1 : ಇಷ್ಟರಲ್ಲೇ, ಸಾವಿರಾರು ಜನರು ಒಬ್ಬರನ್ನೊಬ್ಬರು ಒತ್ತರಿಸುತ್ತಾ ಕಿಕ್ಕಿರಿದು ನೆರೆದಿದ್ದರು. ಯೇಸು ಮೊದಲು ಶಿಷ್ಯರನ್ನು ಉದ್ದೇಶಿಸಿ, “ಫರಿಸಾಯರ ‘ಹುಳಿ ಹಿಟ್ಟಿನ’ ಬಗ್ಗೆ ಅಂದರೆ ಅವರ ಕಪಟತನದ ಬಗ್ಗೆ, ಎಚ್ಚರಿಕೆಯಿಂದಿರಿ.
2 : ಮುಚ್ಚಯಮರೆಯಾಗಿರುವುದೆಲ್ಲಾ ಬಟ್ಟ ಬಯಲಾಗುವುದು; ಗುಟ್ಟಾಗಿರುವುದೆಲ್ಲಾ ರಟ್ಟಾಗುವುದು.
3 : ನೀವು ಕತ್ತಲಲ್ಲಿ ಹೇಳಿದ್ದೆಲ್ಲವನ್ನು ಬೆಳಕಿನಲ್ಲಿ ಕೇಳಲಾಗುವುದು; ಒಳಕೋಣೆಗಳಲ್ಲಿ ಕಿವಿಮಾತಾಗಿ ನೀವು ಹೇಳಿದ್ದೆಲ್ಲವನ್ನು ಮನೆಮಾಳಿಗೆಗಳ ಮೇಲಿಂದ ಸಾರಲಾಗುವುದು,” ಎಂದರು.
4 : “ಗೆಳೆಯರೇ, ನನ್ನ ಮಾತಿಗೆ ಕಿವಿಗೊಡಿ: ದೇಹವನ್ನು ಕೊಂದುಹಾಕುವವರಿಗೆ ಭಯಪಡಬೇಡಿ. ಕೊಂದುಹಾಕಿದ ಮೇಲೆ ಹೆಚ್ಚೇನು ಮಾಡಲು ಅವರಿಂದಾಗದು.
5 : ನೀವು ಯಾರಿಗೆ ಭಯಪಡಬೇಕೆಂದು ಹೇಳುತ್ತೇನೆ, ಕೇಳಿ: ಸತ್ತ ಮೇಲೆ ನರಕದೊಳಕ್ಕೆ ದಬ್ಬಲು ಅಧಿಕಾರವುಳ್ಳಾತನಿಗೆ ಭಯಪಡಿ. ಹೌದು, ಆತನಿಗೆ ಭಯಪಡಿರೆಂದು ನಿಮಗೆ ಒತ್ತಿ ಹೇಳುತ್ತೇನೆ.
6 : “ಎರಡು ಕಾಸಿಗೆ ಐದು ಗುಬ್ಬಚ್ಚಿಗಳನ್ನು ಮಾರುವುದಿಲ್ಲವೇ? ಆದರೂ ಅವುಗಳಲ್ಲಿ ಒಂದನ್ನೂ ದೇವರು ಮರೆಯುವುದಿಲ್ಲ.
7 : ಅಷ್ಟು ಮಾತ್ರವಲ್ಲ, ನಿಮ್ಮ ತಲೆಗೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಭಯಪಡಬೇಡಿ; ಅನೇಕ ಗುಬ್ಬಚ್ಚಿಗಳಿಗಿಂತ ನೀವು ಎಷ್ಟೋ ಮೌಲ್ಯವುಳ್ಳವರು.
ಬಹಿರಂಗ ಸಾಕ್ಷ್ಯ
(ಮತ್ತಾ. 10.32-33, 12.32; 10.19-20)
8 : “ಯಾವನು ಜನರ ಮುಂದೆ ಬಹಿರಂಗವಾಗಿ ತಾನು ನನ್ನವನೆಂದು ಒಪ್ಪಿಕೊಳ್ಳುತ್ತಾನೋ, ಅವನನ್ನು ನರಪುತ್ರನು ಸಹ ದೇವದೂತರ ಮುಂದೆ ತನ್ನವನೆಂದು ಒಪ್ಪಿಕೊಳ್ಳುವನು.
