Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಮತ್ತಾಯ


1 : ಯೇಸುಸ್ವಾಮಿ ಮಹಾದೇವಾಲಯವನ್ನು ಬಿಟ್ಟು ಹೋಗುತ್ತಿದ್ದರು. ಅದರ ಕಟ್ಟಡಗಳತ್ತ ಅವರ ಗಮನ ಸೆಳೆಯಲು ಶಿಷ್ಯರು ಅವರ ಬಳಿಗೆ ಬಂದರು.
2 : ಆಗ ಯೇಸು, “ಇವುಗಳನ್ನೆಲ್ಲಾ ನೀವು ನೋಡುತ್ತಾ ಇದ್ದೀರಲ್ಲವೆ? ನಾನು ನಿಮಗೆ ಹೇಳುತ್ತೇನೆ ಕೇಳಿ: ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದು; ಎಲ್ಲವನ್ನೂ ಕೆಡವಿ ಹಾಕುವರು,” ಎಂದರು. ಕಾಲಾಂತ್ಯದ ಮುನ್ನ ಕಷ್ಟಸಂಕಟಗಳು (ಮಾರ್ಕ 13.3-13; ಲೂಕ 21.7-19)
3 : ಬಳಿಕ ಯೇಸುಸ್ವಾಮಿ ಓಲಿವ್ ಗುಡ್ಡದ ಮೇಲೆ ಕುಳಿತರು. ಶಿಷ್ಯರು ಅವರ ಬಳಿಗೆ ಬಂದು, “ಇದೆಲ್ಲಾ ಸಂಭವಿಸುವುದು ಯಾವಾಗ? ನಿಮ್ಮ ಪುನರಾಗಮನದ ಹಾಗೂ ಕಾಲಾಂತ್ಯದ ಪೂರ್ವ ಸೂಚನೆ ಏನು? ನಮಗೆ ತಿಳಿಸಿ,” ಎಂದು ಪ್ರತ್ಯೇಕವಾಗಿ ಕೇಳಿಕೊಂಡರು.
4 : ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಯಾರೂ ನಿಮ್ಮನ್ನು ಮೋಸಗೊಳಿಸದಂತೆ ಜಾಗರೂಕರಾಗಿರಿ.
5 : ಅನೇಕರು ‘ನಾನೇ ಕ್ರಿಸ್ತ, ನಾನೇ ಕ್ರಿಸ್ತ,’ ಎನ್ನುತ್ತಾ ನನ್ನ ಹೆಸರನ್ನೇ ಹೇಳಿಕೊಂಡು ಬರುವರು. ಮಾತ್ರವಲ್ಲ, ಎಷ್ಟೋ ಜನರನ್ನು ತಪ್ಪುದಾರಿಗೆಳೆಯುವರು.
6 : ಇದೂ ಅಲ್ಲದೆ, ನೀವು ರಣಕಹಳೆಗಳನ್ನೂ ಸಮರಗಳ ಸುದ್ಧಿಯನ್ನೂ ಕೇಳುವಿರಿ. ಆಗ ಕಳವಳಪಡದಂತೆ ಎಚ್ಚರಿಕೆಯಿಂದಿರಿ. ಇವೆಲ್ಲವು ಸಂಭವಿಸಲೇಬೇಕು. ಆದರೆ ಇದಿನ್ನೂ ಕಾಲಾಂತ್ಯವಲ್ಲ.
7 : ಜನಾಂಗಕ್ಕೆ ವಿರುದ್ಧ ಜನಾಂಗವೂ ರಾಷ್ಟ್ರಕ್ಕೆ ವಿರುದ್ಧ ರಾಷ್ಟ್ರವೂ ಯುದ್ಧಕ್ಕಿಳಿಯುವುವು. ಅಲ್ಲಲ್ಲಿ ಕ್ಷಾಮಡಾಮರಗಳೂ ಭೂಕಂಪಗಳೂ ಸಂಭವಿಸುವುವು.
8 : ಇವೆಲ್ಲವೂ ಪ್ರಸವ ವೇದನೆಯ ಪ್ರಾರಂಭ ಮಾತ್ರ.
9 : “ಬಳಿಕ ಜನರು ನಿಮ್ಮನ್ನು ಕಷ್ಟಸಂಕಟಗಳಿಗೆ ಗುರಿಮಾಡಿ ಕೊಲ್ಲುವರು. ನೀವು ನನ್ನವರು, ಆದುದರಿಂದಲೇ ಜನಾಂಗಗಳೆಲ್ಲ ನಿಮ್ಮನ್ನು ದ್ವೇಷಿಸುವುವು.
