1 : ಬೆಳಗಾಯಿತು. ಎಲ್ಲ ಮುಖ್ಯ ಯಾಜಕರೂ ಜನರ ಪ್ರಮುಖರೂ ಸೇರಿ ಯೇಸುವನ್ನು ಕೊಲ್ಲಿಸುವುದಕ್ಕೆ ಸಮಾಲೋಚನೆ ಮಾಡಿದರು.
2 : ಅಂತೆಯೇ ಯೇಸುವಿಗೆ ಬೇಡಿ ಹಾಕಿಸಿ, ಅವರನ್ನು ರಾಜ್ಯಪಾಲ ಪಿಲಾತನ ಬಳಿಗೆ ಕರೆದೊಯ್ದು ಅವನ ವಶಕ್ಕೆ ಒಪ್ಪಿಸಿದರು.
ಯೂದನ ದುರ್ಮರಣ
(ಪ್ರೇ.ಕಾ. 1.18-19)
3 : ಯೇಸುಸ್ವಾಮಿ ದಂಡನೆಗೆ ಗುರಿಯಾದರೆಂಬುದನ್ನು ಕಂಡು, ಗುರುದ್ರೋಹಿ ಯೂದನು ಪರಿತಾಪಗೊಂಡನು. ಆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಮುಖ್ಯಯಾಜಕರ ಮತ್ತು ಪ್ರಮುಖರ ಬಳಿಗೆ ಮರಳಿ ತಂದನು.
4 : “ನಾನು ನಿರ್ದೋಷಿಯನ್ನು ಹಿಡಿದುಕೊಟ್ಟು ಪಾಪಕಟ್ಟಿಕೊಂಡೆ,” ಎಂದು ಹೇಳಿದನು. ಅದಕ್ಕೆ ಅವರು, ‘ಅದರಿಂದ ನಮಗೇನು? ಅದನ್ನು ನೀನೇ ನೋಡಿಕೋ,’ ಎಂದುಬಿಟ್ಟರು.
5 : ಆಗ ಅವನು ಆ ಹಣವನ್ನು ದೇವಾಲಯದಲ್ಲೇ ಎಸೆದು, ಹೊರಟುಹೋಗಿ ನೇಣು ಹಾಕಿಕೊಂಡು ಸತ್ತನು.
6 : ಮುಖ್ಯ ಯಾಜಕರು ಆ ಹಣವನ್ನು ತೆಗೆದುಕೊಂಡು, “ಇದು ರಕ್ತದ ಕ್ರಯ. ಇದನ್ನು ಕಾಣಿಕೆ ಕೋಶದಲ್ಲಿ ಹಾಕುವುದು ಸರಿಯಲ್ಲ,” ಎಂದುಕೊಂಡರು.
7 : ಕಡೆಗೆ ಒಂದು ನಿರ್ಧಾರಕ್ಕೆ ಬಂದರು. ಪರದೇಶಿಗಳನ್ನು ಹೂಳುವುದಕ್ಕೋಸ್ಕರ ‘ಕುಂಬಾರನ ಹೊಲ’ವನ್ನು ಆ ಹಣಕೊಟ್ಟು ಕೊಂಡುಕೊಂಡರು.
8 : ಈ ಕಾರಣದಿಂದಲೇ ಅದನ್ನು ‘ನೆತ್ತರ ನೆಲ’ ಎಂದು ಇಂದಿಗೂ ಕರೆಯಲಾಗುತ್ತಿದೆ. ಹೀಗೆ,
9 : “ಮೂವತ್ತು ಬೆಳ್ಳಿ ನಾಣ್ಯಗಳನ್ನೆತ್ತಿ
ಸರ್ವೇಶ್ವರಸ್ವಾಮಿ ನನಗಿತ್ತ ಆದೇಶದಂತೆ
‘ಕುಂಬಾರನ ಹೊಲ’ ಕೊಳ್ಳಲು ಅದನ್ನು
ತೆತ್ತರು.
10 :
ಅಮೂಲ್ಯ ವ್ಯಕ್ತಿಗೆ ಕಟ್ಟಿದ ಬೆಲೆಯದು,
ಇಸ್ರಯೇಲ ಜನರು ಒಪ್ಪಿದ ಮೊತ್ತವದು,”
ಎಂದು ವಚನಿಸಿದ ಪ್ರವಾದಿ ಯೆರೆವಿೂಯನ ಮಾತುಗಳು ಈಡೇರಿದವು.
