1 : ಒಂದು ಸಬ್ಬತ್ ದಿನ ಯೇಸುಸ್ವಾಮಿ ಗೋದಿಯ ಹೊಲಗಳನ್ನು ಹಾದು ಹೋಗುತ್ತಿದ್ದರು. ಅವರ ಸಂಗಡವಿದ್ದ ಶಿಷ್ಯರಿಗೆ ಹಸಿವಾಯಿತು. ಅವರು ಗೋದಿಯ ತೆನೆಗಳನ್ನು ಕಿತ್ತು ತಿನ್ನಲಾರಂಭಿಸಿದರು.
2 : ಇದನ್ನು ಕಂಡ ಫರಿಸಾಯರು, "ನೋಡು, ನೋಡು, ನಿನ್ನ ಶಿಷ್ಯರು ಸಬ್ಬತ್ ದಿನದಲ್ಲಿ ನಿಷಿದ್ಧವಾದುದನ್ನು ಮಾಡುತ್ತಿದ್ದಾರೆ," ಎಂದರು.
3 : ಅದಕ್ಕೆ ಯೇಸು, "ಹಿಂದೆ ಅರಸ ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ಏನು ಮಾಡಿದರೆಂದು ನೀವು ಓದಿರಬೇಕಲ್ಲವೆ?
4 : ಅವನು ದೇವಮಂದಿರದೊಳಕ್ಕೆ ಹೋಗಿ ಯಾಜಕರ ಹೊರತು ತಾನೇ ಆಗಲಿ, ಸಂಗಡಿಗರೇ ಆಗಲಿ, ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನೇ ತಿನ್ನಲಿಲ್ಲವೆ?
5 : ಇದಲ್ಲದೆ, ಪ್ರತಿಯೊಂದು ಸಬ್ಬತ್ ದಿನವೂ ಯಾಜಕರು ದೇವಾಲಯದಲ್ಲಿ ಸಬ್ಬತ್ ದಿನದ ನಿಯಮಗಳನ್ನು ಉಲ್ಲಂಘಿಸಿಯೂ ನಿರ್ದೋಷಿಗಳಾಗಿದ್ದಾರೆ. ಇದನ್ನು ನೀವು ಮೋಶೆಯ ಧರ್ಮಶಾಸ್ತ್ರದಲ್ಲಿ ಓದಿಲ್ಲವೆ?
6 : ದೇವಾಲಯಕ್ಕಿಂತಲೂ ಶ್ರೇಷ್ಠವಾದವನು ಇಲ್ಲಿದ್ದಾನೆಂಬುದು ನಿಮಗೆ ತಿಳಿದಿರಲಿ.
7 : ‘ನನಗೆ ಬೇಕಾದುದು ದಯೆ, ಯಜ್ಞ ಬಲಿಯಲ್ಲ’ ಎಂಬ ವಾಕ್ಯದ ಅರ್ಥ ನಿಮಗೆ ತಿಳಿದಿದ್ದರೆ, ನಿರ್ದೋಷಿಗಳನ್ನು ನೀವು ಖಂಡಿಸುತ್ತಿರಲಿಲ್ಲ.
8 : ಏಕೆಂದರೆ ನರಪುತ್ರನು ಸಬ್ಬತ್ತಿಗೆ ಒಡೆಯ," ಎಂದರು.
9 : ಯೇಸುಸ್ವಾಮಿ ಅಲ್ಲಿಂದ ಹೊರಟು ಪ್ರಾರ್ಥನಾಮಂದಿರಕ್ಕೆ ಬಂದರು.
10 : ಬತ್ತಿದ ಕೈಯುಳ್ಳ ಒಬ್ಬ ವ್ಯಕ್ತಿ ಅಲ್ಲಿದ್ದನು. ಯೇಸುವಿನ ಮೇಲೆ ತಪ್ಪು ಹೊರಿಸುವ ಉದ್ದೇಶದಿಂದ ಕೆಲವರು, "ಸಬ್ಬತ್ ದಿನ ಸ್ವಸ್ಥಗೊಳಿಸುವುದು ಶಾಸ್ತ್ರಬದ್ಧವೇ?" ಎಂದು ಯೇಸುವನ್ನು ಕೇಳಿದರು.
