ್ಪುಭಾವನೆಗಳನ್ನು ಮನವರಿಕೆಮಾಡಿಕೊಡುವರು.
9 : ಪಾಪದ ವಿಷಯವಾಗಿ ಅವರ ತಪ್ಪುಭಾವನೆಯನ್ನು ಮನವರಿಕೆ ಮಾಡಿಕೊಡುವರು. ಏಕೆಂದರೆ, ಅವರು ನನ್ನಲ್ಲಿ ವಿಶ್ವಾಸ ಇಡಲಿಲ್ಲ.
10 : ನ್ಯಾಯನೀತಿಯ ವಿಷಯವಾಗಿ ಅವರ ತಪ್ಪುಭಾವನೆಯನ್ನು ಮನವರಿಕೆಮಾಡಿಕೊಡುವರು. ಏಕೆಂದರೆ, ನಾನು ಪಿತನ ಬಳಿಗೆ ಹೋಗುತ್ತೇನೆ ಮತ್ತು ನೀವು ನನ್ನನ್ನು ಕಾಣಲಾರಿರಿ.
11 : ಅಂತಿಮ ತೀರ್ಪಿನ ವಿಷಯವಾಗಿ ಅವರ ತಪ್ಪುಭಾವನೆಯನ್ನು ಮನವರಿಕೆಮಾಡಿಕೊಡುವರು. ಏಕೆಂದರೆ, ಇಹದ ಲೋಕಾಧಿಪತಿಗೆ ಈಗಾಗಲೇ ನ್ಯಾಯತೀರ್ಪನ್ನು ಕೊಡಲಾಗಿದೆ.
12 : ನಾನು ನಿಮಗೆ ಹೇಳಬೇಕಾದುದು ಇನ್ನೂ ಎಷ್ಟೋ ಇದೆ. ಸಧ್ಯಕ್ಕೆ ಅವು ನಿಮಗೆ ಹೊರಲಾಗದ ಹೊರೆಯಾಗಬಾರದು.
13 : ಹೇಗೂ ಸತ್ಯಸ್ವರೂಪಿ ಆದ ಪವಿತ್ರಾತ್ಮ ಬಂದಮೇಲೆ ನಿಮ್ಮನ್ನು ಸಮಗ್ರ ಸತ್ಯದೆಡೆಗೆ ಕರೆದೊಯ್ಯುವರು. ಅವರು ತಮ್ಮಷ್ಟಕ್ಕೆ ತಾವೇ ಏನನ್ನೂ ಬೋಧಿಸದೆ ತಾವು ಕೇಳಿದುದನ್ನು ಕುರಿತೇ ಮಾತನಾಡುವರು; ಮುಂದೆ ನಡೆಯಲಿರುವುದನ್ನೂ ನಿಮಗೆ ತಿಳಿಸುವರು.
14 : ಅವರು, ನಾನು ಹೇಳಿದವುಗಳಿಂದಲೇ ಆಯ್ದು ನಿಮಗೆ ತಿಳಿಯಪಡಿಸಿ ನನ್ನ ಮಹಿಮೆಯನ್ನು ಬೆಳಗಿಸುವರು.
15 : ಪಿತನಿಗೆ ಇರುವುದೆಲ್ಲವೂ ನನ್ನದೇ. ಆದುದರಿಂದಲೇ ಪವಿತ್ರಾತ್ಮ ನಾನು ಹೇಳಿದವುಗಳಿಂದಲೇ ಆಯ್ದು ನಿಮಗೆ ತಿಳಿಯಪಡಿಸುವರೆಂದು ನಾನು ಹೇಳಿದ್ದು. ನೋವು ನಲಿವು
16 : “ತುಸುಕಾಲವಾದ ನಂತರ ನೀವು ನನ್ನನ್ನು ಕಾಣಲಾರಿರಿ. ಅನಂತರ ತುಸುಕಾಲ ಕಳೆಯುತ್ತಲೇ ನನ್ನನ್ನು ಪುನಃ ಕಾಣುವಿರಿ,” ಎಂದರು ಯೇಸುಸ್ವಾಮಿ.
