1 : ಪಾಸ್ಕಹಬ್ಬಕ್ಕೆ ಇನ್ನೂ ಆರು ದಿನಗಳಿರುವಾಗ ಯೇಸುಸ್ವಾಮಿ ಬೆಥಾನಿಯಕ್ಕೆ ಬಂದರು. ಅವರು ಲಾಸರನನ್ನು ಸಾವಿನಿಂದ ಜೀವಕ್ಕೆ ಎಬ್ಬಿಸಿದ ಊರದು.
2 : ಯೇಸುವಿಗೆ ಅಲ್ಲಿ ಒಂದು ಔತಣವನ್ನು ಏರ್ಪಡಿಸಲಾಗಿತ್ತು. ಮಾರ್ತಳು ಬಡಿಸುತ್ತಿದ್ದಳು. ಯೇಸುವಿನೊಡನೆ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದವರಲ್ಲಿ ಲಾಸರನೂ ಒಬ್ಬ.
3 : ಆಗ ಮರಿಯಳು ಸುಮಾರು ಅರ್ಧ ಲೀಟರಿನಷ್ಟು, ಅತ್ಯಂತ ಬೆಲೆಬಾಳುವ ಅಚ್ಚ ಜಟಾಮಾಂಸಿ ಸುಗಂಧ ತೈಲವನ್ನು ತಂದು ಯೇಸುವಿನ ಪಾದಗಳಿಗೆ ಹಚ್ಚಿ, ತನ್ನ ತಲೆಗೂದಲಿನಿಂದ ಆ ಪಾದಗಳನ್ನು ಒರಸಿದಳು. ತೈಲದ ಸುವಾಸನೆ ಮನೆಯಲ್ಲೆಲ್ಲಾ ಹರಡಿತು.
4 : ಯೇಸುವನ್ನು ಹಿಡಿದುಕೊಡಲಿದ್ದ ಹಾಗೂ ಶಿಷ್ಯರಲ್ಲಿ ಒಬ್ಬನಾಗಿದ್ದ ಇಸ್ಕರಿಯೋತಿನ ಯೂದನು,
5 : “ಈ ಸುಗಂಧ ತೈಲವನ್ನು ಮುನ್ನೂರು ದೆನಾರಿ ನಾಣ್ಯಗಳಿಗೆ ಮಾರಿ, ಬಂದ ಹಣವನ್ನು ಬಡಬಗ್ಗರಿಗೆ ಕೊಡಬಹುದಿತ್ತಲ್ಲಾ?” ಎಂದನು.
6 : ಬಡವರ ಹಿತಚಿಂತನೆಯಿಂದೇನೂ ಅವನು ಹೀಗೆ ಹೇಳಲಿಲ್ಲ. ತನ್ನ ವಶದಲ್ಲಿ ಇಡಲಾಗಿದ್ದ ಹಣದ ಚೀಲದಿಂದ ಸ್ವಂತ ಉಪಯೋಗಕ್ಕಾಗಿ ಬಳಸುತ್ತಿದ್ದ ಕಳ್ಳ ಅವನು.
7 : ಆಗ ಯೇಸು, “ಆಕೆಯ ಗೊಡವೆ ನಿನಗೆ ಬೇಡ. ನನ್ನ ಶವಸಂಸ್ಕಾರದ ದಿನಕ್ಕಾಗಿ ಆಕೆ ಅದನ್ನು ಇಟ್ಟುಕೊಳ್ಳಲಿ.
8 : ಬಡಬಗ್ಗರು ನಿಮ್ಮ ಬಳಿಯಲ್ಲಿ ಯಾವಾಗಲೂ ಇರುತ್ತಾರೆ. ಆದರೆ ನಾನು ಯಾವಾಗಲೂ ನಿಮ್ಮ ಬಳಿ ಇರುವುದಿಲ್ಲ,” ಎಂದರು.
