Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಮತ್ತಾಯ


1 : “ಆ ದಿನಗಳಲ್ಲಿ ಸ್ವರ್ಗಸಾಮ್ರಾಜ್ಯ ಹೇಗಿರುವುದು ಎನ್ನುವುದಕ್ಕೆ ಈ ಸಾಮತಿಯನ್ನು ಕೊಡಬಹುದು: ಹತ್ತು ಮಂದಿ ಕನ್ಯೆಯರು ದೀಪಾರತಿ ಹಿಡಿದು ಮದುವಣಿಗನನ್ನು ಎದುರುಗೊಳ್ಳಲು ಹೋದರು.
2 : ಅವರಲ್ಲಿ ಐವರು ವಿವೇಕಿಗಳು, ಐವರು ಅವಿವೇಕಿಗಳು,
3 : ಅವಿವೇಕಿಗಳು ದೀಪಗಳನ್ನು ತೆಗೆದುಕೊಂಡರೇ ಹೊರತು ಜೊತೆಗೆ ಎಣ್ಣೆಯನ್ನು ತೆಗೆದುಕೊಳ್ಳಲಿಲ್ಲ.
4 : ವಿವೇಕಿಗಳಾದರೋ ದೀಪಗಳ ಜೊತೆಗೆ ಬುಡ್ಡಿಗಳಲ್ಲಿ ಎಣ್ಣೆಯನ್ನೂ ತೆಗೆದುಕೊಂಡರು.
5 : ಮದುವಣಿಗ ಬರುವುದು ತಡವಾಯಿತು. ಅವರೆಲ್ಲರೂ ತೂಕಡಿಸುತ್ತಾ ಹಾಗೇ ನಿದ್ರೆಹೋದರು.
6 : “ನಡುರಾತ್ರಿಯ ವೇಳೆ. ‘ಇಗೋ, ಮದುವಣಿಗ ಬರುತ್ತಿದ್ದಾನೆ; ಬನ್ನಿ, ಆತನನ್ನು ಎದುರುಗೊಳ್ಳಿ,’ ಎಂಬ ಕೂಗು ಕೇಳಿಸಿತು. ಕನ್ಯೆಯರೆಲ್ಲರೂ ಎದ್ದರು.
7 : ತಮ್ಮ ತಮ್ಮ ದೀಪದ ಬತ್ತಿಯನ್ನು ಸರಿಮಾಡಿದರು.
8 : ಅವಿವೇಕಿಗಳು, ‘ನಮ್ಮ ದೀಪಗಳು ಆರಿಹೋಗುತ್ತಾ ಇವೆ; ನಿಮ್ಮ ಎಣ್ಣೆಯಲ್ಲಿ ನಮಗೂ ಕೊಂಚ ಕೊಡಿ,’ ಎಂದು ವಿವೇಕಿಗಳನ್ನು ಕೇಳಿಕೊಂಡರು.
9 : ಅದಕ್ಕೆ ಅವರು, ‘ನಿಮಗೆ ಕೊಟ್ಟರೆ ನಮಗೂ ನಿಮಗೂ ಸಾಲದೆ ಹೋದೀತು. ನೀವು ಅಂಗಡಿಗೆ ಹೋಗಿ ಕೊಂಡುಕೊಂಡರೆ ಒಳ್ಳೆಯದು,’ ಎಂದರು.
10 : ಅಂತೆಯೇ ಅವರು ಎಣ್ಣೆಯನ್ನು ಕೊಂಡುಕೊಳ್ಳಲು ಹೋದಾಗ ಮದುವಣಿಗನು ಬಂದೇಬಿಟ್ಟನು. ಸಿದ್ಧರಾಗಿದ್ದವರು ಅವನ ಸಂಗಡ ವಿವಾಹ ಮಹೋತ್ಸವಕ್ಕೆ ಹೋದರು. ಕಲ್ಯಾಣಮಂಟಪದ ಬಾಗಿಲುಗಳನ್ನು ಮುಚ್ಚಲಾಯಿತು.
11 : ಉಳಿದ ಕನ್ಯೆಯರು ಅನಂತರ ಬಂದರು. ‘ಸ್ವಾವಿೂ, ಸ್ವಾವಿೂ, ನಮಗೆ ಬಾಗಿಲು ತೆರೆಯಿರಿ,’ ಎಂದು ಕೂಗಿಕೊಂಡರು.
