1 : ತರುವಾಯ ಯೇಸುಸ್ವಾಮಿ ದೇವರ ಸಾಮ್ರಾಜ್ಯದ ಶುಭಸಂದೇಶವನ್ನು ಸಾರುತ್ತಾ ಪಟ್ಟಣಗಳಲ್ಲೂ ಹಳ್ಳಿಗಳಲ್ಲೂ ಸಂಚಾರ ಮಾಡಿದರು. ಹನ್ನೆರಡು ಮಂದಿ ಶಿಷ್ಯರೂ ಅವರೊಡನೆ ಇದ್ದರು.
2 : ದೆವ್ವಗಳ ಕಾಟದಿಂದಲೂ ರೋಗರುಜಿನಗಳಿಂದಲೂ ಬಿಡುಗಡೆ ಹೊಂದಿದ್ದ ಕೆಲವು ಮಹಿಳೆಯರು ಅವರ ಜೊತೆಯಲ್ಲಿದ್ದರು. ಅವರಾರೆಂದರೆ: ಏಳು ದೆವ್ವಗಳಿಂದ ವಿಮುಕ್ತಳಾಗಿದ್ದ ಮಗ್ದಲದ ಮರಿಯಳು,
3 : ಹೆರೋದನ ಅರಮನೆಯ ಮೇಲ್ವಿಚಾರಕನಾಗಿದ್ದ ಕೂಜನ ಪತ್ನಿ ಯೊವಾನ್ನಳು, ಅಲ್ಲದೆ ಸುಸಾನ್ನಳು, ಮತ್ತಿತರ ಅನೇಕರು. ಇವರು ತಮ್ಮ ಆಸ್ತಿಪಾಸ್ತಿಯನ್ನು ವೆಚ್ಚಮಾಡಿ ಯೇಸುವಿಗೂ ಅವರ ಶಿಷ್ಯರಿಗೂ ಉಪಚಾರಮಾಡುತ್ತಿದ್ದರು.
ಬಿತ್ತುವವನ ಸಾಮತಿ
(ಮತ್ತಾ. 13.1-9; ಮಾರ್ಕ 4.1-9)
4 : ಜನರು ಊರೂರುಗಳಿಂದ ಹೊರಟು ಯೇಸುಸ್ವಾಮಿಯ ಬಳಿಗೆ ಬಂದರು. ಜನ ಸಮೂಹವು ಹೆಚ್ಚುತ್ತಿದ್ದಂತೆ ಯೇಸು ಈ ಸಾಮತಿಯನ್ನು ಹೇಳಿದರು:
5 : ಒಬ್ಬ ರೈತನು ಬಿತ್ತುವುದಕ್ಕೆ ಹೋದನು. ಬಿತ್ತನೆ ಮಾಡುತ್ತಿದ್ದಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದವು. ಅವು ಕಾಲ್ತುಳಿತಕ್ಕೆ ಸಿಕ್ಕಿಹೋದವು. ಅವುಗಳನ್ನು ಆಕಾಶದ ಪಕ್ಷಿಗಳು ತಿಂದುಬಿಟ್ಟವು.
6 : ಮತ್ತೆ ಕೆಲವು ಬೀಜಗಳು ಕಲ್ಲುಭೂಮಿಯ ಮೇಲೆ ಬಿದ್ದವು. ಅವು ಮೊಳೆತಾಗಲೂ ತೇವವಿಲ್ಲದ ಕಾರಣ ಒಣಗಿ ಹೋದವು.
7 : ಇನ್ನೂ ಕೆಲವು ಮುಳ್ಳುಪೊದೆಗಳ ನಡುವೆ ಬಿದ್ದವು. ಮುಳ್ಳುಪೊದೆಗಳು ಅವುಗಳೊಡನೆ ಬೆಳೆದು ಸಸಿಗಳನ್ನು ಅದುಮಿಬಿಟ್ಟವು.
