1 : ಆ ಕಾಲದಲ್ಲಿ ಚಕ್ರವರ್ತಿ ಔಗುಸ್ತನು ತನ್ನ ಸಾಮ್ರಾಜ್ಯದಲ್ಲೆಲ್ಲಾ ಜನಗಣತಿಯಾಗಬೇಕೆಂದು ಆಜ್ಞೆ ಹೊರಡಿಸಿದನು.
2 : ಮೊಟ್ಟ ಮೊದಲನೆಯ ಆ ಜನಗಣತಿ, ಕುರೇನ್ಯನು ಸಿರಿಯ ನಾಡಿಗೆ ರಾಜ್ಯಪಾಲನಾಗಿದ್ದಾಗ
3 : ಆಗ ಎಲ್ಲರೂ ತಮ್ಮ ಹೆಸರನ್ನು ದಾಖಲೆ ಮಾಡಿಸಿಕೊಳ್ಳಲು ತಮ್ಮ ತಮ್ಮ ಊರುಗಳಿಗೆ ಹೊರಟರು.
4 : ಜೋಸೆಫನು ದಾವೀದನ ಮನೆತನದವನು ಹಾಗೂ ಗೋತ್ರದವನು. ಆದುದರಿಂದ ಅವನೂ ಗಲಿಲೇಯ ಪ್ರಾಂತ್ಯದ ನಜರೇತ್ ಎಂಬ ಊರಿನಿಂದ ಹೊರಟು ಜುದೇಯನಾಡಿನ ಬೆತ್ಲೆಹೇಮೆಂಬ ದಾವೀದನ ಊರಿಗೆ ಹೋದನು.
5 : ಆತನ ಸಂಗಡ ಆತನಿಗೆ ನಿಶ್ಚಿತಾರ್ಥಳಾಗಿದ್ದ ಹಾಗೂ ಪೂರ್ಣ ಗರ್ಭವತಿಯಾಗಿದ್ದ ಮರಿಯಳು ಸಹ ಹೋದಳು.
6 : ಹೀಗೆ ಅವರು ಬೆತ್ಲೆಹೇಮಿನಲ್ಲಿ ಇದ್ದಾಗ, ಮರಿಯಳಿಗೆ ಪ್ರಸವಕಾಲ ಸವಿೂಪಿಸಿತು.
7 : ಆಕೆ ಚೊಚ್ಚಲು ಮಗನಿಗೆ ಜನ್ಮವಿತ್ತು, ಇದ್ದ ಬಟ್ಟೆಯಲ್ಲೇ ಸುತ್ತಿ, ಅದನ್ನು ಗೋದಲಿಯಲ್ಲಿ ಮಲಗಿಸಿದಳು. ಕಾರಣ-ಛತ್ರದಲ್ಲಿ ಅವರಿಗೆ ಸ್ಥಳ ಸಿಗಲಿಲ್ಲ.
ದೇವದೂತರು ಕುರುಬರಿಗೆ ತಂದ ಸಂದೇಶ
8 : ಅದೇ ನಾಡಿನಲ್ಲಿ ಕೆಲವು ಕುರುಬರು ಹೊಲಗಳಲ್ಲಿದ್ದುಕೊಂಡು ರಾತ್ರಿಯಲ್ಲಿ ಕುರಿಮಂದೆಗಳನ್ನು ಕಾಯುತ್ತಿದ್ದರು.
9 : ಇದ್ದಕ್ಕಿದ್ದಂತೆ ದೇವದೂತನೊಬ್ಬನು ಅವರೆದುರಿಗೆ ಪ್ರತ್ಯಕ್ಷ ಆಗಲು ಸರ್ವೇಶ್ವರನ ಪ್ರಭೆ ಅವರ ಸುತ್ತಲೂ ಪ್ರಕಾಶಿಸಿತು. ಅವರು ಬಹಳವಾಗಿ ಹೆದರಿದರು.
