1 : ಒಂದು ದಿನ ಯೇಸುಸ್ವಾಮಿ ಮಹಾದೇವಾಲಯದಲ್ಲಿ ಜನರಿಗೆ ಬೋಧನೆ ಮಾಡುತ್ತಾ ಶುಭಸಂದೇಶವನ್ನು ಪ್ರಕಟಿಸುತ್ತಾ ಇದ್ದರು. ಆಗ ಮುಖ್ಯಯಾಜಕರು, ಧರ್ಮಶಾಸ್ತ್ರಿಗಳು ಮತ್ತು ಸಭಾ ಪ್ರಮುಖರು ಅಲ್ಲಿಗೆ ಬಂದು,
2 : “ನೀನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತಿರುವೆ? ನಿನಗೆ ಈ ಅಧಿಕಾರವನ್ನು ಕೊಟ್ಟವರು ಯಾರು? ನಮಗೆ ತಿಳಿಸು,” ಎಂದು ಕೇಳಿದರು.
3 : ಅದಕ್ಕೆ ಯೇಸು ಪ್ರತ್ಯುತ್ತರವಾಗಿ, “ನಾನೂ ನಿಮಗೆ ಒಂದು ಪ್ರಶ್ನೆ ಹಾಕುತ್ತೇನೆ;
4 : ಸ್ನಾನದೀಕ್ಷೆ ಕೊಡುವ ಅಧಿಕಾರ ಯೊವಾನ್ನನಿಗೆ ಎಲ್ಲಿಂದ ಬಂದಿತು? ದೇವರಿಂದಲೋ, ಮನುಷ್ಯರಿಂದಲೋ? ನನಗೆ ತಿಳಿಸಿರಿ,” ಎಂದರು.
5 : ಇದನ್ನು ಕೇಳಿದ ಅವರೆಲ್ಲರೂ ತಮ್ಮತಮ್ಮೊಳಗೆ ಸಮಾಲೋಚಿಸುತ್ತಾ, ಸಂವಾದಿಸುತ್ತಾ, “ದೇವರಿಂದ ಬಂದಿತು, ಎಂದು ನಾವು ಹೇಳಿದರೆ, ‘ನೀವೇಕೆ ಆತನನ್ನು ನಂಬಲಿಲ್ಲ?’ ಎಂದು ಕೇಳುವನು;
6 : ಮನುಷ್ಯರಿಂದ ಬಂದಿತೆಂದು ಹೇಳಿದೆವಾದರೆ ಯೊವಾನ್ನನು ಪ್ರವಾದಿಯೆಂದು ಜನರೆಲ್ಲರಿಗೆ ಮನದಟ್ಟಾಗಿರುವುದರಿಂದ ಅವರು ನಮ್ಮನ್ನು ಕಲ್ಲೆಸೆದು ಕೊಲ್ಲುವರು,” ಎಂದುಕೊಂಡರು.
7 : ಅನಂತರ ಬಂದು, “ಅದು ಎಲ್ಲಿಂದ ಬಂದಿತೋ ನಮಗೆ ತಿಳಿಯದು,” ಎಂದು ಉತ್ತರಕೊಟ್ಟರು.
8 : ಅದಕ್ಕೆ ಯೇಸು, “ಹಾಗಾದರೆ ನಾನು ಕೂಡ ಯಾವ ಅಧಿಕಾರದಿಂದ ಇದೆಲ್ಲವನ್ನು ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,” ಎಂದರು.
9 : ಬಳಿಕ ಯೇಸುಸ್ವಾಮಿ ಜನರಿಗೆ ಈ ಸಾಮತಿಯನ್ನು ಹೇಳತೊಡಗಿದರು: “ಒಬ್ಬಾತ ಒಂದು ದ್ರಾಕ್ಷಿತೋಟ ಮಾಡಿಸಿದ. ಕಾರಣಾಂತರ ಅದನ್ನು ಗೇಣಿದಾರರಿಗೆ ವಹಿಸಿ, ದೀರ್ಘಕಾಲ ಹೊರನಾಡಿಗೆ ಪ್ರವಾಸ ಹೋದ.
