1 : ಯೇಸುಸ್ವಾಮಿ ತಮ್ಮ ಹನ್ನೆರಡು ಮಂದಿ ಶಿಷ್ಯರಿಗೆ ಆದೇಶವನ್ನು ಕೊಟ್ಟಾದ ಮೇಲೆ ಅಲ್ಲಿಂದ ಹೊರಟು ಉಪದೇಶ ಮಾಡುವುದಕ್ಕೂ ಬೋಧಿಸುವುದಕ್ಕೂ ಹತ್ತಿರದ ಊರುಗಳಿಗೆ ಹೋದರು.
2 : ಸ್ವಾಮಿಯ ಕಾರ್ಯಕಲಾಪಗಳ ಸುದ್ದಿ ಸೆರೆಯಲ್ಲಿದ್ದ ಸ್ನಾನಿಕ ಯೊವಾನ್ನನ ಕಿವಿಗೆ ಬಿದ್ದಿತು. ಆತನು ತನ್ನ ಶಿಷ್ಯರಲ್ಲಿ ಕೆಲವರನ್ನು ಅವರ ಬಳಿಗೆ ಕಳುಹಿಸಿದನು.
3 : ಇವರು ಬಂದು, "ಯೊವಾನ್ನನು ತಿಳಿಯಪಡಿಸಿದ ಪ್ರಕಾರ ಬರಬೇಕಾದವರು ನೀವೋ? ಅಥವಾ ಬೇರೊಬ್ಬನನ್ನು ನಾವು ಎದುರು ನೋಡಬೇಕೋ?" ಎಂದು ಯೇಸುವನ್ನು ಕೇಳಿದರು.
4 : ಅದಕ್ಕೆ ಯೇಸು, "ನೀವು ಕೇಳುವುದನ್ನೂ ಕಾಣುವುದನ್ನೂ ಯೊವಾನ್ನನಿಗೆ ಹೋಗಿ ತಿಳಿಸಿರಿ.
5 : ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠರೋಗಿಗಳು ಸ್ವಸ್ಥರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಮತ್ತೆ ಜೀವ ಪಡೆಯುತ್ತಾರೆ. ದೀನದಲಿತರಿಗೆ ಶುಭಸಂದೇಶವನ್ನು ಪ್ರಕಟಿಸಲಾಗುತ್ತಿದೆ.
6 : ನನ್ನಲ್ಲಿ ವಿಶ್ವಾಸ ಕಳೆದುಕೊಳ್ಳದವನು ಭಾಗ್ಯವಂತನು!" ಎಂದು ಹೇಳಿ ಕಳುಹಿಸಿದರು.
7 : ಯೊವಾನ್ನನಿಂದ ಬಂದಿದ್ದ ಶಿಷ್ಯರು ಹೊರಟುಹೋದಾಗ, ಯೇಸುಸ್ವಾಮಿ ಜನಸಮೂಹಕ್ಕೆ ಯೊವಾನನನ್ನು ಕುರಿತು ಮಾತನಾಡಿದರು: "ಬೆಂಗಾಡಿನಲ್ಲಿ ನೀವು ಏನನ್ನು ನೋಡಲೆಂದು ಹೋದಿರಿ? ಗಾಳಿಗೆ ಓಲಾಡುವ ಜೊಂಡನ್ನೆ?
8 : ಇಲ್ಲವಾದರೆ, ಏಕೆ ಹೋದಿರಿ? ನಯವಾದ ರೇಷ್ಮೆ ಉಡುಪನ್ನು ಧರಿಸಿದ್ದ ವ್ಯಕ್ತಿಯನ್ನು ನೋಡಲು ಹೋದಿರೇನು? ಅಂತಹ ಉಡುಗೆ ತೊಡುಗೆ ಧರಿಸುವವರು ಅರಮನೆಗಳಲ್ಲಿ ಇರುತ್ತಾರಷ್ಟೇ.
9 : ಹಾಗಾದರೆ ಯಾವ ಉದ್ದೇಶದಿಂದ ಹೋದಿರಿ? ಪ್ರವಾದಿಯನ್ನು ನೋಡಲೆಂದೋ? ಹೌದು ಪ್ರವಾದಿಗಿಂತಲೂ ಶ್ರೇಷ್ಠನಾದವನನ್ನು ನೋಡಿದಿರಿ ಎಂಬುದು ನಿಜ.
10 : ‘ಇಗೋ, ನನ್ನ ದೂತನನ್ನು ನಿನಗೆ ಮುಂದಾಗಿ ಕಳುಹಿಸುವೆನು. ಆತನು ನಿನ್ನ ಮಾರ್ಗವನ್ನು ಮುಂಚಿತವಾಗಿ ಸಿದ್ದಗೊಳಿಸುವನು’ ಎಂದು ಪವಿತ್ರಗ್ರಂಥದಲ್ಲಿ ಉಲ್ಲೇಖಿಸಿರುವುದು ಈ ಯೊವಾನ್ನನನ್ನು ಕುರಿತೇ.