10 : ಆ ದೂತನು ಅವರಿಗೆ, “ಭಯಪಡಬೇಡಿ, ಇಗೋ, ಜನರೆಲ್ಲರಿಗೂ ಪರಮಾನಂದವನ್ನು ತರುವ ಶುಭಸಂದೇಶವನ್ನು ನಿಮಗೆ ತಿಳಿಸುತ್ತೇನೆ.
11 : ಅದೇನೆಂದರೆ, ಇಂದೇ ದಾವೀದನ ಊರಿನಲ್ಲಿ ನಿಮಗೋಸ್ಕರ ಲೋಕೋದ್ಧಾರಕ ಜನಿಸಿದ್ದಾರೆ. ಅವರೇ ಪ್ರಭು ಕ್ರಿಸ್ತ.
12 : ಇಗೋ, ನಿಮಗೊಂದು ಸೂಚನೆ - ಆ ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಗೋದಲಿಯೊಂದರಲ್ಲಿ ಮಲಗಿಸಿರುವುದನ್ನು ಕಾಣುವಿರಿ,” ಎಂದನು.
13 : ತಕ್ಷಣವೇ ಆ ದೂತನ ಸಂಗಡ ಸ್ವರ್ಗದ ದೂತಪರಿವಾರವೊಂದು ಕಾಣಿಸಿಕೊಂಡಿತು.
14 : “ಮಹೋನ್ನತದಲ್ಲಿ ದೇವರಿಗೆ ಮಹಿಮೆ; ಭೂಲೋಕದಲ್ಲಿ ದೇವರೊಲಿದ ಮಾನವರಿಗೆ ಶಾಂತಿ ಸಮಾಧಾನ,” ಎಂದು ಸರ್ವೇಶ್ವರನ ಸ್ತುತಿ ಮಾಡಿತು.
15 : ದೇವದೂತರು ಸ್ವರ್ಗಕ್ಕೆ ಹಿಂದಿರುಗಿದ ಮೇಲೆ ಕುರುಬರು, ‘ಬನ್ನಿ, ಸರ್ವೇಶ್ವರ ನಮಗೆ ತಿಳಿಸಿದ ಘಟನೆಯನ್ನು ನೋಡಲು ಈಗಲೇ ಬೆತ್ಲೆಹೇಮಿಗೆ ಹೋಗೋಣ,’ ಎಂದು ಒಬ್ಬರಿಗೆ ಒಬ್ಬರು ಹೇಳಿಕೊಂಡರು.
16 : ಅಲ್ಲಿಂದ ತ್ವರೆಯಾಗಿ ಹೋಗಿ, ಮರಿಯಳನ್ನೂ ಜೋಸೆಫನನ್ನೂ ಗೋದಲಿಯಲ್ಲಿ ಮಲಗಿದ್ದ ಶಿಶುವನ್ನೂ ಕಂಡರು.
17 : ಕಂಡಮೇಲೆ ಆ ಮಗುವಿನ ವಿಷಯವಾಗಿ ದೂತನು ತಮಗೆ ಹೇಳಿದ್ದನ್ನೆಲ್ಲ ಅವರಿಗೆ ತಿಳಿಯಪಡಿಸಿದರು.
18 : ಕುರುಬರು ಹೇಳಿದ ವಿಷಯವನ್ನು ಕೇಳಿದವರೆಲ್ಲರೂ ಆಶ್ಚರ್ಯಪಟ್ಟರು.
19 : ಮರಿಯಳಾದರೋ ಈ ವಿಷಯಗಳನ್ನೆಲ್ಲಾ ಮನಸ್ಸಿನಲ್ಲಿಯೇ ಇಟ್ಟುಕೊಂಡು ಆಲೋಚಿಸುತ್ತಾ ಬಂದಳು.