11 : ಯೇಸುಸ್ವಾಮಿಯನ್ನು ರಾಜ್ಯಪಾಲನ ಮುಂದೆ ನಿಲ್ಲಿಸಿದರು. “ನೀನು ಯೆಹೂದ್ಯರ ಅರಸನೋ?” ಎಂದು ರಾಜ್ಯಪಾಲ ಪ್ರಶ್ನಿಸಿದನು. ಅದಕ್ಕೆ ಯೇಸು, “ಅದು ನಿಮ್ಮ ಬಾಯಿಂದಲೇ ಬಂದಿದೆ,” ಎಂದು ಮರುನುಡಿದರು.
12 : ಆದರೆ ಮುಖ್ಯಯಾಜಕರೂ ಊರಪ್ರಮುಖರೂ ಮಾಡಿದ ಆಪಾದನೆಗಳಿಗೆ ಅವರು ಏನೂ ಉತ್ತರ ಕೊಡಲಿಲ್ಲ.
13 : ಆಗ ಪಿಲಾತನು, “ಇವರು ನಿನಗೆ ವಿರುದ್ಧ ಇಷ್ಟೆಲ್ಲಾ ಹೇಳುತ್ತಿರುವುದು ನಿನಗೆ ಕೇಳಿಸುತ್ತಿಲ್ಲವೆ?” ಎಂದನು.
14 : ಯೇಸು ಯಾವುದಕ್ಕೂ ಉತ್ತರ ಕೊಡಲಿಲ್ಲ. ಇದರಿಂದ ರಾಜ್ಯಪಾಲನಿಗೆ ಅತ್ಯಾಶ್ಚರ್ಯವಾಯಿತು.
15 : ಪ್ರತಿ ಪಾಸ್ಕ ಹಬ್ಬದ ಸಂದರ್ಭದಲ್ಲಿ ಜನರು ಬಯಸುವ ಒಬ್ಬ ಕೈದಿಯನ್ನು ಬಿಡುಗಡೆ ಮಾಡುವುದು ರಾಜ್ಯಪಾಲನ ಪದ್ಧತಿಯಾಗಿತ್ತು.
16 : ಆಗ ಬರಬ್ಬನೆಂಬ ಕುಪ್ರಸಿದ್ಧ ಕೈದಿಯೊಬ್ಬನು ಸೆರೆಯಲ್ಲಿದ್ದನು.
17 : ಹೀಗಿರಲಾಗಿ, ಪಿಲಾತನು ಅಲ್ಲಿ ಕೂಡಿದ್ದ ಜನರನ್ನು ಉದ್ದೇಶಿಸಿ, “ನಾನು ಯಾರನ್ನು ಬಿಡುಗಡೆ ಮಾಡಬೇಕೆನ್ನುತ್ತೀರಿ? ಬರಬ್ಬನನ್ನೋ ಅಥವಾ ‘ಕ್ರಿಸ್ತ’ ಎಂದು ಕರೆಯಲಾಗುವ ಯೇಸುವನ್ನೋ?” ಎಂದು ಕೇಳಿದನು.
18 : ಆ ಜನರು ಅಸೂಯೆಯಿಂದಲೇ ಯೇಸುವನ್ನು ಹಿಡಿದೊಪ್ಪಿಸಿದ್ದಾರೆಂದು ಅವನಿಗೆ ಅರಿವಾಗಿತ್ತು.
19 : ಅದೂ ಅಲ್ಲದೆ, ಪಿಲಾತನು ನ್ಯಾಯಪೀಠದಲ್ಲಿ ಕುಳಿತಿರುವಾಗ, “ನೀವು ಆ ಸತ್ಪುರುಷನ ತಂಟೆಗೆ ಹೋಗಬೇಡಿ; ಆತನ ದೆಸೆಯಿಂದ ಕಳೆದ ರಾತ್ರಿ ಕನಸಿನಲ್ಲಿ ಬಹಳ ಸಂಕಟಪಟ್ಟಿದ್ದೇನೆ,” ಎಂದು ಅವನ ಪತ್ನಿ ಹೇಳಿಕಳುಹಿಸಿದಳು.