8 : ಇನ್ನೂ ಕೆಲವು ಬೀಜಗಳು ಹದವಾದ ಭೂಮಿಯಲ್ಲಿ ಬಿದ್ದವು. ಅವು ಬೆಳೆದು ನೂರ್ಮಡಿ ಫಸಲನ್ನು ಕೊಟ್ಟವು.” ಈ ಸಾಮತಿಯನ್ನು ಮುಗಿಸಿದ ಮೇಲೆ ಯೇಸು, “ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ,” ಎಂದು ಒತ್ತಿ ಹೇಳಿದರು.
9 : ಶಿಷ್ಯರು, ‘ಈ ಸಾಮತಿಯ ಅರ್ಥವೇನು?’ ಎಂದು ಕೇಳಿದಾಗ, ಯೇಸು ಇಂತೆಂದರು:
10 : “ದೇವರ ಸಾಮ್ರಾಜ್ಯದ ರಹಸ್ಯಗಳನ್ನು ಅರಿತುಕೊಳ್ಳುವ ಸದವಕಾಶವನ್ನು ನಿಮಗೆ ಕೊಡಲಾಗಿದೆ. ಬೇರೆಯವರಿಗಾದರೋ ಅವು ಸಾಮತಿಗಳ ರೂಪದಲ್ಲಿ ಮರೆಯಾಗಿವೆ. ಅವರು ಕಣ್ಣಾರೆ ನೋಡಿದರೂ ಕಾಣರು, ಕಿವಿಯಾರೆ ಕೇಳಿದರೂ ಗ್ರಹಿಸರು.”
11 : “ಸಾಮತಿಯ ಅರ್ಥ ಹೀಗಿದೆ: ಬೀಜ ಎಂದರೆ ದೇವರ ವಾಕ್ಯ.
12 : ಕಾಲ್ದಾರಿಯಲ್ಲಿ ಬಿದ್ದ ಬೀಜಗಳು ಎಂದರೆ ಆ ವಾಕ್ಯವನ್ನು ಕೇಳಿದವರು. ಆದರೆ ಅವರು ವಿಶ್ವಾಸಿಸಿ ಜೀವೋದ್ಧಾರವನ್ನು ಪಡೆಯದಂತೆ ಪಿಶಾಚಿ ಬಂದು ಆ ವಾಕ್ಯವನ್ನು ಅವರ ಹೃದಯದಿಂದ ಕೂಡಲೇ ತೆಗೆದುಬಿಡುತ್ತದೆ.
13 : ಕಲ್ಲು ಭೂಮಿಯ ಮೇಲೆ ಬಿದ್ದ ಬೀಜಗಳು ಎಂದರೆ ದೇವರ ವಾಕ್ಯವನ್ನು ಕೇಳಿ ಸಂತೋಷದಿಂದ ಸ್ವೀಕರಿಸಿದವರು; ಅದು ಅವರಲ್ಲಿ ಬೇರೂರದ ಕಾರಣ ಅವರು ಸ್ವಲ್ಪ ಕಾಲ ವಿಶ್ವಾಸಿಸುತ್ತಾರೆ; ಶೋಧನೆಯ ಸಮಯದಲ್ಲಿ ಅದನ್ನು ತೊರೆದುಬಿಡುತ್ತಾರೆ.
14 : ಮುಳ್ಳುಪೊದೆಗಳ ನಡುವೆ ಬಿದ್ದ ಬೀಜಗಳು ಎಂದರೆ ದೇವರ ವಾಕ್ಯವನ್ನು ಕೇಳಿದ ಇನ್ನಿತರರು. ಆದರೆ ಕಾಲ ಕ್ರಮೇಣ ಬಾಳಿನ ಬವಣೆಗಳು, ಐಶ್ವರ್ಯದ ವ್ಯಾಮೋಹಗಳು ಹಾಗೂ ಸುಖಭೋಗಗಳು ಇವರನ್ನು ಅದುಮಿ ಬಿಡುತ್ತವೆ; ಇವರ ಫಲ ಪಕ್ವವಾಗುವುದಿಲ್ಲ.