20 : ಇತ್ತ, ಕುರುಬರು ತಾವು ಕೇಳಿದ್ದನ್ನು ನೆನೆಯುತ್ತಾ, ದೇವರ ಮಹಿಮೆಯನ್ನು ಸಾರುತ್ತಾ, ಕೊಂಡಾಡುತ್ತಾ ಹಿಂದಿರುಗಿದರು. ದೇವದೂತನು ಅವರಿಗೆ ತಿಳಿಸಿದಂತೆ ಎಲ್ಲವೂ ಸಂಭವಿಸಿತ್ತು.
ಶಿಶು ಯೇಸುವಿನ ನಾಮಕರಣ
21 : ಎಂಟನೆಯ ದಿನ ಶಿಶುವಿಗೆ ಸುನ್ನತಿ ಮಾಡಬೇಕಾಗಿದ್ದ ಸಂದರ್ಭದಲ್ಲಿ ಅದಕ್ಕೆ ‘ಯೇಸು’ ಎಂಬ ಹೆಸರನ್ನಿಟ್ಟು ನಾಮಕರಣ ಮಾಡಿದರು. ಈ ಹೆಸರನ್ನು ಮರಿಯಳು ಗರ್ಭಿಣಿಯಾಗುವುದಕ್ಕೆ ಮುಂಚೆಯೇ ದೂತನು ಸೂಚಿಸಿದ್ದನು.
ಯೇಸುಬಾಲನ ಸಮರ್ಪಣೆ
22 : ಮೋಶೆಯ ನಿಯಮದ ಪ್ರಕಾರ ಸೂತಕ ದಿನಗಳು ಮುಗಿದು ಶುದ್ಧೀಕರಣ ದಿನ ಬಂದಾಗ, ತಂದೆತಾಯಿಗಳು ಆ ಮಗುವನ್ನು ಎತ್ತಿಕೊಂಡು ಜೆರುಸಲೇಮಿಗೆ ಹೋದರು.
23 : ಏಕೆಂದರೆ, ‘ಮೊದಲು ಜನಿಸಿದ ಪ್ರತಿಯೊಂದು ಗಂಡು ಮಗುವನ್ನು ಸರ್ವೇಶ್ವರನಿಗೆ ಸಮರ್ಪಿಸಬೇಕಾಗಿತ್ತು.
24 : ಅಲ್ಲದೆ, ಧರ್ಮಶಾಸ್ತ್ರದಲ್ಲೇ ಉಲ್ಲೇಖಿಸಿರುವಂತೆ ಒಂದು ಜೋಡಿ ಬೆಳವಹಕ್ಕಿಗಳನ್ನಾಗಲಿ, ಎರಡು ಪಾರಿವಾಳದ ಮರಿಗಳನ್ನಾಗಲಿ, ಬಲಿಯನ್ನಾಗಿ ಅರ್ಪಿಸಬೇಕಾಗಿತ್ತು.
25 : ಆಗ ಜೆರುಸಲೇಮಿನಲ್ಲಿ ಸಿಮೆಯೋನನೆಂಬ ಒಬ್ಬನು ವಾಸವಾಗಿದ್ದನು. ಸತ್ಪುರುಷನೂ ದೈವಭಕ್ತನೂ ಆದ ಇವನು, ಇಸ್ರಯೇಲ್ ಜನತೆಯ ಉದ್ಧಾರಕ ಯಾವಾಗ ಬರುವನೋ ಎಂದು ನಿರೀಕ್ಷಿಸುತ್ತಾ ಇದ್ದನು. ಪವಿತ್ರಾತ್ಮ ಇವನಲ್ಲಿ ನೆಲೆಸಿದ್ದರು.
26 : ಸರ್ವೇಶ್ವರ ಕಳುಹಿಸಲಿರುವ ಅಭಿಷಿಕ್ತನಾದ ಲೋಕೋದ್ಧಾರಕನ ದರ್ಶನವಾಗುವವರೆಗೆ ತನಗೆ ಸಾವಿಲ್ಲವೆಂದು ಪವಿತ್ರಾತ್ಮರಿಂದಲೇ ಆಶ್ವಾಸನೆ ಪಡೆದಿದ್ದನು.