20 : ಇತ್ತ, ಬರಬ್ಬನನ್ನು ಬಿಡುಗಡೆಮಾಡಿ ಯೇಸುವನ್ನು ಕೊಲ್ಲಬೇಕೆಂದು ಕೇಳಿಕೊಳ್ಳುವಂತೆ ಮುಖ್ಯ ಯಾಜಕರು ಮತ್ತು ಪ್ರಮುಖರು ಜನರನ್ನು ಪ್ರಚೋದಿಸಿದರು.
21 : ರಾಜ್ಯಪಾಲನು ಪುನಃ ಜನರ ಗುಂಪನ್ನು ನೋಡಿ, “ಈ ಇಬ್ಬರಲ್ಲಿ ಯಾರನ್ನು ನಿಮಗೆ ಬಿಟ್ಟುಕೊಡಲಿ?” ಎಂದು ಕೇಳಿದನು. ಅದಕ್ಕೆ ಅವರು “ಬರಬ್ಬನನ್ನೇ” ಎಂದು ಉತ್ತರಕೊಟ್ಟರು.
22 : “ಹಾಗಾದರೆ, ‘ಕ್ರಿಸ್ತ’ ಎಂದು ಕರೆಯಲಾಗುವ ಯೇಸುವನ್ನು ಏನುಮಾಡಲಿ?” ಎಂದು ಪಿಲಾತನು ಮರುಪ್ರಶ್ನೆ ಹಾಕಿದನು. ಅವರೆಲ್ಲರು, “ಅವನನ್ನು ಶಿಲುಬೆಗೇರಿಸಿ,” ಎಂದು ಉತ್ತರಿಸಿದರು.
23 : “ಏಕೆ? ಇವನೇನು ಕೇಡು ಮಾಡಿದ್ದಾನೆ?” ಎಂದು ಪಿಲಾತನು ಕೇಳಲು, “ಶಿಲುಬೆಗೇರಿಸಿ, ಶಿಲುಬೆಗೇರಿಸಿ,” ಎಂದು ಅವರು ಇನ್ನೂ ಹೆಚ್ಚಾಗಿ ಆರ್ಭಟಿಸಿದರು.
ಕೈ ತೊಳೆದುಕೊಂಡರೆ ಕರ್ತವ್ಯ ನೀಗೀತೆ?
24 : ಪಿಲಾತನು ತನ್ನ ಪ್ರಯತ್ನದಿಂದ ಏನೂ ಫಲಿಸುತ್ತಿಲ್ಲವೆಂದೂ ಅದಕ್ಕೆ ಬದಲಾಗಿ ದಂಗೆ ಏಳುವ ಸೂಚನೆಯಿದೆಯೆಂದೂ ಮನಗಂಡನು. ಆದುದರಿಂದ ನೀರನ್ನು ತರಿಸಿ, “ಈ ನಿರಪರಾಧಿಯ ರಕ್ತಪಾತಕ್ಕೆ ಹೊಣೆ ನಾನಲ್ಲ; ಅದಕ್ಕೆ ನೀವೇ ಹೊಣೆಗಾರರು,” ಎಂದು ಹೇಳಿ ಜನರೆದುರಿಗೆ ಕೈ ತೊಳೆದುಕೊಂಡನು.
25 : ಅದಕ್ಕೆ ಜನರೆಲ್ಲರೂ, “ಅವನ ರಕ್ತ ನಮ್ಮ ಮೇಲೂ ನಮ್ಮ ಮಕ್ಕಳ ಮೇಲೂ ಇರಲಿ,” ಎಂದು ಕೂಗಿಕೊಂಡರು.
26 : ಬಳಿಕ ಪಿಲಾತನು ಅವರ ಇಷ್ಟದಂತೆಯೇ ಬರಬ್ಬನನ್ನು ಬಿಟ್ಟುಕೊಟ್ಟನು. ಯೇಸುವನ್ನು ಕೊರಡೆಗಳಿಂದ ಹೊಡೆಸಿ ಶಿಲುಬೆಗೇರಿಸಲು ಒಪ್ಪಿಸಿಬಿಟ್ಟನು.