ಲಾಸರನ ಕೊಲೆಗೆ ಹಂಚಿಕೆ
9 : ಯೇಸುಸ್ವಾಮಿ ಅಲ್ಲಿರುವುದನ್ನು ಕೇಳಿ ಯೆಹೂದ್ಯರ ಒಂದು ದೊಡ್ಡಗುಂಪು ಬಂದಿತು. ಯೇಸುವನ್ನು ಮಾತ್ರವಲ್ಲ, ಅವರು ಸಾವಿನಿಂದ ಜೀವಕ್ಕೆ ಎಬ್ಬಿಸಿದ ಲಾಸರನನ್ನೂ ಕಾಣಲು ಆ ಜನರು ಅಲ್ಲಿಗೆ ಬಂದಿದ್ದರು.
10 : ಲಾಸರನ ನಿಮಿತ್ತವಾಗಿ ಅನೇಕ ಯೆಹೂದ್ಯರು ತಮ್ಮನ್ನು ಬಿಟ್ಟು ಯೇಸುವಿನಲ್ಲಿ ನಂಬಿಕೆಯಿಟ್ಟ ಕಾರಣ ಲಾಸರನನ್ನು ಕೂಡ ಕೊಲ್ಲಬೇಕೆಂದು ಮುಖ್ಯಯಾಜಕರು ಆಲೋಚಿಸಿದರು.
ಜೆರುಸಲೇಮಿಗೆ ರಾಜಪ್ರವೇಶ
11 : ಲಾಸರನ ನಿಮಿತ್ತವಾಗಿ ಅನೇಕ ಯೆಹೂದ್ಯರು ತಮ್ಮನ್ನು ಬಿಟ್ಟು ಯೇಸುವಿನಲ್ಲಿ ನಂಬಿಕೆಯಿಟ್ಟ ಕಾರಣ ಲಾಸರನನ್ನು ಕೂಡ ಕೊಲ್ಲಬೇಕೆಂದು ಮುಖ್ಯಯಾಜಕರು ಆಲೋಚಿಸಿದರು.
ಜೆರುಸಲೇಮಿಗೆ ರಾಜಪ್ರವೇಶ
12 : ಮಾರನೆಯ ದಿನ ಯೇಸುಸ್ವಾಮಿ ಜೆರುಸಲೇಮಿಗೆ ಬರುತ್ತಿದ್ದಾರೆಂಬ ಸುದ್ದಿ ಹರಡಿತು. ಹಬ್ಬಕ್ಕೆ ಬಂದು ನೆರೆದಿದ್ದ ಜನ ಸಮೂಹಕ್ಕೆ ಈ ಸುದ್ಧಿ ಮುಟ್ಟಿತು.
13 : ಖರ್ಜೂರದ ಗರಿಗಳನ್ನು ಹಿಡಿದುಕೊಂಡು ಅವರು ಯೇಸುವನ್ನು ಎದುರುಗೊಳ್ಳಲು ಹೊರಟರು.
‘ಸರ್ವೇಶ್ವರನ ನಾಮದಲ್ಲಿ ಬರುವಾತನಿಗೆ
ಜಯಜಯವಾಗಲಿ !
ಇಸ್ರಯೇಲಿನ ಅರಸನಿಗೆ ಶುಭವಾಗಲಿ!’
ಎಂದು ಘೋಷಿಸುತ್ತಾ ಅವರನ್ನು ಸ್ವಾಗತಿಸಿದರು.
14 : ಯೇಸು ದಾರಿಯಲ್ಲಿದ್ದ ಪ್ರಾಯದ ಹೇಸರಗತ್ತೆಯೊಂದನ್ನು ಹತ್ತಿ ಹೊರಟರು.
15 : ಇದನ್ನು ಕುರಿತೇ, ‘ಸಿಯೋನ್ ನಗರಿಯೇ, ಅಂಜಬೇಡ. ಇಗೋ ನೋಡು; ಹೇಸರಗತ್ತೆಯನ್ನೇರಿ ಬರುತ್ತಿರುವನು ನಿನ್ನ ಅರಸನು’ ಎಂದಿದೆ ಪವಿತ್ರ ಗ್ರಂಥ.
16 : ಇದೆಲ್ಲ ಶಿಷ್ಯರಿಗೆ ಆಗ ಅರ್ಥವಾಗಲಿಲ್ಲ. ಇದೆಲ್ಲವನ್ನೂ ಬರೆದದ್ದು ಅವರನ್ನು ಕುರಿತೇ; ಆ ಪ್ರಕಾರವೇ ನೆರವೇರಿದೆ ಎಂಬುದನ್ನು ಯೇಸು ಮಹಿಮಾಪದವಿಯನ್ನು ಪಡೆದಾದ ಮೇಲೆ ಅವರು ನೆನಪಿಗೆ ತಂದುಕೊಂಡರು.
