Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಲೂಕ


1 : ಪಾಸ್ಕಮಹೋತ್ಸವವು ಸವಿೂಪಿಸುತ್ತಿತ್ತು. ಅದು ಹುಳಿರಹಿತ ರೊಟ್ಟಿಯನ್ನು ಭುಜಿಸುವ ಹಬ್ಬ.
2 : ಮುಖ್ಯಯಾಜಕರೂ ಧರ್ಮಶಾಸ್ತ್ರಿಗಳೂ ಯೇಸುಸ್ವಾಮಿಯನ್ನು ಕೊಲ್ಲಿಸಲು ಆಲೋಚನೆ ಮಾಡುತ್ತಿದ್ದರು; ಜನರ ಭಯ ಅವರಿಗೆ ಇದ್ದುದರಿಂದ ಅದಕ್ಕೆ ಗುಟ್ಟಾದ ಮಾರ್ಗವನ್ನು ಹುಡುಕುತ್ತಿದ್ದರು.
3 : ಅಷ್ಟರಲ್ಲಿ, ಯೇಸುವಿನ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತಿನ ಯೂದನು ಸೈತಾನನಿಗೆ ವಶನಾದನು.
4 : ಆ ಯೂದನು ಮುಖ್ಯ ಯಾಜಕರ ಬಳಿಗೆ ಹಾಗೂ ಮಹಾದೇವಾಲಯದ ಪಹರೆಯ ದಳಪತಿಗಳ ಬಳಿಗೆ ಹೋಗಿ, ಯೇಸುವನ್ನು ಅವರಿಗೆ ಹಿಡಿದು ಕೊಡುವ ವಿಧಾನವನ್ನು ಕುರಿತು ಸಮಾಲೋಚಿಸಿದನು.
5 : ಇದರಿಂದ ಅವರಿಗೆ ಅತ್ಯಾನಂದವಾಯಿತು. ಅವರು ಹಣ ಕೊಡುವುದಾಗಿ ವಾಗ್ದಾನ ಮಾಡಿದರು.
6 : ಅವನೂ ಸಮ್ಮತಿಸಿ, ಜನಜಂಗುಳಿ ಇಲ್ಲದ ಸಂದರ್ಭದಲ್ಲಿ ಯೇಸುವನ್ನು ಹಿಡಿದು ಒಪ್ಪಿಸಲು ಸಮಯ ಕಾಯುತ್ತಾ ಇದ್ದನು.
7 : ಹುಳಿರಹಿತ ರೊಟ್ಟಿಯ ಹಬ್ಬ ಆರಂಭವಾಯಿತು. ಪಾಸ್ಕ ಕುರಿಮರಿಯನ್ನು ಕೊಯ್ಯಬೇಕಾದ ದಿನವು ಬಂದಿತು.
8 : ಆದುದರಿಂದ ಯೇಸುಸ್ವಾಮಿ ತಮ್ಮ ಶಿಷ್ಯರಾದ ಪೇತ್ರ ಹಾಗೂ ಯೊವಾನ್ನನನ್ನು ಕರೆದು, “ಹೋಗಿ, ಪಾಸ್ಕಭೋಜನ ಸಿದ್ದಮಾಡಿರಿ,” ಎಂದರು.
9 : “ಎಲ್ಲಿ ಸಿದ್ಧಪಡಿಸಬೇಕು?” ಎಂದು ಅವರು ಕೇಳಿದಾಗ,
10 : “ನೀವು ಪಟ್ಟಣವನ್ನು ಪ್ರವೇಶಿಸುವಾಗ ನೀರಿನ ಕೊಡವನ್ನು ಹೊತ್ತುಕೊಂಡು ಹೋಗುವ ಒಬ್ಬನನ್ನು ಎದುರುಗೊಳ್ಳುವಿರಿ. ಅವನನ್ನು ಹಿಂಬಾಲಿಸಿ, ಅವನು ಹೋಗುವ ಮನೆಗೆ ಹೋಗಿರಿ.
11 : ಆ ಮನೆಯ ಯಜಮಾನನಿಗೆ, ‘ನನ್ನ ಶಿಷ್ಯರ ಜೊತೆಯಲ್ಲಿ ಪಾಸ್ಕಭೋಜನ ಮಾಡಲು ಕೊಠಡಿ ಎಲ್ಲಿ, ಎಂದು ನಿಮ್ಮನ್ನು ವಿಚಾರಿಸಲು ನಮ್ಮ ಗುರು ಹೇಳಿದ್ದಾರೆ,’ ಎನ್ನಿ.