27 : ರಾಜ್ಯಪಾಲನ ಸೈನಿಕರು ಯೇಸುಸ್ವಾಮಿಯನ್ನು ರಾಜಭವನದ ಒಳಕ್ಕೆ ಕರೆದೊಯ್ದರು. ಅವರ ಸೈನ್ಯಪಡೆಯೆಲ್ಲವು ಸ್ವಾಮಿಯನ್ನು ಸುತ್ತುಗಟ್ಟಿತು.
28 : ಸೈನಿಕರು ಅವರ ಉಡುಪನ್ನು ಸುಲಿದು, ಕಡುಗೆಂಪು ಮೇಲಂಗಿಯೊಂದನ್ನು ಅವರಿಗೆ ಹೊದಿಸಿದರು.
29 : ಮುಳ್ಳಿನಿಂದ ಒಂದು ಕಿರೀಟವನ್ನು ಹೆಣೆದು, ಅವರ ತಲೆಯ ಮೇಲೆ ಇರಿಸಿದರು. ಕೈಗೆ ಒಂದು ಕೋಲನ್ನು ಕೊಟ್ಟರು. ಆ ಮೇಲೆ ಅವರ ಮುಂದೆ ಮೊಣಕಾಲೂರಿ, “ಯೆಹೂದ್ಯರ ಅರಸನಿಗೆ ಜಯವಾಗಲಿ!” ಎಂದು ಹೇಳಿ ಪರಿಹಾಸ್ಯ ಮಾಡಿದರು.
30 : ಅವರ ಮೇಲೆ ಉಗುಳಿದರು. ಆ ಕೋಲನ್ನು ಕಿತ್ತುಕೊಂಡು ತಲೆಯ ಮೇಲೆ ಹೊಡೆದರು.
31 : ಹೀಗೆ ಪರಿಹಾಸ್ಯ ಮಾಡಿ ಆದಮೇಲೆ, ಹೊದಿಸಿದ್ದ ಮೇಲಂಗಿಯನ್ನು ತೆಗೆದುಹಾಕಿ, ಅವರ ಉಡುಪನ್ನೇ ಪುನಃ ತೊಡಿಸಿದರು. ಬಳಿಕ ಅವರನ್ನು ಶಿಲುಬೆಗೇರಿಸಲು ಕರೆದೊಯ್ದರು.
32 : ಸೈನಿಕರು ಯೇಸುಸ್ವಾಮಿಯನ್ನು ಕರೆದುಕೊಂಡು ಊರಹೊರಗೆ ಹೋಗುತ್ತಿದ್ದಾಗ ಸಿರೇನ್ ಪಟ್ಟಣದ ಸಿಮೋನ್ ಎಂಬಾತನನ್ನು ಕಂಡರು. ಯೇಸುವಿನ ಶಿಲುಬೆಯನ್ನು ಹೊತ್ತು ಬರುವಂತೆ ಅವನನ್ನು ಬಲವಂತಮಾಡಿದರು.
33 : ಅವರೆಲ್ಲರು ಗೊಲ್ಗೊಥ ಎಂಬ ಸ್ಥಳಕ್ಕೆ ಬಂದು ಸೇರಿದರು. (ಗೊಲ್ಗೊಥ ಎಂದರೆ ‘ಕಪಾಲ ಸ್ಥಳ’ ಎಂದು ಅರ್ಥ).
34 : ಅಲ್ಲಿ ಕಹಿಬೆರೆಸಿದ ದ್ರಾಕ್ಷಾರಸವನ್ನು ಯೇಸುವಿಗೆ ಕುಡಿಯಲು ಕೊಟ್ಟರು. ಅವರು ಅದನ್ನು ರುಚಿನೋಡಿ ಕುಡಿಯಲು ಇಚ್ಛಿಸಲಿಲ್ಲ.
35 : ಯೇಸುವನ್ನು ಶಿಲುಬೆಗೇರಿಸಿದ ಬಳಿಕ ಅವರ ಉಡುಪಿಗಾಗಿ ಸೈನಿಕರು ಚೀಟುಹಾಕಿ ತಮ್ಮತಮ್ಮೊಳಗೇ ಹಂಚಿಕೊಂಡರು.
36 : ಅನಂತರ ಅಲ್ಲೇ ಕುಳಿತು ಕಾವಲುಕಾಯುತ್ತಾ ಇದ್ದರು.
