1 : ಪುನಃ ಯೇಸುಸ್ವಾಮಿ, ಅವರಿಗೆ “ಇಲ್ಲಿರುವವರಲ್ಲಿ ಕೆಲವರು ದೇವರ ಸಾಮ್ರಾಜ್ಯವು ಪ್ರಭಾವದೊಡನೆ ಜಗತ್ತಿನಲ್ಲಿ ಪ್ರತ್ಯಕ್ಷವಾಗುವುದನ್ನು ನೋಡದೆ ಮರಣಹೊಂದುವುದಿಲ್ಲ ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ,” ಎಂದು ಹೇಳಿದರು.
ಯೇಸುವಿನ ರೂಪಾಂತರ
(ಮತ್ತಾ. 17.1-13; ಲೂಕ 9.28-36)
2 : ಆರು ದಿನಗಳ ಬಳಿಕ ಪೇತ್ರ, ಯಕೋಬ ಮತ್ತು ಯೊವಾನ್ನ ಇವರನ್ನು ಮಾತ್ರ ತಮ್ಮೊಡನೆ ಕರೆದುಕೊಂಡು ಯೇಸುಸ್ವಾಮಿ ಎತ್ತರವಾದ ಒಂದು ಬೆಟ್ಟಕ್ಕೆ ಹೋದರು. ಅಲ್ಲಿ ಆ ಶಿಷ್ಯರ ಕಣ್ಣೆದುರಿಗೇ ಯೇಸು ರೂಪಾಂತರ ಹೊಂದಿದರು.
3 : ಆಗ ಅವರ ಉಡುಪು ಅತ್ಯಂತ ಶುಭ್ರವಾಗಿ ಹೊಳೆಯಿತು. ಜಗದ ಯಾವ ಅಗಸನಿಂದಲೂ ಮಡಿಮಾಡಲಾಗದಷ್ಟು ಅದು ಬಿಳುಪಾಯಿತು.
4 : ಮೋಶೆ ಮತ್ತು ಎಲೀಯ ಪ್ರತ್ಯಕ್ಷರಾಗಿ ಯೇಸುವಿನೊಡನೆ ಮಾತನಾಡುತ್ತಿದ್ದುದು ಶಿಷ್ಯರಿಗೆ ಕಾಣಿಸಿತು.
5 : ಆಗ ಪೇತ್ರನು ಯೇಸುವಿಗೆ, “ಗುರುದೇವಾ, ನಾವು ಇಲ್ಲೇ ಇರುವುದು ಒಳ್ಳೆಯದು; ಅಪ್ಪಣೆಯಾಗಲಿ, ಮೂರು ಗುಡಾರಗಳನ್ನು ಕಟ್ಟುವೆವು; ತಮಗೊಂದು, ಮೋಶೆಗೊಂದು ಮತ್ತು ಎಲೀಯನಿಗೊಂದು,” ಎಂದನು.
6 : ಪೇತ್ರನಿಗೆ ತಾನು ಏನು ಹೇಳುತ್ತಿದ್ದೇನೆಂದೇ ತಿಳಿಯಲಿಲ್ಲ. ಶಿಷ್ಯರು ಅಷ್ಟು ಭಯಭ್ರಾಂತರಾಗಿದ್ದರು!
7 : ಅಷ್ಟರಲ್ಲಿ ಮೇಘವೊಂದು ಅವರನ್ನು ಆವರಿಸಿತು. ಅದರೊಳಗಿಂದ, “ಈತನು ನನ್ನ ಪುತ್ರ, ನನಗೆ ಪರಮಪ್ರಿಯನು, ಈತನ ಮಾತಿಗೆ ಕಿವಿಗೊಡಿ,” ಎಂಬ ವಾಣಿ ಕೇಳಿಸಿತು.
8 : ತಕ್ಷಣ, ಶಿಷ್ಯರು ಸುತ್ತಲೂ ನೋಡಲು ತಮ್ಮೊಂದಿಗೆ ಯೇಸುವೊಬ್ಬರನ್ನೇ ಹೊರತು ಬೇರೆ ಯಾರನ್ನೂ ಕಾಣಲಿಲ್ಲ.
9 : ಅನಂತರ ಯೇಸು ಮತ್ತು ಅವರ ಶಿಷ್ಯರು ಬೆಟ್ಟದಿಂದ ಇಳಿದುಬರುವಾಗ, “ನರಪುತ್ರನು ಸತ್ತು ಪುನರುತ್ಥಾನಹೊಂದುವ ತನಕ ನೀವು ಕಂಡದ್ದನ್ನು ಯಾರಿಗೂ ಹೇಳಬೇಡಿ,” ಎಂದು ಆಜ್ಞಾಪಿಸಿದರು.
10 : ಅಂತೆಯೇ ಶಿಷ್ಯರು ಇದನ್ನು ಯಾರಿಗೂ ಹೇಳಲಿಲ್ಲ; ಆದರೂ ‘ಸತ್ತು ಪುನರುತ್ಥಾನ ಹೊಂದುವುದು’ ಎಂದರೆ ಏನು? ಎಂದು ತಮ್ಮತಮ್ಮೊಳಗೆ ಚರ್ಚಿಸಿಕೊಂಡರು.
11 : ಅನಂತರ, “ಎಲೀಯನು ಮೊದಲು ಬರಬೇಕಾದುದು ಅಗತ್ಯವೆಂದು ಶಾಸ್ತ್ರಜ್ಞರು ಹೇಳುತ್ತಾರಲ್ಲಾ, ಅದು ಹೇಗೆ?” ಎಂದು ಶಿಷ್ಯರು ಯೇಸುವನ್ನು ಕೇಳಿದರು.
12 : ಅದಕ್ಕೆ ಅವರು, “ ‘ಎಲೀಯನು ಮೊದಲು ಬಂದು ಎಲ್ಲವನ್ನೂ ಸಜ್ಜುಗೊಳಿಸುವನೆಂಬುದೇನೋ ನಿಜ. ಆದರೂ ನರಪುತ್ರನು ಜನರಿಂದ ತೀವ್ರಯಾತನೆಯನ್ನು ಅನುಭವಿಸಿ ಅವರಿಂದ ತಿರಸ್ಕøತನಾಗಬೇಕು,’ ಎಂದು ಪವಿತ್ರಗ್ರಂಥದಲ್ಲಿ ಬರೆದಿದೆಯಲ್ಲವೆ; ಇದು ಹೇಗೆ?
13 : ಆದರೆ ನಾನು ನಿಮಗೆ ಹೇಳುವುದೇನೆಂದರೆ, ‘ಎಲೀಯನು ಬಂದಾಗಿದೆ; ಆತನ ವಿಷಯವಾಗಿ ಮೊದಲೇ ಬರೆದಿರುವಂತೆ ಜನರು ತಮ್ಮ ಇಚ್ಛಾನುಸಾರ ಆತನನ್ನು ಹಿಂಸಿಸಿದ್ದೂ ಆಗಿದೆ’,” ಎಂದರು.
ದೆವ್ವಪೀಡಿತ ಬಾಲಕನಿಗೆ ಬಿಡುಗಡೆ
(ಮತ್ತಾ. 17.14-21; ಲೂಕ 9.37-43)
14 : ಅವರೆಲ್ಲರೂ ಹಿಂದಿರುಗಿ ಬಂದಾಗ ಉಳಿದ ಶಿಷ್ಯರ ಸುತ್ತಲೂ ಜನರು ದೊಡ್ಡ ಗುಂಪಾಗಿ ನೆರೆದಿರುವುದನ್ನು, ಧರ್ಮಶಾಸ್ತ್ರಿಗಳು ಇವರೊಡನೆ ವಾದಿಸುತ್ತಿರುವುದನ್ನು ಕಂಡರು.
15 : ನೆರೆದಿದ್ದ ಜನರು ಯೇಸುವನ್ನು ಕಂಡೊಡನೆ ಆಶ್ಚರ್ಯಪಟ್ಟು ಓಡಿಬಂದು, ಅವರಿಗೆ ನಮಸ್ಕರಿಸಿದರು.
16 : ಯೇಸುಸ್ವಾಮಿ, “ನಿಮ್ಮ ವಾಗ್ವಾದ ಏನು?” ಎಂದು ಕೇಳಿದರು.
17 : ಆ ಗುಂಪಿನಲ್ಲಿದ್ದ ಒಬ್ಬನು, “ಬೋಧಕರೇ, ನನ್ನ ಮಗನನ್ನು ತಮ್ಮ ಬಳಿಗೆಂದು ಕರೆತಂದೆ.
