Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಮಾರ್ಕ


1 : ಅಲ್ಲಿಂದ ಯೇಸುಸ್ವಾಮಿ ಜೋರ್ಡನ್ ನದಿಯ ಆಚೆಕಡೆಯಿದ್ದ ಜುದೇಯ ಪ್ರಾಂತ್ಯಕ್ಕೆ ಬಂದರು. ಅಲ್ಲಿಯೂ ಜನರು ಗುಂಪು ಗುಂಪಾಗಿ ಅವರ ಬಳಿಗೆ ಬಂದರು. ಯೇಸು ಅವರಿಗೂ ಉಪದೇಶ ಮಾಡಿದರು.
2 : ಫರಿಸಾಯರಲ್ಲಿ ಕೆಲವರು, ಅವರನ್ನು ಮಾತಿನಲ್ಲಿ ಸಿಕ್ಕಿಸುವ ಉದ್ದೇಶದಿಂದ, “ಗಂಡನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮಸಮ್ಮತವೇ?” ಎಂದು ಕೇಳಿದರು.
3 : ಯೇಸು, “ಈ ವಿಷಯವಾಗಿ ಮೋಶೆ ನಿಮಗೆ ಏನೆಂದು ವಿಧಿಸಿದ್ದಾನೆ?” ಎಂದು ಅವರನ್ನೇ ಪುನಃ ಪ್ರಶ್ನಿಸಿದರು.
4 : ಅದಕ್ಕೆ ಅವರು, “ವಿವಾಹ ವಿಚ್ಛೇದನ ಪತ್ರವನ್ನು ಕೊಟ್ಟು ಹೆಂಡತಿಯನ್ನು ಬಿಟ್ಟುಬಿಡಲು ಮೋಶೆ ಅನುಮತಿ ಇತ್ತಿದಾನೆ,” ಎಂದರು.
5 : ಆಗ ಯೇಸು, “ನಿಮ್ಮ ಹೃದಯ ಕಲ್ಲಾಗಿ ಇದ್ದುದರಿಂದಲೇ ಮೋಶೆ ಈ ನಿಯಮವನ್ನು ಬರೆದಿಟ್ಟನು.
6 : ಆದರೆ ಸೃಷ್ಟಿಯ ಆರಂಭದಿಂದಲೇ ‘ದೇವರು ಮನುಷ್ಯರನ್ನು ಗಂಡುಹೆಣ್ಣಾಗಿ ನಿರ್ಮಿಸಿದ್ದಾರೆ.
7 : ಈ ಕಾರಣದಿಂದ ಗಂಡನು ತಂದೆತಾಯಿಗಳನ್ನು ಬಿಟ್ಟು, ತನ್ನ ಹೆಂಡತಿಯನ್ನು ಕೂಡಿಕೊಂಡು ಅವರಿಬ್ಬರೂ ಒಂದಾಗಿ ಬಾಳುವರು’ ಎನ್ನುತ್ತದೆ ಪವಿತ್ರಗ್ರಂಥ.
8 : ಹೀಗಿರುವಲ್ಲಿ ಇನ್ನು ಮುಂದೆ ಅವರು ಇಬ್ಬರಲ್ಲ, ಒಂದೇ ಶರೀರ.
9 : ಆದುದರಿಂದ ದೇವರು ಒಂದುಗೂಡಿಸಿದ್ದನ್ನು ಮನುಷ್ಯನು ಬೇರ್ಪಡಿಸದಿರಲಿ,” ಎಂದರು.
10 : ಅಂದು, ಮನೆಗೆ ಹೋದ ಬಳಿಕ ಶಿಷ್ಯರು, ಅದೇ ವಿಷಯವಾಗಿ ಯೇಸುವನ್ನು ವಿಚಾರಿಸಿದರು.
11 : ಅದಕ್ಕೆ ಅವರು, “ಹೆಂಡತಿಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆಯಾಗುವವನು ಆಕೆಗೆ ದ್ರೋಹ ಬಗೆದು ವ್ಯಭಿಚಾರಿಯಾಗುತ್ತಾನೆ.