9 : ಆದರೆ ಯಾವನು ತಾನು ನನ್ನವನಲ್ಲ ಎಂದು ಜನರ ಮುಂದೆ ಬಹಿರಂಗವಾಗಿ ನಿರಾಕರಿಸುತ್ತಾನೋ, ಅವನನ್ನು ದೇವದೂತರ ಮುಂದೆ ನಿರಾಕರಿಸಲಾಗುವುದೆಂಬುದು ನಿಶ್ಚಯ.
10 : “ಯಾವನಾದರೂ ನರಪುತ್ರನ ವಿರುದ್ಧ ಮಾತನಾಡಿದರೆ ಅವನಿಗೆ ಕ್ಷಮೆ ದೊರಕಬಹುದು. ಆದರೆ ಪವಿತ್ರಾತ್ಮ ಅವರನ್ನು ದೂಷಿಸುವವನಿಗೆ ಕ್ಷಮೆಯೇ ದೊರಕದು.
11 : “ಪ್ರಾರ್ಥನಾಮಂದಿರಗಳಲ್ಲಿ ಮತ್ತು ನ್ಯಾಯಾಧಿಪತಿಗಳ ಹಾಗೂ ದೇಶಾಧಿಕಾರಿಗಳ ಮುಂದೆ ನಿಮ್ಮನ್ನು ಎಳೆದೊಯ್ಯುವಾಗ ಹೇಗೆ ವಾದಿಸುವುದು, ಏನು ಹೇಳುವುದು ಎಂದು ಚಿಂತಾಕ್ರಾಂತರಾಗಬೇಡಿ.
12 : ಏಕೆಂದರೆ, ನೀವು ಹೇಳತಕ್ಕದ್ದನ್ನು ಪವಿತ್ರಾತ್ಮ ಅದೇ ಗಳಿಗೆಯಲ್ಲಿ ನಿಮಗೆ ಕಲಿಸಿಕೊಡುವರು,” ಎಂದರು.
ದಡ್ಡನಾದ ಧನಿಕ
13 : ಜನಸಮೂಹದಿಂದ ಒಬ್ಬನು, “ಬೋಧಕರೇ, ನಮ್ಮ ಪಿತ್ರಾರ್ಜಿತ ಸೊತ್ತನ್ನು ನನಗೆ ಭಾಗಮಾಡಿ ಕೊಡುವಂತೆ ನನ್ನ ಸೋದರನಿಗೆ ಹೇಳಿ,” ಎಂದು ಕೇಳಿಕೊಂಡನು.
14 : ಅದಕ್ಕೆ ಯೇಸು, “ಏನಯ್ಯಾ, ನಿಮ್ಮಿಬ್ಬರ ನ್ಯಾಯತೀರಿಸುವುದಕ್ಕೂ ನಿಮ್ಮ ಸ್ವತ್ತನ್ನು ಭಾಗಮಾಡಿಕೊಡುವುದಕ್ಕೂ ನನ್ನನ್ನು ನೇಮಿಸಿದವರು ಯಾರು?” ಎಂದು ಮರುಪ್ರಶ್ನೆ ಹಾಕಿದರು.
15 : ಅನಂತರ ಜನರನ್ನುದ್ದೇಶಿಸಿ, “ಎಚ್ಚರಿಕೆ, ಯಾವ ವಿಧವಾದ ಲೋಭಕ್ಕೂ ಒಳಗಾಗದಂತೆ ಜಾಗರೂಕರಾಗಿರಿ. ಏಕೆಂದರೆ, ಒಬ್ಬನಿಗೆ ಎಷ್ಟೇ ಸಿರಿಸಂಪತ್ತಿರಲಿ, ಅವನ ನಿಜವಾದ ಜೀವನ ಅದನ್ನು ಅವಲಂಬಿಸಿಲ್ಲ,” ಎಂದು ಹೇಳಿದರು.
16 : ಅನಂತರ ಅವರಿಗೆ ಈ ಸಾಮತಿಯನ್ನು ಹೇಳಿದರು: “ಒಬ್ಬ ಧನಿಕನಿದ್ದ. ಅವನ ಭೂಮಿ ಒಮ್ಮೆ ಸಮೃದ್ಧಿಯಾದ ಬೆಳೆಕೊಟ್ಟಿತು.