27 : ಆ ಪವಿತ್ರಾತ್ಮರಿಂದ ಪ್ರೇರಿತನಾಗಿ ಅವನು ಮಹಾದೇವಾಲಯಕ್ಕೆ ಬಂದನು. ಧರ್ಮಶಾಸ್ತ್ರದ ವಿಧಿಯನ್ನು ಪೂರೈಸಲು ಬಾಲಯೇಸುವನ್ನು ತಂದೆತಾಯಿಗಳು ದೇವಾಲಯಕ್ಕೆ ತಂದಾಗ,
28 : ಸಿಮೆಯೋನನು ಆ ಮಗುವನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ದೇವರನ್ನು ಹೀಗೆಂದು ಸ್ತುತಿಸಿದನು:
29 : “ನಿನ್ನ ಮಾತು ಸರ್ವೇಶ್ವರಾ, ನೆರವೇರಿತಿಂದು;
ಇನ್ನು ತೆರಳಬಿಡು ಶಾಂತಿಯಿಂದ ನಿನ್ನ
ದಾಸನಾದ ಎನ್ನನು.
30 : ನೀನಿತ್ತ ಉದ್ದಾರಕನನು ನಾ ಕಂಡೆ ಕಣ್ಣಾರೆ
31 : ಜನರೆಲ್ಲರ ಸಮ್ಮುಖದಲ್ಲಿ ನೀನೀತನನು
ಪ್ರತ್ಯಕ್ಷ ಮಾಡಿರುವೆ.
32 : ಈತ ಅನ್ಯ ಜನರನ್ನು ಬೆಳಗಿಸುವ ಜ್ಯೋತಿ;
ನಿನ್ನ ಜನ ಇಸ್ರಯೇಲರಿಗೆ
ತರುವನು ಕೀರ್ತಿ.”
33 : ಮಗುವಿನ ವಿಷಯವಾಗಿ ಹೇಳಿದ ಈ ಮಾತುಗಳನ್ನು ಕೇಳಿ ತಂದೆ ತಾಯಿಗಳು ಆಶ್ಚರ್ಯಪಟ್ಟರು.
34 : ಅವರನ್ನು ಸಿಮೆಯೋನನು ಆಶೀರ್ವದಿಸಿದನು. ತಾಯಿ ಮರಿಯಳಿಗೆ, “ಇಗೋ, ಈ ಮಗು ಇಸ್ರಯೇಲರಲ್ಲಿ ಅನೇಕರ ಉನ್ನತಿಗೂ ಅನೇಕರ ಅವನತಿಗೂ ಕಾರಣನಾಗುವನು. ಅನೇಕರು ಪ್ರತಿಭಟಿಸುವ ದೈವಸಂಕೇತವಾಗುವನು. ಇದರಿಂದ ಅನೇಕರ ಹೃದಯದಾಳದ ಭಾವನೆಗಳು ಬಯಲಾಗುವುವು.
35 : (ನಿನ್ನ ವಿಷಯದಲ್ಲಿ ಹೇಳುವುದಾದರೆ, ದುಃಖವೆಂಬ ಅಲಗೊಂದು ನಿನ್ನ ಅಂತರಂಗವನ್ನು ಸೀಳುವುದು,)” ಎಂದು ಹೇಳಿದನು.
36 : ಇದಲ್ಲದೆ ಅಲ್ಲಿ ಅಶೇರನ ವಂಶಕ್ಕೆ ಸೇರಿದ ಘನುವೇಲನ ಮಗಳಾದ ಅನ್ನಳೆಂಬ ಪ್ರವಾದಿನಿಯಿದ್ದಳು. ಅವಳು ಮುದಿಪ್ರಾಯದವಳು, ಮದುವೆಯಾಗಿ ಏಳು ವರ್ಷ ಮಾತ್ರ ಗಂಡನೊಡನೆ ಬಾಳಿ ವಿಧವೆಯಾದವಳು.
