1 : ಯೇಸುಸ್ವಾಮಿ ಪ್ರಾರ್ಥನಾಮಂದಿರಕ್ಕೆ ಪುನಃ ಹೋದರು. ಅಲ್ಲಿ ಒಬ್ಬ ಬತ್ತಿದ ಕೈಯುಳ್ಳವನು ಇದ್ದನು.
2 : ಅವನನ್ನು ಸಬ್ಬತ್‍ದಿನದಲ್ಲಿ ಗುಣಪಡಿಸಿದ್ದೇ ಆದರೆ ಯೇಸುವಿನ ವಿರುದ್ಧ ತಪ್ಪುಹೊರಿಸಬಹುದೆಂಬ ಉದ್ದೇಶದಿಂದ ಕೆಲವರು ಹೊಂಚುಹಾಕುತ್ತಿದ್ದರು.
3 : ಯೇಸು ಬತ್ತಿದ ಕೈಯುಳ್ಳವನಿಗೆ, “ಎದ್ದು ಮುಂದಕ್ಕೆ ಬಾ,” ಎಂದರು. ಬಳಿಕ ಅಲ್ಲಿದ್ದವರನ್ನು ಉದ್ದೇಶಿಸಿ,
4 : “ಸಬ್ಬತ್ ದಿನದಲ್ಲಿ ಏನು ಮಾಡುವುದು ಧರ್ಮ? ಒಳಿತನ್ನೋ ಅಥವಾ ಕೆಡುಕನ್ನೋ? ಒಬ್ಬನ ಪ್ರಾಣವನ್ನು ಉಳಿಸುವುದೋ ಅಥವಾ ಅಳಿಸುವುದೋ ಹೇಳಿ,” ಎಂದು ಕೇಳಲು ಅವರು ಮಾತೇ ಎತ್ತಲಿಲ್ಲ.
5 : ಯೇಸು ಸುತ್ತಲೂ ಇದ್ದವರನ್ನು ಕೋಪದಿಂದ ದಿಟ್ಟಿಸಿ, ಅವರ ಹೃದಯ ಕಲ್ಲಾಗಿರುವುದನ್ನು ಕಂಡು, ಮನನೊಂದು, ಬತ್ತಿದ ಕೈಯುಳ್ಳವನಿಗೆ, “ನಿನ್ನ ಕೈಯನ್ನು ಚಾಚು,” ಎಂದರು. ಅವನು ಚಾಚಿದನು, ಅದು ಸಂಪೂರ್ಣವಾಗಿ ಸ್ವಸ್ಥವಾಯಿತು.
6 : ಫರಿಸಾಯರು ಅಲ್ಲಿಂದ ಹೊರಗೆ ಹೋದರು. ಕೂಡಲೇ ಹೆರೋದಿಯರೊಡನೆ ಸೇರಿಕೊಂಡು ಯೇಸುವನ್ನು ಕೊಲೆಮಾಡಲು ಒಳಸಂಚು ಹೂಡಿದರು.
ಜನಪ್ರಿಯ ಯೇಸು
7 : ಯೇಸುಸ್ವಾಮಿ ತಮ್ಮ ಶಿಷ್ಯರ ಜೊತೆಯಲ್ಲಿ ಗಲಿಲೇಯ ಸರೋವರದ ತೀರಕ್ಕೆ ಹೊರಟು ಹೋದರು. ಸಾವಿರಾರು ಜನರು ಅವರನ್ನು ಹಿಂಬಾಲಿಸಿದರು.
8 : ಈ ಜನರು ಯೇಸು ಮಾಡುತ್ತಿದ್ದ ಮಹತ್ಕಾರ್ಯಗಳ ಸಮಾಚಾರವನ್ನು ಕೇಳಿ, ಗಲಿಲೇಯ ಪ್ರಾಂತ್ಯದಿಂದ, ಜುದೇಯ ಪ್ರಾಂತ್ಯದಿಂದ, ಜೆರುಸಲೇಮ್ ನಗರದಿಂದ, ಇದುಮೇಯ ಪ್ರಾಂತ್ಯದಿಂದ, ಜೋರ್ಡನ್ ನದಿಯ ಪೂರ್ವ ಪ್ರದೇಶ ಹಾಗೂ ಟೈರ್-ಸಿದೋನ್ ಪಟ್ಟಣಗಳ ಸುತ್ತಮುತ್ತಲಿಂದ ಬಂದಿದ್ದರು.
9 : ಜನಸಂದಣಿ ಅಧಿಕವಾಗುತ್ತಿದ್ದುದರಿಂದ ಅವರು ತಮ್ಮ ಮೈಮೇಲೆ ಬಿದ್ದಾರೆಂದು ಯೇಸು, ತಮಗೆ ಒಂದು ದೋಣಿಯನ್ನು ಸಿದ್ಧವಾಗಿಡಲು ಶಿಷ್ಯರಿಗೆ ಹೇಳಿದರು.
10 : ಯೇಸು ಅನೇಕರನ್ನು ಗುಣಪಡಿಸಿದ್ದರಿಂದ ರೋಗಿಗಳೆಲ್ಲರೂ ಅವರನ್ನು ಮುಟ್ಟಬೇಕೆಂದು ಮುನ್ನುಗ್ಗಿ ಮೇಲೆ ಮೇಲೆ ಬೀಳುತ್ತಿದ್ದರು.
11 : ದೆವ್ವಗಳು ಸಹ ಅವರನ್ನು ಕಂಡಾಗಲೆಲ್ಲಾ ಅವರ ಪಾದಕ್ಕೆರಗಿ, “ನೀವು ದೇವರ ಪುತ್ರ,” ಎಂದು ಕಿರುಚುತ್ತಿದ್ದವು.
12 : ಆದರೆ ಯೇಸು, ತಾವು ಯಾರೆಂಬುದನ್ನು ಪ್ರಕಟಿಸಬಾರದೆಂದು ಅವುಗಳಿಗೆ ಕಟ್ಟಪ್ಪಣೆ ಮಾಡುತ್ತಿದ್ದರು.
ಆಯ್ಕೆಯಾದ ಹನ್ನೆರಡು ಮಂದಿ
(ಮತ್ತಾ. 10.1-4; ಲೂಕ 6.12-16)
13 : ಅನಂತರ ಯೇಸುಸ್ವಾಮಿ ಬೆಟ್ಟವನ್ನೇರಿ, ತಮಗೆ ಒಪ್ಪಿಗೆಯಾದವರನ್ನು ಕರೆದರು. ಅವರು ಹತ್ತಿರಕ್ಕೆ ಬಂದರು. ಯೇಸು ಹನ್ನೆರಡು ಮಂದಿಯನ್ನು ಆಯ್ದುಕೊಂಡು, ‘ಪ್ರೇಷಿತರು’ ಎಂದು ಅವರಿಗೆ ಹೆಸರಿಟ್ಟರು.
14 : “ನನ್ನ ಜೊತೆಯಲ್ಲಿ ಇರಲು ನಿಮ್ಮನ್ನು ಆರಿಸಿಕೊಂಡಿದ್ದೇನೆ. ಶುಭಸಂದೇಶವನ್ನು ಸಾರಲು ನಿಮ್ಮನ್ನು ಕಳುಹಿಸುತ್ತೇನೆ.
15 : ದೆವ್ವಗಳನ್ನು ಬಿಡಿಸುವ ಅಧಿಕಾರವನ್ನು ನಿಮಗೆ ಕೊಡುತ್ತೇನೆ”, ಎಂದು ಅವರಿಗೆ ಹೇಳಿದರು. ಹೀಗೆ ನೇಮಕಗೊಂಡ ಹನ್ನೆರಡು ಮಂದಿ ಯಾರೆಂದರೆ:
16 : ಸಿಮೋನ (ಯೇಸು ಈತನಿಗೆ ‘ಪೇತ್ರ’ ಎಂದು ಹೆಸರಿಟ್ಟರು).
17 : ಜೆಬೆದಾಯನ ಮಗ ಯಕೋಬ ಮತ್ತು ಅವನ ಸಹೋದರ ಯೊವಾನ್ನ (ಯೇಸು ಇವರಿಬ್ಬರಿಗೆ ‘ಬೊವನೆರ್ಗೆಸ್’ ಎಂದರೆ ‘ಸಿಡಿಲಮರಿಗಳು’ ಎಂಬ ಹೆಸರನ್ನಿಟ್ಟರು).
18 : ಅಂದ್ರೆಯ, ಫಿಲಿಪ್ಪ, ಬಾರ್ತಲೊಮಾಯ, ಮತ್ತಾಯ, ತೋಮ, ಅಲ್ಫಾಯನ ಮಗ ಯಕೋಬ, ತದ್ದಾಯ, ದೇಶಾಭಿಮಾನಿ ಆದ ಸಿಮೋನ ಮತ್ತು
19 : ಮುಂದೆ ಗುರುದ್ರೋಹಿಯಾಗಲಿದ್ದ ಯೂದ ಇಸ್ಕರಿಯೋತ.
ಅಕ್ಷಮ್ಯ ಪಾಪ
(ಮತ್ತಾ. 12.2-32; ಲೂಕ 11.14-23, 12.10)
20 : ಯೇಸುಸ್ವಾಮಿ ಮನೆಗೆ ಹೋದಾಗ ಜನರು ಮರಳಿ ಗುಂಪುಗುಂಪಾಗಿ ಬಂದರು. ಯೇಸುವಿಗೂ ಶಿಷ್ಯರಿಗೂ ಊಟಮಾಡಲು ಕೂಡ ಬಿಡುವಿಲ್ಲದೆ ಹೋಯಿತು.
21 : “ಈತನಿಗೆ ಹುಚ್ಚು ಹಿಡಿದಿದೆ,” ಎಂದು ಜನರು ಮಾತಾಡಿಕೊಳ್ಳುತ್ತಿದ್ದರು. ಆದ್ದರಿಂದ ಯೇಸುವಿನ ಬಂಧುಗಳು ಯೇಸುವನ್ನು ಹಿಡಿದುತರಲು ಹೊರಟರು.
22 : ಇದಲ್ಲದೆ, ಜೆರುಸಲೇಮಿನಿಂದ ಬಂದಿದ್ದ ಧರ್ಮಶಾಸ್ತ್ರಿಗಳು, “ಇವನನ್ನು ಬೆಲ್ಜೆಬೂಲನು ಹಿಡಿದಿದ್ದಾನೆ; ದೆವ್ವಗಳ ಒಡೆಯನ ಶಕ್ತಿಯಿಂದಲೇ ಇವನು ದೆವ್ವಬಿಡಿಸುತ್ತಾನೆ,” ಎನ್ನುತ್ತಿದ್ದರು.
23 : ಆಗ ಯೇಸು ಅವರನ್ನು ತಮ್ಮ ಹತ್ತಿರಕ್ಕೆ ಕರೆದು ಸಾಮತಿಗಳ ಮೂಲಕ ಮಾತನಾಡತೊಡಗಿದರು: “ಸೈತಾನನು ಸೈತಾನನನ್ನು ಹೊರದೂಡುವುದು ಹೇಗೆ ತಾನೇ ಸಾಧ್ಯ?
24 : ಒಂದು ರಾಜ್ಯದ ಪ್ರಜೆಗಳು ತಮ್ಮತಮ್ಮೊಳಗೆ ಕಚ್ಚಾಡುವುದಾದರೆ ಆ ರಾಜ್ಯ ಉಳಿಯದು.
25 : ಒಂದು ಕುಟುಂಬದ ಸದಸ್ಯರು ತಮ್ಮ ತಮ್ಮೊಳಗೆ ಕಚ್ಚಾಡುವುದಾದರೆ ಆ ಕುಟುಂಬ ಬಾಳದು.
26 : ಅದರಂತೆಯೇ ಸೈತಾನನ ಪಕ್ಷದವರು ಪರಸ್ಪರ ವಿರೋಧಿಗಳಾದರೆ ಅವನ ರಾಜ್ಯ ಉಳಿಯದು; ಅದು ಅಳಿದು ಹೋಗುವುದು.
27 : ಒಬ್ಬನು ಬಲಿಷ್ಠನ ಮನೆಯನ್ನು ನುಗ್ಗಿ ಅವನನ್ನು ಕಟ್ಟಿಹಾಕದೆ ಅವನ ಸೊತ್ತನ್ನು ಸೂರೆಮಾಡಲಾಗದು. ಮೊದಲು ಅವನನ್ನು ಕಟ್ಟಬೇಕು. ಬಳಿಕ ಅವನ ಮನೆಯನ್ನು ಕೊಳ್ಳೆಹೊಡಯಬೇಕು.
28 : ನಿಶ್ಚಯವಾಗಿ ನಿಮಗೆ ಹೇಳುತ್ತೇನೆ; ಮನುಷ್ಯರು ಮಾಡುವ ಎಲ್ಲಾ ಪಾಪಗಳಿಗೂ ಆಡುವ ಎಲ್ಲಾ ದೇವದೂಷಣೆಗಳಿಗೂ ಕ್ಷಮೆ ದೊರಕಬಹುದು.
29 : ಆದರೆ ಪವಿತ್ರಾತ್ಮ ಅವರನ್ನು ದೂಷಿಸುವವನಿಗೆ ಮಾತ್ರ ಕ್ಷಮೆ ದೊರಕದು. ಅಂಥವನ ಪಾಪ ಶಾಶ್ವತವಾದುದು,” ಎಂದರು.
30 : (ದೆವ್ವ ಹಿಡಿದಿದೆ ಎಂದು ತಮ್ಮನ್ನು ಕೆಲವರು ನಿಂದಿಸುತ್ತಿದ್ದುದರಿಂದ ಯೇಸು ಹೀಗೆ ಹೇಳಿದರು).
ವಿನೂತನ ಬಾಂಧವ್ಯ
(ಮತ್ತಾ. 12.46-50; ಲೂಕ 8.19-21)
31 : ಯೇಸುಸ್ವಾಮಿಯ ತಾಯಿ ಮತ್ತು ಸಹೋದರರು ಅಲ್ಲಿಗೆ ಬಂದರು. ಒಳಗೆ ಜನರು ಯೇಸುವಿನ ಸುತ್ತಲೂ ಗುಂಪಾಗಿ ಕುಳಿತಿದ್ದರು. ಆದುದರಿಂದ ಅವರು ಹೊರಗೇ ನಿಂತು, ಯೇಸುವಿಗೆ ಬರಬೇಕೆಂದು ಹೇಳಿಕಳುಹಿಸಿದರು.
32 : “ನಿಮ್ಮ ತಾಯಿಯೂ ಸಹೋದರರೂ ಹೊರಗೆ ನಿಮಗಾಗಿ ಕಾದಿದ್ದಾರೆ,” ಎಂದು ಯೇಸುವಿಗೆ ತಿಳಿಸಿದರು.
33 : ಅದಕ್ಕೆ ಯೇಸು, “ನನಗೆ ತಾಯಿ ಯಾರು?, ಸಹೋದರರು ಯಾರು?” ಎನ್ನುತ್ತಾ ತಮ್ಮ ಸುತ್ತಲೂ ಕುಳಿತಿದ್ದವರ ಮೇಲೆ ದೃಷ್ಟಿ ಹರಿಸಿ,
34 : “ಇಗೋ, ನನ್ನ ತಾಯಿ! ಇಗೋ ನನ್ನ ಸಹೋದರರು!
35 : ದೈವೇಚ್ಛೆಯನ್ನು ಯಾರು ನೆರವೇರಿಸುತ್ತಾರೋ ಅವರೇ ನನಗೆ ಸಹೋದರ, ಸಹೋದರಿ, ತಾಯಿ,” ಎಂದರು.
ಬಿತ್ತುವವನ ಸಾಮತಿ
(ಮತ್ತಾ. 13.1-9; ಲೂಕ 8.4-8)