1 : ಸ್ವಲ್ಪಕಾಲದ ನಂತರ, ಸನಾತನ ಆಚಾರಗಳನ್ನು ಉಲ್ಲಂಘಿಸುವಂತೆ, ದೇವರ ನಿಯಮಗಳನ್ನು ಮೀರಿ ಬಾಳುವಂತೆ ಯೆಹೂದ್ಯರನ್ನು ಬಲವಂತಪಡಿಸಬೇಕೆಂದು ಅರಸನು, ಅಥೆನ್ಸಿನ ಶಾಸಕಸಭೆಯ ಸದಸ್ಯ ಗೆರೋನ್ ಎಂಬವನನ್ನು ಕಳುಹಿಸಿದನು.
2 : ಜೆರುಸಲೇಮಿನ ಮಹಾದೇವಾಲಯವನ್ನು ಭ್ರಷ್ಟಗೊಳಿಸಿ ಅದನ್ನು ಒಲಿಂಪಿಯದ ‘ಜೆವುಸ್’ ದೇವರಿಗೆ ಪ್ರತಿಷ್ಠಾಪಿಸಬೇಕು, ಗೆರಿಜ್ಜೀಮ್ ಬೆಟ್ಟದ ದೇವಾಲಯವನ್ನು ಸ್ಥಳೀಯ ಜನರ ಕೋರಿಕೆಯ ಮೇರೆಗೆ, ವಲಸೆ ಬಂದವರ ಪಾಲಕನಾದ ‘ಜೆವುಸ್’ ದೇವರಿಗೆ ಪ್ರತಿಷ್ಠಾಪಿಸಬೇಕು ಎಂದು ಅವನು ಅಪ್ಪಣೆ ಪಡೆದಿದ್ದನು.
3 : ಈ ಹಿಂಸೆಗಳನ್ನೆಲ್ಲ ತಾಳಿಕೊಳ್ಳು ಸರ್ವರಿಗೂ ಅಸಹನೀಯವಾಗಿದ್ದವು.
4 : ಹೇಗೆಂದರೆ, ಅನ್ಯಧರ್ಮೀಯರ ದುಷ್ಕøತ್ಯಗಳಿಂದ ಮಹಾದೇವಾಲಯವು ಭೋಜನಾಕೂಟಗಳಿಂದ ತುಂಬಿಹೋಯಿತು.
5 : 5ಆ ದೇವಾಲಯದ ಆವರಣದಲ್ಲಿ ಜನರು ವ್ಯಭಿಚಾರದಿಂದ ತೃಪ್ತಿಹೊಂದಲು ಸ್ತ್ರೀಯರೊಂದಿಗೆ ಅನೈತಿಕ ಸಂಬಂಧ ಮಾಡುವುದಕ್ಕೆ ತೊಡಗಿದರು. ಇದಲ್ಲದೆ, ಇತರ ಅನೇಕ ದುಷ್ಕøತ್ಯಗಳನ್ನು ಅಲ್ಲಿ ಮಾಡಲಾರಂಭಿಸಿದರು.
6 : ಧರ್ಮಶಾಸ್ತ್ರದಲ್ಲಿ ಮಲಿನವೆಂದು ನಿಷಿದ್ಧವಾದ ಕಾಣಿಕೆ ವಸ್ತುಗಳನ್ನು ಬಲಿಪೀಠದ ಮೇಲೆ ಹೇರುತ್ತಿದ್ದರು. ಸಬ್ಬತ್ ದಿನಗಳನ್ನು ಆಚರಿಸುವುದಕ್ಕೆ, ಸಾಂಪ್ರದಾಯಿಕ ಹಬ್ಬಗಳನ್ನು ಕೊಂಡಾಡುವುದಕ್ಕೆ ಯಾರಿಗೂ ಅನುಮತಿಯಿರಲಿಲ್ಲ; ತಾನು ಯೆಹೂದ್ಯನೆಂದು ಸಹ ಯಾರೂ ಒಪ್ಪಿಕೊಳ್ಳುವಂತಿರಲಿಲ್ಲ.