37 : “ಈತ ಯೇಸು, ಯೆಹೂದ್ಯರ ಅರಸ” ಎಂದು ಬರೆದಿದ್ದ ದೋಷಾರೋಪಣೆಯ ಫಲಕವನ್ನು ಅವರ ಶಿರಸ್ಸಿನ ಮೇಲ್ಭಾಗದಲ್ಲಿ ಇಟ್ಟರು.
38 : ಯೇಸುವಿನ ಬಲಗಡೆ ಒಬ್ಬನು, ಎಡಗಡೆ ಒಬ್ಬನು, ಹೀಗೆ ಇಬ್ಬರು ಕಳ್ಳರನ್ನು ಅವರ ಸಂಗಡ ಶಿಲುಬೆಗೇರಿಸಿದರು.
39 : ಪಕ್ಕದಲ್ಲಿ ಹಾದು ಹೋಗುತ್ತಿದ್ದ ಜನರು ತಲೆಯಾಡಿಸುತ್ತಾ
40 : “ಮಹಾದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಅದನ್ನು ಮತ್ತೆ ಕಟ್ಟಬಲ್ಲವನೇ, ಈಗ ನಿನ್ನನ್ನು ನೀನೇ ರಕ್ಷಿಸಿಕೋ; ನೀನು ದೇವರ ಪುತ್ರನಾದರೆ ಶಿಲುಬೆಯಿಂದ ಇಳಿದು ಬಾ,” ಎಂದು ಮೂದಲಿಸಿದರು.
41 : ಅಂತೆಯೇ ಮುಖ್ಯ ಯಾಜಕರು, ಧರ್ಮಶಾಸ್ತ್ರಿಗಳು ಮತ್ತು ಪ್ರಮುಖರು,
42 : “ಇವನು ಇತರರನ್ನು ರಕ್ಷಿಸಿದ; ಆದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲು ಇವನಿಂದಾಗದು; ಇಸ್ರಯೇಲಿನ ಅರಸನಂತೆ! ಈಗ ಶಿಲುಬೆಯಿಂದ ಇಳಿದು ಬರಲಿ; ಆಗ ಇವನನ್ನು ನಂಬುತ್ತೇವೆ.
43 : ದೇವರಲ್ಲಿ ಭರವಸೆಯಿಟ್ಟಿದ್ದ; ತಾನು ‘ದೇವರ ಪುತ್ರ’ ಎಂದು ಹೇಳಿಕೊಳ್ಳುತ್ತಿದ್ದ; ದೇವರಿಗೆ ಇಷ್ಟವಾದವನು ಇವನಾಗಿದ್ದರೆ ದೇವರೇ ಬಂದು ಇವನನ್ನು ಬಿಡುಗಡೆಮಾಡಲಿ,” ಎಂದು ಅಪಹಾಸ್ಯ ಮಾಡುತ್ತಿದ್ದರು.
44 : ಯೇಸುವಿನೊಡನೆ ಶಿಲುಬೆಗೇರಿಸಲಾಗಿದ್ದ ಕಳ್ಳರು ಕೂಡ ಅದೇ ರೀತಿ ಅಣಕಿಸಿದರು.
45 : ಆಗ ನಡುಮಧ್ಯಾಹ್ನ. ಆಗಿನಿಂದ ಮೂರು ಗಂಟೆಯವರೆಗೂ ನಾಡಿನಲ್ಲೆಲ್ಲಾ ಕತ್ತಲೆ ಕವಿಯಿತು.
46 : ಸುಮಾರು ಮೂರು ಗಂಟೆಯ ಸಮಯದಲ್ಲಿ ಯೇಸುಸ್ವಾಮಿ, “ಏಲೀ, ಏಲೀ, ಲಮಾ ಸಬಕ್ತಾನಿ?” ಅಂದರೆ, “ನನ್ನ ದೇವರೇ, ನನ್ನ ದೇವರೇ, ನನ್ನನ್ನೇಕೆ ಕೈಬಿಟ್ಟಿರಿ?” ಎಂದು ಗಟ್ಟಿಯಾಗಿ ಕೂಗಿಕೊಂಡರು.
47 : ಅಲ್ಲಿ ನಿಂತಿದ್ದವರಲ್ಲಿ ಕೆಲವರು ಇದನ್ನು ಕೇಳಿ, “ಇವನು ಎಲೀಯನನ್ನು ಕರೆಯುತ್ತಿದ್ದಾನೆ,” ಎಂದರು.