15 : ಹದವಾದ ಭೂಮಿಯ ಮೇಲೆ ಬಿದ್ದ ಬೀಜಗಳು ಎಂದರೆ ದೇವರ ವಾಕ್ಯವನ್ನು ಕೇಳಿ ಅದನ್ನು ಸದ್ಗುಣಶೀಲ ಹಾಗೂ ಸಾತ್ವಿಕವಾದ ಹೃದಯದಲ್ಲಿಟ್ಟು ಸಹನೆಯಿಂದ ಫಲ ತರುವವರು.”
ದೀಪದ ಸ್ಥಾನಮಾನ
(ಮತ್ತಾ. 4.21-25)
16 : “ದೀಪವನ್ನು ಹಚ್ಚಿ ಯಾರೂ ಅದನ್ನು ಪಾತ್ರೆಯಿಂದ ಮುಚ್ಚಿಡುವುದಿಲ್ಲ; ಮಂಚದ ಕೆಳಗೆ ಬಚ್ಚಿಡುವುದಿಲ್ಲ. ಮನೆಯೊಳಕ್ಕೆ ಬರುವವರಿಗೆ ಬೆಳಕು ಕಾಣಿಸುವಂತೆ ಅದನ್ನು ದೀಪಸ್ತಂಭದ ಮೇಲಿಡುತ್ತಾರೆ.
17 : ಬಟ್ಟಬಯಲಾಗದ ಮುಚ್ಚು ಮರೆಯಿಲ್ಲ; ಬೆಳಕಿಗೆ ಬಾರದ ಹಾಗೂ ರಟ್ಟಾಗದ ಗುಟ್ಟಿಲ್ಲ.
18 : “ಆದ್ದರಿಂದ ನೀವು ಕಿವಿಕೊಡುವಾಗ ಎಚ್ಚರಿಕೆಯಿಂದಿರಿ; ಏಕೆಂದರೆ, ಉಳ್ಳವನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ, ಇಲ್ಲದವನಿಂದ ತನಗಿದೆ ಎಂದುಕೊಳ್ಳುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ,” ಎಂದರು.
ಹೊಸ ಬಂಧುಬಳಗ
(ಮತ್ತಾ. 12.46-50; ಮಾರ್ಕ 3.31-35)
19 : ಯೇಸುಸ್ವಾಮಿಯ ತಾಯಿ ಹಾಗೂ ಸಹೋದರರು ಯೇಸು ಇದ್ದೆಡೆಗೆ ಬಂದರು. ಆದರೆ ಜನಸಂದಣಿಯ ನಿಮಿತ್ತ ಹತ್ತಿರಕ್ಕೆ ಬರಲಾಗಲಿಲ್ಲ.
20 : ಯೇಸುವಿಗೆ, “ನಿಮ್ಮ ತಾಯಿಯು ಮತ್ತು ಸಹೋದರರು ನಿಮ್ಮನ್ನು ಕಾಣಬೇಕೆಂದು ಹೊರಗೆ ನಿಂತಿದ್ದಾರೆ,” ಎಂದು ತಿಳಿಸಲಾಯಿತು.
21 : ಅದಕ್ಕೆ ಯೇಸು, “ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯುವವರೇ ನನಗೆ ತಾಯಿ ಮತ್ತು ಅಣ್ಣ ತಮ್ಮಂದಿರು,” ಎಂದರು.
ತುಫಾನಿಗೂ ತರಂಗಗಳಿಗೂ ಒಡೆಯ
(ಮತ್ತಾ. 8.23-27; ಮಾರ್ಕ 4.35-41)
22 : ಒಂದು ದಿನ ಯೇಸುಸ್ವಾಮಿ ತಮ್ಮ ಶಿಷ್ಯರ ಸಂಗಡ ದೋಣಿಯನ್ನು ಹತ್ತಿ, “ಸರೋವರದ ಆಚೆಯ ದಡಕ್ಕೆ ಹೋಗೋಣ,” ಎಂದರು. ಅಂತೆಯೇ ಎಲ್ಲರೂ ಹೊರಟರು.
