1 : ಯೇಸುಸ್ವಾಮಿ ಗಲಿಲೇಯ ಸರೋವರದ ತೀರದಲ್ಲಿ ಮತ್ತೆ ಬೋಧಿಸಲಾರಂಭಿಸಿದರು. ಜನರು ಕಿಕ್ಕಿರಿದು ಸುತ್ತಲೂ ನೆರೆದುಬಂದಿದ್ದರು. ಆದುದರಿಂದ ಅವರು ಸರೋವರದಲ್ಲಿದ್ದ ದೋಣಿಯೊಂದನ್ನು ಹತ್ತಿ ಕುಳಿತರು.
2 : ಜನರು ದಡದಲ್ಲೇ ಉಳಿದರು. ಆಗ ಯೇಸು ಅವರಿಗೆ ಅನೇಕ ವಿಷಯಗಳನ್ನು ಸಾಮತಿಗಳ ಮೂಲಕ ಬೋಧಿಸುತ್ತಾ ಹೀಗೆಂದರು:
3 : “ಕೇಳಿ, ಒಬ್ಬ ರೈತ ಬಿತ್ತುವುದಕ್ಕೆ ಹೊರಟ.
4 : ಬಿತ್ತನೆಮಾಡುತ್ತಾ ಇದ್ದಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದವು. ಬಿದ್ದುದೇ ಹಕ್ಕಿಗಳು ಬಂದು ಅವುಗಳನ್ನು ತಿಂದುಬಿಟ್ಟವು.
5 : ಬೇರೆ ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಕಲ್ಲುನೆಲದ ಮೇಲೆ ಬಿದ್ದವು. ಅಲ್ಲಿ ಮಣ್ಣು ಬಹಳ ತೆಳ್ಳಗಿದ್ದುದರಿಂದ ಅವು ಬೇಗನೆ ಮೊಳೆತವು;
6 : ಬಿಸಿಲೇರಿದಾಗ ಬಾಡಿದವು; ಆಳವಾಗಿ ಬೇರೂರಲು ಆಗದ ಕಾರಣ ಅವು ಒಣಗಿಹೋದವು.
7 : ಇನ್ನು ಕೆಲವು ಬೀಜಗಳು ಮುಳ್ಳುಪೊದೆಗಳ ನಡುವೆ ಬಿದ್ದವು. ಮುಳ್ಳು ಪೊದೆಗಳು ಸಸ್ಯಗಳ ಸಮೇತ ಅವುಗಳನ್ನು ಅದುಮಿಬಿಟ್ಟವು. ಆದುದರಿಂದ ಅವು ಫಲ ಕೊಡಲಿಲ್ಲ.
8 : ಇನ್ನೂ ಕೆಲವು ಬೀಜಗಳು ಹದವಾದ ಭೂಮಿಯಲ್ಲಿ ಬಿದ್ದವು. ಅವು ಮೊಳೆತು, ಬೆಳೆದು ತೆನೆಬಿಟ್ಟವು. ಅವುಗಳಲ್ಲಿ ಕೆಲವು ಮೂವತ್ತರಷ್ಟು, ಕೆಲವು ಅರವತ್ತರಷ್ಟು ಮತ್ತೆ ಕೆಲವು ನೂರರಷ್ಟು ಫಸಲನ್ನು ಕೊಟ್ಟವು.”
9 : ಈ ಸಾಮತಿಯನ್ನು ಹೇಳಿದ ಬಳಿಕ ಯೇಸು, “ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ,” ಎಂದರು.
ಸಾಮತಿಗಳ ಉದ್ದಿಶ್ಯ
(ಮತ್ತಾ. 13.10-17; ಲೂಕ 8.9-10)
10 : ಈ ಉಪದೇಶವನ್ನು ಕೇಳಿದವರಲ್ಲಿ ಕೆಲವರು, ಯೇಸುಸ್ವಾಮಿ ಒಬ್ಬರೇ ಇದ್ದಾಗ, ಹನ್ನೆರಡು ಮಂದಿ ಶಿಷ್ಯರೊಡನೆ ಬಂದು, ಅವರು ಹೇಳಿದ ಸಾಮತಿಗಳನ್ನು ವಿವರಿಸಬೇಕೆಂದು ಕೇಳಿಕೊಂಡರು.