17 : ಆಗ ಅವನು, ‘ನನ್ನ ಬೆಳೆಯನ್ನೆಲ್ಲಾ ತುಂಬಿಡಲು ಸ್ಥಳವಿಲ್ಲವಲ್ಲಾ, ಏನು ಮಾಡಲಿ?’ ಎಂದು ತನ್ನಲ್ಲೇ ಆಲೋಚಿಸುತ್ತಾ,
18 : ಹೌದು, ಹೀಗೆ ಮಾಡುತ್ತೇನೆ: ಇರುವ ಕಣಜಗಳನ್ನು ಕಿತ್ತುಹಾಕಿಸಿ, ಇನ್ನೂ ದೊಡ್ಡವುಗಳನ್ನು ಕಟ್ಟಿಸುತ್ತೇನೆ. ಅಲ್ಲಿ ನನ್ನ ಎಲ್ಲಾ ದವಸ ಧಾನ್ಯಗಳನ್ನೂ ಸರಕು ಸಾಮಗ್ರಿಗಳನ್ನೂ ತುಂಬಿಸಿಡುತ್ತೇನೆ.
19 : ಅಲ್ಲದೆ, “ಎಲೈ ಮನವೇ, ಅನೇಕ ವರ್ಷಗಳಿಗೆ ಬೇಕಾದಷ್ಟು ಸರಕು ಬಿದ್ದಿದೆ; ಆರಾಮವಾಗಿರು. ತಿನ್ನು, ಕುಡಿ, ಸುಖಪಡು ಎಂದು ಹೇಳಿಕೊಳ್ಳುತ್ತೇನೆ”, ಎಂದುಕೊಂಡ.
20 : ಆಗ ದೇವರು, ‘ಎಲವೋ ಮೂರ್ಖ, ಇದೇ ರಾತ್ರಿ ನೀನು ಸಾಯಬೇಕಾಗಿದೆ, ನಿನಗಾಗಿ ಸಿದ್ಧ ಮಾಡಿಟ್ಟಿರುವುದೆಲ್ಲ ಯಾರ ಪಾಲಾಗುವುದು?’ ಎಂದರು.
21 : “ತನಗೋಸ್ಕರ ಸಂಪತ್ತನ್ನು ಶೇಖರಿಸಿಟ್ಟುಕೊಂಡು ದೇವರ ದೃಷ್ಟಿಯಲ್ಲಿ ಧನಿಕನಲ್ಲದವನು ಇವನಿಗೆ ಸಮಾನನು,” ಎಂದರು ಯೇಸು.
ಇಂದಿಗೆಂತು ನಾಳೆಗೆಂತೆಂದು ಚಿಂತೆಯೇಕೆ?
(ಮತ್ತಾ. 6.25-34)
22 : ಅನಂತರ ಯೇಸುಸ್ವಾಮಿ ತಮ್ಮ ಶಿಷ್ಯರಿಗೆ, “ಈ ಕಾರಣದಿಂದ ನೀವು ನಿಮ್ಮ ‘ಪ್ರಾಣಧಾರಣೆಗೆ ಏನು ಉಣ್ಣುವುದು, ದೇಹರಕ್ಷಣೆಗೆ ಏನು ಹೊದೆಯುವುದು’ ಎಂದು ಚಿಂತೆಮಾಡಬೇಡಿ.
23 : ಏತಕ್ಕೆಂದರೆ ಊಟಕ್ಕಿಂತ ಪ್ರಾಣ, ಉಡುಪಿಗಿಂತ ದೇಹ ಮೇಲಾದುದು.
24 : ಕಾಗೆಗಳನ್ನು ಗಮನಿಸಿರಿ. ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಅವುಗಳಿಗೆ ಉಗ್ರಾಣವೂ ಇಲ್ಲ, ಕಣಜವೂ ಇಲ್ಲ. ಆದರೂ ದೇವರು ಅವುಗಳನ್ನು ಪೋಷಿಸುತ್ತಾರೆ. ಪಕ್ಷಿಗಳಿಗಿಂತ ನೀವು ಎಷ್ಟೋ ಮೇಲಾದವರು!
25 : ಚಿಂತಿಸಿ, ಚಿಂತಿಸಿ, ನಿಮ್ಮ ಜೀವನಾವಧಿಯನ್ನು ಕೊಂಚಕಾಲವಾದರೂ ದೀರ್ಘಮಾಡಲು ನಿಮ್ಮಲ್ಲಿ ಯಾರಿಂದಾದೀತು?
