1 : ಅದು ತಿಬೇರಿಯಸ್ ಚಕ್ರವರ್ತಿಯ ಆಡಳಿತದ ಹದಿನೈದನೆಯ ವರ್ಷ. ಆ ಕಾಲದಲ್ಲಿ ಜುದೇಯ ಪ್ರಾಂತ್ಯಕ್ಕೆ ಪೊನ್ಸಿಯುಸ್ ಪಿಲಾತನು ರಾಜ್ಯಪಾಲನಾಗಿದ್ದನು. ಗಲಿಲೇಯ ಪ್ರಾಂತ್ಯಕ್ಕೆ ಹೆರೋದನೂ ಇತುರೆಯ ಮತ್ತು ತ್ರಕೋನಿತಿ ಪ್ರಾಂತ್ಯಗಳಿಗೆ ಇವನ ತಮ್ಮನಾದ ಫಿಲಿಪ್ಪನೂ ಮತ್ತು ಅಬಿಲೇನೆ ಪ್ರಾಂತ್ಯಕ್ಕೆ ಲುಸಾನಿಯನೂ ಸಾಮಂತರಾಗಿದ್ದರು.
2 : ಅನ್ನನು ಮತ್ತು ಕಾಯಿಫನು ಅಂದಿನ ಪ್ರಧಾನ ಯಾಜಕರು. ಆಗ ಬೆಂಗಾಡಿನಲ್ಲಿ ಜಕರೀಯನ ಮಗ ಯೊವಾನ್ನನಿಗೆ ದೇವರ ಸಂದೇಶದ ಬೋಧೆ ಆಯಿತು.
3 : ಆತನು ಜೋರ್ಡನ್ ನದಿಯ ಪರಿಸರ ಪ್ರಾಂತ್ಯದಲ್ಲೆಲ್ಲಾ ಸಂಚರಿಸುತ್ತಾ, “ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ ಮತ್ತು ಸ್ನಾನದೀಕ್ಷೆ ಪಡೆದುಕೊಳ್ಳಿರಿ; ದೇವರು ನಿಮ್ಮ ಪಾಪಗಳನ್ನು ಕ್ಷಮಿಸಿ ಬಿಡುವರು,” ಎಂದು ಸಾರಿ ಹೇಳುತ್ತಿದ್ದನು.
4 : ಈ ಬಗ್ಗೆ ಪ್ರವಾದಿ ಯೆಶಾಯನ ಗ್ರಂಥದಲ್ಲಿ ಮುಂಚಿತವಾಗಿಯೇ ಹೀಗೆಂದು ಬರೆದಿಡಲಾಗಿದೆ:
“ ‘ಪ್ರಭುವಿಗಾಗಿ ಮಾರ್ಗವನ್ನು ಸಿದ್ಧಪಡಿಸಿರಿ,
ಆತನ ಆಗಮನಕ್ಕಾಗಿ ಹಾದಿಯನ್ನು
ಸರಾಗ ಮಾಡಿರಿ’
ಎಂದು ಬೆಂಗಾಡಿನಲ್ಲಿ ಒಬ್ಬನು
ಘೋಷಿಸುತ್ತಿದ್ದಾನೆ.
5 : ಹಳ್ಳಕೊಳ್ಳಗಳೆಲ್ಲ ಭರ್ತಿಯಾಗಬೇಕು;
ಬೆಟ್ಟಗುಡ್ಡಗಳು ಮಟ್ಟವಾಗಬೇಕು;
ಅಂಕುಡೊಂಕಾದವು ನೆಟ್ಟಗಾಗಬೇಕು;
ತಗ್ಗುಮುಗ್ಗಾದ ಹಾದಿಗಳು ಹಸನಾಗಬೇಕು.
6 : ಆಗ ದೇವರು ದಯಪಾಲಿಸುವ
ಜೀವೋದ್ಧಾರವನ್ನು
ಮಾನವರೆಲ್ಲರು ಕಾಣುವರು.”