23 : ದೋಣಿ ಸಾಗುತ್ತಿದ್ದಾಗ, ಯೇಸು ನಿದ್ರಾವಶರಾದರು. ಅಷ್ಟರಲ್ಲಿ ಸರೋವರದ ಮೇಲೆ ಬಿರುಗಾಳಿ ಎದ್ದಿತು. ದೋಣಿ ನೀರಿನಿಂದ ತುಂಬಿ ಅವರೆಲ್ಲರೂ ಅಪಾಯಕ್ಕೆ ಒಳಗಾದರು.
24 : ಶಿಷ್ಯರು ಬಂದು ಯೇಸುವನ್ನು ಎಬ್ಬಿಸಿ, “ಸ್ವಾವಿೂ, ಸ್ವಾವಿೂ, ನಾವು ಸಾಯುತ್ತಿದ್ದೇವೆ,” ಎಂದರು. ಯೇಸು ಎಚ್ಚೆತ್ತು ಬಿರುಗಾಳಿಯನ್ನೂ ಭೋರ್ಗರೆಯುತ್ತಿದ್ದ ಅಲೆಗಳನ್ನೂ ಗದರಿಸಿದರು. ಅವು ಸ್ತಬ್ಧವಾದವು. ವಾತಾವರಣ ಶಾಂತವಾಯಿತು.
25 : ಆಗ ಯೇಸು ಶಿಷ್ಯರಿಗೆ, “ಎಲ್ಲಿ ಹೋಯಿತು ನಿಮ್ಮ ವಿಶ್ವಾಸ?” ಎಂದು ಪ್ರಶ್ನಿಸಿದರು. ಶಿಷ್ಯರು ಭಯಭೀತರಾಗಿ, ‘ಗಾಳಿಗೂ ನೀರಿಗೂ ಆಜ್ಞೆಕೊಡುವ ಇವರು ಯಾರಿರಬಹುದು! ಅವು ಇವರು ಹೇಳಿದ ಹಾಗೆ ಕೇಳುತ್ತವೆಯಲ್ಲಾ!’ ಎಂದು ಸೋಜಿಗದಿಂದ ತಮ್ಮ ತಮ್ಮೊಳಗೇ ಮಾತನಾಡಿಕೊಂಡರು.
ದೆವ್ವಪೀಡಿತನಿಗೆ ಬಿಡುಗಡೆ
(ಮತ್ತಾ. 8.28-34; ಮಾರ್ಕ 5.1-20)
26 : ಯೇಸುಸ್ವಾಮಿ ಮತ್ತು ಶಿಷ್ಯರು ದೋಣಿಯಲ್ಲೇ ಮುಂದೆ ಸಾಗಿ ಗಲಿಲೇಯಕ್ಕೆ ಎದುರಾಗಿದ್ದ ಗೆರಸೇನರ ನಾಡಿಗೆ ಬಂದು ಸೇರಿದರು.
27 : ಯೇಸು ದಡದ ಮೇಲೆ ಕಾಲಿಟ್ಟದ್ದೇ ತಡ, ಆ ಊರಿನವನೊಬ್ಬನು ಬಂದು ಅವರನ್ನು ಎದುರುಗೊಂಡನು. ಅವನಿಗೆ ಪಿಶಾಚಿ ಹಿಡಿದಿತ್ತು. ಅವನು ಬಟ್ಟೆತೊಟ್ಟು ಬಹಳ ದಿನಗಳಾಗಿತ್ತು: ಮನೆ ಬಿಟ್ಟು ಸಮಾಧಿಗಳ ಗುಹೆಗಳಲ್ಲೇ ವಾಸಿಸುತ್ತಿದ್ದನು.
28 : ಯೇಸುವನ್ನು ಕಂಡೊಡನೆ ಗಟ್ಟಿಯಾಗಿ ಕೂಗುತ್ತಾ ಅವರ ಮುಂದೆ ಅಡ್ಡಬಿದ್ದು, “ಯೇಸುವೇ, ಪರಾತ್ಪರ ದೇವರ ಪುತ್ರರೇ, ನಿಮಗೇಕೆ ನನ್ನ ಗೊಡವೆ? ದಯವಿಟ್ಟು ನನ್ನನ್ನು ಪೀಡಿಸಬೇಡಿ” ಎಂದು ದನಿಯೆತ್ತಿ ಬೇಡಿಕೊಂಡನು.