12 : ಅವನು ಮೇಲ್ಮಾಳಿಗೆಯಲ್ಲಿ ವಿಶಾಲವಾದ ಹಾಗೂ ಸುಸಜ್ಜಿತವಾದ ಕೊಠಡಿಯೊಂದನ್ನು ತೋರಿಸುವನು. ಅಲ್ಲಿ ಸಿದ್ಧಮಾಡಿ,” ಎಂದರು.
13 : ಅಂತೆಯೇ ಶಿಷ್ಯರಿಬ್ಬರು ಹೋಗಿ ಯೇಸು ತಮಗೆ ಹೇಳಿದ ಪ್ರಕಾರ ಎಲ್ಲವೂ ವ್ಯವಸ್ಥಿತವಾಗಿರುವುದನ್ನು ಕಂಡು ಪಾಸ್ಕ ಭೋಜನವನ್ನು ತಯಾರಿಸಿದರು.
14 : ನಿಶ್ಚಿತ ಸಮಯ ಬಂದಾಗ ಯೇಸುಸ್ವಾಮಿ ಶಿಷ್ಯರ ಸಮೇತ ಊಟಕ್ಕೆ ಕುಳಿತರು.
15 : ಆಗ ಅವರು ಶಿಷ್ಯರಿಗೆ, “ನಾನು ಯಾತನೆಯನ್ನು ಅನುಭವಿಸುವುದಕ್ಕೆ ಮುಂಚೆ ನಿಮ್ಮೊಡನೆ ಈ ಪಾಸ್ಕಭೋಜನವನ್ನು ಮಾಡಲು ಬಹಳ ಅಪೇಕ್ಷೆಯಿಂದ ಎದುರುನೋಡುತ್ತಿದ್ದೆನು.
16 : ದೇವರ ಸಾಮ್ರಾಜ್ಯದಲ್ಲಿ ಇದು ಪೂರ್ಣ ಅರ್ಥವನ್ನು ಪಡೆಯುವ ತನಕ ನಾನಿದನ್ನು ಇನ್ನು ಭುಜಿಸುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.
17 : ಅನಂತರ ಯೇಸು ಪಾನಪಾತ್ರೆಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ, “ಇದನ್ನು ತೆಗೆದುಕೊಂಡು ನಿಮ್ಮಲ್ಲಿ ಹಂಚಿಕೊಳ್ಳಿರಿ;
18 : ದೇವರ ಸಾಮ್ರಾಜ್ಯವು ಬರುವ ತನಕ ಇನ್ನು ನಾನು ದ್ರಾಕ್ಷಾರಸವನ್ನು ಕುಡಿಯುವುದಿಲ್ಲ ಎಂದು ನಿಮಗೆ ಹೇಳುತ್ತೇನೆ,” ಎಂದರು.
19 : ಬಳಿಕ ರೊಟ್ಟಿಯನ್ನು ತೆಗೆದುಕೊಂಡು, ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ, ಅದನ್ನು ಮುರಿದು, ಶಿಷ್ಯರಿಗೆ ಕೊಡುತ್ತಾ, “ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ, ನನ್ನ ಸ್ಮರಣೆಗಾಗಿ ಇದನ್ನು ಮಾಡಿರಿ,” ಎಂದರು.
20 : ಅಂತೆಯೇ, ಊಟವಾದ ಮೇಲೆ ಪಾನಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆಯು ನಿಮಗಾಗಿ ಸುರಿಸಲಾಗುವ ನನ್ನ ರಕ್ತದಿಂದ ಮುದ್ರಿತವಾದ ಹೊಸ ಒಡಂಬಡಿಕೆ”.
21 : “ಆದರೆ ಇಗೋ, ನನಗೆ ದ್ರೋಹ ಬಗೆಯುವವನು ನನ್ನೊಂದಿಗೆ ಇದೇ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದಾನೆ.
22 : ನರಪುತ್ರನೇನೋ ದೈವೇಚ್ಛೆಯ ಪ್ರಕಾರ ಹೊರಟು ಹೋಗುತ್ತಾನೆ; ಆದರೆ ಆತನಿಗೆ ದ್ರೋಹ ಬಗೆಯುವವನ ದುರ್ಗತಿಯನ್ನು ಏನೆಂದು ಹೇಳಲಿ!” ಎಂದರು.