11 : ಮಾನವನಾಗಿ ಜನಿಸಿದ್ದವರಲ್ಲಿ ಸ್ನಾನಿಕ ಯೊವಾನ್ನನಿಗಿಂತ ಶ್ರೇಷ್ಠನಾರೂ ಹುಟ್ಟಿಲ್ಲ! ಎಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ಆದರೂ ಸ್ವರ್ಗಸಾಮ್ರಾಜ್ಯದಲ್ಲಿ ಕನಿಷ್ಠನಾದವನು ಕೂಡ ಅವನಿಗಿಂತ ಶ್ರೇಷ್ಟನೇ ಸರಿ.
12 : ಯೊವಾನ್ನನು ತನ್ನ ಸಂದೇಶವನ್ನು ಸಾರಿದಂದಿನಿಂದ ಇಂದಿನವರೆಗೆ ಸ್ವರ್ಗಸಾಮ್ರಾಜ್ಯವು ನೂಕುನುಗ್ಗಲಿಗೆ ಗುರಿಯಾಗಿದೆ. ಬಲಪ್ರಯೋಗ ಮಾಡುವವರು ಅದನ್ನು ಸ್ವಾಧೀನಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.
13 : ಯೊವಾನ್ನನ ಕಾಲದ ತನಕ ಧರ್ಮಶಾಸ್ತ್ರ ಹಾಗೂ ಎಲ್ಲ ಪ್ರವಾದಿಗಳು ದೇವರ ಸಾಮ್ರಾಜ್ಯವನ್ನು ಕುರಿತು ಪ್ರವಾದನೆ ಮಾಡಿದರು.
14 : ಅವರ ಹೇಳಿಕೆಯನ್ನು ನಂಬಲು ನಿಮಗಿಷ್ಟವಿದ್ದರೆ, ಇಗೋ, ಬರತಕ್ಕ ಎಲೀಯನು ಈ ಯೊವಾನ್ನನೇ.
15 : ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ.
16 : "ಈ ಪೀಳಿಗೆಯನ್ನು ನಾನು ಯಾರಿಗೆ
ಹೋಲಿಸಲಿ?
17 : ನಾವು ಕೊಳಲನೂದಲು
ನೀವು ಕುಣಿದಾಡಲಿಲ್ಲ;
ನಾವು ಶೋಕಗೀತೆಗಳ ಹಾಡಲು
ನೀವು ಕಣ್ಣೀರಿಡಲಿಲ್ಲ,"
ಎಂದು ಪೇಟೆಬೀದಿಯಲ್ಲಿ ಕುಳಿತು, ಒಬ್ಬರಿಗೊಬ್ಬರು ಕೂಗಾಡುವ ಮಕ್ಕಳನ್ನು ಇವರು ಹೋಲುತ್ತಾರೆ.
18 : ಏಕೆಂದರೆ, ಯೊವಾನ್ನನು ಬಂದನು; ಅವನು ಅನ್ನಪಾನೀಯವನ್ನು ಸೇವಿಸಲಿಲ್ಲ. ಅದಕ್ಕೆ ‘ಇವನಿಗೆ ದೆವ್ವ ಹಿಡಿದಿದೆ’ ಎಂದರು.
19 : ನರಪುತ್ರನು ಬಂದನು; ಅನ್ನಪಾನೀಯಗಳನ್ನು ಸೇವಿಸಿದನು. ಇವನೊಬ್ಬ ಹೊಟ್ಟೆಬಾಕ, ಕುಡುಕ, ಸುಂಕದವರ ಹಾಗೂ ಪಾಪಿಷ್ಠರ ಗೆಳೆಯ ಎನ್ನುತ್ತಾರೆ. ಆದರೆ ದೈವಜ್ಞಾನವೇ ನಿಜವಾದ ಜ್ಞಾನವೆಂದು ಅದರ ಕಾರ್ಯಗಳಿಂದಲೇ ಸಮರ್ಥಿಸಲಾಗುತ್ತದೆ," ಎಂದರು.
