1 : ಬೆಳಗಾದ ಕೂಡಲೇ, ಮುಖ್ಯಯಾಜಕರೂ ಪ್ರಮುಖರೂ ಧರ್ಮಶಾಸ್ತ್ರಿಗಳೂ ಹಾಗು ನ್ಯಾಯಸಭೆಯ ಇತರೆ ಸದಸ್ಯರೂ ಒಟ್ಟುಗೂಡಿ ಸಮಾಲೋಚನೆ ನಡೆಸಿದರು. ಯೇಸುಸ್ವಾಮಿಗೆ ಬೇಡಿಹಾಕಿ ಪಿಲಾತನ ಬಳಿಗೆ ಕರೆದೊಯ್ದು ಆತನ ವಶಕ್ಕೊಪ್ಪಿಸಿದರು.
2 : ಪಿಲಾತನು ಯೇಸುವನ್ನು, “ನೀನು ಯೆಹೂದ್ಯರ ಅರಸನೋ?” ಎಂದು ಪ್ರಶ್ನಿಸಿದನು. “ಅದು ನಿಮ್ಮ ಬಾಯಿಂದಲೇ ಬಂದಿದೆ,” ಎಂದು ಯೇಸು ಮರುನುಡಿದರು.
3 : ಮುಖ್ಯ ಯಾಜಕರು ಯೇಸುವಿನ ಮೇಲೆ ಅನೇಕ ಆಪಾದನೆಗಳನ್ನು ಹೊರಿಸುತ್ತಿದ್ದರು.
4 : ಆದುದರಿಂದ ಪಿಲಾತನು ಪುನಃ ಯೇಸುವನ್ನು, “ಇವರು ಇಷ್ಟೊಂದು ಆಪಾದನೆಗಳನ್ನು ನಿನ್ನ ಮೇಲೆ ಹೊರಿಸುತ್ತಿರುವಾಗ ನೀನು ಯಾವ ಉತ್ತರವನ್ನೂ ಕೊಡುವುದಿಲ್ಲವೇ?” ಎಂದು ಕೇಳಿದನು.
5 : ಆದರೆ ಯೇಸು ಇನ್ನೊಂದು ಮಾತನ್ನೂ ಆಡದೆ ಮೌನವಾಗಿದ್ದರು. ಇದನ್ನು ಕಂಡು ಪಿಲಾತನು ಆಶ್ಚರ್ಯಪಟ್ಟನು.
ನಿರಪರಾಧಿಗೆ ಮರಣದಂಡನೆ
(ಮತ್ತಾ. 27.15-26; ಲೂಕ 23.13-25; ಯೊವಾ. 18.39-19.16)
6 : ಪ್ರತಿ ಪಾಸ್ಕಹಬ್ಬದ ಸಂದರ್ಭದಲ್ಲಿ, ಜನರು ಕೇಳಿಕೊಂಡ ಒಬ್ಬ ಸೆರೆಯಾಳನ್ನು ಬಿಡುಗಡೆ ಮಾಡುವುದು ಪಿಲಾತನ ಪದ್ಧತಿಯಾಗಿತ್ತು.
7 : ದಂಗೆಯೊಂದರಲ್ಲಿ ಕೊಲೆಮಾಡಿದ್ದ ಕೆಲವರು ಈ ಸಮಯದಲ್ಲಿ ಸೆರೆಮನೆಯಲ್ಲಿ ಇದ್ದರು. ಇವರೊಡನೆ ಬರಬ್ಬ ಎಂಬವನೂ ಸೆರೆಯಲ್ಲಿದ್ದನು.
