1 : “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಕುರಿಹಟ್ಟಿಗೆ ಬಾಗಿಲ ಮೂಲಕ ಬರದೆ ಗೋಡೆ ಹತ್ತಿ ಬರುವವನು ಕಳ್ಳ ಹಾಗೂ ಕೊಳ್ಳೆಗಾರ.
2 : ಬಾಗಿಲ ಮೂಲಕ ಬರುವವನು ಕುರಿಗಾಹಿ.
3 : ಕಾವಲುಗಾರನು ಅವನಿಗೆ ಬಾಗಿಲು ತೆರೆಯುತ್ತಾನೆ. ಕುರಿಗಳು ಅವನ ಸ್ವರವನ್ನು ಕೇಳುತ್ತವೆ. ಅವನು ತನ್ನ ಕುರಿಗಳನ್ನು ಹೆಸರಿಟ್ಟು ಕರೆದು ಹೊರಗೆ ಬಿಡುತ್ತಾನೆ.
4 : ತನ್ನ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ನಂತರ ಅವನು ಅವುಗಳ ಮುಂದೆ ಹೋಗುತ್ತಾನೆ. ಕುರಿಗಳು ಅವನ ಹಿಂದೆ ಹೋಗುತ್ತವೆ. ಏಕೆಂದರೆ ಅವುಗಳಿಗೆ ಅವನ ಸ್ವರ ಗೊತ್ತು.
5 : ಅಪರಿಚಿತನನ್ನು ಅವು ಹಿಂಬಾಲಿಸುವುದಿಲ್ಲ; ಅವನಿಂದ ದೂರ ಓಡಿಹೋಗುತ್ತವೆ. ಅಪರಿಚಿತರ ಸ್ವರವನ್ನು ಅವು ಗುರುತಿಸುವುದಿಲ್ಲ.”
6 : ಯೇಸುಸ್ವಾಮಿ ಹೇಳಿದ ಈ ಸಾಮತಿಯನ್ನು ಕೇಳಿದವರು ಅರ್ಥಮಾಡಿಕೊಳ್ಳಲಿಲ್ಲ.
7 : ಆದುದರಿಂದ ಯೇಸುಸ್ವಾಮಿ, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಕುರಿಗಳಿಗೆ ನಾನೇ ಬಾಗಿಲು.
8 : ನನಗಿಂತ ಮೊದಲು ಬಂದವರೆಲ್ಲರು ಕಳ್ಳರು ಹಾಗೂ ಕೊಳ್ಳೆಗಾರರು, ಕುರಿಗಳು ಅವರಿಗೆ ಕಿವಿಗೊಡಲಿಲ್ಲ.
9 : ಹೌದು, ನಾನೇ ಬಾಗಿಲು, ನನ್ನ ಮೂಲಕ ಒಳಹೋಗುವವನು ಸುರಕ್ಷಿತನಾಗಿರುತ್ತಾನೆ. ಅವನು ಒಳಗೆ ಹೋಗುತ್ತಾನೆ, ಹೊರಗೆ ಬರುತ್ತಾನೆ; ಮೇವನ್ನು ಕಂಡುಕೊಳ್ಳುತ್ತಾನೆ.
10 : ಕಳ್ಳನು ಬರುವುದು ಕಳ್ಳತನಕ್ಕಾಗಿ, ಕೊಲ್ಲುವುದಕ್ಕಾಗಿ ಮತ್ತು ನಾಶಮಾಡುವುದಕ್ಕಾಗಿ ಮಾತ್ರ, ನಾನು ಬಂದದ್ದಾದರೋ ಜೀವನೀಡಲು, ಯಥೇಚ್ಛವಾಗಿ ನೀಡಲು.
11 : “ನಾನೇ ಉತ್ತಮ ಕುರಿಗಾಹಿ. ಉತ್ತಮ ಕುರಿಗಾಹಿಯು ಕುರಿಗಳಿಗೋಸ್ಕರ ತನ್ನ ಪ್ರಾಣವನ್ನೇ ಕೊಡುತ್ತಾನೆ.
12 : ಕುರಿಗಾಹಿಯಾಗಲಿ, ಕುರಿಗಳ ಒಡೆಯನಾಗಲಿ ಅಲ್ಲದ ಕೂಲಿಯಾಳು, ತೋಳ ಬರುವುದನ್ನು ಕಂಡದ್ದೇ, ಕುರಿಗಳನ್ನು ಬಿಟ್ಟು ಓಡಿಹೋಗುತ್ತಾನೆ. ತೋಳವು ಬಂದು ಕುರಿಗಳ ಮೇಲೆ ಎರಗಿ, ಮಂದೆಯನ್ನು ಚದರಿಸುತ್ತದೆ.