17 : ಇದನ್ನು ಕೇಳಿದ ಕೆಲವು ಮಂದಿ ಶಿಷ್ಯರು, “ಇದೇನು ಇವರು ಹೇಳುತ್ತಿರುವುದು? ‘ತುಸುಕಾಲವಾದ ನಂತರ ನೀವು ನನ್ನನ್ನು ಕಾಣಲಾರಿರಿ. ಅನಂತರ ತುಸುಕಾಲ ಕಳೆಯುತ್ತಲೇ ನೀವು ನನ್ನನ್ನು ಪುನಃ ಕಾಣುವಿರಿ ಮತ್ತು ಪಿತನಲ್ಲಿಗೆ ನಾನು ಹೋಗುತ್ತೇನೆ,’ ಎನ್ನುತ್ತಾರಲ್ಲ?
18 : ತುಸುಕಾಲ’ ಎಂದರೇನು? ಇವರ ಮಾತೇ ನಮಗೆ ಅರ್ಥವಾಗುತ್ತಿಲ್ಲವಲ್ಲಾ,” ಎಂದು ತಮ್ಮ ತಮ್ಮೊಳಗೆ ಮಾತನಾಡತೊಡಗಿದರು.
19 : ಯೇಸು, ತಮ್ಮಲ್ಲಿ ಅವರು ವಿಚಾರಿಸಬೇಕೆಂದಿದ್ದಾರೆಂದು ತಿಳಿದುಕೊಂಡು, ‘ತುಸುಕಾಲದ ನಂತರ ನೀವು ನನ್ನನ್ನು ಕಾಣಲಾರಿರಿ. ಅನಂತರ ತುಸುಕಾಲ ಕಳೆಯುತ್ತಲೇ ನನ್ನನ್ನು ಪುನಃ ಕಾಣುವಿರಿ’ ಎಂದು ನಾನು ಹೇಳಿದ್ದನ್ನು ಕುರಿತು ನಿಮ್ಮ ನಿಮ್ಮಲ್ಲಿಯೇ ನೀವು ಚರ್ಚಿಸುತ್ತಿರುವುದೇನು?
20 : ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ಅತ್ತು ಗೋಳಾಡುವಿರಿ; ಲೋಕವಾದರೋ ನಕ್ಕು ನಲಿದಾಡುವುದು. ನೀವು ದುಃಖಪಡುವಿರಿ. ಆದರೆ ನಿಮ್ಮ ದುಃಖ ಆನಂದವಾಗಿ ಮಾರ್ಪಡುವುದು.
21 : ಗರ್ಭಿಣಿಯಾದ ಸ್ತ್ರೀಯು ಪ್ರಸವಿಸುವ ಗಳಿಗೆ ಬಂದಾಗ ವೇದನೆ ಪಡುತ್ತಾಳೆ; ಮಗುವನ್ನು ಹೆರುತ್ತಲೇ ಜಗದಲ್ಲಿ ಮಾನವನೊಬ್ಬನು ಜನಿಸಿದನೆಂಬ ಉಲ್ಲಾಸದಿಂದ ತಾನು ಪಟ್ಟ ವೇದನೆಯನ್ನು ಮರೆತು ಬಿಡುತ್ತಾಳೆ;
22 : ನಿಮಗೆ ಈಗ ದುಃಖವಿದೆ; ನಾನು ನಿಮ್ಮನ್ನು ಮರಳಿ ಕಂಡಾಗ ಹರ್ಷಿಸುವಿರಿ. ಆ ಹರ್ಷವನ್ನು ಯಾರೂ ನಿಮ್ಮಿಂದ ಕಸಿದುಕೊಳ್ಳುವುದಿಲ್ಲ.
23 : ಆ ದಿನದಂದು ನನ್ನಿಂದ ನೀವೇನನ್ನೂ ಕೇಳುವಂತಿಲ್ಲ. ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ಪಿತನಲ್ಲಿ ಏನನ್ನು ಬೇಡಿಕೊಂಡರೂ ನಿಮಗೆ ಅವರು ನನ್ನ ಹೆಸರಿನಲ್ಲಿ ಕೊಟ್ಟೇ ತೀರುವರು.
24 : ಈ ತನಕ ನನ್ನ ಹೆಸರಿನಲ್ಲಿ ನೀವೇನನ್ನೂ ಕೇಳಲಿಲ್ಲ. ಕೇಳಿ, ನಿಮಗೆ ದೊರಕುವುದು. ಆಗ ನಿಮ್ಮ ಆನಂದವು ತುಂಬಿ ತುಳುಕುವುದು. ಲೋಕದ ಮೇಲೆ ವಿಜಯ
25 : “ಈ ಸಂಗತಿಗಳನ್ನೆಲ್ಲಾ ನಿಮಗೆ ಸಾಮತಿಗಳ ರೂಪದಲ್ಲಿ ತಿಳಿಸಿರುವೆನು. ಕಾಲವು ಬರಲಿದೆ. ಆಗ ಸಾಮತಿಗಳನ್ನು ಬಳಸದೆ ಸ್ಪಷ್ಟವಾದ ಮಾತಿನಲ್ಲಿ ಪಿತನನ್ನು ಕುರಿತು ನಿಮಗೆ ತಿಳಿಸುವೆನು.
