1 : ಯೇಸುಸ್ವಾಮಿ ದೇವಾಲಯದಿಂದ ಹೊರಗೆ ಬರುತ್ತಿದ್ದಾಗ ಅವರ ಶಿಷ್ಯರಲ್ಲಿ ಒಬ್ಬನು, “ಗುರುವೇ, ಅತ್ತ ನೋಡಿ; ಎಂಥ ಬಾರಿ ಕಲ್ಲುಗಳು! ಎಷ್ಟು ರಮ್ಯವಾದ ಕಟ್ಟಡಗಳು!” ಎಂದು ವರ್ಣಿಸತೊಡಗಿದನು.
2 : ಅದಕ್ಕೆ ಯೇಸು, “ಈ ಮಹಾ ಕಟ್ಟಡಗಳನ್ನು ನೀನು ನೋಡುತ್ತಿರುವೆಯಲ್ಲವೆ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವುದಿಲ್ಲ; ಎಲ್ಲವನ್ನೂ ಕೆಡವಿ ಹಾಕುವರು,” ಎಂದರು.
ಸೈರಣೆಯಿಂದ ರಕ್ಷಣೆ
(ಮತ್ತಾ. 24.3-14; ಲೂಕ 21.7-19)
3 : ಯೇಸುಸ್ವಾಮಿ ದೇವಾಲಯಕ್ಕೆ ಎದುರಾಗಿ ಓಲಿವ್ ಗುಡ್ಡದ ಮೇಲೆ ಕುಳಿತಿದ್ದಾಗ ಪೇತ್ರ, ಯಕೋಬ, ಯೊವಾನ್ನ ಹಾಗೂ ಅಂದ್ರೆಯ ಪ್ರತ್ಯೇಕವಾಗಿ ಅವರ ಬಳಿಗೆ ಬಂದು,
4 : “ಇವೆಲ್ಲವೂ ಸಂಭವಿಸುವುದು ಯಾವಾಗ? ಇವೆಲ್ಲವೂ ಸಂಭವಿಸುವ ಸಮಯ ಬಂತೆಂಬುದನ್ನು ನಾವು ತಿಳಿಯಲು ಪೂರ್ವಸೂಚನೆ ಏನು? ನಮಗೆ ತಿಳಿಸಿ,” ಎಂದು ಕೇಳಿಕೊಂಡರು.
5 : ಅದಕ್ಕೆ ಯೇಸು ಹೀಗೆಂದರು: “ಯಾರೂ ನಿಮ್ಮನ್ನು ಮೋಸಗೊಳಿಸದಂತೆ ಜಾಗರೂಕರಾಗಿರಿ.
6 : ಅನೇಕರು ನನ್ನ ಹೆಸರನ್ನು ಇಟ್ಟುಕೊಂಡು ಬಂದು, ‘ನಾನೇ ಕ್ರಿಸ್ತ’, ‘ನಾನೇ ಕ್ರಿಸ್ತ’ ಎನ್ನುತ್ತಾ ಎಷ್ಟೋ ಜನರನ್ನು ತಪ್ಪುದಾರಿಗೆ ಎಳೆಯುವರು.
6 : ಅನಂತರ ಯೇಸುಸ್ವಾಮಿ ಈ ಸಾಮತಿಯನ್ನು ಹೇಳಿದರು: “ಒಬ್ಬನು ತನ್ನ ದ್ರಾಕ್ಷಿ ತೋಟದಲ್ಲಿ ಒಂದು ಅಂಜೂರದ ಮರವನ್ನು ನೆಡಿಸಿದ್ದ. ಒಮ್ಮೆ ಅವನು ಬಂದು ಅದರಲ್ಲಿ ಹಣ್ಣನ್ನು ಹುಡುಕಲು ಒಂದೂ ಕಾಣಿಸಲಿಲ್ಲ.
7 : ಇದಲ್ಲದೆ, ರಣಕಹಳೆಗಳನ್ನೂ ಸಮರಸುದ್ದಿಗಳನ್ನೂ ಕೇಳುವಿರಿ. ಆಗ ನೀವು ಕಳವಳಪಡಬೇಡಿ. ಇವೆಲ್ಲವೂ ಸಂಭವಿಸಲೇಬೇಕು. ಆದರೂ ಇದಿನ್ನೂ ಅಂತ್ಯಕಾಲವಲ್ಲ;
8 : ಜನಾಂಗಕ್ಕೆ ವಿರುದ್ಧ ಜನಾಂಗ, ರಾಷ್ಟ್ರಕ್ಕೆ ವಿರುದ್ಧ ರಾಷ್ಟ್ರ ಯುದ್ಧಕ್ಕೆ ಇಳಿಯುವುವು. ಅಲ್ಲಲ್ಲಿ ಭೂಕಂಪಗಳು ಆಗುವುವು. ಕ್ಷಾಮ- ಡಾಮರಗಳು ತಲೆದೋರುವುವು. ಇವೆಲ್ಲವೂ ಪ್ರಸವವೇದನೆಯ ಪ್ರಾರಂಭ ಮಾತ್ರ.
