1 : ಆ ಕಾಲದಲ್ಲಿ ಸ್ನಾನಿಕ ಯೊವಾನ್ನನು ಜುದೇಯ ಪ್ರಾಂತ್ಯದ ಬೆಂಗಾಡಿಗೆ ಹೋಗಿ ಬೋಧನೆ ಮಾಡಲು ಪ್ರಾರಂಭಿಸಿದನು.
2 : "ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿರಿ, ದೇವರಿಗೆ ಅಭಿಮುಖರಾಗಿರಿ, ಸ್ವರ್ಗಸಾಮ್ರಾಜ್ಯವು ಸಮೀಪಿಸಿತು," ಎಂದು ಸಾರಿಹೇಳುತ್ತಾ ಬಂದನು.
3 : "ಸರ್ವೇಶ್ವರನಿಗೆ ಮಾರ್ಗವನ್ನು
ನೇರಪಡಿಸಿರಿ,
ಆತನ ಆಗಮನಕ್ಕಾಗಿ ಹಾದಿಯನ್ನು
ಸರಾಗಮಾಡಿರಿ,
ಎಂದು ಬೆಂಗಾಡಿನಲ್ಲೊಬ್ಬನು
ಘೋಷಿಸುತ್ತಿದ್ದಾನೆ,"
ಎಂದು ಪ್ರವಾದಿ ಯೆಶಾಯನು ಸೂಚಿಸಿದ ವ್ಯಕ್ತಿ ಈತನೇ.
4 : ಒಂಟೆ ತುಪ್ಪಟದ ಹೊದಿಕೆ, ಸೊಂಟದಲ್ಲಿ ತೊಗಲಿನ ನಡುಕಟ್ಟು - ಇವೇ ಈತನ ಉಡುಗೆ. ಮಿಡತೆ ಮತ್ತು ಕಾಡುಜೇನು ಇವೇ ಈತನ ಆಹಾರ.
5 : ಜನರು ಜೆರುಸಲೇಮಿನಿಂದಲೂ ಇಡೀ ಜುದೇಯ ಪ್ರಾಂತ್ಯದಿಂದಲೂ ಜೋರ್ಡನ್ ನದಿಯ ಸುತ್ತಮುತ್ತಲಿನ ಪ್ರದೇಶಗಳಿಂದಲೂ ಈತನ ಬಳಿಗೆ ಬರುತ್ತಿದ್ದರು;
6 : ತಮ್ಮ ತಮ್ಮ ಪಾಪಗಳನ್ನು ಒಪ್ಪಿಕೊಳ್ಳುತ್ತಾ ಜೋರ್ಡನ್ ನದಿಯಲ್ಲಿ ಈತನಿಂದ ಸ್ನಾನದೀಕ್ಷೆಯನ್ನು ಪಡೆಯುತ್ತಿದ್ದರು.
7 : ಫರಿಸಾಯರಲ್ಲೂ ಸದ್ದುಕಾಯರಲ್ಲೂ ಅನೇಕರು ತನ್ನಿಂದ ಸ್ನಾನದೀಕ್ಷೆ ಪಡೆಯಲು ಬರುವುದನ್ನು ಯೊವಾನ್ನನು ನೋಡಿದನು. ಅವರನ್ನು ಉದ್ದೇಶಿಸಿ, "ಎಲೈ ವಿಷಸರ್ಪಗಳ ಪೀಳಿಗೆಯೇ, ಬರಲಿರುವ ದೈವಕೋಪದಿಂದ ತಪ್ಪಿಸಿಕೊಳ್ಳಬಹುದೆಂದು ನಿಮಗೆ ಎಚ್ಚರಿಕೆ ಕೊಟ್ಟವರಾರು?
8 : ನೀವು ಪಾಪಕ್ಕೆ ವಿಮುಖರಾಗಿದ್ದೀರಿ ಎಂಬುದನ್ನು ಸತ್ಕಾರ್ಯಗಳಿಂದ ವ್ಯಕ್ತಪಡಿಸಿರಿ.