10 : ಆ ದಿನಗಳಲ್ಲಿ ಬಹುಮಂದಿ ವಿಶ್ವಾಸಭ್ರಷ್ಟರಾಗುವರು, ಒಬ್ಬರಿಗೊಬ್ಬರು ದ್ರೋಹ ಬಗೆಯುವರು. ಒಬ್ಬರನ್ನೊಬ್ಬರು ದ್ವೇಷಿಸುವರು.
11 : ಅನೇಕ ಸುಳ್ಳುಪ್ರವಾದಿಗಳು ತಲೆಯೆತ್ತಿಕೊಂಡು ಎಷ್ಟೋ ಮಂದಿಯನ್ನು ವಂಚಿಸುವರು.
12 : ಭ್ರಷ್ಟಾಚಾರವು ಬೆಳೆದು ಬಹುಜನರ ಪ್ರೀತಿ ಉಡುಗಿ ಹೋಗುವುದು.
13 : ಆದರೆ ಕೊನೆಯವರೆಗೂ ಸ್ಥಿರವಾಗಿರುವವರು ಜೀವೋದ್ಧಾರವನ್ನು ಹೊಂದುವರು.
14 : ಶ್ರೀಸಾಮ್ರಾಜ್ಯದ ಶುಭಸಂದೇಶವನ್ನು ಸರ್ವ ಜನಾಂಗಗಳಿಗೂ ಸಾಕ್ಷಿಯಾಗಿ ಜಗತ್ತಿನಲ್ಲೆಲ್ಲಾ ಪ್ರಬೋಧಿಸಲಾಗುವುದು. ಅಂತ್ಯವು ಬರುವುದು ಅನಂತರವೇ. ಭಯಾನಕ ಭವಿಷ್ಯ (ಮಾರ್ಕ 13.14-23; ಲೂಕ 21.20-24)
15 : “ಪ್ರವಾದಿ ದಾನಿಯೇಲನು ಸೂಚಿಸಿರುವ ‘ವಿನಾಶಕರ ವಿಕಟ ಮೂರ್ತಿ’ ಪವಿತ್ರಸ್ಥಾನದಲ್ಲಿ ನಿಂತಿರುವುದನ್ನು ನೀವು ಕಾಣುವಿರಿ.
16 : (ಇದನ್ನು ಓದುವವನು ಅರ್ಥಮಾಡಿಕೊಳ್ಳಲಿ). ಆಗ ಜುದೇಯದಲ್ಲಿರುವ ಜನರು ಬೆಟ್ಟಗುಡ್ಡಗಳಿಗೆ ಓಡಿಹೋಗಲಿ.
17 : ಮಾಳಿಗೆಯ ಮೇಲಿರುವವನು ಇಳಿದು ಮನೆಯಿಂದ ಏನನ್ನೂ ತೆಗೆದುಕೊಳ್ಳದೆ ಓಡಿಹೋಗಲಿ.
18 : ಹೊಲ ಗದ್ದೆಯಲ್ಲಿರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳಲು ಹಿಂದಿರುಗದಿರಲಿ.
19 : ಅಯ್ಯೋ, ಆ ದಿನಗಳಲ್ಲಿ ಗರ್ಭಿಣಿಯರ ಹಾಗೂ ಹಾಲೂಡಿಸುವ ತಾಯಂದಿರ ಗೋಳೇನು!
20 : ಈ ನಿಮ್ಮ ಪಲಾಯನ ಚಳಿಗಾಲದಲ್ಲಾಗಲಿ, ಸಬ್ಬತ್ ದಿನದಲ್ಲಾಗಲಿ ಸಂಭವಿಸದಂತೆ ಪ್ರಾರ್ಥನೆಮಾಡಿರಿ.
21 : ಏಕೆಂದರೆ ಆಗ ಬರಲಿರುವ ಸಂಕಷ್ಟಗಳು ಸೃಷ್ಟಿಯ ಆದಿಯಿಂದ ಇಂದಿನವರೆಗೂ ಇರಲಿಲ್ಲ; ಇನ್ನು ಮುಂದಕ್ಕೂ ಇರುವುದಿಲ್ಲ.