11 : ಅದಕ್ಕೆ ಯೇಸು, "ನಿಮ್ಮಲ್ಲಿ ಒಬ್ಬನಿಗೆ ಒಂದೇ ಒಂದು ಕುರಿಯಿದೆ ಎನ್ನೋಣ. ಸಬ್ಬತ್ ದಿನ ಅದು ಗುಣಿಯಲ್ಲಿ ಬಿದ್ದು ಹೋಯಿತು ಎನ್ನೋಣ; ಆ ದಿನ ಅವನು ಅದನ್ನು ಮೇಲಕ್ಕೆ ಎತ್ತದೆ ಇರುವನೇ?
12 : ಕುರಿಗಿಂತ ನರಮಾನವ ಎಷ್ಟೋ ಮೌಲ್ಯವುಳ್ಳವನಲ್ಲವೇ? ಆದುದರಿಂದ ಸಬ್ಬತ್ ದಿನ ಸತ್ಕಾರ್ಯಮಾಡುವುದು ಶಾಸ್ತ್ರಬದ್ಧವಾದುದು," ಎಂದರು.
13 : ಅನಂತರ ಬತ್ತಿದ ಕೈಯುಳ್ಳವನನ್ನು ನೋಡಿ, "ಕೈ ಚಾಚು" ಎಂದರು. ಅವನು ಚಾಚಿದನು. ಅದು ಪುನಶ್ಚೇತನಗೊಂಡು ಇನ್ನೊಂದು ಕೈಯ ಹಾಗೆ ಸಂಪೂರ್ಣ ಸ್ವಸ್ಥವಾಯಿತು.
14 : ಫರಿಸಾಯರಾದರೋ ಅಲ್ಲಿಂದ ಹೊರಗೆ ಹೋಗಿ ಯೇಸುವನ್ನು ಕೊಲೆ ಮಾಡಲು ಒಳಸಂಚು ಹೂಡಿದರು.
ಪ್ರವಾದನೆ ಪೂರೈಸಿತು
15 : ತಮಗೆ ವಿರುದ್ಧ ಒಳಸಂಚು ನಡೆಯುತ್ತಿದೆ ಎಂದು ಯೇಸುಸ್ವಾಮಿ ಅರಿತುಕೊಂಡು ಅಲ್ಲಿಂದ ಹೊರಟುಹೋದರು.
16 : ಅನೇಕ ಜನರು ಅವರ ಹಿಂದೆಯೇ ಹೋದರು. ಯೇಸು ಅಸ್ವಸ್ಥರಾಗಿದ್ದ ಎಲ್ಲರನ್ನು ಗುಣಪಡಿಸಿದರು ಮತ್ತು ತಮ್ಮ ವಿಷಯವನ್ನು ಯಾರಿಗೂ ತಿಳಿಸಬಾರದೆಂದು ಆಜ್ಞೆಮಾಡಿದರು.
17 : ಹೀಗೆ ದೇವರು ಪ್ರವಾದಿ ಯೆಶಾಯನ ಮುಖಾಂತರ ಹೇಳಿದ ಈ ವಚನ ನೆರವೇರಿತು:
18 : "ಇದಿಗೋ, ನನ್ನ ದಾಸನು,
ನನ್ನಿಂದಾಯ್ಕೆಯಾದವನು,
ನನಗೆ ಪರಮಪ್ರಿಯನು,
ನನ್ನ ಅಪಾರ ಮೆಚ್ಚುಗೆಗೆ ಪಾತ್ರನು.
ನೆಲೆಗೊಳಿಸುವೆ ಇವನಲಿ ಎನ್ನಾತ್ಮವನು;
ಸಾರುವನಿವನು ಜಗದಲಿ ನನ್ನ ಧರ್ಮವನು.
19 : ವಾದಿಸುವವನಲ್ಲ, ದನಿಯೆತ್ತಿ
ಕೂಗುವವನಲ್ಲ,
ಹಾದಿ ಬೀದಿಯಲ್ಲಿವನ ಕಂಠ
ಮೊರೆಯುವುದಿಲ್ಲ.
20 : ಮುರಿದ ಜೊಂಡಿನಂತಹ ದುರ್ಬಲರಿಗಿಂತ
ದೀನಬಂಧು
ನಂದಿಹೋಗುತಿಹ ದೀನದಲಿತರಿಗೆ
ಕೃಪಾಸಿಂಧು
ನ್ಯಾಯನೀತಿಗೆ ಜಯದೊರಕಿಸದೆ
ಬಿಡನಿವನು.
21 : ನೆಮ್ಮುವರು ಅನ್ಯಜನರೆಲ್ಲರು ಇವನ
ನಾಮವನು."
22 : ಬಳಿಕ, ದೆವ್ವಹಿಡಿದು ಕುರುಡನೂ ಮೂಕನೂ ಆಗಿದ್ದ ಒಬ್ಬನನ್ನು ಕೆಲವರು ಯೇಸುಸ್ವಾಮಿಯ ಬಳಿಗೆ ಕರೆತಂದರು. ಯೇಸು ಅವನನ್ನು ಗುಣಪಡಿಸಿದರು. ಅವನಿಗೆ ದೃಷ್ಟಿ ಹಾಗೂ ಮಾತು ಎರಡೂ ಬಂದಿತು. ಅಲ್ಲಿದ್ದ ಜನರೆಲ್ಲರೂ ಬೆರಗಾದರು.
23 : “ಇವರು ದಾವೀದನ ಕುಲಪುತ್ರರಾಗಿರಬಹುದೇ!" ಎಂದುಕೊಂಡರು.
24 : ಆದರೆ ಫರಿಸಾಯರು ಇದನ್ನು ಕೇಳಿದಾಗ, "ಇವನು ದೆವ್ವಗಳನ್ನು ಬಿಡಿಸುತ್ತಿರುವುದು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಶಕ್ತಿಯಿಂದಲೇ," ಎಂದರು.
25 : ಅವರ ಆಲೋಚನೆಗಳನ್ನು ಅರಿತುಕೊಂಡ ಯೇಸು ಇಂತೆಂದರು: "ಅಂತಃಕಲಹದಿಂದ ಒಡೆದುಹೋಗಿರುವ ಪ್ರತಿಯೊಂದು ರಾಜ್ಯವೂ ನಾಶವಾಗುವುದು; ಅದರಂತೆಯೇ ತಮ್ಮ ತಮ್ಮೊಳಗೆ ಕಾದಾಡುವ ಊರುಗಳೂ ಕುಟುಂಬಗಳೂ ಹಾಳಾಗುವುವು.
26 : ಸೈತಾನನು ಸೈತಾನನನ್ನು ಹೊಡೆದೋಡಿಸುವುದಾದರೆ ಸೈತಾನನ ಪಕ್ಷದವರೇ ಪರಸ್ಪರ ವಿರೋಧಿಗಳಾಗುತ್ತಾರೆ.
27 : ಆಗ ಅವನ ರಾಜ್ಯ ಹೇಗೆ ತಾನೇ ಉಳಿದೀತು? ನಾನು ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮವರು ಯಾರ ಶಕ್ತಿಯಿಂದ ಬಿಡಿಸುತ್ತಾರೆ? ಆದ್ದರಿಂದ ನೀವು ಹೇಳುವುದು ತಪ್ಪೆಂದು ನಿಮ್ಮವರೇ ತೀರ್ಪುಕೊಡುವರು.
28 : ನಾನು ದೇವರ ಆತ್ಮದಿಂದ ದೆವ್ವಗಳನ್ನು ಬಿಡಿಸುವುದಾದರೆ, ದೇವರ ಸಾಮ್ರಾಜ್ಯ ನಿಮ್ಮಲ್ಲಿಗೆ ಈಗಾಗಲೇ ಬಂದಿದೆ.
29 : “ಒಬ್ಬ ಬಲಿಷ್ಠನ ಮನೆಯನ್ನು ನುಗ್ಗಿ ಅವನನ್ನು ಕಟ್ಟಿಹಾಕದೆ ಅವನ ಸೊತ್ತನ್ನು ಸೂರೆ ಮಾಡಲಾದೀತೇ? ಮೊದಲು ಅವನನ್ನು ಕಟ್ಟಬೇಕು. ಬಳಿಕ ಅವನ ಮನೆಯನ್ನು ಕೊಳ್ಳೆ ಹೊಡೆಯಬೇಕು.
30 : ನನ್ನ ಪರವಾಗಿ ಇಲ್ಲದವನು ನನಗೆ ವಿರೋಧಿಯೇ ಸರಿ. ನನ್ನೊಡನೆ ಶೇಖರಿಸದವನು ಚದರಿಸುತ್ತಾನೆ.
ಅಕ್ಷಮ್ಯ ಅಪರಾಧ
31 : "ಮಾನವರು ಮಾಡುವ ಪ್ರತಿಯೊಂದು ಪಾಪಕ್ಕೂ ಆಡುವ ದೇವದೂಷಣೆಗೂ ಕ್ಷಮೆ ಉಂಟು. ಆದರೆ ಪವಿತ್ರಾತ್ಮನ ವಿರುದ್ದ ಆಡುವ ದೂಷಣೆಗೆ ಕ್ಷಮೆಯೇ ಇಲ್ಲ.
32 : ಯಾರಾದರೂ ನರಪುತ್ರನ ವಿರುದ್ದ ಮಾತಾಡಿದರೆ ಕ್ಷಮೆ ದೊರಕಬಹುದು. ಆದರೆ ಪವಿತ್ರಾತ್ಮನನ್ನು ದೂಷಿಸುವವನಿಗೆ ಇದಹಲ್ಲೇ ಆಗಲಿ, ಪರದಲ್ಲೇ ಆಗಲಿ ಕ್ಷಮೆ ದೊರಕದು.
33 : "ಒಳ್ಳೆಯ ಹಣ್ಣು ಬೇಕಾದರೆ ಮರ ಒಳ್ಳೆಯದಿರಬೇಕು. ಹುಳುಕು ಮರವಾದರೆ ಸಿಗುವುದು ಹುಳುಕು ಹಣ್ಣೇ. ಹಣ್ಣಿನ ರುಚಿಯಿಂದ ಮರವನ್ನು ಗುರುತಿಸಬಹುದು.
34 : ಎಲೈ ವಿಷಸರ್ಪಗಳ ಪೀಳಿಗೆಯೇ, ಕೆಟ್ಟವರಾಗಿರುವ ನಿಮ್ಮ ಬಾಯಿಂದ ಒಳ್ಳೆಯ ಮಾತು ಬರಲು ಸಾಧ್ಯವೇ? ಹೃದಯದಲ್ಲಿ ತುಂಬಿತುಳುಕುವುದನ್ನೇ ನಾಲಿಗೆ ನುಡಿಯುತ್ತದೆ.
35 : ಒಳ್ಳೆಯವನು ತನ್ನ ಒಳ್ಳೆಯ ಬೊಕ್ಕಸದಿಂದ ಒಳ್ಳೆಯದನ್ನೇ ಹೊರತರುತ್ತಾನೆ; ಕೆಟ್ಟವನು ತನ್ನ ಕೆಟ್ಟ ಬೊಕ್ಕಸದಿಂದ ಕೆಟ್ಟದ್ದನ್ನೇ ಹೊರತರುತ್ತಾನೆ.
36 : ಜನರು ತಾವಾಡುವ ಪ್ರತಿಯೊಂದು ಜೊಳ್ಳು ಮಾತಿಗೂ ತೀರ್ಪಿನ ದಿನ ಲೆಕ್ಕ ಕೊಡಬೇಕಾಗುವುದು ಎಂಬುದು ನಿಮಗೆ ತಿಳಿದಿರಲಿ.
37 : ನಿನ್ನ ಮಾತುಗಳಿಂದಲೇ ನೀನು ನಿರಪರಾಧಿಯೆಂದು ನಿರ್ಧರಿಸಲಾಗುವುದು; ಅಥವಾ ಅಪರಾಧಿಯೆಂದು ಆಪಾದಿಸಲಾಗುವುದು," ಎಂದರು.
38 : ಬಳಿಕ ಕೆಲವು ಮಂದಿ ಧರ್ಮಶಾಸ್ತ್ರಿಗಳೂ ಫರಿಸಾಯರೂ ಯೇಸುಸ್ವಾಮಿಯನ್ನು ಉದ್ದೇಶಿಸಿ, "ಬೋಧಕರೇ, ನೀವು ಒಂದು ಸೂಚಕಕಾರ್ಯ ಮಾಡುವುದನ್ನು ನೋಡಬೇಕೆಂದಿದ್ದೇವೆ," ಎಂದರು.
39 : ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಇಂತೆಂದರು: "ಈ ಕೆಟ್ಟ ಹಾಗೂ ದೈವಭ್ರಷ್ಟ ಪೀಳಿಗೆ ಸೂಚಕಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು.
40 : ಯೋನನು ಮೂರುದಿನ ಹಗಲುರಾತ್ರಿ ದೊಡ್ಡ ಮೀನಿನ ಉದರದಲ್ಲಿದ್ದನು. ಅದರಂತೆಯೇ ನರಪುತ್ರನು ಮೂರುದಿನ ಹಗಲುರಾತ್ರಿ ಭೂಗರ್ಭದಲ್ಲಿರುವನು.
