1 : ಅದೇ ಸಮಯಕ್ಕೆ ಅಲ್ಲಿದ್ದವರಲ್ಲಿ ಕೆಲವರು ಯೇಸುಸ್ವಾಮಿಯ ಬಳಿಗೆ ಬಂದು, ಬಲಿಯರ್ಪಿಸುತ್ತಾ ಇದ್ದ ಗಲಿಲೇಯದವರನ್ನು ಪಿಲಾತನು ಕೊಲ್ಲಿಸಿದನೆಂಬ ವಿಷಯವನ್ನು ತಿಳಿಸಿದರು.
2 : ಅದಕ್ಕೆ ಯೇಸು, “ಇಂಥಾ ಕೊಲೆಗೆ ಈಡಾದವರು ಇತರ ಎಲ್ಲ ಗಲಿಲೇಯದವರಿಗಿಂತ ಹೆಚ್ಚು ಪಾಪಿಗಳೆಂದು ಭಾವಿಸುತ್ತೀರೋ?
3 : ಹಾಗೆ ಭಾವಿಸಕೂಡದು. ನೀವು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗದೆ ಹೋದರೆ, ಅವರ ಹಾಗೆಯೇ ನೀವೂ ನಾಶವಾಗುವಿರಿ.
4 : ಶಿಲೊವಾ ಎಂಬಲ್ಲಿ ಗೋಪುರ ಕುಸಿದು ಬಿದ್ದಾಗ ಹದಿನೆಂಟು ಜನ ಸತ್ತರಲ್ಲವೆ? ಅವರು ಜೆರುಸಲೇಮಿನಲ್ಲಿ ವಾಸವಾಗಿರುವ ಇತರ ಎಲ್ಲಾ ಜನರಿಗಿಂತ ಹೆಚ್ಚು ದೋಷಿಗಳಾಗಿದ್ದರೆಂದು ಭಾವಿಸುತ್ತೀರೋ?
5 : ಹಾಗಲ್ಲ, ನೀವು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗದಿದ್ದರೆ, ಅವರ ಹಾಗೆಯೇ ನೀವೂ ನಾಶವಾಗುವಿರಿ,” ಎಂದರು.
ಹಣ್ಣು ಬಿಡದ ಅಂಜೂರ
6 : ಅನಂತರ ಯೇಸುಸ್ವಾಮಿ ಈ ಸಾಮತಿಯನ್ನು ಹೇಳಿದರು: “ಒಬ್ಬನು ತನ್ನ ದ್ರಾಕ್ಷಿ ತೋಟದಲ್ಲಿ ಒಂದು ಅಂಜೂರದ ಮರವನ್ನು ನೆಡಿಸಿದ್ದ. ಒಮ್ಮೆ ಅವನು ಬಂದು ಅದರಲ್ಲಿ ಹಣ್ಣನ್ನು ಹುಡುಕಲು ಒಂದೂ ಕಾಣಿಸಲಿಲ್ಲ.
7 : ತೋಟಗಾರನನ್ನು ಕರೆದು, ‘ನೋಡು, ಮೂರು ವರ್ಷಗಳಿಂದ ಈ ಮರದಲ್ಲಿ ಹಣ್ಣನ್ನು ಹುಡುಕುತ್ತಾ ಇದ್ದೇನೆ. ಒಂದಾದರೂ ಕಂಡುಬರಲಿಲ್ಲ. ಇನ್ನು ಇದನ್ನು ಕಡಿದು ಹಾಕು. ಭೂಮಿಗೆ ಭಾರವಾಗಿ ಅದರ ಸಾರವನ್ನು ಇದೇಕೆ ವ್ಯರ್ಥ ಮಾಡಬೇಕು?’ ಎಂದು ಹೇಳಿದ.
8 : ಅದಕ್ಕೆ ತೋಟಗಾರನು, ‘ಸ್ವಾವಿೂ, ಈ ಒಂದು ವರ್ಷ ಇದು ಹಾಗೆಯೇ ಇರಲಿ ಬಿಡಿ. ಅಷ್ಟರಲ್ಲಿ ಸುತ್ತಲೂ ಪಾತಿತೆಗೆದು ಗೊಬ್ಬರ ಹಾಕುತ್ತೇನೆ.
9 : ಮುಂದಿನ ವರ್ಷ ಹಣ್ಣು ಬಿಟ್ಟರೆ ಸರಿ; ಇಲ್ಲದಿದ್ದರೆ ಕಡಿದುಹಾಕೋಣ,’ ಎಂದನು.”