12 : ಅಂತೆಯೇ ಗಂಡನನ್ನು ಬಿಟ್ಟು ಮತ್ತೊಬ್ಬನನ್ನು ವಿವಾಹವಾಗುವವಳು ವ್ಯಭಿಚಾರಿಣಿಯಾಗುತ್ತಾಳೆ,” ಎಂದರು. ದೇವರ ಸಾಮ್ರಾಜ್ಯದ ಪುಟಾಣಿ ಪ್ರಜೆಗಳು (ಮತ್ತಾ. 19.13-15; ಲೂಕ 18.15-17)
13 : ಕೆಲವರು, ತಮ್ಮ ಚಿಕ್ಕಮಕ್ಕಳನ್ನು ಮುಟ್ಟಿ ಹರಸಲೆಂದು ಅವುಗಳನ್ನು ಯೇಸುಸ್ವಾಮಿಯ ಬಳಿಗೆ ಕರೆತಂದರು. ಶಿಷ್ಯರು ಆ ಜನರನ್ನು ಗದರಿಸಿದರು.
14 : ಇದನ್ನು ಕಂಡ ಯೇಸು ಸಿಟ್ಟುಗೊಂಡು ಶಿಷ್ಯರಿಗೆ, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿ. ಅವರನ್ನು ತಡೆಯಬೇಡಿ; ದೇವರ ಸಾಮ್ರಾಜ್ಯ ಇಂಥವರದೇ.
15 : ದೇವರ ಸಾಮ್ರಾಜ್ಯವನ್ನು ಶಿಶುಭಾವದಿಂದ ಅಂಗೀಕರಿಸದೆ ಇರುವವನು ಅದನ್ನು ಎಂದಿಗೂ ಸೇರಲಾರನು, ಇದು ನಿಶ್ಚಯ,” ಎಂದರು.
16 : ಅನಂತರ ಆ ಮಕ್ಕಳನ್ನು ಅಪ್ಪಿಕೊಂಡು ಅವುಗಳ ಮೇಲೆ ಕೈಗಳನ್ನಿರಿಸಿ ಹರಸಿದರು. ಸಿರಿವಂತರಿಗೆ ಸವಾಲು (ಮತ್ತಾ. 19.16-30; ಲೂಕ 18.18-30)
17 : ಅಲ್ಲಿಂದ ಯೇಸುಸ್ವಾಮಿ ಪ್ರಯಾಣವನ್ನು ಮುಂದುವರಿಸಿದರು. ದಾರಿಯಲ್ಲಿ ಒಬ್ಬನು ಅವರ ಬಳಿಗೆ ಓಡಿಬಂದು ಮೊಣಕಾಲೂರಿ, “ಒಳ್ಳೆಯ ಗುರುವೇ, ಅಮರಜೀವವು ನನಗೆ ಪ್ರಾಪ್ತಿಯಾಗಬೇಕಾದರೆ ನಾನೇನು ಮಾಡಬೇಕು?” ಎಂದು ಕೇಳಿದನು.
18 : “ನೀನು ನನ್ನನ್ನು ಒಳ್ಳೆಯವನೆಂದು ಕರೆಯುವುದೇಕೆ? ದೇವರೊಬ್ಬರನ್ನು ಬಿಟ್ಟರೆ ಬೇರೆ ಯಾರೂ ಒಳ್ಳೆಯವರಲ್ಲ. ದೈವಾಜ್ಞೆಗಳು ನಿನಗೆ ತಿಳಿದೇ ಇವೆ:
19 : ನರಹತ್ಯೆ ಮಾಡಬೇಡ, ವ್ಯಭಿಚಾರ ಮಾಡಬೇಡ, ಕದಿಯಬೇಡ, ಸುಳ್ಳುಸಾಕ್ಷಿ ಹೇಳಬೇಡ, ಮೋಸ ಮಾಡಬೇಡ, ನಿನ್ನ ತಂದೆತಾಯಿಗಳನ್ನು ಗೌರವಿಸು,” ಎಂದು ಯೇಸು ಉತ್ತರವಿತ್ತರು.
20 : ಅದಕ್ಕೆ ಅವನು, “ಗುರುದೇವಾ, ನಾನು ಬಾಲ್ಯದಿಂದಲೇ ಇವೆಲ್ಲವನ್ನೂ ಅನುಸರಿಸಿಕೊಂಡು ಬಂದಿದ್ದೇನೆ,” ಎಂದು ಹೇಳಿದನು.
