Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೊವಾನ್ನ


1 : ಬೆಥಾನಿಯ ಎಂಬ ಊರಿನಲ್ಲಿ ಲಾಸರ್ ಎಂಬವನು ಅಸ್ವಸ್ಥನಾಗಿದ್ದನು. ಮರಿಯ ಮತ್ತು ಅವಳ ಸಹೋದರಿ ಮಾರ್ತ ಎಂಬವರ ಊರು ಅದೇ ಆಗಿತ್ತು.
2 : (ಹಿಂದೊಮ್ಮೆ ಪ್ರಭುವಿನ ಪಾದಗಳಿಗೆ ಸುಗಂಧ ತೈಲವನ್ನು ಹಚ್ಚಿ ಅವರ ಪಾದಗಳನ್ನು ತನ್ನ ತಲೆಗೂದಲಿನಿಂದ ಒರಸಿದವಳೇ ಈ ಮರಿಯ. ಅಸ್ವಸ್ಥನಾಗಿದ್ದ ಲಾಸರನು ಇವಳ ಸಹೋದರ.)
3 : ಈ ಸಹೋದರಿಯರು, ಯೇಸುಸ್ವಾಮಿಗೆ, “ಪ್ರಭುವೇ, ನಿಮ್ಮ ಆಪ್ತಮಿತ್ರನು ಅಸ್ವಸ್ಥನಾಗಿದ್ದಾನೆ,” ಎಂದು ಹೇಳಿಕಳುಹಿಸಿದರು.
4 : ಇದನ್ನು ಕೇಳಿದ ಯೇಸು, “ಈ ಕಾಯಿಲೆ ಮರಣಕ್ಕಾಗಿ ಬಂದುದಲ್ಲ, ದೇವರ ಮಹಿಮೆಗೋಸ್ಕರ ಬಂದಿದೆ. ಇದರ ಮೂಲಕ ದೇವರ ಪುತ್ರನಿಗೆ ಮಹಿಮೆ ಉಂಟಾಗಲಿದೆ,” ಎಂದು ನುಡಿದರು.
5 : ಮಾರ್ತ, ಅವಳ ಸಹೋದರಿ ಮರಿಯ ಮತ್ತು ಲಾಸರ, ಇವರು ಯೇಸುವಿಗೆ ಅಚ್ಚುಮೆಚ್ಚಿನವರು.
6 : ಲಾಸರನ ಕಾಯಿಲೆಯ ಸುದ್ದಿಯನ್ನು ಕೇಳಿದ ಮೇಲೂ ಯೇಸು ತಾವಿದ್ದಲ್ಲಿಯೇ ಇನ್ನೂ ಎರಡು ದಿನ ಉಳಿದುಕೊಂಡರು.
7 : ಅನಂತರ ತಮ್ಮ ಶಿಷ್ಯರಿಗೆ, “ಬನ್ನಿ, ಜುದೇಯಕ್ಕೆ ಮರಳಿ ಹೋಗೋಣ,” ಎಂದರು.
8 : ಆ ಶಿಷ್ಯರು, “ಗುರುದೇವಾ, ಇತ್ತೀಚೆಗೆ ತಾನೆ ಯೆಹೂದ್ಯರು ನಿಮ್ಮನ್ನು ಕಲ್ಲಿನಿಂದ ಹೊಡೆಯಬೇಕೆಂದಿದ್ದರು. ಪುನಃ ಅಲ್ಲಿಗೇ ಹೋಗಬೇಕೆಂದಿರುವಿರಾ?” ಎಂದು ಕೇಳಿದರು.
9 : ಅದಕ್ಕೆ ಯೇಸು, “ಹಗಲಿಗೆ ಹನ್ನೆರಡು ತಾಸು ಉಂಟಲ್ಲವೆ? ಹಗಲಿನಲ್ಲಿ ನಡೆಯುವವನು ಎಡವಿ ಬೀಳುವುದಿಲ್ಲ. ಏಕೆಂದರೆ ಈ ಲೋಕದ ಬೆಳಕು ಅವನಿಗೆ ಕಾಣಿಸುತ್ತದೆ.
