1 : ಪಾಸ್ಕಹಬ್ಬವು, ಅಂದರೆ ಹುಳಿರಹಿತ ರೊಟ್ಟಿಯ ಹಬ್ಬವು ಬರುವುದಕ್ಕೆ ಇನ್ನು ಎರಡು ದಿನಗಳು ಮಾತ್ರ ಇದ್ದವು. ಮುಖ್ಯ ಯಾಜಕರೂ ಧರ್ಮಶಾಸ್ತ್ರಿಗಳೂ ಯೇಸುಸ್ವಾಮಿಯನ್ನು ಉಪಾಯದಿಂದ ಹಿಡಿದು ಕೊಲ್ಲಿಸುವುದಕ್ಕೆ ಹವಣಿಸುತ್ತಿದ್ದರು.
2 : ‘ಹಬ್ಬದ ಸಂದರ್ಭದಲ್ಲಿ ನಾವು ಈ ಕಾರ್ಯವನ್ನು ಮಾಡಬಾರದು; ಮಾಡಿದರೆ, ಜನರು ದಂಗೆ ಎದ್ದಾರು,’ ಎಂದು ಮಾತನಾಡಿಕೊಂಡರು.
ಸುಗಂಧ ತೈಲಾಭಿಷೇಕ
(ಮತ್ತಾ. 26.6-13; ಯೊವಾ. 12.1-8)
3 : ಯೇಸುಸ್ವಾಮಿ ಬೆಥಾನಿಯದಲ್ಲಿ, ಕುಷ್ಠರೋಗಿ ಸಿಮೋನನ ಮನೆಯಲ್ಲಿ ಇದ್ದರು. ಅಲ್ಲಿ ಊಟಕ್ಕೆ ಕುಳಿತಿದ್ದಾಗ, ಮಹಿಳೆಯೊಬ್ಬಳು ಅಮೃತಶಿಲೆಯ ಭರಣಿಯ ತುಂಬ ಅತ್ಯಮೂಲ್ಯವಾದ ಜಟಮಾಂಸಿ ಸುಗಂಧತೈಲವನ್ನು ತೆಗೆದುಕೊಂಡು ಬಂದು, ಭರಣಿಯನ್ನು ಒಡೆದು, ತೈಲವನ್ನು ಯೇಸುವಿನ ತಲೆಯ ಮೇಲೆ ಸುರಿದಳು.
4 : ಅಲ್ಲಿದ್ದ ಕೆಲವರು ಇದನ್ನು ಕಂಡು ಸಿಟ್ಟಿನಿಂದ, “ಈ ತೈಲವನ್ನು ಹೀಗೆ ವ್ಯರ್ಥಮಾಡಿದ್ದೇಕೆ?
5 : ಇದನ್ನು ಮುನ್ನೂರು ಬೆಳ್ಳಿನಾಣ್ಯಗಳಿಗಿಂತ ಹೆಚ್ಚು ಬೆಲೆಗೆ ಮಾರಿ, ಆ ಹಣವನ್ನು ಬಡವರಿಗೆ ಕೊಡಬಹುದಾಗಿತ್ತಲ್ಲವೆ?” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡು, ಆಕೆಯನ್ನು ನಿಂದಿಸಿದರು.
6 : ಅದಕ್ಕೆ ಯೇಸು, “ಈಕೆಯನ್ನು ಸುಮ್ಮನೆ ಬಿಡಿ, ಕಿರುಕುಳ ಕೊಡಬೇಡಿ; ಈಕೆ ನನಗೊಂದು ಸತ್ಕಾರ್ಯವನ್ನೇ ಮಾಡಿದ್ದಾಳೆ;
7 : ಬಡಬಗ್ಗರು ನಿಮ್ಮ ಸಂಗಡ ಯಾವಾಗಲೂ ಇರುತ್ತಾರೆ. ಅವರಿಗೆ ಯಾವಾಗ ಬೇಕಾದರೂ ನೀವು ಸಹಾಯ ಮಾಡಬಹುದು. ಆದರೆ ನಾನು ನಿಮ್ಮ ಸಂಗಡ ಯಾವಾಗಲೂ ಇರುವುದಿಲ್ಲ.
8 : ತನ್ನಿಂದ ಏನು ಸಾಧ್ಯವೋ ಅದನ್ನು ಈಕೆ ಮಾಡಿದ್ದಾಳೆ; ನನ್ನ ದೇಹವನ್ನು ಮುಂಚಿತವಾಗಿಯೇ ಸುಗಂಧ ತೈಲದಿಂದ ಲೇಪಿಸಿ ಅದನ್ನು ಶವಸಂಸ್ಕಾರಕ್ಕಾಗಿ ಸಿದ್ಧಪಡಿಸಿದ್ದಾಳೆ.
9 : ಜಗತ್ತಿನಾದ್ಯಂತ ಎಲ್ಲೆಲ್ಲಿ ಶುಭಸಂದೇಶವನ್ನು ಪ್ರಕಟಿಸಲಾಗುವುದೋ ಅಲ್ಲೆಲ್ಲಾ ಈ ಸತ್ಕಾರ್ಯವನ್ನು ಈಕೆಯ ಸವಿನೆನಪಿಗಾಗಿ ಸಾರಲಾಗುವುದು, ಇದು ನಿಶ್ಚಯ” ಎಂದರು.
ಸ್ವಾಮಿದ್ರೋಹಕ್ಕೆ ಸಜ್ಜು
(ಮತ್ತಾ. 26.14-16; ಲೂಕ 22.3-6)
10 : ಇದಾದಮೇಲೆ, ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತಿನ ಯೂದನು ಯೇಸುಸ್ವಾಮಿಯನ್ನು ಹಿಡಿದುಕೊಡುವ ದುರುದ್ದೇಶದಿಂದ ಮುಖ್ಯ ಯಾಜಕರ ಬಳಿಗೆ ಹೋದನು.
11 : ಇದರಿಂದ ಆ ಯಾಜಕರಿಗೆ ಅತ್ಯಾನಂದವಾಯಿತು. ಅವನಿಗೆ ಹಣಕೊಡುವುದಾಗಿ ಅವರು ಮಾತುಕೊಟ್ಟರು. ಯೇಸುವನ್ನು ಹಿಡಿದೊಪ್ಪಿಸಲು ಅವನು ಸಂದರ್ಭ ಕಾಯತೊಡಗಿದನು.
ಗುರು-ಶಿಷ್ಯರ ಹಬ್ಬದೂಟ
(ಮತ್ತಾ. 26.17-25; ಲೂಕ 22.7-14, 21-23; ಯೊವಾ. 13.21-30)
12 : ಅಂದು ಹಳಿರಹಿತ ರೊಟ್ಟಿಯ ಹಬ್ಬದ ಮೊದಲನೆಯ ದಿನ. ಅಂದರೆ, ಪಾಸ್ಕಹಬ್ಬದ ಕುರಿಮರಿಯನ್ನು ಕೊಯ್ಯುವ ದಿನ. ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, “ತಮಗೆ ಪಾಸ್ಕಭೋಜನವನ್ನು ನಾವು ಎಲ್ಲಿ ಸಿದ್ಧಪಡಿಸಬೇಕೆನ್ನುತ್ತೀರಿ?” ಎಂದು ಕೇಳಿದರು.
13 : ಯೇಸು ಅವರಲ್ಲಿ ಇಬ್ಬರಿಗೆ, “ನೀವು ಪಟ್ಟಣಕ್ಕೆ ಹೋಗಿರಿ. ಅಲ್ಲಿ ನೀರಿನ ಕೊಡವನ್ನು ಹೊತ್ತವನೊಬ್ಬನು ನಿಮ್ಮನ್ನು ಎದುರುಗೊಳ್ಳುವನು.
14 : ಅವನ ಹಿಂದೆಯೇ ಹೋಗಿ, ಅವನು ಯಾವ ಮನೆಗೆ ಹೋಗುತ್ತಾನೋ ಆ ಮನೆಯ ಯಜಮಾನನಿಗೆ, “ನಮ್ಮ ಗುರು, ‘ನನ್ನ ಶಿಷ್ಯರ ಜೊತೆಯಲ್ಲಿ ಪಾಸ್ಕ ಭೋಜನ ಮಾಡಲು ನನಗೆ ಕೊಠಡಿ ಎಲ್ಲಿ?’ ಎಂದು ಕೇಳುತ್ತಾರೆ,” ಎಂದು ವಿಚಾರಿಸಿರಿ.
15 : ಅವನು ಮೇಲುಪ್ಪರಿಗೆಯಲ್ಲಿ ಸಿದ್ಧವಾಗಿರುವ ಹಾಗೂ ಸುಸಜ್ಜಿತವಾದ ದೊಡ್ಡ ಕೊಠಡಿಯನ್ನು ತೋರಿಸುವನು. ಅಲ್ಲಿ ನಮಗೆ ಊಟ ಸಿದ್ದಮಾಡಿರಿ,” ಎಂದು ಹೇಳಿಕಳುಹಿಸಿದರು.
16 : ಅವರು ಪಟ್ಟಣಕ್ಕೆ ಹೋಗಿ, ಯೇಸು ತಮಗೆ ಹೇಳಿದ ಪ್ರಕಾರ ಎಲ್ಲಾ ವ್ಯವಸ್ಥಿತವಾಗಿರುವುದನ್ನು ಕಂಡು, ಪಾಸ್ಕ ಭೋಜನವನ್ನು ತಯಾರಿಸಿದರು.
17 : ಸಂಜೆಯಾದಾಗ, ಯೇಸು ಹನ್ನೆರಡು ಮಂದಿ ಶಿಷ್ಯರೊಡನೆ ಅಲ್ಲಿಗೆ ಬಂದರು.
18 : ಅವರೆಲ್ಲರೂ ಊಟಮಾಡುತ್ತಿದ್ದಾಗ ಯೇಸುಸ್ವಾಮಿ, “ನನ್ನ ಸಂಗಡ ಊಟಮಾಡುವ ನಿಮ್ಮಲ್ಲೇ ಒಬ್ಬನು ನನಗೆ ದ್ರೋಹ ಬಗೆಯುವನು, ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ,” ಎಂದರು.
19 : ಆಗ ಶಿಷ್ಯರು ಕಳವಳಗೊಂಡು, ‘ಅಂಥವನು ನಾನೋ? ನಾನೋ?’ ಎಂದು ಒಬ್ಬರಾದ ಮೇಲೆ ಒಬ್ಬರು ಕೇಳತೊಡಗಿದರು
20 : ಅದಕ್ಕೆ ಯೇಸು, “ಊಟದ ಬಟ್ಟಲಲ್ಲಿ ನನ್ನೊಡನೆ ರೊಟ್ಟಿಯನ್ನು ಅದ್ದುತ್ತಿರುವ ಇದೇ ಹನ್ನೆರಡುಮಂದಿಯಲ್ಲಿ ಒಬ್ಬನು ಅವನು.
21 : ನರಪುತ್ರನೇನೋ ಪವಿತ್ರಗ್ರಂಥದಲ್ಲಿ ಬರೆದಿರುವಂತೆ ಹೊರಟು ಹೋಗುತ್ತಾನೆ, ನಿಜ. ಆದರೆ ನರಪುತ್ರನಿಗೆ ದ್ರೋಹ ಬಗೆಯುವವನ ದುರ್ಗತಿಯನ್ನು ಏನೆಂದು ಹೇಳಲಿ? ಅವನು ಹುಟ್ಟದಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು!” ಎಂದರು.
ಪ್ರಭುವಿನ ಪವಿತ್ರ ಭೋಜನ
(ಮತ್ತಾ. 26.26-30; ಲೂಕ 22.15-20; 1 ಕೊರಿಂಥ 11.23-25)
22 : ಅವರೆಲ್ಲರೂ ಊಟಮಾಡುತ್ತಿರುವಾಗ, ಯೇಸುಸ್ವಾಮಿ ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತುತಿಮಾಡಿ, ಅದನ್ನು ಮುರಿದು, ಶಿಷ್ಯರಿಗೆ ಕೊಡುತ್ತಾ, “ಇದನ್ನು ಸ್ವೀಕರಿಸಿರಿ, ಇದು ನನ್ನ ಶರೀರ,” ಎಂದರು.
23 : ಬಳಿಕ ಪಾನಪಾತ್ರೆಯನ್ನು ತೆಗೆದುಕೊಂಡು ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ, ಅದನ್ನು ಅವರಿಗೆ ಕೊಟ್ಟರು. ಅವರೆಲ್ಲರೂ ಅದರಿಂದ ಕುಡಿದರು.
24 : ಯೇಸು ಅವರಿಗೆ, “ಇದು ನನ್ನ ರಕ್ತ, ಸಮಸ್ತ ಜನರಿಗಾಗಿ ಸುರಿಸಲಾಗುವ ಒಡಂಬಡಿಕೆಯ ರಕ್ತ.
25 : ನಾನು ದೇವರ ಸಾಮ್ರಾಜ್ಯದಲ್ಲಿ ದ್ರಾಕ್ಷಾರಸವನ್ನು ಹೊಸದಾಗಿ ಕುಡಿಯುವ ದಿನದವರೆಗೂ ಅದನ್ನು ಇನ್ನು ಕುಡಿಯುವುದಿಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.
26 : ಬಳಿಕ ಅವರೆಲ್ಲರೂ ಕೀರ್ತನೆ ಹಾಡಿ, ಓಲಿವ್ ಗುಡ್ಡಕ್ಕೆ ಹೊರಟರು.
ಪೇತ್ರನ ನಿರಾಕರಣೆಯ ಮುನ್ಸೂಚನೆ
(ಮತ್ತಾ. 26.31-35; ಲೂಕ 22.31-34; ಯೊವಾ. 13.36-38)
27 : ಅನಂತರ ಯೇಸುಸ್ವಾಮಿ ಶಿಷ್ಯರಿಗೆ,
“ ಕುರುಬನನ್ನು ಕೊಲ್ಲುವೆನು
ಕುರಿಗಳು ಚದರಿ ಹೋಗುವುವು’
ಎಂದು ಪವಿತ್ರ ಗ್ರಂಥದಲ್ಲಿ ಬರೆದಿರುವಂತೆ ನೀವು ಎಲ್ಲರೂ ನನ್ನಲ್ಲಿ ವಿಶ್ವಾಸ ಕಳೆದುಕೊಂಡು ಹಿಮ್ಮೆಟ್ಟುವಿರಿ.
28 : ನಾನಾದರೋ, ಪುನರುತ್ಥಾನ ಹೊಂದಿ ನಿಮಗಿಂತ ಮುಂದಾಗಿ ಗಲಿಲೇಯಕ್ಕೆ ಹೋಗುವೆನು,” ಎಂದರು.