8 : ಜನರ ಗುಂಪು ಪಿಲಾತನ ಬಳಿಗೆ ಹೋಗಿ, ಪದ್ಧತಿಯಂತೆ ಈ ವರ್ಷವೂ ಒಬ್ಬ ಕೈದಿಯನ್ನು ತಮಗೆ ಬಿಟ್ಟು ಕೊಡಬೇಕೆಂದು ಕೇಳಿದಾಗ ಪಿಲಾತನು,
9 : “ಯೆಹೂದ್ಯರ ಅರಸನನ್ನು ನಾನು ನಿಮಗೆ ಬಿಟ್ಟುಕೊಡಬಹುದೋ?” ಎಂದು ಅವರನ್ನು ಕೇಳಿದನು.
10 : ಏಕೆಂದರೆ, ಮುಖ್ಯಯಾಜಕರು ಅಸೂಯೆಯಿಂದಲೇ ಯೇಸುವನ್ನು ತನಗೆ ಒಪ್ಪಿಸಿದ್ದಾರೆ ಎಂದು ಅವನಿಗೆ ಚೆನ್ನಾಗಿ ತಿಳಿದಿತ್ತು.
11 : ಆದರೆ ಬರಬ್ಬನನ್ನೇ ಬಿಡುಗಡೆ ಮಾಡುವಂತೆ ಪಿಲಾತನನ್ನು ಕೇಳಿಕೊಳ್ಳಬೇಕೆಂದು ಮುಖ್ಯ ಯಾಜಕರು ಜನರನ್ನು ಪ್ರಚೋದಿಸಿದರು.
12 : ಆಗ ಪಿಲಾತನು ಪುನಃ “ಹಾಗಾದರೆ ಯೆಹೂದ್ಯರ ಅರಸನೆಂದು ನೀವು ಕರೆಯುವ ಈತನನ್ನು ನಾನೇನು ಮಾಡಲಿ?” ಎಂದು ಜನರನ್ನು ಕೇಳಿದನು.
13 : ಅದಕ್ಕೆ ಅವರು, “ಅವನನ್ನು ಶಿಲುಬೆಗೇರಿಸಿ,” ಎಂದು ಬೊಬ್ಬೆ ಹಾಕಿದರು.
14 : “ಏಕೆ, ಇವನೇನು ಮಾಡಿದ್ದಾನೆ?” ಎಂದು ಪಿಲಾತನು ಮತ್ತೆ ಅವರನ್ನು ಪ್ರಶ್ನಿಸಲು ಅವರು, “ಅವನನ್ನು ಶಿಲುಬೆಗೇರಿಸಿ, ಶಿಲುಬೆಗೇರಿಸಿ,” ಎಂದು ಇನ್ನೂ ಹೆಚ್ಚಾಗಿ ಆರ್ಭಟಿಸಿದರು.
15 : ಪಿಲಾತನು ಜನಸಮೂಹವನ್ನು ಮೆಚ್ಚಿಸುವ ಸಲುವಾಗಿ ಬರಬ್ಬನನ್ನು ಬಿಡುಗಡೆ ಮಾಡಿದನು. ಯೇಸುವನ್ನು ಕೊರಡೆಗಳಿಂದ ಹೊಡೆಸಿ, ಶಿಲುಬೆಗೇರಿಸುವುದಕ್ಕೆ ಒಪ್ಪಿಸಿಬಿಟ್ಟನು.
ವಿಪರ್ಯಾಸಕ್ಕೆ ಗುರಿಯಾದ ಯೇಸು
(ಮತ್ತಾ. 27.27-31; ಯೊವಾ. 19.2-3)
16 : ಅನಂತರ ಸೈನಿಕರು ಯೇಸುಸ್ವಾಮಿಯನ್ನು ರಾಜಭವನದ ಅಂಗಣದೊಳಕ್ಕೆ ಕೊಂಡೊಯ್ದು, ತಮ್ಮ ಪಡೆಯೆಲ್ಲವನ್ನೂ ಒಟ್ಟಿಗೆ ಕರೆದರು.