17 : ಇದಲ್ಲದೆ ಯೇಸು ಲಾಸರನನ್ನು ಸಮಾಧಿಯಿಂದ ಹೊರಗೆ ಕರೆದು ಸಾವಿನಿಂದ ಜೀವಕ್ಕೆ ಎಬ್ಬಿಸಿದಾಗ ಅವರ ಸಂಗಡ ಇದ್ದವರು ನಡೆದ ವಿಷಯವನ್ನು ಇತರರಿಗೆ ಸಾರುತ್ತಿದ್ದರು.
18 : ಈ ಸೂಚಕಕಾರ್ಯವನ್ನು ಕೇಳಿದ್ದ ಕಾರಣದಿಂದಲೂ ಜನರು ಯೇಸುವನ್ನು ಎದುರುಗೊಳ್ಳಲು ಹೋಗಿದ್ದರು.
19 : ಇದನ್ನೆಲ್ಲಾ ಕಂಡ ಫರಿಸಾಯರು ತಮ್ಮ ತಮ್ಮೊಳಗೆ, “ನೋಡಿದಿರಾ? ನಮ್ಮ ಕೈಯಿಂದ ಏನೂ ಆಗಲಿಲ್ಲ. ಇಡೀ ಜಗತ್ತೇ ಅವನ ಹಿಂದೆ ಹೋಗುತ್ತಿದೆಯಲ್ಲಾ!” ಎಂದುಕೊಂಡರು.
ಗ್ರೀಕರಿಗೂ ಯೇಸುವನ್ನು ಕಾಣುವ ಬಯಕೆ
20 : ಆರಾಧನೆಗೆಂದು ಹಬ್ಬಕ್ಕೆ ಬಂದಿದ್ದವರಲ್ಲಿ ಕೆಲವರು ಗ್ರೀಕರು.
21 : ಇವರು ಗಲಿಲೇಯದ ಬೆತ್ಸಾಯಿದ ಎಂಬ ಊರಿನವನಾದ ಫಿಲಿಪ್ಪನ ಬಳಿ ಬಂದು, “ಅಯ್ಯಾ, ನಾವು ಯೇಸುವನ್ನು ನೋಡಬೇಕೆಂದಿದ್ದೇವೆ,” ಎಂದು ಕೇಳಿಕೊಂಡರು.
22 : ಫಿಲಿಪ್ಪನು ಬಂದು ಅಂದ್ರೆಯನಿಗೆ ಹೇಳಿದನು. ಅವರಿಬ್ಬರೂ ಹೋಗಿ ಯೇಸುವಿಗೆ ಈ ವಿಷಯವನ್ನು ತಿಳಿಸಿದರು.
23 : ಅದಕ್ಕೆ ಯೇಸು, “ನರಪುತ್ರನು ಮಹಿಮೆಯನ್ನು ಹೊಂದುವ ಗಳಿಗೆ ಬಂದಿದೆ.
24 : ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಗೋದಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯದಿದ್ದರೆ ಅದು ಒಂಟಿಯಾಗಿ ಉಳಿಯುತ್ತದೆ; ಅದು ಸತ್ತರೆ ಮಾತ್ರ ಸಮೃದ್ಧಿಯಾದ ಫಲವನ್ನು ಕೊಡುತ್ತದೆ.
25 : ತನ್ನ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುತ್ತಾನೆ. ತನ್ನ ಪ್ರಾಣವನ್ನು ಈ ಲೋಕದಲ್ಲಿ ದ್ವೇಷಿಸುವವನು ಅದನ್ನು ನಿತ್ಯ ಜೀವಕ್ಕಾಗಿ ಕಾಯ್ದಿರಿಸಿಕೊಳ್ಳುತ್ತಾನೆ.