9 : “ನಿಮ್ಮ ವಿಷಯದಲ್ಲೂ ಎಚ್ಚರಿಕೆಯಿಂದಿರಿ. ನಿಮ್ಮನ್ನು ನ್ಯಾಯಸ್ಥಾನಗಳಿಗೆ ಎಳೆಯುವರು; ಪ್ರಾರ್ಥನಾಮಂದಿರಗಳಲ್ಲಿ ಹೊಡೆಯುವರು. ನನ್ನ ನಿಮಿತ್ತ ನೀವು ಅಧಿಕಾರಿಗಳ ಮತ್ತು ಅರಸರ ಮುಂದೆ ನಿಲ್ಲಬೇಕಾಗುವುದು. ಅವರ ಮುಂದೆ ನೀವು ನನಗೆ ಸಾಕ್ಷಿಗಳಾಗುವಿರಿ.
10 : ಈ ಮೊದಲು ಎಲ್ಲಾ ಜನಾಂಗಗಳಿಗೆ ಶುಭಸಂದೇಶವನ್ನು ಪ್ರಕಟಿಸಬೇಕಾಗಿದೆ.
11 : ನಿಮ್ಮನ್ನು ಬಂಧಿಸಿ ನ್ಯಾಯವಿಚಾರಣೆಗೆ ಗುರಿಪಡಿಸಿದಾಗ ಏನು ಹೇಳವುದು ಎಂದು ಮುಂಚಿತವಾಗಿಯೇ ಚಿಂತಾಕ್ರಾಂತರಾಗದಿರಿ. ಆ ಗಳಿಗೆಯಲ್ಲಿ ನಿಮಗೆ ಅನುಗ್ರಹಿಸಲಾಗುವ ಮಾತುಗಳನ್ನೇ ನುಡಿಯಿರಿ. ಏಕೆಂದರೆ, ಮಾತನಾಡುವವರು ನೀವಲ್ಲ, ಪವಿತ್ರಾತ್ಮ.
12 : ಸಹೋದರರ ಸಹೋದರರನ್ನೇ, ತಂದೆ ಮಗನನ್ನೇ ಮರಣಕ್ಕೆ ಗುರಿಮಾಡುವರು. ಮಕ್ಕಳು ಹೆತ್ತವರ ಮೇಲೆ ತಿರುಗಿ ಬಿದ್ದು, ಅವರನ್ನು ಕೊಲ್ಲಿಸುವರು.
13 : ನೀವು ನನ್ನವರು. ಆದುದರಿಂದಲೇ ನಿಮ್ಮನ್ನು ಎಲ್ಲರೂ ದ್ವೇಷಿಸುವರು. ಆದರೆ ಕೊನೆಯವರೆಗೂ ಸೈರಣೆಯಿಂದಿರುವವನು ಜೀವೋದ್ಧಾರವನ್ನು ಹೊಂದುವನು.
ಅಪೂರ್ವ ಸಂಕಷ್ಟಗಳು
(ಮತ್ತಾ. 24.15-28; ಲೂಕ 21.20-24)
14 : “ವಿನಾಶಕಾರಿಯಾದ ವಿಕಟ ಮೂರ್ತಿಯು ಇರಬಾರದ ಸ್ಥಾನದಲ್ಲಿ ಇರುವುದನ್ನು ನೀವು ನೋಡುವಾಗ (ಇದನ್ನು ಓದುವವನು ಅರ್ಥಮಾಡಿಕೊಳ್ಳಲಿ) ಜುದೇಯದಲ್ಲಿರುವ ಜನರು ಬೆಟ್ಟಗುಡ್ಡಗಳಿಗೆ ಓಡಿಹೋಗಲಿ;
15 : ಮಾಳಿಗೆಯ ಮೇಲಿರುವವನು ಕೆಳಕ್ಕೆ ಇಳಿಯಲಿ; ಮನೆಯೊಳಗಿಂದ ಏನನ್ನೂ ತೆಗೆದುಕೊಳ್ಳಲು ಯತ್ನಿಸದೆ ಓಡಿಹೋಗಲಿ;
16 : ಹೊಲಗದ್ದೆಯಲ್ಲಿರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳುವುದಕ್ಕೂ ಹಿಂದಿರುಗದಿರಲಿ.