7 : ಯೊವಾನ್ನನ ಬಳಿಗೆ ಸ್ನಾನದೀಕ್ಷೆ ಪಡೆಯಲು ಜನರು ಗುಂಪುಗುಂಪಾಗಿ ಬರುತ್ತಿದ್ದರು. ಆತನು ಅವರಿಗೆ, “ಎಲೈ ವಿಷಸರ್ಪಗಳ ಪೀಳಿಗೆಯೇ, ಬರಲಿರುವ ದೈವಕೋಪದಿಂದ ತಪ್ಪಿಸಿಕೊಳ್ಳಬಹುದೆಂದು ನಿಮಗೆ ಎಚ್ಚರಿಕೆ ಕೊಟ್ಟವರಾರು?
8 : ಪಾಪಕ್ಕೆ ವಿಮುಖರಾಗಿದ್ದೀರಿ ಎಂಬುದನ್ನು ಸತ್ಕಾರ್ಯಗಳಿಂದ ವ್ಯಕ್ತಪಡಿಸಿರಿ. ‘ಅಬ್ರಹಾಮನೇ ನಮ್ಮ ಪಿತಾಮಹ,’ ಎಂದು ನಿಮ್ಮ ನಿಮ್ಮಲ್ಲೇ ಕೊಚ್ಚಿಕೊಳ್ಳಬೇಡಿ; ಈ ಕಲ್ಲುಗಳಿಂದಲೂ ದೇವರು ಅಬ್ರಹಾಮನಿಗೆ ಸಂತಾನ ಪ್ರಾಪ್ತಿಯಾಗುವಂತೆ ಮಾಡಬಲ್ಲರೆಂದು ನಾನು ನಿಮಗೆ ಹೇಳುತ್ತೇನೆ.
9 : ಈಗಾಗಲೇ ಮರದ ಬುಡಕ್ಕೆ ಕೊಡಲಿ ಬಿದ್ದಿದೆ; ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದೂ ಮರವನ್ನು ಕಡಿದು ಬೆಂಕಿಗೆ ಹಾಕಲಾಗುವುದು,” ಎಂದನು.
10 : ಆಗ ಜನಸಮೂಹವು, “ಹಾಗಾದರೆ ನಾವೇನು ಮಾಡಬೇಕು?” ಎಂದು ಕೇಳಲು,
11 : “ನಿಮಗೆ ಎರಡು ಅಂಗಿಗಳಿದ್ದರೆ, ಒಂದನ್ನು ಏನೂ ಇಲ್ಲದವನಿಗೆ ಕೊಡಿ; ಅಂತೆಯೇ ಆಹಾರ ಉಳ್ಳವನು ಇಲ್ಲದವನೊಂದಿಗೆ ಹಂಚಿಕೊಳ್ಳಲಿ,” ಎಂದು ಉತ್ತರಕೊಟ್ಟನು.
12 : ಅನಂತರ ಸುಂಕದವರು ಸಹ ಸ್ನಾನದೀಕ್ಷೆ ಪಡೆಯಲು ಬಂದು, “ಬೋಧಕರೇ, ನಾವೇನು ಮಾಡಬೇಕು?” ಎಂದು ಕೇಳಿದಾಗ,
13 : “ಗೊತ್ತು ಮಾಡಿರುವುದಕ್ಕಿಂತ ಹೆಚ್ಚಾಗಿ ಕಿತ್ತುಕೊಳ್ಳಬೇಡಿ,” ಎಂದನು.
14 : “ನಾವು ಮಾಡಬೇಕಾದುದೇನು?” ಎಂದು ಸಿಪಾಯಿಗಳು ಮುಂದೆ ಬಂದು ಪ್ರಶ್ನಿಸಿದಾಗ, “ಬಲಾತ್ಕಾರದಿಂದಾಗಲಿ, ಸುಳ್ಳು ಬೆದರಿಕೆಯಿಂದಾಗಲಿ, ಯಾರನ್ನೂ ಸುಲಿಗೆ ಮಾಡಬೇಡಿ; ನಿಮಗೆ ಬರುವ ಸಂಬಳದಿಂದ ತೃಪ್ತರಾಗಿರಿ,” ಎಂದು ಆತ ಉತ್ತರವಿತ್ತನು.