12 : ಅದಕ್ಕೆ ಉತ್ತರವಾಗಿ ಆ ಮದುವಣಿಗ, ‘ಅದಾಗದು, ನೀವು ಯಾರೋ ನನಗೆ ಗೊತ್ತಿಲ್ಲ,’ ಎಂದುಬಿಟ್ಟ.
13 : ಆದ್ದರಿಂದ ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು.
14 : “ಅದೂ ಅಲ್ಲದೆ ಆ ದಿನಗಳಲ್ಲಿ ಸ್ವರ್ಗಸಾಮ್ರಾಜ್ಯ ಇಂತಿರುವುದು: ಒಬ್ಬಾತ ಪ್ರವಾಸ ಹೊರಡಲಿದ್ದ. ತನ್ನ ಸೇವಕರನ್ನು ಕರೆದು ಅವರ ವಶಕ್ಕೆ ತನ್ನ ಆಸ್ತಿಯನ್ನು ಒಪ್ಪಿಸಿದ.
15 : ಒಬ್ಬನಿಗೆ ಐದು ತಲೆಂತು, ಇನ್ನೊಬ್ಬನಿಗೆ ಎರಡು, ಮತ್ತೊಬ್ಬನಿಗೆ ಒಂದು - ಹೀಗೆ ಅವರವರ ಸಾಮಥ್ರ್ಯಕ್ಕೆ ತಕ್ಕಂತೆ ವಹಿಸಿಕೊಟ್ಟು ಹೊರಟುಹೋದ.
16 : ಐದು ತಲೆಂತು ಪಡೆದ ಸೇವಕ ಒಡನೇ ಹೋಗಿ ಆ ಮೊತ್ತದಿಂದ ವ್ಯಾಪಾರಮಾಡಿ ಇನ್ನೂ ಐದನ್ನು ಸಂಪಾದಿಸಿದ.
17 : ಎರಡು ಪಡೆದವನೂ ಹಾಗೆಯೇ ಮಾಡಿ ಇನ್ನೂ ಎರಡನ್ನು ಸಂಪಾದಿಸಿದ.
18 : ಒಂದು ತಲೆಂತು ಪಡೆದವನು ಮಾತ್ರ, ಅದನ್ನು ತೆಗೆದುಕೊಂಡು ಹೋಗಿ ಭೂಮಿ ಅಗೆದು, ಅದರಲ್ಲಿ ತನ್ನ ಧಣಿಯ ಆ ಹಣವನ್ನು ಹೂತಿಟ್ಟ.
19 : ಬಹಳ ಕಾಲವಾದ ಬಳಿಕ ಆ ಧಣಿ ಹಿಂದಿರುಗಿ ಬಂದ.
20 : ಸೇವಕರಿಂದ ಲೆಕ್ಕಾಚಾರ ಕೇಳಿದ. ಐದು ತಲೆಂತು ಪಡೆದವನು ಇನ್ನೂ ಐದು ತಲೆಂತುಗಳನ್ನು ಮುಂದೆ ತಂದು, ‘ಒಡೆಯಾ, ನೀವು ನನ್ನ ವಶಕ್ಕೆ ಐದು ತಲೆಂತು ಒಪ್ಪಿಸಿದಿರಿ. ಇಗೋ ನೋಡಿ, ಮತ್ತೆ ಐದು ತಲೆಂತು ಸಂಪಾದಿಸಿದ್ದೇನೆ,’ ಎಂದ.
21 : ಅದಕ್ಕೆ ಆ ಧಣಿ, ‘ಭಲಾ, ನೆಚ್ಚಿನ ಸೇವಕ, ನೀನು ಪ್ರಾಮಾಣಿಕ. ಈ ಚಿಕ್ಕ ಕಾರ್ಯದಲ್ಲಿ ಪ್ರಾಮಾಣಿಕನಾಗಿದ್ದ ನಿನಗೆ ದೊಡ್ಡ ಜವಾಬ್ದಾರಿಯನ್ನೇ ವಹಿಸುತ್ತೇನೆ. ಬಾ, ನಿನ್ನ ಧಣಿಯ ಸೌಭಾಗ್ಯದಲ್ಲಿ ಭಾಗಿಯಾಗು,’ ಎಂದ.