29 : ಇದನ್ನು ಕೇಳಿದ ಪೇತ್ರನು, “ಎಲ್ಲರೂ ತಮ್ಮಲ್ಲಿ ವಿಶ್ವಾಸ ಕಳೆದುಕೊಂಡು ಹಿಮ್ಮೆಟ್ಟಿದರೂ ನಾನು ಮಾತ್ರ ಹಾಗೆ ಮಾಡೆನು,” ಎಂದನು.
30 : ಅದಕ್ಕೆ ಯೇಸು, “ಇದೇ ರಾತ್ರಿ ಕೋಳಿ ಎರಡು ಸಾರಿ ಕೂಗುವ ಮೊದಲೇ, ‘ಆತನನ್ನು ನಾನರಿಯೆ’ ಎಂದು ನೀನು ಮೂರು ಸಾರಿ ನನ್ನನ್ನು ನಿರಾಕರಿಸುವೆ, ಇದು ಖಂಡಿತ,” ಎಂದರು.
31 : ಆದರೆ ಪೇತ್ರನು “ನಾನು ತಮ್ಮೊಡನೆ ಸಾಯಬೇಕಾಗಿ ಬಂದರೂ ತಮ್ಮನ್ನು ಮಾತ್ರ ನಿರಾಕರಿಸೆನು,” ಎಂದು ಆವೇಶಪೂರಿತನಾಗಿ ನುಡಿದನು. ಹಾಗೆಯೇ ಉಳಿದವರೂ ಹೇಳಿದರು.
ಗೆತ್ಸೆಮನಿ ತೋಪಿನಲ್ಲಿ ಮನೋವೇದನೆ
(ಮತ್ತಾ. 26.36-46; ಲೂಕ 2.39-46)
32 : ತರುವಾಯ ಅವರೆಲ್ಲರೂ ಗೆತ್ಸೆಮನೆ ಎಂಬ ತೋಪಿಗೆ ಬಂದರು.
33 : ಯೇಸುಸ್ವಾಮಿ ತಮ್ಮ ಶಿಷ್ಯರಿಗೆ, “ನಾನು ಪ್ರಾರ್ಥನೆ ಮಾಡಿ ಬರುವವರೆಗೂ ನೀವು ಇಲ್ಲೇ ಕುಳಿತಿರಿ,” ಎಂದು ಹೇಳಿ ಪೇತ್ರ, ಯಕೋಬ ಮತ್ತು ಯೊವಾನ್ನರನ್ನು ಮಾತ್ರ ತಮ್ಮ ಜೊತೆಯಲ್ಲಿ ಕರೆದುಕೊಂಡು ಮುಂದಕ್ಕೆ ಹೋದರು.
34 : ಅಲ್ಲಿ ಅತೀವ ದುಃಖದಿಂದ ಚಿಂತಾಕ್ರಾಂತರಾಗಿ, “ನನ್ನ ಮನೋವೇದನೆ ಪ್ರಾಣಹಿಂಡುವಷ್ಟು ತೀವ್ರವಾಗಿದೆ; ನೀವು ಇಲ್ಲೇ ಇದ್ದು ಎಚ್ಚರವಾಗಿರಿ,” ಎಂದರು.
35 : ಅನಂತರ ಅಲ್ಲಿಂದ ಇನ್ನೂ ಸ್ವಲ್ಪ ಮುಂದಕ್ಕೆ ಹೋಗಿ, ನೆಲಕ್ಕೆ ಕುಸಿದು, ಪ್ರಾರ್ಥಿಸುತ್ತಾ, “ಸಾಧ್ಯವಾದರೆ, ಈ ವಿಷಮ ಗಳಿಗೆಯು ನನ್ನಿಂದ ದೂರವಾಗಲಿ,” ಎಂದು ದೇವರನ್ನು ಬಿನ್ನವಿಸಿದರು.
36 : ಅನಂತರ, “ಅಪ್ಪಾ, ಪಿತನೇ, ನಿಮಗೆ ಎಲ್ಲವೂ ಸಾಧ್ಯ. ಈ ಕಷ್ಟದ ಕೊಡವನ್ನು ನನ್ನಿಂದ ತೆಗೆದುಬಿಡಿ. ಆದರೂ ನನ್ನ ಚಿತ್ತದಂತೆ ಅಲ್ಲ, ನಿಮ್ಮ ಚಿತ್ತವಿದ್ದಂತೆಯೇ ಆಗಲಿ,” ಎಂದರು.
37 : ಅನಂತರ ಹಿಂದಿರುಗಿ ಬಂದು, ಆ ಮೂವರು ಶಿಷ್ಯರು ನಿದ್ರಿಸುತ್ತಿದ್ದುದನ್ನು ಕಂಡು, ಪೇತ್ರನಿಗೆ, “ಸಿಮೋನನೇ, ನಿದ್ದೆಮಾಡುತ್ತಿರುವಿಯೋ! ಒಂದು ಗಂಟೆಯಾದರೂ ಎಚ್ಚರವಾಗಿರಲು ನಿನಗೆ ಸಾಧ್ಯವಾಗದೆ ಹೋಯಿತೋ!
38 : ಪ್ರಲೋಭನೆಗೆ ಒಳಗಾಗದಂತೆ ಎಚ್ಚರದಿಂದ ಇದ್ದು ಪ್ರಾರ್ಥನೆಮಾಡಿ. ಆತ್ಮಕ್ಕೇನೋ ಆಸಕ್ತಿ ಇದೆ; ಆದರೆ ದೇಹಕ್ಕೆ ಶಕ್ತಿ ಸಾಲದು,” ಎಂದರು.
39 : ಮರಳಿ ಹಿಂದಕ್ಕೆ ಹೋಗಿ, ಮೊದಲು ಪ್ರಾರ್ಥನೆ ಮಾಡಿದಂತೆಯೇ ಮಾಡಿದರು.
40 : ಪುನಃ ಶಿಷ್ಯರ ಬಳಿಗೆ ಬಂದಾಗ, ಅವರು ಇನ್ನೂ ನಿದ್ರಾವಸ್ಥೆಯಲ್ಲಿದ್ದರು; ಅವರ ಕಣ್ಣುಗಳು ಬಹುಭಾರವಾಗಿದ್ದವು. ಯೇಸುವಿಗೆ ಏನು ಉತ್ತರ ಕೊಡಬೇಕೆಂದು ಅವರಿಗೆ ತಿಳಿಯದೆ ಹೋಯಿತು.
41 : ಯೇಸು ಮೂರನೆಯ ಸಾರಿ ಅವರ ಬಳಿಗೆ ಬಂದು, “ನೀವು ಇನ್ನೂ ನಿದ್ರಿಸಿ ವಿಶ್ರಮಿಸುತ್ತಿರುವಿರಾ? ಸಾಕು, ಸಮಯವು ಸಮೀಪಿಸಿತು;
42 : ನರಪುತ್ರನು ದುರ್ಜನರ ಕೈವಶ ಆಗಲಿದ್ದಾನೆ. ಎದ್ದೇಳಿ, ಹೋಗೋಣ. ಇಗೋ ನೋಡಿ, ನನಗೆ ದ್ರೋಹ ಬಗೆಯುವವನು ಹತ್ತಿರವೇ ಇದ್ದಾನೆ,” ಎಂದರು.
ಯೂದನ ಗುರುದ್ರೋಹ
(ಮತ್ತಾ. 26.47-56; ಲೂಕ 22.47-53; ಯೊವಾ. 18.3-12)
43 : ಯೇಸುಸ್ವಾಮಿ ಇನ್ನೂ ಮಾತನಾಡುತ್ತ ಇರುವಾಗಲೇ, ಹನ್ನೆರಡುಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನು ಅಲ್ಲಿಗೆ ಬಂದನು. ಖಡ್ಗಗಳನ್ನೂ ಲಾಠಿಗಳನ್ನೂ ಹಿಡಿದಿದ್ದ ಒಂದು ಗುಂಪು ಅವನೊಂದಿಗಿತ್ತು. ಮುಖ್ಯಯಾಜಕರೂ ಧರ್ಮಶಾಸ್ತ್ರಿಗಳೂ ಪ್ರಮುಖರೂ ಅವರನ್ನು ಕಳುಹಿಸಿದ್ದರು.
44 : ಗುರುದ್ರೋಹಿಯಾದ ಯೂದನು ಅವರಿಗೆ, “ನಾನು ಯಾರಿಗೆ ಮುದ್ದಿಡುತ್ತೇನೋ, ಆತನೇ ಆ ವ್ಯಕ್ತಿ, ಆತನನ್ನು ಬಂಧಿಸಿ, ಭದ್ರವಾಗಿ ಕರೆದೊಯ್ಯಿರಿ,” ಎಂದು ಮೊದಲೇ ಸೂಚನೆಕೊಟ್ಟಿದ್ದನು.
45 : ಅದರಂತೆಯೇ ಅವನು ಅಲ್ಲಿಗೆ ಬಂದಕೂಡಲೆ ಯೇಸುವಿನ ಹತ್ತಿರಕ್ಕೆ ನೇರವಾಗಿ ಹೋಗಿ, ‘ಗುರುದೇವಾ’, ಎಂದು ಹೇಳುತ್ತಾ ಅವರಿಗೆ ಮುದ್ದಿಟ್ಟನು.
46 : ತಕ್ಷಣ ಆ ಜನರು ಯೇಸುವನ್ನು ಹಿಡಿದು ಬಂಧಿಸಿದರು.
47 : ಆಗ ಸಮೀಪದಲ್ಲಿದ್ದವರಲ್ಲಿ ಒಬ್ಬನು, ತನ್ನ ಖಡ್ಗವನ್ನು ಹಿರಿದು, ಪ್ರಧಾನಯಾಜಕನ ಆಳನ್ನು ಹೊಡೆದು, ಅವನ ಕಿವಿಯನ್ನು ಕತ್ತರಿಸಿಬಿಟ್ಟನು.
48 : ಯೇಸುಸ್ವಾಮಿ ಆ ಗುಂಪಿಗೆ, “ದರೋಡೆಗಾರರನ್ನು ಹಿಡಿಯುವುದಕ್ಕೋ ಎಂಬಂತೆ ನನ್ನನ್ನು ಬಂಧಿಸಲು ಖಡ್ಗಗಳನ್ನೂ ಲಾಠಿಗಳನ್ನೂ ಹಿಡಿದುಕೊಂಡು ಬರಬೇಕಾಗಿತ್ತೇ? ನಾನು ಪ್ರತೀದಿನ ಮಹಾದೇವಾಲಯದಲ್ಲಿ ನಿಮ್ಮ ನಡುವೆಯೇ ಬೋಧನೆಮಾಡುತ್ತಾ ಇದ್ದೆ; ಆಗ ನೀವು ನನ್ನನ್ನು ಬಂಧಿಸಲಿಲ್ಲ.
49 : ಆದರೆ ಪವಿತ್ರ ಗ್ರಂಥದಲ್ಲಿ ಬರೆದಿರುವುದು ನೆರವೇರುವಂತೆ ಇದೆಲ್ಲಾ ಸಂಭವಿಸಿದೆ,” ಎಂದರು.
50 : ಆಗ ಶಿಷ್ಯರೆಲ್ಲರೂ ಯೇಸುವನ್ನು ತೊರೆದು ಪಲಾಯನ ಮಾಡಿದರು.
51 : ಮೈಮೇಲೆ ಒಂದು ದುಪ್ಪಟಿಯನ್ನು ಮಾತ್ರ ಸುತ್ತಿಕೊಂಡಿದ್ದ ಯುವಕನೊಬ್ಬನು ಯೇಸುಸ್ವಾಮಿಯನ್ನು ಹಿಂಬಾಲಿಸುತ್ತಿದ್ದನು.
52 : ಅವನನ್ನು ಹಿಡಿಯಲು ಆ ಜನರು ಯತ್ನಿಸಿದಾಗ, ಅವನು ಆ ದುಪ್ಪಟಿಯನ್ನು ಅವರ ಕೈಯಲ್ಲೇ ಬಿಟ್ಟು, ಬೆತ್ತಲೆಯಾಗಿ ಓಡಿಹೋದನು.
ಯೆಹೂದ್ಯ ನ್ಯಾಯಸಭೆಯ ಮುಂದೆ ಯೇಸು
(ಮತ್ತಾ. 26.57-68; ಲೂಕ 22.54-55, 63-71; ಯೊವಾ. 18.13-14, 19-24)
53 : ಅನಂತರ ಆ ಜನರು ಯೇಸುಸ್ವಾಮಿಯನ್ನು ಪ್ರಧಾನಯಾಜಕನ ಬಳಿಗೆ ಕರೆದೊಯ್ದರು. ಅಲ್ಲಿ ಎಲ್ಲಾ ಮುಖ್ಯಯಾಜಕರು, ಪ್ರಮುಖರು ಹಾಗು ಧರ್ಮಶಾಸ್ತ್ರಿಗಳು ಸಭೆ ಸೇರಿದ್ದರು.
54 : ಪೇತ್ರನಾದರೋ ದೂರದಿಂದ ಯೇಸುವನ್ನು ಹಿಂಬಾಲಿಸುತ್ತಿದ್ದನು. ಅವನು ಪ್ರಧಾನಯಾಜಕನ ಭವನದವರೆಗೂ ಬಂದು ಹೊರಾಂಗಣದಲ್ಲಿ, ಪಹರೆಯವರ ಜೊತೆಯಲ್ಲಿ ಕುಳಿತು ಚಳಿ ಕಾಯಿಸಿಕೊಳ್ಳುತ್ತಿದ್ದನು
55 : ಇತ್ತ ಮುಖ್ಯ ಯಾಜಕರು ಮತ್ತು ಉಚ್ಛನ್ಯಾಯಸಭೆಯ ಸದಸ್ಯರೆಲ್ಲರೂ ಯೇಸುವನ್ನು ಮರಣದಂಡನೆಗೆ ಗುರಿಪಡಿಸುವ ಸಲುವಾಗಿ ಅವರ ವಿರುದ್ಧ ಸಾಕ್ಷಿ ಹುಡುಕುತ್ತಾ ಇದ್ದರು. ಆದರೆ ಅವರಿಗೆ ಸರಿಯಾದ ಒಂದು ಸಾಕ್ಷ್ಯವೂ ದೊರಕಲಿಲ್ಲ.
56 : ಅನೇಕರು ಮುಂದೆ ಬಂದು, ಅವರ ವಿರುದ್ಧ ಸುಳ್ಳು ಸಾಕ್ಷಿ ಹೇಳಿದರಾದರೂ ಅವರ ಸಾಕ್ಷ್ಯ ಒಂದಕ್ಕೊಂದು ಸರಿಬೀಳಲಿಲ್ಲ.
57 : ಕೆಲವರು ಎದ್ದುನಿಂತು, “ ‘ಕೈಗಳಿಂದ ಕಟ್ಟಿರುವ ಈ ಮಹಾ ದೇವಾಲಯವನ್ನು ನಾನು ಕೆಡವಿ, ಕೈಗಳಿಂದ ಕಟ್ಟದ ಇನ್ನೊಂದನ್ನು ಮೂರು ದಿನಗಳಲ್ಲಿ ನಿರ್ಮಿಸುತ್ತೇನೆ,’ ಎಂದು ಇವನು ಹೇಳಿದ್ದನ್ನು ಕೇಳಿದ್ದೇವೆ,” ಎಂಬುದಾಗಿ ಸುಳ್ಳುಸಾಕ್ಷಿ ಹೇಳಿದರು.
58 : ಕೆಲವರು ಎದ್ದುನಿಂತು, “ ‘ಕೈಗಳಿಂದ ಕಟ್ಟಿರುವ ಈ ಮಹಾ ದೇವಾಲಯವನ್ನು ನಾನು ಕೆಡವಿ, ಕೈಗಳಿಂದ ಕಟ್ಟದ ಇನ್ನೊಂದನ್ನು ಮೂರು ದಿನಗಳಲ್ಲಿ ನಿರ್ಮಿಸುತ್ತೇನೆ,’ ಎಂದು ಇವನು ಹೇಳಿದ್ದನ್ನು ಕೇಳಿದ್ದೇವೆ,” ಎಂಬುದಾಗಿ ಸುಳ್ಳುಸಾಕ್ಷಿ ಹೇಳಿದರು.
59 : ಈ ಸಾಕ್ಷಿಗಳ ಮಾತುಗಳು ಒಂದಕ್ಕೊಂದು ಸರಿಬೀಳಲಿಲ್ಲ.
60 : ಆಗ ಪ್ರಧಾನಯಾಜಕನು ಸಭೆಯ ಮಧ್ಯೆ ಎದ್ದುನಿಂತು, ಯೇಸುವನ್ನು ನೋಡಿ, “ಈ ಜನರು ನಿನಗೆ ವಿರುದ್ಧವಾಗಿ ತಂದಿರುವ ಆರೋಪಣೆಗಳನ್ನು ಕೇಳುತ್ತಿರುವೆಯಾ? ಇವುಗಳಿಗೆ ನಿನ್ನ ಉತ್ತರವೇನು?” ಎಂದು ಪ್ರಶ್ನಿಸಿದನು.
61 : ಆದರೆ ಯೇಸು ಮೌನವಾಗಿದ್ದರು. ಯಾವ ಉತ್ತರವನ್ನೂ ಕೊಡಲಿಲ್ಲ. ಪ್ರಧಾನಯಾಜಕನು ಪುನಃ “ಸ್ತುತ್ಯ ದೇವರ ಪುತ್ರ ಹಾಗೂ ಅಭಿಷಿಕ್ತನಾದ ಲೋಕೋದ್ಧಾರಕ ನೀನೋ?” ಎಂದು ಕೇಳಿದನು.
62 : ಅದಕ್ಕೆ ಯೇಸು, “ಹೌದು ನಾನೇ, ಸರ್ವಶಕ್ತ ದೇವರ ಬಲಗಡೆ ನರಪುತ್ರನು ಆಸೀನನಾಗಿ ಇರುವುದನ್ನೂ ಆಕಾಶದ ಮೇಘಗಳಲ್ಲಿ ಬರುವುದನ್ನೂ ನೀವು ಕಾಣುವಿರಿ,” ಎಂದರು.
63 : ಒಡನೆಯೇ, ಪ್ರಧಾನಯಾಜಕನು ಕೋಪದಿಂದ ತನ್ನ ಉಡುಪನ್ನೇ ಹರಿದುಕೊಂಡನು. “ಇನ್ನು ನಮಗೆ ಸಾಕ್ಷಿಗಳೇತಕ್ಕೆ? ಇವನಾಡಿದ ದೇವದೂಷಣೆಯನ್ನು ನೀವೇ ಕೇಳಿದ್ದೀರಿ! ನಿಮ್ಮ ಅಭಿಪ್ರಾಯ ಏನು?” ಎಂದು ಸಭೆಯನ್ನು ಕೇಳಿದನು.
64 : ಅವರೆಲ್ಲರೂ “ಇವನಿಗೆ ಮರಣದಂಡನೆ ಆಗಬೇಕು,” ಎಂದು ತೀರ್ಮಾನವಿತ್ತರು.
65 : ಅನಂತರ, ಅವರಲ್ಲಿ ಕೆಲವರು ಯೇಸುವಿನ ಮೇಲೆ ಉಗುಳಿದರು. ಅವರ ಮುಖಕ್ಕೆ ಮುಸುಕು ಹಾಕಿ, ಅವರನ್ನು ಗುದ್ದಿ, “ಗುದ್ದಿದವರು ಯಾರು? ಪ್ರವಾದಿಸು ನೋಡೋಣ,” ಎನ್ನುತ್ತಿದ್ದರು. ಇದಲ್ಲದೆ ಅಲ್ಲಿದ್ದ ಪಹರೆಯವರು ಅವರಿಗೆ ಏಟಿನ ಮೇಲೆ ಏಟುಕೊಟ್ಟು ತಮ್ಮ ವಶಕ್ಕೆ ತೆಗೆದುಕೊಂಡರು.
‘ಅವನಾರೋ ನಾನರಿಯೆ’
(ಮತ್ತಾ. 26.69-75; ಲೂಕ 22.56-62; ಯೊವಾ. 18.15-18, 25-27)
66 : ಪೇತ್ರನು ಹೊರಾಂಗಣದಲ್ಲಿ ಇದ್ದನು. ಆಗ ಪ್ರಧಾನಯಾಜಕನ ಸೇವಕಿಯೊಬ್ಬಳು ಅಲ್ಲಿಗೆ ಬಂದಳು.
67 : ಚಳಿಕಾಯಿಸಿಕೊಳ್ಳುತ್ತಿದ್ದ ಪೇತ್ರನನ್ನು ಆಕೆ ದಿಟ್ಟಿಸಿ ನೋಡಿ, “ನೀನು ಸಹ ಆ ನಜರೇತಿನ ಯೇಸುವಿನ ಸಂಗಡ ಇದ್ದವನು,” ಎಂದಳು.
68 : ಪೇತ್ರನು ಆಕೆ ಹೇಳಿದ್ದನ್ನು ನಿರಾಕರಿಸಿದನು. “ನೀನು ಏನು ಹೇಳುತ್ತಿದ್ದೀಯೋ ನನಗೆ ಗೊತ್ತಿಲ್ಲ; ನನಗೇನೂ ತಿಳಿಯದು,” ಎಂದುಬಿಟ್ಟನು. ಅಲ್ಲಿಂದ ಎದ್ದು ದ್ವಾರಮಂಟಪಕ್ಕೆ ಹೋದನು (ಆಗ ಕೋಳಿ ಕೂಗಿತು).
69 : ಅಲ್ಲಿಯೂ ಆಕೆ ಅವನನ್ನು ಕಂಡು ಹತ್ತಿರವಿದ್ದವರಿಗೆ, “ಇವನು ಸಹ ಅವರಲ್ಲಿ ಒಬ್ಬನು,” ಎಂದು ತಿಳಿಸಿದಳು. ಪೇತ್ರನು ಪುನಃ ಆಕೆ ಹೇಳಿದ್ದನ್ನು ನಿರಾಕರಿಸಿದನು.
70 : ಸ್ವಲ್ಪ ಹೊತ್ತಾದ ಮೇಲೆ ಅಲ್ಲಿದ್ದವರು ಪೇತ್ರನಿಗೆ, “ಖಂಡಿತವಾಗಿ ನೀನು ಅವರಲ್ಲಿ ಒಬ್ಬನು. ಏಕೆಂದರೆ, ನೀನೂ ಗಲಿಲೇಯದವನೇ,” ಎಂದರು.
71 : ಆಗ ಪೇತ್ರನು, “ನೀವು ಹೇಳುವ ಆ ಮನುಷ್ಯ ಯಾರೆಂದು ನಾನರಿಯೆ,” ಎಂದು ಹೇಳಿ ಆಣೆಯಿಡುವುದಕ್ಕೂ ಶಪಿಸಿಕೊಳ್ಳುವುದಕ್ಕೂ ತೊಡಗಿದನು ಕೂಡಲೇ ಕೋಳಿ ಎರಡನೆಯ ಸಾರಿ ಕೂಗಿತು.
72 : “ಕೋಳಿ ಎರಡು ಸಾರಿ ಕೂಗುವ ಮೊದಲೇ ‘ಆತನನ್ನು ನಾನರಿಯೆ’ ಎಂದು ಮೂರು ಬಾರಿ ನನ್ನನ್ನು ನಿರಾಕರಿಸುವೆ” ಎಂದು ಯೇಸು ಹೇಳಿದ್ದ ಮಾತು ಪೇತ್ರನ ನೆನಪಿಗೆ ಬಂದಿತು. ದುಃಖದ ಕಟ್ಟೆಯೊಡೆದು ಆತನು ಬಿಕ್ಕಿಬಿಕ್ಕಿ ಅತ್ತನು.
ರಾಜ್ಯಪಾಲ ಪಿಲಾತನ ಸಮ್ಮುಖದಲ್ಲಿ ಯೇಸು
(ಮತ್ತಾ. 27.1-2, 11-14; ಲೂಕ 23.1-5; ಯೊವಾ. 18.28-38)