17 : ಯೇಸುವಿಗೆ ನಸುಗೆಂಪು ಮೇಲಂಗಿಯನ್ನು ಹೊದಿಸಿದರು. ಮುಳ್ಳಿನಿಂದ ಒಂದು ಕಿರೀಟವನ್ನು ಹೆಣೆದು, ಅವರ ತಲೆಯ ಮೇಲೆ ಇರಿಸಿದರು.
18 : ತರುವಾಯ, “ಯೆಹೂದ್ಯರ ಅರಸನಿಗೆ ಜಯವಾಗಲಿ,” ಎಂದು ನಾಟಕೀಯವಾಗಿ ವಂದಿಸಿದರು.
19 : ಕೋಲಿನಿಂದ ಅವರ ತಲೆಯ ಮೇಲೆ ಹೊಡೆದು, ಉಗುಳಿ, ಮೊಣಕಾಲೂರಿ ಗೌರವಿಸುವಂತೆ ನಟಿಸಿದರು.
20 : ಹೀಗೆ ಯೇಸುವನ್ನು ಪರಿಹಾಸ್ಯ ಮಾಡಿದ ಬಳಿಕ, ಆ ನಸುಗೆಂಪು ಮೇಲಂಗಿಯನ್ನು ತೆಗೆದುಹಾಕಿ, ಅವರ ಬಟ್ಟೆಯನ್ನೇ ಮತ್ತೆ ತೊಡಿಸಿದರು. ಬಳಿಕ ಶಿಲುಬೆಗೆ ಏರಿಸುವುದಕ್ಕಾಗಿ ಅವರನ್ನು ಕರೆದುಕೊಂಡು ಹೋದರು.
ಗೊಲ್ಗಥದಲ್ಲಿ ಶಿಲುಬೆ
(ಮತ್ತಾ. 27.32-44; ಲೂಕ 23.26-43; ಯೊವಾ. 19.17-27)
21 : ಆಗ ಸಿರೇನ್ ಪಟ್ಟಣದ ಸಿಮೋನ ಎಂಬುವನು ಹಳ್ಳಿಯ ಕಡೆಯಿಂದ ಆ ಮಾರ್ಗವಾಗಿ ಬರುತ್ತಿದ್ದನು. ಈತನು ಅಲೆಕ್ಸಾಂಡರ್ ಹಾಗೂ ರೂಫ ಎಂಬವರ ತಂದೆ. ಯೇಸುಸ್ವಾಮಿಯ ಶಿಲುಬೆಯನ್ನು ಹೊರುವಂತೆ ಸೈನಿಕರು ಅವನನ್ನು ಬಲವಂತಮಾಡಿದರು.
22 : ಬಳಿಕ ಯೇಸುವನ್ನು ಗೊಲ್ಗೊಥ ಎಂಬ ಸ್ಥಳಕ್ಕೆ ಕರೆದುಕೊಂಡು ಬಂದರು. ಗೊಲ್ಗೊಥ ಎಂದರೆ ‘ಕಪಾಲ ಸ್ಥಳ’ ಎಂದು ಅರ್ಥ.
23 : ಅಲ್ಲಿ ರಕ್ತಬೋಳ ಮಿಶ್ರಿತ ದ್ರಾಕ್ಷಾರಸವನ್ನು ಯೇಸುವಿಗೆ ಕೊಟ್ಟರು. ಆದರೆ ಅದನ್ನು ಅವರು ಕುಡಿಯಲಿಲ್ಲ.
24 : ಕೊನೆಗೆ ಅವರನ್ನು ಶಿಲುಬೆಗೆ ಏರಿಸಿದರು. ಅವರ ಬಟ್ಟೆಗಳನ್ನು ಯಾವು ಯಾವುದು, ಯಾರು ಯಾರಿಗೆ ಸಿಗಬೇಕೆಂದು ತಿಳಿಯಲು ಚೀಟುಹಾಕಿ ತಮ್ಮತಮ್ಮೊಳಗೆ ಹಂಚಿಕೊಂಡರು.