29 : ಕಾರಣ - ಅವನನ್ನು ಬಿಟ್ಟು ತೊಲಗಬೇಕೆಂದು ಯೇಸು ದೆವ್ವಕ್ಕೆ ಆಗಲೆ ಕಟ್ಟಪ್ಪಣೆ ಮಾಡಿದ್ದರು. ಎಷ್ಟೋ ಸಾರಿ ಅದು ಅವನ ಮೇಲೆ ಬಂದಿತ್ತು. ಜನರು ಅವನನ್ನು ಸರಪಳಿ ಸಂಕೋಲೆಗಳಿಂದ ಬಂಧಿಸಿ ಕಾವಲಿನಲ್ಲಿ ಇಟ್ಟಿದ್ದರೂ ಅವುಗಳನ್ನು ಅವನು ಮುರಿದು ಹಾಕುತ್ತಿದ್ದನು; ದೆವ್ವ ಅವನನ್ನು ಬೆಂಗಾಡಿಗೆ ಅಟ್ಟುತ್ತಿತ್ತು.
30 : ಯೇಸು, “ನಿನ್ನ ಹೆಸರೇನು?” ಎಂದು ಕೇಳಲು, ಅವನು “ಗಣ”, ಎಂದು ಉತ್ತರ ಕೊಟ್ಟನು; ಏಕೆಂದರೆ, ಅನೇಕ ಪಿಶಾಚಿಗಳು ಅವನನ್ನು ಹೊಕ್ಕಿದ್ದವು.
31 : ಆ ಪಿಶಾಚಿಗಳು, “ಪಾತಾಳಕ್ಕೆ ಹೋಗಿಬೀಳಿರೆಂದು ನಮಗೆ ಆಜ್ಞೆಮಾಡಬೇಡಿ,” ಎಂದು ಯೇಸುವನ್ನು ಬೇಡಿಕೊಂಡವು.
32 : ಸವಿೂಪದಲ್ಲೇ, ಹಂದಿಗಳ ದೊಡ್ಡ ಹಿಂಡೊಂದು ಬೆಟ್ಟದ ತಪ್ಪಲಿನಲ್ಲಿ ಮೇಯುತ್ತಿತ್ತು. ಆ ಹಂದಿಗಳೊಳಗೆ ಸೇರಿಕೊಳ್ಳಲು ತಮಗೆ ಅಪ್ಪಣೆಯಾಗಬೇಕೆಂದು ಆ ಪಿಶಾಚಿಗಳು ಯೇಸುವನ್ನು ಬೇಡಿಕೊಂಡವು. ಅವರು ಹಾಗೇ ಅಪ್ಪಣೆಮಾಡಿದರು.
33 : ಕೂಡಲೆ ಪಿಶಾಚಿಗಳು ಆ ವ್ಯಕ್ತಿಯಿಂದ ಹೊರಬಂದು ಹಂದಿಗಳೊಳಗೆ ಹೊಕ್ಕವು. ಇದರ ಪರಿಣಾಮವಾಗಿ ಆ ಹಂದಿಗಳ ಹಿಂಡು ಬೆಟ್ಟದ ಕಡಿದಾದ ಬದಿಯಿಂದ ಧಾವಿಸಿ ಸರೋವರಕ್ಕೆ ಬಿದ್ದು ನೀರುಪಾಲಾಯಿತು.
34 : ಇದನ್ನು ನೋಡಿದೊಡನೆಯೇ, ಹಂದಿ ಮೇಯಿಸುತ್ತಿದ್ದವರು ಓಡಿ ಹೋಗಿ ನಡೆದ ಈ ಘಟನೆಯನ್ನು ಪಟ್ಟಣದಲ್ಲೂ ಹಳ್ಳಿಯಲ್ಲೂ ತಿಳಿಸಿದರು.