15 : “ಈ ಯೊವಾನ್ನನೇ ಎಲ್ಲರು ಎದುರು ನೋಡುತ್ತಾ ಇರುವ ಅಭಿಷಿಕ್ತನಾದ ಲೋಕೋದ್ಧಾರಕ ಆಗಿರಬಹುದೇ” ಎಂದು ಜನರು ತಮ್ಮ ಮನಸ್ಸಿನಲ್ಲೇ ಆಲೋಚಿಸುತ್ತಿದ್ದರು.
16 : ಅದಕ್ಕೆ ಉತ್ತರವಾಗಿ ಯೊವಾನ್ನನು, “ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆ ಕೊಡುತ್ತಿದ್ದೇನೆ. ಆದರೆ ನನಗಿಂತಲೂ ಶಕ್ತರೊಬ್ಬರು ಬರುತ್ತಾರೆ. ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಅರ್ಹನಲ್ಲ; ಅವರು ನಿಮಗೆ ಪವಿತ್ರಾತ್ಮ ಅವರಿಂದಲೂ ಅಗ್ನಿಯಿಂದಲೂ ದೀಕ್ಷಾಸ್ನಾನ ಕೊಡುವರು.
17 : ಅವರ ಕೈಯಲ್ಲಿ ಮೊರವಿದೆ. ತಮ್ಮ ಕಣದಲ್ಲಿಯ ರಾಶಿಯನ್ನು ತೂರಿ, ಗಟ್ಟಿಕಾಳನ್ನು ಮಾತ್ರ ಕಣಜಕ್ಕೆ ತುಂಬುವರು. ಹೊಟ್ಟನ್ನು ಆರಿಸಲಾಗದ ಬೆಂಕಿಯಲ್ಲಿ ಸುಟ್ಟು ಹಾಕುವರು,” ಎಂದು ನುಡಿದನು.
18 : ಹೀಗೆ ಯೊವಾನ್ನನು ನಾನಾ ವಿಧಗಳಲ್ಲಿ ಪ್ರಬೋಧಿಸುತ್ತಾ ಜನರಿಗೆ ಶುಭಸಂದೇಶವನ್ನು ಸಾರುತ್ತಾ ಇದ್ದನು.
19 : ಸಾಮಂತ ಹೆರೋದನು ಅನೇಕ ದುಷ್ಕøತ್ಯಗಳನ್ನು ಮಾಡಿದ್ದನು. ಅಲ್ಲದೆ ತನ್ನ ಸೋದರನ ಹೆಂಡತಿಯಾದ ಹೆರೋದಿಯಳನ್ನು ಇಟ್ಟುಕೊಂಡಿದ್ದನು. ಆದ್ದರಿಂದ ಯೊವಾನ್ನನು ಅವನನ್ನು ಖಂಡಿಸಿದ್ದನು.
20 : ಹೆರೋದನು ಯೊವಾನ್ನನನ್ನು ಕಾರಾಗೃಹದಲ್ಲಿ ಬಂಧಿಸಿ, ತನ್ನ ದುಷ್ಕøತ್ಯಗಳಿಗೆ ಮತ್ತೊಂದು ದುಷ್ಕøತ್ಯವನ್ನು ಕೂಡಿಸಿದ್ದನು.
ಯೇಸು ಪಡೆದ ದೀಕ್ಷಾಸ್ನಾನ
(ಮತ್ತಾ. 3.13-17; ಮಾರ್ಕ 1.9-11; ಯೊವಾ. 1.32-34)
21 : ಜನರೆಲ್ಲರು ಸ್ನಾನದೀಕ್ಷೆ ಪಡೆಯುತ್ತಾ ಇದ್ದರು. ಯೇಸುಸ್ವಾಮಿಯೂ ಬಂದು ಸ್ನಾನದೀಕ್ಷೆ ಪಡೆದು ಪ್ರಾರ್ಥಿಸುತ್ತಿರಲು ಆಕಾಶವು ತೆರೆಯಿತು.