25 : ಯೇಸುವನ್ನು ಶಿಲುಬೆಗೇರಿಸಿದಾಗ, ಬೆಳಿಗ್ಗೆ ಸುಮಾರು ಒಂಬತ್ತು ಗಂಟೆಯಾಗಿತ್ತು.
26 : ಅವರ ಮೇಲೆ ಹೊರಿಸಿದ್ದ ದೋಷಾರೋಪಣೆಯನ್ನು, ‘ಈತ ಯೆಹೂದ್ಯರ ಅರಸ’ ಎಂದು ಬರೆಯಲಾಗಿತ್ತು.
27 : ಅಲ್ಲದೆ ಯೇಸುವಿನ ಬಲಗಡೆ ಒಬ್ಬನು, ಎಡಗಡೆ ಒಬ್ಬನು, ಹೀಗೆ ಇಬ್ಬರು ಕಳ್ಳರನ್ನು ಅವರ ಸಂಗಡ ಶಿಲುಬೆಗೇರಿಸಿದರು.
28 : (ಹೀಗೆ ‘ಅವರನ್ನು ದ್ರೋಹಿಗಳ ಸಾಲಿನಲ್ಲಿ ಸೇರಿಸಿದರು,’ ಎಂಬ ಪವಿತ್ರಗ್ರಂಥದ ವಾಕ್ಯವು ನೆರವೇರಿತು).
29 : ಪಕ್ಕದಲ್ಲಿ ಹಾದುಹೋಗುತ್ತಿದ್ದ ಜನರು ತಲೆಯಾಡಿಸುತ್ತಾ, “ಆಹಾ, ಮಹಾದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಅದನ್ನು ಮತ್ತೆ ಕಟ್ಟಬಲ್ಲವನೇ,
30 : ಶಿಲುಬೆಯಿಂದ ಇಳಿದು ಬಂದು ನಿನ್ನನ್ನು ನೀನೇ ಈಗ ರಕ್ಷಿಸಿಕೋ!” ಎಂದು ಯೇಸುವನ್ನು ಮೂದಲಿಸಿದರು.
31 : ಅದೇ ಪ್ರಕಾರ ಮುಖ್ಯಯಾಜಕರೂ ಧರ್ಮಶಾಸ್ತ್ರಿಗಳೂ ಸೇರಿ ಅವರನ್ನು ಪರಿಹಾಸ್ಯ ಮಾಡುತ್ತಾ, “ಇವನು ಇತರರನ್ನು ರಕ್ಷಿಸಿದ, ಆದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲು ಇವನಿಂದಾಗದು;
32 : ಇಸ್ರಯೇಲರ ಅರಸನಾದ ಈ ಕ್ರಿಸ್ತನು ಶಿಲುಬೆಯಿಂದ ಇಳಿದು ಬರಲಿ; ಆಗ ನೋಡಿ ನಂಬುತ್ತೇವೆ,” ಎಂದು ಪರಸ್ಪರ ಮಾತನಾಡಿಕೊಂಡರು. ಯೇಸುವಿನೊಡನೆ ಶಿಲುಬೆಗೇರಿಸಲಾಗಿದ್ದವರು ಸಹ ಅವರನ್ನು ಹಂಗಿಸುತ್ತಿದ್ದರು.
ಪ್ರಾಣಾರ್ಪಣೆ
(ಮತ್ತಾ. 27.45-56; ಲೂಕ 23.44-49; ಯೊವಾ. 19.28-30)
33 : ಆಗ ನಡುಮಧ್ಯಾಹ್ನ. ಆ ಹೊತ್ತಿನಿಂದ ಮೂರುಗಂಟೆಯವರೆಗೂ ನಾಡಿನಲ್ಲೆಲ್ಲಾ ಕತ್ತಲೆ ಕವಿಯಿತು.