22 : ಎರಡು ತಲೆಂತು ಪಡೆದಿದ್ದವನೂ ಮುಂದೆ ಬಂದು, ‘ಒಡೆಯಾ, ನೀವು ನನ್ನ ವಶಕ್ಕೆ ಎರಡು ತಲೆಂತುಗಳನ್ನು ಒಪ್ಪಿಸಿದರಿ. ಇಗೋ ನೋಡಿ, ಇನ್ನೂ ಎರಡು ತಲೆಂತುಗಳನ್ನು ಸಂಪಾದಿಸಿದ್ದೇನೆ,’ ಎಂದ.
23 : ಧಣಿ ಅವನಿಗೂ, ‘ಭಲಾ, ನೆಚ್ಚಿನ ಸೇವಕ, ನೀನು ಪ್ರಾಮಾಣಿಕ. ಈ ಚಿಕ್ಕ ಕಾರ್ಯದಲ್ಲಿ ಪ್ರಾಮಾಣಿಕನಾಗಿದ್ದ ನಿನಗೂ ದೊಡ್ಡ ಜವಾಬ್ದಾರಿಯನ್ನೇ ವಹಿಸುತ್ತೇನೆ. ಬಾ, ನಿನ್ನ ಧಣಿಯ ಸೌಭಾಗ್ಯದಲ್ಲಿ ನೀನೂ ಭಾಗಿಯಾಗು,’ ಎಂದ.
24 : ತರುವಾಯ ಒಂದು ತಲೆಂತು ಪಡೆದವನೂ ಮುಂದೆ ಬಂದ; ‘ಒಡೆಯಾ, ನಿಮ್ಮ ಮನಸ್ಸು ಕಠಿಣ ಎಂಬುದನ್ನು ನಾನು ಬಲ್ಲೆ. ನೀವು ಬಿತ್ತದ ಎಡೆಯಲ್ಲಿ ಕೊಯ್ಲು ಮಾಡುವವರು; ನೀವು ತೂರದ ಎಡೆಯಲ್ಲಿ ರಾಶಿಮಾಡುವವರು;
25 : ಆದ್ದರಿಂದ ನಾನು ಭಯಪಟ್ಟೆ; ಹೋಗಿ ನಿಮ್ಮ ತಲೆಂತನ್ನು ಭೂಮಿಯಲ್ಲಿ ಹೂತಿಟ್ಟೆ. ಇಗೋ, ಸ್ವೀಕರಿಸಿ, ನಿಮ್ಮದು ನಿಮಗೆ ಸಂದಿದೆ,’ ಎಂದ.
26 : “ಆಗ ಧಣಿ ಅವನಿಗೆ, ‘ಎಲವೋ ಮೈಗಳ್ಳನಾದ ದುಷ್ಟ ಸೇವಕ, ನಾನು ಬಿತ್ತದ ಎಡೆಯಲ್ಲಿ ಕೊಯ್ಲು ಮಾಡುವವನು; ನಾನು ತೂರದ ಎಡೆಯಲ್ಲಿ ರಾಶಿ ಮಾಡುವವನು ಎಂದು ನಿನಗೆ ಗೊತ್ತಿತ್ತಲ್ಲವೆ?
27 : ಹಾಗಾದರೆ ನನ್ನ ಹಣವನ್ನು ನೀನು ಬಡ್ಡಿ ಅಂಗಡಿಯಲ್ಲಿ ಹಾಕಿಡಬೇಕಿತ್ತು; ನಾನು ಬಂದು ಬಡ್ಡಿಸಮೇತ ನನ್ನ ಅಸಲನ್ನು ಪಡೆಯುತಿದ್ದೆ’, ಎಂದ.
28 : ಅನಂತರ ಪರಿಚಾರಕರಿಗೆ, ‘ಇವನಿಂದ ಆ ತಲೆಂತು ನಾಣ್ಯವನ್ನು ಕಿತ್ತು ಹತ್ತು ತಲೆಂತು ಇರುವವನಿಗೆ ಕೊಡಿ.
29 : ಉಳ್ಳ ಪ್ರತಿಯೊಬ್ಬನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ. ಅವನು ಸಮೃದ್ಧನಾಗುತ್ತಾನೆ. ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ.