11 : ಅದಕ್ಕೆ ಯೇಸು, “ದೇವರ ಸಾಮ್ರಾಜ್ಯದ ರಹಸ್ಯವನ್ನು ನಿಮಗೆ ತಿಳಿಸಲಾಗಿದೆ. ಮಿಕ್ಕವರಿಗಾದರೋ ಅದೆಲ್ಲವೂ ಸಾಮತಿಗಳ ರೂಪದಲ್ಲಿ ಮರೆಯಾಗಿದೆ. ಏಕೆಂದರೆ.
12 : ‘ಕಣ್ಣಾರೆ ನೋಡಿಯೂ ಅವರು ಕಾಣರು;
ಕಿವಿಯಾರೆ ಕೇಳಿಯೂ ಅವರು ಗ್ರಹಿಸರು.
ಕಂಡು ಗ್ರಹಿಸಿದರೆ ಅವರು ದೇವರತ್ತ
ತಿರುಗಿಯಾರು;
ಪಾಪಕ್ಷಮೆ ಹೊಂದಿಯಾರು’,” ಎಂದರು.
ಬಿತ್ತುವವನ ಸಾಮತಿಯ ವಿವರಣೆ
(ಮತ್ತಾ. 13.18-23; ಲೂಕ 8.11-15)
13 : ಅನಂತರ ಯೇಸುಸ್ವಾಮಿ ಅವರಿಗೆ, “ಈ ಸಾಮತಿಯನ್ನು ನೀವು ಅರ್ಥಮಾಡಿಕೊಳ್ಳಲಿಲ್ಲವೇ? ಹಾಗಾದರೆ ಬೇರೆಲ್ಲಾ ಸಾಮತಿಗಳನ್ನು ಹೇಗೆ ಅರ್ಥಮಾಡಿಕೊಳ್ಳುವಿರಿ?
14 : ಈ ಸಾಮತಿಯಲ್ಲಿ, ಬಿತ್ತುವವನು ‘ದೇವರ ಸಂದೇಶ’ ಎಂಬ ಬೀಜವನ್ನು ಬಿತ್ತುತ್ತಾನೆ.
15 : ಕೆಲವರು ದೇವರ ಸಂದೇಶವನ್ನು ಕೇಳುತ್ತಾರೆ; ಸೈತಾನನು ತಕ್ಷಣವೇ ಬಂದು ಆ ಸಂದೇಶವನ್ನು ತೆಗೆದು ಬಿಡುತ್ತಾನೆ. ಕಾಲ್ದಾರಿಯಲ್ಲಿ ಬಿದ್ದ ಬೀಜಕ್ಕೆ ಹೋಲಿಕೆಯಾಗಿರುವವರು ಇವರೇ.
16 : ಇನ್ನೂ ಕೆಲವರು ದೇವರ ಸಂದೇಶವನ್ನು ಕೇಳಿದ ಕೂಡಲೇ ಅದನ್ನು ಸಂತಸದಿಂದ ಸ್ವೀಕರಿಸುತ್ತಾರೆ. ಆದರೆ ಅವರಲ್ಲಿ ಅದು ಆಳವಾಗಿ ಬೇರೂರದ ಕಾರಣ ಕೊಂಚಕಾಲ ಮಾತ್ರ ಉಳಿಯುತ್ತದೆ.
17 : ದೇವರ ಸಂದೇಶದ ನಿಮಿತ್ತ ಕಷ್ಟಕೋಟಲೆಗಳು ಬಂದೊದಗಿದಾಗ ಕೂಡಲೇ ಎಡವಿ ಬೀಳುತ್ತಾರೆ. ಇವರೇ ಕಲ್ಲುನೆಲದ ಮೇಲೆ ಬಿದ್ದ ಬೀಜಕ್ಕೆ ಸಮಾನರಾದವರು.
