Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಮಾರ್ಕ


1 : ಒಮ್ಮೆ ಫರಿಸಾಯರು ಮತ್ತು ಜೆರುಸಲೇಮಿನಿಂದ ಕೆಲವು ಮಂದಿ ಧರ್ಮಶಾಸ್ತ್ರಿಗಳು ಯೇಸುಸ್ವಾಮಿಯ ಬಳಿಗೆ ಬಂದು ಸೇರಿದರು.
2 : ಯೇಸುವಿನ ಶಿಷ್ಯರಲ್ಲಿ ಕೆಲವರು ಅಶುದ್ಧ ಕೈಗಳಿಂದ, ಎಂದರೆ ಶುದ್ಧಾಚಾರಕ್ಕೆ ಅನುಗುಣವಾಗಿ ಕೈತೊಳೆದುಕೊಳ್ಳದೆ ಊಟಮಾಡುವುದನ್ನು ಅವರು ನೋಡಿದರು.
3 : ಫರಿಸಾಯರು ಇತರ ಯೆಹೂದ್ಯರಂತೆ ಕೈಗಳನ್ನು ವಿಧಿಬದ್ಧವಾಗಿ ತೊಳೆಯದೆ ಊಟ ಮಾಡುವುದಿಲ್ಲ. ಇದು ಅವರ ಪೂರ್ವಜರಿಂದ ಬಂದ ಸಂಪ್ರದಾಯ.
4 : ಪೇಟೆ ಬೀದಿಗಳಿಗೆ ಹೋಗಿ ಬಂದರೆ ಸ್ನಾನಮಾಡಿಯೇ ಊಟಮಾಡುವುದು; ತಂಬಿಗೆ, ಚೆÀಂಬು, ತಪ್ಪಲೆಗಳನ್ನು ಸೂತ್ರಬದ್ಧವಾಗಿ ತೊಳೆಯುವುದು; ಇವೇ ಮೊದಲಾದ ಅನೇಕ ಆಚಾರಗಳು ಅವರಲ್ಲಿ ರೂಢಿಯಲ್ಲಿದ್ದುವು.
5 : ಆದುದರಿಂದ ಫರಿಸಾಯರೂ ಧರ್ಮಶಾಸ್ತ್ರಿಗಳೂ, “ನಿನ್ನ ಶಿಷ್ಯರು ಪೂರ್ವಜರಿಂದ ಬಂದ ಆಚಾರಗಳನ್ನೇಕೆ ಅನುಸರಿಸುವುದಿಲ್ಲ? ಅಶುದ್ಧವಾದ ಕೈಗಳಿಂದಲೇ ಅವರು ಊಟ ಮಾಡುತ್ತಿದ್ದಾರಲ್ಲಾ?” ಎಂದು ಯೇಸುವನ್ನು ಕೇಳಿದರು.
6 : ಅದಕ್ಕೆ ಯೇಸು, “ಕಪಟಿಗಳೇ, ನಿಮ್ಮ ವಿಷಯದಲ್ಲಿ ಯೆಶಾಯನು ಎಷ್ಟೊಂದು ಚೆನ್ನಾಗಿ ಪ್ರವಾದಿಸಿದ್ದಾನೆ:
7 : ‘ಬರಿಯ ಮಾತಿನ ಮನ್ನಣೆಯನೀಯುತ, ಹೃದಯವನು ದೂರವಿರಿಸುತ, ನರಕಲ್ಪಿತ ಕಟ್ಟಳೆಗಳನೆ ದೇವವಾಕ್ಯವೆಂದು ಉಪದೇಶಿಸುತ, ಈ ಜನರೆನಗೆ ಮಾಡುವ ಆರಾಧನೆ ವ್ಯರ್ಥ! ಎಂದರು ದೇವರು.’
8 : “ನೀವು ದೇವರ ಆಜ್ಞೆಯನ್ನು ತೊರೆದು ಮಾನವನಿರ್ಮಿತ ಸಂಪ್ರದಾಯಗಳನ್ನು ನಿಷ್ಠೆಯಿಂದ ಪರಿಪಾಲಿಸುತ್ತಿದ್ದೀರಿ.
9 : ಸಂಪ್ರದಾಯದ ನೆವದಲ್ಲಿ ದೇವರ ಆಜ್ಞೆಗಳನ್ನು ನೀವು ಜಾಣ್ಮೆಯಿಂದ ಬದಿಗೊತ್ತಿರುವುದು ಬಲು ಚೆನ್ನಾಗಿದೆ!