30 : ಅಪ್ರಯೋಜಕನಾದ ಈ ಸೇವಕನನ್ನು ಹೊರಗಿನ ಕಗ್ಗತ್ತಲೆಗೆ ದಬ್ಬಿರಿ. ಅಲ್ಲಿ ಕಟಕಟನೆ ಹಲ್ಲುಕಡಿದುಕೊಂಡು ಗೋಳಾಡಬೇಕಾಗುವುದು,’ ಎಂದು ಹೇಳಿದ. ಪರರ ಸೇವೆಯೇ ಪರಮಾತ್ಮನ ಸೇವೆ
31 : “ನರಪುತ್ರನು ತನ್ನ ಮಹಿಮೆಯಲ್ಲಿ ಸಮಸ್ತ ದೇವದೂತರ ಸಮೇತ ಬರುವಾಗ ತನ್ನ ಮಹಿಮಾನ್ವಿತ ಸಿಂಹಾಸನದಲ್ಲಿ ಆಸೀನನಾಗಿರುವನು.
32 : ಸರ್ವಜನಾಂಗಗಳನ್ನು ಆತನ ಸಮ್ಮುಖದಲ್ಲಿ ಒಟ್ಟುಗೂಡಿಸಲಾಗುವುದು. ಕುರುಬನು ಕುರಿಗಳನ್ನು ಆಡುಗಳಿಂದ ಬೇರ್ಪಡಿಸುವಂತೆ ಆತನು ಅವರನ್ನು ಬೇರ್ಪಡಿಸುವನು.
33 : ಕುರಿಗಳನ್ನು ತನ್ನ ಬಲಗಡೆಯಲ್ಲೂ ಆಡುಗಳನ್ನು ತನ್ನ ಎಡಗಡೆಯಲ್ಲೂ ಇರಿಸುವನು.
34 : ಆಗ ಅರಸನು ತನ್ನ ಬಲಗಡೆಯಿರುವ ಜನರಿಗೆ, ‘ನನ್ನ ಪಿತನಿಂದ ಧನ್ಯರೆನಿಸಿಕೊಂಡವರೇ, ಬನ್ನಿ. ಲೋಕಾದಿಯಿಂದ ನಿಮಗಾಗಿ ಸಿದ್ಧಮಾಡಿದ ಸಾಮ್ರಾಜ್ಯವನ್ನು ಸ್ವಾಸ್ತ್ಯವಾಗಿ ಪಡೆಯಿರಿ.
35 : ಏಕೆಂದರೆ, ನಾನು ಹಸಿದಿದ್ದೆ, ನನಗೆ ಆಹಾರ ಕೊಟ್ಟಿರಿ; ಬಾಯಾರಿದ್ದೆ, ಕುಡಿಯಲು ಕೊಟ್ಟಿರಿ; ಅಪರಿಚಿತನಾಗಿದ್ದೆ, ನನಗೆ ಆಶ್ರಯ ಕೊಟ್ಟಿರಿ.
36 : ಬಟ್ಟೆಬರೆಯಿಲ್ಲದೆ ಇದ್ದೆ, ನನಗೆ ಉಡಲು ಕೊಟ್ಟಿರಿ. ರೋಗದಿಂದಿದ್ದೆ, ನನ್ನನ್ನು ಆರೈಕೆ ಮಾಡಿದಿರಿ. ಬಂಧಿಯಾಗಿದ್ದೆ, ನೀವು ನನ್ನನ್ನು ಸಂಧಿಸಿದಿರಿ,’ ಎಂದು ಹೇಳುವನು.
37 : ಅದಕ್ಕೆ ಆ ಸಜ್ಜನರು, ‘ಸ್ವಾವಿೂ, ತಾವು ಯಾವಾಗ ಹಸಿದಿದ್ದನ್ನು ಕಂಡು ನಾವು ಆಹಾರ ಕೊಟ್ಟೆವು? ಬಾಯಾರಿದ್ದನ್ನು ಕಂಡು ಕುಡಿಯಲು ಕೊಟ್ಟೆವು?
38 : ಯಾವಾಗ ತಾವು ಅಪರಿಚಿತರಾಗಿದ್ದನ್ನು ಕಂಡು ನಾವು ಆಶ್ರಯ ಕೊಟ್ಟೆವು? ಬಟ್ಟೆಬರೆಯಿಲ್ಲದ್ದನ್ನು ಕಂಡು ಉಡಲು ಕೊಟ್ಟೆವು?