7 : ಪ್ರತಿ ತಿಂಗಳು ಅರಸನ ಜಯಂತಿಯನ್ನು ಕೊಂಡಾಡುವ ಸಂದರ್ಭದಲ್ಲಿ ಕಟುವಾಗಿಯೂ ಬಲವಂತವಾಗಿಯೂ ಬಲಿಭೋಜನದಲ್ಲಿ ಭಾಗವಹಿಸಲು ಯೆಹೂದ್ಯರನ್ನು ಕೊಂಡೊಯ್ಯಲಾಗುತ್ತಿತ್ತು. ದಿಯೊನಿಸಿಯನ ಹಬ್ಬದಂದು ‘ಐವೀ’ ಬಳ್ಳಿಗಳಿಂದ ತಯಾರಿಸಿದ ಪುಷ್ಪ ಕಿರೀಟಗಳನ್ನು ಧರಿಸಿಕೊಂಡು ಮೆರವಣಿಗೆಯಲ್ಲಿ ಭಾಗವಹಿಸಬೇಕಿತ್ತು.
8 : ಪ್ತೊಲೆಮೇಯನ ಸಲಹೆಯ ಪ್ರಕಾರ ನೆರೆರಾಜ್ಯದ ಗ್ರೀಕ್ ಪಟ್ಟಣಗಳಲ್ಲಿ ಸಹ ಯೆಹೂದ್ಯರು ಅನ್ಯರ ಪೂಜಾ ಬಲಿಯಲ್ಲಿ ಪಾಲ್ಗೊಂಡು ಭೋಜನ ಮಾಡಬೇಕಿತ್ತು.
9 : ಗ್ರೀಕರ ಪದ್ಧತಿಗಳನ್ನು ಸ್ವಯಂ ಪ್ರೇರಣೆಯಿಂದ ಅನುಸರಿಸದವರನ್ನು ಸಾಯಿಸಬೇಕೆಂದು ಆಜ್ಞೆಹೊರಡಿಸಲಾಗಿತ್ತು. ಹೀಗೆ ತಮಗೆ ಆಪತ್ಕಾಲ ಸನ್ನಿಹಿತವಾಯಿತೆಂದು ಎಲ್ಲರಿಗೂ ವೇದ್ಯವಾಯಿತು.
10 : ಉದಾಹರಣೆಗೆ, ಮಕ್ಕಳಿಗೆ ಸುನ್ನತಿ ಸಂಸ್ಕಾರ ಮಾಡಿದ್ದಕ್ಕಾಗಿ ಇಬ್ಬರು ಸ್ತ್ರೀಯರನ್ನು ದಸ್ತಗಿರಿ ಮಾಡಲಾಯಿತು. ಮಕ್ಕಳನ್ನು ಅವರ ಎದೆಗೆ ತೂಗುಹಾಕಿ, ಪಟ್ಟಣದ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿ, ನಗರದ ಗೋಡೆಮೇಲಿಂದ ಅವರನ್ನು ಆಚೆ ಎಸೆಯಲಾಯಿತು.
11 : ಇನ್ನೊಂದು ಸಂದರ್ಭದಲ್ಲಿ ಸಬ್ಬತ್ತನ್ನು ರಹಸ್ಯವಾಗಿ ಆಚರಿಸಲು ಕೆಲವು ಮಂದಿ ಯೆಹೂದ್ಯರು ಗುಹೆಗಳಲ್ಲಿ ಅಡಗಿದ್ದಾರೆಂಬ ಸುದ್ದಿ ಫಿಲಿಪ್ಪನಿಗೆ ಮುಟ್ಟಲು, ಆ ಜನರನ್ನು ಒಟ್ಟಿಗೆ ಜೀವಂತವಾಗಿ ಸುಟ್ಟುಹಾಕಲಾಯಿತು. ಅವರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿಲ್ಲ. ಈ ಸಬ್ಬತ್ ದಿನದ ಬಗ್ಗೆ ಅವರಿಗೆ ಅಷ್ಟು ಅಭಿಮಾನವಿತ್ತು! ಮನಸ್ಸಾಕ್ಷಿ ಅಷ್ಟು ಸೂಕ್ಷ್ಮವಾಗಿತ್ತು!
ಶಿಕ್ಷಿಸಿದರೂ ಸರ್ವೇಶ್ವರಸ್ವಾಮಿ ದಯಾಪರನು
12 : ಈ ಗ್ರಂಥವನ್ನು ಓದುವವರು ಇಂಥ ದುಃಖಕರ ಘಟನೆಗಳಿಂದ ಧೃತಿಗೆಡದೆ, ದೇವರು ಜನರನ್ನು ಶಿಕ್ಷೆಗೆ ಒಳಪಡಿಸಿದ್ದು ಅವರ ವಿನಾಶಕ್ಕಾಗಿ ಅಲ್ಲ, ಶಿಸ್ತಿನಿಂದ ನಡೆಸುವುದಕ್ಕಾಗಿ ಎಂದು ಭಾವಿಸಬೇಕೆಂದು ಒತ್ತಿಹೇಳುತ್ತೇನೆ.