18 : ಇನ್ನೂ ಕೆಲವರು ದೇವರ ಸಂದೇಶವನ್ನು ಕೇಳುತ್ತಾರೆ. ಆದರೆ ಅವರೊಳಗೆ ಇರುವ ಪ್ರಾಪಂಚಿಕ ಚಿಂತನೆಗಳೂ ಐಶ್ವರ್ಯದ ವ್ಯಾಮೋಹಗಳೂ ಇನ್ನಿತರ ಅಭಿಲಾಷೆಗಳೂ ದೇವರ ಸಂದೇಶವನ್ನು ಅದುಮಿ, ಅದು ಫಲಬಿಡದಂತೆ ಮಾಡುತ್ತವೆ.
19 : ಇವರೇ ಮುಳ್ಳುಪೊದೆಗಳ ನಡುವೆ ಬಿದ್ದ ಬೀಜಕ್ಕೆ ಅನುರೂಪ ಆದವರು.
20 : ಮತ್ತೆ ಕೆಲವರಾದರೋ ದೇವರ ಸಂದೇಶವನ್ನು ಕೇಳಿ ಅದನ್ನು ಸ್ವಾಗತಿಸುತ್ತಾರೆ. ಅಂಥವರಲ್ಲಿ ಕೆಲವರು ಮೂವತ್ತರಷ್ಟು, ಕೆಲವರು ಅರವತ್ತರಷ್ಟು, ಇನ್ನು ಕೆಲವರು ನೂರರಷ್ಟು ಫಲಕೊಡುತ್ತಾರೆ. ಇವರೇ ಹದವಾದ ಭೂಮಿಯಲ್ಲಿ ಬಿದ್ದ ಬೀಜಕ್ಕೆ ಸಮಾನರು,” ಎಂದರು.
21 : ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಂದುವರಿಸುತ್ತಾ, “ಯಾರಾದರೂ ಉರಿಯುವ ದೀಪವನ್ನು ತಂದು ಬಟ್ಟಲ ಒಳಗಾಗಲಿ, ಮಂಚದ ಕೆಳಗಾಗಲಿ ಇಡುವುದುಂಟೇ? ನಿಶ್ಚಯವಾಗಿಯೂ ಇಲ್ಲ. ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರೆ.
22 : ಬೆಳಕಿಗೆ ಬಾರದ ಮುಚ್ಚು ಮರೆಯಿಲ್ಲ, ರಟ್ಟಾಗದ ಗುಟ್ಟಿಲ್ಲ.
23 : ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ.
24 : “ನೀವು ಕೇಳುವುದನ್ನು ಎಚ್ಚರಿಕೆಯಿಂದ ಗಮನಿಸಿರಿ; ಇತರರಿಗೆ ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದು ಕೊಡುವರು; ಇನ್ನೂ ಅಧಿಕವಾಗಿ ಕೊಡುವರು.
25 : ಉಳ್ಳವನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ. ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ,” ಎಂದರು.
ಬೆಳವಣಿಗೆಯ ರಹಸ್ಯ
26 : ಯೇಸುಸ್ವಾಮಿ ಇನ್ನೊಂದು ಸಾಮತಿಯನ್ನು ಹೇಳಿದರು: “ದೇವರ ಸಾಮ್ರಾಜ್ಯವು ರೈತನೊಬ್ಬನು ತನ್ನ ಹೊಲದಲ್ಲಿ ಮಾಡಿದ ಬಿತ್ತನೆಗೆ ಹೋಲಿಕೆಯಾಗಿದೆ.
27 : ಬಿತ್ತನೆಯಾದ ಬಳಿಕ ಅವನು ರಾತ್ರಿಯಲ್ಲಿ ಮಲಗಿರಲಿ, ಹಗಲಲ್ಲಿ ಎದ್ದಿರಲಿ, ಅವನಿಗೆ ಹೇಗೆಂದು ತಿಳಿಯದೆಯೇ ಆ ಬೀಜವು ಮೊಳೆತು ಬೆಳೆಯುತ್ತಿರುತ್ತದೆ.