35 : ಅದನ್ನು ನೋಡಲು ಜನರು ಹೊರಟು ಯೇಸುವಿನ ಬಳಿಗೆ ಬಂದರು. ಪಿಶಾಚಿಗಳಿಂದ ಬಿಡುಗಡೆಯಾಗಿದ್ದ ಆ ವ್ಯಕ್ತಿ ಬಟ್ಟೆಯನ್ನು ತೊಟ್ಟುಕೊಂಡು, ಸ್ವಸ್ಥಬುದ್ಧಿಯುಳ್ಳವನಾಗಿ, ಯೇಸುವಿನ ಪಾದಗಳ ಬಳಿ ಕುಳಿತಿದ್ದನ್ನು ಅವರೆಲ್ಲರೂ ಕಂಡು ಗಾಬರಿಗೊಂಡರು.
36 : ಆಗ, ನಡೆದುದ್ದನ್ನು ಕಣ್ಣಾರೆ ಕಂಡವರು ಪಿಶಾಚಿಗಳಿಂದ ಪೀಡಿತನಾಗಿದ್ದವನು ಬಿಡುಗಡೆಯಾದ ಬಗೆಯನ್ನು ವಿವರಿಸಿದರು.
37 : ಬಹಳವಾಗಿ ದಿಗಿಲುಗೊಂಡಿದ್ದ ಗೆರಸೇನಿನ ಹಾಗೂ ಸುತ್ತಮುತ್ತಲಿನ ಜನರೆಲ್ಲರೂ ತಮ್ಮನ್ನು ಬಿಟ್ಟು ಹೋಗಬೇಕೆಂದು ಯೇಸುವನ್ನು ಕೇಳಿಕೊಂಡರು. ಯೇಸು ದೋಣಿ ಹತ್ತಿ ಹಿಂದುರಿಗಿದರು.
38 : ಪಿಶಾಚಿಗಳಿಂದ ಬಿಡುಗಡೆ ಆಗಿದ್ದ ಆ ವ್ಯಕ್ತಿಯಾದರೋ, “ನನ್ನನ್ನು ನಿಮ್ಮ ಜೊತೆಯಲ್ಲೇ ಕರೆದುಕೊಂಡು ಹೋಗಿ,” ಎಂದು ಬಿನ್ನವಿಸಿಕೊಂಡನು.
39 : ಆದರೆ ಯೇಸು, “ನಿನ್ನ ಮನೆಗೆ ಹಿಂದಿರುಗಿ ಹೋಗು, ದೇವರು ನಿನಗೆ ಎಂಥಾ ಉಪಕಾರ ಮಾಡಿದ್ದಾರೆಂಬುದನ್ನು ಪ್ರಕಟಿಸು,” ಎಂದು ಅವನನ್ನು ಬೀಳ್ಕೊಟ್ಟರು. ಅವನು ಹೋಗಿ, ಯೇಸು ತನಗೆ ಮಾಡಿದ ಮಹದುಪಕಾರವನ್ನು ಊರಿನಲ್ಲೆಲ್ಲಾ ಪ್ರಚಾರ ಮಾಡಿದನು.
ಯಾ¬ೂರನ ಮಗಳಿಗೆ ಜೀವದಾನ ರಕ್ತಸ್ರಾವದ ಸ್ತ್ರೀಗೆ ಆರೋಗ್ಯದಾನ
(ಮತ್ತಾ. 9.18-26; ಮಾರ್ಕ 5.21-43)
40 : ಯೇಸುಸ್ವಾಮಿ ಹಿಂದಿರುಗಿ ಬಂದುದೇ, ದಡದಲ್ಲಿ ಎದುರುನೋಡುತ್ತಿದ್ದ ಜನಸಮೂಹವು ಅವರನ್ನು ಸ್ವಾಗತಿಸಿತು.
41 : ಅಷ್ಟರಲ್ಲಿ ಪ್ರಾರ್ಥನಾ ಮಂದಿರದ ಅಧಿಕಾರಿ ಯಾಯಿರನೆಂಬವನು ಅಲ್ಲಿಗೆ ಬಂದು, ಯೇಸುವಿನ ಪಾದಕ್ಕೆರಗಿ, ತನ್ನ ಮನೆಗೆ ಬರಬೇಕೆಂದು ವಿನಂತಿಸಿದನು.