10 : ಆದರೆ ರಾತ್ರಿಯಲ್ಲಿ ನಡೆಯುವವನು ಎಡವಿ ಬೀಳುತ್ತಾನೆ. ಕಾರಣ, ಅವನಲ್ಲಿ ಬೆಳಕು ಇಲ್ಲ,” ಎಂದರು.
11 : ಬಳಿಕ ಯೇಸು, “ನಮ್ಮ ಮಿತ್ರನಾದ ಲಾಸರನು ನಿದ್ರೆ ಮಾಡುತ್ತಿದ್ದಾನೆ, ಅವನನ್ನು ಎಬ್ಬಿಸಲು ನಾನು ಹೋಗಬೇಕು,” ಎಂದು ನುಡಿದರು.
12 : ಶಿಷ್ಯರು, “ಪ್ರಭುವೇ, ಅವನು ನಿದ್ರೆ ಮಾಡುತ್ತಿರುವನಾದರೆ ಚೇತರಿಸಿಕೊಳ್ಳುತ್ತಾನೆ,” ಎಂದರು.
13 : ಯೇಸು ಹೇಳಿದ್ದು ಅವನ ಮರಣವನ್ನು ಕುರಿತು. ಶಿಷ್ಯರಾದರೋ ಅದು ಸಾಮಾನ್ಯ ನಿದ್ರೆಯೆಂದು ತಿಳಿದುಕೊಂಡರು.
14 : ಆದುದರಿಂದ ಯೇಸು ಅವರಿಗೆ ಸ್ಪಷ್ಟವಾಗಿ, “ಲಾಸರನು ಸತ್ತು ಹೋಗಿದ್ದಾನೆ;
15 : ನಾನು ಅಲ್ಲಿ ಇಲ್ಲದೆ ಹೋದದ್ದು ನಿಮಗೆ ಒಳ್ಳೆಯದೇ ಆಯಿತು. ನಿಮಗೆ ನನ್ನಲ್ಲಿ ವಿಶ್ವಾಸ ಮೂಡುವಂತೆ ಇದೆಲ್ಲಾ ನಡೆದಿದೆ. ಬನ್ನಿ, ಅವನ ಬಳಿಗೆ ಹೋಗೋಣ,” ಎಂದರು.
16 : ಆಗ ದಿದುಮನೆಂಬ ತೋಮನು ತನ್ನ ಜೊತೆ ಶಿಷ್ಯರಿಗೆ, “ನಾವು ಕೂಡ ಪ್ರಭುವಿನೊಡನೆ ಹೋಗಿ ಸಾಯೋಣ,” ಎಂದು ಹೇಳಿದನು. ‘ನಾನೇ ಪುನರುತ್ಥಾನ; ನಾನೇ ಜೀವ!’
17 : ಯೇಸುಸ್ವಾಮಿ ಅಲ್ಲಿಗೆ ಬಂದಾಗ ಲಾಸರನನ್ನು ಸಮಾಧಿಯಲ್ಲಿ ಹೂಳಿಟ್ಟು ಆಗಾಗಲೇ ನಾಲ್ಕು ದಿನಗಳಾಗಿದ್ದುವೆಂದು ತಿಳಿಯಿತು.
18 : ಬೆಥಾನಿಯ ಜೆರುಸಲೇಮಿನಿಂದ ಸುಮಾರು ಮೂರು ಕಿಲೊವಿೂಟರು ದೂರದಲ್ಲಿದೆ.
19 : ಅನೇಕ ಯೆಹೂದ್ಯರು ಮಾರ್ತಳನ್ನೂ ಮರಿಯಳನ್ನೂ ಕಂಡು ಅವರ ಸೋದರನ ಮರಣಕ್ಕಾಗಿ ಸಂತಾಪ ಸೂಚಿಸಲು ಬಂದಿದ್ದರು.