26 : ಇಂಥ ಅಲ್ಪ ಕಾರ್ಯಗಳನ್ನು ಮಾಡಲು ನೀವು ಅಶಕ್ತರಾಗಿ ಇರುವಾಗ, ಮಿಕ್ಕವುಗಳನ್ನು ಕುರಿತು ಚಿಂತಿಸುವುದೇಕೆ?
27 : ವನಕುಸುಮಗಳು ಬೆಳೆಯುವ ರೀತಿಯನ್ನು ಗಮನಿಸಿ ನೋಡಿ: ಅವು ದುಡಿಯುವುದಿಲ್ಲ; ನೂಲುವುದಿಲ್ಲ; ಆದರೂ ಅರಸ ಸೊಲೊಮೋನನು ತನ್ನ ಸರ್ವ ವೈಭವದಲ್ಲಿ ಇದ್ದಾಗಲೂ, ಈ ಕುಸುಮಗಳಲ್ಲಿ ಒಂದರಷ್ಟೂ ಸುಂದರವಾದ ಉಡುಪನ್ನು ಧರಿಸಿರಲಿಲ್ಲ.
28 : ಎಲೈ ಅಲ್ಪವಿಶ್ವಾಸಿಗಳೇ, ಇಂದಿದ್ದು ನಾಳೆ ಒಲೆ ಪಾಲಾಗುವ ಬಯಲಿನ ಹುಲ್ಲಿಗೇ ದೇವರು ಹೀಗೆ ಉಡಿಸಿದರೆ, ನಿಮಗೆ ಇನ್ನೆಷ್ಟು ಮಾಡಲಾರರು !
29 : ಅಲ್ಲದೆ, ಅನ್ನಪಾನಗಳಿಗೆ ಏನು ಮಾಡೋಣ ಎಂದು ತೊಳಲಾಡಬೇಡಿ, ಪೇಚಾಡಬೇಡಿ.
30 : ಇವೆಲ್ಲವುಗಳಿಗಾಗಿ ಲೌಕಿಕ ಜನರು ಅರಸಿ ಅಲೆದಾಡುತ್ತಾರೆ. ಇವು ನಿಮಗೆ ಅಗತ್ಯವೆಂದು ನಿಮ್ಮ ತಂದೆಗೆ ತಿಳಿದಿದೆ.
31 : ನೀವಾದರೋ ದೇವರ ಸಾಮ್ರಾಜ್ಯಕ್ಕಾಗಿ ತವಕಪಡಿರಿ. ಇದರ ಸಮೇತ ಅವು ಕೂಡ ನಿಮಗೆ ಕೊಡಲಾಗುವುದು.
ಸ್ವರ್ಗದಲ್ಲಿರಲಿ ನಿಮ್ಮ ಸಿರಿಸಂಪತ್ತು
(ಮತ್ತಾ. 6.19-21)
32 : “ಪುಟ್ಟಮಂದೆಯೇ, ಭಯಪಡಬೇಡ. ನಿನ್ನ ತಂದೆ ತಮ್ಮ ಸಾಮ್ರಾಜ್ಯವನ್ನು ನಿನಗೆ ನೀಡಲು ಇಷ್ಟಪಟ್ಟಿದ್ದಾರೆ.
33 : ನಿಮ್ಮ ಆಸ್ತಿಪಾಸ್ತಿಗಳನ್ನು ಮಾರಿ, ದಾನಧರ್ಮ ಮಾಡಿರಿ. ನಶಿಸದ ಹಣಚೀಲಗಳನ್ನು ಗಳಿಸಿಕೊಳ್ಳಿರಿ; ಲಯವಾಗದ ಸಂಪತ್ತನ್ನು ಸ್ವರ್ಗದಲ್ಲಿ ಶೇಖರಿಸಿಟ್ಟುಕೊಳ್ಳಿರಿ. ಅಲ್ಲಿ ಅದು ಕಳ್ಳನಿಗೆ ದಕ್ಕುವಂತಿಲ್ಲ; ನುಸಿಹಿಡಿದು ನಾಶವಾಗುವಂತಿಲ್ಲ.
34 : ನಿಮ್ಮ ನಿಧಿ ಎಲ್ಲಿದೆಯೋ ಅಲ್ಲೇ ಇರುವುದು ನಿಮ್ಮ ಹೃದಯ.