26 : ಕಾಲವು ಬಂದಾಗ ನನ್ನ ಹೆಸರು ಹೇಳಿ ನೀವೇ ಪಿತನಲ್ಲಿ ಬೇಡುವಿರಿ. ನಿಮ್ಮ ಪರವಾಗಿ ನಾನು ಪಿತನಲ್ಲಿ ಬೇಡಿಕೊಳ್ಳುವೆನೆಂದು ನಾನು ಹೇಳುವುದಿಲ್ಲ
27 : ಕಾರಣ, ಪಿತನೇ ನಿಮ್ಮನ್ನು ಪ್ರೀತಿಸುತ್ತಾರೆ. ನೀವು ನನ್ನನ್ನು ಪ್ರೀತಿಸಿ ನಾನು ಅವರಿಂದ ಬಂದವನೆಂದು ವಿಶ್ವಾಸಿಸಿದ್ದರಿಂದ ಪಿತನಿಗೆ ನಿಮ್ಮ ಮೇಲೆ ಅಕ್ಕರೆಯಿದೆ.
28 : ಹೌದು, ನಾನು ಪಿತನಿಂದಲೇ ಹೊರಟು ಈ ಲೋಕಕ್ಕೆ ಬಂದಿದ್ದೇನೆ. ಈಗ ಈ ಲೋಕವನ್ನು ಬಿಟ್ಟು ಪಿತನಲ್ಲಿಗೆ ಹೋಗುತ್ತಿದ್ದೇನೆ,” ಎಂದರು.
29 : ಅದಕ್ಕೆ ಶಿಷ್ಯರು, “ಈಗ ನೀವು ಸಾಮತಿಗಳನ್ನು ಬಳಸದೆ ಸ್ಪಷ್ಟವಾಗಿಯೇ ಮಾತನಾಡುತ್ತಿದ್ದೀರಿ.
30 : ನೀವು ಎಲ್ಲವನ್ನೂ ಬಲ್ಲವರು. ಪ್ರಶ್ನೆಗಳಿಗಾಗಿ ನೀವು ಕಾಯಬೇಕಿಲ್ಲ ಎಂದು ನಮಗೀಗ ತಿಳಿಯಿತು. ಆದುದರಿಂದ ನೀವು ದೇವರಿಂದ ಬಂದವರೆಂದು ನಾವು ವಿಸ್ವಾಸಿಸುತ್ತೇವೆ,” ಎಂದರು.
31 : ಆಗ ಯೇಸುಸ್ವಾಮಿ, “ಈಗ ನೀವು ವಿಶ್ವಾಸಿಸುತ್ತೀರೋ?
32 : ನೀವೆಲ್ಲರೂ ನನ್ನನ್ನು ಒಬ್ಬಂಟಿಗನಾಗಿ ಬಿಟ್ಟು ನಿಮ್ಮ ನಿಮ್ಮ ಮನೆಗೆ ಚದರಿ ಹೋಗುವ ಕಾಲವು ಬರುತ್ತದೆ. ಈಗಾಗಲೇ ಬಂದಿದೆ. ಆದರೆ ಪಿತನು ನನ್ನೊಡನೆ ಇರುವುದರಿಂದ ನಾನು ಒಬ್ಬಂಟಿಗನಲ್ಲ.
33 : ನಿಮಗೆ ನನ್ನಲ್ಲಿ ಶಾಂತಿಸಮಾಧಾನ ಲಭಿಸಲೆಂದು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಲೋಕದಲ್ಲಿ ನಿಮಗೆ ಕಷ್ಟಸಂಕಷ್ಟಗಳು ತಪ್ಪಿದ್ದಲ್ಲ, ಆದರೆ ಧೈರ್ಯವಾಗಿರಿ. ನಾನು ಲೋಕವನ್ನು ಜಯಿಸಿದ್ದೇನೆ,” ಎಂದು ಹೇಳಿದರು.

· © 2017 kannadacatholicbible.org Privacy Policy