1 : ಯೇಸುಸ್ವಾಮಿ ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು, ಎಲ್ಲ ರೋಗರುಜಿನಗಳನ್ನು ಗುಣಪಡಿಸುವುದಕ್ಕೂ ದೆವ್ವಗಳನ್ನು ಬಿಡಿಸುವುದಕ್ಕೂ ಅವರಿಗೆ ಅಧಿಕಾರವನ್ನು ಕೊಟ್ಟರು.
2 : ಆ ಹನ್ನೆರಡು ಮಂದಿ ಪ್ರೇಷಿತರ ಹೆಸರುಗಳು ಇವು; ಮೊದಲನೆಯವನು ಪೇತ್ರ ಎನಿಸಿಕೊಂಡ ಸಿಮೋನ ಮತ್ತು ಅವನ ಸಹೋದರ ಅಂದ್ರೆಯ; ಜೆಬೆದಾಯನ ಮಗ ಯಕೋಬ ಮತ್ತು ಅವನ ಸಹೋದರ ಯೊವಾನ್ನ;
3 : ಫಿಲಿಪ್ಪ ಮತ್ತು ಬಾರ್ತೊಲೊಮಾಯ; ತೋಮ ಮತ್ತು ಸುಂಕ ವಸೂಲಿಗಾರ ಮತ್ತಾಯ; ಅಲ್ಫಾಯನ ಮಗ ಯಕೋಬ ಮತ್ತು ತದ್ದಾಯ;
4 : ದೇಶಾಭಿಮಾನಿ ಎಂದು ಕರೆಯಲಾದ ಸಿಮೋನ ಮತ್ತು ಗುರುದ್ರೋಹಿ ಆಗಲಿದ್ದ ಯೂದ ಇಸ್ಕರಿಯೋತ.
5 : ಆ ಹನ್ನೆರಡು ಮಂದಿಯ ನಿಯೋಗವನ್ನು ಕಳುಹಿಸುವಾಗ ಯೇಸುಸ್ವಾಮಿ ಅವರಿಗೆ ಕೊಟ್ಟ ಆದೇಶ ಇದು: "ಪರಕೀಯರತ್ತ ಹೋಗಲೇಬೇಡಿ; ಸಮಾರಿಯದವರ ಯಾವ ಊರಿಗೂ ಕಾಲಿಡಬೇಡಿ.
6 : ಅದಕ್ಕೆ ಬದಲು ತಪ್ಪಿಹೋದ ಕುರಿಗಳಂತೆ ಇರುವ ಇಸ್ರಯೇಲ್ ಜನರ ಬಳಿಗೆ ಹೋಗಿರಿ;
7 : ಹೋಗುತ್ತಾ, ‘ಸ್ವರ್ಗಸಾಮ್ರಾಜ್ಯವು ಸಮೀಪಿಸಿದೆ’ ಎಂದು ಬೋಧನೆ ಮಾಡಿರಿ.
8 : ರೋಗಿಗಳನ್ನು ಗುಣಪಡಿಸಿರಿ, ಸತ್ತವರನ್ನು ಮತ್ತೆ ಬದುಕಿಸಿರಿ, ಕುಷ್ಠರೋಗಿಗಳನ್ನು ಸ್ವಸ್ಥಮಾಡಿರಿ, ದೆವ್ವಗಳನ್ನು ಬಿಡಿಸಿರಿ. ಉಚಿತವಾಗಿ ಪಡೆದಿರುವಿರಿ, ಉಚಿತವಾಗಿ ಕೊಡಿ.
9 : ಜೇಬಿನಲ್ಲಿ ಚಿನ್ನ, ಬೆಳ್ಳಿ, ತಾಮ್ರವನ್ನಾಗಲಿ,
10 : ಪ್ರಯಾಣಕ್ಕೆಂದು ಜೋಳಿಗೆಯನ್ನಾಗಲಿ, ಎರಡು ಅಂಗಿಗಳನ್ನಾಗಲಿ, ಕಾಲಿಗೆ ಕೆರವನ್ನಾಗಲಿ, ಕೈಗೆ ದಂಡವನ್ನಾಗಲಿ ತೆಗೆದುಕೊಳ್ಳಬೇಡಿ. ಏಕೆಂದರೆ, ದುಡಿಮೆಗಾರನು ಜೀವನಾಧಾರಕ್ಕೆ ಬಾಧ್ಯನು.
11 : "ನೀವು ಒಂದು ಪಟ್ಟಣಕ್ಕಾಗಲಿ, ಹಳ್ಳಿಗಾಗಲಿ ಹೋದಾಗ, ಅಲ್ಲಿ ನಿಮ್ಮನ್ನು ಬರಮಾಡಿಕೊಳ್ಳಲು ಯೋಗ್ಯನು ಯಾರೆಂದು ಕಂಡುಹಿಡಿಯಿರಿ. ಅಲ್ಲಿಂದ ಮುಂದಕ್ಕೆ ಸಾಗುವವರೆಗೂ ಅವನಲ್ಲೇ ತಂಗಿರಿ.