13 : ಅವನು ಕೇವಲ ಕೂಲಿಯಾಳು; ಕುರಿಗಳ ಚಿಂತೆ ಅವನಿಗಿಲ್ಲ.
14 : ನಾನಾದರೋ ಉತ್ತಮ ಕುರಿಗಾಹಿ. ಪಿತನು ನನ್ನನ್ನು ಬಲ್ಲರು; ನಾನೂ ಪಿತನನ್ನು ಬಲ್ಲೆ.
15 : ಅಂತೆಯೇ ನಾನು ನನ್ನ ಕುರಿಗಳನ್ನು ಬಲ್ಲೆನು; ಅವು ನನ್ನನ್ನು ಬಲ್ಲವು. ಅವುಗಳಿಗೋಸ್ಕರ ನಾನು ನನ್ನ ಪ್ರಾಣವನ್ನೇ ಕೊಡುತ್ತೇನೆ.
16 : ಈ ಮಂದೆಗೆ ಸೇರದ ಬೇರೆ ಕುರಿಗಳೂ ನನಗಿವೆ. ಅವನ್ನೂ ನಾನು ಕರೆತರಬೇಕು. ಅವು ಸಹ ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಆಗ ಒಂದೇ ಕುರಿಹಿಂಡು ಆಗುವುದು. ಒಬ್ಬನೇ ಕುರಿಗಾಹಿ ಇರುವನು.
17 : “ಏಕೆಂದರೆ, ನನ್ನ ಪಿತನಿಗೆ ನನ್ನಲ್ಲಿ ಪ್ರೀತಿ ಇದೆ. ನನ್ನ ಪ್ರಾಣವನ್ನು ಮರಳಿ ಪಡೆಯುವಂತೆ ನಾನದನ್ನು ಧಾರೆಯೆರೆಯುತ್ತೇನೆ.
18 : ನನ್ನ ಪ್ರಾಣವನ್ನು ಯಾರೂ ನನ್ನಿಂದ ಕಸಿದುಕೊಳ್ಳಲಾರರು; ನಾನಾಗಿಯೇ ಅದನ್ನು ಧಾರೆಯೆರೆಯುತ್ತೇನೆ. ಅದನ್ನು ಧಾರೆಯೆರೆಯುವ ಹಕ್ಕು ನನಗಿದೆ. ಅದನ್ನು ಪುನಃ ಪಡೆಯುವ ಹಕ್ಕು ಸಹ ನನಗಿದೆ. ಈ ಆಜ್ಞೆಯನ್ನು ನಾನು ನನ್ನ ಪಿತನಿಂದ ಪಡೆದಿದ್ದೇನೆ,” ಎಂದು ನುಡಿದರು.
19 : ಈ ಮಾತುಗಳನ್ನು ಕೇಳಿದ ಯೆಹೂದ್ಯರಲ್ಲಿ ಮತ್ತೆ ವಾದವೆದ್ದಿತು.
20 : ಅವರಲ್ಲಿ ಹಲವರು, “ಅವನಿಗೆ ದೆವ್ವಹಿಡಿದಿದೆ; ಅವನೊಬ್ಬ ಹುಚ್ಚ, ಅವನಿಗೇಕೆ ಕಿವಿಗೊಡುತ್ತೀರಿ?” ಎಂದರು
21 : ಉಳಿದವರಾದರೋ, “ಇವು ದೆವ್ವಹಿಡಿದವನ ಮಾತುಗಳೆಂದಿಗೂ ಅಲ್ಲ. ದೆವ್ವವು ಕುರುಡನಿಗೆ ಕಣ್ಣು ಕೊಡುವುದುಂಟೆ?” ಎಂದರು.
ಪರಿತ್ಯಕ್ತರಾದ ಯೇಸು
22 : ಅಂದು ಚಳಿಗಾಲವಾಗಿತ್ತು. ಜೆರುಸಲೇಮಿನಲ್ಲಿ ಮಹಾದೇವಾಲಯದ ಪ್ರತಿಷ್ಠಾಪನೆಯ ಹಬ್ಬಾಚರಣೆ ನಡೆಯುತ್ತಿತ್ತು.
23 : ಯೇಸುಸ್ವಾಮಿ ಆ ದೇವಾಲಯದ ಆವರಣದಲ್ಲಿದ್ದ ಸೊಲೋಮೋನನ ಮಂಟಪದಲ್ಲಿ ತಿರುಗಾಡುತ್ತಿದ್ದರು.
24 : ಯೆಹೂದ್ಯರು, ಅವರನ್ನು ಸುತ್ತುವರಿದು, “ಇನ್ನೆಷ್ಟು ಕಾಲ ನಮ್ಮನ್ನು ಸಂಶಯದಲ್ಲಿರಿಸುವೆ? ನೀನೇ ಅಭಿಷಿಕ್ತನಾದ ಲೋಕೋದ್ಧಾರಕ ಆಗಿದ್ದರೆ ನಮಗೆ ಸ್ಪಷ್ಟವಾಗಿ ಹೇಳು,” ಎಂದರು.
25 : ಯೇಸು ಪ್ರತ್ಯುತ್ತರವಾಗಿ, “ನಾನು ನಿಮಗೆ ಹೇಳಿಯಾಯಿತು. ಆದರೂ ನೀವು ನಂಬುತ್ತಿಲ್ಲ. ನನ್ನ ಪಿತನ ಹೆಸರಿನಲ್ಲಿ ನಾನು ಮಾಡುವ ಕಾರ್ಯಗಳೇ ನನ್ನ ಪರವಾಗಿ ಸಾಕ್ಷಿಕೊಡುತ್ತವೆ.
26 : ಆದರೂ ನಿಮಗೆ ನಂಬಿಕೆಯೆಂಬುದಿಲ್ಲ. ಕಾರಣ, ನೀವು ನನ್ನ ಕುರಿಗಳಲ್ಲ.
27 : ನನ್ನ ಕುರಿಗಳಾದರೋ ನನ್ನ ಸ್ವರವನ್ನು ಗುರುತಿಸುತ್ತವೆ. ನಾನು ಅವನ್ನು ಬಲ್ಲೆನು. ಅವು ನನ್ನನ್ನು ಹಿಂಬಾಲಿಸುತ್ತವೆ.
28 : ನಾನು ಅವುಗಳಿಗೆ ನಿತ್ಯ ಜೀವವನ್ನು ಕೊಡುತ್ತೇನೆ. ಅವು ಎಂದಿಗೂ ನಾಶ ಆಗುವುದಿಲ್ಲ. ನನ್ನ ಕೈಯಿಂದ ಅವನ್ನು ಯಾರೂ ಕಸಿದುಕೊಳ್ಳಲಾರರು,
29 : ಅವನ್ನು ನನಗೆ ಕೊಟ್ಟ ಪಿತ ಸರ್ವಶ್ರೇಷ್ಠರು. ಪಿತನ ಕೈಯಿಂದ ಅವನ್ನು ಯಾರೂ ಕಸಿದುಕೊಳ್ಳಲಾರರು.
30 : ನಾನೂ ಪಿತನೂ ಒಂದೇ ಆಗಿದ್ದೇವೆ,” ಎಂದರು.
31 : ಆಗ ಯೆಹೂದ್ಯರು, ಅವರತ್ತ ಬೀರಲು ಕಲ್ಲುಗಳನ್ನು ಆಯ್ದುಕೊಂಡರು.
32 : ಅದಕ್ಕೆ ಯೇಸು, “ಪಿತನ ಹೆಸರಿನಲ್ಲಿ ನಾನು ಎಷ್ಟೋ ಸತ್ಕಾರ್ಯಗಳನ್ನು ನಿಮ್ಮ ಮುಂದೆ ಮಾಡಿದ್ದೇನೆ. ಇವುಗಳಲ್ಲಿ ಯಾವುದಕ್ಕಾಗಿ ನನ್ನ ಮೇಲೆ ಕಲ್ಲೆಸೆಯಬೇಕೆಂದಿದ್ದೀರಿ?” ಎಂದರು.
33 : ಅದಕ್ಕೆ ಯೆಹೂದ್ಯರು, “ನಿನ್ನ ಮೇಲೆ ಕಲ್ಲೆಸೆಯುವುದು ಸತ್ಕಾರ್ಯಕ್ಕಾಗಿ ಅಲ್ಲ, ದೇವದೂಷಣೆಗಾಗಿ. ನೀನು ಮನುಷ್ಯ ಮಾತ್ರನು; ಆದರೂ ನಿನ್ನನ್ನೇ ದೇವರನ್ನಾಗಿ ಮಾಡಿಕೊಳ್ಳುತ್ತಿದೀಯೇ,” ಎಂದು ಉತ್ತರಕೊಟ್ಟರು.