22 : ಆ ದಿನಗಳ ಅವಧಿಯನ್ನು ಕಡಿಮೆಮಾಡದೆ ಇದ್ದಲ್ಲಿ ಯಾವ ಮಾನವನೂ ಉಳಿಯುವಂತಿಲ್ಲ. ಆದರೆ ದೇವರು ಆರಿಸಿಕೊಂಡವರ ಪ್ರಯುಕ್ತ ಆ ದಿನಗಳನ್ನು ಕಡಿಮೆ ಮಾಡಲಾಗುವುದು. ಹುಸಿ ಉದ್ಧಾರಕರು
23 : “ಆಗ ಯಾರಾದರೂ ನಿಮಗೆ, ‘ಇಗೋ ಕ್ರಿಸ್ತ ಇಲ್ಲಿದ್ದಾನೆ, ಅಗೋ, ಅಲ್ಲಿದ್ದಾನೆ,’ ಎಂದು ಹೇಳಿದರೆ ನಂಬಬೇಡಿ.
24 : ಏಕೆಂದರೆ ಕಪಟ ಉದ್ಧಾರಕರೂ ವಂಚಕ ಪ್ರವಾದಿಗಳೂ ತಲೆಯೆತ್ತಿಕೊಳ್ಳುವರು. ಸಾಧ್ಯವಾದರೆ ದೇವರು ಆರಿಸಿಕೊಂಡವರನ್ನೂ ಮೋಸಗೊಳಿಸುವಂತಹ ಮಹತ್ಕಾರ್ಯಗಳನ್ನೂ ಪವಾಡಗಳನ್ನೂ ಮಾಡಿ ತೋರಿಸುವರು.
25 : ಎಚ್ಚರಿಕೆ! ನಾನು ನಿಮಗೆ ಮುಂಚಿತವಾಗಿಯೇ ಇದನ್ನು ತಿಳಿಸುತ್ತಾ ಇದ್ದೇನೆ.
26 : ಆದ್ದರಿಂದ ಯಾರಾದರು, ‘ಅಗೋ, ಕ್ರಿಸ್ತ ಅಡವಿಯಲ್ಲಿದ್ದಾನೆ,’ ಎಂದರೆ ಅಲ್ಲಿಗೆ ಹೋಗಬೇಡಿ. ‘ಇಗೋ, ಇಲ್ಲೇ ಒಳಗೆ ಅವಿತುಕೊಂಡಿದ್ದಾನೆ,’ ಎಂದರೂ ಅದನ್ನು ನಂಬಬೇಡಿ.
27 : ಏಕೆಂದರೆ ಪೂರ್ವದಿಂದ ಮಿನುಗಿ ಪಶ್ಚಿಮದವರೆಗೂ ಹೊಳೆಯುವ ಮಿಂಚಿನಂತೆ ಇರುವುದು ನರಪುತ್ರನ ಆಗಮನ.
28 : ಹೆಣವಿದ್ದೆಡೆ ರಣಹದ್ದುಗಳು ಬಂದು ಸೇರುತ್ತವೆ. ನರಪುತ್ರನ ಪುನರಾಗಮನದ ಕುರುಹು (ಮಾರ್ಕ 13.24-27; ಲೂಕ 21.25-28)
29 : “ಆ ದಿನಗಳ ಸಂಕಷ್ಟಗಳು ಮುಗಿದ ಕೂಡಲೇ ಸೂರ್ಯನು ಅಂಧಕಾರಮಯನಾಗುವನು; ಚಂದ್ರನು ಕಾಂತಿಹೀನನಾಗುವನು; ಅಂತರಿಕ್ಷದಿಂದ ನಕ್ಷತ್ರಗಳು ಕಳಚಿ ಬೀಳುವುವು; ಗ್ರಹಶಕ್ತಿಗಳು ಕಂಪಿಸುವುವು.
30 : ಆಗ ನರಪುತ್ರನ ಚಿಹ್ನೆ ಆಕಾಶದಲ್ಲಿ ಕಾಣಿಸಿಕೊಳ್ಳುವುದು. ಪೃಥ್ವಿಯ ಪ್ರಜೆಗಳೆಲ್ಲಾ ಅತ್ತು ಪ್ರಲಾಪಿಸುವರು. ನರಪುತ್ರನು ಶಕ್ತಿ ಸಾಮಥ್ರ್ಯದಿಂದಲೂ ಮಹಾ ಮಹಿಮೆಯಿಂದಲೂ ಮೇಘಾರೂಢನಾಗಿ ಆಗಮಿಸುವುದನ್ನು ಅವರು ಕಾಣುವರು.