26 : ನನ್ನ ಸೇವೆ ಮಾಡಬೇಕೆಂದಿರುವವನು ನನ್ನನ್ನು ಹಿಂಬಾಲಿಸಲಿ. ಆಗ ನಾನಿರುವಲ್ಲಿಯೇ ನನ್ನ ಸೇವಕನೂ ಇರುತ್ತಾನೆ. ನನ್ನ ಸೇವೆ ಮಾಡುವವನು ನನ್ನ ಪಿತನಿಂದ ಸನ್ಮಾನಹೊಂದುತ್ತಾನೆ,” ಎಂದರು.
27 : ಯೇಸುಸ್ವಾಮಿ ತಮ್ಮ ಮಾತನ್ನು ಮುಂದುವರಿಸುತ್ತಾ, “ಈಗ ನನ್ನಾತ್ಮ ತತ್ತರಿಸುತ್ತಿದೆ. ನಾನು ಏನೆಂದು ಹೇಳಲಿ? ‘ಪಿತನೇ, ಈ ಗಳಿಗೆಯಿಂದ ನನ್ನನ್ನು ಕಾಪಾಡು ಎನ್ನಲೇ?’ ಇಲ್ಲ, ಅದಕ್ಕೆ ಬದಲಾಗಿ ಇದನ್ನು ಅನುಭವಿಸಲೆಂದೇ ನಾನು ಈ ಗಳಿಗೆಗೆ ಕಾಲಿಟ್ಟಿದ್ದೇನೆ.
28 : ‘ಪಿತನೇ, ನಿಮ್ಮ ನಾಮಮಹಿಮೆಯನ್ನು ಬೆಳಗಿಸಿ’ ” ಎಂದು ನುಡಿದರು. ಆಗ, “ಹೌದು, ಆ ಮಹಿಮೆಯನ್ನು ಬೆಳಗಿಸಿದ್ದೇನೆ, ಪುನಃ ಬೆಳಗಿಸುತ್ತೇನೆ,” ಎಂಬ ಸ್ವರ್ಗೀಯ ವಾಣಿ ಕೇಳಿಸಿತು.
29 : ಅಲ್ಲಿ ನಿಂತುಕೊಂಡಿದ್ದ ಜನರು ಆ ವಾಣಿಯನ್ನು ಕೇಳಿ, “ಇದೇನು ಗುಡುಗಿನ ಸದ್ದು?” ಎಂದರು. ಕೆಲವರು, “ದೇವದೂತನೊಬ್ಬ ಆತನೊಡನೆ ಮಾತನಾಡಿದನು,” ಎಂದರು.
30 : ಯೇಸುಸ್ವಾಮಿ, “ಈ ವಾಣಿಯಾದುದು ನಿಮಗಾಗಿ, ನನಗಾಗಿ ಅಲ್ಲ.
31 : ಈಗ ಈ ಲೋಕವು ನ್ಯಾಯತೀರ್ಪಿಗೆ ಒಳಗಾಗುವುದು. ಇದೀಗಲೇ ಈ ಲೋಕಾಧಿಪತಿಯನ್ನು ಹೊರದೂಡಲಾಗುವುದು.
32 : ಆದರೆ ನನ್ನನ್ನು ಭೂಮಿಯಿಂದ ಮೇಲೇರಿಸಿದಾಗ, ನಾನು ಎಲ್ಲರನ್ನೂ ನನ್ನೆಡೆಗೆ ಸೆಳೆದುಕೊಳ್ಳುತ್ತೇನೆ,” ಎಂದು ನುಡಿದರು.
33 : ಈ ಮಾತಿನಿಂದ ತಮಗೆಂಥ ಮರಣ ಕಾದಿದೆಯೆಂದು ಸೂಚಿಸಿದರು.
34 : ನೆರೆದಿದ್ದ ಜನರು ಪ್ರತ್ಯುತ್ತರವಾಗಿ, “ಅಭಿಷಿಕ್ತನಾದ ಲೋಕೋದ್ಧಾರಕ ಸದಾಕಾಲ ಇರುವನೆಂದು ಧರ್ಮಶಾಸ್ತ್ರವೇ ತಿಳಿಸುತ್ತದೆ. ಹೀಗಿರುವಲ್ಲಿ, ನರಪುತ್ರನನ್ನು ಮೇಲೇರಿಸಬೇಕಾಗಿದೆ ಎಂದು ನೀನು ಹೇಳುತ್ತೀಯಲ್ಲಾ, ಅದು ಹೇಗೆ? ಆ ನರಪುತ್ರನು ಯಾರು?” ಎಂದು ಕೇಳಿದರು.