20 : ಯೇಸು ಬರುತ್ತಿದ್ದಾರೆಂದು ಕೇಳಿದೊಡನೆ ಮಾರ್ತ ಅವರನ್ನು ಎದುರುಗೊಳ್ಳಲು ಹೋದಳು. ಮರಿಯ ಮನೆಯಲ್ಲೇ ಇದ್ದಳು
21 : ಮಾರ್ತ ಯೇಸುವನ್ನು ಕಂಡು, ‘ಪ್ರಭುವೇ, ನೀವು ಇಲ್ಲಿದ್ದಿದ್ದರೆ ನನ್ನ ಸಹೋದರ ಸಾಯುತ್ತಿರಲಿಲ್ಲ.
22 : ಈಗಲೂ ದೇವರಲ್ಲಿ ನೀವು ಏನೇ ಕೇಳಿಕೊಂಡರೂ ನಿಮಗವರು ನೀಡುವರೆಂದು ನಾನು ಬಲ್ಲೆ,” ಎಂದಳು.
23 : ಯೇಸು, “ನಿನ್ನ ಸಹೋದರನು ಜೀವಂತವಾಗಿ ಏಳುವನು,” ಎಂದರು.
24 : “ಅವನು ಅಂತಿಮ ದಿನದ ಪುನರುತ್ಥಾನದಲ್ಲಿ ಜೀವಂತವಾಗಿ ಏಳುವನೆಂದು ನನಗೆ ತಿಳಿದಿದೆ,” ಎಂದಳು ಮಾರ್ತ.
25 : ಯೇಸು, ಅವಳಿಗೆ, “ಪುನರುತ್ಥಾನವೂ ಜೀವವೂ ನಾನೇ; ನನ್ನಲ್ಲಿ ವಿಶ್ವಾಸವಿಟ್ಟವನು ಸಾವಿಗೀಡಾದರೂ ಜೀವಿಸುವನು.
26 : ಜೀವಿಸುವ ಪ್ರತಿಯೊಬ್ಬನೂ ನನ್ನಲ್ಲಿ ವಿಶ್ವಾಸವಿಟ್ಟನೆಂದರೆ ಅವನೆಂದಿಗೂ ಸಾಯನು. ಇದನ್ನು ನೀನು ವಿಶ್ವಾಸಿಸುತ್ತೀಯಾ?” ಎಂದು ಕೇಳಲು ಅವಳು,
27 : ಹೌದು ಪ್ರಭುವೇ, ನೀವೇ ಅಭಿಷಿಕ್ತರಾದ ಲೋಕೋದ್ಧಾರಕ; ದೇವರ ಪುತ್ರ; ಈ ಲೋಕಕ್ಕೆ ಬರಬೇಕಾದವರು - ಎಂದು ನಾನು ವಿಶ್ವಾಸಿಸುತ್ತೇನೆ,” ಎಂದು ಹೇಳಿದಳು. ಕಂಬನಿಗರೆದ ಯೇಸು
28 : ಹೀಗೆ ಹೇಳಿದ ಮೇಲೆ ಅವಳು ತನ್ನ ಸೋದರಿಯನ್ನು ಕರೆಯಲು ಹೋದಳು. ಅವಳನ್ನು ಕಂಡು, “ಬೋಧಕರು ಬಂದಿದ್ದಾರೆ; ನಿನ್ನನ್ನು ಕರೆಯುತ್ತಿದ್ದಾರೆ,” ಎಂದು ಹೇಳಿದಳು.
29 : ಇದನ್ನು ಕೇಳಿದ ಮರಿಯಳು ತಟ್ಟನೆ ಎದ್ದು ಯೇಸುವನ್ನು ಕಾಣಹೋದಳು.
30 : ಯೇಸು ಇನ್ನೂ ಊರೊಳಗೆ ಬಂದಿರಲಿಲ್ಲ; ಮಾರ್ತ ತಮ್ಮನ್ನು ಎದುರುಗೊಂಡ ಸ್ಥಳದಲ್ಲಿಯೇ ಇದ್ದರು.