37 : ಅವಳಿಗೆ ಸುಮಾರು ಎಂಭತ್ತನಾಲ್ಕು ವರ್ಷ ವಯಸ್ಸು. ಮಹಾ ದೇವಾಲಯವನ್ನು ಬಿಟ್ಟು ಅವಳು ಎಲ್ಲಿಗೂ ಹೋಗುತ್ತಿರಲಿಲ್ಲ; ಹಗಲಿರುಳು ಉಪವಾಸ ಪ್ರಾರ್ಥನೆಗಳಿಂದ ದೇವಾರಾಧನೆಯಲ್ಲಿ ನಿರತಳಾಗಿದ್ದಳು.
38 : ಅವಳು ಅದೇ ಸಂದರ್ಭದಲ್ಲಿ ಅಲ್ಲಿಗೆ ಬಂದು, ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸಿ, ಜೆರುಸಲೇಮಿನ ವಿಮೋಚನೆಯನ್ನು ಎದುರು ನೋಡುತ್ತಿದ್ದ ಅಲ್ಲಿಯವರಿಗೆಲ್ಲಾ ಆ ಶಿಶುವಿನ ವಿಷಯವಾಗಿ ಹೇಳತೊಡಗಿದಳು.
ಮರಳಿ ನಜರೇತಿಗೆ
39 : ಸರ್ವೇಶ್ವರನ ಧರ್ಮಶಾಸ್ತ್ರಕ್ಕನುಸಾರ ಎಲ್ಲ ವಿಧಿಗಳನ್ನು ನೆರವೇರಿಸಿದ ಮೇಲೆ ಜೋಸೆಫ್ ಮತ್ತು ಮರಿಯಳು ಗಲಿಲೇಯ ಪ್ರಾಂತ್ಯದಲ್ಲಿದ್ದ ತಮ್ಮ ಸ್ವಗ್ರಾಮವಾದ ನಜರೇತಿಗೆ ಹಿಂದಿರುಗಿದರು.
40 : ಬಾಲಕ ಯೇಸು ಬೆಳೆದಂತೆ ಶಕ್ತರೂ ಜ್ಞಾನ ಸಂಪೂರ್ಣರೂ ಆದರು. (ಇದಲ್ಲದೆ) ದೈವಾನುಗ್ರಹ ಅವರ ಮೇಲಿತ್ತು.
ಯೇಸು ಹನ್ನೆರಡನೇ ವರ್ಷದಲ್ಲಿ
41 : ಯೇಸುಸ್ವಾಮಿಯ ತಂದೆತಾಯಿಗಳು ಪ್ರತಿವರ್ಷವೂ ಪಾಸ್ಕಹಬ್ಬಕ್ಕೆ ಜೆರುಸಲೇಮಿಗೆ ಹೋಗುತ್ತಿದ್ದರು.
42 : ಯೇಸುವಿಗೆ ಹನ್ನೆರಡು ವರ್ಷವಾದಾಗ ವಾಡಿಕೆಯ ಪ್ರಕಾರ ಹಬ್ಬಕ್ಕೆ ಹೋದರು.
42 : ಯೇಸುವಿಗೆ ಹನ್ನೆರಡು ವರ್ಷವಾದಾಗ ವಾಡಿಕೆಯ ಪ್ರಕಾರ ಹಬ್ಬಕ್ಕೆ ಹೋದರು.
43 : ಹಬ್ಬ ಮುಗಿಸಿಕೊಂಡು ಅವರು ಹಿಂದಿರುಗಿ ಬರುವಾಗ ಬಾಲಕಯೇಸು ಜೆರುಸಲೇಮಿನಲ್ಲಿಯೇ ಉಳಿದುಬಿಟ್ಟರು.
44 : ಇದು ತಂದೆತಾಯಿಗಳಿಗೆ ತಿಳಿಯದು. ಮಗನು ಯಾತ್ರಿಕರ ಗುಂಪಿನಲ್ಲಿ ಬರುತ್ತಿರಬಹುದೆಂದು ಭಾವಿಸಿ ಒಂದು ದಿನದ ಪ್ರಯಾಣ ಬಂದುಬಿಟ್ಟಿದ್ದರು. ನಂತರ ಮಗನನ್ನು ಕಾಣದೆ ತಮ್ಮ ಬಂಧುಬಳಗದವರಲ್ಲೂ ಪರಿಚಿತರಲ್ಲೂ ಹುಡುಕಾಡಿದರು.