39 : ತಾವು ರೋಗಿಯಾಗಿರುವುದನ್ನು ಅಥವಾ ಬಂಧಿಯಾಗಿರುವುದನ್ನು ಕಂಡು ನಾವು ಸಂಧಿಸಲು ಬಂದೆವು?’ ಎಂದು ಕೇಳುವರು.
40 : ಆಗ ಅರಸನು ಪ್ರತ್ಯುತ್ತರವಾಗಿ, ‘ಈ ನನ್ನ ಸೋದರರಲ್ಲಿ ಒಬ್ಬನಿಗೆ, ಅವನೆಷ್ಟೇ ಕನಿಷ್ಟನಾಗಿರಲಿ, ನೀವು ಹೀಗೆ ಮಾಡಿದಾಗಲೆಲ್ಲಾ ಅದನ್ನು ನನಗೇ ಮಾಡಿದಿರಿ, ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,’ ಎನ್ನುವನು.
41 : “ಅನಂತರ ಆತನು ತನ್ನ ಎಡಗಡೆ ಇರುವವರನ್ನು ನೋಡಿ, ‘ಶಾಪಗ್ರಸ್ತರೇ, ನನ್ನಿಂದ ತೊಲಗಿರಿ. ಪಿಶಾಚಿಗೂ ಅವನ ದೂತರಿಗೂ ಸಿದ್ಧಮಾಡಿರುವ ಆರದ ಬೆಂಕಿಗೆ ಬೀಳಿರಿ.
42 : ಏಕೆಂದರೆ ನಾನು ಹಸಿದಿದ್ದೆ, ನೀವು ನನಗೆ ಆಹಾರ ಕೊಡಲಿಲ್ಲ; ಬಾಯಾರಿದ್ದೆ, ಕುಡಿಯಲು ಕೊಡಲಿಲ್ಲ; ಅಪರಿಚಿತನಾಗಿದ್ದೆ, ನನಗೆ ಆಶ್ರಯ ನೀಡಲಿಲ್ಲ.
43 : ಬಟ್ಟೆಬರೆಯಿಲ್ಲದೆ ಇದ್ದೆ, ನನಗೆ ಉಡಲು ಕೊಡಲಿಲ್ಲ; ರೋಗಿಯಾಗಿದ್ದೆ, ಬಂಧಿಯಾಗಿದ್ದೆ, ನೀವು ನನ್ನನ್ನು ಸಂಧಿಸಲಿಲ್ಲ,’ ಎಂದು ಹೇಳುವನು.
44 : ಅದಕ್ಕೆ ಅವರು ಕೂಡ, ‘ಸ್ವಾವಿೂ, ತಾವು ಯಾವಾಗ ಹಸಿದಿದ್ದಿರಿ, ಬಾಯಾರಿದ್ದಿರಿ, ಅಪರಿಚಿತರಾಗಿದ್ದಿರಿ, ಯಾವಾಗ ಬಟ್ಟೆಬರೆ ಇಲ್ಲದೆ ಇದ್ದಿರಿ, ರೋಗಿಯಾಗಿದ್ದಿರಿ ಮತ್ತು ಬಂಧಿಯಾಗಿದ್ದಿರಿ ಮತ್ತು ನಾವು ಅವನ್ನು ಕಂಡು ನಿಮಗೆ ಉಪಚಾರಮಾಡದೆ ಹೋದೆವು? ಎಂದು ಪ್ರಶ್ನಿಸುವರು.
45 : ಅದಕ್ಕೆ ಪ್ರತ್ಯುತ್ತರವಾಗಿ ಅರಸನು, ‘ಇವರಲ್ಲಿ ಒಬ್ಬನಿಗೆ, ಅವನೆಷ್ಟೇ ಕನಿಷ್ಠನಾಗಿರಲಿ, ನೀವು ಹಾಗೆ ಮಾಡದೆಹೋದಾಗ ಅದನ್ನು ನನಗೇ ಮಾಡಲಿಲ್ಲ,’ ಎನ್ನುವನು.
46 : “ಹೀಗೆ ಈ ದುರ್ಜನರು ನಿತ್ಯಶಿಕ್ಷೆಗೂ, ಆ ಸಜ್ಜನರು ನಿತ್ಯಜೀವಕ್ಕೂ ಹೋಗುವರು,” ಎಂದು ಹೇಳಿದರು ಸ್ವಾಮಿ.

· © 2017 kannadacatholicbible.org Privacy Policy