13 : ನಿಜಕ್ಕೂ ಒಬ್ಬನ ತಪ್ಪಿಗಾಗಿ ಶಿಕ್ಷಿಸುವುದಕ್ಕೆ ಬಹುಕಾಲ ಕಾದಿರುವುದಕ್ಕಿಂತಲೂ ತಕ್ಷಣವೇ ಶಿಕ್ಷಿಸುವುದು ಕರುಣೆಯ ಚಿಹ್ನೆ ಎನ್ನಬೇಕು.
14 : ಇತರ ರಾಷ್ಟ್ರಗಳಿಗೆ ಮಾಡುವಂತೆ ದೇವರು ನಮ್ಮೊಡನೆ ವರ್ತಿಸುವುದಿಲ್ಲ. ಶಿಕ್ಷಿಸುವುದಕ್ಕೆ ಮುಂಚೆ ಅವರು ಪಾಪದಲ್ಲಿ ಸಂಪೂರ್ಣವಾಗಿ ಮುಳುಗಲೆಂದು ಬಹಳಕಾಲ ಸಹನೆಯಿಂದ ಕಾದಿರುತ್ತಾರೆ.
15 : ಆದರೆ ನಾವು ಹೆಚ್ಚಾಗಿ ಪಾಪವನ್ನು ಕಟ್ಟಿಕೊಳ್ಳಲು ಬಿಡದೆ, ನಮ್ಮನ್ನು ಶಿಕ್ಷಿಸುತ್ತಾರೆ.
16 : ಆದುದರಿಂದ ಸರ್ವೇಶ್ವರಸ್ವಾಮಿ ತಮ್ಮ ಕೃಪೆಯನ್ನು ನಮ್ಮಿಂದ ಹಿಂತೆಗೆದುಕೊಳ್ಳುವುದಿಲ್ಲ. ಆಪತ್ತುಗಳನ್ನು ನಮ್ಮ ಮೇಲೆ ಬರಮಾಡಿ ನಮ್ಮನ್ನು ಶಿಕ್ಷಿಸಿದರೂ, ಅವರ ಸ್ವಂತ ಜನರಾದ ನಮ್ಮನ್ನು ಕೈ ಬಿಡುವುದಿಲ್ಲ.
17 : ನಾನು ಮೇಲೆ ಹೇಳಿದವುಗಳೆಲ್ಲ ನಿಮಗೆ ಜ್ಞಾಪಕಪಡಿಸುವುದಕ್ಕೆಂದು ತಿಳಿಯಿರಿ. ಈಗ ಚರಿತ್ರೆಯನ್ನು ಮುಂದುವರಿಸೋಣ.
ಎಲ್ಲಾಜಾರನ ಧರ್ಮನಿಷ್ಠೆ
18 : ಧರ್ಮಶಾಸ್ತ್ರ ಪಂಡಿತರಲ್ಲಿ ಅತೀ ನಿಪುಣನಾದ ಎಲ್ಲಾಜಾರನು ವಯೋವೃದ್ಧನು, ಉಜ್ವಲರೂಪ ಉಳ್ಳವನು. ಅವನು ಹಂದಿ ಮಾಂಸವನ್ನು ತಿನ್ನಲು ಬಲಾತ್ಕಾರದಿಂದ ಬಾಯ್ದೆರೆದು ಮಾಡಿದರು.
19 : ಅವನಾದರೋ, ಹೊಲಸಾದ ಜೀವನ ನಡೆಸುವುದಕ್ಕಿಂತ ಮರ್ಯಾದೆಯಿಂದ ಸಾಯುವುದು ಲೇಸೆಂದು ಎಣಿಸಿದನು. ಬಾಯೊಳಗಿಂದ ಆ ಮಾಂಸವನ್ನು ಉಗಿದುಬಿಟ್ಟನು.
20 : ಬದುಕುವುದಕ್ಕಿಂತ ಹೆಚ್ಚಾಗಿ ನಿಷೇಧಿಸಲಾದ ಆಹಾರವನ್ನು ರುಚಿಸಲು ಧೈರ್ಯದಿಂದ ನಿರಾಕರಿಸಿದನು. ಹೀಗೆ, ತಾನೇ ಯಾತನೆಯ ಸ್ಥಳಕ್ಕೆ ಮುನ್ನಡೆದು ಬಂದನು.