35 : ಅದಕ್ಕೆ ಯೇಸು, “ಇನ್ನು ತುಸು ಕಾಲ ಮಾತ್ರ ಜ್ಯೋತಿ ನಿಮ್ಮ ನಡುವೆ ಇರುತ್ತದೆ. ನಿಮ್ಮನ್ನು ಕತ್ತಲು ಕವಿಯದಂತೆ ಜ್ಯೋತಿಯಿರುವಾಗಲೇ ನಡೆಯಿರಿ. ಕತ್ತಲಲ್ಲಿ ನಡೆಯುವವನಿಗೆ ಗೊತ್ತುಗುರಿ ಕಾಣದು.
36 : ನಿಮ್ಮೊಡನೆ ಇನ್ನೂ ಜ್ಯೋತಿ ಇರುವುದರಿಂದ ಆ ಜ್ಯೋತಿಯಲ್ಲಿ ನಂಬಿಕೆಯಿಡಿ. ಆಗ ನೀವು ಜ್ಯೋತಿಯ ಮಕ್ಕಳು ಆಗುವಿರಿ,” ಎಂದರು. ಇದನ್ನು ಕೇಳಿದ ತರುವಾಯ ಯೇಸು ಅಲ್ಲಿಂದ ಹೊರಟು ಜನರ ಕಣ್ಣಿಗೆ ಬೀಳದಂತೆ ಮರೆಯಾದರು.
ವಿಶ್ವಾಸವಿಹೀನ ಜನರು
37 : ಯೇಸುಸ್ವಾಮಿ ಬಹುತೇಕ ಸೂಚಕ ಕಾರ್ಯಗಳನ್ನು ಜನರ ಕಣ್ಮುಂದೆ ಮಾಡಿದರೂ ಆ ಜನರು ಅವರನ್ನು ವಿಶ್ವಾಸಿಸದೆ ಹೋದರು.
38 : ಹೀಗೆ ಯೆಶಾಯ ಪ್ರವಾದಿಯ ಈ ಮಾತು ನೆರವೇರಿತು:
“ಸರ್ವೇಶ್ವರಾ, ನಮ್ಮ ಸಂದೇಶವನ್ನು
ನಂಬಿದವರಾರು?
ದೇವರ ಶಕ್ತಿಸಾಮಥ್ರ್ಯ ಗೋಚರವಾದುದು
ಯಾರಿಗೆ?”
39 : ಜನರು ವಿಶ್ವಾಸಿಸದೆ ಹೋದುದಕ್ಕೆ ಯೆಶಾಯನು ಮತ್ತೊಂದು ವಚನದಲ್ಲಿ ಕಾರಣವನ್ನು ಸೂಚಿಸಿದ್ದಾನೆ:
40 : “ತಮ್ಮ ಕಣ್ಣುಗಳಿಂದ ಅವರು
ಕಾಣದಂತೆಯೂ
ತಮ್ಮ ಮನದಿಂದ ಗ್ರಹಿಸದಂತೆಯೂ ಹಾಗೂ
ಮನತಿರುಗಿ ನನ್ನಿಂದ ಗುಣಹೊಂದದಂತೆಯೂ
ಅವರ ಕಣ್ಣುಗಳನ್ನು ಕುರುಡಾಗಿಸಿರುವರು;
ಅವರ ಮನಸ್ಸನ್ನು ಕಲ್ಲಾಗಿಸಿರುವರು
ದೇವರು.”
41 : ಯೇಸುವಿನ ಮಹಿಮೆಯನ್ನು ಮನಗಂಡು, ಅವರನ್ನು ಕುರಿತು ಮಾತನಾಡುವಾಗ ಯೆಶಾಯನು ಹೇಳಿದ ಮಾತುಗಳಿವು.