28 : ಭೂಮಿ ಮೊದಲು ಸಸಿಯನ್ನೂ ಅನಂತರ ಹೊಡೆಯನ್ನೂ ತರುವಾಯ ತೆನೆತುಂಬ ಕಾಳನ್ನೂ ತನ್ನಷ್ಟಕ್ಕೆ ತಾನೇ ಉತ್ಪತ್ತಿಮಾಡುತ್ತದೆ.
29 : ಬೆಳೆಯು ಮಾಗಿದಾಗ, ಸುಗ್ಗಿಯು ಬಂತೆಂದು ವ್ಯವಸಾಯಗಾರನು ಕುಡುಗೋಲನ್ನು ಬಳಸುತ್ತಾನೆ,” ಎಂದರು.
ಸಾಸಿವೆ ಕಾಳಿನ ಸಾಮತಿ
(ಮತ್ತಾ. 13.31-32; ಲೂಕ 13.18-19)
30 : ಯೇಸುಸ್ವಾಮಿ ತಮ್ಮ ಉಪದೇಶವನ್ನು ಮುಂದುವರಿಸಿ, “ದೇವರ ಸಾಮ್ರಾಜ್ಯವನ್ನು ಇನ್ನು ಯಾವುದಕ್ಕೆ ಹೋಲಿಸೋಣ? ಅದಕ್ಕಾಗಿ ಯಾವ ಸಾಮತಿಯನ್ನು ಉಪಯೋಗಿಸೋಣ?
31 : ಭೂಮಿಯಲ್ಲಿರುವ ಕಾಳುಗಳಲ್ಲಿ ಅತಿ ಚಿಕ್ಕದಾಗಿರುವ ಸಾಸಿವೆಕಾಳಿಗೂ ಅದನ್ನು ಹೋಲಿಸಬಹುದು.
32 : ಸಾಸಿವೆಕಾಳು ಚಿಕ್ಕದಾಗಿದ್ದರೂ ಬಿತ್ತನೆಯ ತರುವಾಯ ಮೊಳೆತು ಎಲ್ಲಾ ಕಾಯಿಪಲ್ಯದ ಸಸ್ಯಗಳಿಗಿಂತಲೂ ದೊಡ್ಡದಾಗಿ ಬೆಳೆಯುತ್ತದೆ. ಹಕ್ಕಿಗಳು ಕೂಡ ಬಂದು ಅದರ ನೆರಳಿನಲ್ಲಿ ಗೂಡುಕಟ್ಟಿ ವಾಸಿಸುವಷ್ಟು ದೊಡ್ಡದಾದ ರೆಂಬೆಗಳನ್ನು ಅದು ತಳೆಯುತ್ತದೆ,” ಎಂದರು.
ಸಾಮತಿಗಳ ಪ್ರಯೋಗವೇಕೆ?
(ಮತ್ತಾ. 13.34)
33 : ಯೇಸುಸ್ವಾಮಿ ಈ ಬಗೆಯ ಸಾಮತಿಗಳನ್ನು ಉಪಯೋಗಿಸಿ ಜನರಿಗೆ ದೇವರ ಸಂದೇಶವನ್ನು ಅವರವರ ತಿಳುವಳಿಕೆಗೆ ತಕ್ಕಂತೆ ಉಪದೇಶಿಸುತ್ತಿದ್ದರು. ಸಾಮತಿಗಳನ್ನು ಉಪಯೋಗಿಸದೆ ಅವರು ಬೋಧಿಸುತ್ತಿರಲಿಲ್ಲ.
34 : ಆದರೆ ತಮ್ಮ ಆಪ್ತ ಶಿಷ್ಯರೊಡನೆ ಪ್ರತ್ಯೇಕವಾಗಿದ್ದಾಗ ಅವರಿಗೆ ಎಲ್ಲವನ್ನು ವಿವರಿಸಿ ಹೇಳುತ್ತಿದ್ದರು.
