Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಮತ್ತಾಯ


1 : ಬಳಿಕ ಜನಸಮೂಹವನ್ನೂ ತಮ್ಮ ಶಿಷ್ಯರನ್ನೂ ಉದ್ದೇಶಿಸಿ ಯೇಸುಸ್ವಾಮಿ ಇಂತೆಂದರು:
2 : “ಧರ್ಮಶಾಸ್ತ್ರಿಗಳೂ ಫರಿಸಾಯರೂ ಮೋಶೆಯ ಸ್ಥಾನದಲ್ಲಿ ಇದ್ದಾರೆ.
3 : ಆದುದರಿಂದ ಅವರು ನಿಮಗೆ ಉಪದೇಶಿಸುವುದನ್ನೆಲ್ಲಾ ಆಲಿಸಿರಿ ಹಾಗೂ ಪಾಲಿಸಿರಿ. ಆದರೆ ಅವರ ನಡತೆಯನ್ನು ಅನುಸರಿಸಬೇಡಿ. ಏಕೆಂದರೆ ಅವರು ನುಡಿದಂತೆ ನಡೆಯುವುದಿಲ್ಲ.
4 : ಭಾರವಾದ ಹಾಗೂ ಹೊರಲಾಗದ ಹೊರೆಗಳನ್ನು ಕಟ್ಟಿ ಮಾನವರ ಹೆಗಲ ಮೇಲೆ ಹೇರುತ್ತಾರೆ. ತಾವಾದರೋ ಅವನ್ನು ಕಿರುಬೆರಳಿನಿಂದಲೂ ಮುಟ್ಟಲೊಲ್ಲರು.
5 : ತಾವು ಕೈಗೊಳ್ಳುವ ಕಾರ್ಯಗಳನ್ನೆಲ್ಲಾ ಜನರು ನೋಡಲೆಂದೇ ಮಾಡುತ್ತಾರೆ. ತಮ್ಮ ಧಾರ್ಮಿಕ ಹಣೆಪಟ್ಟಿಗಳನ್ನು ಅಗಲ ಮಾಡಿಕೊಳ್ಳುತ್ತಾರೆ. ಮೇಲಂಗಿಯ ಗೊಂಡೆಗಳನ್ನು ಉದ್ದುದ್ದಮಾಡಿಕೊಳ್ಳುತ್ತಾರೆ.
6 : ಔತಣಕೂಟಗಳಲ್ಲಿ ಶ್ರೇಷ್ಠ ಸ್ಥಾನಮಾನಗಳನ್ನೂ ಪ್ರಾರ್ಥನಾಮಂದಿರಗಳಲ್ಲಿ ಉನ್ನತ ಆಸನಗಳನ್ನೂ ಪೇಟೆಬೀದಿಗಳಲ್ಲಿ ವಂದನೋಪಚಾರಗಳನ್ನೂ ಅವರು ಅಪೇಕ್ಷಿಸುತ್ತಾರೆ.
7 : ಅದು ಮಾತ್ರವಲ್ಲ, ‘ಗುರುವೇ’ ಎಂದು ಕರೆಸಿಕೊಳ್ಳಲು ಇಚ್ಛಿಸುತ್ತಾರೆ.
8 : ಹಾಗೆ ಕರೆಸಿಕೊಳ್ಳುವುದು ನಿಮಗೆ ಬೇಡ. ನಿಮಗಿರುವ ಗುರುವು ಒಬ್ಬರೇ ಮತ್ತು ನೀವೆಲ್ಲರೂ ಸಹೋದರರು.
9 : ಇಹದಲ್ಲಿ ನೀವು ಯಾರನ್ನೂ ‘ಪಿತನೇ’ ಎಂದು ಸಂಬೋಧಿಸಬೇಡಿ. ಏಕೆಂದರೆ ನಿಮ್ಮ ಪಿತ ಒಬ್ಬರೇ. ಅವರು ಸ್ವರ್ಗದಲ್ಲಿದ್ದಾರೆ.