ಗುಣಹೊಂದಿದ ಗೂನಿ
10 : ಒಂದು ಸಬ್ಬತ್‍ದಿನ ಯೇಸುಸ್ವಾಮಿ ಪ್ರಾರ್ಥನಾಮಂದಿರದಲ್ಲಿ ಬೋಧಿಸುತ್ತಿದ್ದರು.
11 : ಹದಿನೆಂಟು ವರ್ಷಗಳಿಂದ ದೆವ್ವಪೀಡಿತಳಾಗಿ ನರಳುತ್ತಿದ್ದ ಒಬ್ಬ ಮಹಿಳೆ ಅಲ್ಲಿದ್ದಳು. ಆಕೆ ಒಬ್ಬ ಗೂನಿ; ನೆಟ್ಟಗೆ ನಿಲ್ಲಲು ಸ್ವಲ್ಪವೂ ಆಗುತ್ತಿರಲಿಲ್ಲ.
12 : ಯೇಸು ಆಕೆಯನ್ನು ನೋಡಿ ಹತ್ತಿರಕ್ಕೆ ಕರೆದು, ‘ನೋಡಮ್ಮ, ನೀನು ವ್ಯಾಧಿಯಿಂದ ಬಿಡುಗಡೆಯಾದೆ,” ಎಂದು ಹೇಳಿ,
13 : ಆಕೆಯ ಮೇಲೆ ತಮ್ಮ ಹಸ್ತಗಳನ್ನಿಟ್ಟರು. ತಕ್ಷಣವೇ ಆಕೆ ನೆಟ್ಟಗಾದಳು ಮತ್ತು ದೇವರಿಗೆ ಸ್ತುತಿಸ್ತೋತ್ರ ಸಲ್ಲಿಸಿದಳು.
15 : ಪ್ರಭು ಅವನಿಗೆ ಪ್ರತ್ಯುತ್ತರವಾಗಿ, “ಕಪಟಿಗಳೇ, ಸಬ್ಬತ್ ದಿನ ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಕತ್ತೆಯನ್ನಾಗಲಿ, ಎತ್ತನ್ನಾಗಲಿ ಕೊಟ್ಟಿಗೆಯಿಂದ ಬಿಚ್ಚಿ ನೀರಿಗೆ ಹಿಡಿದುಕೊಂಡು ಹೋಗುವುದಿಲ್ಲವೆ?
16 : ಅಬ್ರಹಾಮನ ವಂಶಜಳಾದ ಈಕೆಯನ್ನು ಸೈತಾನನು ಹದಿನೆಂಟು ವರ್ಷಗಳಿಂದ ಕಟ್ಟಿ ಹಾಕಿದ್ದನು; ಈ ಕಟ್ಟಿನಿಂದ ಈಕೆಯನ್ನು ಸಬ್ಬತ್ ದಿನ ಬಿಡಿಸಬಾರದಿತ್ತೆ?” ಎಂದರು.
17 : ಈ ಉತ್ತರವನ್ನು ಕೇಳಿ ಯೇಸುವಿನ ವಿರೋಧಿಗಳೆಲ್ಲರೂ ನಾಚಿದರು. ಜನರ ಕೂಟವಾದರೋ ಅವರು ಮಾಡಿದ ಮಹತ್ಕಾರ್ಯಗಳನ್ನೆಲ್ಲಾ ಕಂಡು ಸಂತೋಷಪಟ್ಟಿತು.
ಸಾಸಿವೆಕಾಳಿನ ಸಾಮತಿ
(ಮತ್ತಾ. 13.31-32; ಮಾರ್ಕ 4.30-32)
18 : ಆಗ ಯೇಸುಸ್ವಾಮಿ, “ದೇವರ ಸಾಮ್ರಾಜ್ಯವು ಏನನ್ನು ಹೋಲುತ್ತದೆ?
19 : ಅದನ್ನು ಯಾವುದಕ್ಕೆ ಹೋಲಿಸಲಿ? ಅದು ಒಂದು ಸಾಸಿವೆ ಕಾಳಿನಂತೆ ಇದೆ. ಒಬ್ಬನು ಅದನ್ನು ತೆಗೆದುಕೊಂಡು ಹೋಗಿ ತನ್ನ ತೋಟದಲ್ಲಿ ಬಿತ್ತಿದನು. ಅದು ಬೆಳೆದು ಮರವಾಯಿತು. ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ರೆಂಬೆಗಳಲ್ಲಿ ಗೂಡುಕಟ್ಟಿ ವಾಸಮಾಡತೊಡಗಿದವು,” ಎಂದರು.