31 : ಇತ್ತ ಮನೆಯಲ್ಲಿ ಮರಿಯಳನ್ನು ಸಂತೈಸಿಕೊಂಡಿದ್ದ ಯೆಹೂದ್ಯರು, ಆಕೆ ಅವಸರವಸರವಾಗಿ ಎದ್ದುಹೋಗುವುದನ್ನು ಕಂಡು ಗೋಳಿಡುವುದಕ್ಕಾಗಿಯೇ ಸಮಾಧಿಯ ಕಡೆಗೆ ಹೋಗುತ್ತಿದ್ದಾಳೆಂದು ಎಣಿಸಿ ಆಕೆಯ ಹಿಂದೆಯೇ ಹೋದರು.
32 : ಮರಿಯಳು ಯೇಸುವಿನ ಬಳಿಗೆ ಬಂದಕೂಡಲೇ ಅವರ ಕಾಲಿಗೆ ಬಿದ್ದು, “ಪ್ರಭುವೇ, ನೀವು ಇಲ್ಲಿದ್ದಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ,” ಎಂದಳು.
33 : ಆಕೆಯ ಮತ್ತು ಆಕೆಯೊಡನೆ ಬಂದಿದ್ದ ಯೆಹೂದ್ಯರ ಗೋಳಾಟವನ್ನು ಯೇಸು ನೋಡಿದರು. ಅವರ ಮನ ಕರಗಿತು; ದುಃಖ ತುಂಬಿ ಬಂದಿತು.
34 : ಯೇಸು ಅವರಿಗೆ, “ಆತನನ್ನು ಎಲ್ಲಿ ಸಮಾಧಿಮಾಡಿದ್ದೀರಿ?” ಎಂದು ಕೇಳಿದರು. ಅವರು, “ಬಂದು ನೋಡಿ ಸ್ವಾವಿೂ,” ಎಂದರು.
35 : ಯೇಸು ಕಣ್ಣೀರಿಟ್ಟರು.
36 : ಇದನ್ನು ಕಂಡ ಯೆಹೂದ್ಯರು, “ಅವನ ಮೇಲೆ ಈತನಿಗೆಷ್ಟು ಪ್ರೀತಿಯಿತ್ತು, ನೋಡಿದಿರಾ!” ಎಂದುಕೊಂಡರು.
37 : ಕೆಲವರಾದರೋ, “ಆ ಕುರುಡನಿಗೆ ಕಣ್ಣುಕೊಟ್ಟ ಈತ ಲಾಸರನು ಸಾಯದಂತೆ ಮಡಬಾರದಿತ್ತೆ?” ಎಂದರು. ಲಾಸರನ ಪುನರುಜ್ಜೀವನ
38 : ಯೇಸುಸ್ವಾಮಿ ಮತ್ತೊಮ್ಮೆ ಮನಮರುಗಿ ಸಮಾಧಿಯ ಬಳಿಗೆ ಬಂದರು. ಅದು ಒಂದು ಗವಿಯಾಗಿತ್ತು; ಅದರ ಬಾಯಿಗೆ ಒಂದು ಕಲ್ಲನ್ನು ಮುಚ್ಚಲಾಗಿತ್ತು.
39 : ಯೇಸು, “ಆ ಕಲ್ಲನ್ನು ತೆಗೆಯಿರಿ,” ಎಂದು ಆಜ್ಞಾಪಿಸಿದರು. ಮೃತನ ಸಹೋದರಿಯಾದ ಮಾರ್ತಳು, “ಪ್ರಭುವೇ, ಅವನು ಸತ್ತು ನಾಲ್ಕು ದಿನಗಳಾದವು; ಈಗಾಗಲೇ ಅವನ ದೇಹ ಕೊಳೆತು ನಾರುತ್ತಿರಬೇಕು,” ಎಂದಳು.
40 : “ನಿನಗೆ ವಿಶ್ವಾಸವಿದ್ದಲ್ಲಿ ದೇವರ ಮಹಿಮೆಯನ್ನು ಕಾಣುವೆ ಎಂದು ನಾನು ಹೇಳಲಿಲ್ಲವೆ?” ಎಂದು ಮರುನುಡಿದರು ಯೇಸು.
