1 : ಸಬ್ಬತ್‍ದಿನ ಕಳೆದದ್ದೇ ಮಗ್ದಲದ ಮರಿಯಳು, ಯಕೋಬನ ತಾಯಿ ಮರಿಯಳು ಮತ್ತು ಸಲೋಮೆ ಯೇಸುವಿನ ಪಾರ್ಥಿವ ಶರೀರಕ್ಕೆ ಲೇಪಿಸಲೆಂದು ಸುಗಂಧ ದ್ರವ್ಯಗಳನ್ನು ಕೊಂಡುಕೊಂಡರು.
2 : ಭಾನುವಾರ ಮುಂಜಾನೆ ಬೇಗನೆ ಹೊರಟು ಸೂರ್ಯೋದಯ ಸಮಯಕ್ಕೆ ಸಮಾಧಿಯನ್ನು ತಲುಪಿದರು.
3 : “ಸಮಾಧಿಯ ದ್ವಾರಕ್ಕೆ ಮುಚ್ಚಿರುವ ಕಲ್ಲನ್ನು ನಮಗೆ ಉರುಳಿಸಿ ಕೊಡುವವರು ಯಾರು?” ಎಂದು ಅವರು ತಮ್ಮತಮ್ಮಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಏಕೆಂದರೆ, ಆ ಕಲ್ಲು ಬಹಳ ದೊಡ್ಡದಾಗಿತ್ತು.
4 : ತಲೆಯೆತ್ತಿ ನೋಡಿದಾಗ, ಕಲ್ಲು ಪಕ್ಕದಲ್ಲಿ ಬಿದ್ದಿರುವುದನ್ನು ಕಂಡರು.
5 : ಸಮಾಧಿಯೊಳಕ್ಕೆ ಪ್ರವೇಶಿಸಿ ನೋಡುವಾಗ, ಬಿಳಿಯ ಬಟ್ಟೆ ಧರಿಸಿದ್ದ ಯುವಕನೊಬ್ಬನು ಅಲ್ಲಿ ಬಲಗಡೆ ಕುಳಿತಿರುವುದನ್ನು ಕಂಡು, ಅವರು ಬೆಚ್ಚಿಬಿದ್ದರು.
6 : ಆತನು, “ಭಯಪಡಬೇಡಿ, ಶಿಲುಬೆಗೇರಿಸಿದ್ದ ನಜರೇತಿನ ಯೇಸುವನ್ನು ನೀವು ಹುಡುಕುತ್ತಾ ಇದ್ದೀರೆಂದು ನನಗೆ ತಿಳಿದಿದೆ. ಅವರು ಇಲ್ಲಿಲ್ಲ, ಪುನರುತ್ಥಾನ ಹೊಂದಿದ್ದಾರೆ. ನೋಡಿ, ಇದೇ ಅವರನ್ನು ಇಟ್ಟ ಸ್ಥಳ.
7 : ಈಗ ನೀವು ಹೋಗಿ, ಪೇತ್ರನಿಗೂ ಮಿಕ್ಕ ಶಿಷ್ಯರಿಗೂ, ‘ಯೇಸು ನಿಮಗೆ ಮೊದಲೇ ತಿಳಿಸಿದಂತೆ, ನಿಮಗಿಂತ ಮುಂಚಿತವಾಗಿ ಗಲಿಲೇಯಕ್ಕೆ ಹೋಗುವರು. ಅವರನ್ನು ಅಲ್ಲೇ ಕಾಣುವಿರಿ,’ ಎಂದು ತಿಳಿಸಿರಿ,” ಎಂದನು.
8 : ಅವರು ವಿಸ್ಮಯಗೊಂಡು ಭಯದಿಂದ ನಡುಗುತ್ತಾ, ಸಮಾಧಿಯಿಂದ ಹೊರಕ್ಕೆ ಬಂದು, ಅಲ್ಲಿಂದ ಓಡಿಹೋದರು. ಭಯದ ನಿಮಿತ್ತ ಅವರು ಯಾರಿಗೂ ಏನನ್ನೂ ಹೇಳಲಿಲ್ಲ.
ಮಗ್ದಲದ ಮರಿಯಳಿಗೆ ದರ್ಶನ
(ಮತ್ತಾ. 28.9-10; ಯೊವಾ. 20.11-18)
9 : ಭಾನುವಾರ ಮುಂಜಾನೆ ಪುನರುತ್ಥಾನ ಹೊಂದಿದ ಯೇಸುಸ್ವಾಮಿ, ಮೊತ್ತಮೊದಲು ಮಗ್ದಲದ ಮರಿಯಳಿಗೆ ಕಾಣಿಸಿಕೊಂಡರು. ಅವರು ಏಳು ದೆವ್ವಗಳನ್ನು ಹೊರಗಟ್ಟಿದ್ದು ಈಕೆಯಿಂದಲೇ.
10 : ಈಕೆ ಹೋಗಿ ತಾನು ಕಂಡದ್ದನ್ನು ಯೇಸುವಿನ ಸಂಗಡಿಗರಿಗೆ ತಿಳಿಸಿದಳು. ಅವರಾದರೋ ಇನ್ನೂ ಶೋಕಭರಿತರಾಗಿ ಅಳುತ್ತಾ ಕುಳಿತಿದ್ದರು.
11 : ಆದರೆ ಯೇಸು ಜೀವಂತರಾಗಿದ್ದಾರೆ ಮತ್ತು ಆಕೆಗೆ ಕಾಣಿಸಿಕೊಂಡಿದ್ದಾರೆ ಎಂಬ ವಾರ್ತೆಯನ್ನು ಕೇಳಿದಾಗ ಅವರು ಅದನ್ನು ನಂಬಲೇ ಇಲ್ಲ.
ಶಿಷ್ಯರಿಬ್ಬರಿಗೆ ದರ್ಶನ
(ಲೂಕ 24.13-35)
12 : ತರುವಾಯ, ಹಳ್ಳಿಯೊಂದಕ್ಕೆ ಪ್ರಯಾಣ ಮಾಡುತ್ತಿದ್ದ ತಮ್ಮ ಇಬ್ಬರು ಶಿಷ್ಯರಿಗೆ ಯೇಸುಸ್ವಾಮಿ ಇನ್ನೊಂದು ರೀತಿಯಲ್ಲಿ ಕಾಣಿಸಿಕೊಂಡರು.
13 : ಇವರಿಬ್ಬರೂ ಹಿಂದಿರುಗಿ ಬಂದು, ಮಿಕ್ಕ ಶಿಷ್ಯರಿಗೆ ಇದನ್ನು ತಿಳಿಸಿದರು. ಆದರೆ ಅದನ್ನು ಅವರು ನಂಬದೆ ಹೋದರು.
ಪ್ರೇಷಿತರಿಗೆ ಕೊಟ್ಟ ದರ್ಶನ ಹಾಗೂ ಆದೇಶ
(ಮತ್ತಾ. 28.16-20; ಲೂಕ 24.36-49; ಯೊವಾ. 20.19-23; ಪ್ರೇ.ಕಾ. 1.6-8)
14 : ಅನಂತರ, ಹನ್ನೊಂದು ಮಂದಿ ಶಿಷ್ಯರು ಊಟಮಾಡುತ್ತಿದ್ದಾಗ ಯೇಸುಸ್ವಾಮಿ ಪ್ರತ್ಯಕ್ಷರಾದರು. ತಾವು ಪುನರುತ್ಥಾನ ಹೊಂದಿದ ಮೇಲೆ, ತಮ್ಮನ್ನು ಕಂಡವರ ಮಾತನ್ನು ಅವರು ನಂಬದಿದ್ದ ಕಾರಣ ಅವರ ಅವಿಶ್ವಾಸವನ್ನೂ ಹೃದಯ ಕಾಠಿಣ್ಯವನ್ನೂ ಯೇಸು ಖಂಡಿಸಿದರು.
15 : ಬಳಿಕ ಅವರಿಗೆ, ‘ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ.
16 : ವಿಶ್ವಾಸವಿಟ್ಟು ದೀಕ್ಷಾಸ್ನಾನ ಪಡೆಯುವವನು ಜೀವೋದ್ಧಾರ ಹೊಂದುವನು. ವಿಶ್ವಾಸಿಸದೆ ಇರುವವನು ಖಂಡನೆಗೆ ಗುರಿಯಾಗುವನು.
17 : ವಿಶ್ವಾಸಿಸುವುದರಿಂದ ಈ ಅದ್ಭುತ ಕಾರ್ಯಗಳು ಆಗುವುವು. ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು; ಹೊಸ ಭಾಷೆಗಳಲ್ಲಿ ಮಾತಾಡುವರು;
18 : ಕೈಗಳಿಂದ ಸರ್ಪಗಳನ್ನು ಎತ್ತಿದರೂ ವಿಷ ಪದಾರ್ಥಗಳನ್ನೇನಾದರೂ ಕುಡಿದರೂ ಯಾವ ಹಾನಿಯೂ ಅವರಿಗಾಗದು. ಅವರು ರೋಗಿಗಳ ಮೇಲೆ ಕೈ ಇಟ್ಟರೆ ರೋಗಿಗಳು ಗುಣಹೊಂದುವರು,” ಎಂದರು.
ಸ್ವರ್ಗಾರೋಹಣ
(ಲೂಕ 24.50-53; ಪ್ರೇ.ಕಾ. 1.9-11)
19 : ಯೇಸುಸ್ವಾಮಿ ಶಿಷ್ಯರೊಡನೆ ಮಾತನಾಡಿದ ಮೇಲೆ ಸ್ವರ್ಗಾರೋಹಣವಾಗಿ ದೇವರ ಬಲಪಾಶ್ರ್ವದಲ್ಲಿ ಆಸೀನರಾದರು.
20 : ಇತ್ತ ಶಿಷ್ಯರು ಹೊರಟುಹೋಗಿ, ಎಲ್ಲೆಡೆಗಳಲ್ಲಿಯೂ ಶುಭಸಂದೇಶವನ್ನು ಬೋಧಿಸತೊಡಗಿದರು. ಪ್ರಭು ಯೇಸು ಅವರೊಂದಿಗೆ ಕಾರ್ಯಸಾಧಿಸುತ್ತಾ, ಮಹತ್ಕಾರ್ಯಗಳಿಂದ ಶುಭಸಂದೇಶವನ್ನು ಸಮರ್ಥಿಸುತ್ತಾ ಇದ್ದರು.
ಸಂಕ್ಷಿಪ್ತ ಸಮಾಪ್ತಿ
(ಆ ಮಹಿಳೆಯರು ಹೋಗಿ ತಾವು ಕೇಳಿದ್ದೆಲ್ಲವನ್ನೂ ಪೇತ್ರನಿಗೂ ಆತನ ಸಂಗಡಿಗರಿಗೂ ಸಂಕ್ಷಿಪ್ತವಾಗಿ ತಿಳಿಸಿದರು.
ಅನಂತರ ಯೇಸುಸ್ವಾಮಿ ಸ್ವತಃ ತಮ್ಮ ಶುಭಸಂದೇಶವನ್ನು ಶಿಷ್ಯರ ಮೂಲಕ ಜಗತ್ತಿನೆಲ್ಲೆಡೆ ಹರಡುವಂತೆ ಮಾಡಿದರು.
ಶಾಶ್ವತ ಜೀವೋದ್ಧಾರವನ್ನೀಯುವ ಈ ಶುಭಸಂದೇಶವು ಪವಿತ್ರ ಹಾಗೂ ಚಿರಂತನವಾದುದು.)