ಹುಳಿಹಿಟ್ಟಿನ ಸಾಮತಿ
(ಮತ್ತಾ. 13.33)
20 : ಪುನಃ ಯೇಸುಸ್ವಾಮಿ, “ದೇವರ ಸಾಮ್ರಾಜ್ಯವನ್ನು ಯಾವುದಕ್ಕೆ ಹೋಲಿಸಲಿ,
21 : ಅದು ಹುಳಿಹಿಟ್ಟಿನಂತೆ ಇದೆ. ಅದನ್ನು ಒಬ್ಬಾಕೆ ತೆಗೆದುಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲಸಿದಳು. ಆ ಹಿಟ್ಟೆಲ್ಲಾ ಹುಳಿಯಾಯಿತು,” ಎಂದರು.
ಇಕ್ಕಟ್ಟಾದ ಬಾಗಿಲು
(ಮತ್ತಾ. 7.13-14, 21-23)
22 : ಯೇಸುಸ್ವಾಮಿ ಊರೂರುಗಳಲ್ಲೂ ಹಳ್ಳಿಹಳ್ಳಿಗಳಲ್ಲೂ ಉಪದೇಶಮಾಡಿಕೊಂಡು ಜೆರುಸಲೇಮಿನತ್ತ ಪ್ರಯಾಣಮಾಡುತ್ತಿದ್ದರು.
23 : ಆಗ ಒಬ್ಬನು, “ಸ್ವಾವಿೂ, ಜೀವೋದ್ಧಾರ ಹೊಂದುವವರು ಕೆಲವರು ಮಾತ್ರವೊ?” ಎಂದು ವಿಚಾರಿಸಿದನು.
24 : ಆಗ ಯೇಸು ಜನರಿಗೆ, “ಇಕ್ಕಟ್ಟಾದ ಬಾಗಿಲಿನಿಂದಲೇ ಒಳಹೋಗಲು ಸರ್ವಪ್ರಯತ್ನಮಾಡಿ. ಏಕೆಂದರೆ, ಅನೇಕರು ಒಳಕ್ಕೆ ಹೋಗಲು ಖಂಡಿತವಾಗಿ ಪ್ರಯತ್ನಿಸುವರು; ಆದರೆ ಅದು ಅವರಿಂದಾಗದು.
25 : ಮನೆಯ ಯಜಮಾನನು ಎದ್ದು ಬಾಗಿಲನ್ನು ಮುಚ್ಚಿದ ಮೇಲೆ ನೀವು ಹೊರಗಡೆ ನಿಲ್ಲಬೇಕಾಗುವುದು. ಬಾಗಿಲನ್ನು ತಟ್ಟುತ್ತಾ, ‘ಸ್ವಾವಿೂ, ನಮಗೆ ಬಾಗಿಲು ತೆರೆಯಿರಿ,’ ಎಂದು ನೀವು ಕೇಳುವಿರಿ. ಅದಕ್ಕೆ ಅವನು, ‘ನೀವು ಎಲ್ಲಿಯವರೋ ನಾನು ಅರಿಯೆ’ ಎನ್ನುವನು.
26 : ಆಗ ನೀವು, ‘ನಿಮ್ಮೊಂದಿಗೆ ನಾವು ಊಟಮಾಡಿದ್ದೇವೆ, ಪಾನಮಾಡಿದ್ದೇವೆ; ನೀವು ನಮ್ಮ ಬೀದಿಗಳಲ್ಲಿ ಉಪದೇಶಮಾಡಿದ್ದೀರಿ,’ ಎಂದು ಹೇಳಲಾರಂಭಿಸುವಿರಿ.
27 : ಆದರೆ ಅವನು ಪುನಃ, ‘ನೀವು ಎಲ್ಲಿಯವರೋ ನಾನರಿಯೆ. ಅಕ್ರಮಿಗಳೇ, ಎಲ್ಲರೂ ನನ್ನಿಂದ ತೊಲಗಿರಿ,’ ಎಂದು ಸ್ಪಷ್ಟವಾಗಿ ನುಡಿಯುವನು.
28 : ಅಬ್ರಹಾಮ, ಇಸಾಕ, ಯಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರ ಸಾಮ್ರಾಜ್ಯದಲ್ಲಿ ಇರುವುದನ್ನೂ ನಿಮ್ಮನ್ನು ಮಾತ್ರ ಹೊರಗೆ ಹಾಕಿರುವುದನ್ನೂ ನೋಡುವಾಗ ನಿಮಗಾಗುವ ಗೋಳಾಟವೇನು! ಹಲ್ಲುಕಡಿತವೇನು!!
30 : “ಇಗೋ, ಕಡೆಯವರಲ್ಲಿ ಕೆಲವರು ಮೊದಲಿಗರಾಗುವರು. ಮೊದಲಿಗರಲ್ಲಿ ಕೆಲವರು ಕಡೆಯವರಾಗುವರು,” ಎಂದರು.
31 : ಅದೇ ಸಮಯಕ್ಕೆ ಸರಿಯಾಗಿ ಕೆಲವು ಮಂದಿ ಫರಿಸಾಯರು ಯೇಸುಸ್ವಾಮಿಯ ಬಳಿಗೆ ಬಂದು, “ಇಲ್ಲಿಂದ ಹೊರಟು ಹೋಗಿಬಿಡಿ, ಹೆರೋದನು ನಿಮ್ಮನ್ನು ಕೊಲ್ಲಬೇಕೆಂದಿದ್ದಾನೆ,” ಎಂದರು.
32 : ಅದಕ್ಕೆ ಯೇಸು, “ನೀವು ಹೋಗಿ ಆ ನರಿಗೆ ಹೀಗೆಂದು ತಿಳಿಸಿರಿ: ಇಂದು ಮತ್ತು ನಾಳೆ ದೆವ್ವಗಳನ್ನು ಬಿಡಿಸುತ್ತೇನೆ, ರೋಗಿಗಳನ್ನು ಗುಣಪಡಿಸುತ್ತೇನೆ, ಮೂರನೆಯ ದಿನ ನನ್ನ ಕಾರ್ಯ ಸಿದ್ಧಿಗೆ ಬರುವುದು.
33 : ಹೇಗೂ ಇಂದು, ನಾಳೆ ಮತ್ತು ನಾಡಿದ್ದು ನಾನು ನನ್ನ ಮಾರ್ಗವನ್ನು ಮುಂದುವರಿಸಬೇಕು. ಪ್ರವಾದಿಯಾದವನು ಜೆರುಸಲೇಮಿನ ಹೊರಗೆ ಕೊಲೆಗೀಡಾಗುವುದು ಸಲ್ಲದು.
34 : “ಓ ಜೆರುಸಲೇಮೇ, ಜೆರುಸಲೇಮೇ, ಪ್ರವಾದಿಗಳ ಕೊಲೆಪಾತಕಿಯೇ, ದೇವರು ನಿನ್ನ ಬಳಿಗೆ ಕಳುಹಿಸಿದವರನ್ನು ಕಲ್ಲುಗಳಿಂದ ಹೊಡೆಯುವವಳೇ, ಕೋಳಿ ತನ್ನ ಮರಿಗಳನ್ನು ರೆಕ್ಕೆಗಳಡಿ ಸೇರಿಸಿಕೊಳ್ಳುವಂತೆ, ನಾನು ನಿನ್ನ ಮಕ್ಕಳನ್ನು ಒಂದಾಗಿ ಸೇರಿಸಿ ಅಪ್ಪಿಕೊಳ್ಳಲು ಎಷ್ಟೋ ಬಾರಿ ಅಪೇಕ್ಷಿಸಿದೆ.
35 : ಆದರೆ ನೀನು ಒಪ್ಪಲಿಲ್ಲ. ಇಗೋ, ನಿಮ್ಮ ದೇವಾಲಯ ಪಾಳುಬೀಳುವುದು. ‘ಸರ್ವೇಶ್ವರನ ನಾಮದಲ್ಲಿ ಬರುವವರು ಧನ್ಯರು,’ ಎಂದು ನೀವಾಗಿ ಹೇಳುವ ದಿನದವರೆಗೂ ನೀವು ನನ್ನನ್ನು ಕಾಣಲಾರಿರಿ, ಎಂಬುದು ನಿಶ್ಚಯ,” ಎಂದರು.
ಜಲೋದರ ರೋಗಿಗೆ ಆರೋಗ್ಯದಾನ