10 : ಫಲಕಾಲ ಬಂದಾಗ ತನಗೆ ಬರಬೇಕಾದ ಪಾಲನ್ನು ತರುವುದಕ್ಕಾಗಿ ಒಬ್ಬ ಸೇವಕನನ್ನು ಕಳುಹಿಸಿದ. ಗೇಣಿದಾರರು ಅವನನ್ನು ಹೊಡೆದು ಬರಿಗೈಯಲ್ಲಿ ಹಿಂದಕ್ಕೆ ಅಟ್ಟಿದರು.
11 : ತೋಟದ ಯಜಮಾನ ಇನ್ನೊಬ್ಬ ಸೇವಕನನ್ನು ಕಳುಹಿಸಿದ. ಅವನನ್ನೂ ಹೊಡೆದು, ಬಡಿದು, ಅವಮಾನ ಮಾಡಿ ಬರಿಗೈಯಲ್ಲೇ ಕಳುಹಿಸಿಬಿಟ್ಟರು.
12 : ಯಜಮಾನ ಮೂರನೆಯವನನ್ನು ಕಳುಹಿಸಿದ. ಇವನನ್ನೂ ಚೆನ್ನಾಗಿ ಥಳಿಸಿ, ಗಾಯಗೊಳಿಸಿ, ಹೊರಕ್ಕೆ ದಬ್ಬಿದರು.
13 : ಕಡೆಗೆ ತೋಟದ ಯಜಮಾನನು, ‘ಏನು ಮಾಡಲಿ? ನನ್ನ ಮುದ್ದುಮಗನನ್ನೇ ಕಳುಹಿಸುತ್ತೇನೆ; ಬಹುಶಃ ಅವನಿಗಾದರೂ ಮರ್ಯಾದೆಕೊಟ್ಟಾರು,’ ಎಂದುಕೊಂಡ.
14 : ಆದರೆ ಗೇಣಿದಾರರು ಯಜಮಾನನ ಮಗನನ್ನು ಕಂಡದ್ದೇ ತಡ, ‘ತೋಟಕ್ಕೆ ಇವನೇ ಉತ್ತರಾಧಿಕಾರಿ. ಇವನನ್ನು ಮುಗಿಸಿಬಿಡೋಣ; ಆಸ್ತಿ ನಮ್ಮದಾಗುವುದು,’ ಎಂದು ಒಳಸಂಚು ಮಾಡಿಕೊಂಡರು.
15 : ಅಂತೆಯೇ ಅವನನ್ನು ತೋಟದಿಂದ ಹೊರಕ್ಕೆ ದಬ್ಬಿಕೊಂಡು ಹೋಗಿ ಕೊಂದು ಹಾಕಿದರು.
16 : “ಹೀಗಿರುವಲ್ಲಿ, ತೋಟದ ಯಜಮಾನ ಇವರಿಗೆ ಏನು ಮಾಡುತ್ತಾನೆ?” ಎಂದು ಕೇಳಿದ ಯೇಸು, ತಾವೇ ಉತ್ತರಿಸುತ್ತಾ, “ಅವನು ಬಂದು, ಆ ಗೇಣಿದಾರರನ್ನು ಸಂಹರಿಸಿ ತೋಟವನ್ನು ಬೇರೆ ಗೇಣಿದಾರರಿಗೆ ಒಪ್ಪಿಸುತ್ತಾನೆ,” ಎಂದು ಹೇಳಿದರು.
17 : ಇದನ್ನು ಜನರು ಕೇಳಿದ್ದೇ, “ಅಯ್ಯೋ, ಹಾಗೆ ಎಂದಿಗೂ ಸಂಭವಿಸದಿರಲಿ!” ಎಂದರು. ಯೇಸು ಅವರನ್ನು ದಿಟ್ಟಿಸಿ ನೋಡಿ ಹಾಗಾದರೆ;
‘ಮನೆಕಟ್ಟುವವರು ಬೇಡವೆಂದು
ಬಿಸಾಡಿದ ಕಲ್ಲೇ
ಪ್ರಮುಖ ಮೂಲೆಗಲ್ಲಾಯಿತು,’
ಎಂದು ಪವಿತ್ರಗ್ರಂಥದಲ್ಲಿ ಹೇಳಿರುವುದರ ಅರ್ಥ ಆದರೂ ಏನು?