ಸದಾ ಸಿದ್ಧರಾಗಿರಿ
35 : “ನಿಮ್ಮ ನಡು ಕಟ್ಟಿರಲಿ; ನಿಮ್ಮ ದೀಪ ಉರಿಯುತ್ತಿರಲಿ.
36 : ತಟ್ಟಿದ ತಕ್ಷಣ ಯಜಮಾನನಿಗೆ ಬಾಗಿಲು ತೆರೆಯಲು ಸಿದ್ಧರಿರುವ ಸೇವಕರಂತೆ ಇರಿ. ತಮ್ಮ ಯಜಮಾನನು ಮದುವೆ ಔತಣ ಮುಗಿಸಿಕೊಂಡು ಯಾವಾಗ ಹಿಂದಿರುಗುತ್ತಾನೋ, ಎಂದು ಅವರು ಎದುರು ನೋಡುತ್ತಾ ಇರುತ್ತಾರೆ.
37 : ಯಜಮಾನನು ಬಂದು ಯಾವ ಯಾವ ಸೇವಕ ಎಚ್ಚರವಾಗಿದ್ದಾನೆಂದು ಕಂಡುಕೊಳ್ಳುತ್ತಾನೋ, ಅಂಥವರು ಭಾಗ್ಯವಂತರು. ಏಕೆಂದರೆ, ಯಜಮಾನನೇ ನಡುಕಟ್ಟಿನಿಂತು, ಅವರನ್ನು ಊಟಕ್ಕೆ ಕೂರಿಸಿ, ಒಬ್ಬೊಬ್ಬನಿಗೂ ತಾನೇ ಉಪಚಾರ ಮಾಡುವನೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ.
38 : “ಯಜಮಾನನು ಬರುವಾಗ ನಡು ರಾತ್ರಿ ಆಗಿರಲಿ, ಮುಂಜಾವವಾಗಿರಲಿ, ಎಚ್ಚರದಿಂದ ಇರುವ ಸೇವಕರನ್ನು ಆತನು ಕಂಡರೆ ಅವರು ಭಾಗ್ಯವಂತರು.
39 : ಕಳ್ಳನು ಬರುವ ಗಳಿಗೆಯು ಮನೆಯ ಯಜಮಾನನಿಗೆ ತಿಳಿದರೆ, ಅವನು ತನ್ನ ಮನೆಗೆ ಕನ್ನಹಾಕಲು ಬಿಡುವನೇ? ಇಲ್ಲ.
40 : ಇದನ್ನು ಚೆನ್ನಾಗಿ ತಿಳಿದುಕೊಂಡು ನೀವು ಸಹ ಸಿದ್ಧರಾಗಿರಿ. ಏಕೆಂದರೆ, ನರಪುತ್ರನು ನೀವು ನಿರೀಕ್ಷಿಸದ ಗಳಿಗೆಯಲ್ಲಿ ಬರುವನು,” ಎಂದರು.
ಪ್ರಾಮಾಣಿಕನಾದ ಮೇಸ್ತ್ರಿ
(ಮತ್ತಾ. 24.45-51)
41 : ಆಗ ಪೇತ್ರನು, “ಪ್ರಭೂ, ನೀವು ಹೇಳಿದ ಈ ಸಾಮತಿ ನಮಗೆ ಮಾತ್ರ ಅನ್ವಯಿಸುತ್ತದೋ ಅಥವಾ ಎಲ್ಲರಿಗೋ?” ಎಂದು ಕೇಳಿದನು.
42 : ಅದಕ್ಕೆ ಪ್ರಭು ಹೀಗೆಂದರು: “ಪ್ರಾಮಾಣಿಕನೂ ವಿವೇಕಿಯೂ ಆದ ಮೇಸ್ತ್ರಿ ಯಾರು? ಕಾಲಕಾಲಕ್ಕೆ ಸರಿಯಾಗಿ ಕೂಲಿಯಾಳುಗಳಿಗೆ ದವಸಧಾನ್ಯವನ್ನು ಅಳೆದುಕೊಟ್ಟು, ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಯಜಮಾನನು ನೇಮಿಸಿದ್ದ ಮೇಸ್ತ್ರಿಯೇ.
43 : ಯಜಮಾನನು ಮನೆಗೆ ಹಿಂದಿರುಗಿ ಬಂದಾಗ ಆ ಸೇವಕನು ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನೆರವೇರಿಸುತ್ತಿದ್ದರೆ ಅವನು ಧನ್ಯನು.