10 : ‘ನಿಮ್ಮ ತಂದೆತಾಯಿಗಳನ್ನು ಗೌರವಿಸಬೇಕು; ತಂದೆಯನ್ನಾಗಲೀ ತಾಯಿಯನ್ನಾಗಲೀ ದೂಷಿಸುವವನಿಗೆ ಮರಣದಂಡನೆ ಆಗಲೇಬೇಕು,’ ಎಂಬುದು ಮೋಶೆ ವಿಧಿಸಿದ ಆಜ್ಞೆ.
11 : ನೀವಾದರೋ, ಒಬ್ಬನು ತನ್ನ ತಂದೆಗೆ ಅಥವಾ ತಾಯಿಗೆ ‘ನನ್ನಿಂದ ನಿಮಗೆ ಸಲ್ಲತಕ್ಕದ್ದು “ಕೊರ್ಬಾನ್” (ಎಂದರೆ ದೇವರಿಗೆ ಮುಡಿಪು) ಎಂದು ಹೇಳಿಬಿಟ್ಟರೆ ಸಾಕು,
12 : ಮುಂದೆ ಅವನು ತನ್ನ ತಂದೆತಾಯಿಗಳಿಗೆ ಯಾವ ಸಹಾಯವನ್ನೂ ಮಾಡುವುದಕ್ಕೆ ನೀವು ಬಿಡುವುದಿಲ್ಲ.
13 : “ಹೀಗೆ ನೀವು ಬೋಧಿಸುವ ಸಂಪ್ರದಾಯಗಳಿಂದಾಗಿ ದೇವರ ವಾಕ್ಯವನ್ನೇ ನಿರರ್ಥಕಗೊಳಿಸುತ್ತೀರಿ. ಇಂಥಾ ಕೃತ್ಯಗಳು ಇನ್ನೆಷ್ಟೋ!” ಎಂದರು. ಅಂತರಂಗ ಶುದ್ಧಿ (ಮತ್ತಾ. 15.10-20)
14 : ಅನಂತರ ಯೇಸುಸ್ವಾಮಿ ಜನರ ಗುಂಪನ್ನು ತಮ್ಮ ಬಳಿಗೆ ಕರೆದು,
15 : “ನಾನು ಹೇಳುವುದನ್ನು ನೀವೆಲ್ಲರೂ ಕೇಳಿ ಗ್ರಹಿಸಿಕೊಳ್ಳಿ: ಹೊರಗಿನಿಂದ ಮನುಷ್ಯನ ಒಳಗೆ ಹೋಗುವ ಯಾವುದೂ ಅವನನ್ನು ಕಲುಷಿಗೊಳಿಸುವುದಿಲ್ಲ.
16 : ಮನುಷ್ಯನ ಅಂತರಂಗದಿಂದ ಹೊರಬರುವಂತಹುದೇ ಅವನನ್ನು ಕಲುಷಿತಗೊಳಿಸುತ್ತದೆ. (ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ)” ಎಂದರು.
17 : ಯೇಸು ಜನರ ಗುಂಪನ್ನು ಬಿಟ್ಟು ಮನೆ ಸೇರಿದ ಬಳಿಕ ಶಿಷ್ಯರು, ಅವರ ಬಳಿಗೆ ಬಂದು ಆ ಸಾಮತಿಯ ಅರ್ಥವೇನೆಂದು ಕೇಳಿದರು.
18 : ಅದಕ್ಕೆ ಅವರು, “ನೀವು ಕೂಡ ಮಂದಮತಿಗಳೋ? ನಿಮಗೂ ಇದು ಅರ್ಥವಾಗದೋ?
19 : ಹೊರಗಿನಿಂದ ಮನುಷ್ಯನ ಒಳಕ್ಕೆ ಹೋಗುವ ಯಾವುದೂ ಅವನನ್ನು ಕಲುಷಿತಗೊಳಿಸುವುದಿಲ್ಲ. ಅವನು ತಿಂದದ್ದು ಅವನ ಹೃದಯವನ್ನು ಹೊಕ್ಕದೆ, ಹೊಟ್ಟೆಯನ್ನು ಮಾತ್ರ ಸೇರಿ, ಬಳಿಕ ದೇಹದಿಂದ ವಿಸರ್ಜಿತವಾಗುತ್ತದೆ. (ಹೀಗೆ ಆಹಾರ ಪದಾರ್ಥಗಳು ಯಾವುವೂ ಅಶುದ್ಧವಲ್ಲವೆಂದು ಯೇಸು ಸೂಚಿಸಿದರು.)