42 : ಯೆಹೂದ್ಯರಲ್ಲಿ ಹಲವು ಮಂದಿ ಮುಖಂಡರಿಗೆ ಯೇಸುವಿನಲ್ಲಿ ವಿಶ್ವಾಸಮೂಡಿತು. ಆದರೆ ಫರಿಸಾಯರು ಪ್ರಾರ್ಥನಾಮಂದಿರಗಳಿಂದ ತಮಗೆ ಬಹಿಷ್ಕಾರ ಹಾಕಿಯಾರೆಂಬ ಅಂಜಿಕೆಯ ಕಾರಣ ಅವರು ತಮ್ಮ ವಿಶ್ವಾಸವನ್ನು ಬಯಲು ಮಾಡಲಿಲ್ಲ.
43 : ದೇವರಿಂದ ದೊರಕುವ ಮನ್ನಣೆಗಿಂತ ಮಾನವರಿಂದ ಸಿಗುವ ಮನ್ನಣೆಯೇ ಅವರಿಗೆ ಪ್ರಿಯವಾಗಿತ್ತು.
ಯೇಸುವಿನ ಮಾತು ಅಂತಿಮ ತೀರ್ಪು
44 : ಯೇಸುಸ್ವಾಮಿ ಗಟ್ಟಿಯಾಗಿ ಕೂಗಿ ಇಂತೆಂದರು: “ನನ್ನಲ್ಲಿ ವಿಶ್ವಾಸವಿಡುವವನು ನನ್ನಲ್ಲಿ ಅಲ್ಲ, ನನ್ನನ್ನು ಕಳುಹಿಸಿದಾತನಲ್ಲೇ ವಿಶ್ವಾಸವಿಡುತ್ತಾನೆ.
45 : ನನ್ನನ್ನು ಕಾಣುವವನು ನನ್ನನ್ನು ಕಳುಹಿಸಿದಾತನನ್ನೇ ಕಾಣುತ್ತಾನೆ.
46 : ನನ್ನಲ್ಲಿ ವಿಶ್ವಾಸವಿಡುವವನು ಅಂಧಕಾರದಲ್ಲಿ ಉಳಿಯಬಾರದೆಂದು ನಾನೇ ಜಗಜ್ಯೋತಿಯಾಗಿ ಬಂದಿದ್ದೇನೆ.
47 : ಯಾವನಾದರೂ ನನ್ನ ಮಾತನ್ನು ಕೇಳಿಯೂ ಅದರಂತೆ ನಡೆಯದೆ ಹೋದರೆ ಅಂಥವನಿಗೆ ತೀರ್ಪುಕೊಡುವವನು ನಾನಲ್ಲ. ನಾನು ಬಂದುದು ಲೋಕದ ಉದ್ಧಾರಕ್ಕಾಗಿ, ತೀರ್ಪು ಕೊಡುವುದಕ್ಕಾಗಿ ಅಲ್ಲ.
48 : ನನ್ನನ್ನು ನಿರಾಕರಿಸಿ ನನ್ನ ಮಾತುಗಳನ್ನು ಅಂಗೀಕರಿಸದೆ ಹೋದವನಿಗೆ ತೀರ್ಪುಕೊಡುವಂಥದ್ದು ಒಂದು ಇದೆ.
49 : ಅದು ಯಾವುದೆಂದರೆ ನಾನು ಆಡಿದ ಮಾತೇ. ಅಂತಿಮ ದಿನದಂದು ಅದೇ ಅವನಿಗೆ ತೀರ್ಪುಕೊಡುವುದು. ಏಕೆಂದರೆ, ನನ್ನಷ್ಟಕ್ಕೆ ನಾನೇ ಇದನ್ನೆಲ್ಲಾ ಮಾತನಾಡುತ್ತಿಲ್ಲ. ನನ್ನನ್ನು ಕಳುಹಿಸಿದ ಪಿತನೇ, ನಾನು ಏನು ಹೇಳಬೇಕು, ಯಾವ ಮಾತನ್ನು ಆಡಬೇಕು ಎಂದು ನನಗೆ ಆಜ್ಞೆ ಮಾಡಿದ್ದಾರೆ.
50 : ಅವರ ಆಜ್ಞೆಯೇ ನಿತ್ಯಜೀವದಾಯಕ ಎಂದು ನಾನು ಬಲ್ಲೆ. ಆದ್ದರಿಂದಲೇ ಪಿತನು ಹೇಳಿದಂತೆಯೇ ನಾನು ಮಾತನಾಡುತ್ತೇನೆ.”