12 : ನೀವು ಒಂದು ಮನೆಗೆ ಹೋದಾಗ, "ಈ ಮನೆಗೆ ಶುಭವಾಗಲಿ!" ಎಂದು ಹರಸಿರಿ.
13 : ಆ ಮನೆಯವರು ನಿಮ್ಮನ್ನು ಸ್ವಾಗತಿಸಿದರೆ, ನಿಮ್ಮ ಆಶೀರ್ವಾದ ಅವರ ಮೇಲೆ ನೆಲಸಲಿ. ನಿಮ್ಮನ್ನು ಸ್ವಾಗತಿಸದೆ ಹೋದರೆ, ನಿಮ್ಮ ಆಶೀರ್ವಾದ ನಿಮಗೇ ಹಿಂದಿರುಗಲಿ.
14 : ಒಂದು ಮನೆಯೇ ಆಗಲಿ, ಊರೇ ಆಗಲಿ, ನಿಮ್ಮನ್ನು ಸ್ವಾಗತಿಸದೆ ಅಥವಾ ನಿಮಗೆ ಕಿವಿಗೊಡದೆ ಹೋದರೆ, ಆ ಮನೆಯನ್ನು ಅಥವಾ ಊರನ್ನು ಬಿಟ್ಟು ಮುಂದಕ್ಕೆ ಹೋಗಿರಿ. ಹೋಗುವಾಗ ನಿಮ್ಮ ಪಾದಗಳಿಗೆ ಅಂಟಿರುವ ಧೂಳನ್ನೂ ಝಾಡಿಸಿಬಿಡಿ.
15 : ತೀರ್ಪಿನ ದಿನ ಆ ಊರಿನ ಗತಿ ಸೊದೋಮ್ ಮತ್ತು ಗೊಮೋರ ಊರುಗಳ ಗತಿಗಿಂತ ಕಠಿಣವಾಗಿರುವುದೆಂದು ನಾನು ನಿಮಗೆ ಒತ್ತಿ ಹೇಳುತ್ತೇನೆ.
16 : "ಗಮನಿಸಿರಿ, ತೋಳಗಳ ನಡುವೆ ಕುರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತಿದ್ದೇನೆ. ಆದುದರಿಂದ ಸರ್ಪಗಳಂತೆ ಸೂಕ್ಷ್ಮ ಬುದ್ದಿಯುಳ್ಳವರೂ ಪಾರಿವಾಳಗಳಂತೆ ಸರಳ ಜೀವಿಗಳೂ ಆಗಿರಿ.
17 : ಜನರ ಬಗ್ಗೆ ಜಾಗರೂಕರಾಗಿರಿ! ಅವರು ನಿಮ್ಮನ್ನು ನ್ಯಾಯಸ್ಥಾನಗಳಿಗೆ ಹಿಡಿದೊಪ್ಪಿಸುವರು. ಪ್ರಾರ್ಥನಾಮಂದಿರಗಳಲ್ಲಿ ಕೊರಡೆಗಳಿಂದ ಹೊಡೆಯುವರು.
18 : ನನ್ನ ನಿಮಿತ್ತ ನಿಮ್ಮನ್ನು ಅಧಿಕಾರಿಗಳ ಮತ್ತು ಅರಸರುಗಳ ಮುಮದೆ ಎಳೆದೊಯ್ಯುವರು. ಅವರ ಹಾಗೂ ಪರಕೀಯರ ಮುಂದೆ ನೀವು ನನಗೆ ಸಾಕ್ಷಿಗಳಾಗುವಿರಿ.
19 : ನಿಮ್ಮನ್ನು ಹಿಡಿದೊಪ್ಪಿಸುವಾಗ ಹೇಗೆ ವಾದಿಸುವುದು, ಏನು ಹೇಳುವುದು ಎಂದು ಚಿಂತಾಕ್ರಾಂತರಾಗಬೇಡಿ. ಏಕೆಂದರೆ ನೀವು ಹೇಳಬೇಕಾದುದ್ದನ್ನು ಅದೇ ಗಳಿಗೆಯಲ್ಲಿ ನಿಮಗೆ ಕಲಿಸಿಕೊಡಲಾಗುವುದು.
20 : ಆಗ ಮಾತನಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮವೇ ನಿಮ್ಮ ಮುಖಾಂತರ ಮಾತನಾಡುವುದು.