42 : ಕಾರಣ ಸುಮಾರು ಹನ್ನೆರಡು ವರ್ಷ ವಯಸ್ಸಿನ ಅವನ ಏಕೈಕ ಪುತ್ರಿ ಮರಣಾವಸ್ಥೆಯಲ್ಲಿದ್ದಳು. ಯೇಸು ಹೊರಟು ಬರುವಾಗ ಜನರ ಗುಂಪು ಅವರನ್ನು ಸುತ್ತಲೂ ಒತ್ತರಿಸುತ್ತಿತ್ತು.
42 : ಕಾರಣ ಸುಮಾರು ಹನ್ನೆರಡು ವರ್ಷ ವಯಸ್ಸಿನ ಅವನ ಏಕೈಕ ಪುತ್ರಿ ಮರಣಾವಸ್ಥೆಯಲ್ಲಿದ್ದಳು. ಯೇಸು ಹೊರಟು ಬರುವಾಗ ಜನರ ಗುಂಪು ಅವರನ್ನು ಸುತ್ತಲೂ ಒತ್ತರಿಸುತ್ತಿತ್ತು.
43 : ಹನ್ನೆರಡು ವರ್ಷಗಳಿಂದಲೂ ರಕ್ತಸ್ರಾವ ರೋಗದಿಂದ ನರಳುತ್ತಾ ಇದ್ದ ಮಹಿಳೆಯೊಬ್ಬಳು ಆ ಗುಂಪಿನಲ್ಲಿ ಇದ್ದಳು. ಆಕೆÉ ತನ್ನ ಆಸ್ತಿಪಾಸ್ತಿಯನ್ನೆಲ್ಲಾ ವೈದ್ಯರಿಗೆ ವೆಚ್ಚ ಮಾಡಿದ್ದರೂ ಆಕೆಯನ್ನು ಗುಣಪಡಿಸಲು ಯಾರಿಂದಲೂ ಸಾಧ್ಯವಾಗಿರಲಿಲ್ಲ.
44 : ಆಕೆ ಹಿಂಬದಿಯಿಂದ ಬಂದು ಯೇಸುಸ್ವಾಮಿಯ ಉಡುಪಿನ ಅಂಚನ್ನು ಮುಟ್ಟಿದಳು. ಆ ಕ್ಷಣವೇ ಅವಳ ರಕ್ತಸ್ರಾವವು ನಿಂತುಹೋಯಿತು.
45 : ಆಗ ಯೇಸು, “ನನ್ನನ್ನು ಮುಟ್ಟಿದವರು ಯಾರು?” ಎಂದು ಕೇಳಿದರು. ಯಾರೂ ಮುಟ್ಟಲಿಲ್ಲವೆಂದು ಎಲ್ಲರು ಹೇಳುತ್ತಿರಲು ಪೇತ್ರನು, “ಪ್ರಭೂ, ಇಷ್ಟೊಂದು ಜನರು ಮೇಲೆ ಮೇಲೆ ಬೀಳುತ್ತಾ ನಿಮ್ಮನ್ನು ಒತ್ತರಿಸುತ್ತಿದ್ದಾರಲ್ಲಾ,” ಎಂದನು.
46 : ಅದಕ್ಕೆ ಯೇಸು, “ಯಾರೋ ನನ್ನನ್ನು ಮುಟ್ಟಿದ್ದಾರೆ. ಗುಣಪಡಿಸುವ ಶಕ್ತಿ ನನ್ನಿಂದ ಹೊರಹೊಮ್ಮಿದೆ ಎಂದು ನನಗೆ ಗೊತ್ತು,” ಎಂದರು.
47 : ಆಗ ಆ ಮಹಿಳೆ ತಾನು ಮಾಡಿದ್ದನ್ನು ಇನ್ನು ಮುಚ್ಚಿಡಲು ಸಾಧ್ಯವಿಲ್ಲವೆಂದು ಅರಿತು, ನಡುಗುತ್ತಾ ಬಂದು, ಯೇಸುವಿಗೆ ಅಡ್ಡಬಿದ್ದಳು. ತಾನು ಮುಟ್ಟಿದ್ದಕ್ಕೆ ಕಾರಣವನ್ನೂ ತಾನು ತಕ್ಷಣ ಗುಣಹೊಂದಿದ್ದನ್ನೂ ಎಲ್ಲರ ಮುಂದೆ ಬಹಿರಂಗ ಪಡಿಸಿದಳು.