18 : ಈ ಕಲ್ಲಿನ ಮೇಲೆ ಬೀಳುವ ಪ್ರತಿಯೊಬ್ಬನೂ ಛಿದ್ರಛಿದ್ರವಾಗುವನು. ಯಾವನ ಮೇಲೆ ಆ ಕಲ್ಲು ಬೀಳುವುದೋ ಅವನು ಜಜ್ಜಿ ಹೋಗುವನು,” ಎಂದರು.
19 : ತಮ್ಮನ್ನೇ ಕುರಿತು ಈ ಸಾಮತಿಯನ್ನು ಹೇಳಿದ್ದಾರೆಂದು ಅರಿತುಕೊಂಡ ಧರ್ಮಶಾಸ್ತ್ರಿಗಳು ಮತ್ತು ಮುಖ್ಯಯಾಜಕರು ಅಲ್ಲೇ ಯೇಸುವನ್ನು ಬಂಧಿಸಲು ಯತ್ನಿಸಿದರು. ಆದರೆ ಜನಸಮೂಹಕ್ಕೆ ಭಯಪಟ್ಟರು.
20 : ಆದುದರಿಂದ ಸೂಕ್ತ ಸಂದರ್ಭ ಹುಡುಕತೊಡಗಿದರು. ಯೇಸುವನ್ನು ರಾಜ್ಯಪಾಲನ ವಶಕ್ಕೂ ನ್ಯಾಯಾಧಿಕಾರಕ್ಕೂ ಒಪ್ಪಿಸುವ ಉದ್ದೇಶದಿಂದ ಗೂಢಾಚಾರರನ್ನು ಕಳುಹಿಸಿದರು. ಇವರು ನಿಷ್ಕಪಟಿಗಳಂತೆ ನಟಿಸುತ್ತಾ ಯೇಸುವಿನ ಮಾತಿನಲ್ಲಿ ತಪ್ಪು ಕಂಡುಹಿಡಿಯಲು ಪ್ರಯತ್ನಿಸಿದರು.
21 : “ಬೋಧಕರೇ, ನೀವು ಹೇಳುವುದು ಹಾಗೂ ಬೋಧಿಸುವುದು ನ್ಯಾಯಬದ್ಧವಾಗಿಯೇ ಇದೆ. ಮುಖದಾಕ್ಷಿಣ್ಯವಿಲ್ಲದೆ ಸತ್ಯಕ್ಕನುಸಾರವಾಗಿ ದೈವಮಾರ್ಗವನ್ನು ಬೋಧಿಸುತ್ತೀರಿ. ಇದನ್ನು ನಾವು ಚೆನ್ನಾಗಿ ಬಲ್ಲೆವು.
22 : ಹೀಗಿರುವಲ್ಲಿ, ನಾವು ರೋಮ್ ಚಕ್ರಾಧಿಪತಿಗೆ ತೆರಿಗೆ ಕೊಡುವುದು ಧರ್ಮಸಮ್ಮತವೋ ಅಲ್ಲವೋ ತಿಳಿಸಿ,” ಎಂದು ಕೇಳಿದರು.
23 : ಅವರ ಕುಯುಕ್ತಿಯನ್ನು ಅರಿತುಕೊಂಡ ಯೇಸು,
24 : “ಒಂದು ನಾಣ್ಯವನ್ನು ತೋರಿಸಿರಿ. ಇದರಲ್ಲಿರುವುದು ಯಾರ ಮುದ್ರೆ? ಯಾರ ಲಿಪಿ?” ಎಂದು ಕೇಳಿದರು. ಅದಕ್ಕೆ ಅವರು, “ರೋಮ್ ಚಕ್ರವರ್ತಿಯವು,” ಎಂದರು.