41 : ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿಯೆಂದು ಖಂಡಿಸುವರು. ಏಕೆಂದರೆ, ಪ್ರವಾದಿ ಯೋನನ ಬೋಧನೆಯನ್ನು ಕೇಳಿ ಅವರು ಪಾಪಕ್ಕೆ ವಿಮುಖರಾದರು. ಆದರೆ ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.
42 : ಅದೇ ತೀರ್ಪಿನ ದಿನ ದಕ್ಷಿಣ ದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿಯೆಂದು ಖಂಡಿಸುವಳು. ಆಕೆ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳುವುದಕ್ಕಾಗಿ ದೂರ ದೇಶದಿಂದ ಬಂದಳು. ಆದರೆ ಸೊಲೊಮೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.
43 : "ದೆವ್ವವು ಒಬ್ಬ ಮನುಷ್ಯನನ್ನು ಬಿಟ್ಟು ತೊಲಗಿದ ಮೇಲೆ ನೆಲೆಯನ್ನು ಹುಡುಕುತ್ತಾ ಒಣಗಾಡಿನಲ್ಲಿ ಅಲೆದಾಡುತ್ತದೆ. ಅದಕ್ಕೆ ನೆಲೆಸಿಗದಾಗ, ಅದು, ‘ನಾನು ಬಿಟ್ಟುಬಂದ ಮನೆಗೆ ಹಿಂದಿರುಗುತ್ತೇನೆ’ ಎಂದು ಹೇಳಿಕೊಳ್ಳುತ್ತದೆ.
44 : ಅದು ಮರಳಿ ಬಂದಾಗ, ಮನೆ ಬರಿದಾಗಿರುವುದನ್ನೂ ಗುಡಿಸಿರುವುದನ್ನೂ ಎಲ್ಲವೂ ಚೊಕ್ಕಟ ಆಗಿರುವುದನ್ನೂ ಕಾಣುತ್ತದೆ.
45 : ಪುನಃ ಹೊರಟು ಹೋಗಿ ತನಗಿಂತಲೂ ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ತನ್ನೊಡನೆ ಕರೆದುಕೊಂಡು ಬರುತ್ತದೆ. ಅವು ಆ ಮನುಷ್ಯನ ಒಳಹೊಕ್ಕು ನೆಲಸುತ್ತವೆ. ಆಗ ಅವನ ಪರಿಸ್ಥಿತಿ ಪೂರ್ವಸ್ಥಿತಿಗಿಂತಲೂ ಅಧೋಗತಿಗಿಳಿಯುತ್ತದೆ. ಆ ದುಷ್ಟ ಪೀಳಿಗೆಗೆ ಸಂಭವಿಸುವ ಗತಿಯೂ ಅದೇ," ಎಂದರು.
46 : ಯೇಸುಸ್ವಾಮಿ ತಮ್ಮನ್ನು ಸುತ್ತುವರಿದಿದ್ದ ಜನರಿಗೆ ಇನ್ನೂ ಬೋಧನೆ ಮಾಡುತ್ತಿದ್ದರು. ಆಗ ಅವರ ತಾಯಿ ಮತ್ತು ಸಹೋದರರು ಬಂದು ಅವರೊಡನೆ ಮಾತನಾಡಬಯಸಿ ಹೊರಗೆ ನಿಂತಿದ್ದರು.
47 : "ನಿಮ್ಮ ತಾಯಿ ಮತ್ತು ಸಹೋದರರು ಹೊರಗೆ ನಿಂತಿದ್ದಾರೆ; ನಿಮ್ಮೊಡನೆ ಮಾತನಾಡಬೇಕೆಂದಿದ್ದಾರೆ," ಎಂದು ಒಬ್ಬನು ತಿಳಿಸಿದನು.
48 : ಅದಕ್ಕೆ ಯೇಸು, "ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?" ಎನ್ನುತ್ತಾ, ತಮ್ಮ ಶಿಷ್ಯರ ಕಡೆಗೆ ಕೈ ತೋರಿಸಿ,
49 : "ಇಗೋ ನೋಡು, ನನ್ನ ತಾಯಿ; ನನ್ನ ಸಹೋದರರು;
50 : ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತವನ್ನು ಯಾರು ನೆರವೇರಿಸುತ್ತಾರೋ ಅವರೇ ನನಗೆ ಸಹೋದರ, ಸಹೋದರಿ ಮತ್ತು ತಾಯಿ," ಎಂದರು.