22 : ಆಗ ಪವಿತ್ರಾತ್ಮ ಸಶರೀರವಾಗಿ ಒಂದು ಪಾರಿವಾಳದ ರೂಪದಲ್ಲಿ ಯೇಸುವಿನ ಮೇಲೆ ಇಳಿದರು. ಅಲ್ಲದೆ, “ನೀನೇ ನನ್ನ ಪುತ್ರ; ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು,” ಎಂಬ ದೈವವಾಣಿ ಕೇಳಿಸಿತು.
ಯೇಸುವಿನ ವಂಶಾವಳಿ
(ಮತ್ತಾ. 1.1-17)
23 : ಯೇಸುಸ್ವಾಮಿ ಬೋಧಿಸಲು ಪ್ರಾರಂಭಿಸಿದಾಗ ಅವರಿಗೆ ಸುಮಾರು ಮೂವತ್ತು ವರ್ಷ ವಯಸ್ಸು. ಯೇಸು ಜೋಸೆಫನ ಮಗನೆಂದು ಜನರು ಭಾವಿಸಿದ್ದರು. ಜೋಸೆಫನು ಹೇಲಿಯನಿಗೆ ಹುಟ್ಟಿದನು.
24 : ಹೇಲಿಯನು ಮತ್ತಾತನಿಗೆ, ಮತ್ತಾತನು ಲೇವಿಗೆ, ಲೇವಿ ಮೆಲ್ಕಿಯನಿಗೆ, ಮೆಲ್ಕಿಯನ್ನಾಯನಿಗೆ, ಯನ್ನಾಯ ಜೋಸೆಫನಿಗೆ ಹುಟ್ಟಿದರು.
25 : ಜೋಸೆಫ್ ಮತ್ತಥೀಯನಿಗೆ, ಮತ್ತಥೀಯ ಆಮೋಸನಿಗೆ, ಆಮೋಸನು ನಾಹೂಮನಿಗೆ, ನಾಹೂಮ ಎಸ್ಲಿಯನಿಗೆ, ಎಸ್ಲಿಯ ನಗ್ಗಾಯನಿಗೆ ಹುಟ್ಟಿದರು.
26 : ನಗ್ಗಾಯ ಮಹಾಥನಿಗೆ, ಮಹಾಥ ಮತ್ತಥೀಯನಿಗೆ, ಮತ್ತಥೀಯ ಶಿಮಿಯಾನಿಗೆ, ಶಿಮಿಯಾ ಯೊಸೇಖನಿಗೆ ಹುಟ್ಟಿದರು.
27 : ಯೊಸೇಖ ಯೋದನಿಗೆ, ಯೋದನು ಯೊವಾನ್ನನಿಗೆ, ಯೊವಾನ್ನನು ರೇಸನಿಗೆ, ರೇಸನು ಜೆರುಬಾಬೆಲನಿಗೆ, ಜೆರುಬಾಬೆಲ್ ಸಲಥಿಯೇಲನಿಗೆ, ಸಲಥಿಯೇಲನು ಸೇರಿಯನಿಗೆ ಹುಟ್ಟಿದರು.
28 : ಸೇರಿಯನು ಮೆಲ್ಕಿಯನಿಗೆ, ಮೆಲ್ಕಿಯನು ಅದ್ದಿಯನಿಗೆ, ಅದ್ದಿಯನು ಕೋಸಾಮನಿಗೆ, ಕೋಸಾಮ್ ಎಲ್ಮದಾಮನಿಗೆ, ಎಲ್ಮದಾಮ್ ಏರನಿಗೆ ಹುಟ್ಟಿದರು.
29 : ಏರ್ ಯೆಹೋಷುವನಿಗೆ, ಯೆಹೋಷುವ ಎಲಿಯೇಜರನಿಗೆ, ಎಲಿಯೇಜರ್ ಯೋರೈಮನಿಗೆ, ಯೋರೈಮ್ ಮತ್ತಾತನಿಗೆ, ಮತ್ತಾತನು ಲೇವಿಗೆ ಹುಟ್ಟಿದರು.