34 : ಮೂರನೆಯ ಗಂಟೆಯ ಸಮಯದಲ್ಲಿ, ಯೇಸುಸ್ವಾಮಿ: “ಎಲೋಹಿ, ಎಲೋಹಿ, ಲಮಾ ಸಬಕ್ತಾನಿ?” ಎಂದರೆ, “ನನ್ನ ದೇವರೇ, ನನ್ನ ದೇವರೇ, ನನ್ನನ್ನೇಕೆ ಕೈಬಿಟ್ಟಿದ್ದೀರಿ?” ಎಂದು ಗಟ್ಟಿಯಾಗಿ ಕೂಗಿಕೊಂಡರು.
35 : ಅಲ್ಲಿ ನಿಂತಿದ್ದವರಲ್ಲಿ ಕೆಲವರು ಇದನ್ನು ಕೇಳಿ, “ಇಗೋ, ಇವನು ಎಲೀಯನನ್ನು ಕರೆಯುತ್ತಿದ್ದಾನೆ!” ಎಂದರು.
36 : ಆಗ ಅವರಲ್ಲೊಬ್ಬನು ಓಡಿಹೋಗಿ, ಸ್ಪಂಜನ್ನು ಹುಳಿರಸದಲ್ಲಿ ತೋಯಿಸಿ, ಅದನ್ನು ಒಂದು ಕೋಲಿನ ತುದಿಗೆ ಸಿಕ್ಕಿಸಿ, ಯೇಸುವಿಗೆ ಕುಡಿಯಲು ಕೊಡುತ್ತಾ, “ತಾಳಿ, ಇವನನ್ನು ಶಿಲುಬೆಯಿಂದ ಬಿಡುಗಡೆ ಮಾಡಿ ಇಳಿಸುವುದಕ್ಕೆ ಎಲೀಯನು ಬರುವನೋ, ನೋಡೋಣ,” ಎಂದನು.
37 : ಯೇಸುವಾದರೋ ಗಟ್ಟಿಯಾಗಿ ಕೂಗಿ ಪ್ರಾಣಬಿಟ್ಟರು.
38 : ಆಗ ಮಹಾದೇವಾಲಯದ ತೆರೆ ಮೇಲಿನಿಂದ ಕೆಳಗಿನವರೆಗೂ ಇಬ್ಭಾಗವಾಗಿ ಸೀಳಿಹೋಯಿತು.
39 : ಯೇಸು ಹೀಗೆ ಪ್ರಾಣಬಿಟ್ಟದ್ದನ್ನು ಎದುರುನಿಂತು ನೋಡುತ್ತಿದ್ದ ಶತಾಧಿಪತಿ, “ಸತ್ಯವಾಗಿಯೂ ಈ ಮನುಷ್ಯ ದೇವರ ಪುತ್ರ!” ಎಂದನು.
40 : ಇದನ್ನೆಲ್ಲಾ ದೂರದಿಂದ ನೋಡುತ್ತಿದ್ದ ಕೆಲವು ಮಹಿಳೆಯರಲ್ಲಿ ಮಗ್ದಲದ ಮರಿಯಳು, ಚಿಕ್ಕ ಯಕೋಬ ಮತ್ತು ಯೋಸೆಯ ತಾಯಿ ಮರಿಯಳು ಹಾಗೂ ಸಲೋಮೆ ಇದ್ದರು.
41 : ಇವರು, ಯೇಸು ಗಲಿಲೇಯದಲ್ಲಿ ಇದ್ದಾಗ ಅವರನ್ನು ಹಿಂಬಾಲಿಸಿ, ಉಪಾಚಾರ ಮಾಡಿದ್ದರು. ಯೇಸುವಿನ ಸಂಗಡ ಜೆರುಸಲೇಮಿಗೆ ಬಂದಿದ್ದ ಇನ್ನೂ ಅನೇಕ ಮಹಿಳೆಯರು ಅಲ್ಲಿದ್ದರು.