45 : ಅಲ್ಲೆಲ್ಲೂ ಕಾಣದೆ ಅವರನ್ನು ಹುಡುಕಿಕೊಂಡು ಜೆರುಸಲೇಮಿಗೆ ಮರಳಿ ಬಂದರು.
46 : ಮೂರು ದಿನಗಳ ಮೇಲೆ ಮಹಾದೇವಾಲಯದಲ್ಲಿ ಅವರನ್ನು ಕಂಡಾಗ ಅಲ್ಲಿ ಯೇಸು, ಬೋಧಕರ ಮಧ್ಯೆ ಕುಳಿತುಕೊಂಡು ಅವರ ಉಪದೇಶವನ್ನು ಆಲಿಸುತ್ತಾ ಅವರಿಗೆ ಪ್ರಶ್ನೆಹಾಕುತ್ತಾ ಇದ್ದರು.
47 : ಬಾಲಕನ ಪ್ರಶ್ನೋತ್ತರಗಳನ್ನು ಕೇಳುತ್ತಿದ್ದ ಎಲ್ಲರೂ ಆತನ ಜ್ಞಾನವನ್ನು ಕಂಡು ಬೆರಗಾದರು.
48 : ತಂದೆತಾಯಿಗಳು ಮಗನನ್ನು ಅಲ್ಲಿ ಕಂಡು ವಿಸ್ಮಯಗೊಂಡರು. ಆಗ ತಾಯಿಯು, “ಕಂದಾ, ನಮಗೆ ಏಕೆ ಹೀಗೆ ಮಾಡಿದೆ? ನಿನ್ನ ತಂದೆಯೂ ನಾನೂ ಎಷ್ಟೋ ಕಳವಳಪಟ್ಟು ನಿನ್ನನ್ನು ಹುಡುಕಾಡಿದೆವಲ್ಲಾ,” ಎಂದಳು.
49 : ಅದಕ್ಕೆ ಉತ್ತರವಾಗಿ ಯೇಸು, “ನೀವು ನನ್ನನ್ನು ಹುಡುಕಿದ್ದೇಕೆ? ನಾನು ನನ್ನ ತಂದೆಯ ಆಲಯದಲ್ಲೇ ಇರಬೇಕೆಂದು ನಿಮಗೆ ತಿಳಿಯದೆ ಹೋಯಿತೆ?” ಎಂದರು.
50 : ಆದರೆ ಅವರ ಮಾತು ತಂದೆತಾಯಿಗಳಿಗೆ ಅರ್ಥವಾಗಲಿಲ್ಲ.
51 : ಬಳಿಕ ಯೇಸು ತಂದೆತಾಯಿಗಳೊಡನೆ ನಜರೇತಿಗೆ ಬಂದರು. ಅಲ್ಲಿ ಅವರಿಗೆ ವಿಧೇಯರಾಗಿ ನಡೆದುಕೊಳ್ಳುತ್ತಿದ್ದರು. ಈ ವಿಷಯಗಳನ್ನೆಲ್ಲಾ ತಾಯಿ ಮರಿಯಳು ತನ್ನ ಮನಸ್ಸಿನಲ್ಲಿ ಸಂಗ್ರಹಿಸಿ ಇಟ್ಟುಕೊಂಡಳು.
52 : ಯೇಸು ಬೆಳೆದಂತೆ ಜ್ಞಾನದಲ್ಲಿ ಪ್ರವರ್ಧಿಸುತ್ತಾ ದೇವರಿಗೂ ಮಾನವರಿಗೂ ಅಚ್ಚು ಮೆಚ್ಚಾಗುತ್ತಾ ಬಂದರು.