30 : ಲೇವಿ ಸಿಮಿಯೋನನಿಗೆ, ಸಿಮಿಯೋನ್ ಯೂದನಿಗೆ; ಯೂದ ಜೋಸೆಫನಿಗೆ, ಜೋಸೆಫ್ ಯೊನಾಮನಿಗೆ, ಯೊನಾಮ್ ಎಲಿಯಕೀಮನಿಗೆ ಹುಟ್ಟಿದರು.
31 : ಎಲಿಯಕೀಮ್ ಮೆಲೆಯಾನಿಗೆ, ಮೆಲೆಯಾ ಮೆನ್ನನಿಗೆ, ಮೆನ್ನ ಮತ್ತಾಥನಿಗೆ, ಮತ್ತಾಥ ನಾತಾನನಿಗೆ, ನಾತಾನ್ ದಾವೀದನಿಗೆ ಹುಟ್ಟಿದರು.
32 : ದಾವೀದ್ ಜೆಸ್ಸೆಯನಿಗೆ, ಜೆಸ್ಸೆಯ ಓಬೇದನಿಗೆ, ಓಬೇದ್ ಬೋವಜನಿಗೆ, ಬೋವಜ್ ಸಲ್ಮೋನನಿಗೆ, ಸಲ್ಮೋನ್ ನಹಸ್ಸೋನನಿಗೆ ಹುಟ್ಟಿದರು.
33 : ನಹಸ್ಸೋನ್ ಅಮ್ಮಿನದಾಬನಿಗೆ, ಅಮ್ಮಿನದಾಬನು ಅದ್ಮಿನನಿಗೆ, ಅದ್ಮಿನ್ ಆರ್ನೈಯನಿಗೆ, ಆರ್ನೈಯ ಹೆಸ್ರೋನನಿಗೆ, ಹೆಸ್ರೋನ್ ಪೆರೆಸನಿಗೆ, ಪೆರೆಸ್ ಯೂದನಿಗೆ ಹುಟ್ಟಿದರು.
34 : ಯೂದ ಯಕೋಬನಿಗೆ, ಯಕೋಬ್ ಇಸಾಕನಿಗೆ, ಇಸಾಕ ಅಬ್ರಹಾಮನಿಗೆ, ಅಬ್ರಹಾಮ ತೇರನಿಗೆ, ತೇರ ನಹೋರನಿಗೆ ಹುಟ್ಟಿದರು.
35 : ನಹೋರ್ ಸೆರೂಗನಿಗೆ, ಸೆರೂಗ್ ರೆಗೂವನಿಗೆ, ರೆಗೂವ ಪೆಲೆಗನಿಗೆ, ಪೆಲೆಗ್ ಹೇಬೆರನಿಗೆ, ಹೇಬೆರ್ ಸಾಲನಿಗೆ ಹುಟ್ಟಿದರು.
36 : ಸಾಲ ಕಯಿನನಿಗೆ, ಕಯಿನ್ ಅರ್ಫಕ್ಷಾದನಿಗೆ, ಅರ್ಫಕ್ಷಾದ್ ಶೇಮನಿಗೆ, ಶೇಮ್ ನೋವನಿಗೆ, ನೋವ ಲಾಮೆಕನಿಗೆ, ಲಾಮೆಕ್ ಮತೂಷಲನಿಗೆ ಹುಟ್ಟಿದರು.
37 : ಮತೂಷಲ ಹನೋಕನಿಗೆ, ಹನೋಕ್ ಯೆರೆದನಿಗೆ, ಯೆರೆದ್ ಮಹಲಲೇಲನಿಗೆ, ಮಹಲಲೇಲ್ ಕಯಿನನಿಗೆ ಹುಟ್ಟಿದರು.
38 : ಕಯಿನನ್ ಎನೋಷನಿಗೆ, ಎನೋಷ ಸೇತನಿಗೆ, ಸೇತ್ ಆದಾಮನಿಗೆ ಹುಟ್ಟಿದರು. ಆದಾಮನು ದೇವರ ಮಗನು.
ಸೈತಾನನ ಪ್ರಲೋಭನೆಗಳು
(ಮತ್ತಾ. 4.1-11; ಮಾರ್ಕ 1.12-13)