18 : ಅವನಿಗೆ ಒಂದು ಮೂಕದೆವ್ವ ಹಿಡಿದಿದೆ. ಅವನ ಮೇಲೆ ಅದು ಬಂದಾಗಲೆಲ್ಲ ಅವನನ್ನು ನೆಲಕ್ಕೆ ಅಪ್ಪಳಿಸುತ್ತದೆ. ಅವನು ನೊರೆಕಾರುತ್ತಾ ಹಲ್ಲು ಕಡಿದುಕೊಳ್ಳುತ್ತಾನೆ. ಆಗ ಅವನ ದೇಹವೆಲ್ಲಾ ಮರಗಟ್ಟಿದಂತಾಗುತ್ತದೆ. ಆ ದೆವ್ವವನ್ನು ಬಿಡಿಸಬೇಕೆಂದು ತಮ್ಮ ಶಿಷ್ಯರನ್ನು ಕೇಳಿಕೊಂಡೆ. ಆದರೆ, ಅದು ಅವರಿಂದಾಗಲಿಲ್ಲ,” ಎಂದನು.
19 : ಇದನ್ನು ಕೇಳಿ ಯೇಸು, “ಅಯ್ಯೋ, ವಿಶ್ವಾಸವಿಲ್ಲದ ಪೀಳಿಗೆಯೇ, ಇನ್ನೆಷ್ಟು ಕಾಲ ನಿಮ್ಮೊಂದಿಗಿರಲಿ! ಇನ್ನೆಷ್ಟು ಕಾಲ ನಿಮ್ಮನ್ನು ಸಹಿಸಿಕೊಳ್ಳಲಿ ! ಅವನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿ” ಎಂದರು.
20 : ಆಗ ಆ ಹುಡುಗನನ್ನು ಯೇಸುವಿನ ಬಳಿಗೆ ಕರೆತಂದರು. ಯೇಸುವನ್ನು ನೋಡಿದಾಕ್ಷಣ ಆ ದೆವ್ವ ಹುಡುಗನನ್ನು ನೆಲಕ್ಕೆ ಅಪ್ಪಳಿಸಿ ಒದ್ದಾಡಿಸಿತು. ಹುಡುಗ ಹೊರಳಾಡುತ್ತಾ ನೊರೆಕಾರಿದನು.
21 : ಯೇಸು, “ಇವನಿಗೆ ಎಷ್ಟು ದಿನದಿಂದ ಹೋಗಾಗುತ್ತಿದೆ?” ಎಂದು ಹುಡುಗನ ತಂದೆಯನ್ನು ವಿಚಾರಿಸಿದರು. ಅದಕ್ಕೆ ಅವನು “ಬಾಲ್ಯದಿಂದಲೇ ಹೀಗಾಗುತ್ತಿದೆ; ಇದಲ್ಲದೆ ದೆವ್ವವು ಇವನನ್ನು ಕೊಲ್ಲಬೇಕೆಂದು ಪದೇ ಪದೇ ಬೆಂಕಿಗೂ ನೀರಿಗೂ ದೂಡಿದೆ;
22 : ತಮ್ಮಿಂದ ಏನಾದರೂ ಸಾಧ್ಯವಾದರೆ, ನಮ್ಮ ಮೇಲೆ ದಯವಿಟ್ಟು ಸಹಾಯಮಾಡಿ,” ಎಂದು ಯೇಸುವನ್ನು ಬೇಡಿಕೊಂಡನು.
23 : ಅದಕ್ಕೆ ಯೇಸು, “ ‘ಸಾಧ್ಯವಾದರೆ’ ಎನ್ನುತ್ತೀಯಲ್ಲಾ? ದೇವರಲ್ಲಿ ವಿಶ್ವಾಸ ಇಡುವವನಿಗೆ ಎಲ್ಲವೂ ಸಾಧ್ಯ!” ಎಂದರು.
24 : ಆಗ ಆ ಬಾಲಕನ ತಂದೆ, “ನಾನು ವಿಶ್ವಾಸಿಸುತ್ತೇನೆ, ನನ್ನ ವಿಶ್ವಾಸದಲ್ಲಿ ಕೊರತೆಯಿದ್ದರೆ ನೆರವು ನೀಡಿ,” ಎಂದು ಯೇಸುವಿಗೆ ಮೊರೆಯಿಟ್ಟನು.