21 : ಆಗ ಯೇಸು ಅವನನ್ನು ಮಮತೆಯಿಂದ ಈಕ್ಷಿಸಿ, “ನೀನು ಮಾಡಬೇಕಾದ ಕಾರ್ಯವೊಂದು ಬಾಕಿಯಿದೆ. ಹೋಗು, ನಿನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ, ಬಡಬಗ್ಗರಿಗೆ ದಾನಮಾಡು; ಸ್ವರ್ಗದಲ್ಲಿ ನಿನಗೆ ಸಂಪತ್ತು ಇರುತ್ತದೆ. ನೀನು ಬಂದು ನನ್ನನ್ನು ಹಿಂಬಾಲಿಸು,” ಎಂದರು.
22 : ಯೇಸುವಿನ ಈ ಮಾತನ್ನು ಕೇಳುತ್ತಲೇ ಅವನ ಮುಖ ಪೆಚ್ಚಾಯಿತು. ಅವನು ಖಿನ್ನಮನಸ್ಕನಾಗಿ ಅಲ್ಲಿಂದ ಹೊರಟು ಹೋದನು. ಏಕೆಂದರೆ ಅವನಿಗೆ ಅಪಾರ ಆಸ್ತಿಯಿತ್ತು
23 : ಆಗ ಯೇಸುಸ್ವಾಮಿ ಸುತ್ತಲೂ ನೋಡಿ, ತಮ್ಮ ಶಿಷ್ಯರನ್ನು ಉದ್ದೇಶಿಸಿ, “ಐಶ್ವರ್ಯವುಳ್ಳವರಿಗೆ ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವುದು ಎಷ್ಟೊಂದು ಕಷ್ಟ!” ಎಂದರು.
24 : ಅವರ ಈ ಮಾತನ್ನು ಕೇಳಿದ ಶಿಷ್ಯರು ಬೆರಗಾದರು. ಯೇಸು ಪುನಃ ಅವರಿಗೆ, “ಮಕ್ಕಳೇ, ದೇವರ ಸಾಮ್ರಾಜ್ಯವನ್ನು ಸೇರುವುದು ಎಷ್ಟು ಕಷ್ಟ!
25 : ಐಶ್ವರ್ಯವಂತನು ದೇವರ ಸಾಮ್ರಾಜ್ಯವನ್ನು ಸೇರುವುದಕ್ಕಿಂತಲೂ ಒಂಟೆಯ ಸೂಜಿಗಣ್ಣಲ್ಲಿ ನುಸುಳುವುದು ಸುಲಭ,” ಎಂದರು.
26 : ಇದನ್ನು ಕೇಳಿದ ಮೇಲಂತೂ ಶಿಷ್ಯರಿಗೆ ಅಪರಿಮಿತ ಆಶ್ಚರ್ಯವಾಯಿತು. “ಹಾಗಾದರೆ ಯಾರು ತಾನೇ ಜೀವೋದ್ಧಾರ ಹೊಂದಲು ಸಾಧ್ಯ?” ಎಂದು ತಮ್ಮ ತಮ್ಮೊಳಗೇ ಮಾತನಾಡಿಕೊಂಡರು.
27 : ಯೇಸು ಅವರನ್ನು ನಿಟ್ಟಿಸಿ ನೋಡಿ, “ಮನುಷ್ಯರಿಗೆ ಇದು ಅಸಾಧ್ಯ, ದೇವರಿಗಲ್ಲ. ದೇವರಿಗೆ ಎಲ್ಲವೂ ಸಾಧ್ಯ,” ಎಂದರು.
28 : ಆಗ ಪೇತ್ರನು ಮುಂದೆ ಬಂದು, “ನೋಡಿ, ನಾವು ಎಲ್ಲವನ್ನೂ ಬಿಟ್ಟುಬಿಟ್ಟು ನಿಮ್ಮನ್ನು ಹಿಂಬಾಲಿಸಿದ್ದೇವಲ್ಲ,” ಎಂದನು.
29 : ಆಗ ಯೇಸು, “ನಾನು ನಿಶ್ಚಯವಾಗಿ ಹೇಳುತ್ತೇನೆ: ಯಾರಾದರೂ ನನ್ನ ನಿಮಿತ್ತ ಹಾಗೂ ಶುಭಸಂದೇಶದ ನಿಮಿತ್ತ ಮನೆಯನ್ನಾಗಲಿ, ಅಣ್ಣತಮ್ಮಂದಿರನ್ನಾಗಲಿ, ಅಕ್ಕತಂಗಿಯರನ್ನಾಗಲಿ, ತಾಯಿಯನ್ನಾಗಲಿ, ತಂದೆಯನ್ನಾಗಲಿ, ಮಕ್ಕಳನ್ನಾಗಲಿ, ಹೊಲಗದ್ದೆಗಳನ್ನಾಗಲಿ ತ್ಯಜಿಸುತ್ತಾನೋ ಅವನು,
30 : ಈ ಕಾಲದಲ್ಲೇ ಮನೆ, ಅಣ್ಣತಮ್ಮ, ಅಕ್ಕತಂಗಿ, ತಾಯಿ, ಮಕ್ಕಳು, ಹೊಲಗದ್ದೆ ಇವೆಲ್ಲವನ್ನೂ ನೂರ್ಮಡಿಯಷ್ಟು ಪಡೆಯುವನು. ಇವುಗಳೊಂದಿಗೆ ಹಿಂಸೆಯನ್ನೂ ಅನುಭವಿಸಬೇಕಾಗುವುದು; ಅದಲ್ಲದೆ ಮುಂದಿನ ಲೋಕದಲ್ಲಿ ಅಮರ ಜೀವವನ್ನು ಪಡೆಯುವನು.
31 : “ಆದರೆ ಮೊದಲನೆಯವರಲ್ಲಿ ಅನೇಕರು ಕಡೆಯವರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು,” ಎಂದರು. ಯೇಸುವಿನ ಮರಣ-ಪುನರುತ್ಥಾನದ ಮೂರನೆಯ ಪ್ರಕಟಣೆ (ಮತ್ತಾ. 20.17-19; ಲೂಕ 18.31-34)
32 : ಜೆರುಸಲೇಮಿಗೆ ಪ್ರಯಾಣ ಮಾಡುತ್ತ ಇದ್ದಾಗ ಯೇಸುಸ್ವಾಮಿ ಎಲ್ಲರಿಗಿಂತ ಮುಂದೆ ನಡೆಯುತ್ತಿದ್ದರು. ಅದನ್ನು ನೋಡಿ ಶಿಷ್ಯರು ಆಶ್ಚರ್ಯಪಟ್ಟರು. ಅವರ ಹಿಂದೆ ಬರುತ್ತಿದ್ದವರು ದಿಗಿಲುಗೊಂಡರು. ಆಗ ಯೇಸು ಹನ್ನೆರಡು ಮಂದಿ ಶಿಷ್ಯರನ್ನು ತಮ್ಮ ಬಳಿಗೆ ಕರೆದು, ತಮಗೆ ಸಂಭವಿಸಲಿರುವ ವಿಷಯಗಳನ್ನು ಮತ್ತೊಮ್ಮೆ ಅವರಿಗೆ ಹೇಳತೊಡಗಿದರು:
33 : “ನೋಡಿ, ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ಅಲ್ಲಿ ನರಪುತ್ರನನ್ನು ಮುಖ್ಯ ಯಾಜಕರ ಮತ್ತು ಧರ್ಮಶಾಸ್ತ್ರಿಗಳ ವಶಕ್ಕೆ ಒಪ್ಪಿಸುವರು. ಆತನು ಮರಣದಂಡನೆಗೆ ಅರ್ಹನೆಂದು ಅವರು ತೀರ್ಮಾನಿಸಿ, ಪರಕೀಯರ ಕೈಗೊಪ್ಪಿಸುವರು.
34 : ಇವರು ಆತನನ್ನು ಪರಿಹಾಸ್ಯ ಮಾಡುವರು; ಆತನ ಮೇಲೆ ಉಗುಳುವರು; ಕೊರಡೆಯಿಂದ ಹೊಡೆಯುವರು; ಅನಂತರ ಕೊಂದುಹಾಕುವರು. ಆತನಾದರೋ ಮೂರು ದಿನದ ಮೇಲೆ ಪುನರುತ್ಥಾನ ಹೊಂದುವನು,” ಎಂದರು. ನಮ್ರಸೇವೆ ಪರಮಶ್ರೇಷ್ಠ (ಮತ್ತಾ. 20.20-28)
35 : ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನ ಯೇಸುವಿನ ಬಳಿಗೆ ಬಂದು, “ಗುರುವೇ, ನಮ್ಮದೊಂದು ಬಿನ್ನಹವಿದೆ, ಅದನ್ನು ನಡೆಸಿಕೊಡಬೇಕು,” ಎಂದು ವಿಜ್ಞಾಪಿಸಿಕೊಂಡರು
36 : “ನನ್ನಿಂದ ನಿಮಗೇನಾಗಬೇಕು?” ಎಂದು ಯೇಸು ಕೇಳಿದರು.
37 : “ತಮ್ಮ ಮಹಿಮಾಸ್ಥಾನದಲ್ಲಿ ನಮ್ಮಲ್ಲಿ ಒಬ್ಬನು ತಮ್ಮ ಬಲಗಡೆಯಲ್ಲೂ ಇನ್ನೊಬ್ಬನು ಎಡಗಡೆಯಲ್ಲೂ ಆಸೀನರಾಗುವಂತೆ ಅನುಗ್ರಹಿಸಬೇಕು,” ಎಂದು ತಮ್ಮ ಬಯಕೆಯನ್ನು ತೋಡಿಕೊಂಡರು.
38 : ಅದಕ್ಕೆ ಯೇಸು, “ನೀವು ಕೋರಿಕೊಂಡದ್ದು ಏನೆಂದು ನಿಮಗೇ ತಿಳಿಯದು. ನಾನು ಕುಡಿಯಲಿರುವ ಪಾತ್ರೆಯಿಂದ ಕುಡಿಯಲು ನಿಮ್ಮಿಂದಾದೀತೆ? ನಾನು ಪಡೆಯಲಿರುವ ಸ್ನಾನವನ್ನು ಪಡೆಯಲು ನಿಮ್ಮಿಂದ ಆದೀತೆ?” ಎಂದು ಪ್ರಶ್ನಿಸಿದರು. “ಹೌದು ಆಗುತ್ತದೆ,” ಎಂದು ಅವರು ಮರು ನುಡಿದರು.
39 : ಆಗ ಯೇಸು, “ನಾನು ಕುಡಿಯುವ ಪಾತ್ರೆಯಿಂದ ನೀವೂ ಕುಡಿಯುವಿರಿ; ನಾನು ಪಡೆಯಲಿರುವ ಸ್ನಾನವನ್ನು ನೀವು ಪಡೆಯುವಿರಿ.
40 : ಆದರೆ ನನ್ನ ಬಲಗಡೆಯಲ್ಲಾಗಲೀ ಎಡಗಡೆಯಲ್ಲಾಗಲೀ ಆಸೀನರಾಗುವಂತೆ ಅನುಗ್ರಹಿಸುವುದು ನನ್ನದಲ್ಲ. ಅದು ಯಾರಿಗಾಗಿ ಸಿದ್ಧಮಾಡಲಾಗಿದೆಯೋ ಅವರಿಗೇ ಸಿಗುವುದು,” ಎಂದು ನುಡಿದರು.
41 : ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ ಯಕೋಬ, ಯೊವಾನ್ನರ ಮೇಲೆ ಸಿಟ್ಟುಗೊಂಡರು.
42 : ಆಗ ಯೇಸು ಶಿಷ್ಯರೆಲ್ಲರನ್ನು ತನ್ನ ಬಳಿಗೆ ಕರೆದು, “ಪ್ರಜಾಧಿಪತಿಗಳು ಎನಿಸಿಕೊಳ್ಳುವವರು ಪ್ರಜೆಗಳ ಮೇಲೆ ದರ್ಪದಿಂದ ದೊರೆತನ ಮಾಡುತ್ತಾರೆ; ಜನನಾಯಕರು ಎನಿಸಿಕೊಳ್ಳುವವರು ಜನರ ಮೇಲೆ ಅಧಿಕಾರ ಪ್ರದರ್ಶನ ಮಾಡುತ್ತಾರೆ; ಇದು ನಿಮಗೆ ಗೊತ್ತು.
43 : ಆದರೆ ನೀವು ಹಾಗಿರಬಾರದು. ನಿಮ್ಮಲ್ಲಿ ಶ್ರೇಷ್ಟನಾಗಿರಲು ಇಚ್ಛಿಸುವವನು ನಿಮ್ಮ ಸೇವಕನಾಗಿರಲಿ;
44 : ಪ್ರಥಮನಾಗಿರಲು ಆಶಿಸುವವನು ಎಲ್ಲರ ದಾಸನಾಗಿರಲಿ.
45 : ನರಪುತ್ರನು ಸಹ ಸೇವೆ ಮಾಡಿಸಿಕೊಳ್ಳುವುದಕ್ಕೆ ಅಲ್ಲ, ಇತರರ ಸೇವೆ ಮಾಡುವುದಕ್ಕೂ ಸರ್ವರ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೂ ಬಂದಿದ್ದಾನೆ,” ಎಂದು ಬೋಧಿಸಿದರು. ಕರುಣಾಕರ ಯೇಸು (ಮತ್ತಾ. 20.29-34; ಲೂಕ 18.35-43)
46 : ಯೇಸುಸ್ವಾಮಿ ಮತ್ತು ಅವರ ಶಿಷ್ಯರು ಜೆರಿಕೊ ಪಟ್ಟಣವನ್ನು ತಲುಪಿದರು. ಅಲ್ಲಿಂದ ಹೊರಡುವಾಗ ಜನರ ದೊಡ್ಡಗುಂಪು ಅವರನ್ನು ಹಿಂಬಾಲಿಸಿತು.
47 : ಕುರುಡು ಭಿಕ್ಷುಗಾರನಾದ, ತಿಮಾಯನ ಮಗ ಬಾರ್‍ತಿಮಾಯನು ದಾರಿಯ ಮಗ್ಗುಲಲ್ಲಿ ಕುಳಿತಿದ್ದನು. ಆ ಮಾರ್ಗವಾಗಿ ಹೋಗುತ್ತಿರುವಾತನು ನಜರೇತಿನ ಯೇಸು ಎಂದು ಕೇಳಿದೊಡನೆಯೇ, ಅವನು, “ಯೇಸುವೇ, ದಾವೀದ ಕುಲಪುತ್ರರೇ, ನನಗೆ ದಯೆತೋರಿ,” ಎಂದು ಗಟ್ಟಿಯಾಗಿ ಕೂಗಿಕೊಂಡನು.
48 : ಅನೇಕರು ‘ಸುಮ್ಮನಿರು’ ಎಂದು ಅವನನ್ನು ಗದರಿಸಿದರು. ಅವನಾದರೋ, “ದಾವೀದ ಕುಲಪುತ್ರರೇ, ನನಗೆ ದಯೆತೋರಿ,” ಎಂದು ಇನ್ನಷ್ಟು ಗಟ್ಟಿಯಾಗಿ ಕೂಗಿಕೊಂಡನು.
49 : ಇದನ್ನು ಕೇಳಿ ಯೇಸು ಅಲ್ಲೇ ನಿಂತು, “ಅವನನ್ನು ಕರೆದುಕೊಂಡು ಬನ್ನಿ,” ಎಂದು ಅಪ್ಪಣೆಮಾಡಿದರು. ಅವರು ಹೋಗಿ, “ಏಳು, ಭಯಪಡಬೇಡ, ಯೇಸು ನಿನ್ನನ್ನು ಕರೆಯುತ್ತಿದಾರೆ,” ಎಂದು ಹೇಳಿದರು.
50 : ಅವನು ತನ್ನ ಮೇಲುಹೊದಿಕೆಯನ್ನು ಅಲ್ಲೇ ಬಿಟ್ಟು ತಟ್ಟನೆ ಎದ್ದು, ಯೇಸುವಿನ ಬಳಿಗೆ ಬಂದನು.
51 : ಯೇಸು, “ನನ್ನಿಂದ ನಿನಗೆ ಏನಾಗಬೇಕು?” ಎಂದು ಕೇಳಿದರು. ಅದಕ್ಕೆ ಅವನು, “ಗುರುದೇವಾ! ನನಗೆ ಕಣ್ಣು ಕಾಣುವಂತೆ ಮಾಡಿ,” ಎಂದು ಪ್ರಾರ್ಥಿಸಿದನು.
52 : ಯೇಸು ಅವನಿಗೆ, “ಹೋಗು, ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಮಾಡಿದೆ,” ಎಂದರು. ಆ ಕ್ಷಣವೇ ಅವನಿಗೆ ದೃಷ್ಟಿ ಬಂದಿತು. ಅವನೂ ಯೇಸುವನ್ನು ಹಿಂಬಾಲಿಸಿ ಹಿಂದೆ ಹೋದನು. ಜೆರುಸಲೇಮಿಗೆ ವಿಜಯ ಪ್ರವೇಶ (ಮತ್ತಾ. 21.1-11; ಲೂಕ 19.28-40; ಯೊವಾ. 12.12-19)

· © 2017 kannadacatholicbible.org Privacy Policy