10 : ಒಡೆಯ ಎಂದೂ ಕರೆಯಿಸಿಕೊಳ್ಳಬೇಡಿ; ಏಕೆಂದರೆ ನಿಮಗಿರುವ ಒಡೆಯ ಒಬ್ಬನೇ, ‘ಆತನೇ ಕ್ರಿಸ್ತ.’ ನಿಮ್ಮಲ್ಲಿ ಶ್ರೇಷ್ಠನು ಯಾರೋ ಅವನು ನಿಮ್ಮ ಸೇವಕನಾಗಿರಬೇಕು.
11 : ತನ್ನನ್ನು ತಾನೇ ಮೇಲಕ್ಕೇರಿಸಿಕೊಳ್ಳುವ ಪ್ರತಿಯೊಬ್ಬನನ್ನೂ ದೇವರು ಕೆಳಗಿಳಿಸುವರು.
12 : ತನ್ನನ್ನು ತಾನೇ ತಗ್ಗಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು. ಕಪಟಿಗಳಿಗೆ ಶಾಪ (ಮಾರ್ಕ 12.40; ಲೂಕ 11.39-42, 44, 52; 20.47)
13 : “ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ಸ್ವರ್ಗ ಸಾಮ್ರಾಜ್ಯದ ದ್ವಾರಗಳನ್ನು ಮಾನವರಿಗೆ ಮುಚ್ಚಿದ್ದೀರಿ. ನೀವೂ ಪ್ರವೇಶಿಸುವುದಿಲ್ಲ, ಒಳಕ್ಕೆ ಪ್ರವೇಶಿಸಲು ಯತ್ನಿಸುವವರನ್ನೂ ಬಿಡುವುದಿಲ್ಲ.
14 : ಕಪಟ ಧರ್ಮಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಧಿಕ್ಕಾರ! (ವಿಧವೆಯರ ಮನೆಮಾರುಗಳನ್ನು ನೀವು ನುಂಗಿಬಿಡುತ್ತೀರಿ. ನಟನೆಗಾಗಿ ಉದ್ದುದ್ದ ಜಪತಪಗಳನ್ನು ಮಾಡುತ್ತೀರಿ, ನೀವು ಅತಿ ಕಠಿಣವಾದ ದಂಡನೆಗೆ ಗುರಿಯಾಗುವಿರಿ).
15 : ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ಕೇವಲ ಒಬ್ಬ ವ್ಯಕ್ತಿಯನ್ನು ಮತಾಂತರಿಸಿಕೊಳ್ಳುವುದಕ್ಕಾಗಿ ಜಲನೆಲಗಳನ್ನು ಸುತ್ತಿ ಬರುತ್ತೀರಿ. ಮತಾಂತರಗೊಂಡ ಬಳಿಕವಾದರೋ ಅವನು ನಿಮಗಿಂತಲೂ ಇಮ್ಮಡಿ ನರಕಕ್ಕೆ ಗುರಿಯಾಗುವಂತೆ ಮಾಡುತ್ತೀರಿ.
16 : “ಕುರುಡ ಮಾರ್ಗದರ್ಶಕರೇ, ನಿಮಗೆ ಧಿಕ್ಕಾರ! ಒಬ್ಬನು ದೇವಾಲಯದ ಮೇಲೆ ಆಣೆಯಿಟ್ಟರೆ ಅವನು ಅದಕ್ಕೇನೂ ಬದ್ಧನಲ್ಲ. ದೇವಾಲಯದ ಚಿನ್ನದ ಮೇಲೆ ಆಣೆಯಿಟ್ಟರೋ, ಅವನು ಅದನ್ನು ನಡೆಸಿಯೇ ತೀರಬೇಕು ಎನ್ನುತ್ತೀರಿ.