20 : ಆದರೆ ಮನುಷ್ಯನ ಅಂತರಂಗದಿಂದ ಹೊರಹೊಮ್ಮುವ ಯೋಚನೆಗಳು ಅವನನ್ನು ಕಲುಷಿತಗೊಳಿಸುತ್ತವೆ.
21 : ಮಾನವನ ಹೃದಯಾಂತರಾಳದಿಂದ ದುರಾಲೋಚನೆ, ಅನೈತಿಕತೆ, ಕಳ್ಳತನ, ಕೊಲೆ, ವ್ಯಭಿಚಾರ, ಲೋಭ,
22 : ಕೆಡುಕುತನ, ಮೋಸ, ಭಂಡತನ, ಅಸೂಯೆ, ಅಪದೂರು, ಅಹಂಕಾರ, ಮೂರ್ಖತನ ಮೊದಲಾದವು ಹೊರಬರುತ್ತವೆ.
23 : ಈ ಎಲ್ಲಾ ಕೇಡುಗಳು ಮಾನವನ ಅಂತರಂಗದಿಂದಲೇ ಉದ್ಭವಿಸಿ, ಅವನನ್ನು ಅಶುದ್ಧ ಮಾಡುತ್ತವೆ,” ಎಂದರು. ಅನ್ಯ ಸ್ತ್ರೀಯ ಅನನ್ಯ ವಿಶ್ವಾಸ (ಮತ್ತಾ. 15.21-28)
24 : ಯೇಸುಸ್ವಾಮಿ ಅಲ್ಲಿಂದ ಹೊರಟು ಟೈರ್ ಹಾಗೂ ಸಿದೋನ್ ಪಟ್ಟಣಗಳ ಸಮೀಪವಿದ್ದ ಪ್ರದೇಶಕ್ಕೆ ಹೋಗಿ ಒಂದು ಮನೆಯಲ್ಲಿ ಇಳಿದುಕೊಂಡರು. ತಾವು ಜನರ ಕಣ್ಣಿಗೆ ಬೀಳಬಾರದೆಂಬುದು ಅವರ ಇಚ್ಛೆಯಾಗಿದ್ದರೂ ಅದು ಸಾಧ್ಯವಾಗಲಿಲ್ಲ.
25 : ಹೊರನಾಡಾದ ಸಿರಿಯ ದೇಶದ ಫೆನಿಷ್ಯ ಪ್ರಾಂತ್ಯಕ್ಕೆ ಸೇರಿದ ಗ್ರೀಕ್ ಮಹಿಳೆ ಒಬ್ಬಳು ಅವರ ವಿಷಯವನ್ನು ಕೇಳಿ, ಒಡನೆ ಅಲ್ಲಿಗೆ ಬಂದು ಅವರ ಪಾದಕ್ಕೆರಗಿದಳು.
26 : ಆಕೆಯ ಚಿಕ್ಕಮಗಳಿಗೆ ದೆವ್ವ ಹಿಡಿದಿತ್ತು. ತನ್ನ ಮಗಳಿಂದ ಪಿಶಾಚಿಯನ್ನು ಹೊರಗಟ್ಟಬೇಕೆಂದು ಆಕೆ ಯೇಸುವನ್ನು ಬೇಡಿಕೊಂಡಳು.
27 : ಆದರೆ ಯೇಸು ಆಕೆಗೆ, “ಮೊದಲು ಮಕ್ಕಳು ತಿಂದು ತೃಪ್ತಿಪಡೆಯಲಿ, ಮಕ್ಕಳ ಆಹಾರವನ್ನು ನಾಯಿಗಳಿಗೆ ಎಸೆಯುವುದು ಸರಿಯಲ್ಲ,” ಎಂದರು.
28 : ಅದಕ್ಕೆ ಆಕೆ, “ಅದು ನಿಜ ಸ್ವಾವಿೂ; ಆದರೂ ಮಕ್ಕಳು ತಿಂದುಬಿಟ್ಟ ಚೂರುಪಾರುಗಳನ್ನು ಮೇಜಿನ ಕೆಳಗಿರುವ ನಾಯಿಗಳು ತಿನ್ನುತ್ತವಲ್ಲವೆ?” ಎಂದಳು.