23 : ಇದನ್ನು ಕೇಳಿದ ಶಿಷ್ಯರು ಇಂಥ ದುಷ್ಕøತ್ಯ ಮಾಡುವವನು ತಮ್ಮಲ್ಲಿ ಯಾರಿರಬಹುದೆಂದು ಒಬ್ಬರನ್ನೊಬ್ಬರು ವಿಚಾರಿಸತೊಡಗಿದರು. ನಾಯಕನು ಸೇವಕನಾಗಲಿ
24 : ತಮ್ಮಲ್ಲಿ ಅತಿ ಶ್ರೇಷ್ಟನು ಯಾರು ಎಂಬ ವಾದವಿವಾದವು ಶಿಷ್ಯರಲ್ಲಿ ಎದ್ದಿತು.
25 : ಆಗ ಯೇಸುಸ್ವಾಮಿ, “ಲೌಕಿಕ ರಾಜರು ತಮ್ಮ ಪ್ರಜೆಗಳ ಮೇಲೆ ದೊರೆತನ ಮಾಡುತ್ತಾರೆ; ಅಧಿಕಾರ ನಡೆಸುವವರು ಧರ್ಮಿಷ್ಠರೆನಿಸಿಕೊಳ್ಳುತ್ತಾರೆ.
26 : ಆದರೆ ನೀವು ಹಾಗಾಗಬಾರದು; ನಿಮ್ಮಲ್ಲಿ ಅತಿ ದೊಡ್ಡವನು ಅತಿ ಚಿಕ್ಕವನಂತಾಗಬೇಕು.
27 : ಈ ಇಬ್ಬರಲ್ಲಿ ದೊಡ್ಡವನು ಯಾರು - ಊಟ ಮಾಡುವವನೋ? ಊಟ ಬಡಿಸುವವನೋ? ಖಂಡಿತವಾಗಿ ಊಟ ಮಾಡುವವನು. ಆದರೂ ಊಟ ಬಡಿಸುವ ಊಳಿಗದವನಂತೆ ನಾನು ನಿಮ್ಮ ನಡುವೆ ಇದ್ದೇನೆ. ಆಪ್ತ ಶಿಷ್ಯರಿಗೆ ಸೂಕ್ತ ಸಂಭಾವನೆ
28 : “ನನ್ನ ಶೋಧನೆ-ವೇದನೆಗಳಲ್ಲಿ ನನ್ನನ್ನು ಬಿಟ್ಟಗಲದೆ ಇದ್ದವರು ನೀವು.
29 : ನನ್ನ ಪಿತನು ನನಗೆ ರಾಜ್ಯಾಧಿಕಾರವನ್ನು ವಹಿಸಿರುವಂತೆ ನಾನೂ ನಿಮಗೆ ವಹಿಸುತ್ತೇನೆ.
30 : ನನ್ನ ಸಾಮ್ರಾಜ್ಯದಲ್ಲಿ ನನ್ನ ಸಂಗಡ ಊಟ ಮಾಡುವಿರಿ, ಪಾನ ಮಾಡುವಿರಿ, ಮಾತ್ರವಲ್ಲ ಇಸ್ರಯೇಲಿನ ಹನ್ನೆರಡು ಗೋತ್ರಗಳಿಗೆ ನ್ಯಾಯಾಧಿಪತಿಗಳಾಗಿ ಸಿಂಹಾಸನಗಳ ಮೇಲೆ ಆಸೀನರಾಗುವಿರಿ.
31 : “ಸಿಮೋನನೇ, ಸಿಮೋನನೇ, ಕೇಳು: ಗೋದಿಯನ್ನು ತೂರುವಂತೆ ಸೈತಾನನು ನಿಮ್ಮೆಲ್ಲರನ್ನೂ ಶೋಧಿಸಲು ಅಪ್ಪಣೆ ಕೇಳಿಕೊಂಡಿದ್ದಾನೆ.
32 : ಆದರೆ, ನಾನು ನಿನ್ನ ವಿಶ್ವಾಸವು ಕುಂದದಂತೆ ನಿನಗಾಗಿ ಪ್ರಾರ್ಥನೆ ಮಾಡಿದ್ದೇನೆ. ನೀನು ಪರಿವರ್ತನೆ ಹೊಂದಿದ ನಂತರ ನಿನ್ನ ಸಹೋದರರನ್ನು ದೃಢಪಡಿಸು,” ಎಂದರು.