17 : ಅಯ್ಯೋ, ಆ ದಿನಗಳಲ್ಲಿ ಗರ್ಭಿಣಿಯರ ಮತ್ತು ಹಾಲೂಡಿಸುವ ತಾಯಂದಿರ ಗೋಳೇನು!
18 : ಈ ಸಂಕಷ್ಟಗಳೆಲ್ಲಾ ಚಳಿಗಾಲದಲ್ಲಿ ಸಂಭವಿಸದಂತೆ ಪ್ರಾರ್ಥಿಸಿರಿ.
19 : ಆಗ ಬರಲಿರುವ ಸಂಕಷ್ಟಗಳು ದೈವಸೃಷ್ಟಿಯ ಆದಿಯಿಂದ ಇರಲಿಲ್ಲ, ಇನ್ನು ಮುಂದಕ್ಕೂ ಇರುವುದಿಲ್ಲ.
20 : ಸರ್ವೇಶ್ವರ ಆ ದಿನಗಳ ಅವಧಿಯನ್ನು ಕಡಿಮೆಮಾಡದಿದ್ದರೆ ಯಾವ ಮಾನವನೂ ಉಳಿಯುವಂತಿಲ್ಲ. ಆದರೆ ತಾವು ಆರಿಸಿಕೊಂಡವರ ಪ್ರಯುಕ್ತ ಆ ದಿನಗಳ ಅವಧಿಯನ್ನು ಅವರು ಕಡಿಮೆಮಾಡಿದ್ದಾರೆ.
21 : ಆಗ ಯಾರಾದರೂ ನಿಮಗೆ, ‘ಇಗೋ, ಕ್ರಿಸ್ತ ಇಲ್ಲಿ ಇದ್ದಾನೆ, ಅಗೋ ಅಲ್ಲಿದ್ದಾನೆ,’ ಎಂದು ಹೇಳಿದರೆ ನಂಬಬೇಡಿ.
22 : ಕಪಟ ಉದ್ಧಾರಕರೂ ವಂಚಕ ಪ್ರವಾದಿಗಳೂ ತಲೆಯೆತ್ತಿಕೊಳ್ಳುವರು. ಅವರು ಪವಾಡಗಳನ್ನು ಮಾಡಿತೋರಿಸಿ, ದೇವರು ಆರಿಸಿಕೊಂಡವರನ್ನೂ ಮೋಸಗೊಳಿಸುವರು.
23 : ನೀವು ಆದರೋ ಜಾಗರೂಕರಾಗಿರಿ. ನಾನು ನಿಮಗೆ ಎಲ್ಲವನ್ನೂ ಮುಂಚಿತವಾಗಿ ತಿಳಿಸಿದ್ದೇನೆ.
ನರಪುತ್ರನ ಪುನರಾಗಮನ
(ಮತ್ತಾ. 24.29-31; ಲೂಕ 21.25-28)
24 : “ಆ ದಿನಗಳಲ್ಲಿ ಈ ಸಂಕಷ್ಟಗಳು ಮುಗಿದ ಬಳಿಕ ಸೂರ್ಯನು ಅಂಧಕಾರಮಯನಾಗುವನು;
25 : ಚಂದ್ರನು ಕಾಂತಿಹೀನನಾಗುವನು; ಅಂತರಿಕ್ಷದಿಂದ ನಕ್ಷತ್ರಗಳು ಬೀಳುವುವು; ಗ್ರಹಶಕ್ತಿಗಳು ಕಂಪಿಸುವುವು.
26 : ಆಗ ನರಪುತ್ರನು ಮಹಾಶಕ್ತಿಯಿಂದಲೂ ಮಹಿಮೆಯಿಂದಲೂ ಮೇಘಾರೂಢನಾಗಿ ಬರುವುದನ್ನು ಜನರು ಕಾಣುವರು.
27 : ಆತನು ದೇವದೂತರನ್ನು ಜಗತ್ತಿನ ನಾಲ್ಕು ದಿಕ್ಕುಗಳಿಗೂ ಕಳುಹಿಸಿ, ತಾನು ಆರಿಸಿಕೊಂಡವರನ್ನು ವಿಶ್ವದ ಅಷ್ಟದಿಕ್ಕುಗಳಿಂದಲೂ ಒಟ್ಟುಗೂಡಿಸುವನು.
ಅಂಜೂರ ಮರದಿಂದ ಪಾಠ
(ಮತ್ತಾ. 24.32-35; ಲೂಕ 21.29-33)
28 : “ಅಂಜೂರದ ಮರದಿಂದ ಒಂದು ಪಾಠವನ್ನು ಕಲಿತುಕೊಳ್ಳಿ. ಅದರ ಎಳೆ ರೆಂಬೆಗಳಲ್ಲಿ ಎಲೆಗಳು ಚಿಗುರುವಾಗ ವಸಂತಕಾಲ ಸಮೀಪಿಸಿತು ಎಂದು ಅರಿತುಕೊಳ್ಳುತ್ತೀರಿ.
29 : ಅಂತೆಯೇ ಇವೆಲ್ಲವೂ ಸಂಭವಿಸುವುದನ್ನು ನೋಡುವಾಗ ನರಪುತ್ರನು ಸಮೀಪಿಸಿದ್ದಾನೆ, ಹೊಸ್ತಿಲಲ್ಲೇ ಇದ್ದಾನೆಂದು ತಿಳಿದುಕೊಳ್ಳಿ.
30 : ಇವೆಲ್ಲವು ಸಂಭವಿಸುವುದಕ್ಕೆ ಮುಂಚೆ ಈ ಪೀಳಿಗೆ ಗತಿಸಿ ಹೋಗದೆಂದು ಒತ್ತಿಹೇಳುತ್ತೇನೆ.
31 : ಭೂಮ್ಯಾಕಾಶಗಳು ಗತಿಸಿಹೋಗುವುವು, ಆದರೆ ನನ್ನ ಮಾತುಗಳು ಶಾಶ್ವತವಾಗಿ ಉಳಿಯುವುವು.
ಅನಿರೀಕ್ಷಿತ ಆಗಮನಕ್ಕೆ ಅಣಿಯಾಗಿರಿ
(ಮತ್ತಾ. 24.36-44)
32 : “ಆ ದಿನವಾಗಲಿ, ಆ ಗಳಿಗೆಯಾಗಲಿ, ಯಾವಾಗ ಬರುವುದೆಂದು ಪಿತನ ಹೊರತು ಮತ್ತಾರೂ ಅರಿಯರು. ಸ್ವರ್ಗದಲ್ಲಿರುವ ದೂತರೇ ಆಗಲಿ, ಪುತ್ರನೇ ಆಗಲಿ, ಅದನ್ನು ಅರಿಯರು.
33 : ಆ ಕಾಲ ಯಾವಾಗ ಬರುವುದು ಎಂದು ನಿಮಗೆ ತಿಳಿಯದ್ದರಿಂದ ಎಚ್ಚರಿಕೆಯಿಂದಿರಿ, ಜಾಗರೂಕರಾಗಿರಿ.
34 : ಪ್ರವಾಸಕ್ಕೆಂದು ಯಜಮಾನನೊಬ್ಬನು ಮನೆಬಿಟ್ಟು ಹೋಗುವಾಗ ತನ್ನ ಸೇವಕರಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ಜವಾಬ್ದಾರಿಕೆಯನ್ನು ವಹಿಸಿ, ದ್ವಾರಪಾಲಕನಿಗೆ ‘ನೀನು ಎಚ್ಚರವಾಗಿರಬೇಕು,’ ಎಂದು ಅಪ್ಪಣೆ ಕೊಡುವ ರೀತಿಯಲ್ಲಿ ನಾನು ನಿಮಗೆ ಹೇಳುತ್ತಿದ್ದೇನೆ. ಎಚ್ಚರವಾಗಿರಿ;
35 : ಯಜಮಾನನು ಸಂಜೆಯಲ್ಲೋ ಮಧ್ಯರಾತ್ರಿಯಲ್ಲೋ ಕೋಳಿ ಕೂಗುವಾಗಲೋ ಬೆಳಕು ಹರಿಯುವಾಗಲೋ, ಯಾವಾಗ ಬರುವನೆಂಬುದು ನಿಮಗೆ ತಿಳಿಯದು.
36 : ಅನಿರೀಕ್ಷಿತವಾಗಿ ಅವನು ಬಂದಾಗ ನೀವು ನಿದ್ರಿಸುತ್ತಿರುವುದನ್ನು ಕಂಡಾನು!
37 : ನಿಮಗೆ ಹೇಳುವುದನ್ನೇ ಸರ್ವರಿಗೂ ಹೇಳುತ್ತೇನೆ; ಎಚ್ಚರಿಕೆಯಿಂದಿರಿ!” ಎಂದರು.
ಯೇಸುವನ್ನು ಕೊಲ್ಲಲು ಒಳಸಂಚು
(ಮತ್ತಾ. 26.1-5; ಲೂಕ 22.1-2; ಯೊವಾ. 1.45-53)