29 : ಆಕೆಯ ಮಾತುಗಳನ್ನು ಕೇಳಿ ಯೇಸು, “ಚೆನ್ನಾಗಿ ಹೇಳಿದೆ, ನಿಶ್ಚಿಂತೆಯಿಂದ ಮನೆಗೆ ಹಿಂದಿರುಗು. ದೆವ್ವ ನಿನ್ನ ಮಗಳನ್ನು ಬಿಟ್ಟುತೊಲಗಿದೆ,” ಎಂದರು.
30 : ಆಕೆ ಮನೆಗೆ ಹೋದಾಗ, ಮಗಳು ಹಾಸಿಗೆಯ ಮೇಲೆ ಸುಖವಾಗಿ ಮಲಗಿರುವುದನ್ನು ಕಂಡಳು. ದೆವ್ವ ಅವಳನ್ನು ಬಿಟ್ಟು ಹೋಗಿತ್ತು. ಕಿವುಡರು ಕೇಳಲಿ, ಮೂಕರು ಮಾತನಾಡಲಿ !
31 : ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು ಸಿದೋನಿನ ಮಾರ್ಗವಾಗಿ ದೆಕಪೊಲಿ ಪ್ರದೇಶವನ್ನು ಹಾದು ಗಲಿಲೇಯ ಸರೋವರದ ತೀರಕ್ಕೆ ಹಿಂದಿರುಗಿದರು.
32 : ಮಾತನಾಡಲಾಗದ ಒಬ್ಬ ಕಿವುಡನನ್ನು ಜನರು ಅವರ ಬಳಿಗೆ ಕರೆತಂದರು. ಅವನ ಮೇಲೆ ಕೈಗಳನ್ನಿಡಬೇಕೆಂದು ಬೇಡಿಕೊಂಡರು.
33 : ಯೇಸು ಅವನನ್ನು ಜನರ ಗುಂಪಿನಿಂದ ಪ್ರತ್ಯೇಕವಾಗಿ ಕರೆದೊಯ್ದು, ತಮ್ಮ ಬೆರಳುಗಳನ್ನು ಅವನ ಕಿವಿಯೊಳಗೆ ಇಟ್ಟರು.
34 : ತಮ್ಮ ಉಗುಳಿನಿಂದ ಅವನ ನಾಲಗೆಯನ್ನು ಮುಟ್ಟಿದರು. ಬಳಿಕ ಸ್ವರ್ಗದತ್ತ ಕಣ್ಣೆತ್ತಿ ನೋಡಿ, ದೀರ್ಘವಾಗಿ ಉಸಿರೆಳೆದು, ‘ಎಪ್ಫಥಾ’ ಎಂದರೆ ‘ತೆರೆಯಲಿ’ ಎಂದರು.
35 : ತಕ್ಷಣವೇ ಅವನ ಕಿವಿಗಳು ತೆರೆದವು; ನಾಲಗೆಯ ಬಿಗಿ ಸಡಿಲಗೊಂಡಿತು; ಅವನು ಸರಾಗವಾಗಿ ಮಾತನಾಡತೊಡಗಿದನು.
36 : ಇದನ್ನು ಯಾರಿಗೂ ಹೇಳಕೂಡದೆಂದು ಯೇಸು ಜನರಿಗೆ ಕಟ್ಟಪ್ಪಣೆ ಮಾಡಿದರು. ಆದರೆ ಎಷ್ಟು ಹೇಳಿದರೂ ಕೇಳದೆ ಅವರು ಮತ್ತಷ್ಟು ಆಸಕ್ತಿಯಿಂದ ಈ ಕಾರ್ಯವನ್ನು ಪ್ರಚಾರ ಮಾಡಿದರು.
37 : ಎಲ್ಲರೂ ಆಶ್ಚರ್ಯಭರಿತರಾಗಿ, “ಇವರು ಎಲ್ಲಾ ಕಾರ್ಯವನ್ನು ಚೆನ್ನಾಗಿ ಮಾಡುತ್ತಾರೆ; ಕಿವುಡರು ಕೇಳುವಂತೆಯೂ ಮೂಕರು ಮಾತನಾಡುವಂತೆಯೂ ಮಾಡುತ್ತಾರಲ್ಲಾ!” ಎಂದುಕೊಳ್ಳುತ್ತಿದ್ದರು. ಏಳು ರೊಟ್ಟಿಗಳಿಂದ ನಾಲ್ಕುಸಾವಿರ ಜನಕ್ಕೆ ತೃಪ್ತಿ (ಮತ್ತಾ. 15.32-39)

· © 2017 kannadacatholicbible.org Privacy Policy