25 : ಆಗ ಯೇಸು, “ಹಾಗಾದರೆ ಚಕ್ರವರ್ತಿಗೆ ಸಲ್ಲತಕ್ಕದ್ದನ್ನು ಚಕ್ರವರ್ತಿಗೂ, ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಸಲ್ಲಿಸಿರಿ,” ಎಂದರು.
26 : ಯೇಸು ಕೊಟ್ಟ ಈ ಉತ್ತರಕ್ಕೆ ಬೆರಗಾಗಿ ಆ ಗೂಢಾಚಾರರು ಬಾಯಿ ಮುಚ್ಚಿಕೊಂಡರು. ಜನರ ಮುಂದೆ, ಯೇಸುವಿನ ಮಾತುಗಳಲ್ಲಿ ತಪ್ಪು ಕಂಡುಹಿಡಿಯಲು ಅವರಿಂದ ಸಾಧ್ಯವಾಗಲಿಲ್ಲ.
27 : ಅನಂತರ ಸತ್ತಮೇಲೆ ಪುನರುತ್ಥಾನ ಇಲ್ಲ ಎಂದು ವಾದಿಸುತ್ತಿದ್ದ ಸದ್ದುಕಾಯರಲ್ಲಿ ಕೆಲವರು ಯೇಸುಸ್ವಾಮಿಯ ಬಳಿಗೆ ಬಂದು ಈ ಪ್ರಶ್ನೆಹಾಕಿದರು:
28 : “ಬೋಧಕರೇ, ‘ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಡಿಕೊಂಡು ಅಣ್ಣನಿಗೆ ಸಂತಾನ ಪಡೆಯಬೇಕು,’ ಎಂದು ಮೋಶೆ ನಮಗಾಗಿ ಬರೆದಿಟ್ಟಿದ್ದಾನಲ್ಲವೆ?
29 : ಒಮ್ಮೆ ಏಳುಮಂದಿ ಅಣ್ಣತಮ್ಮಂದಿರಿದ್ದರು. ಅವರಲ್ಲಿ ಮೊದಲನೆಯವನಿಗೆ ಮದುವೆಯಾಯಿತು; ಆದರೆ ಅವನು ಮಕ್ಕಳಿಲ್ಲದೆ ಮೃತನಾದ.
30 : ಅವನ ಹೆಂಡತಿಯನ್ನು ಎರಡನೆಯವನು,
31 : ಅನಂತರ ಮೂರನೆಯವನು, ತದನಂತರ ಮಿಕ್ಕವರು, ಹೀಗೆ ಏಳು ಮಂದಿಯೂ ಒಬ್ಬರಾದ ಮೇಲೆ ಒಬ್ಬರು ಮದುವೆಯಾಗಿ ಸಂತಾನ ಇಲ್ಲದೆಯೇ ನಿಧನರಾದರು.
32 : ಕಟ್ಟಕಡೆಗೆ ಆ ಮಹಿಳೆಯೂ ಮರಣ ಹೊಂದಿದಳು.
33 : ಹೀಗಿರುವಲ್ಲಿ ಪುನರುತ್ಥಾನದ ದಿನ ಸತ್ತವರೆಲ್ಲರೂ ಜೀವದಿಂದ ಎದ್ದುಬರುವಾಗ, ಆಕೆ ಯಾರ ಪತ್ನಿಯಾಗುವಳು? ಏಳು ಮಂದಿ ಸಹೋದರರೂ ಆಕೆಯನ್ನು ವಿವಾಹ ಆಗಿದ್ದರಲ್ಲವೆ?” ಎಂದರು.
34 : ಅದಕ್ಕೆ ಯೇಸು, “ಈ ಲೋಕದ ಜೀವನದಲ್ಲಿ ಜನರು ಮದುವೆ ಮಾಡಿಕೊಳ್ಳುತ್ತಾರೆ, ಮದುವೆ ಮಾಡಿಕೊಡುತ್ತಾರೆ.