48 : ಕೂಡಲೇ ಅವರಲ್ಲೊಬ್ಬನು ಓಡಿಹೋಗಿ ಸ್ಪಂಜನ್ನು ತೆಗೆದುಕೊಂಡುಬಂದು, ಅದನ್ನು ಹುಳಿರಸದಲ್ಲಿ ತೋಯಿಸಿ, ಒಂದು ಕೋಲಿನ ತುದಿಗೆ ಸಿಕ್ಕಿಸಿ, ಯೇಸುವಿಗೆ ಕುಡಿಯಲು ಕೊಟ್ಟನು.
49 : ಮಿಕ್ಕವರು, “ತಾಳು, ಇವನನ್ನು ರಕ್ಷಿಸಲು ಎಲೀಯನು ಬರುವನೋ ನೋಡೋಣ,” ಎಂದರು.
50 : ಯೇಸುಸ್ವಾಮಿ ಮತ್ತೊಮ್ಮೆ ಗಟ್ಟಿಯಾಗಿ ಕೂಗಿ ಅಸುನೀಗಿದರು.
51 : ಆಗ ಇಗೋ, ಮಹಾದೇವಾಲಯದ ತೆರೆಯು ಮೇಲಿಂದ ಕೆಳಗಿನವರೆಗೆ ಇಬ್ಭಾಗವಾಗಿ ಸೀಳಿಹೋಯಿತು; ಭೂಮಿ ನಡುಗಿತು,
52 : ಬಂಡೆಗಳು ಸಿಡಿದವು; ಸಮಾಧಿಗಳು ತೆರೆದುಕೊಂಡವು. ನಿಧನಹೊಂದಿದ್ದ ಅನೇಕ ಭಕ್ತರ ದೇಹಗಳು ಜೀವಂತವಾಗಿ ಎದ್ದವು.
53 : ಹೀಗೆ ಎದ್ದವರು ಸಮಾಧಿಗಳಿಂದ ಹೊರಗೆ ಬಂದು, ಯೇಸು ಪುನರುತ್ಥಾನ ಹೊಂದಿದ ಬಳಿಕ ಪವಿತ್ರ ನಗರಕ್ಕೆ ಹೋಗಿ ಅನೇಕರಿಗೆ ಕಾಣಿಸಿಕೊಂಡರು.
54 : ಶತಾಧಿಪತಿ ಮತ್ತು ಅವನ ಸಂಗಡ ಯೇಸುವನ್ನು ಕಾಯುತ್ತಿದ್ದವರು ಭೂಕಂಪವನ್ನೂ ನಡೆದುದೆಲ್ಲವನ್ನೂ ಕಂಡು ಭಯಭ್ರಾಂತರಾದರು. “ಸತ್ಯವಾಗಿಯೂ ಈತ ದೇವರ ಪುತ್ರನೇ ಸರಿ,” ಎಂದರು.
55 : ಯೇಸುವನ್ನು ಗಲಿಲೇಯದಿಂದ ಹಿಂಬಾಲಿಸಿ ಬಂದಿದ್ದ ಹಾಗೂ ಅವರ ಸೇವೆ ಮಾಡಿದ ಮಹಿಳೆಯರೂ ಅಲ್ಲಿದ್ದರು. ಅವರು ಇದೆಲ್ಲವನ್ನು ದೂರದಿಂದ ನೋಡುತ್ತಾ ಇದ್ದರು.
56 : ಅವರಲ್ಲಿ ಮಗ್ದಲದ ಮರಿಯಳು, ಯಕೋಬ ಹಾಗೂ ಜೋಸೆಫನ ತಾಯಿ ಮರಿಯಳು ಮತ್ತು ಜೆಬೆದಾಯನ ಮಕ್ಕಳ ತಾಯಿ ಇದ್ದರು.
57 : ಸಂಜೆಯಾಯಿತು. ಅರಿಮತಾಯ ಊರಿನ ಜೋಸೆಫ್ ಎಂಬ ಒಬ್ಬ ಧನವಂತನು ಅಲ್ಲಿಗೆ ಬಂದನು. ಈತನು ಸಹ ಯೇಸುವಿನ ಶಿಷ್ಯನಾಗಿದ್ದನು.