31 : ತುತೂರಿಯ ಘೋಷಣೆಯೊಂದಿಗೆ ಆತನು ತನ್ನ ದೂತರನ್ನು ನಾಲ್ಕು ದಿಕ್ಕುಗಳಿಗೂ ಕಳುಹಿಸುವನು. ಅವರು ಹೋಗಿ ಆತನಿಂದ ಆಯ್ಕೆಯಾದ ಜನರನ್ನು ವಿಶ್ವದ ಅಷ್ಟದಿಕ್ಕುಗಳಿಂದ ಒಟ್ಟುಗೂಡಿಸುವರು.
32 : “ಅಂಜೂರದ ಮರದಿಂದ ಒಂದು ಪಾಠ ಕಲಿತುಕೊಳ್ಳಿ. ಅದರ ಎಳೆ ರೆಂಬೆಗಳಲ್ಲಿ ಎಲೆಗಳು ಚಿಗುರುವಾಗ ವಸಂತಕಾಲ ಸವಿೂಪಿಸಿತು ಎಂದು ತಿಳಿದುಕೊಳ್ಳುತ್ತೀರಿ.
33 : ಅಂತೆಯೇ ಇದೆಲ್ಲವನ್ನು ನೋಡುವಾಗ ನರಪುತ್ರನು ಸವಿೂಪಿಸಿಬಿಟ್ಟಿದ್ದಾನೆ, ಹೊಸ್ತಿಲಲ್ಲೇ ಇದ್ದಾನೆಂದು ತಿಳಿದುಕೊಳ್ಳಿ.
34 : ಇದೆಲ್ಲವೂ ಸಂಭವಿಸುವವರೆಗೆ ಈ ಪೀಳಿಗೆ ಗತಿಸಿ ಹೋಗದೆಂದು ನಿಮಗೆ ಒತ್ತಿ ಹೇಳುತ್ತೇನೆ.
35 : ಭೂಮ್ಯಾಕಾಶಗಳು ಗತಿಸಿಹೋಗುವುವು; ಆದರೆ ನನ್ನ ಮಾತುಗಳು ಶಾಶ್ವತವಾಗಿ ನಿಲ್ಲುವುವು.
36 : “ಆ ದಿನವಾಗಲಿ, ಆ ಗಳಿಗೆಯಾಗಲಿ ಯಾವಾಗ ಬರುವುದೆಂದು ದೇವರೇ ಹೊರತು ಮತ್ತಾರೂ ಅರಿಯರು. ಸ್ವರ್ಗದ ದೂತರೇ ಆಗಲಿ, ಪುತ್ರನೇ ಆಗಲಿ ಅದನ್ನು ಅರಿಯರು.
37 : ನೋವನ ಕಾಲದಲ್ಲಿ ಆದಂತೆಯೇ ನರಪುತ್ರನು ಬರುವಾಗಲೂ ಆಗುವುದು.
38 : ಜಲಪ್ರಳಯಕ್ಕೆ ಹಿಂದಿನ ದಿನಗಳಲ್ಲಿ ನೋವನು ನಾವೆಯನ್ನು ಹತ್ತುವ ದಿನದವರೆಗೆ ಜನರು ತಿನ್ನುತ್ತಲೇ ಇದ್ದರು; ಕುಡಿಯುತ್ತಲೇ ಇದ್ದರು; ಮದುವೆ ಮಾಡಿಕೊಳ್ಳುವುದರಲ್ಲೂ ಮಾಡಿಕೊಡುವುದರಲ್ಲೂ ನಿರತರಾಗಿದ್ದರು.
39 : ಜಲಪ್ರಳಯ ಬಂದು ಅವರನ್ನು ಕೊಚ್ಚಿಕೊಂಡು ಹೋಗುವ ತನಕ ಅದರ ಅರಿವೇ ಅವರಿಗಿರಲಿಲ್ಲ. ನರಪುತ್ರನು ಆಗಮಿಸುವಾಗಲೂ ಹಾಗೆಯೇ ನಡೆಯುವುದು.
40 : ಆಗ ಹೊಲದಲ್ಲಿದ್ದ ಇಬ್ಬರಲ್ಲಿ ಒಬ್ಬನನ್ನು ತೆಗೆದುಕೊಂಡು ಹೋಗಲಾಗುವುದು. ಇನ್ನೊಬ್ಬನನ್ನು ಬಿಡಲಾಗುವುದು.