9 : ‘ಅಬ್ರಹಾಮನೇ ನಮ್ಮ ಪಿತಾಮಹ’ ಎಂದು ನಿಮ್ಮಲ್ಲೇ ಕೊಚ್ಚಿಕೊಳ್ಳಬೇಡಿ. ಈ ಕಲ್ಲುಗಳಿಂದಲೂ ದೇವರು ಅಬ್ರಹಾಮನಿಗೆ ಸಂತಾನ ಪ್ರಾಪ್ತವಾಗುವಂತೆ ಮಾಡಬಲ್ಲರೆಂದು ನಾನು ನಿಮಗೆ ಹೇಳುತ್ತೇನೆ.
10 : ಈಗಾಗಲೇ ಮರದ ಬುಡಕ್ಕೆ ಕೊಡಲಿ ಬಿದ್ದಿದೆ; ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಗೆ ಹಾಕಲಾಗುವುದು.
11 : ಹೃದಯ ಪರಿವರ್ತನೆಯ ಗುರುತಾಗಿ ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆ ಕೊಡುತ್ತಿದ್ದೇನೆ. ಆದರೆ ನನ್ನ ನಂತರ ಬರುವ ಒಬ್ಬರು ನಿಮಗೆ ಪವಿತ್ರಾತ್ಮ ಹಾಗೂ ಅಗ್ನಿಯಿಂದ ದೀಕ್ಷಾಸ್ನಾನ ಕೊಡುವರು. ಅವರು ನನಗಿಂತಲೂ ಶಕ್ತರು. ಅವರ ಪಾದರಕ್ಷೆಗಳನ್ನು ಹೊರಲು ಸಹ ನಾನು ಅರ್ಹನಲ್ಲ.
12 : ಅವರ ಕೈಯಲ್ಲಿ ಮೊರವಿದೆ; ತಮ್ಮ ಕಣದಲ್ಲಿಯ ರಾಶಿಯನ್ನು ತೂರುವರು. ಗಟ್ಟಿ ಕಾಳನ್ನು ಮಾತ್ರ ಕಣಜಕ್ಕೆ ತುಂಬುವರು; ಹೊಟ್ಟನ್ನು ಆರಿಸಲಾಗದ ಬೆಂಕಿಯಲ್ಲಿ ಸುಟ್ಟು ಹಾಕುವರು," ಎಂದು ಎಚ್ಚರಿಸಿದನು.
13 : ಯೊವಾನ್ನನಿಂದ ಸ್ನಾನದೀಕ್ಷೆ ಪಡೆಯಲು ಯೇಸುಸ್ವಾಮಿ ಗಲಿಲೇಯದಿಂದ ಹೊರಟು ಜೋರ್ಡನ್ ನದಿಯ ಬಳಿಗೆ ಬಂದರು. ಯೊವಾನ್ನನು ಅವರನ್ನು ತಡೆಯಲೆತ್ನಿಸಿದನು.
14 : "ನಾನೇ ನಿಮ್ಮಿಂದ ದೀಕ್ಷಾಸ್ನಾನ ಪಡೆಯಬೇಕಾಗಿರುವಲ್ಲಿ ನೀವು ನನ್ನ ಬಳಿಗೆ ಬರುವುದೇ?" ಎಂದನು.
15 : ಆದರೆ ಯೇಸು, "ಸದ್ಯಕ್ಕೆ ತಡೆಯದಿರು; ನಾವು ದೈವನಿಯಮಕ್ಕೆ ತಲೆಬಾಗುವುದು ಒಳಿತು," ಎಂದರು. ಯೊವಾನ್ನನು ಅದಕ್ಕೆ ಸಮ್ಮತಿಸಿದನು.
16 : ಯೇಸು ದೀಕ್ಷಾಸ್ನಾನ ಪಡೆದು ನೀರಿನಿಂದ ಮೇಲಕ್ಕೆ ಬಂದದ್ದೇ ಆಕಾಶವು ಫಕ್ಕನೆ ತೆರೆಯಿತು; ದೇವರಾತ್ಮ ಪಾರಿವಾಳದ ರೂಪದಲ್ಲಿ ತಮ್ಮ ಮೇಲೆ ಇಳಿದು ಬಂದು ನೆಲಸುವುದನ್ನು ಕಂಡರು.
17 : ಆಗ ಆಕಾಶದಿಂದ, "ಇವನೇ ನನ್ನ ಪುತ್ರ; ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು," ಎಂಬ ದೈವವಾಣಿ ಕೇಳಿಸಿತು.