21 : ನಿಷಿದ್ಧ ಬಲಿಭೋಜನದ ಉಸ್ತುವಾರಿ ನೋಡುವಂಥವರು, ಎಲ್ಲಾಜಾರನನ್ನು ಬಹುಕಾಲ ಅರಿತವರಾದ್ದರಿಂದ, ಅವನನ್ನು ರಹಸ್ಯವಾಗಿ ಕೊಂಡೊಯ್ದು ಬೇರೆ ಯಾವುದಾದರೂ ತಿನ್ನಬಹುದಾದ ಮಾಂಸವನ್ನು ಸ್ವೀಕರಿಸಿ, ಅರಸನ ಆಜ್ಞೆಗನುಗುಣವಾಗಿ ಬಲಿಭೋಜನ ಆಹಾರವನ್ನು ತಿನ್ನುವಂತೆ ನಟಿಸಬೇಕೆಂದು ಗುಟ್ಟಾಗಿ ಸಲಹೆಕೊಟ್ಟರು.
22 : ಹೀಗೆ ಅವರೊಂದಿಗಿದ್ದ ಸ್ನೇಹದ ನಿಮಿತ್ತ, ಅವನನ್ನು ಮರಣಶಿಕ್ಷೆಯಿಂದ ತಪ್ಪಿಸಲು ಕರುಣೆಯ ಒಂದು ದಾರಿಯನ್ನು ತೋರಿಸಿದರು.
23 : ಆದರೆ ಅವನು ತನ್ನ ವಯಸ್ಸಿನ ಯೋಗ್ಯತೆಗೆ, ಮುಪ್ಪಿನ ಘನತೆಗೆ, ನರೆಕೂದಲಿಗೆ ಸಲ್ಲತಕ್ಕ ಗೌರವಕ್ಕೆ, ಬಾಲ್ಯದಿಂದಲೂ ಕಾಪಾಡಿಕೊಂಡು ಬಂದ ಸನ್ನಡತೆಗೆ ತಕ್ಕಂತೆ, ಎಲ್ಲಕ್ಕಿಂತಲೂ ಹೆಚ್ಚಾಗಿ ದೇವರು ತಾವೇ ನೀಡಿದ ಪವಿತ್ರ ನಿಯಮಕ್ಕೆ ಅನುಗುಣವಾಗಿ, ಉದಾತ್ತ ನಿರ್ಧಾರವನ್ನು ಕೈಗೊಂಡು, ಕೂಡಲೇ ಮೃತ್ಯುಲೋಕಕ್ಕೆ ತನ್ನನ್ನು ಕಳುಹಿಸಿಬಿಡಬೇಕೆಂದು ಕೇಳಿಕೊಂಡನು.
24 : “ಇಂಥಾ ನಟನೆ ವಯೋವೃದ್ಧನಾದ ನನಗೆ ತಕ್ಕುದಲ್ಲ. 90 ವರ್ಷದ ವ್ಯಕ್ತಿಯಾದ ಎಲ್ಲಾಜಾರನೇ ತನ್ನ ಧರ್ಮವನ್ನು ಉಲ್ಲಂಘಿಸಿ, ಪರಕೀಯರ ಪದ್ಧತಿಯನ್ನು ಅನುಸರಿಸಿದ್ದಾನೆಂದು ಹೇಳುತ್ತಾರೆ.
25 : ಬದುಕಲು ಸ್ವಲ್ಪಕಾಲಕ್ಕೆ ಈ ರೀತಿ ವರ್ತಿಸುವುದರಿಂದ ಯುವಕರನ್ನು ತಪ್ಪುದಾರಿಗೆ ಎಳೆದಂತಾಗುತ್ತದೆ. ನನ್ನ ಮುಪ್ಪಿಗೆ ಕಳಂಕವನ್ನೂ ನಿಂದೆಯನ್ನೂ ತಂದುಕೊಂಡಂತಾಗುತ್ತದೆ.