17 : ದೃಷ್ಟಿಗೆಟ್ಟ ಮತಿಭ್ರಷ್ಟರೇ, ಯಾವುದು ಶ್ರೇಷ್ಠ? ಚಿನ್ನವೋ, ಚಿನ್ನವನ್ನು ಪಾವನಗೊಳಿಸುವ ದೇವಾಲಯವೋ? ಅಂತೆಯೇ,
18 : ಒಬ್ಬನು ಬಲಿಪೀಠದ ಮೇಲೆ ಆಣೆಯಿಟ್ಟರೆ ಅದಕ್ಕೇನೂ ಬದ್ಧನಲ್ಲ. ಬಲಿಪೀಠದ ಮೇಲಿರುವ ಕಾಣಿಕೆಗಳ ಮೇಲೆ ಆಣೆಯಿಟ್ಟರೋ, ಅದನ್ನು ಅವನು ನಡೆಸಿಯೇ ತೀರಬೇಕು ಎನ್ನುತ್ತೀರಿ.
19 : ದೃಷ್ಟಿಹೀನರೇ! ಯಾವುದು ಶ್ರೇಷ್ಠ? ಕಾಣಿಕೆಯೋ, ಕಾಣಿಕೆಯನ್ನು ಪಾವನಗೊಳಿಸುವ ಬಲಿಪೀಠವೋ?
20 : ಬಲಿಪೀಠದ ಮೇಲೆ ಆಣೆಯಿಡುವವನು ಬಲಿಪೀಠದ ಮೇಲೆ ಮಾತ್ರವಲ್ಲ, ಅದರ ಮೇಲಿರುವ ಪ್ರತಿಯೊಂದು ಕಾಣಿಕೆಯ ಮೇಲೂ ಆಣೆಯಿಡುತ್ತಾನೆ.
21 : ದೇವಾಲಯದ ಮೇಲೆ ಆಣೆಯಿಡುವವನು ಅದರ ಮೇಲೆ ಮಾತ್ರವಲ್ಲ, ಅದರಲ್ಲಿ ನೆಲೆಸುವ ದೇವರ ಮೇಲೂ ಆಣೆಯಿಡುತ್ತಾನೆ.
22 : ಹಾಗೆಯೇ, ಸ್ವರ್ಗದ ಮೇಲೆ ಆಣೆಯಿಡುವವನು ದೇವರ ಸಿಂಹಾಸನದ ಮೇಲೂ ಅದರಲ್ಲಿ ಆಸೀನರಾಗಿರವವರ ಮೇಲೂ ಆಣೆಯಿಡುತ್ತಾನೆ.
23 : ಕಪಟ ಧರ್ಮಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪುದೀನ, ಸದಾಪ, ಜೀರಿಗೆ ಮುಂತಾದವುಗಳ ದಶಾಂಶವನ್ನು ದೇವರಿಗೆ ಸಲ್ಲಿಸುತ್ತೀರಿ. ಆದರೆ ಧರ್ಮಶಾಸ್ತ್ರದಲ್ಲಿ ಪ್ರಮುಖವಾದ ನ್ಯಾಯನೀತಿ, ದಯೆ ದಾಕ್ಷಿಣ್ಯ, ಪ್ರಾಮಾಣಿಕತೆ ಇವುಗಳನ್ನು ಬದಿಗೊತ್ತಿದ್ದೀರಿ. ನೀವು ಅವುಗಳನ್ನು ಅಲಕ್ಷ್ಯ ಮಾಡಬೇಕೆಂದು ಅಲ್ಲ, ಆದರೆ ಇವುಗಳನ್ನೂ ಅನುಷ್ಠಾನಕ್ಕೆ ತರಲೇಬೇಕಿತ್ತು.
24 : ಅಂಧ ನಿರ್ದೇಶಕರೇ, ನೀವು ಸೊಳ್ಳೆಯನ್ನೇನೋ ಸೋಸುತ್ತೀರಿ. ಆದರೆ ಒಂಟೆಯನ್ನೇ ನುಂಗಿಬಿಡುತ್ತೀರಿ.
25 : ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ನಿಮ್ಮ ತಟ್ಟೆಲೋಟಗಳ ಹೊರಭಾಗಗಳನ್ನೇನೋ ಶುಚಿಮಾಡುತ್ತೀರಿ; ಆದರೆ ಅವುಗಳ ಒಳಭಾಗ ಕೊಳ್ಳೆ ಹಾಗೂ ಲೋಭದ ಗಳಿಕೆಗಳಿಂದ ತುಂಬಿಹೋಗಿದೆ.
25 : ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ನಿಮ್ಮ ತಟ್ಟೆಲೋಟಗಳ ಹೊರಭಾಗಗಳನ್ನೇನೋ ಶುಚಿಮಾಡುತ್ತೀರಿ; ಆದರೆ ಅವುಗಳ ಒಳಭಾಗ ಕೊಳ್ಳೆ ಹಾಗೂ ಲೋಭದ ಗಳಿಕೆಗಳಿಂದ ತುಂಬಿಹೋಗಿದೆ.
26 : ಕುರುಡ ಫರಿಸಾಯನೇ, ಮೊತ್ತಮೊದಲು ತಟ್ಟೆ ಲೋಟಗಳ ಒಳಭಾಗವನ್ನು ತೊಳೆ, ಆಗ ಅವುಗಳ ಹೊರಭಾಗವೂ ಶುಚಿಯಾಗುವುದು.
27 : “ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಸುಣ್ಣ ಬಳಿದ ಸಮಾಧಿಗಳು. ಹೊರನೋಟಕ್ಕೇನೋ ಅವು ಥಳಕಾಗಿವೆ. ಒಳಗೋ ಸತ್ತವರ ಮೂಳೆಗಳಿಂದಲೂ ಕೊಳಕಿನಿಂದಲೂ ತುಂಬಿವೆ.
28 : ಬಹಿರಂಗ ನೋಟಕ್ಕೆ ನೀವು ಸತ್ಪುರುಷರು. ಅಂತರಂಗದಲ್ಲಾದರೋ ಕಪಟ, ಕಲ್ಮಷಗಳಿಂದ ತುಂಬಿದವರು.
29 : “ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪ್ರವಾದಿಗಳಿಗೆ ಗೋರಿಗಳನ್ನು ಕಟ್ಟಿಸುತ್ತೀರಿ.
30 : ಸತ್ಪುರುಷರ ಸ್ಮಾರಕಗಳನ್ನು ಶೃಂಗರಿಸುತ್ತೀರಿ. ‘ನಮ್ಮ ಪೂರ್ವಜರ ಕಾಲದಲ್ಲಿ ನಾವು ಇದ್ದಿದ್ದರೆ ಪ್ರವಾದಿಗಳ ರಕ್ತಪಾತದಲ್ಲಿ ಭಾಗಿಗಳಾಗುತ್ತಿರಲಿಲ್ಲ’ ಎಂದುಕೊಳ್ಳುತ್ತೀರಿ.
31 : ಹೀಗೆ ಪ್ರವಾದಿಗಳನ್ನು ಕೊಲೆಮಾಡಿದವರ ಪೀಳಿಗೆಗೆ ನೀವು ಸೇರಿದವರು ಎಂದು ನೀವೇ ಸಾಕ್ಷಿಕೊಡುತ್ತೀರಿ.
32 : ಒಳ್ಳೆಯದು, ನಿಮ್ಮ ಪೂರ್ವಜರು ಪ್ರಾರಂಭಿಸಿದ್ದನ್ನು ನೀವು ಹೋಗಿ ಪೂರ್ಣಗೊಳಿಸಿರಿ.
33 : “ಎಲೈ ಸರ್ಪಗಳೇ, ವಿಷಸರ್ಪಗಳ ಪೀಳಿಗೆಯೇ, ನರಕ ದಂಡನೆಯಿಂದ ನೀವು ಹೇಗೆ ತಾನೆ ಪಾರಾಗುವಿರಿ? ಇಗೋ ಕೇಳಿ: ‘ನಾನು ನಿಮ್ಮ ಬಳಿಗೆ ಪ್ರವಾದಿಗಳನ್ನೂ ಪಂಡಿತರನ್ನೂ ಧರ್ಮಶಾಸ್ತ್ರಿಗಳನ್ನೂ ಕಳುಹಿಸುತ್ತೇನೆ.