25 : ಆಗ ಆ ಬಾಲಕನ ತಂದೆ, “ನಾನು ವಿಶ್ವಾಸಿಸುತ್ತೇನೆ, ನನ್ನ ವಿಶ್ವಾಸದಲ್ಲಿ ಕೊರತೆಯಿದ್ದರೆ ನೆರವು ನೀಡಿ,” ಎಂದು ಯೇಸುವಿಗೆ ಮೊರೆಯಿಟ್ಟನು.
25 : ಜನಸಂದಣಿ ಬೆಳೆಯುತ್ತಿರುವುದನ್ನು ಕಂಡ ಯೇಸು, ಆ ದೆವ್ವವನ್ನು ಗದರಿಸಿ, “ಎಲೈ, ಕಿವುಡು ಮೂಕ ದೆವ್ವವೇ, ಇವನನ್ನು ಬಿಟ್ಟುತೊಲಗು; ಇನ್ನೆಂದಿಗೂ ಇವನೊಳಗೆ ಪ್ರವೇಶಿಸಕೂಡದೆಂದು ನಿನಗೆ ಆಜ್ಞಾಪಿಸುತ್ತೇನೆ,” ಎಂದರು.
26 : ದೆವ್ವವು ಚೀರುತ್ತಾ, ಹುಡುಗನನ್ನು ವಿಲವಿಲನೆ ಒದ್ದಾಡಿಸಿ, ಕೊನೆಗೆ ಬಿಟ್ಟುಹೋಯಿತು. ಹುಡುಗನು ಶವದಂತಾದನು. ಅಲ್ಲಿದ್ದವರಲ್ಲಿ ಅನೇಕರು ‘ಹುಡುಗ ಸತ್ತುಹೋದ,’ ಎಂದುಕೊಂಡರು.
27 : ಆದರೆ ಯೇಸು ಅವನ ಕೈಹಿಡಿದು ಎತ್ತಲು ಅವನು ಎದ್ದು ನಿಂತನು.
28 : ಅಂದು ಯೇಸುಸ್ವಾಮಿ ಮನೆಗೆ ಬಂದಾಗ, ಶಿಷ್ಯರು ಪ್ರತ್ಯೇಕವಾಗಿ ಅವರ ಬಳಿಗೆ ಬಂದು, “ಆ ದೆವ್ವವನ್ನು ಹೊರಗಟ್ಟಲು ನಮ್ಮಿಂದೇಕೆ ಆಗಲಿಲ್ಲ?” ಎಂದು ಕೇಳಿದರು.
29 : ಅದಕ್ಕೆ ಯೇಸು, “ಈ ಬಗೆಯ ದೆವ್ವವನ್ನು ಹೊರಗಟ್ಟಲು ಪ್ರಾರ್ಥನೆಯೇ ಹೊರತು ಬೇರೆ ಮಾರ್ಗವಿಲ್ಲ,” ಎಂದರು.
ಯೇಸುವಿನ ಮರಣ ಪುನರುತ್ಥಾನದ ಎರಡನೆಯ ಪ್ರಕಟಣೆ
(ಮತ್ತಾ. 17.22-23; ಲೂಕ 9.43-45)
30 : ಯೇಸುಸ್ವಾಮಿ ಮತ್ತು ಶಿಷ್ಯರು ಹೊರಟು ಗಲಿಲೇಯದ ಮಾರ್ಗವಾಗಿ ಮುಂದಕ್ಕೆ ಪ್ರಯಾಣ ಮಾಡಿದರು. ಇದು ಯಾರಿಗೂ ತಿಳಿಯಬಾರದು ಎಂಬುದು ಯೇಸುವಿನ ಇಚ್ಛೆಯಾಗಿತ್ತು.
31 : ಕಾರಣ, ತಮ್ಮ ಶಿಷ್ಯರಿಗೆ ಪ್ರಬೋಧಿಸುವುದರಲ್ಲಿ ಅವರು ನಿರತರಾಗಿದ್ದರು. “ನರಪುತ್ರನನ್ನು ಜನರ ವಶಕ್ಕೆ ಒಪ್ಪಿಸಲಾಗುವುದು. ಅವರು ಆತನನ್ನು ಕೊಲ್ಲುವರು. ಕೊಂದ ಮೂರನೆಯ ದಿನ ಆತನು ಪುನರುತ್ಥಾನ ಹೊಂದುವನು,” ಎಂದು ಯೇಸು ಅವರಿಗೆ ತಿಳಿಸಿದರು.
32 : ಆದರೆ ಯೇಸು ಹೇಳಿದ ಈ ಮಾತುಗಳನ್ನು ಶಿಷ್ಯರು ಅರ್ಥಮಾಡಿಕೊಳ್ಳಲಿಲ್ಲ. ಅವುಗಳ ಬಗ್ಗೆ ಪ್ರಶ್ನಿಸಲು ಸಹ ಅಂಜಿದರು.
ಶ್ರೇಷ್ಠನು ಯಾರು?
(ಮತ್ತಾ. 18.1-5; ಲೂಕ 9.46-48)
33 : ಅನಂತರ ಅವರೆಲ್ಲರೂ ಕಫೆರ್ನವುಮಿಗೆ ಬಂದರು. ಮನೆ ಸೇರಿದಾಗ ಯೇಸುಸ್ವಾಮಿ, “ದಾರಿಯಲ್ಲಿ ಬರುತ್ತಾ ನೀವು ನಿಮ್ಮಲ್ಲೇ ಏನು ಚರ್ಚೆಮಾಡುತ್ತಿದ್ದಿರಿ?” ಎಂದು ಶಿಷ್ಯರನ್ನು ಕೇಳಿದರು. ಅವರು ಮೌನ ತಾಳಿದರು.
34 : ಕೆಂದರೆ, ತಮ್ಮಲ್ಲಿ ಯಾವನು ಅತಿ ಶ್ರೇಷ್ಠನು ಎಂದು ತಮ್ಮ ತಮ್ಮಲ್ಲೇ ವಾದಿಸುತ್ತಾ ಬಂದಿದ್ದರು.
35 : ಯೇಸು ಕುಳಿತುಕೊಂಡು, ಹನ್ನೆರಡು ಮಂದಿಯನ್ನೂ ಕರೆದು, ಅವರಿಗೆ, ‘ನಿಮ್ಮಲ್ಲಿ ಮೊದಲಿಗನಾಗ ಬಯಸುವವನು ಎಲ್ಲರಿಗೂ ಕಡೆಯವನಾಗಿರಲಿ; ಎಲ್ಲರ ಸೇವೆ ಮಾಡುವವನಾಗಿ ಇರಲಿ,’ ಎಂದರು.
36 : ಅನಂತರ ಯೇಸು, ಒಂದು ಚಿಕ್ಕ ಮಗುವನ್ನು ಕರೆದು ಅವರ ನಡುವೆ ನಿಲ್ಲಿಸಿ, ಅದನ್ನು ತಬ್ಬಿಕೊಂಡು ತಮ್ಮ ಶಿಷ್ಯರಿಗೆ,
37 : “ನನ್ನ ಹೆಸರಿನಲ್ಲಿ ಇಂಥ ಮಗುವೊಂದನ್ನು ಯಾರು ಬರಮಾಡಿಕೊಳ್ಳುತ್ತಾನೋ ಅವನು ನನ್ನನ್ನೇ ಬರಮಾಡಿಕೊಳ್ಳುತ್ತಾನೆ; ಯಾರು ನನ್ನನ್ನು ಬರಮಾಡಿಕೊಳ್ಳುತ್ತಾನೋ ಅವನು ನನ್ನನ್ನು ಅಲ್ಲ, ನನ್ನನ್ನು ಕಳುಹಿಸಿದಾತನನ್ನೇ ಬರಮಾಡಿಕೊಳ್ಳುತ್ತಾನೆ,” ಎಂದರು.
ಎದುರುವಾದಿ ಅಲ್ಲದವನು ಪರವಾದಿ
(ಲೂಕ 9.49-50)
38 : ಯೊವಾನ್ನನು ಯೇಸುಸ್ವಾಮಿಗೆ, “ಗುರುವೇ, ಯಾರೋ ಒಬ್ಬನು ತಮ್ಮ ಹೆಸರಿನಲ್ಲಿ ದೆವ್ವ ಬಿಡಿಸುವುದನ್ನು ಕಂಡೆವು. ಅವನು ನಮ್ಮವನಲ್ಲ. ಆದಕಾರಣ ಅವನನ್ನು ತಡೆದೆವು,” ಎಂದನು.
39 : ಅದಕ್ಕೆ ಯೇಸು, “ಅವನನ್ನು ತಡೆಯಬೇಡಿ, ನನ್ನ ಹೆಸರಿನಲ್ಲಿ ಅದ್ಭುತ ಮಾಡುವವನು ಮರುಕ್ಷಣವೇ ನನ್ನ ವಿಷಯವಾಗಿ ಅಪಪ್ರಚಾರ ಮಾಡನು.
40 : ನಮಗೆ ವಿರೋಧಿ ಅಲ್ಲದವನು ನಮ್ಮ ಪರವಾದಿ.
41 : ನೀವು ಕ್ರಿಸ್ತಭಕ್ತರು ಎಂದು ಯಾವನಾದರೂ ನಿಮಗೆ ಕುಡಿಯಲು ಒಂದು ಲೋಟ ನೀರನ್ನು ಕೊಟ್ಟರೂ ಅದಕ್ಕೆ ತಕ್ಕ ಪ್ರತಿಫಲವನ್ನು ಅವನು ತಪ್ಪದೆ ಪಡೆಯುವನು ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ,” ಎಂದರು.
ಪಾಪಕ್ಕೆ ಕಾರಣರಾದವರಿಗೆ ಶಾಪ
(ಮತ್ತಾ. 18.6-9; ಲೂಕ 17.1-2)
42 : ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಂದುವರಿಸುತ್ತಾ, “ನನ್ನಲ್ಲಿ ವಿಶ್ವಾಸ ಇಟ್ಟಿರುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವನಾದರೂ ಪಾಪಕ್ಕೆ ಕಾರಣನಾದರೆ, ಅಂಥವನ ಕೊರಳಿಗೆ ದೊಡ್ಡ ಬೀಸುಕಲ್ಲನ್ನು ಕಟ್ಟಿ, ಅವನನ್ನು ಸಮುದ್ರದಲ್ಲಿ ದಬ್ಬುವುದೇ ಅವನಿಗೆ ಲೇಸು.
43 : ನಿನ್ನ ಕೈ ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿ ಹಾಕು;
44 : ಎರಡು ಕೈಗಳಿದ್ದು ನರಕದ ಆರದ ಬೆಂಕಿಗೆ ಗುರಿಯಾಗುವುದಕ್ಕಿಂತ ಅಂಗಹೀನನಾಗಿ ಅಮರಜೀವವನ್ನು ಪಡೆಯುವುದೇ ಲೇಸು.
45 : ನಿನ್ನ ಕಾಲು ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿಹಾಕು,
46 : ಎರಡು ಕಾಲುಳ್ಳವನಾಗಿ ನರಕಕ್ಕೆ ತಳ್ಳಿಸಿಕೊಳ್ಳುವುದಕ್ಕಿಂತ ಕುಂಟನಾಗಿ ಅಮರಜೀವವನ್ನು ಪಡೆಯುವುದೇ ಲೇಸು.
47 : ನಿನ್ನ ಕಣ್ಣು ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕಿತ್ತುಹಾಕು. ಎರಡು ಕಣ್ಣುಳ್ಳವನಾಗಿ ನರಕಕ್ಕೆ ತಳ್ಳಿಸಿಕೊಳ್ಳುವುದಕ್ಕಿಂತ ಒಕ್ಕಣ್ಣನಾಗಿ ದೇವರ ಸಾಮ್ರಾಜ್ಯ ಸೇರುವುದೇ ಲೇಸು.
48 : ನರಕದಲ್ಲಿ ಅವರನ್ನು ಕಡಿಯುವ ಹುಳ ಸಾಯದು, ಸುಡುವ ಬೆಂಕಿ ಆರದು.
49 : ಊಟಕ್ಕೆ ಉಪ್ಪಿನಂತೆ ಪ್ರತಿಯೊಬ್ಬನಿಗೆ ಅಗ್ನಿಪರೀಕ್ಷೆ ಅವಶ್ಯಕ. ಒಪ್ಪಿಗೆಯಾಗಿ ಸಮಾಧಾನದಿಂದಿರಿ,” ಎಂದರು.
50 : ಉಪ್ಪೇನೋ ಪ್ರಯೋಜನಕರ. ಆದರೆ ಉಪ್ಪೇ ಸಪ್ಪೆಯಾದರೆ, ಇನ್ನು ಯಾವುದರಿಂದ ಅದನ್ನು ಪುನಃ ರುಚಿಗೊಳಿಸಲಾದೀತು? ನೀವು ಉಪ್ಪಿನಂತೆ ಒಬ್ಬರಿಗೊಬ್ಬರು ಒಪ್ಪಿಗೆಯಾಗಿ ಸಮಾಧಾನದಿಂದಿರಿ,” ಎಂದರು.