21 : ಸಹೋದರನು ಸಹೋದರನನ್ನೇ ತಂದೆಯು ಮಗನನ್ನೇ ಮರಣಕ್ಕೆ ಗುರಿಮಾಡುವರು. ಮಕ್ಕಳು ಹೆತ್ತವರ ಮೇಲೆ ತಿರುಗಿ ಬಿದ್ದು ಅವರನ್ನು ಕೊಲ್ಲಿಸುವರು.
22 : ನೀವು ನನ್ನವರು; ಆದುದರಿಂದಲೇ ನಿಮ್ಮನ್ನು ಎಲ್ಲರೂ ದ್ವೇಷಿಸುವರು. ಆದರೆ ಕೊನೆಯವರೆಗೂ ಸೈರಣೆಯಿಂದಿರುವವನು ಜೀವೋದ್ಧಾರವನ್ನು ಹೊಂದುವನು.
23 : ಒಂದು ಊರಿನಲ್ಲಿ ನಿಮ್ಮನ್ನು ಹಿಂಸೆ ಪಡಿಸಿದರೆ, ಮತ್ತೊಂದು ಊರಿನಲ್ಲಿ ಆಶ್ರಯ ಪಡೆಯಿರಿ. ನರಪುತ್ರನು ಬರುವಷ್ಟರಲ್ಲಿ ನೀವು ಇಸ್ರಯೇಲ್ ಜನರ ಊರುಗಳನ್ನೆಲ್ಲಾ ಸುತ್ತಿ ಮುಗಿಸಿರಲಾರಿರಿ; ಇದು ನಿಶ್ಚಯ.
24 : ಗುರುವಿಗಿಂತ ಶಿಷ್ಯನು ಶ್ರೇಷ್ಟನಲ್ಲ; ದಾಸನು ದಣಿಗಿಂತ ದೊಡ್ಡವನಲ್ಲ.
25 : ಗುರುವಿನಂತೆ ಶಿಷ್ಯನೂ ದಣಿಯಂತೆ ದಾಸನೂ ಆದರೆ ಸಾಕು. ಮನೆಯ ಯಜಮಾನನನ್ನೇ ‘ಬೆಲ್ಜಬೂಲ್’ ಎಂದು ಕರೆದಿರುವಾಗ ಅವನ ಮನೆಯವರನ್ನು ಇನ್ನೆಷ್ಟು ಅವಹೇಳನ ಮಾಡಲಾರರು?"
26 : "ಜನರಿಗೆ ಭಯಪಡಬೇಡಿ. ಮುಚ್ಚುಮರೆ ಆಗಿರುವುದೆಲ್ಲ ಬಟ್ಟಬಯಲಾಗುವುದು. ಗುಟ್ಟಾಗಿ ಇರುವುದೆಲ್ಲ ರಟ್ಟಾಗುವುದು.
27 : ನಾನು ಕತ್ತಲಲ್ಲಿ ಹೇಳುವುದನ್ನು ನೀವು ಬೆಳಕಿನಲ್ಲಿ ಪ್ರಚುರ ಪಡಿಸಿರಿ. ಕಿವಿಮಾತಾಗಿ ಕೇಳಿದ್ದನ್ನು ಮನೆ ಮಾಳಿಗೆಯ ಮೇಲೆ ನಿಂತು ಸಾರಿರಿ.
28 : ದೇಹವನ್ನು ಕೊಂದು ಹಾಕುವವರಿಗೆ ಭಯಪಡಬೇಡಿ; ಏಕೆಂದರೆ, ಅವರಿಂದ ಆತ್ಮವನ್ನು ಕೊಲ್ಲಲು ಆಗದು. ಆದರೆ ದೇಹಾತ್ಮಗಳೆರಡನ್ನೂ ನರಕದಲ್ಲಿ ನಾಶಮಾಡಬಲ್ಲ ದೇವರಿಗೆ ಭಯಪಡಿ.
29 : ಒಂದು ಕಾಸಿಗೆ ಎರಡು ಗುಬ್ಬಚ್ಚಿಗಳನ್ನು ಮಾರುವುದಿಲ್ಲವೆ? ಆದರೂ ಅವುಗಳಲ್ಲಿ ಒಂದಾದರೂ ನಿಮ್ಮ ತಂದೆಯ ಅನುಮತಿಯಿಲ್ಲದೆ ನೆಲಕ್ಕೆ ಬೀಳುವುದಿಲ್ಲ.
30 : ಅಲ್ಲದೆ ನಿಮ್ಮ ತಲೆಗೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ.
31 : ಆದುದರಿಂದ ಭಯಪಡಬೇಡಿ; ಅನೇಕ ಗುಬ್ಬಚ್ಚಿಗಳಿಗಿಂತ ನೀವು ಎಷ್ಟೋ ಮೌಲ್ಯವುಳ್ಳವರು.