ಯೇಸು ಪ್ರಕೃತಿಗೂ ಒಡೆಯ
(ಮತ್ತಾ. 8.23-27; ಲೂಕ 8.22-25)
35 : ಆ ದಿನ ಸಾಯಂಕಾಲ ಯೇಸುಸ್ವಾಮಿ ತಮ್ಮ ಶಿಷ್ಯರಿಗೆ, “ಸರೋವರದ ಆಚೆದಡಕ್ಕೆ ಹೋಗೋಣ,” ಎಂದರು.
36 : ಆಗ ಶಿಷ್ಯರು ಜನರ ಗುಂಪನ್ನು ಬಿಟ್ಟು ದೋಣಿಯಲ್ಲಿ ಕುಳಿತಿದ್ದ ಯೇಸುವನ್ನು ಹಾಗೆಯೇ ತಮ್ಮ ಜೊತೆಯಲ್ಲಿ ಕರೆದುಕೊಂಡು ಹೊರಟರು.
37 : ಆ ದೋಣಿಯ ಸಂಗಡ ಬೇರೆ ದೋಣಿಗಳೂ ಇದ್ದವು. ಸ್ವಲ್ಪ ಮುಂದೆ ಹೋಗುವಷ್ಟರಲ್ಲೇ ದೊಡ್ಡ ಬಿರುಗಾಳಿ ಎದ್ದಿತು. ಅಲೆಗಳು ದೋಣಿಗೆ ಅಪ್ಪಳಿಸತೊಡಗಿದವು. ದೋಣಿಯೊಳಗೆ ನೀರು ನುಗ್ಗಿ ಅದು ತುಂಬಿ ಹೋಗುವುದರಲ್ಲಿತ್ತು.
38 : ಯೇಸುವಾದರೋ ದೋಣಿಯ ಹಿಂಭಾಗದಲ್ಲಿ ದಿಂಬನ್ನು ಒರಗಿ ನಿದ್ದೆ ಮಾಡುತ್ತಿದ್ದರು. ಶಿಷ್ಯರು ಅವರನ್ನು ಎಬ್ಬಿಸಿ, “ಗುರುವೇ, ನಾವು ಸಾಯುತ್ತಿದ್ದೇವೆ, ತಮಗೆ ಚಿಂತೆಯೇ ಇಲ್ಲವೆ?” ಎಂದರು.
39 : ಆಗ ಯೇಸು ಎಚ್ಚೆತ್ತು,, ಬಿರುಗಾಳಿಯನ್ನು ಗದರಿಸಿದರು. ಸರೋವರಕ್ಕೆ, “ಶಾಂತವಾಗಿರು! ಮೊರೆಯಬೇಡ,” ಎಂದು ಆಜ್ಞಾಪಿಸಿದರು. ತಕ್ಷಣ ಬಿರುಗಾಳಿ ನಿಂತಿತು. ವಾತಾವರಣ ಪ್ರಶಾಂತವಾಯಿತು.
40 : ಅನಂತರ ತಮ್ಮ ಶಿಷ್ಯರಿಗೆ, “ಏಕೆ ಇಷ್ಟು ಭಯ? ಇನ್ನೂ ನಿಮಗೆ ವಿಶ್ವಾಸವಿಲ್ಲವೇ?” ಎಂದರು.
41 : ಶಿಷ್ಯರಾದರೋ ಭಯಭ್ರಾಂತರಾಗಿ “ಗಾಳಿಯೂ ಸರೋವರವೂ ಇವರು ಹೇಳುವಂತೆ ಕೇಳಬೇಕಾದರೆ ಇವರು ಯಾರಿರಬಹುದು?” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು.
ದೆವ್ವಪೀಡಿತನಿಗೆ ಬಿಡುಗಡೆ
(ಮತ್ತಾ. 8.28-34; ಲೂಕ 8.26-39)