35 : ಆದರೆ ಸತ್ತವರು ಪುನರುತ್ಥಾನ ಹೊಂದಿ ಮರುಲೋಕ ಜೀವನಕ್ಕೆ ಯೋಗ್ಯರಾದಾಗ ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ.
36 : ಅವರು ಅಲ್ಲಿ ದೇವದೂತರಿಗೆ ಸಮಾನರಾಗಿರುವರು; ಅವರು ಎಂದಿಗೂ ಸಾಯುವಂತಿಲ್ಲ; ಪುನರುತ್ಥಾನದ ಫಲ ಆಗಿರುವ ಅವರು ದೇವರ ಮಕ್ಕಳಾಗಿರುವರು.
37 : ಸತ್ತವರು ಪುನರುತ್ಥಾನ ಹೊಂದುವುದನ್ನು ಮೋಶೆಯ ಗ್ರಂಥದಲ್ಲಿ, ಅಂದರೆ ‘ಉರಿಯುವ ಪೊದೆ’ಯ ಪ್ರಸ್ತಾಪವಿರುವ ಭಾಗದಲ್ಲಿ ಸ್ಪಷ್ಟಪಡಿಸಲಾಗಿದೆ. ಅಲ್ಲಿ ಸರ್ವೇಶ್ವರನನ್ನು, ‘ಅಬ್ರಹಾಮನ ದೇವರು, ಇಸಾಕನ ದೇವರು, ಯಕೋಬನ ದೇವರು ಆಗಿದ್ದಾರೆ’ ಎಂದು ಹೇಳಲಾಗಿದೆ.
38 : “ಹೀಗಿರುವಲ್ಲಿ ದೇವರು ಜೀವಂತರ ದೇವರೇ ಹೊರತು ಮೃತರ ದೇವರಲ್ಲ; ಅವರ ದೃಷ್ಟಿಯಲ್ಲಿ ಸರ್ವರೂ ಜೀವಂತರು,” ಎಂದರು.
39 : ಇದನ್ನು ಕೇಳಿದ ಕೆಲವು ಧರ್ಮಶಾಸ್ತ್ರಿಗಳು, “ಬೋಧಕರೇ, ಚೆನ್ನಾಗಿ ಹೇಳಿದಿರಿ,” ಎಂದರು.
40 : ಮುಂದೆ ಯಾವ ಪ್ರಶ್ನೆ ಕೇಳುವುದಕ್ಕೂ ಅವರಾರು ಧೈರ್ಯಗೊಳ್ಳಲಿಲ್ಲ.
41 : ಬಳಿಕ ಯೇಸುಸ್ವಾಮಿ, “ಅಭಿಷಿಕ್ತನಾದ ಲೋಕೋದ್ಧಾರಕನನ್ನು ‘ದಾವೀದನ ಪುತ್ರ,” ಎಂದು ಕರೆಯುತ್ತಾರಲ್ಲಾ, ಅದು ಹೇಗಾದೀತು? ಕೀರ್ತನಾಗ್ರಂಥದಲ್ಲಿ ಸ್ವತಃ ದಾವೀದನೇ ಹೀಗೆ ಹೇಳಿದ್ದಾನೆ:
42 : “ನಿನ್ನ ಶತ್ರುಗಳನ್ನು ನಾನು
ನಿನ್ನ ಪಾದಪೀಠವಾಗಿ ಮಾಡುವ ತನಕ
ನನ್ನ ಬಲಗಡೆಯಲ್ಲಿ ಆಸೀನನಾಗಿರು
ಎಂದು “ನನ್ನ ಪ್ರಭುವಿಗೆ’
ಸರ್ವೇಶ್ವರ ಹೇಳಿದ್ದಾರೆ.”
43 : “ನಿನ್ನ ಶತ್ರುಗಳನ್ನು ನಾನು
ನಿನ್ನ ಪಾದಪೀಠವಾಗಿ ಮಾಡುವ ತನಕ
ನನ್ನ ಬಲಗಡೆಯಲ್ಲಿ ಆಸೀನನಾಗಿರು
ಎಂದು “ನನ್ನ ಪ್ರಭುವಿಗೆ’
ಸರ್ವೇಶ್ವರ ಹೇಳಿದ್ದಾರೆ.”
