1 : ಯೇಸುಸ್ವಾಮಿ ಜೆರಿಕೊ ಪಟ್ಟಣವನ್ನು ಪ್ರವೇಶೀಸಿ ಅದರ ಬೀದಿಗಳಲ್ಲಿ ಹಾದು ಹೋಗುತ್ತಿದ್ದರು.
2 : ಅಲ್ಲಿ ಜಕ್ಕಾಯ ಎಂಬವನಿದ್ದನು. ಅವನು ಸುಂಕವಸೂಲಿಯವರ ಮುಖಂಡ ಹಾಗೂ ಧನಾಢ್ಯ.
3 : ಯೇಸು ಯಾರೆಂದು ನೋಡಬೇಕೆಂಬ ಅಪೇಕ್ಷೆ ಅವನದು. ಆದರೆ ಅವನು ಗಿಡ್ಡ ವ್ಯಕ್ತಿ. ಜನಜಂಗುಳಿಯ ಮಧ್ಯೆ ಯೇಸುವನ್ನು ನೋಡಲು ಪ್ರಯತ್ನಿಸಿದರೂ ಅವನಿಂದಾಗಲಿಲ್ಲ.
4 : ಆದಕಾರಣ ಮುಂದಕ್ಕೆ ಓಡಿಹೋಗಿ ಯೇಸು ಬರುತ್ತಿದ್ದ ಆ ಮಾರ್ಗದಲ್ಲಿ ಒಂದು ಆಲದ ಮರವನ್ನು ಕಂಡು ಅದನ್ನು ಹತ್ತಿದನು.
5 : ಯೇಸು ಆ ಸ್ಥಳಕ್ಕೆ ಬಂದು, ತಲೆಯೆತ್ತಿ ನೋಡಿ, “ಜಕ್ಕಾಯಾ, ಒಡನೆ ಇಳಿದು ಬಾ; ಈ ದಿನ ನಿನ್ನ ಮನೆಯಲ್ಲಿ ನಾನು ತಂಗಬೇಕು,” ಎಂದರು.
6 : ಜಕ್ಕಾಯನು ತಕ್ಷಣವೇ ಇಳಿದು ಬಂದು ಯೇಸುವನ್ನು ಸಂತೋಷದಿಂದ ಸ್ವಾಗತಿಸಿದನು.
7 : ಇದನ್ನು ನೋಡಿದವರೆಲ್ಲರು, “ಯೇಸು ಪಾಪಿಷ್ಠನ ಮನೆಗೆ ಅತಿಥಿಯಾಗಿ ಹೋಗುತ್ತಾನಲ್ಲಾ?” ಎಂದು ಗೊಣಗುಟ್ಟಿದರು.
8 : ಜಕ್ಕಾಯನು ನೆರೆದಿದ್ದ ಜನರ ಮುಂದೆ ಎದ್ದುನಿಂತು ಯೇಸುವಿಗೆ, “ಪ್ರಭುವೇ, ನನ್ನ ಆಸ್ತಿಪಾಸ್ತಿಯಲ್ಲಿ ಅರ್ಧಭಾಗವನ್ನು ಬಡಬಗ್ಗರಿಗೆ ಕೊಟ್ಟುಬಿಡುತ್ತೇನೆ. ಯಾರಿಗಾದರೂ ಮೋಸಮಾಡಿ ಅವರಿಂದೇನಾದರೂ ನಾನು ಕಸಿದುಕೊಂಡಿದ್ದರೆ ಅದಕ್ಕೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ,” ಎಂದನು.
9 : ಆಗ ಯೇಸು, “ಇಂದು ಈ ಮನೆ ಉದ್ಧಾರವಾಯಿತು. ಇವನು ಕೂಡ ಅಬ್ರಹಾಮನ ವಂಶಕ್ಕೆ ಸೇರಿದವನಲ್ಲವೆ?
10 : ನರಪುತ್ರನು ಬಂದಿರುವುದು ಪತಿತರನ್ನು ಅರಸಿ ಉದ್ಧರಿಸುವುದಕ್ಕೆ,” ಎಂದು ಹೇಳಿದರು.
ವೃದ್ಧಿಯಾಗದ ವ್ಯವಹಾರ ರದ್ದು
(ಮತ್ತಾ. 25.14-30)
11 : ಯೇಸುಸ್ವಾಮಿ ಈಗ ಜೆರುಸಲೇಮಿಗೆ ಸಮೀಪದಲ್ಲೇ ಇದ್ದರು. ಅವರ ಮಾತುಗಳನ್ನು ಕೇಳುತ್ತಿದ್ದ ಜನರು ದೇವರ ಸಾಮ್ರಾಜ್ಯ ಇದೀಗಲೇ ಪ್ರತ್ಯಕ್ಷವಾಗುವುದೆಂದು ಭಾವಿಸಿದ್ದರು.
12 : ಈ ಕಾರಣ ಯೇಸು ಅವರಿಗೆ ಒಂದು ಸಾಮತಿಯನ್ನು ಹೇಳಿದರು: “ಕುಲೀನನೊಬ್ಬ ರಾಜಪದವಿಯನ್ನು ಗಳಿಸಿಬರಲು ದೂರದ ರಾಜಧಾನಿಗೆ ಹೊರಟ.
13 : ಹೊರಡುವಾಗ ತನ್ನ ಹತ್ತು ಮಂದಿ ಸೇವಕರನ್ನು ಕರೆದು, ಒಬ್ಬೊಬ್ಬನಿಗೂ ಒಂದರಂತೆ ಹತ್ತು ಚಿನ್ನದ ನಾಣ್ಯಗಳನ್ನು ಕೊಟ್ಟು, “ನಾನು ಬರುವತನಕ ವ್ಯಾಪಾರ ಮಾಡಿಕೊಂಡಿರಿ,” ಎಂದು ಹೇಳಿ ಹೋದ.
14 : ಅವನ ನಾಡಿಗರಾದರೋ ಅವನನ್ನು ದ್ವೇಷಿಸುತ್ತಿದ್ದರು. ‘ಇವನು ನಮಗೆ ರಾಜನಾಗುವುದು ಬೇಡ,’ ಎಂದು ತಿಳಿಸಲು ಅವನ ಹಿಂದೆಯೇ ತಮ್ಮ ಪ್ರತಿನಿಧಿಗಳನ್ನು ಕಳುಹಿಸಿದರು.
15 : “ಆದರೂ ಅವನು ರಾಜಪದವಿಯನ್ನು ಪಡೆದು ಹಿಂದಿರುಗಿ ಬಂದ. ತನ್ನಿಂದ ಹಣಪಡೆದ ಸೇವಕರು ವ್ಯಾಪಾರಮಾಡಿ ಎಷ್ಟೆಷ್ಟು ಲಾಭಗಳಿಸಿದ್ದಾರೆಂದು ತಿಳಿದುಕೊಳ್ಳುವುದಕ್ಕಾಗಿ ಅವರನ್ನು ಕೂಡಲೇ ತನ್ನ ಬಳಿಗೆ ಕರೆತರಲು ಆಜ್ಞಾಪಿಸಿದ.
16 : ಮೊದಲನೆಯವನು ಮುಂದೆ ಬಂದು, ‘ಪ್ರಭುವೇ, ನಿಮ್ಮ ಒಂದು ನಾಣ್ಯದಿಂದ ನಾನು ಹತ್ತು ನಾಣ್ಯಗಳನ್ನು ಸಂಪಾದಿಸಿದ್ದೇನೆ,’ ಎಂದ.
17 : ಅದಕ್ಕೆ ಅವನು, “ಭಲಾ, ನೀನು ಒಳ್ಳೆಯ ಸೇವಕ, ಸ್ವಲ್ಪದರಲ್ಲಿ ನೀನು ಪ್ರಾಮಾಣಿಕನಾಗಿದ್ದೆ. ಆದ್ದರಿಂದ ಹತ್ತು ಪಟ್ಟಣಗಳಿಗೆ ಅಧಿಪತಿಯಾಗಿರು’ ಎಂದ.
18 : ಎರಡನೆಯ ಸೇವಕನು ಬಂದು, ‘ಪ್ರಭುವೇ, ನೀವು ಕೊಟ್ಟ ಒಂದು ನಾಣ್ಯದಿಂದ ಐದು ನಾಣ್ಯಗಳನ್ನು ಸಂಪಾದಿಸಿದ್ದೇನೆ,’ ಎಂದ.
19 : ಅದಕ್ಕೆ ರಾಜ, ‘ನೀನು ಐದು ಪಟ್ಟಣಗಳಿಗೆ ಅಧಿಪತಿಯಾಗಿರು,’ ಎಂದ.
20 : “ಬಳಿಕ ಮತ್ತೊಬ್ಬ ಸೇವಕನು ಬಂದು, ‘ಇಗೋ, ಪ್ರಭುವೇ, ನಿಮ್ಮ ಚಿನ್ನದ ನಾಣ್ಯ; ನಿಮಗೆ ಭಯಪಟ್ಟು ಇದನ್ನು ಬಟ್ಟೆಯಲ್ಲಿ ಭದ್ರವಾಗಿ ಕಟ್ಟಿ ಇಟ್ಟಿದ್ದೆ.
21 : ಏಕೆಂದರೆ, ನೀವು ಕಠಿಣ ಮನುಷ್ಯರು; ನೀವು ಕೂಡಿಡದ್ದನ್ನು ಕೊಂಡು ಹೋಗುತ್ತೀರಿ, ಬಿತ್ತದಿದ್ದನ್ನು ಕೊಯಿಲು ಮಾಡುತ್ತೀರಿ,’ ಎಂದ.
21 : ರಾಜ ಅವನನ್ನು ನೋಡಿ, ‘ಎಲಾ ದುಷ್ಟ ಸೇವಕನೇ, ನೀನು ಆಡಿದ ಮಾತಿನಿಂದಲೇ ನಿನಗೆ ತೀರ್ಪುಕೊಡುತ್ತೇನೆ. ನಾನು ಕೂಡಿಡದ್ದನ್ನು ಕೊಂಡುಹೋಗುವ, ಬಿತ್ತದಿದ್ದನ್ನು ಕೊಯಿಲುಮಾಡುವ ಕಠಿಣ ಮನುಷ್ಯನೆಂದು ನಿನಗೆ ತಿಳಿದಿತ್ತು ಅಲ್ಲವೆ?
22 : ರಾಜ ಅವನನ್ನು ನೋಡಿ, ‘ಎಲಾ ದುಷ್ಟ ಸೇವಕನೇ, ನೀನು ಆಡಿದ ಮಾತಿನಿಂದಲೇ ನಿನಗೆ ತೀರ್ಪುಕೊಡುತ್ತೇನೆ. ನಾನು ಕೂಡಿಡದ್ದನ್ನು ಕೊಂಡುಹೋಗುವ, ಬಿತ್ತದಿದ್ದನ್ನು ಕೊಯಿಲುಮಾಡುವ ಕಠಿಣ ಮನುಷ್ಯನೆಂದು ನಿನಗೆ ತಿಳಿದಿತ್ತು ಅಲ್ಲವೆ?
23 : ಹಾಗಾದರೆ ನನ್ನ ಹಣವನ್ನೇಕೆ ಬಡ್ಡಿ ಅಂಗಡಿಯಲ್ಲಿ ಹಾಕಿಡಲಿಲ್ಲ? ನಾನು ಬಂದು ಬಡ್ಡಿಸಮೇತ ನನ್ನ ಅಸಲನ್ನು ತೆಗೆದುಕೊಳ್ಳುತ್ತಿದ್ದೆನಲ್ಲಾ,’ ಎಂದು ಹೇಳಿ
24 : ಪರಿಚಾರಕರಿಗೆ, ‘ಇವನಿಂದ ಆ ಚಿನ್ನದ ನಾಣ್ಯವನ್ನು ಕಿತ್ತು ಹತ್ತು ನಾಣ್ಯಗಳುಳ್ಳವನಿಗೆ ಕೊಡಿ,’ ಎಂದ.
25 : ಅದಕ್ಕವರು, ‘ಪ್ರಭುವೇ, ಅವನಲ್ಲಿ ಈಗಾಗಲೇ ಹತ್ತು ನಾಣ್ಯಗಳಿವೆಯಲ್ಲಾ?’ ಎಂದರು.
26 : ಆಗ ರಾಜ, ‘ಉಳ್ಳ ಪ್ರತಿಯೊಬ್ಬನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ; ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ, ಇದು ನಿಶ್ಚಯ,’ ಎಂದ.
27 : “ಅಲ್ಲದೆ, ‘ನಾನು ತಮಗೆ ರಾಜನಾಗುವುದು ಬೇಡವೆಂದ ನನ್ನ ಶತ್ರುಗಳನ್ನು ಇಲ್ಲಿಗೆ ಎಳೆದು ತಂದು ನನ್ನ ಮುಂದೆಯೇ ಸಂಹರಿಸಿರಿ,’ ಎಂದ.”
ಜಯಘೋಷದೊಂದಿಗೆ ಜೆರುಸಲೇಮಿಗೆ ಪ್ರವೇಶ
(ಮತ್ತಾ. 21.1-11; ಮಾರ್ಕ 11.1-11; ಯೊವಾ. 12.12-19)
28 : ಇದನ್ನೆಲ್ಲಾ ಹೇಳಿ ಆದ ಮೇಲೆ ಯೇಸುಸ್ವಾಮಿ ಅವರೆಲ್ಲರಿಗಿಂತ ಮುಂದಾಗಿ ನಡೆದು ಜೆರುಸಲೇಮಿನತ್ತ ತೆರಳಿದರು.
29 : ಓಲಿವ್ ತೋಪಿನ ಗುಡ್ಡದ ಬಳಿಯಿರುವ ಬೆತ್ಫಗೆ ಮತ್ತು ಬೆಥಾನಿಯ ಎಂಬ ಊರುಗಳನ್ನು ಸವಿೂಪಿಸಿದಾಗ ತಮ್ಮ ಇಬ್ಬರು ಶಿಷ್ಯರನ್ನು ಕರೆದು,
30 : “ಎದುರಿಗೆ ಇರುವ ಆ ಹಳ್ಳಿಗೆ ಹೋಗಿರಿ. ನೀವು ಅದನ್ನು ಪ್ರವೇಶಿಸುವಾಗ ಅಲ್ಲೇ ಕಟ್ಟಿಹಾಕಿರುವ ಹೇಸರಗತ್ತೆಯ ಮರಿಯೊಂದನ್ನು ಕಾಣುವಿರಿ. ಈವರೆಗೆ ಅದರ ಮೇಲೆ ಯಾರೂ ಸವಾರಿಮಾಡಿಲ್ಲ. ಅದನ್ನು ಬಿಚ್ಚಿ ಇಲ್ಲಿಗೆ ತನ್ನಿ.
31 : ಯಾರಾದರೂ ನಿಮ್ಮನ್ನು, ‘ಅದನ್ನೇಕೆ ಬಿಚ್ಚುತ್ತೀರಿ?’ ಎಂದು ಕೇಳಿದರೆ, ‘ಪ್ರಭುವಿಗೆ ಇದು ಬೇಕಾಗಿದೆ’ ಎನ್ನಿರಿ,” ಎಂದು ಹೇಳಿ ಕಳುಹಿಸಿದರು.
32 : ಆ ಶಿಷ್ಯರಿಬ್ಬರೂ ಹೊರಟು ಯೇಸು ತಮಗೆ ಹೇಳಿದ್ದಂತೆಯೇ ಎಲ್ಲವನ್ನೂ ಕಂಡರು.
33 : ಆ ಮರಿ ಹೇಸರಗತ್ತೆಯನ್ನು ಬಿಚ್ಚುತ್ತಿದ್ದಾಗ ಅದರ ಯಜಮಾನ, ‘ಅದನ್ನೇಕೆ ಬಿಚ್ಚುತ್ತೀರಿ?’ ಎಂದು ಕೇಳಿದನು.
34 : ‘ಇದು ಪ್ರಭುವಿಗೆ ಬೇಕಾಗಿದೆ’, ಎಂದು ಶಿಷ್ಯರು ಉತ್ತರಕೊಟ್ಟು, ಅದನ್ನು ಯೇಸುವಿನ ಬಳಿಗೆ ತಂದರು.
35 : ಅನಂತರ ತಮ್ಮ ಮೇಲಂಗಿಗಳನ್ನು ಅದರ ಮೇಲೆ ಹಾಸಿ ಯೇಸುವನ್ನು ಕೂರಿಸಿದರು.
36 : ಅವರು ಮುಂದಕ್ಕೆ ಸಾಗುತ್ತಿದ್ದಂತೆ ಜನರು ತಮ್ಮ ಹೊದಿಕೆಗಳನ್ನು ದಾರಿಯಲ್ಲಿ ಹಾಸಿದರು.
37 : ಯೇಸು ಜೆರುಸಲೇಮನ್ನು ಸವಿೂಪಿಸುತ್ತಾ ಓಲಿವ್ ಗುಡ್ಡದ ಇಳಿಜಾರನ್ನು ಮುಟ್ಟಿದಾಗ ಶಿಷ್ಯಸಮೂಹವೆಲ್ಲವೂ ತಾವು ಕಂಡ ಎಲ್ಲ ಮಹತ್ಕಾರ್ಯಗಳನ್ನು ಕುರಿತು ಹರ್ಷಾವೇಶವಾಗಿ ದೇವರ ಸ್ತುತಿ ಮಾಡುತ್ತಾ -
38 : “ಸರ್ವೇಶ್ವರನ ನಾಮದಲ್ಲಿ ಬರುವ
ಅರಸನಿಗೆ ಜಯಜಯವಾಗಲಿ !
ಶಾಂತಿ ಸ್ವರ್ಗದಲಿ,
ಮಹಿಮೆ ಮಹೋನ್ನತದಲಿ !”
ಎಂದು ಜಯಘೋಷ ಮಾಡುತ್ತಿದ್ದರು.
39 : ಆಗ ಜನಸಮೂಹದಲ್ಲಿದ್ದ ಫರಿಸಾಯರಲ್ಲಿ ಕೆಲವರು, “ಬೋಧಕರೇ, ಸುಮ್ಮನಿರುವಂತೆ ನಿಮ್ಮ ಶಿಷ್ಯರನ್ನು ಗದರಿಸಿರಿ,” ಎಂದರು.
40 : ಅದಕ್ಕೆ ಯೇಸು, “ಇವರು ಸುಮ್ಮನಾದರೆ ಈ ಕಲ್ಲುಗಳೇ ಕೂಗತೊಡಗುವುವು ಎಂಬುದು ನಿಮಗೆ ತಿಳಿದಿರಲಿ,” ಎಂದರು.
ಜೆರುಸಲೇಮಿಗಾಗಿ ಕಂಬನಿ
41 : ಯೇಸುಸ್ವಾಮಿ ಜೆರುಸಲೇಮ್ ಪಟ್ಟಣಕ್ಕೆ ಇನ್ನೂ ಹತ್ತಿರವಾಗಿ ಬಂದು ಅದನ್ನು ನೋಡಿ,
42 : “ಇಂದಾದರೂ ನೀನು ಶಾಂತಿಮಾರ್ಗವನ್ನು ಅರಿತುಕೊಂಡಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು. ಆದರೆ ಅದು ಈಗ ನಿನ್ನ ಕಣ್ಣಿಗೆ ಮರೆಯಾಗಿದೆ.
43 : ಕಾಲವು ಬರುವುದು. ಆಗ ಶತ್ರುಗಳು ನಿನ್ನ ಸುತ್ತಲೂ ಆಳ್ವೇಲಿಯೆಬ್ಬಿಸಿ, ಮುತ್ತಿಗೆ ಹಾಕಿ, ಎಲ್ಲೆಡೆಯೂ ನುಗ್ಗಿ,
44 : ನಿನ್ನನ್ನೂ ನಿನ್ನೊಳಗಿನ ಜನರನ್ನೂ ಧ್ವಂಸಮಾಡುವರು; ನಿನ್ನಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವರು. ಏಕೆಂದರೆ, ದೇವರು ನಿನ್ನನ್ನು ಅರಸಿ ಬಂದ ಕಾಲವನ್ನು ನೀನು ಅರಿತುಕೊಳ್ಳದೆ ಹೋದೆ,” ಎಂದು ಅದರ ಸಲುವಾಗಿ ಕಣ್ಣೀರಿಟ್ಟರು.
ಕರ್ತರ ಆಲಯ ಕಳ್ಳಕಾಕರ ಗುಹೆಯಲ್ಲ !
(ಮತ್ತಾ. 21.12-17; ಮಾರ್ಕ 11.15-19; ಯೊವಾ. 2.13-22)
45 : ಅನಂತರ ಯೇಸುಸ್ವಾಮಿ ಮಹಾದೇವಾಲಯವನ್ನು ಪ್ರವೇಶಿಸಿದರು. ಅಲ್ಲಿ ಮಾರಾಟ ಮಾಡುತ್ತಿದ್ದವರನ್ನು ಹೊರಗಟ್ಟುತ್ತಾ,
46 : “ ‘ಪ್ರಾರ್ಥನಾಲಯವೀ ನನ್ನ ಆಲಯ!’ ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ; ನೀವಾದರೋ ಇದನ್ನು ಕಳ್ಳಕಾಕರ ಗುಹೆಯನ್ನಾಗಿ ಮಾರ್ಪಡಿಸಿದ್ದೀರಿ,” ಎಂದರು.
47 : ಪ್ರತಿನಿತ್ಯ ಯೇಸು ದೇವಾಲಯದಲ್ಲಿ ಬೋಧಿಸುತ್ತಿದ್ದರು. ಇತ್ತ ಮುಖ್ಯ ಯಾಜಕರೂ ಧರ್ಮಶಾಸ್ತ್ರಿಗಳೂ ಪ್ರಜಾಪ್ರಮುಖರೂ ಅವರನ್ನು ಕೊಲೆಮಾಡಲು ಹವಣಿಸುತ್ತಿದ್ದರು.
48 : ಆದರೆ ಅವರಿಂದ ಏನೂ ಮಾಡಲಾಗಲಿಲ್ಲ. ಏಕೆಂದರೆ, ಜನರೆಲ್ಲರೂ ಯೇಸುವಿನ ಬೋಧನೆಗೆ ಮಾರುಹೋಗಿದ್ದರು. ಅವರ ಬಾಯಿಂದ ಬಂದ ಒಂದೊಂದು ಮಾತನ್ನೂ ಕೇಳಲು ಆತುರರಾಗಿದ್ದರು.
ಯೇಸುವಿನ ಅಧಿಕಾರ ದೈವದತ್ತವೆ?
(ಮತ್ತಾ. 21.23-27; ಮಾರ್ಕ 11.27-33)