41 : ಆಗ ಕಲ್ಲನ್ನು ತೆಗೆದುಹಾಕಲಾಯಿತು. ಯೇಸು ಕಣ್ಣೆತ್ತಿ ಮೇಲಕ್ಕೆ ನೋಡಿ, “ಪಿತನೇ, ನನ್ನ ಪ್ರಾರ್ಥನೆಗೆ ನೀವು ಕಿವಿಗೊಡುತ್ತೀರಿ; ಆದುದರಿಂದ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
42 : ನನ್ನ ಪ್ರಾರ್ಥನೆಗೆ ನೀವು ಯಾವಾಗಲೂ ಕಿವಿಗೊಡುತ್ತೀರಿ ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ಆದರೆ ನನ್ನನ್ನು ಕಳುಹಿಸಿದಾತ ನೀವೇ ಎಂದು ಸುತ್ತಲೂ ನೆರೆದಿರುವವರು ನಂಬುವಂತೆ ನಾನು ಹೀಗೆ ಹೇಳಿದೆನು,” ಎಂದು ನುಡಿದರು.
43 : ಅನಂತರ ಗಟ್ಟಿಯಾದ ಧ್ವನಿಯಿಂದ, “ಲಾಸರನೇ, ಹೊರಗೆ ಬಾ,” ಎಂದು ಕೂಗಿದರು.
44 : ಸತ್ತಿದ್ದವನು ಕೂಡಲೇ ಹೊರಗೆ ಬಂದನು. ಅವನ ಕೈಕಾಲುಗಳು ಶವವಸ್ತ್ರದಿಂದ ಸುತ್ತಿದ್ದವು; ಮುಖವು ಬಟ್ಟೆಯಿಂದ ಮುಚ್ಚಿತ್ತು. ಆಗ ಯೇಸು, “ಕಟ್ಟುಗಳನ್ನು ಬಿಚ್ಚಿ ಅವನನ್ನು ಹೋಗಲು ಬಿಡಿ,” ಎಂದು ಅಲ್ಲಿದ್ದವರಿಗೆ ಹೇಳಿದರು. ಯೇಸುವಿನ ವಿರುದ್ಧ ಹಂಚಿಕೆ
45 : ಮರಿಯಳನ್ನು ನೋಡಲು ಬಂದಿದ್ದ ಹಲವು ಮಂದಿ ಯೆಹೂದ್ಯರು ನಡೆದ ಸಂಗತಿಯನ್ನು ನೋಡಿ ಯೇಸುವನ್ನು ವಿಶ್ವಾಸಿಸಿದರು.
46 : ಕೆಲವರಾದರೋ ಫರಿಸಾಯರ ಬಳಿಗೆ ಹೋಗಿ ಯೇಸು ಮಾಡಿದ್ದೆಲ್ಲವನ್ನೂ ತಿಳಿಸಿದರು.
47 : ಮುಖ್ಯ ಯಾಜಕರೂ ಫರಿಸಾಯರೂ ‘ನ್ಯಾಯಸಭೆ’ಯನ್ನು ಕರೆದರು. “ಈಗ ನಾವೇನು ಮಾಡೋಣ? ಈ ಮನುಷ್ಯನು ಎಷ್ಟೋ ಸೂಚಕಕಾರ್ಯಗಳನ್ನು ಮಾಡುತ್ತಾನಲ್ಲಾ;
48 : ಇವನನ್ನು ಹೀಗೆಯೇ ಬಿಟ್ಟರೆ ಜನರೆಲ್ಲರೂ ಇವನನ್ನೇ ನಂಬುವರು. ರೋಮನರು ಬಂದು ನಮ್ಮ ಪವಿತ್ರ ದೇವಾಲಯವನ್ನೂ ರಾಷ್ಟ್ರವನ್ನೂ ನೆಲಸಮ ಮಾಡುವರು,” ಎಂದು ವಾದಿಸಿದರು.
49 : ಆ ವರ್ಷ ಪ್ರಧಾನ ಯಾಜಕನಾಗಿದ್ದ ಕಾಯಫನು,
50 : “ಇಡೀ ರಾಷ್ಟ್ರವೇ ನಿರ್ನಾಮವಾಗುವುದಕ್ಕಿಂತ ಜನತೆಗೋಸ್ಕರ ಒಬ್ಬನು ಸಾಯುವುದೇ ವಿಹಿತವೆಂದು ನಿಮಗೆ ಅರ್ಥವಾಗುತ್ತಿಲ್ಲವಲ್ಲಾ,” ಎಂದು ನುಡಿದನು.