48 : ಯೇಸು ಆಕೆಗೆ, “ಮಗಳೇ, ನಿನ್ನ ವಿಶ್ವಾಸ ನಿನ್ನನ್ನು ಗುಣಪಡಿಸಿದೆ; ಸಮಾಧಾನದಿಂದ ಹೋಗು,” ಎಂದರು.
49 : ಯೇಸುಸ್ವಾಮಿ ಇನ್ನೂ ಮಾತನಾಡುತ್ತಾ ಇರುವಾಗಲೇ ಒಬ್ಬನು ಯಾಯಿರನ ಮನೆಯಿಂದ ಬಂದು, ಆ ಯಾಯಿರನಿಗೆ, “ನಿಮ್ಮ ಮಗಳು ತೀರಿಹೋದಳು. ಇನ್ನು ಗುರುವಿಗೆ ತೊಂದರೆ ಕೊಡಬೇಡಿ,” ಎಂದನು.
50 : ಇದನ್ನು ಕೇಳಿದ ಯೇಸು ಯಾಯಿರನಿಗೆ, “ಭಯಪಡಬೇಡ, ನಿನ್ನಲ್ಲಿ ವಿಶ್ವಾಸವೊಂದಿದ್ದರೆ ಸಾಕು, ನಿನ್ನ ಮಗಳು ಬದುಕುವಳು,” ಎಂದರು.
51 : ಯೇಸು ಅವನ ಮನೆಯನ್ನು ಸೇರಿದುದೇ, ಪೇತ್ರ, ಯೊವಾನ್ನ ಹಾಗೂ ಯಕೋಬ ಮತ್ತು ಆ ಬಾಲಕಿಯ ತಂದೆ ತಾಯಿ ಇವರ ಹೊರತು ಯಾರನ್ನೂ ತನ್ನೊಡನೆ ಒಳಕ್ಕೆ ಬರಗೊಡಲಿಲ್ಲ.
52 : ಇತ್ತ, ಸತ್ತ ಬಾಲಕಿಗಾಗಿ ಎಲ್ಲರೂ ಅತ್ತು ಗೋಳಾಡುತ್ತಾ ಇದ್ದರು. ಯೇಸುವಾದರೋ, “ಅಳಬೇಡಿ, ಅವಳು ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ,” ಎಂದರು.
53 : ಬಾಲಕಿ ಸತ್ತು ಹೋಗಿರುವುದನ್ನು ಅರಿತಿದ್ದ ಜನರು ಯೇಸುವನ್ನು ಪರಿಹಾಸ್ಯ ಮಾಡತೊಡಗಿದರು.
54 : ಯೇಸು ಅವಳ ಕೈ ಹಿಡಿದು, “ಮಗೂ, ಎದ್ದೇಳು,” ಎಂದು ಕೂಗಿ ಹೇಳಿದರು.
55 : ಬಾಲಕಿಗೆ ಜೀವ ಮರಳಿ ಬಂದಿತು. ತಕ್ಷಣವೇ ಅವಳು ಎದ್ದಳು. ತಿನ್ನಲು ಏನನ್ನಾದರೂ ಅವಳಿಗೆ ಕೊಡಬೇಕೆಂದು ಯೇಸು ಸೂಚಿಸಿದರು.
56 : ಬಾಲಕಿಯ ತಂದೆತಾಯಿಗಳು ಆಶ್ಚರ್ಯಚಕಿತರಾದರು. ಆಗ ಯೇಸು ನಡೆದ ವಿಷಯವನ್ನು ಯಾರಿಗೂ ತಿಳಿಸಬಾರದೆಂದು ಅವರಿಗೆ ಆಜ್ಞಾಪಿಸಿದರು.
ಪ್ರೇಷಿತರಿಗೆ ಕೊಟ್ಟ ಆದೇಶ