33 : ಅದಕ್ಕೆ ಪೇತ್ರನು, “ಗುರುದೇವಾ, ನಿಮ್ಮ ಸಂಗಡ ಸೆರೆಗೆ ಹೋಗುವುದಕ್ಕೂ ಸಾಯುವುದಕ್ಕೂ ಸಿದ್ಧನಿದ್ದೇನೆ,” ಎಂದನು.
34 : ಆಗ ಯೇಸು, “ಪೇತ್ರನೇ, ಇಂದು ಕೋಳಿಕೂಗುವ ಮೊದಲೇ ನನ್ನನ್ನು ಅರಿಯೆನೆಂದು ನೀನು ಮೂರು ಬಾರಿ ಬೊಂಕುವೆ, ಇದು ಖಂಡಿತ,” ಎಂದರು. ಪಾತಕರಲ್ಲಿ ಒಬ್ಬನಂತೆ ಪರಿಗಣಿತರಾದ ಯೇಸು
35 : ಬಳಿಕ ಯೇಸುಸ್ವಾಮಿ, “ನಾನು ನಿಮ್ಮನ್ನು ಬುತ್ತಿ, ಜೋಳಿಗೆ, ಜೋಡು ಒಂದೂ ಇಲ್ಲದೆ ಕಳಿಸಿದಾಗ ನಿಮಗೇನಾದರೂ ಕೊರತೆ ಆಯಿತೇ?” ಎಂದು ಶಿಷ್ಯರನ್ನು ಕೇಳಿದರು. ಅದಕ್ಕೆ ಅವರು “ಇಲ್ಲ,” ಎಂದು ಉತ್ತರ ಕೊಟ್ಟರು.
36 : “ಆದರೆ ಈಗ ಬುತ್ತಿಯಿರುವವನು ಅದನ್ನು ತೆಗೆದುಕೊಳ್ಳಲಿ; ಜೋಳಿಗೆಯಿರುವವನು ಹಾಗೆಯೇ ಮಾಡಲಿ; ಮತ್ತು ಕತ್ತಿಯಿಲ್ಲದವನು ತನ್ನ ಹೊದಿಕೆಯನ್ನು ಮಾರಿ ಒಂದನ್ನು ಕೊಂಡುಕೊಳ್ಳಲಿ.
37 : ಏಕೆಂದರೆ, ‘ಪಾತಕರಲ್ಲಿ ಒಬ್ಬನಂತೆ ಪರಿಗಣಿತನಾದನು,’ ಎಂದು ಪವಿತ್ರಗ್ರಂಥದಲ್ಲಿ ಬರೆದಿರುವ ವಾಕ್ಯ ನನ್ನಲ್ಲಿ ನೆರವೇರಬೇಕಾದುದು ಅಗತ್ಯ; ನನಗೆ ಸಂಬಂಧಪಟ್ಟಿದ್ದೆಲ್ಲಾ ಸಮಾಪ್ತಿಗೊಳ್ಳಲಿದೆ,” ಎಂದರು.
38 : “ಗುರುವೇ, ಇಗೋ ಇಲ್ಲಿ ಎರಡು ಕತ್ತಿಗಳಿಗೆ,” ಎಂದು ಶಿಷ್ಯರು ಹೇಳಲು ಯೇಸು, “ಅಷ್ಟು ಸಾಕು,” ಎಂದರು. ಓಲಿವ್ ತೋಪಿನಲ್ಲಿ ಒಳಯಾತನೆ (ಮತ್ತಾ. 26.36-46; ಮಾರ್ಕ 14.32-42)
39 : ಯೇಸುಸ್ವಾಮಿ ಅಲ್ಲಿಂದ ಹೊರಟು ವಾಡಿಕೆಯ ಪ್ರಕಾರ ಓಲಿವ್ ತೋಪಿನ ಗುಡ್ಡಕ್ಕೆ ಹೋದರು. ಶಿಷ್ಯರು ಅವರ ಹಿಂದೆ ಹೋದರು.