34 : ಅವರಲ್ಲಿ ಕೆಲವರನ್ನು ಕೊಲೆಮಾಡುವಿರಿ, ಶಿಲುಬೆಗೆ ಏರಿಸುವಿರಿ, ಮತ್ತೆ ಕೆಲವರನ್ನು ನಿಮ್ಮ ಪ್ರಾರ್ಥನಾ ಮಂದಿರಗಳಲ್ಲಿ ಕೊರಡೆಗಳಿಂದ ಹೊಡೆಯುವಿರಿ. ಊರಿಂದೂರಿಗೆ ಅಟ್ಟಿ ಅವರನ್ನು ಪೀಡಿಸುವಿರಿ.
35 : ಹೀಗೆ, ಪುನೀತ ಹೇಬೆಲನ ರಕ್ತ ಮೊದಲ್ಗೊಂಡು ಬಲಿಪೀಠಕ್ಕೂ ಗರ್ಭಗುಡಿಗೂ ನಡುವೆ ನೀವು ಕೊಲೆಮಾಡಿದ ಬರಕೀಯನ ಮಗ ಜಕರೀಯನ ರಕ್ತದವರೆಗೆ ಪೃಥ್ವಿಯಲ್ಲಿ ಸುರಿಸಲಾದ ಎಲ್ಲಾ ಸತ್ಪುರುಷರ ರಕ್ತದ ಹೊಣೆ ನಿಮ್ಮದೇ.
36 : ಹೌದು, ಇದೆಲ್ಲವೂ ಈ ಪೀಳಿಗೆಯ ಮೇಲೆ ಬರುವುದೆಂದು ನಿಮಗೆ ಒತ್ತಿ ಹೇಳುತ್ತೇನೆ.
37 : “ಜೆರುಸಲೇಮೇ, ಜೆರುಸಲೇಮೇ, ಪ್ರವಾದಿಗಳ ಕೊಲೆಪಾತಕಿಯೇ, ದೇವರು ನಿನ್ನ ಬಳಿಗೆ ಕಳುಹಿಸಿದವರನ್ನು ಕಲ್ಲುಗಳಿಂದ ಹೊಡೆಯುವವಳೇ, ಕೋಳಿಯು ತನ್ನ ಮರಿಗಳನ್ನು ರೆಕ್ಕೆಗಳಡಿ ಸೇರಿಸಿಕೊಳ್ಳುವಂತೆ, ನಾನು ನಿನ್ನ ಮಕ್ಕಳನ್ನು ಒಂದಾಗಿ ಸೇರಿಸಿ ಅಪ್ಪಿಕೊಳ್ಳಲು ಎಷ್ಟೋ ಬಾರಿ ಅಪೇಕ್ಷಿಸಿದೆನು. ಆದರೆ ನೀವು ಒಪ್ಪಲಿಲ್ಲ.
38 : ಇಗೋ, ನಿಮ್ಮ ದೇವಾಲಯ ಬರಿದಾಗುವುದು, ಪಾಳುಬೀಳುವುದು.
39 : ಏಕೆಂದರೆ, ‘ಸರ್ವೇಶ್ವರನ ನಾಮದಲ್ಲಿ ಬರುವವರು ಧನ್ಯರು!’ ಎಂದು ನೀವಾಗಿ ಹೇಳುವ ದಿನದವರೆಗೂ ನೀವು ನನ್ನನ್ನು ಮತ್ತೆ ಕಾಣಲಾರಿರಿ ಎಂಬುದು ನಿಶ್ಚಯ.”

· © 2017 kannadacatholicbible.org Privacy Policy