26 : ತಾತ್ಕಾಲಿಕವಾಗಿ ನಾನು ನರಮಾನವರ ಶಿಕ್ಷೆಯಿಂದ ಸಧ್ಯಕ್ಕೆ ತಪ್ಪಿಸಿಕೊಂಡರೂ, ಸರ್ವಶಕ್ತ ದೇವರ ಕೈಯಿಂದ ಜೀವಂತವಾಗಿ ಆಗಲಿ, ಸತ್ತಾಗ ಆಗಲಿ, ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
27 : ಆದುದರಿಂದ, ಅವರು ಈಗ ನನ್ನ ಪ್ರಾಣತೆಗೆಯುವುದಕ್ಕೆ ನಾನೇ ಧೈರ್ಯದಿಂದ ಸಮ್ಮತಿಸುವುದರಿಂದ ನನ್ನ ಮುಪ್ಪಿನ ಘನತೆಗೆ ಯೋಗ್ಯನೆಂದು ಸ್ಪಷ್ಟೀಕರಿಸುತ್ತೇನೆ.
28 : ಹೀಗೆ ಪೂಜ್ಯ ಹಾಗೂ ಪವಿತ್ರ ನಿಯಮಕ್ಕಾಗಿ ಆಸಕ್ತಿಯಿಂದ ಮತ್ತು ಧಾರಾಳಮನಸ್ಸಿನಿಂದ ಒಳ್ಳೆಯವನಾಗಿ ಹೇಗೆ ಮರಣಹೊಂದಬಹುದು ಎಂಬ ಭವ್ಯ ಆದರ್ಶವನ್ನು ಚಿಕ್ಕವರಿಗೆ ನೀಡಿದಂತಾಗುತ್ತದೆ,” ಎಂದನು.
ಇಷ್ಟನ್ನು ಹೇಳಿದ ಮೇಲೆ ಅವನು ವಧ್ಯಸ್ಥಾನಕ್ಕೆ ನೆಟ್ಟಗೆ ಹೋದನು.
29 : ವಲ್ಪಹೊತ್ತಿಗೆ ಮುಂಚೆ ಸ್ನೇಹ ಪರರಾಗಿ ವರ್ತಿಸುತ್ತಿದ್ದ ಆ ಬೆಂಗಾವಲಿನವರು, ಅವನು ಮಾತಾಡಿದ್ದು ಹುಚ್ಚುತನದಿಂದ ಎಂದೆಣಿಸಿ ಅವನ ಮೇಲೆ ತಿರುಗಿಬಿದ್ದರು.
30 : ಮರಣದ ಹಂತವನ್ನು ತಲುಪುವವರೆಗೆ ಅವನನ್ನು ಹೊಡೆದರು. ಆಗ ಎಲ್ಲಾಜಾರನು ನಿಟ್ಟುಸಿರು ಬಿಡುತ್ತಾ, “ನಾನು ಮರಣದಿಂದ ತಪ್ಪಿಸಿಕೊಳ್ಳಬಹುದಾಗಿದ್ದರೂ ಸರ್ವೇಶ್ವರನಲ್ಲಿರುವ ಭಯಭಕ್ತಿಯ ನಿಮಿತ್ತವೇ ಚಾಟಿಯಿಂದಾದ ಈ ದೈಹಿಕ ಯಾತನೆಯನ್ನು ಸಂತೋಷದಿಂದ ಸಹಿಸಿಕೊಳ್ಳುತ್ತೇನೆ; ಹೀಗೆ ಹಿಂಸೆಯನ್ನು ಹೃತ್ಪೂರ್ವಕವಾಗಿ ಅನುಭವಿಸುತ್ತಿದ್ದೇನೆ ಎಂಬುದು ಪರಮಪವಿತ್ರ ಜ್ಞಾನಿಯಾದ ಸರ್ವೇಶ್ವರನಿಗೆ ತಿಳಿದಿದೆ,” ಎಂದನು.
31 : ಹೀಗೆ ಎಲ್ಲಾಜಾರನು ಸಾವನ್ನು ಅಪ್ಪಿದನು; ಅವನ ಮರಣ ಚಿಕ್ಕವರಿಗೆ ಮಾತ್ರವಲ್ಲ, ಜನಾಂಗದ ಬಹುಭಾಗದವರಿಗೆ ಉದಾತ್ತ ಆದರ್ಶವಾಗಿತ್ತು. ಚಿರಸ್ಮರಣೆಯ ಪುಣ್ಯ ದಾಖಲೆ ಆಗಿತ್ತು.
ಧರ್ಮಕ್ಕಾಗಿ ಪ್ರಾಣತ್ಯಾಗ
ಏಳು ಮಂದಿ ಸಹೋದರರ ಮರಣ