41 : ಒಂದೇ ಕಲ್ಲಿನಲ್ಲಿ ಬೀಸುತ್ತ ಇರುವ ಇಬ್ಬರು ಮಹಿಳೆಯರಲ್ಲಿ ಒಬ್ಬಳನ್ನು ತೆಗೆದುಕೊಂಡು ಹೋಗಲಾಗುವುದು, ಇನ್ನೊಬ್ಬಳನ್ನು ಬಿಡಲಾಗುವುದು.
42 : ನಿಮ್ಮ ಪ್ರಭು ಯಾವ ದಿನ ಬರುತ್ತಾನೆಂದು ನಿಮಗೆ ತಿಳಿಯದು, ಆದ್ದರಿಂದ ಎಚ್ಚರವಾಗಿರಿ.
43 : ಕಳ್ಳನು ಬರುವ ಗಳಿಗೆ ಮನೆಯ ಯಜಮಾನನಿಗೆ ತಿಳಿದಿದ್ದರೆ ಅವನು ಎಚ್ಚರವಾಗಿದ್ದು ತನ್ನ ಮನೆಗೆ ಕನ್ನಹಾಕಲು ಬಿಡನು, ಅಲ್ಲವೆ?
44 : ಇದನ್ನು ಚೆನ್ನಾಗಿ ತಿಳಿದುಕೊಂಡು ನೀವು ಸಹ ಸಿದ್ಧರಾಗಿರಿ. ಏಕೆಂದರೆ ನರಪುತ್ರನು ನೀವು ನಿರೀಕ್ಷಿಸದ ಗಳಿಗೆಯಲ್ಲಿ ಬರುವನು.
45 : “ಪ್ರಾಮಾಣಿಕನೂ ವಿವೇಕಿಯೂ ಆದ ಮೇಸ್ತ್ರಿ ಯಾರು? ಕಾಲಕಾಲಕ್ಕೆ ಸರಿಯಾಗಿ ಕೂಲಿ ಆಳುಗಳಿಗೆ ದವಸಧಾನ್ಯಗಳನ್ನು ಅಳೆದುಕೊಟ್ಟು ತನ್ನ ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಯಜಮಾನನಿಂದ ನೇಮಕಗೊಂಡವನು.
46 : ಯಜಮಾನನು ಮನೆಗೆ ಹಿಂದಿರುಗಿ ಬಂದಾಗ ಆ ಮೇಸ್ತ್ರಿ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನೆರವೇರಿಸುತ್ತಿದ್ದರೆ ಅವನು ಧನ್ಯನು.
47 : ಅಂಥವನನ್ನು ಯಜಮಾನನು ತನ್ನ ಎಲ್ಲಾ ಆಸ್ತಿಪಾಸ್ತಿಗೆ ಆಡಳಿತಗಾರನನ್ನಾಗಿ ನೇಮಿಸುತ್ತಾನೆಂಬುದು ನಿಶ್ಚಯ.
48 : ಆದರೆ ಆ ಮೇಸ್ತ್ರಿ ದುಷ್ಟನಾಗಿದ್ದು ‘ನನ್ನ ಯಜಮಾನ ತಡಮಾಡುವನು’ ಎಂದು ನೆನಸಿಕೊಂಡು,
49 : ತನ್ನ ಜೊತೆಯ ಸೇವಕರನ್ನು ಹೊಡೆಯತೊಡಗಿದರೆ, ಕುಡುಕರ ಸಂಗಡ ತಿಂದು ಕುಡಿಯಲಾರಂಭಿಸಿದರೆ,
50 : ಅವನು ನಿರೀಕ್ಷಿಸದ ದಿನದಲ್ಲಿ, ತಿಳಿಯದ ಗಳಿಗೆಯಲ್ಲಿ, ಯಜಮಾನನು ಬರುವನು.
51 : ಅವನನ್ನು ಚಿತ್ರಹಿಂಸೆಗೂ ಕಪಟಿಗಳ ದುರ್ಗತಿಗೂ ಗುರಿಮಾಡುವನು. ಅಲ್ಲಿರುವವರೊಡನೆ ಕಟಕಟನೆ ಹಲ್ಲುಕಡಿದುಕೊಂಡು ಗೋಳಾಡಬೇಕಾಗುವುದು.

· © 2017 kannadacatholicbible.org Privacy Policy