40 : ಕ್ಲುಪ್ತಸ್ಥಳಕ್ಕೆ ಬಂದಾಗ ಯೇಸು ಅವರಿಗೆ “ಪ್ರಲೋಭನೆಗೆ ಒಳಗಾಗದಂತೆ ಪ್ರಾರ್ಥನೆ ಮಾಡಿರಿ,” ಎಂದು ಹೇಳಿ,
41 : ಒಂದು ಕಲ್ಲೆಸೆತದಷ್ಟು ದೂರ ಹೋಗಿ, ಮೊಣಕಾಲೂರಿ ಪ್ರಾರ್ಥನೆ ಮಾಡುತ್ತಾ,
42 : “ಓ ಪಿತನೇ, ನಿಮಗೆ ಇಷ್ಟವಾದರೆ ಈ ಕಷ್ಟದ ಕೊಡವನ್ನು ನನ್ನಿಂದ ತೊಲಗಿಸಿರಿ. ಆದರೂ ನನ್ನ ಚಿತ್ತವಲ್ಲ, ನಿಮ್ಮ ಚಿತ್ತವೇ ನೆರವೇರಲಿ,” ಎಂದರು.
43 : ಆಗ ಸ್ವರ್ಗದಿಂದ ದೂತನೊಬ್ಬನು ಯೇಸುವಿಗೆ ಪ್ರತ್ಯಕ್ಷನಾಗಿ ಅವರನ್ನು ಸಶಕ್ತರನ್ನಾಗಿ ಮಾಡಿದನು.
44 : ಕಡುಯಾತನೆಯಲ್ಲಿದ್ದ ಅವರು ಇನ್ನೂ ಶ್ರದ್ಧೆಯಿಂದ ಪ್ರಾರ್ಥಿಸಿದರು. ಅವರ ಬೆವರು ರಕ್ತದ ಹನಿಯಂತೆ ತೊಟ್ಟುತೊಟ್ಟಾಗಿ ನೆಲದ ಮೇಲೆ ಬೀಳುತ್ತಿತ್ತು.
45 : ಯೇಸು ಪ್ರಾರ್ಥನೆಯಿಂದ ಎದ್ದು ಶಿಷ್ಯರ ಬಳಿಗೆ ಬಂದರು. ಶಿಷ್ಯರಾದರೋ ದುಃಖದಿಂದ ಬಳಲಿ ನಿದ್ರಿಸುತ್ತಿದ್ದರು.
46 : ಇದನ್ನು ಕಂಡು, “ನೀವು ನಿದ್ರಿಸುತ್ತೀರೇನು? ಎದ್ದು, ನೀವು ಪ್ರಲೋಭನೆಗೆ ಒಳಗಾಗದಂತೆ ಪ್ರಾರ್ಥನೆಮಾಡಿ,” ಎಂದರು.
47 : ಯೇಸುಸ್ವಾಮಿ ಇನ್ನೂ ಮಾತನಾಡುತ್ತಿದ್ದ ಹಾಗೆ ಜನರ ಗುಂಪೊಂದು ಕಾಣಿಸಿಕೊಂಡಿತು. ಹನ್ನೆರಡು ಮಂದಿಯಲ್ಲಿ ಒಬ್ಬನಾದ ಯೂದನು ಅವರಿಗೆ ಮುಂದಾಳಾಗಿ ಬಂದಿದ್ದನು. ಅವನು ಯೇಸುವಿಗೆ ಮುದ್ದಿಡಲು ಹತ್ತಿರ ಬಂದಾಗ,
48 : ಯೇಸು, “ಯೂದಾ, ಮುದ್ದಿಟ್ಟು ನರಪುತ್ರನನ್ನು ತೋರಿಸಿಕೊಡುವೆಯಾ?” ಎಂದರು.
49 : ಸುತ್ತಲಿದ್ದ ಶಿಷ್ಯರು ಮುಂದೇನಾಗುವುದೆಂದು ಅರಿತುಕೊಂಡು, “ಗುರುವೇ, ಕತ್ತಿಯಿಂದ ಕಡಿಯೋಣವೇ,” ಎಂದರು.
50 : ತಕ್ಷಣವೇ ಅವರಲ್ಲಿ ಒಬ್ಬನು ಪ್ರಧಾನಯಾಜಕನ ಆಳನ್ನು ಹೊಡೆದು ಅವನ ಬಲಕಿವಿಯನ್ನು ಕತ್ತರಿಸಿಬಿಟ್ಟನು.
51 : ಆಗ ಯೇಸು, “ಸಾಕು ನಿಲ್ಲಿಸು,” ಎಂದು ಹೇಳಿ ಅವನ ಕಿವಿಯನ್ನು ಮುಟ್ಟಿ ಗುಣಪಡಿಸಿದರು.
52 : ಅನಂತರ ಯೇಸು ತಮ್ಮನ್ನು ಹಿಡಿಯುವುದಕ್ಕೆ ಬಂದಿದ್ದ ಮುಖ್ಯಯಾಜಕರನ್ನೂ ದೇವಾಲಯದ ಪಹರೆಯ ದಳಪತಿಗಳನ್ನೂ ಪ್ರಮುಖರನ್ನೂ ನೋಡಿ, “ದರೋಡೆಗಾರನನ್ನು ಹಿಡಿಯುವುದಕ್ಕೆ ಬಂದಂತೆ ಖಡ್ಗಗಳನ್ನು ಮತ್ತು ಲಾಠಿಗಳನ್ನು ತೆಗೆದುಕೊಂಡು ಬಂದಿರುವಿರೋ?
53 : ನಾನು ಪ್ರತಿದಿನವೂ ಮಹಾದೇವಾಲಯದಲ್ಲಿ ನಿಮ್ಮ ನಡುವೆಯೇ ಇದ್ದೆ. ಆಗ ನೀವು ನನ್ನ ಮೇಲೆ ಕೈಮಾಡಲಿಲ್ಲ; ಆದರೆ ಇದು ನಿಮ್ಮ ಕಾಲ; ಅಂಧಕಾರ ದೊರೆತನ ಮಾಡುವ ಕರಾಳ ಕಾಲ,” ಎಂದರು.
54 : ಅನಂತರ ಅವರು ಯೇಸುಸ್ವಾಮಿಯನ್ನು ಬಂಧಿಸಿ ಪ್ರಧಾನಯಾಜಕನ ಭವನಕ್ಕೆ ಕರೆದುಕೊಂಡು ಹೋದರು. ದೂರದಿಂದ ಪೇತ್ರನು ಹಿಂದೆಹಿಂದೆಯೇ ಹೋದನು.
55 : ಭವನದ ಹೊರಾಂಗಣದ ನಡುವೆ ಬೆಂಕಿಮಾಡಿ ಅದರ ಸುತ್ತಲೂ ಅವರೆಲ್ಲರು ಕುಳಿತುಕೊಂಡಾಗ, ಪೇತ್ರನು ಅವರ ಸಂಗಡ ಸೇರಿ ಕುಳಿತುಕೊಂಡನು.
56 : ಬೆಂಕಿಯ ಬೆಳಕಿನಲ್ಲಿ ಕುಳಿತಿದ್ದ ಆತನನ್ನು ದಾಸಿಯೊಬ್ಬಳು ದೃಷ್ಟಿಸಿ ನೋಡಿ, “ಇವನು ಕೂಡ ಯೇಸುವಿನ ಸಂಗಡ ಇದ್ದವನು,” ಎಂದಳು.
57 : ಅದಕ್ಕೆ ಆತ, “ಅವನಾರೋ ನಾನರಿಯೆನಮ್ಮಾ,” ಎಂದು ನಿರಾಕರಿಸಿದನು.
58 : ಸ್ವಲ್ಪ ಹೊತ್ತಾದ ಮೇಲೆ ಇನ್ನೊಬ್ಬನು ಆತನನ್ನು ಕಂಡು, “ನೀನು ಕೂಡ ಅವರಲ್ಲಿ ಒಬ್ಬನು,” ಎನ್ನಲು ಪೇತ್ರನು, “ಇಲ್ಲಪ್ಪಾ, ನಾನಲ್ಲ,” ಎಂದುಬಿಟ್ಟನು.
59 : ಸುಮಾರು ಒಂದು ಗಂಟೆ ಕಾಲ ಕಳೆದ ಮೇಲೆ ಮತ್ತೊಬ್ಬನು, “ಖಂಡಿತವಾಗಿ ಇವನು ಕೂಡ ಯೇಸುವಿನ ಸಂಗಡ ಇದ್ದವನು. ಏಕೆಂದರೆ, ಇವನೂ ಗಲಿಲೇಯದವನೇ,” ಎಂದು ಒತ್ತಿ ಹೇಳಿದನು.
60 : ಅದಕ್ಕೆ ಪೇತ್ರನು, “ನೀನು ಏನು ಹೇಳುತ್ತೀಯೋ ನನಗೆ ಅರ್ಥವಾಗುವುದಿಲ್ಲ,” ಎಂದನು. ಆಕ್ಷಣವೇ, ಅವನು ಇನ್ನೂ ಮಾತನಾಡುತ್ತಿರುವಾಗಲೇ, ಕೋಳಿ ಕೂಗಿತು.
61 : ಆಗ ಪ್ರಭು ಯೇಸು ಹಿಂದಿರುಗಿ ಪೇತ್ರನನ್ನು ದಿಟ್ಟಿಸಿ ನೋಡಿದರು. “ಈ ದಿನ ಕೋಳಿ ಕೂಗುವ ಮೊದಲೇ, ‘ನಾನು ಆತನನ್ನು ಅರಿಯೆನು,” ಎಂದು ನನ್ನನ್ನು ಮೂರು ಬಾರಿ ನಿರಾಕರಿಸುವೆ,” ಎಂದು ಯೇಸು ನುಡಿದಿದ್ದ ಮಾತುಗಳು ಪೇತ್ರನ ನೆನಪಿಗೆ ಬಂದುವು.
62 : ಅವನು ಹೊರಗೆ ಹೋಗಿ ಬಹಳವಾಗಿ ವ್ಯಥೆಪಟ್ಟು ಅತ್ತನು.
63 : ಯೇಸುಸ್ವಾಮಿಯನ್ನು ಬಂಧಿಸಿ ಹಿಡಿದುಕೊಂಡಿದ್ದವರು ಅವರನ್ನು ಅಣಕಿಸಿದರು, ಹೊಡೆದರು.
64 : ಕಣ್ಣಿಗೆ ಬಟ್ಟೆಕಟ್ಟಿ, “ನಿನ್ನನ್ನು ಹೊಡೆದವರಾರು? ಪ್ರವಾದಿಸು,” ಎಂದು ಕೇಳುತ್ತಿದ್ದರು.
65 : ಹಲವಾರು ವಿಧದಲ್ಲಿ ಅವರನ್ನು ದೂಷಿಸಿ ನಿಂದಿಸುತ್ತಿದ್ದರು.
66 : ಅಷ್ಟರಲ್ಲಿ ಬೆಳಗಾಯಿತು. ಪ್ರಜಾ ಪ್ರಮುಖರೂ ಮುಖ್ಯಯಾಜಕರೂ ಧರ್ಮಶಾಸ್ತ್ರಿಗಳೂ ಸಭೆಸೇರಿದರು. ಯೇಸುವನ್ನು ತಂದು ನ್ಯಾಯಸಭೆಯ ಮುಂದೆ ನಿಲ್ಲಿಸಿದರು.
67 : “ನೀನು ಅಭಿಷಿಕ್ತನಾದ ಲೋಕೋದ್ಧಾರಕನಾಗಿದ್ದರೆ ನಮಗೆ ಹೇಳು,” ಎಂದು ವಿಚಾರಿಸಿದರು. ಆಗ ಯೇಸು, “ನಾನು ಹೇಳಿದರೆ ನೀವು ನನ್ನನ್ನು ನಂಬುವುದಿಲ್ಲ.
68 : ನಾನೇ ಪ್ರಶ್ನೆಹಾಕಿದರೆ ನೀವು ನನಗೆ ಉತ್ತರ ಕೊಡುವುದೂ ಇಲ್ಲ.
69 : ಇನ್ನು ಮುಂದೆ ನರಪುತ್ರನು ಸರ್ವಶಕ್ತ ದೇವರ ಬಲಗಡೆ ಆಸೀನನಾಗಿರುವನು,” ಎಂದರು.
70 : ಅದಕ್ಕೆ ಅವರೆಲ್ಲರೂ, “ಹಾಗಾದರೆ, ನೀನು ದೇವರ ಪುತ್ರನೋ?” ಎಂದು ಕೇಳಿದರು. “ನಾನು ಆತನೇ ಎಂದು ನೀವೇ ಹೇಳುತ್ತಿದ್ದೀರಿ,” ಎಂದು ಯೇಸು ಉತ್ತರ ಕೊಡಲು ಅವರು,
71 : “ಇನ್ನೇನು ಸಾಕ್ಷಿಬೇಕು? ನಾವೇ ಇವನ ಬಾಯಿಂದ ಕೇಳಿದೆವಲ್ಲಾ,” ಎಂದರು.

· © 2017 kannadacatholicbible.org Privacy Policy