44 : ಅಂಥವನನ್ನು ಯಜಮಾನನು ತನ್ನ ಎಲ್ಲ ಆಸ್ತಿಪಾಸ್ತಿಗೆ ಆಡಳಿತಗಾರನನ್ನಾಗಿ ನೇಮಿಸುವನೆಂದು ನಿಮಗೆ ನಿಜವಾಗಿ ಹೇಳುತ್ತೇನೆ.
45 : “ಆದರೆ ಆ ಸೇವಕನು ತನ್ನಲ್ಲೇ, ‘ನನ್ನ ಯಜಮಾನ ಬಹಳ ತಡಮಾಡಿ ಬರುತ್ತಾನೆ’, ಎಂದುಕೊಂಡು ಗಂಡಾಳು ಹೆಣ್ಣಾಳು ಎನ್ನದೆ ಹೊಡೆಯುವುದಕ್ಕೂ ಅಮಲೇರುವಷ್ಟು ತಿಂದು ಕುಡಿಯುವುದಕ್ಕೂ ತೊಡಗಿದರೆ
46 : ಅವನು ನಿರೀಕ್ಷಿಸದ ದಿನದಲ್ಲಿ, ತಿಳಿಯದ ಗಳಿಗೆಯಲ್ಲಿ ಯಜಮಾನನು ಬಂದು ಅವನನ್ನು ಚಿತ್ರಹಿಂಸೆಗೂ ವಿಶ್ವಾಸವಿಹೀನರ ದುರ್ಗತಿಗೂ ಗುರಿಮಾಡುವನು.
47 : “ಸೇವಕನು ಯಜಮಾನನ ಇಷ್ಟಾರ್ಥವನ್ನು ಅರಿತುಕೊಂಡಿದ್ದರೂ ಅಜಾಗರೂಕನಾಗಿ ಇದ್ದರೆ ಕಠಿಣ ಶಿಕ್ಷೆಗೆ ಗುರಿಯಾಗುತ್ತಾನೆ.
48 : ಅರಿಯದೆ ಅಜಾಗರೂಕನಾಗಿದ್ದರೆ ಕಡಿಮೆ ಶಿಕ್ಷೆಗೆ ಗುರಿಯಾಗುತ್ತಾನೆ. ಹೆಚ್ಚು ಪಡೆದವನಿಂದ ಹೆಚ್ಚು ನಿರೀಕ್ಷಿಸಲಾಗುವುದು. ಇನ್ನೂ ಹೆಚ್ಚು ವಹಿಸಿಕೊಂಡವನಿಂದ ಇನ್ನೂ ಹೆಚ್ಚಾಗಿ ಕೇಳಲಾಗುವುದು.
ಯೇಸು ನಿಮಿತ್ತ ಭಿನ್ನಭೇದಗಳು
(ಮತ್ತಾ. 10.34-36)
49 : “ನಾನು ಬಂದಿರುವುದು ಜಗತ್ತಿನಲ್ಲಿ ಬೆಂಕಿಯನ್ನು ಹೊತ್ತಿಸಲು. ಅದು ಈಗಾಗಲೇ ಉರಿಯುತ್ತಿರಬೇಕೆಂಬುದೇ ನನ್ನ ಬಯಕೆ.
50 : ಆದರೆ ನಾನು ಪಡೆಯಬೇಕಾದ ಶ್ರಮಾಸ್ನಾನ ಒಂದುಂಟು. ಅದು ಈಡೇರುವ ತನಕ ನನಗೆ ನೆಮ್ಮದಿಯಿಲ್ಲ.
51 : ನಾನು ಲೋಕಕ್ಕೆ ಸಮಾಧಾನವನ್ನು ತರಲು ಬಂದೆ ಎಂದು ಭಾವಿಸುತ್ತೀರೋ? ಇಲ್ಲ. ಭಿನ್ನಭೇದಗಳನ್ನು ಉಂಟುಮಾಡಲು ಬಂದೆನೆಂದು ನಿಮಗೆ ಒತ್ತಿ ಹೇಳುತ್ತೇನೆ.
52 : ಹೇಗೆಂದರೆ, ಒಂದೇ ಮನೆಯಲ್ಲಿರುವ ಐವರಲ್ಲಿ, ಇಂದಿನಿಂದ ಇಬ್ಬರಿಗೆ ವಿರುದ್ಧ ಮೂವರು, ಮೂವರಿಗೆ ವಿರುದ್ಧ ಇಬ್ಬರು ವಿಭಾಗವಾಗುವರು.
53 : ಮಗನಿಗೆ ವಿರುದ್ದವಾಗಿ ತಂದೆ, ಮಗಳಿಗೆ ವಿರುದ್ಧವಾಗಿ ತಾಯಿ, ಸೊಸೆಗೆ ವಿರುದ್ಧವಾಗಿ ಅತ್ತೆ, ಪರಸ್ಪರ ವಿರೋಧವಾಗಿ ವಿಂಗಡಿಸಿ ಹೋಗುವರು,” ಎಂದರು.
ಕಾಲ ಪ್ರಜ್ಞೆ
(ಮತ್ತಾ. 16.2-3)
54 : ಇದೂ ಅಲ್ಲದೆ ಯೇಸುಸ್ವಾಮಿ ಜನ ಸಮೂಹವನ್ನು ನೋಡಿ, “ಪಶ್ಚಿಮ ದಿಕ್ಕಿನಲ್ಲಿ ಮೋಡ ಏಳುವುದನ್ನು ನೀವು ನೋಡಿದ ಕೂಡಲೇ, ‘ಭಾರಿ ಮಳೆ ಬರುತ್ತದೆ’ ಎನ್ನುತ್ತೀರಿ; ಹಾಗೆಯೇ ಆಗುತ್ತದೆ.
55 : ದಕ್ಷಿಣ ದಿಕ್ಕಿನ ಗಾಳಿ ಬೀಸಿದಾಗ ಉರಿಬಿಸಿಲು ಎನ್ನುತ್ತೀರಿ; ಅಂತೆಯೇ ಇರುತ್ತದೆ.
56 : ಆಷಾಡಭೂತಿಗಳೇ, ಭೂಮ್ಯಾಕಾಶಗಳ ಲಕ್ಷಣಗಳನ್ನು ನೀವು ಸರಿಯಾಗಿ ಅರಿತುಕೊಳ್ಳಬಲ್ಲಿರಿ; ಆದರೆ ಪ್ರಸ್ತುತ ಕಾಲವನ್ನು ಅರ್ಥಮಾಡಿಕೊಳ್ಳಲಾರಿರಾ?
ವ್ಯಾಜ್ಯಗಾರನೊಡನೆ ನೇರಸಂಧಾನ
(ಮತ್ತಾ. 5.25-26)
57 : “ನ್ಯಾಯನಿರ್ಣಯವನ್ನು ನಿಮ್ಮಲ್ಲಿಯೇ ನೀವು ಏಕೆ ಮಾಡಿಕೊಳ್ಳಬಾರದು?
58 : ನೀನು ನ್ಯಾಯಾಧಿಪತಿಯ ಬಳಿಗೆ ಹೋಗಬೇಕಾಗಿ ಬಂದಲ್ಲಿ, ದಾರಿಯಲ್ಲೇ ನಿನ್ನ ವಿರೋಧಿಯೊಡನೆ ವ್ಯಾಜ್ಯ ತೀರಿಸಿಕೊಳ್ಳಲು ಪ್ರಯತ್ನಿಸು. ಇಲ್ಲದಿದ್ದರೆ ಅವನು ನಿನ್ನನ್ನು ನ್ಯಾಯಾಧಿಪತಿಯ ಮುಂದೆ ಎಳೆದೊಯ್ಯಬಹುದು; ನ್ಯಾಯಾಧಿಪತಿ ನಿನ್ನನ್ನು ಸೆರೆಯ ಅಧಿಕಾರಿಯ ಕೈಗೊಪ್ಪಿಸಬಹುದು. ಸೆರೆ ಅಧಿಕಾರಿ ನಿನ್ನನ್ನು ಸೆರೆಮನೆಯಲ್ಲಿ ಹಾಕಬಹುದು.
59 : ಲ್ಲಿಂದ ನೀನು ಹೊರಗೆ ಬರಬೇಕಾದರೆ ಕಡೇ ಕಾಸನ್ನೂ ಬಿಡದೆ ಎಲ್ಲವನ್ನೂ ಸಲ್ಲಿಸಬೇಕಾಗುವುದೆಂಬುದು ನಿಶ್ಚಯ,” ಎಂದರು.
ಪಾಪಕ್ಕೆ ವಿಮುಖರಾಗಿರಿ