58 : ಈಗ ಪಿಲಾತನ ಬಳಿಗೆ ಹೋಗಿ ಯೇಸುವಿನ ಪಾರ್ಥಿವ ಶರೀರವನ್ನು ತನಗೆ ಕೊಡಿಸಬೇಕೆಂದು ಬೇಡಿದನು. ಪಿಲಾತನು ಅದನ್ನು ಕೊಡುವಂತೆ ಅಪ್ಪಣೆಮಾಡಿದನು.
59 : ಜೋಸೆಫ್ ಅದನ್ನು ತೆಗೆದುಕೊಂಡು ಶುದ್ಧವಾದ ನಾರುಮಡಿ ವಸ್ತ್ರದಿಂದ ಸುತ್ತಿದನು.
60 : ತನಗೆಂದು ಬಂಡೆಯಲ್ಲಿ ಕೊರೆಯಲಾಗಿದ್ದ ಹೊಸ ಸಮಾಧಿಯಲ್ಲಿ ಅದನ್ನು ಇರಿಸಿದನು. ಆ ಸಮಾಧಿಯ ದ್ವಾರಕ್ಕೆ ಒಂದು ದೊಡ್ಡ ಕಲ್ಲನ್ನು ಉರುಳಿಸಿ ಹೊರಟುಹೋದನು.
61 : ಮಗ್ದಲದ ಮರಿಯಳು ಮತ್ತು ಆ ಇನ್ನೊಬ್ಬ ಮರಿಯಳು ಅಲ್ಲೇ ಸಮಾಧಿಗೆ ಎದುರಾಗಿ ಕುಳಿತುಕೊಂಡಿದ್ದರು.
ಸಾವಿಗೆ ಸಮಾಧಿಯ ಸಾಕ್ಷಿ
62 : ಮಾರನೆಯ ದಿನ, ಅಂದರೆ, ‘ಸಿದ್ಧತೆಯ ದಿನ’ ಕಳೆದ ಮೇಲೆ, ಮುಖ್ಯ ಯಾಜಕರು ಮತ್ತು ಫರಿಸಾಯರು ಕೂಡಿ ಪಿಲಾತನ ಬಳಿಗೆ ಬಂದರು.
63 : “ಸ್ವಾವಿೂ, ಆ ಮೋಸಗಾರ ಬದುಕಿದ್ದಾಗ, ‘ಮೂರು ದಿನಗಳಾದ ಮೇಲೆ ನಾನು ಪುನರ್ಜೀವಂತನಾಗಿ ಏಳುವೆನು,’ ಎಂದು ಹೇಳಿದ್ದು ನಮಗೆ ಜ್ಞಾಪಕದಲ್ಲಿದೆ.
64 : ಆದ್ದರಿಂದ ಮೂರನೆಯ ದಿನದ ತನಕ ಅವನ ಸಮಾಧಿಗೆ ಭದ್ರವಾದ ಕಾವಲಿರಿಸಲು ಅಪ್ಪಣೆಯಾಗಬೇಕು; ಇಲ್ಲದಿದ್ದರೆ ಅವನ ಶಿಷ್ಯರು ಅವನನ್ನು ಕದ್ದುಕೊಂಡು ಹೋಗಿ, ಸತ್ತವನು ಬದುಕಿಬಂದಿದ್ದಾನೆ ಎಂದು ಜನರಿಗೆ ಹೇಳಬಹುದು; ಆಗ ಮೊದಲನೆಯ ಮೋಸಕ್ಕಿಂತ ಕಡೆಯದೇ ಕಡುಮೋಸವಾದೀತು,” ಎಂದು ಕೇಳಿಕೊಂಡರು.
65 : ಪಿಲಾತನು ಅವರಿಗೆ, “ಕಾವಲುಗಾರರು ಇದ್ದಾರಲ್ಲವೆ? ಹೋಗಿ ನಿಮಗೆ ಬೇಕಾದಂತೆ ಭದ್ರಪಡಿಸಿಕೊಳ್ಳಿ” ಎಂದನು.
66 : ಅವರು ಹೋಗಿ, ಸಮಾಧಿಯ ಕಲ್ಲಿಗೆ ಮುದ್ರೆ ಹಾಕಿ, ಕಾವಲಿರಿಸಿ, ಸಮಾಧಿಯನ್ನು ಸುಭದ್ರ ಪಡಿಸಿದರು.