20 : ಯಾವ ಪಟ್ಟಣಗಳಲ್ಲಿ ಯೇಸುಸ್ವಾಮಿ ಅದ್ಭುತ ಕಾರ್ಯಗಳನ್ನು ಹೇರಳವಾಗಿ ಮಾಡಿದ್ದರೋ ಆ ಪಟ್ಟಣಗಳ ಜನರೇ ಪಾಪಕ್ಕೆ ವಿಮುಖರಾಗಲಿಲ್ಲ. ಆದ್ದರಿಂದ ಆ ಪಟ್ಟಣಗಳನ್ನು ಯೇಸು ಖಂಡಿಸಿದರು;
21 : "ಕೊರಾಜ್ಜಿನ್ ಪಟ್ಟಣವೇ, ನಿನಗೇ ಧಿಕ್ಕಾರ! ಬೆತ್ಸಾಯಿದ ಪಟ್ಟಣವೇ, ನಿನಗೆ ಧಿಕ್ಕಾರ! ನಿಮ್ಮಲ್ಲಿ ಮಾಡಿದ ಅದ್ಭುತಕಾರ್ಯಗಳನ್ನು ಟೈರ್ ಮತ್ತು ಸಿದೋನ್ ಪಟ್ಟಣಗಳಲ್ಲಿ ಮಾಡಿದ್ದರೆ, ಅಲ್ಲಿಯವರು ಎಂದೋ ಗೋಣೀತಟ್ಟನ್ನು ಉಟ್ಟುಕೊಂಡು ಬೂದಿಯನ್ನು ಬಳಿದುಕೊಂಡು, ಪಾಪಕ್ಕೆ ವಿಮುಖರಾಗುತ್ತಿದ್ದರು.
22 : ಆದುದರಿಂದ ತೀರ್ಪಿನ ದಿನ ಟೈರ್ ಮತ್ತು ಸಿದೋನಿನ ಗತಿಯು ನಿಮಗಿಂತಲೂ ಮೇಲಾಗಿರುವುದೆಂದು ಒತ್ತಿ ಹೇಳುತ್ತೇನೆ.
23 : ಎಲೈ ಕಫೆರ್ನವುಮ್ ಪಟ್ಟಣವೇ, ನೀನು ಸ್ವರ್ಗಕ್ಕೇರುವೆ ಎಂದು ನೆನಸುತ್ತೀಯೋ? ಇಲ್ಲ, ಪಾತಾಳಕ್ಕೆ ಇಳಿಯುವೆ. ನಿನ್ನಲ್ಲಿ ಮಾಡಿದ ಅದ್ಭುತ ಕಾರ್ಯಗಳನ್ನು ಸೊದೋಮಿನಲ್ಲಿ ಮಾಡಿದ್ದರೆ, ಅದು ಇಂದಿನವರೆಗೂ ಅಳಿಯದೆ ಉಳಿಯುತ್ತಿತ್ತು.
24 : ಆದುದರಿಂದ ತೀರ್ಪಿನ ದಿನ ಸೊದೋಮಿನ ಗತಿ ನಿನಗಿಂತ ಸಹನೀಯವಾಗಿರುವುದು ಎಂಬುದು ನಿನಗೆ ತಿಳಿದಿರಲಿ," ಎಂದರು.
25 : ಆ ಸಮಯದಲ್ಲಿ ಯೇಸುಸ್ವಾಮಿ, "ಪಿತನೇ, ಪರಲೋಕ ಭೂಲೋಕಗಳ ಒಡೆಯನೇ, ಜ್ಞಾನಿಗಳಿಗೂ ಮೇಧಾವಿಗಳಿಗೂ ಈ ವಿಷಯಗಳನ್ನು ಮರೆಮಾಡಿ ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ; ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ.
26 : ಹೌದು, ಪಿತನೇ, ಇದೇ ನಿಮ್ಮ ಸುಪ್ರೀತ ಸಂಕಲ್ಪ.
27 : "ನನ್ನ ಪಿತ ಸಮಸ್ತವನ್ನೂ ನನ್ನ ವಶಕ್ಕೆ ಒಪ್ಪಿಸಿದ್ದಾರೆ; ಪುತ್ರನು ಯಾರೆಂಬುದನ್ನು ಪಿತನೇ ಹೊರತು ಬೇರಾರೂ ಅರಿಯರು. ಪಿತನು ಯಾರು ಎಂಬುದನ್ನು ಪುತ್ರನು ಮತ್ತು ಯಾವನಿಗೆ ಪುತ್ರನು ಅವರನ್ನು ಶ್ರುತಪಡಿಸಲು ಇಚ್ಛಿಸುತ್ತಾನೋ, ಅವರೇ ಹೊರತು ಮತ್ತಾರೂ ಅರಿಯರು.
ಶ್ರಮಜೀವಿಗಳಿಗೆ ವಿಶ್ರಾಂತಿದಾತ
28 : "ದುಡಿದು, ಭಾರಹೊತ್ತು, ಬಳಲಿ ಬೆಂಡಾಗಿರುವ ಸರ್ವಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುತ್ತೇನೆ.
29 : ನಾನು ವಿನಯಶೀಲನು, ದೀನಹೃದಯನು; ನನ್ನ ನೊಗಕ್ಕೆ ಹೆಗಲುಕೊಟ್ಟು ನನ್ನಿಂದ ಕಲಿತುಕೊಳ್ಳಿ. ಆಗ ನಿಮಗೆ ವಿಶ್ರಾಂತಿ ಸಿಗುವುದು. ನನ್ನ ನೊಗ ಹಗುರ, ನನ್ನ ಹೊರೆ ಸುಗಮ," ಎಂದರು.