ಯೇಸುವಿನ ಶವಸಂಸ್ಕಾರ
(ಮತ್ತಾ. 27.57-61; ಲೂಕ 23.50-56; ಯೊವಾ. 19.38-42)
42 : ಅಷ್ಟರಲ್ಲೇ ಸಂಜೆಯಾಗಿತ್ತು. ಸಬ್ಬತ್ತಿನ ಹಿಂದಿನ ದಿನವಾಗಿದ್ದ ಅಂದು ‘ಸಿದ್ಧತೆ’ಯ ದಿನ ಆಗಿತ್ತು. ಆದುದರಿಂದ ಅರಿಮತಾಯ ಊರಿನ ಜೋಸೆಫ್ ಎಂಬಾತನು ಧೈರ್ಯ ತಂದುಕೊಂಡು, ಪಿಲಾತನ ಸಾನ್ನಿಧ್ಯಕ್ಕೆ ಹೋಗಿ, ಯೇಸುಸ್ವಾಮಿಯ ಪಾರ್ಥಿವ ಶರೀರವನ್ನು
43 : ತನಗೆ ಕೊಡಿಸಬೇಕೆಂದು ಪಿಲಾತನನ್ನು ಕೇಳಿಕೊಂಡನು. ದೇವರ ಸಾಮ್ರಾಜ್ಯದ ಆಗಮನವನ್ನು ನಿರೀಕ್ಷಿಸುತ್ತಿದ್ದ ಈತನು ಯೆಹೂದ್ಯರ ನ್ಯಾಯಸಭೆಯ ಸನ್ಮಾನಿತ ಸದಸ್ಯನಾಗಿದ್ದನು.
44 : ಯೇಸು ಇಷ್ಟು ಬೇಗನೆ ಸತ್ತಿದ್ದಾರೆಂದು ಕೇಳಿ ಪಿಲಾತನಿಗೆ ಆಶ್ಚರ್ಯವಾಯಿತು. ಅವನು ಶತಾಧಿಪತಿಯನ್ನು ಕರೆಯಿಸಿ, “ಯೇಸು ಈಗಾಗಲೇ ಮೃತನಾದನೋ?” ಎಂದು ವಿಚಾರಿಸಿದನು.
45 : ಯೇಸು ಸತ್ತಿದ್ದಾರೆಂದು ಅವನಿಂದ ತಿಳಿದುಕೊಂಡು ಪಾರ್ಥಿವ ಶರೀರವನ್ನು ಜೋಸೆಫನಿಗೆ ಕೊಡಿಸಿದನು.
46 : ಜೋಸೆಫನು ನಾರುಮಡಿ ವಸ್ತ್ರವನ್ನು ಕೊಂಡುಕೊಂಡು ಬಂದು, ಯೇಸುವನ್ನು ಶಿಲುಬೆಯಿಂದ ಇಳಿಸಿ, ಆ ವಸ್ತ್ರದಿಂದ ಸುತ್ತಿದನು. ಅನಂತರ ಬಂಡೆಯಲ್ಲಿ ಕೊರೆದಿದ್ದ ಸಮಾಧಿಯಲ್ಲಿ ಅದನ್ನಿರಿಸಿ, ಸಮಾಧಿಯ ದ್ವಾರಕ್ಕೆ ದೊಡ್ಡ ಕಲ್ಲನ್ನು ಉರುಳಿಸಿ ಮುಚ್ಚಿದನು.
47 : ಮಗ್ದಲದ ಮರಿಯಳು ಮತ್ತು ಯೋಸೆಯ ತಾಯಿ ಮರಿಯಳು ಯೇಸುವಿನ ಪಾರ್ಥಿವ ಶರೀರವನ್ನು ಸಮಾಧಿ ಮಾಡಿದ್ದ ಸ್ಥಳವನ್ನು ಗುರುತಿಸಿಕೊಂಡರು.
ಸಾವಿನ ಸೋಲು
(ಮತ್ತಾ. 28.1-8; ಲೂಕ 24.1-12; ಯೊವಾ. 20.1-10)