34 : ಆಗ ಯೇಸು, “ ‘ನೀವು ದೇವರುಗಳು’ ಎಂದು ದೇವರೇ ಹೇಳಿರುವ ಮಾತು ನಿಮ್ಮ ಧರ್ಮಶಾಸ್ತ್ರದಲ್ಲಿ ಬರೆದಿದೆಯಲ್ಲವೆ?
35 : ದೇವರ ವಾಕ್ಯವನ್ನು ಪಡೆದವರು ದೇವರುಗಳೇ ಎಂದು ಕರೆಯಲಾಗಿದೆ. ಹೀಗೆ ಪವಿತ್ರಗ್ರಂಥದಲ್ಲೇ ಲಿಖಿತವಾಗಿರುವುದು ನಿರರ್ಥಕವೇನೂ ಅಲ್ಲ.
36 : ಇಂತಿರುವಲ್ಲಿ, ಪಿತನೇ ಪ್ರತಿಷ್ಠಿಸಿ ಕಳುಹಿಸಿಕೊಟ್ಟವನಾದ ನಾನು, ‘ದೇವರ ಪುತ್ರನಾಗಿದ್ದೇನೆ’ ಎಂದು ಹೇಳಿಕೊಂಡದ್ದಕ್ಕೆ, ‘ಇವನು ದೇವದೂಷಣೆ ಮಾಡಿದ್ದಾನೆ’ ಎನ್ನುತ್ತೀರಲ್ಲಾ?
37 : ನಾನು ನನ್ನ ಪಿತನ ಕಾರ್ಯಗಳನ್ನು ಮಾಡದಿದ್ದರೆ ನೀವು ನನ್ನನ್ನು ನಂಬಬೇಕಾಗಿಲ್ಲ.
38 : ನಾನು ಹಾಗೆ ಮಾಡಿದ್ದೇ ಆದರೆ, ನನ್ನನ್ನು ನಂಬದೆ ಹೋದರೂ ನನ್ನ ಕಾರ್ಯಗಳನ್ನಾದರೂ ನಂಬಿರಿ. ಆಗ ಪಿತನು ನನ್ನಲ್ಲಿಯೂ ನಾನು ಪಿತನಲ್ಲಿಯೂ ಇರುವುದು ನಿಮಗೆ ಅರಿವಾಗುವುದು ಹಾಗೂ ಮನದಟ್ಟಾಗುವುದು,” ಎಂದರು.
39 : ಮತ್ತೊಮ್ಮೆ ಯೇಸುವನ್ನು ಬಂಧಿಸಲು ಆ ಯೆಹೂದ್ಯರು ಪ್ರಯತ್ನಿಸಿದರು. ಆದರೆ ಯೇಸು ಅವರ ಕೈಯಿಂದ ತಪ್ಪಿಸಿಕೊಂಡರು.
40 : ಬಳಿಕ ಯೇಸುಸ್ವಾಮಿ ಜೋರ್ಡನ್ ನದಿಯನ್ನು ದಾಟಿ ಯೊವಾನ್ನನು ಮೊತ್ತ ಮೊದಲು ಸ್ನಾನದೀಕ್ಷೆಯನ್ನು ಕೊಡುತ್ತಿದ್ದ ಸ್ಥಳಕ್ಕೆ ಬಂದು ಅಲ್ಲಿ ತಂಗಿದರು.
41 : ಹಲವರು ಅವರ ಬಳಿಗೆ ಬರತೊಡಗಿದರು. ‘ಯೊವಾನ್ನನು ಒಂದು ಸೂಚಕಕಾರ್ಯವನ್ನೂ ಮಾಡಲಿಲ್ಲ; ಆದರೆ ಇವರ ವಿಷಯವಾಗಿ ಆತ ಹೇಳಿದ್ದೆಲ್ಲವೂ ನಿಜವಾಗಿದೆ’ ಎಂದು ಆ ಜನರು ಮಾತನಾಡಿಕೊಳ್ಳುತ್ತಿದ್ದರು.
42 : ಅಲ್ಲಿ ಹಲವರಿಗೆ ಯೇಸುವಿನಲ್ಲಿ ವಿಶ್ವಾಸ ಹುಟ್ಟಿತು.