51 : ಇದನ್ನು ಅವನು ತಾನಾಗಿಯೇ ಹೇಳಲಿಲ್ಲ. ಆ ವರ್ಷ ಆತನು ಪ್ರಧಾನ ಯಾಜಕನಾಗಿದ್ದ ಕಾರಣ, ಯೇಸು ಜನತೆಗಾಗಿ ಪ್ರಾಣತ್ಯಾಗ ಮಾಡಲಿದ್ದಾರೆ ಎಂದು ಹೀಗೆ ಪ್ರವಾದಿಸಿದನು.
52 : ಆ ಜನತೆಗಾಗಿ ಮಾತ್ರವಲ್ಲ, ಚದರಿಹೋಗಿದ್ದ ದೇವಜನರನ್ನು ಒಂದುಗೂಡಿಸುವ ಸಲುವಾಗಿಯೂ ಪ್ರಾಣತ್ಯಾಗ ಮಾಡಲಿದ್ದಾರೆಂಬುದು ಆ ಮಾತಿನ ಇಂಗಿತ.
53 : ಅಂದಿನಿಂದಲೇ ಯೆಹೂದ್ಯ ಅಧಿಕಾರಿಗಳು ಯೇಸುವನ್ನು ಕೊಲ್ಲಬೇಕೆಂದು ನಿರ್ಧಾರ ಮಾಡಿಕೊಂಡರು.
54 : ಎಂದೇ ಯೇಸು ಜುದೇಯದಲ್ಲಿ ಬಹಿರಂಗವಾಗಿ ಓಡಾಡುವುದನ್ನು ಕೈಬಿಟ್ಟರು. ಬೆಂಗಾಡಿನ ಪಕ್ಕದಲ್ಲಿದ್ದ ಪ್ರದೇಶಕ್ಕೆ ತೆರಳಿ ಎಫ್ರಯಿಮ್ ಎಂಬ ಗ್ರಾಮದಲ್ಲಿ ತಮ್ಮ ಶಿಷ್ಯರ ಸಂಗಡ ತಂಗಿದರು.
55 : ಆಗ ಯೆಹೂದ್ಯರ ಪಾಸ್ಕಹಬ್ಬವು ಸಮೀಪಿಸಿತ್ತು. ಹಬ್ಬಕ್ಕೆ ಮುಂಚೆ ನಡೆಯುವ ಶುದ್ದೀಕರಣಕ್ಕಾಗಿ ಹಲವರು ಜೆರುಸಲೇಮಿಗೆ ಗ್ರಾಮಾಂತರ ಪ್ರದೇಶಗಳಿಂದ ಮೊದಲೇ ಬಂದಿದ್ದರು.
56 : ಯೇಸುವನ್ನು ನೋಡಬೇಕೆಂಬ ಆಶೆ ಅವರಿಗಿತ್ತು. “ಆತ ಹಬ್ಬಕ್ಕೆ ಬರುತ್ತಾನೋ ಇಲ್ಲವೋ ನಿಮ್ಮ ಎಣಿಕೆ ಏನು?” ಎಂದು ಮಹಾದೇವಾಲಯದಲ್ಲಿ ತಮ್ಮತಮ್ಮೊಳಗೆ ವಿಚಾರಿಸಿಕೊಳ್ಳುತ್ತಿದ್ದರು.
57 : ಯೇಸುವನ್ನು ಬಂಧಿಸುವ ಉದ್ದೇಶದಿಂದ ಮುಖ್ಯಯಾಜಕರೂ ಫರಿಸಾಯರೂ ಆತನ ಸುಳಿವು ಯಾರಿಗಾದರೂ ಸಿಕ್ಕಿದ್ದೇ ಆದರೆ ತಮಗೆ ತಿಳಿಸಬೇಕೆಂದು ಆಜ್ಞೆ ಹೊರಡಿಸಿದ್ದರು.

· © 2017 kannadacatholicbible.org Privacy Policy