32 : "ಜನರ ಮುಂದೆ, ತಾನು ನನ್ನವನೆಂದು ಬಹಿರಂಗವಾಗಿ ಒಪ್ಪಿಕೊಳ್ಳುವ ಪ್ರತಿಯೊಬ್ಬನನ್ನು ನಾನು ಸಹ ಸ್ವರ್ಗದಲ್ಲಿರುವ ನನ್ನ ಪಿತನ ಮುಂದೆ ನನ್ನವನೆಂದು ಒಪ್ಪಿಕೊಳ್ಳುತ್ತೇನೆ.
33 : ಆದರೆ ಯಾವನಾದರೂ ತಾನು ನನ್ನವನಲ್ಲ ಎಂದು ಜನರ ಮುಂದೆ ಬಹಿರಂಗವಾಗಿ ನಿರಾಕರಿಸಿದರೆ, ಅಂಥವನನ್ನು ನಾನು ಸಹ ಸ್ವರ್ಗದಲ್ಲಿರುವ ನನ್ನ ಪಿತನ ಮುಂದೆ ನನ್ನವನಲ್ಲವೆಂದು ನಿರಾಕರಿಸುತ್ತೇನೆ.
34 : "ನಾನು ಲೋಕಕ್ಕೆ ಸಮಾಧಾನವನ್ನು ತರಲು ಬಂದೆನೆಂದು ಭಾವಿಸಬೇಡಿ; ಸಮಾಧಾನವನ್ನಲ್ಲ, ಛೇದಿಸುವ ಖಡ್ಗವನ್ನು ತರಲು ಬಂದೆನು.
35 : ತಂದೆಗೆ ವಿರುದ್ಧ ಮಗನಿಗೂ, ತಾಯಿಗೆ ವಿರುದ್ದ ಮಗಳಿಗೂ, ಅತ್ತೆಗೆ ವಿರುದ್ದ ಸೊಸೆಗೂ ಭೇದ ಹುಟ್ಟಿಸಲು ಬಂದೆನು;
36 : ಒಡಹುಟ್ಟಿದವರೇ ಒಬ್ಬನ ಕಡುವೈರಿಗಳಾಗುವರು.
37 : "ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ತಂದೆಯನ್ನು ಅತವಾ ತಾಯಿಯನ್ನು ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ. ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ಮಗನನ್ನು ಅಥವಾ ಮಗಳನ್ನು ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ.
38 : ತನ್ನ ಶಿಲುಬೆಯನ್ನು ಹೊತ್ತು ನನ್ನನ್ನು ಹಿಂಬಾಲಿಸದವನು ನನ್ನವನಾಗಲು ಯೋಗ್ಯನಲ್ಲ.
39 : ತನ್ನ ಪ್ರಾಣವನ್ನು ಕಾಪಾಡಿಕೊಳ್ಳುವವನು ಅದನ್ನು ಕಳೆದುಕೊಳ್ಳುತ್ತಾನೆ. ನನಗೋಸ್ಕರವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಾಪಾಡಿಕೊಳ್ಳುತ್ತಾನೆ.
ಸತ್ಕಾರಕ್ಕೆ ತಕ್ಕ ಸಂಭಾವನೆ
(ಮಾರ್ಕ 9:41)
40 : "ನಿಮ್ಮನ್ನು ಸ್ವಾಗತಿಸುವವನು ನನ್ನನ್ನು ಸ್ವಾಗತಿಸುತ್ತಾನೆ; ನನ್ನನ್ನು ಸ್ವಾಗತಿಸುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸ್ವಾಗತಿಸುತ್ತಾನೆ.
41 : ಪ್ರವಾದಿಯನ್ನು ಪ್ರವಾದಿಯೆಂದು ಸ್ವಾಗತಿಸುವವನು ಪ್ರವಾದಿಗೆ ಸಿಗುವ ಪ್ರತಿಫಲವನ್ನು ಪಡೆಯುತ್ತಾನೆ. ಸತ್ಪುರುಷನನ್ನು ಸತ್ಪುರುಷನೆಂದು ಸ್ವಾಗತಿಸುವವನು ಸತ್ಪುರುಷನಿಗೆ ಸಿಗುವ ಪ್ರತಿಫಲವನ್ನು ಪಡೆಯುತ್ತಾನೆ.
42 : ಯಾರಾದರೂ ಈ ಚಿಕ್ಕವರಲ್ಲಿ ಒಬ್ಬನಿಗೆ ಅವನು ನನ್ನ ಶಿಷ್ಯನೆಂದು ಕುಡಿಯಲು ಒಂದು ಲೋಟ ತಣ್ಣೀರನ್ನು ಕೊಟ್ಟರೂ ಅದಕ್ಕೆ ತಕ್ಕ ಪ್ರತಿಫಲವನ್ನು ಪಡೆಯದೆ ಹೋಗನೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ."