1 : ಮಕ್ಕಬಿಯ ಎನ್ನಲಾದ ಯೂದನು ಮತ್ತು ಅವನ ಸಂಗಡಿಗರು ಊರುಕೇರಿಗಳನ್ನು ಪ್ರವೇಶಿಸಿ ಯೆಹೂದ್ಯ ಧರ್ಮಕ್ಕೆ ಪ್ರಾಮಾಣಿಕರಾಗಿದ್ದ ತಮ್ಮ ಬಂಧುಮಿತ್ರರನ್ನು ಗುಟ್ಟಾಗಿ ಕರೆಸಿದರು. ಹೀಗೆ ಸುಮಾರು ಆರುಸಾವಿರ ಜನರನ್ನು ಒಂದುಗೂಡಿಸಿದರು.
2 : ಸಕಲರಿಂದ ತುಳಿತಕ್ಕೆ ಗುರಿಯಾದ ತಮ್ಮ ಜನರನ್ನು ಕಟಾಕ್ಷಿಸಲು, ವಿಶ್ವಾಸರಹಿತ ಜನರಿಂದ ಹೊಲಸಾದ ದೇವಾಲಯಕ್ಕೆ ಕೃಪೆತೋರಲು,
3 : ಕ್ರಮೇಣ ನಾಶವಾಗಿ ನೆಲಸಮವಾಗುತ್ತಿದ್ದ ಜೆರುಸಲೇಮ್ ನಗರಕ್ಕೆ ದಯೆತೋರಲು, ರಕ್ತಪಾತಕ್ಕೆ ಗುರಿಯಾದವರು ದೇವಕೃಪೆಗಾಗಿ ಮಾಡುವ ಕೂಗಿಗೆ ಕಿವಿಗೊಡಲು,
4 : ಪಾವನ ಶಿಶುಗಳ ಅನ್ಯಾಯದ ಕಗ್ಗೊಲೆಯನ್ನೂ ತಮ್ಮ ಪವಿತ್ರನಾಮಕ್ಕೆ ಮಾಡಲಾದ ದೂಷಣೆಗಳನ್ನೂ ಜ್ಞಾಪಿಸಿಕೊಳ್ಳಲು ಹಾಗು ಕೇಡಿನ ಮೇಲೆ ತಮಗಿರುವ ದ್ವೇಷವನ್ನು ವ್ಯಕ್ತಪಡಿಸಲು, ಸರ್ವೇಶ್ವರಸ್ವಾಮಿಯಲ್ಲಿ ಮೊರೆಯಿಟ್ಟರು.
5 : ಹೀಗೆ ಮಕ್ಕಬಿಯನು ಹೇರಳವಾದ ಸೈನ್ಯವನ್ನು ಒಂದುಗೂಡಿಸಿದನು. ಅನ್ಯಧರ್ಮೀಯರು ಅವರನ್ನು ಎದುರಿಸಲು ಸಾಧ್ಯವಾಗಲಿಲ್ಲ. ಕಾರಣ ಇಸ್ರಯೇಲಿನ ಮೇಲಿದ್ದ ದೇವರ ಕೋಪವು ಕೃಪೆಯಾಗಿ ಮಾರ್ಪಟ್ಟಿತ್ತು.
6 : ಮಕ್ಕಬಿಯನು ಪಟ್ಟಣಗಳಿಗೂ ಗ್ರಾಮಗಳಿಗೂ ದಿಢೀರೆಂದು ನುಗ್ಗಿ ಬೆಂಕಿಯಿಡುತ್ತಿದ್ದನು. ಶತ್ರುಗಳನ್ನು ಹಂಚಿಕೆಯಿಂದ ಸದೆಬಡಿಯಲು ಯೋಗ್ಯವಾದ ಸ್ಥಾವರಗಳನ್ನು ವಶಪಡಿಸಿಕೊಂಡು, ಅಲ್ಲಿದ್ದ ಅನೇಕರನ್ನು ಓಡಿಸಿಬಿಡುತ್ತಿದ್ದನು.
7 : ಇಂಥ ಧಾಳಿಮಾಡಲು ರಾತ್ರಿ ಬಹಳ ಅನುಕೂಲಕರವಾಗಿತ್ತು. ಅವನ ಪರಾಕ್ರಮದ ಸುದ್ದಿ ಎಲ್ಲಾ ಕಡೆ ಹರಡಿತು.
ಮಕ್ಕಬಿಯನ ಮೇಲೆ ನಿಕಾನೋರನ ದಾಳಿ
8 : ಯೂದನು ಕ್ರಮೇಣ ಮುಂದುವರಿಯುತ್ತಿದ್ದು, ದಾಳಿಮಾಡಿದಾಗಲೆಲ್ಲ ಜಯವನ್ನೇ ಗಳಿಸುವುದನ್ನು ಕಂಡ ಜೆರುಸಲೇಮಿನ ರಾಜ್ಯಪಾಲ ಫಿಲಿಪ್ಪನು, ಅರಸನ ರಾಜ್ಯಾಧಿಕಾರಿಗಳಿಗೆ ಸಹಾಯ ಮಾಡಬೇಕೆಂದು ಸೆಲೆಸಿರಿಯಾ ಹಾಗು ಫೆನೀಷಿಯಾದ ರಾಜ್ಯಪಾಲ ಪ್ತೊಲೆಮೇಯನಿಗೆ ಬರೆದನು.
9 : ಆಗ ಪ್ತೊಲೆಮೇಯನು ಕೂಡಲೆ ಅರಸನ ಮುಖ್ಯ ಸ್ನೇಹಿತರಲ್ಲೊಬ್ಬನಾದ, ಹಾಗು ಪತ್ರೋಕ್ಲಸಿನ ಮಗನಾದ ನಿಕಾನೋರನನ್ನು ಕಳುಹಿಸಿದನು. ಇಡೀ ಯೆಹೂದ್ಯ ಕುಲವನ್ನೇ ನಾಶಗೊಳಿಸಬೇಕೆಂಬ ಉದ್ದೇಶದಿಂದ 20,000 ಸೈನಿಕರಿಗಿಂತಲೂ ಹೆಚ್ಚಾಗಿದ್ದ ಹಾಗೂ ನಾನಾ ಅನ್ಯಧರ್ಮೀಯರಿಂದ ಕೂಡಿದ ಪಡೆಗಳನ್ನು ನಿಕಾನೋರನ ಕೈ ಕೆಳಗೆ ನೇಮಿಸಿದನು. ಅವನಿಗೆ ಸಹಾಯಕನನ್ನಾಗಿ ಸೈನಿಕ ಸೇವೆಯಲ್ಲಿ ನುರಿತ ಸೇನಾಧಿಕಾರಿಯಾಗಿದ್ದ ಗೋರ್ಗಿಯ ಎಂಬವನನ್ನು ಸಹ ಕಳುಹಿಸಿದನು.
10 : ಅರಸ ಅಂತಿಯೋಕನಿಂದ ರೋಮನರಿಗೆ 68,000 ಕಿಲೋಗ್ರಾಂ ಬೆಳ್ಳಿನಾಣ್ಯಗಳು ಸಲ್ಲುವುದು ಬಾಕಿಯಿತ್ತು. ಯೆಹೂದ್ಯ ಸೆರೆಯಾಳುಗಳನ್ನು ಗುಲಾಮರನ್ನಾಗಿ ಮಾರಿ ಬಂದ ಹಣದಿಂದ ಈ ಸಾಲವನ್ನು ತೀರಿಸಲು ನಿಕಾನೋರನು ನಿರ್ಧರಿಸಿದನು.
11 : ಪ್ರತಿಯೊಬ್ಬ ಯೆಹೂದ್ಯನನ್ನು ಒಂದು ಕಿಲೋಗ್ರಾಂ ಬೆಳ್ಳಿಗಿಂತಲೂ ಕಡಿಮೆ ಕ್ರಯಕ್ಕೆ ಮಾರಲಾಗುವುದೆಂದು ನಿಕಾನೋರನು ತೀರ ಪ್ರದೇಶದ ಪಟ್ಟಣಗಳಿಗೆಲ್ಲ ಪ್ರಚುರಪಡಿಸಿದನು. ಸರ್ವಶಕ್ತ ದೇವರಿಂದ ದಂಡನೆ ಶೀಘ್ರದಲ್ಲೇ ಅವನ ಮೇಲೆ ಎರಗಲಿದೆಯೆಂಬುದನ್ನು ಅವನು ಅರಿಯಲಿಲ್ಲ.
ನಿಕಾನೋರನ ಗುಟ್ಟು ಯೂದನಿಗೆ ರಟ್ಟು
12 : ನಿಕಾನೋರನ ದಾಳಿಯ ಬಗ್ಗೆ ಯೂದನಿಗೆ ಗೊತ್ತಾಯಿತು. ಶತ್ರುಸೈನ್ಯದ ಆಗಮನದ ಬಗ್ಗೆ ತನ್ನ ಸಂಗಡಿಗರಿಗೆ ಅವನು ತಿಳಿಸಿದಾಗ,
13 : ಹೇಡಿಗಳೂ ದೇವರ ನೀತಿಯ ಬಗ್ಗೆ ಅಪನಂಬಿಕೆಯುಳ್ಳವರೂ ಆದವರೆಲ್ಲರು ಹಿಂಜರಿದು ಓಡಿಹೋದರು.
14 : ಇತರರಾದರೋ, ಯುದ್ಧವು ಪ್ರಾರಂಭವಾಗುವ ಮುನ್ನ ತಮ್ಮನ್ನು ಗುಲಾಮರನ್ನಾಗಿ ಮಾರಿದ ನಿಕಾನೋರನ ಕೈಯಿಂದ ರಕ್ಷಣೆ ಪಡೆಯಲು ಪಾತ್ರರಾಗುವಂತೆ ದೇವರಲ್ಲಿ ಪ್ರಾರ್ಥಿಸಿ, ತಮ್ಮ ಮಿಕ್ಕುಳಿದ ಸೊತ್ತನ್ನೆಲ್ಲ ಮಾರಿಬಿಟ್ಟರು.
15 : ತಮಗೋಸ್ಕರವಲ್ಲದಿದ್ದರೂ, ದೇವರು ಪೂರ್ವಜರೊಂದಿಗೆ ಮಾಡಿದ ವಾಗ್ದಾನದ ನಿಮಿತ್ತ ಮಹೋನ್ನತ ಹಾಗು ಮಹಿಮಾಮಯ ದೇವರು, ಅವರನ್ನು ತಮ್ಮ ಸ್ವಂತ ಪ್ರಜೆಯನ್ನಾಗಿ ಆರಿಸಿಕೊಂಡ ನಿಮಿತ್ತ, ತಮ್ಮನ್ನು ರಕ್ಷಿಸಬೇಕೆಂದು ಪ್ರಾರ್ಥಿಸಿದರು.
16 : ಮಕ್ಕಬಿಯನು ತನ್ನಲ್ಲಿದ್ದ ಆರುಸಾವಿರ ಸೈನಿಕರನ್ನು ಒಂದುಗೂಡಿಸಿ, “ಶತ್ರುವಿಗೆ ಭಯಪಡಬೇಡಿ, ನಮಗೆ ಎದುರಾಗಿ ಬರುವ ದುಷ್ಟ ಅನ್ಯಧರ್ಮೀಯರ ಜನಸ್ತೋಮಕ್ಕೆ ಅಂಜಬೇಡಿ;
17 : ಬದಲಿಗೆ ಮಹಾದೇವಾಲಯಕ್ಕೆ ವಿರುದ್ಧ ಅನ್ಯಧರ್ಮೀಯರು ಎಸಗಿದ ದೌರ್ಜನ್ಯವನ್ನು, ಅಪಹಾಸ್ಯಕ್ಕೆ ಗುರಿಯಾದ ಜೆರುಸಲೇಮಿನ ಬಾಧೆಯನ್ನು ಹಾಗು ಪೂರ್ವಜರ ಸಂಪ್ರದಾಯವನ್ನು ಬಲವಂತದಿಂದ ತೊರೆಯಬೇಕೆಂದು ಅನ್ಯರು ಮಾಡಿದ ಪ್ರಯತ್ನವನ್ನು ನಮ್ಮ ಕಣ್ಮುಂದೆ ಇಟ್ಟುಕೊಂಡು, ಘನತೆಯಿಂದ ಹೋರಾಡೋಣ.
18 : ಅವರು ಶಸ್ತ್ರಾಸ್ತ್ರಗಳಲ್ಲಿ ನಂಬಿಕೆಯಿಟ್ಟವರು, ನಾವಾದರೋ, ನಮ್ಮ ಮೇಲೆ ಬೀಳುವಂಥ ಜನರನ್ನು ಮಾತ್ರವಲ್ಲ, ಬೇಕಾದರೆ ಇಡೀ ವಿಶ್ವವನ್ನೇ ಕ್ಷಣಮಾತ್ರದಲ್ಲಿ ಕೆಡವಲು ಸಮರ್ಥರಾದ ಸರ್ವಶಕ್ತ ದೇವರಲ್ಲಿ ನಂಬಿಕೆ ಇಟ್ಟಿದ್ದೇವೆ,” ಎಂದು ಹುರಿದುಂಬಿಸಿದನು.
19 : ಇದಲ್ಲದೆ, ಸನ್ಹೇರೀಬನ ಕಾಲದಲ್ಲಿ, 1,85,000 ಸೈನಿಕರಿದ್ದ ಪಡೆಯನ್ನು ನಾಶಗೊಳಿಸಲಾಯಿತು.
20 : ಒಂದು ಸಾರಿ ಬಾಬಿಲೋನಿಯದಲ್ಲಿ 8,000 ಯೆಹೂದ್ಯರು 4,000 ಮ್ಯಾಸಿಡೋನ್ಯರಿಗೆ ನೆರವಿತ್ತು, 1,20,000 ಗಲಾತ್ಯರನ್ನು ಸದೆಬಡಿದು, ಬೇಕಾದಷ್ಟು ಕೊಳ್ಳೆಯನ್ನು ತೆಗೆದುಕೊಂಡರು. ಹೀಗೆ ದೇವರು ಪೂರ್ವಜರಿಗೆ ನೀಡಿದ ಸಹಾಯವನ್ನು ಯೂದನು ತನ್ನ ಸಂಗಡಿಗರ ನೆನಪಿಗೆ ತಂದನು.
21 : ಈ ಮಾತುಗಳಿಂದ ಮಕ್ಕಬಿಯನು ಅವರಲ್ಲಿ ಧೈರ್ಯತುಂಬಿ, ತಮ್ಮ ಧರ್ಮನಿಯಮಕ್ಕಾಗಿ ಹಾಗು ತಮ್ಮ ರಾಷ್ಟ್ರಕ್ಕಾಗಿ ಪ್ರಾಣತ್ಯಾಗ ಮಾಡಲು ಸಿದ್ಧರಿರುವಂತೆ ಮಾಡಿದನು. ಅನಂತರ ತನ್ನ ಸೈನ್ಯವನ್ನು ನಾಲ್ಕು ದಳಗಳನ್ನಾಗಿ ವಿಂಗಡಿಸಿದನು.
22 : ತನ್ನ ಸಹೋದರರಾದ ಸಿಮೋನ್, ಜೋಸೆಫ್ ಮತ್ತು ಯೋನಾತನ್ ಎಂಬವರನ್ನು ಕರೆದು, 1500 ಸೈನಿಕರನ್ನೊಳಗೊಂಡ ದಳಗಳಿಗೆ ಒಬ್ಬೊಬ್ಬರನ್ನು ನೇಮಿಸಿದನು.
23 : ಅಲ್ಲದೆ ಪವಿತ್ರ ಗ್ರಂಥವನ್ನು ಜನರಿಗೆ ಸ್ವರವೆತ್ತಿ ಪಠಿಸಲು ಎಲ್ಲಾಜಾರನನ್ನು ನೇಮಿಸಿದನು. “ನಮ್ಮ ಸಹಾಯ ದೇವರಿಂದ” ಎಂಬ ಗುಟ್ಟು ನುಡಿಯನ್ನು ಅವರಿಗೆ ಕೊಟ್ಟನು. ಪ್ರಥಮ ಸೇನಾದಳವನ್ನು ತಾನೇ ತೆಗೆದುಕೊಂಡು ನಿಕಾನೋರನೊಡನೆ ಯುದ್ಧ ಮಾಡಲು ನಿಂತನು.
24 : ಸರ್ವಶಕ್ತ ದೇವರು ಅವರ ಪಕ್ಷವಹಿಸಿ ಹೋರಾಡುತ್ತಿರಲಾಗಿ ಯೆಹೂದ್ಯರು 9,000ಕ್ಕಿಂತಲೂ ಹೆಚ್ಚು ಶತ್ರುಸೈನಿಕರನ್ನು ಸದೆಬಡಿದರು. ನಿಕಾನೋರನ ಸೈನಿಕರಲ್ಲಿ ಅನೇಕರನ್ನು ಗಾಯಗೊಳಿಸಿದರು, ಊನಮಾಡಿದರು, ಎಲ್ಲರೂ ಪಲಾಯನಗೈಯುವಂತೆ ಮಾಡಿದರು.
25 : ಯೆಹೂದ್ಯರನ್ನು ಗುಲಾಮರನ್ನಾಗಿ ವ್ಯಾಪಾರಮಾಡಿ ಕೊಂಡುಕೊಳ್ಳಲು ಬಂದವರ ಕೈಯಲ್ಲಿದ್ದ ಹಣವನ್ನು ಕಿತ್ತುಕೊಂಡರು. ಬಲುದೂರ ಶತ್ರುಗಳನ್ನು ಬೆನ್ನಟ್ಟಿದರು. ಬಹು ಹೊತ್ತಾದ ನಂತರ ಹಿಂದಿರುಗಿ ಬಂದರು.
26 : ಅದು ಸಬ್ಬತ್ತಿನ ಹಿಂದಿನ ದಿನವಾಗಿದ್ದರಿಂದ ಅವರು ಬೆನ್ನಟ್ಟಿಕೊಂಡು ಮುಂದುವರಿಯಲಿಲ್ಲ.
27 : ಶತ್ರುಗಳ ಶಸ್ತ್ರಗಳನ್ನು ಕೂಡಿಸಿಕೊಂಡು, ಸತ್ತವರಿಂದ ಕೊಳ್ಳೆಯನ್ನು ಕಿತ್ತುಕೊಂಡನಂತರ, ಸಬ್ಬತ್ ದಿನವನ್ನು ಆಚರಿಸಿದರು. ದೇವರು ತಮ್ಮನ್ನು ಸುರಕ್ಷಿತವಾಗಿ ಆ ದಿನದವರೆಗೆ ಕಾದಿರಿಸಿದ್ದಕ್ಕಾಗಿ, ತಮ್ಮ ಕೃಪೆಯ ಪ್ರಥಮ ಸಂಕೇತವಾಗಿ ಆ ದಿನವನ್ನು ಅನುಗ್ರಹಿಸಿದ್ದಕ್ಕಾಗಿ ದೇವರಿಗೆ ಸ್ತುತಿ ಸ್ತೋತ್ರಗಳನ್ನು ಸಲ್ಲಿಸಿದರು.
28 : ಸಬ್ಬತ್‍ದಿನ ಕಳೆದ ನಂತರ ಹಿಂಸೆ ಬಾಧೆಗಳಿಗೆ ತುತ್ತಾಗಿದ್ದವರಿಗೆ, ವಿಧವೆಯರಿಗೆ ಮತ್ತು ಅನಾಥರಿಗೆ ತಮ್ಮ ಕೊಳ್ಳೆಯ ಒಂದು ಪಾಲನ್ನು ಕೊಟ್ಟುಬಿಟ್ಟರು; ಉಳಿದದ್ದನ್ನು ತಮ್ಮ ತಮ್ಮಲ್ಲಿ ಹಾಗು ಕುಟುಂಬದವರೊಡನೆ ಹಂಚಿಕೊಂಡರು.
29 : ಇದಾದ ನಂತರ ಸಾರ್ವತ್ರಿಕ ಪ್ರಾರ್ಥನೆಯನ್ನು ಮಾಡಿ, ಕರುಣಾಮಯಿಯಾದ ಸರ್ವೇಶ್ವರನು ತಮ್ಮ ದಾಸರೊಂದಿಗೆ ಸಂಪೂರ್ಣ ಸಂಧಾನರಾಗಬೇಕೆಂದು ಬಿನ್ನಯಿಸಿದರು.
30 : ತಿಮೊಥೇಯ ಮತ್ತು ಬಾಕ್ಕಿದೆಸರೊಡನೆ ಮಾಡಿದ ಹೋರಾಟದಲ್ಲಿ 20,000ಕ್ಕಿಂತಲೂ ಹೆಚ್ಚು ಮಂದಿ ಶತ್ರುಸೈನಿಕರನ್ನು ಯೆಹೂದ್ಯರು ಹತಮಾಡಿದರು. ಅತ್ಯುನ್ನತವಾದ ದುರ್ಗಗಳನ್ನು ವಶಪಡಿಸಿಕೊಂಡರು. ಹೇರಳವಾಗಿದ್ದ ಕೊಳ್ಳೆಯನ್ನು ಭಾಗಮಾಡಿ, ಹಿಂಸೆಬಾಧೆಗಳಿಗೆ ಗುರಿಯಾಗಿದ್ದವರಿಗೆ, ಅನಾಥರಿಗೆ ಮತ್ತು ವಿಧವೆಯರಿಗೆ ಹಾಗು ವೃದ್ಧರಿಗೆ ಸಮನಾಗಿ ಹಂಚಿಕೊಟ್ಟರು.
31 : ತಮ್ಮ ಶತ್ರುವಿನ ಶಸ್ತ್ರಗಳನ್ನು ಶೇಖರಿಸಿ ಅವರನ್ನು ಸದೆಬಡಿಯಲು ಅನುಕೂಲಕರವಾದ ಸ್ಥಾವರಗಳಲ್ಲಿ ಇಟ್ಟರು. ಮಿಕ್ಕ ಕೊಳ್ಳೆಯನ್ನು ಜೆರುಸಲೇಮಿಗೆ ಎತ್ತಿಕೊಂಡು ಹೋದರು.
32 : ತೀರಾ ದುಷ್ಟವ್ಯಕ್ತಿಯಾಗಿದ್ದು ಯೆಹೂದ್ಯರನ್ನು ಬಹಳವಾಗಿ ಹಿಂಸಿಸಿದ ಹಾಗು ತಿಮೋಥೇಯನ ಸೇನಾಧಿಪತಿಯಾಗಿದ್ದ ವ್ಯಕ್ತಿಯನ್ನು ಕೊಂದು ಹಾಕಿದರು.
33 : ತಮ್ಮ ಪೂರ್ವಜರ ನಗರದಲ್ಲಿ ವಿಜಯೋತ್ಸವವನ್ನು ಕೊಂಡಾಡುತ್ತಿರುವಾಗ, ಕಲೆಸ್ತೇನೆನ್ ಮತ್ತು ಇತರರನ್ನು ಸುಟ್ಟುಹಾಕಿದರು; ಇವರು ಒಂದು ಚಿಕ್ಕ ಮನೆಯಲ್ಲಿ ಆಶ್ರಯ ಪಡೆದಿದ್ದರು. ಇವರೇ ಮಹಾ ದೇವಾಲಯದ ದ್ವಾರಗಳಿಗೆ ಬೆಂಕಿಯಿಟ್ಟವರು; ತಮ್ಮ ವಿಶ್ವಾಸ ಹೀನತೆಗೆ ತಕ್ಕ ಪ್ರತಿಫಲವನ್ನು ಪಡೆದರು.
34 : ಯೆಹೂದ್ಯರನ್ನು ಮಾರಲು ಸಾವಿರ ವ್ಯಾಪಾರಿಗಳನ್ನು ತಂದ ಮುಮ್ಮಡಿ ಶಾಪಗ್ರಸ್ತ ನಿಕಾನೋರನು,
35 : ಯಾವ ಎದುರಾಳಿಗಳನ್ನು ಹೆಚ್ಚಾಗಿ ತಾತ್ಸಾರ ಮಾಡುತ್ತಿದ್ದನೋ, ಆ ಜನರಿಂದಲೇ ಪರಾಭವಗೊಂಡನು. ಸರ್ವೇಶ್ವರಸ್ವಾಮಿ ಆ ಜನರಿಗೆ ಬೆಂಬಲಿಗರಾಗಿದ್ದರು. ತನ್ನ ಅಮೂಲ್ಯ ಸಮವಸ್ತ್ರವನ್ನು ತೆಗೆದುಹಾಕಿ, ತಪ್ಪಿಸಿಕೊಂಡು ಓಡುವ ಗುಲಾಮನಂತೆ ಅಂತಿಯೋಕ್ಯದವರೆಗೆ ಪಲಾಯನಗೈದನು; ತನ್ನ ಪಡೆಯನ್ನೆಲ್ಲಾ ಕಳೆದುಕೊಂಡದ್ದೇ ಅವನು ಗಳಿಸಿದ ‘ವಿಜಯ’ವಾಗಿತ್ತು!
36 : ಜೆರುಸಲೇಮಿನ ಜನರನ್ನು ಮಾರಿಬಂದ ಹಣದಿಂದ ರೋಮನ್ನರಿಗೆ ಸಲ್ಲಿಸಬೇಕಾಗಿದ್ದ ಸಾಲವನ್ನು ತೀರಿಸಲು ಪ್ರಯತ್ನಿಸಿದಂಥ ಈ ವ್ಯಕ್ತಿಯೇ, ಯೆಹೂದ್ಯರಿಗೆ ಯಾವ ಹಾನಿಯನ್ನೂ ಮಾಡಲು ಸಾಧ್ಯವಿಲ್ಲವೆಂದು ಘೋಷಿಸಿದನು. ಕಾರಣ, ಯೆಹೂದ್ಯರಿಗೆ ಒಬ್ಬ ಮಹಾ ರಕ್ಷಕನಿದ್ದನು; ಮತ್ತು ಆ ರಕ್ಷಕನು ನೀಡಿದ ಆಜ್ಞೆಗಳನ್ನು ಅವರು ಪಾಲಿಸುತ್ತಿದ್ದರು.