Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಲೂಕ


1 : ಅಂದು ಸಬ್ಬತ್‍ದಿನ. ಯೇಸುಸ್ವಾಮಿ ಒಬ್ಬ ಪ್ರಮುಖ ಫರಿಸಾಯನ ಮನೆಗೆ ಊಟಕ್ಕೆ ಹೋದರು. ಎಲ್ಲರ ಕಣ್ಣು ಅವರ ಮೇಲಿತ್ತು.
2 : ಅಲ್ಲೇ ಅವರ ಮುಂದೆ ಜಲೋದರ ರೋಗಿಯೊಬ್ಬನು ಇದ್ದನು.
3 : ಸಬ್ಬತ್‍ದಿನ ಗುಣಪಡಿಸುವುದು ಸರಿಯೋ ತಪ್ಪೋ?” ಎಂದು ಯೇಸು ಫರಿಸಾಯರನ್ನೂ ಶಾಸ್ತ್ರಜ್ಞರನ್ನೂ ಕೇಳಿದರು.
4 : ಅದಕ್ಕವರು ಮೌನವಾಗಿದ್ದರು. ಯೇಸು ರೋಗಿಯ ಕೈ ಹಿಡಿದು ಗುಣಪಡಿಸಿ ಕಳಿಸಿಬಿಟ್ಟರು.
5 : ಅನಂತರ, “ನಿಮ್ಮಲ್ಲಿ ಒಬ್ಬನ ಮಗನಾಗಲಿ, ಎತ್ತಾಗಲಿ ಬಾವಿಯಲ್ಲಿ ಬಿದ್ದರೆ, ಸಬ್ಬತ್‍ದಿನವಾಗಿದ್ದರೂ ನೀವು ತಡಮಾಡದೆ ಮೇಲಕ್ಕೆ ಎತ್ತುವುದಿಲ್ಲವೆ?” ಎಂದು ಕೇಳಿದರು.
6 : ಅದಕ್ಕೂ ಅವರು ನಿರುತ್ತರರಾದರು. ದೀನ ಸ್ಥಾನಮಾನ
7 : ಅಲ್ಲದೆ, ಅಲ್ಲಿಗೆ ಬಂದಿದ್ದ ಅತಿಥಿಗಳು ಪಂಕ್ತಿಯಲ್ಲಿ ಉತ್ತಮ ಸ್ಥಾನಗಳನ್ನು ಆರಿಸಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಯೇಸು ಸಾಮತಿರೂಪದಲ್ಲಿ ಹೀಗೆಂದರು:
8 : “ಮದುವೆಯ ಔತಣಕ್ಕೆ ನಿನ್ನನ್ನು ಯಾರಾದರೂ ಆಹ್ವಾನಿಸಿದಾಗ ಪ್ರಧಾನ ಆಸನದಲ್ಲಿ ಹೋಗಿ ಕುಳಿತುಕೊಳ್ಳಬೇಡ. ಏಕೆಂದರೆ, ನಿನಗಿಂತ ಗೌರವಸ್ಥನನ್ನು ಆಹ್ವಾನಿಸಿರಬಹುದು.
9 : ನಿಮ್ಮಿಬ್ಬರನ್ನು ಕರೆದಾತ ನಿನ್ನ ಹತ್ತಿರ ಬಂದು, ‘ಇವನಿಗೆ ನಿನ್ನ ಸ್ಥಳವನ್ನು ಬಿಟ್ಟುಕೊಡು,’ ಎನ್ನಬಹುದು. ಆಗ ನೀನು ನಾಚಿಕೆಪಟ್ಟುಕೊಂಡು ಕಡೆಯ ಸ್ಥಾನದಲ್ಲಿ ಹೋಗಿ ಕುಳಿತುಕೊಳ್ಳಬೇಕಾಗಬಹುದು.
10 : ಅದಕ್ಕೆ ಬದಲಾಗಿ ನಿನ್ನನ್ನು ಆಹ್ವಾನಿಸಿದಾಗ ಕಡೆಯ ಸ್ಥಳದಲ್ಲಿ ಹೋಗಿ ಕುಳಿತುಕೋ. ಕರೆದವನು ಬಂದು, ‘ಗೆಳೆಯಾ, ಮೇಲೆ ಬಾ’ ಎಂದು ಹೇಳುವನು. ಆಗ ಜೊತೆಗೆ ಕುಳಿತಿರುವ ಅತಿಥಿಗಳೆಲ್ಲರ ಮುಂದೆ ನಿನಗೆ ಗೌರವ ಸಿಗುವುದು.
11 : ಅಂತೆಯೇ, ತನ್ನನ್ನು ತಾನೇ ಮೇಲಕ್ಕೆ ಏರಿಸಿಕೊಳ್ಳುವವನನ್ನು ದೇವರು ಕೆಳಗಿಳಿಸುವರು; ತನ್ನನ್ನು ತಾನೇ ತಗ್ಗಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು,” ಎಂದರು. ಧನ್ಯವಾದ ದಾನ
12 : ಅನಂತರ ತಮ್ಮನ್ನು ಊಟಕ್ಕೆ ಆಮಂತ್ರಿಸಿದವನನ್ನು ನೋಡಿ ಯೇಸುಸ್ವಾಮಿ, “ನೀನು ಊಟ ಅಥವಾ ಔತಣವನ್ನು ಏರ್ಪಡಿಸುವಾಗ ನಿನ್ನ ಸ್ನೇಹಿತರನ್ನಾಗಲಿ, ಸೋದರರನ್ನಾಗಲಿ, ಬಂಧು ಬಳಗದವರನ್ನಾಗಲಿ, ಧನಿಕರಾದ ನೆರೆಯವರನ್ನಾಗಲಿ ಕರೆಯಬೇಡ. ಏಕೆಂದರೆ, ಅವರು ನಿನ್ನನ್ನು ಪ್ರತಿಯಾಗಿ ಕರೆದು ಮುಯ್ಯಿ ತೀರಿಸಿಬಿಡಬಹುದು.
13 : ಆದ್ದರಿಂದ ಔತಣವನ್ನು ಏರ್ಪಡಿಸುವಾಗ ದರಿದ್ರರು, ಅಂಗವಿಕಲರು, ಕುಂಟರು, ಕುರುಡರು ಇಂಥವರನ್ನು ಕರೆ;
14 : ಆಗ ನೀನು ಧನ್ಯನಾಗುವೆ. ಏಕೆಂದರೆ, ಅವರು ನಿನಗೆ ಪ್ರತಿಯಾಗಿ ಏನು ಮಾಡಲೂ ಇಲ್ಲದವರು. ಸತ್ಪುರುಷರು ಪುನರುತ್ಥಾನ ಹೊಂದುವಾಗ ದೇವರೇ ನಿನಗೆ ಸಲ್ಲಬೇಕಾದುದನ್ನು ಸಲ್ಲಿಸುವರು,” ಎಂದರು.
15 : ಊಟಕ್ಕೆ ಕುಳಿತಿದ್ದವರಲ್ಲಿ ಒಬ್ಬನು ಯೇಸುಸ್ವಾಮಿ ಹೇಳಿದ್ದನ್ನು ಕೇಳಿ, “ದೇವರ ಸಾಮ್ರಾಜ್ಯದ ಔತಣದಲ್ಲಿ ಭಾಗಿಯಾಗುವವನು ಎಷ್ಟೋ ಧನ್ಯನು!” ಎಂದನು.
16 : ಯೇಸು ಅವನಿಗೆ ಈ ಸಾಮತಿ ಹೇಳಿದರು: “ಒಬ್ಬಾತ ಒಂದು ದೊಡ್ಡ ಔತಣವನ್ನೇರ್ಪಡಿಸಿ ಅನೇಕ ಜನರಿಗೆ ಆಹ್ವಾನವಿತ್ತ.
17 : ಊಟಕ್ಕೆ ವೇಳೆಯಾದಾಗ, ‘ಈಗ ಎಲ್ಲಾ ಸಿದ್ಧವಾಗಿದೆ ಬನ್ನಿ,’ ಎಂದು ಹೇಳಿ ಆಹ್ವಾನಿತರನ್ನು ಕರೆದುತರಲು ಸೇವಕನನ್ನು ಕಳಿಸಿದ.
18 : ಆದರೆ ಆಹ್ವಾನಿತರೆಲ್ಲರೂ ಒಬ್ಬರಾದ ಮೇಲೊಬ್ಬರು ‘ಕ್ಷಮಿಸಬೇಕು,’ ಎಂದು ಹೇಳಲಾರಂಭಿಸಿದರು.
19 : ಒಬ್ಬ, ‘ಕ್ಷಮಿಸಬೇಕು, ಒಂದು ಹೊಲ ಕೊಂಡು ಕೊಂಡಿದ್ದೇನೆ, ಅಲ್ಲಿಗೆ ಹೋಗಿ ನೋಡಬೇಕಾಗಿದೆ,’ ಎಂದ.
20 : ಇನ್ನೊಬ್ಬ, ‘ಐದು ಜೊತೆ ಎತ್ತುಗಳನ್ನು ಕೊಂಡುಕೊಂಡಿದ್ದೇನೆ, ಅವುಗಳನ್ನು ಪರೀಕ್ಷಿಸಲು ಹೋಗುತ್ತಿದ್ದೇನೆ. ನನ್ನನ್ನು ಕ್ಷಮಿಸಬೇಕು,’ ಎಂದ. ಮತ್ತೊಬ್ಬ, ‘ನನಗೆ ಈಗ ತಾನೆ ಮದುವೆ ಆಗಿದೆ, ಬರುವುದಕ್ಕಾಗುವುದಿಲ್ಲ,’ ಎಂದನು.
21 : “ಆ ಸೇವಕನು ಬಂದು ಯಜಮಾನನಿಗೆ ಹಾಗೆಯೇ ವರದಿ ಮಾಡಿದ.
22 : ಇದನ್ನು ಕೇಳಿ ಯಜಮಾನನಿಗೆ ರೋಷಬಂದಿತು. ಅವನು ಸೇವಕನಿಗೆ, ‘ಪಟ್ಟಣದ ಹಾದಿಬೀದಿಗಳಿಗೂ ಸಂದುಗೊಂದುಗಳಿಗೂ ಹೋಗಿ ದರಿದ್ರರು, ಅಂಗವಿಕಲರು, ಕುಂಟರು, ಕುರುಡರು ಇಂಥವರನ್ನು ಕರೆದುಕೊಂಡು ಬಾ,’ ಎಂದು ಆಜ್ಞೆಮಾಡಿದ.
23 : ಸೇವಕನು ಬಂದು, ‘ಸ್ವಾವಿೂ, ನಿಮ್ಮ ಆಜ್ಞೆಯಂತೆ ಮಾಡಿದ್ದಾಯಿತು; ಆದರೆ ಇನ್ನೂ ಸ್ಥಳವಿದೆ,’ ಎಂದು ಹೇಳಿದ. ಅದಕ್ಕೆ ಯಜಮಾನ ‘ಹಾಗಾದರೆ ಹಳ್ಳಿಹಾದಿಗಳಿಗೂ ಎಲ್ಲೆ ಬೇಲಿಗಳವರೆಗೂ ಹೋಗಿ ಕಂಡಕಂಡವರನ್ನು ಒತ್ತಾಯ ಮಾಡಿ ಕರೆದುಕೊಂಡು ಬಾ. ನನ್ನ ಮನೆ ತುಂಬಿಹೋಗಲಿ.
24 : ಆದರೆ ಮೊದಲು ಆಹ್ವಾನಿತರಾದವರಲ್ಲಿ ಒಬ್ಬನೂ ನಾನು ಮಾಡಿಸಿದ ಅಡುಗೆಯ ರುಚಿ ನೋಡಬಾರದು!’ ಎಂದು ಸ್ಪಷ್ಟಪಡಿಸಿದ.” ಶಿಷ್ಯನಿಗೆ ಸವಾಲು (ಮತ್ತಾ. 10.7-38)
25 : ಜನರು ಗುಂಪುಗುಂಪಾಗಿ ಯೇಸುಸ್ವಾಮಿಯ ಸಂಗಡ ಹೋಗುತ್ತಿದ್ದರು. ಆಗ ಯೇಸು ಅವರ ಕಡೆಗೆ ತಿರುಗಿ ಹೀಗೆಂದರು:
26 : “ನನ್ನಲ್ಲಿಗೆ ಬರುವ ಯಾರೊಬ್ಬನೂ ತನ್ನ ತಂದೆ-ತಾಯಿ, ಹೆಂಡತಿ-ಮಕ್ಕಳು, ಸೋದರ-ಸೋದರಿಯರನ್ನು ಮಾತ್ರವಲ್ಲ, ತನ್ನ ಪ್ರಾಣವನ್ನು ಕೂಡ ತ್ಯಜಿಸದ ಹೊರತು, ನನ್ನ ಶಿಷ್ಯನಾಗಲಾರನು.
27 : ತನ್ನ ಶಿಲುಬೆಯನ್ನು ಹೊತ್ತು ನನ್ನ ಹಿಂದೆ ಬರದವನು ನನ್ನ ಶಿಷ್ಯನಾಗಲಾರನು.
28 : ನಿಮ್ಮಲ್ಲಿ ಒಬ್ಬನು ಒಂದು ಗೋಪುರವನ್ನು ಕಟ್ಟಲು ಇಚ್ಛಿಸಿದರೆ, ಕೆಲಸವನ್ನು ಮುಗಿಸಲು ತನ್ನಿಂದ ಸಾಧ್ಯವೇ ಎಂದು ನೋಡಲು, ಮೊದಲು ಕುಳಿತು, ಬೇಕಾಗುವ ಖರ್ಚು ವೆಚ್ಚವನ್ನು ಲೆಕ್ಕ ಹಾಕುವುದಿಲ್ಲವೇ?
29 : ಇಲ್ಲದೆ ಹೋದರೆ, ಇವನು ಅಸ್ತಿವಾರ ಹಾಕಿದ ಮೇಲೆ ಕೆಲಸ ಪೂರೈಸದೆ ಇರುವುದನ್ನು ಕಂಡು,
30 : ‘ಕಟ್ಟಲಾರಂಭಿಸಿದ; ಮುಗಿಸಲು ಇವನಿಂದಾಗಲಿಲ್ಲ!’ ಎಂದು ನೋಡುವವರೆಲ್ಲರೂ ಅವನನ್ನು ಪರಿಹಾಸ್ಯಮಾಡುವರು.
31 : ಹಾಗೆಯೇ, ಅರಸನೊಬ್ಬನು ಇನ್ನೊಬ್ಬ ಅರಸನ ವಿರುದ್ಧ ಯುದ್ಧಕ್ಕೆ ಹೋಗುವುದಕ್ಕೆ ಮುಂಚೆ ಇಪ್ಪತ್ತು ಸಾವಿರ ಸೈನ್ಯದೊಡನೆ ಬರುವ ಶತ್ರುವನ್ನು ತನ್ನ ಹತ್ತು ಸಾವಿರ ಸೈನ್ಯದಿಂದ ಎದುರಿಸಲು ಸಾಧ್ಯವೇ ಎಂದು ಮೊದಲು ಕುಳಿತು ಆಲೋಚನೆ ಮಾಡುವುದಿಲ್ಲವೇ?
32 : ಸಾಧ್ಯವಿಲ್ಲದಿದ್ದರೆ, ಶತ್ರುರಾಜನು ದೂರದಲ್ಲಿರುವಾಗಲೇ ದೂತರನ್ನು ಕಳುಹಿಸಿ, ಸಂಧಾನಕ್ಕೆ ಷರತ್ತುಗಳೇನೆಂದು ವಿಚಾರಿಸುತ್ತಾನೆ.
33 : ಅದೇ ಮೇರೆಗೆ, ನಿಮ್ಮಲ್ಲಿ ಯಾವನು ತನಗಿರುವುದನ್ನೆಲ್ಲಾ ಪರಿತ್ಯಾಗ ಮಾಡುವುದಿಲ್ಲವೋ ಅವನು ನನ್ನ ಶಿಷ್ಯನಾಗಲಾರ. ಸಪ್ಪೆಯಾದ ಉಪ್ಪು (ಮತ್ತಾ. 5.13; ಮಾರ್ಕ 9.50)
34 : “ಉಪ್ಪೇನೋ ಪ್ರಯೋಜನಕರ. ಆದರೆ ಉಪ್ಪೇ ಸಪ್ಪಗಾದರೆ ಅದಕ್ಕೆ ಇನ್ನಾವುದರಿಂದ ಪುನಃ ರುಚಿ ಬಂದೀತು? ಇನ್ನು ಅದು ಭೂಮಿಗೇ ಆಗಲಿ, ತಿಪ್ಪೆಗುಂಡಿಗೇ ಆಗಲಿ ಉಪಯೋಗವಾಗದು. ಜನರು ಅದನ್ನು ಹೊರಗೆ ಬಿಸಾಡುತ್ತಾರಷ್ಟೆ. ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ!” ಎಂದರು. ಕಾಣದೆ ಹೋದ ಕುರಿ (ಮತ್ತಾ. 18.12-14)

· © 2017 kannadacatholicbible.org Privacy Policy