44 : ಹೀಗೆ ದಾವೀದನೇ ಆತನನ್ನು, ‘ನನ್ನ ಪ್ರಭು,’ ಎಂದು ಕರೆದಿರುವಲ್ಲಿ ಆತನು ದಾವೀದನ ಪುತ್ರನು ಆಗಿರುವುದು ಹೇಗೆ?” ಎಂದು ಪ್ರಶ್ನಿಸಿದರು.
45 : ಜನರೆಲ್ಲರು ಕಿವಿಗೊಟ್ಟು ಕೇಳುತ್ತಿದ್ದಂತೆ ಯೇಸುಸ್ವಾಮಿ ತಮ್ಮ ಶಿಷ್ಯರನ್ನು ನೋಡಿ, “ಧರ್ಮಶಾಸ್ತ್ರಿಗಳ ಬಗ್ಗೆ ಎಚ್ಚರಿಕೆಯಿಂದಿರಿ! ಅವರು ನಿಲುವಂಗಿಗಳನ್ನು ಧರಿಸಿಕೊಂಡು ತಿರುಗಾಡುತ್ತಾರೆ; ಪೇಟೆಬೀದಿಗಳಲ್ಲಿ ತಮಗೆ ವಂದನೋಪಚಾರ ಸಲ್ಲಬೇಕೆಂದು ಆಶಿಸುತ್ತಾರೆ; ಪ್ರಾರ್ಥನಾ ಮಂದಿರಗಳಲ್ಲಿ ಉನ್ನತ ಆಸನಗಳನ್ನೂ ಔತಣಕೂಟಗಳಲ್ಲಿ ಶ್ರೇಷ್ಠ ಸ್ಥಾನಮಾನಗಳನ್ನೂ ಅಪೇಕ್ಷಿಸುತ್ತಾರೆ.
46 : ಜನರೆಲ್ಲರು ಕಿವಿಗೊಟ್ಟು ಕೇಳುತ್ತಿದ್ದಂತೆ ಯೇಸುಸ್ವಾಮಿ ತಮ್ಮ ಶಿಷ್ಯರನ್ನು ನೋಡಿ, “ಧರ್ಮಶಾಸ್ತ್ರಿಗಳ ಬಗ್ಗೆ ಎಚ್ಚರಿಕೆಯಿಂದಿರಿ! ಅವರು ನಿಲುವಂಗಿಗಳನ್ನು ಧರಿಸಿಕೊಂಡು ತಿರುಗಾಡುತ್ತಾರೆ; ಪೇಟೆಬೀದಿಗಳಲ್ಲಿ ತಮಗೆ ವಂದನೋಪಚಾರ ಸಲ್ಲಬೇಕೆಂದು ಆಶಿಸುತ್ತಾರೆ; ಪ್ರಾರ್ಥನಾ ಮಂದಿರಗಳಲ್ಲಿ ಉನ್ನತ ಆಸನಗಳನ್ನೂ ಔತಣಕೂಟಗಳಲ್ಲಿ ಶ್ರೇಷ್ಠ ಸ್ಥಾನಮಾನಗಳನ್ನೂ ಅಪೇಕ್ಷಿಸುತ್ತಾರೆ.
47 : ವಿಧವೆಯರ ಮನೆಮಾರುಗಳನ್ನು ದೋಚಿಕೊಳ್ಳುವ ಈ ಜನ ನಟನೆಗಾಗಿ ಜಪತಪಗಳನ್ನು ದೀರ್ಘವಾಗಿ ಮಾಡುತ್ತಾರೆ. ಇವರನ್ನು ದೇವರು ಬಹಳ ಕಠಿಣವಾದ ದಂಡನೆಗೆ ಗುರಿಪಡಿಸುವರು,” ಎಂದರು.